ಜಯರಾಮ ಹೊರಗೆ ಬಂದು ಮಡಿ ಬಿಚ್ಚಿ ಅಂಗಿ ಚಡ್ಡಿ ಹಾಕಿಕೊಳ್ಳುವಾಗಲೂ ಕೈ ಕಾಲು ನಡುಕ ಹೋಗಿಲ್ಲ. ಹೊರಬಂದ ಮೇಲೆ ಹೊರಾಂಗಣದಿಂದಲೇ ಒಂದು ಸುತ್ತು ಪ್ರದಕ್ಷಿಣಿ ಹಾಕಿ ದೇವರಿಗೆ ಒಂದು ಸಲ ಕೈಮುಗಿದು ಹೋಗುವುದು ರೂಢಿ. ಹಾಗೇ ಇವನೂ ಆಚೀಚೆ ನೋಡದೆ ಸುತ್ತು ಪ್ರದಕ್ಷಿಣೆ ಬರುತ್ತಿದ್ದಾನೆ. ಏಕಾಏಕಿ ದೇವಾಲಯದ ಮೇಲ್ಛಾವಣಿಯ ಕಡೆ ದೃಷ್ಟಿ ಹೋದಾಗ ಏನನ್ನು ಕಾಣುತ್ತಾನೆ? ನಾನಾ ವಿಧದ ಹಾವುಗಳು ನೇತಾಡುತ್ತಿವೆ. ಅವವುಗಳೇ ಜೊತೆಯಾಟ ಆಡುತ್ತಿವೆ.
ಜಯರಾಮ ಹೆಗಡೆ ಜೀವನ ಕಥನ ‘ಬೀದಿಯ ಬದುಕು’ ಕೃತಿಯ ಆಯ್ದ ಭಾಗ ನಿಮ್ಮ ಓದಿಗೆ

ಹೊಸ್ಮನೆ ನಾಣಪ್ಪಣ್ಣ ಒಬ್ಬ ಇದ್ದಾನೆ. ಅವನ ನಿಜವಾದ ಮನೆ ನಮ್ಮ ಕೊಳಚಗಾರಿನ ಮನೆಯಿಂದ ಕೂಗಳತೆಯಲ್ಲಿದ್ದ ಹೊಸ್ಮನೆಯಾದರೂ ಅವನು ಸದಾ ಇರುವುದು ನಮ್ಮ ಮನೆಯಲ್ಲೇ. ಮದುವೆ ಹಬ್ಬ ಆಗಿರಲಿಲ್ಲ. ಐವತ್ತು ವರ್ಷಕ್ಕೇ ಪೂರ ವೃದ್ಧಾಪ್ಯ ಕಾಣಿಸಿದೆ. ಆದರೆ ನಿಷ್ಕಳಂಕ, ನಿಷ್ಕಪಟ ಹೃದಯದ ಋಜು ಸ್ವಭಾವದ ವ್ಯಕ್ತಿ. ಇಲ್ಲಿ ಮನೆಯಲ್ಲಿಯೇ ಅವನ ವಾಸ. ಗಣಪತಿ ದೇವಸ್ಥಾನದಲ್ಲಿ ನಿತ್ಯಪೂಜೆ ಮುಗಿಸಿ ಅಲ್ಲಿಂದ ಹೆಬ್ಬಯಲಮ್ಮನ ಮನೆಗೆ ಹೋಗಿ ಅಲ್ಲಿ ಅಮ್ಮನವರ ಪೂಜೆ ಮುಗಿಸಿ ಅಲ್ಲಿಂದ ಹರವಳ್ಳೆ ಲಕ್ಷ್ಮೀನಾರಾಯಣ ದೇವರ ಪೂಜೆ ಮಾಡಬೇಕು. ಅಷ್ಟಾಗುವಾಗ ಹೊತ್ತು ನೆತ್ತಿಯಿಂದ ಜಾರಿ ಅಪರಾಹ್ನದ ಕಡೆಗೆ ವಾಲಿರುತ್ತದೆ. ಅಲ್ಲೇ ಒಂದು ಗಂಜಿಯನ್ನೋ ಏನನ್ನೋ ಮಾಡಿದರೆ ಮಾಡಿದ, ಉಂಡರೆ ಉಂಡ. ಇಲ್ಲವಾದರೆ ಹಾಗೇ ಒಣ ಹೊಟ್ಟೆಯಲ್ಲೆ ರಾತ್ರಿಯಾಗುವಾಗ ಕೊಳಚಗಾರಿಗೆ ಹಾಜರು. ‘ಪಾರತಕ್ಕ, ಇವತ್ ಮಧ್ಯಾಹ್ನಕ್ಕೆ ಏಕಾದಶಿ ಮಾಡಿದ್ನೇ. ಅಮ್ಮನ್ ಮನಿಂದ ಹೊಂಡಕ್ಕರೇ ತಡ ಆಗೋತು’ ಎನ್ನುತ್ತಿದ್ದ. ಮೂರು ದೇವಸ್ಥಾನಗಳು ಮೂರು ದಿಕ್ಕಿನಲ್ಲಿದ್ದವು. ಈ ಮೂರೂ ಪೂಜೆಯನ್ನು ನಿಷ್ಠೆಯಿಂದ, ತನ್ಮಯತೆಯಿಂದ ಮಾಡಿಕೊಂಡಿದ್ದ. ಮಂತ್ರ ತಂತ್ರ ಕೇಳಬೇಡಿ. ಬಾಯಿಗೆ ಏನೂ ಬರದಿದ್ದರೂ ಶುದ್ಧ ಭಕ್ತಿಯಿಂದ ಮಾಡುವ ಆ ಸಾತ್ವಿಕ ಪೂಜೆ ದೇವರಿಗೇ ಒಪ್ಪಿಗೆಯಿರಬೇಕು. ಅದರಲ್ಲೂ ಹೆಬ್ಬಯಲಮ್ಮ ಎಂದರೆ ವಿಶಿಷ್ಟವಾದ ಒಂದು ಶಕ್ತಿ ಸ್ಥಳ. ಯಾವುದೋ ಕಾಲದಲ್ಲಿ ಯಾರಿಂದಲೋ ರಚಿತವಾದ ಎತ್ತರದ ಹಂಚಿನ ಮಾಡಿನ ಒಂದು ಗುಡಿ. ಅದರೊಳಗೆ ಬೃಹದಾಕಾರದ ಎರಡು ಹುತ್ತಗಳು. ಎದುರಿನದ್ದು ಅಕ್ಕ, ಹಿಂದಿನದ್ದು ತಂಗಿಯೆಂಬ ನಂಬಿಕೆ. ಅಕ್ಕ ಕುಬ್ಜಳಾಗಿದ್ದಾಳೆ. ಹಿಂದಿನ ತಂಗಿ ಎತ್ತರೆತ್ತರಕ್ಕೆ ಬೆಳೆಯುತ್ತ ಮೇಲಿನ ಛಾವಣಿಯ ತನಕ ಬೆಳೆಯುತ್ತಿದ್ದಾಳೆ. ಈ ಎರಡೂ ಹುತ್ತಗಳನ್ನೂ ಸುತ್ತಿಕೊಂಡು ಒಳಗಿನಿಂದಲೇ ಪ್ರದಕ್ಷಿಣೆ ಹಾಕಲು ಒಂದು ಕಿರುಹಾದಿಯಿದೆ. ಹಿಂಬದಿ ಭಾಗದಲ್ಲಿ ಘೋರ ಅಂಧಕಾರ. ಹುತ್ತದ ಒಂದೊಂದು ಕಿರುದ್ವಾರದಲ್ಲಿ ನಾನಾ ವಿಧದ ಹಾವುಗಳ ವಾಸ. ಅದರಲ್ಲೂ ನಾಗರಹಾವುಗಳೂ ಇವೆ. ಏನಾದರೂ ಮಡಿ ಮೈಲಿಗೆ ಹೆಚ್ಚುಕಮ್ಮಿಯಾದರೆ ನಾಗರಹಾವು ಹೊರಬಂದಾಯಿತು. ನಾಗರಹಾವು ಕಂಡ ಕಥೆಯನ್ನೇ ನಾಣಪ್ಪಣ್ಣಯ್ಯ ರಸವತ್ತಾಗಿ ವರ್ಣಿಸುತ್ತಾನೆ. ಕೇಳುವವರಿಗೆ ಮೈ ನಿಮಿರುವಂಥ ರುದ್ರಭೀಕರ ಕಥೆಯಾದರೂ ತನಗೆ ಅದು ಏನೇನೂ ಅಲ್ಲ ಎಂಬಂಥ ತನ್ಮಯತೆಯಿಂದ ಕಥೆ ಹೇಳುತ್ತಾನೆ.

