ಎಲ್ಲರೂ ಅರ್ಥವಾದಂತೆ ನಟಿಸುವ ಆದರೆ ನಿಜದಲ್ಲಿ ಸಂಕೀರ್ಣ ಸಮೀಕರಣದಂತಿರುವ ಬಡತನವೆನ್ನುವ ಬಾಳೆ ದಿಂಡಿನ ತಿರುಳನ್ನು ಪದರ ಪದರವಾಗಿ ಬಿಚ್ಚಿಟ್ಟು ‘ಇದು ಜಗತ್ತು, ಇದೇ ಜಗತ್ತು’ ಎಂದು ದಿಟ್ಟವಾಗಿ ಹೇಳುವ ಗಟ್ಟಿತನ ಇಲ್ಲಿನ ಹಲವು ಕಥೆಗಳಲ್ಲಿದೆ.‌ ಬಲ್ಬಿಗೆ ಬೆಳಕನ್ನು ತಲುಪಿಸುವ ತಂತಿಯ ವಿದ್ಯುತ್ತಿನಲ್ಲೇ ಪ್ರಾಣ ತೆಗೆಯುವ ಕರೆಂಟೂ ಇದೆ. ದುರಂತವೆಂದರೆ ನಮ್ಮ ಸಮಾಜದ ಕತ್ತಲನ್ನು ಹೋಗಲಾಡಿಸಲು ಕಂಡು ಹಿಡಿದ ನಾನಾ ಕರೆಂಟುಗಳು ಇಲ್ಲಿಯ ತನಕ ಬೆಳಕು ಕೊಟ್ಟಿದ್ದಕ್ಕಿಂತ ಪ್ರಾಣ ತೆಗೆದಿದ್ದೇ ಹೆಚ್ಚು ಎನ್ನುವ ಸೂಕ್ಷ್ಮವನ್ನು ಉಪ್ಪನ್ನು ಹೀರಿಕೊಂಡ ನೀರಿನಂತೆ ಇಲ್ಲಿನ ಕಥೆಗಳು ಕರಗಿಸಿಕೊಂಡಿವೆ.
ಮುನವ್ವರ್ ಜೋಗಿಬೆಟ್ಟು ಹೊಸ ಕಥಾಸಂಕಲನ “ಟಚ್‌ ಮೀ ನಾಟ್”ಕ್ಕೆ ವಿನಾಯಕ ಅರಳಸುರಳಿ ಮುನ್ನುಡಿ

ಮುನವ್ವರ್ ಅವರ ಕಥೆಗಳು ಬದುಕೆನ್ನುವ ಬೃಹತ್ ರಚನೆಯ ಪುಟ್ಟ ಮಿನಿಯೇಚರ್ ಮಾದರಿಯಂತೆ ಭಾಸವಾಗುತ್ತವೆ. ಪ್ರತಿದಿನ ಅಪ್ಡೇಟಾಗುತ್ತಲೇ ಇರುವ, ತನ್ನ ಕೋಡಿಂಗನ್ನು ತಾನೇ ಬರೆದುಕೊಳ್ಳುತ್ತ ದಿನಕ್ಕೊಂದು ವರ್ಷನ್ನಿನಲ್ಲಿ ಬಿಡುಗಡೆಯಾಗುವ ಸ್ವತಂತ್ರ ಸಾಫ್ಟ್ ವೇರಿನಂಥಾ ನಮ್ಮೀ ಸಮಾಜದ ಪ್ರವಾಹದಿಂದ ಬಗ್ಗಿಸಿಕೊಂಡ ಇಷ್ಟೇ ಇಷ್ಟು ಬೊಗಸೆ ನೀರಿನಂತೆ ಅವುಗಳು. ಕಾಣುವುದು ಬೊಗಸೆಯಷ್ಟೇ ಆದರೂ ಅದು ಇಡೀ ನದಿಯನ್ನೇ ಪ್ರತಿಬಿಂಬಿಸುತ್ತದೆ. ಆ ನೀರನ್ನೇ ಸಿಹಿಯೆಂದು ನಂಬುತ್ತೀವೋ, ಅಥವಾ ಕಹಿಯೆಂದು ಉಗುಳುತ್ತೀವೋ, ಇಲ್ಲಾ ಆ ಪ್ರವಾಹದಿಂದ ಇಷ್ಟಾದರೂ ಕಸ ಆಚೆ ತೆಗೆಯುತ್ತೀವೋ ಎನ್ನುವುದು ನಮಗೆ ಬಿಟ್ಟಿದ್ದು.

ಎಲ್ಲರೂ ಅರ್ಥವಾದಂತೆ ನಟಿಸುವ ಆದರೆ ನಿಜದಲ್ಲಿ ಸಂಕೀರ್ಣ ಸಮೀಕರಣದಂತಿರುವ ಬಡತನವೆನ್ನುವ ಬಾಳೆ ದಿಂಡಿನ ತಿರುಳನ್ನು ಪದರ ಪದರವಾಗಿ ಬಿಚ್ಚಿಟ್ಟು ‘ಇದು ಜಗತ್ತು, ಇದೇ ಜಗತ್ತು’ ಎಂದು ದಿಟ್ಟವಾಗಿ ಹೇಳುವ ಗಟ್ಟಿತನ ಇಲ್ಲಿನ ಹಲವು ಕಥೆಗಳಲ್ಲಿದೆ.‌ ಬಲ್ಬಿಗೆ ಬೆಳಕನ್ನು ತಲುಪಿಸುವ ತಂತಿಯ ವಿದ್ಯುತ್ತಿನಲ್ಲೇ ಪ್ರಾಣ ತೆಗೆಯುವ ಕರೆಂಟೂ ಇದೆ. ದುರಂತವೆಂದರೆ ನಮ್ಮ ಸಮಾಜದ ಕತ್ತಲನ್ನು ಹೋಗಲಾಡಿಸಲು ಕಂಡು ಹಿಡಿದ ನಾನಾ ಕರೆಂಟುಗಳು ಇಲ್ಲಿಯ ತನಕ ಬೆಳಕು ಕೊಟ್ಟಿದ್ದಕ್ಕಿಂತ ಪ್ರಾಣ ತೆಗೆದಿದ್ದೇ ಹೆಚ್ಚು ಎನ್ನುವ ಸೂಕ್ಷ್ಮವನ್ನು ಉಪ್ಪನ್ನು ಹೀರಿಕೊಂಡ ನೀರಿನಂತೆ ಇಲ್ಲಿನ ಕಥೆಗಳು ಕರಗಿಸಿಕೊಂಡಿವೆ.

ನಾವು ನೋಡಿರಬಹುದಾದ, ನೋಡದೆಯೂ ಇರಬಹುದಾದ ಒಂದಷ್ಟು ಪಾತ್ರಗಳು ಉಳಿಸಿ ಹೋಗುವ ಭಾವನೆಗಳ ಗುಚ್ಛವೇ (ಟಚ್‌ ಮೀ ನಾಟ್). ಪರಿಪೂರ್ಣತೆಯೆನ್ನುವುದು ಮುಂದೆ ನಡೆದಂತೆಲ್ಲ ಮತ್ತೂ ದೂರಕ್ಕೆ ಹೋಗುವ ದಿಗಂತದಂತೆ.‌ ಈ ಹೊತ್ತಿನ ತಮ್ಮ ನಜರಿಗೆ ಸಿಕ್ಕಿದ್ದನ್ನು ತಿರುಚದೇ ಹೇಳುವ ಪ್ರಾಮಾಣಿಕ ದನಿ ಇಲ್ಲಿನ ಕಥೆಗಳಲ್ಲಿದೆ. (ಟಚ್‌ ಮೀ ನಾಟ್)ಗೆ ಶುಭವಾಗಲಿ.

(ಕೃತಿ: ಟಚ್‌ ಮೀ ನಾಟ್‌ (ಕಥಾಸಂಕಲನ), ಲೇಖಕರು: ಮುನವ್ವರ್‌ ಜೋಗಿಬೆಟ್ಟು, ಪ್ರಕಾಶನ: ಸಸಿ ಪ್ರಕಾಶನ)