(ಜಯರಾಮ ಹೆಗಡೆ)

ನಾಣಪ್ಪಣ್ಣನಿಗೂ ಏನಾದರೂ ಅಮೆ-ಸೂತಕ, ಆಶೌಚ ಬಂದಾಗ ಈ ಮೂರೂ ಪೂಜೆಗೆ ಬೇರೆ ಜನ ಹೋಗಬೇಕು. ಹಾಗೆ ಒಂದು ಬಾರಿ ಸೂತಕ ಬಂದಾಗ ಬೇರೆ ಜನರೇ ಸಿಗದೇ ಜಯರಾಮನನ್ನೇ ಹೆಬ್ಬಯಲಮ್ಮನ ದೇವಸ್ಥಾನದ ಪೂಜೆಗೆ ಕರೆದೊಯ್ದಿದ್ದಾನೆ. ಹಾಗೆ ನಾಣಪ್ಪಣ್ಣ ಮೊದಲ ಬಾರಿಗೆ ಪೂಜೆಗೆ ಕರೆದೊಯ್ದಾಗ ಜಯರಾಮನಿಗೆ ಆರೇಳು ವರ್ಷ ವಯಸ್ಸು. ‘ಅಮ್ಮನ್ ಮನೆ ಅಪೀ. ಹೆದರ್ಕ್ಯಳಡ. ಅಮ್ಮ ಅಲ್ದನಾ ಎಂತೂ ಆಗ್ತಿಲ್ಲೆ’ ಎಂದು ಧೈರ್ಯ ತುಂಬುತ್ತಿದ್ದಾನೆ. ಇವನಿಗೆ ದೇವಸ್ಥಾನದ ಬೃಹದಾಕಾರದ ಬಾಗಿಲು ತೆರೆಯಲೇ ಭಯ. ಎಲ್ಲಿ ಹಾವು ಬಂದೀತೋ, ಎಲ್ಲಿ ನಾಗನ ಹೆಡೆ ಹೊರಗೆ ಬಂದಿದೆಯೋ. ಇಡೀ ಹುತ್ತದ ಮೈತುಂಬ ಅರಶಿನ ಕುಂಕುಮ ಬಳಿದು ಹುತ್ತದ ಕೈಗಳಿಗೆಲ್ಲ ಹರಕೆಗೆ ಬಂದಿದ್ದ ಬಳೆಗಳನ್ನೆಲ್ಲ ಪೋಣಿಸಿ ವಿಚಿತ್ರವಾದ ಒಂದು ವಾತಾವರಣ ಸೃಷ್ಟಿಯಾಗಿರುತ್ತದೆ. ಅಕ್ಕನಿಗೆ ಬೇರೆ ತಂಗಿಗೆ ಬೇರೆ ತೂಗುದೀಪ ನೇತಾಡಿಕೊಂಡಿರುತ್ತದೆ. ಎರಡಕ್ಕೂ ಎಣ್ಣೆ ಹೊಯ್ದು ದೀಪ ಹೊತ್ತಿಸಬೇಕು. ನಾಣಪ್ಪಣ್ಣಯ್ಯ ಒಳಬರುವಂತಿಲ್ಲ. ಬೇರೆ ಒಂದು ನರಹುಳದ ಸಂಚಾರವಿಲ್ಲ ಅಲ್ಲಿ. ಜಯರಾಮನೊಬ್ಬನೇ ಒಳಹೊಕ್ಕು ಇವನಿಗೆ ಗೊತ್ತಿದ್ದಂತೆ ಪೂಜೆ ಮಾಡಬೇಕು. ನಾಣಪ್ಪಣ್ಣಯ್ಯ ಹೊರಗಿನಿಂದಲೇ ನಿರ್ದೇಶನ ಮಾಡುತ್ತ ಹಾಂಗ್ ಮಾಡು, ಹೀಂಗ್ ಮಾಡು ಎನ್ನುತ್ತಾನೆ. ಒಂದು ಕಿರು ಕೊಡಪಾನದಲ್ಲಿ ನೀರು ಸೇದಿಕೊಂಡು ಒಳಪ್ರವೇಶ ಮಾಡಿ ದೀಪ ಹಚ್ಚಿ ನಿನ್ನೆ ಹಾಕಿದ ಹೂ ನಿರ್ಮಾಲ್ಯ ಹೊರಗೆಸೆದು ಇಂದು ತಂದಿದ್ದ ಹೂವು, ದೂರ್ವೆ, ಕಣಿಗೆಲೆಗಳನ್ನು ಅಮ್ಮನವರಿಗೆ ಅಲಂಕಾರ ಮಾಡಿ ಒಂದು ತೆಂಗಿನಕಾಯಿ ಒಡೆದು ಬಾಳೆ ಹಣ್ಣಿನೊಂದಿಗೆ ನೈವೇದ್ಯ ಮಾಡಿ ಮತ್ತೊಂದು ದೊಡ್ಡ ಆರತಿ ಮಾಡಬೇಕು. ಆ ಆರತಿಯನ್ನು ಬೆಳಗುತ್ತಲೆ ಗಂಟೆಯನ್ನು ತೂಗಿಕೊಂಡು ಅಮ್ಮನವರ ಪ್ರದಕ್ಷಿಣಾ ಪಥದಲ್ಲಿ ಒಂದು ಸುತ್ತು ಬರಬೇಕು. ಪುಟ್ಟ ಜಯರಾಮನಿಗೆ ತೊಡೆ ನಡುಗುತ್ತದೆ. ಎಲ್ಲಿಂದ ಹಾವು ಹೊರಟೀತೋ, ಹಿಂದಿನ ಕತ್ತಲೆಯಲ್ಲಿ ಕಾಲ ಕೆಳಗೇ ಘಟಸರ್ಪ ಮಲಗಿದ್ದೀತೋ. ಪಾರಿವಾಳಗಳ ಪಟಪಟ ಸದ್ದು ಭೀತಿ ಹುಟ್ಟಿಸುತ್ತದೆ. ಅಂಥದೇ ಸ್ಥಿತಿಯಲ್ಲೇ ಒಂದು ಸುತ್ತು ಆರತಿಯೊಂದಿಗೆ ಪ್ರದಕ್ಷಿಣೆ ಬಂದು ಉದ್ದಂಡ ನಮಸ್ಕಾರ ಮಾಡಿ ಕೈ ಮುಗಿದಿದ್ದಾನೆ. ಅಮ್ಮ, ಅಮ್ಮ, ಅಮ್ಮ ಎಂದು ಮನಸ್ಸಿನಲ್ಲಿ ತನ್ನಮ್ಮನನ್ನೇ ನೆನೆದಿದ್ದಾನೆ. ಅವನಿಗೆ ಹೆಬ್ಬಯಲಮ್ಮ ಕಂಡಳೊ ಊರಿಗೆಲ್ಲ ಅಮ್ಮನಾದ ತನ್ನಮ್ಮ ಕಂಡಳೋ ಅಂತೂ ಪೂಜೆ ಮುಗಿಸಿ ಹೊರಬಿದ್ದ. ‘ಅಮ್ಮ ಅಲ್ದನಾ ಅಪಿ, ಹೆದ್ರದ್ ಎಂತಕ್ಕೆ’ ಎಂದು ನಾಣಪ್ಪಣ್ಣಯ್ಯ ಹೇಳುತ್ತಲೇ ಇದ್ದಾನೆ.

ಜಯರಾಮ ಹೊರಗೆ ಬಂದು ಮಡಿ ಬಿಚ್ಚಿ ಅಂಗಿ ಚಡ್ಡಿ ಹಾಕಿಕೊಳ್ಳುವಾಗಲೂ ಕೈ ಕಾಲು ನಡುಕ ಹೋಗಿಲ್ಲ. ಹೊರಬಂದ ಮೇಲೆ ಹೊರಾಂಗಣದಿಂದಲೇ ಒಂದು ಸುತ್ತು ಪ್ರದಕ್ಷಿಣಿ ಹಾಕಿ ದೇವರಿಗೆ ಒಂದು ಸಲ ಕೈಮುಗಿದು ಹೋಗುವುದು ರೂಢಿ. ಹಾಗೇ ಇವನೂ ಆಚೀಚೆ ನೋಡದೆ ಸುತ್ತು ಪ್ರದಕ್ಷಿಣೆ ಬರುತ್ತಿದ್ದಾನೆ. ಏಕಾಏಕಿ ದೇವಾಲಯದ ಮೇಲ್ಛಾವಣಿಯ ಕಡೆ ದೃಷ್ಟಿ ಹೋದಾಗ ಏನನ್ನು ಕಾಣುತ್ತಾನೆ? ನಾನಾ ವಿಧದ ಹಾವುಗಳು ನೇತಾಡುತ್ತಿವೆ. ಅವವುಗಳೇ ಜೊತೆಯಾಟ ಆಡುತ್ತಿವೆ. ಹಾವುಗಳಲ್ಲೇ ಎಷ್ಟು ವಿಧ. ಹೆಸರೇ ಗೊತ್ತಿಲ್ಲದ ನಾಗ ಸಂತತಿಗಳು. ನೋಡುವಾಗಲೇ ಮೈ ಜುಮ್ ಎಂದು ನಡುಕ. ಇಷ್ಟೆಲ್ಲ ನಾಗನಿವಾಸದ ನಡುವೆಯೇ ನಾನು ಇಷ್ಟು ಹೊತ್ತು ಒಳಗಿದ್ದೆನೇ. ಪೂಜೆ ಮಾಡಿದೆನೇ. ಹಾವಿನೊಡನೆ ಸರಸವಾಡಿದೆನೇ. ಅಮ್ಮ ಅಮ್ಮ ಎಂದು ಹೇಳುವ ಈ ಮಹಾತಾಯಿಯ ಮಡಿಲು ಇಷ್ಟು ಭಯಂಕರವೇ? ಎಲ್ಲರನ್ನೂ ಕಾಪಿಡುವ ಮಹಾಮಾತೆಯ ಗರ್ಭವೂ ಇಷ್ಟೆಲ್ಲ ಕ್ರೂರಿಯಾಗಿರಬಹುದೇ? ಮಗು ಮನಸ್ಸಿನ ಜಯರಾಮನ ಆಲೋಚನೆ ಹೇಗೆ ಸಾಗಿರಬಹುದು? ಬುದ್ಧಿ ಬೆಳೆಯದ ಬಾಲಿಶ ಮನಸ್ಸಿನ ಮಗುವಿನ ಮನದಲ್ಲಿ ತುಂಬಿದ್ದು ಭೀತಿ, ಅಳುಕುಗಳೇ ಹೊರತು ಬೇರಾವ ಬೇರೆ ಯಾವ ಭಾವವೂ ಅಲ್ಲ. ನಾಣಪ್ಪಣ್ಣಯ್ಯ ಸಂತೈಸುತ್ತಲೇ ಇದ್ದಾನೆ. ‘ಹೆದರ್ಕ್ಯಳಡ ಅಪಿ, ಯಂತೂ ಆಗ್ತಿಲ್ಲೆ. ಅಮ್ಮ ಇದ್ದ.’ ಅಂತ ಸಮಾಧಾನಿಸುತ್ತಲೇ ಇದ್ದಾನೆ. ಆದರೆ ಜಯರಾಮನಿಗೆ ಅದೆಷ್ಟು ಧೈರ್ಯ ತುಂಬಿತೋ. ಒಳಗಿನಿಂದಲೇ ನಡುಕ ಹುಟ್ಟಿ ಬರುತ್ತಿದೆ. ತಾನು ಇದೇ ಪರಿಸ್ಥಿತಿಯಲ್ಲಿ ಒಳಗೆ ಹೋದಾಗಲೂ ತನಗೆಲ್ಲೂ ಹಾವಿನ ದರ್ಶನವಾಗಲಿಲ್ಲ. ಅಂದರೆ ಅಮ್ಮ ಕಾಯುವುದು ಹೌದಿರಬಹುದೇ. ಮುಗ್ಧ ಮನಸ್ಸಿನ ಮಗುವಿಗೆ ಏನೂ ಆಗಬಾರದೆಂಬ ತಾಯಿಯ ಮಮತೆ ಇರಬಹುದೇ. ಗೊಂದಲದಲ್ಲಿದ್ದಾನೆ ಜಯರಾಮ.

ಜಯರಾಮ ನಂತರದ ದಿನಗಳಲ್ಲಿ ಹಲವು ಬಾರಿ ಆ ಅಮ್ಮನಲ್ಲಿಗೆ ಹೋಗಿದ್ದಾನೆ. ವರ್ಷಕ್ಕೊಮ್ಮೆ ಆಗುವ ಹೆಬ್ಬಯಲಮ್ಮನ ಹಬ್ಬದಲ್ಲಿ ಅಮ್ಮನ ಎದುರು ಹೋಗಿ ಮಣಿದು, ಕೈಮುಗಿದು ಸಂತರ್ಪಣೆ ಊಟ ಮಾಡಿ ಬಂದಿದ್ದಾನೆ. ಸಂತೆ ಸರಕು ಮಾರುವ ಅಂಗಡಿಯಲ್ಲಿ ಬೆಂಡು ಬತ್ತಾಸು ಖರೀದಿಸಿ ಅಕ್ಕ ತಂಗಿಯರೊಂದಿಗೆ ತಿಂದು ಸಂಭ್ರಮಿಸಿದ್ದಾನೆ. ಆಗೆಲ್ಲ ಅಮ್ಮನ ಸನ್ನಿಧಾನವೆಂದರೆ ಸರ್ಪನಿವಾಸವೆಂಬ ಭೀತಿಯ ವಾತಾವರಣ ಎಲ್ಲೂ ಕಂಡಿಲ್ಲ. ಅವನಷ್ಟೇ ವಯಸ್ಸಿನ ಅವನಿಗಿಂತ ಕಿರಿ ವಯಸ್ಸಿನವರೂ ಅಲ್ಲಿ ಬಂದು ನಲಿದಿದ್ದಾರೆ. ರೈತಾಪಿ ವರ್ಗ ಮೊದಲ್ಗೊಂಡು ಇಡೀ ಊರಿನ ಎಲ್ಲ ವರ್ಗದವರೂ ಏಕತ್ರ ಮೇಳೈಸಿ ಅಮ್ಮನ ಹಬ್ಬ ಆಚರಿಸಿದ್ದಾರೆ. ಶರಾವತಿ ನದಿ ಅಣೆಕಟ್ಟಿನಿಂದ ಹೆಬ್ಬಯಲಮ್ಮನ ದೇವಸ್ಥಾನ, ಹರವಳ್ಳೆ ದೇವಸ್ಥಾನವೆಲ್ಲ ಮುಳುಗುತ್ತದೆಂಬ ಸುದ್ದಿಯೂ ಆಗಲೇ ಹಬ್ಬಿಯಾಗಿದೆ. ಎಲ್ಲರನ್ನೂ ಸಲಹುವ ಅಮ್ಮನ ದೇವಾಲಯವೇ ಜಲಗರ್ಭದಲ್ಲಿ ಮುಳುಗುತ್ತದೆಂದು ಯಾರೂ ನಂಬಲಾರರಾದರೂ ಊರಿನ ಮುಖಂಡರಾದ ಮೂಗಿಮನೆ ಗಣೇಶಯ್ಯ, ಜಯರಾಮನ ತಂದೆ ಹೀಗೆ ಪ್ರತಿಷ್ಠಿತರೆಲ್ಲ ಅಂಥ ಒಂದು ಪರಿಸ್ಥಿತಿ ಬರುತ್ತದೆಂದು ಒಪ್ಪಿಕೊಳ್ಳುತ್ತಿದ್ದಾರೆ. ಅಮ್ಮನವರನ್ನು ಮುಳುಗಿಸಿದರೆ ಊರಿಗೇ ಉಳಿಗಾಲವಿಲ್ಲ ಎಂಬುದು ಊರಿನವರ ಅನಿಸಿಕೆಯಾದರೂ ಊರಿಗೆ ಉಳಿಗಾಲವಿಲ್ಲ ಎಲ್ಲವೂ ಮುಳುಗುತ್ತದೆಂಬುದು ನಿಜವಾಗುವ ಸನ್ನಿವೇಶ ಹತ್ತಿರ ಬಂದಾಗಿದೆ.

ತಲೆತಲಾಂತರದಿಂದ ಬಾಳಿ ಬದುಕಿ ಬಂದ ಮನೆತನಗಳೆಲ್ಲ ತಮ್ಮ ಸರ್ವಸ್ವವನ್ನೂ ಮುಳುಗಡೆಯೆಂಬ ರಾಕ್ಷಸಯಜ್ಞಕ್ಕೆ ಆಹುತಿಯಾಗಿಸಿ ಜೋಲುಮುಖ ಹೊತ್ತು ಹೊರಡಬೇಕಾದ ದುರ್ಭರ ಸನ್ನಿವೇಶದ ಕಾಲದಲ್ಲಿ ಮುಳುಗುತ್ತಿರುವುದು ಬರಿಯ ಭೂಮಿ ಮಾತ್ರ ಅಲ್ಲ. ಸುತ್ತಮುತ್ತಲಿನ ಪರಿಸರ, ಸಂಬಂಧ, ಬಾಂಧವ್ಯಗಳು, ತಲೆಮಾರುಗಳಿಂದ ನಂಬಿ ಕಾಪಾಡಿಕೊಂಡು ಬಂದ ಸಂಸ್ಕೃತಿ, ಆಚಾರ-ವಿಚಾರ ಎಲ್ಲವೂ.

(ಜಯರಾಮ ಹೆಗಡೆಯವರು ಹುಟ್ಟಿದ್ದು ಶಿವಮೊಗ್ಗ ಜಿಲ್ಲೆ ಜೋಗ ಸಮೀಪದ ಕೊಳಚಗಾರು ಎಂಬ ಹಳ್ಳಿಯಲ್ಲಿ. ಶರಾವತಿ ನದಿಗೆ ಲಿಂಗನಮಕ್ಕಿ ಅಣೆಕಟ್ಟು ಕಟ್ಟಿದಾಗ ಮುಳುಗಡೆಯಿಂದಾಗಿ ಊರು ತೊರೆದು ಹೋಗಿದ್ದು ಸಾಗರ ತಾಲೂಕಿನ ಬ್ಯಾಡರಕೊಪ್ಪ ಎಂಬ ಇನ್ನೊಂದು ಗ್ರಾಮಕ್ಕೆ. ಮುಂದೆ ಜೀವನೋಪಾಯಕ್ಕಾಗಿ ತುಳುನಾಡಿಗೆ ಬಂದು ಬದುಕು ಕಟ್ಟಿಕೊಂಡಿದ್ದು ದಕ್ಷಿಣ ಕನ್ನಡದ ಮೂಡಬಿದ್ರೆ ಸಮೀಪದ ಮಿಜಾರಿನಲ್ಲಿ. ‘ಬೀದಿಯ ಬದುಕು’ ಜಯರಾಮ ಹೆಗಡೆಯವರ ಜೀವನ ಕಥನ. ಸ್ವಯಂ ಪ್ರಕಾಶನದಿಂದ ಪ್ರಕಟವಾಗುತ್ತಿರುವ ಪುಸ್ತಕ ಮಾರ್ಚ್ 23ರಂದು ಬಿಡುಗಡೆಯಾಗಲಿದೆ.)