ತೀರ ಅತಿಯೆನಿಸುವಷ್ಟು ಅಲ್ಲದಿದ್ದರೂ ನಾವೆಲ್ಲರೂ ಒಂದಿಲ್ಲೊಮ್ಮೆ ಈಗಿರುವುದೇ ಚೆಂದ ಎಂದುಕೊಳ್ಳಲು ಆಸೆಪಟ್ಟವರೇ. ಬಡತನ, ಅನಾರೋಗ್ಯ, ಅಜ್ಞಾನಗಳನ್ನು ರಮ್ಯವಾಗಿ ಚಿತ್ರಿಸುತ್ತಾ ಪರಿಶ್ರಮದಿಂದ ಮೇಲೇರಿದವರ ಸಾಧನೆಯನ್ನು ಕಡೆಗಣಿಸಿ ಮಾತನಾಡುತ್ತಾ ಹುಸಿ ಆನಂದ ಹೊಂದಿದವರೇ. ಬಹಳಷ್ಟು ಸಲ ಎದುರಿನವರ ಮೂಗಿನ ನೇರಕ್ಕೆ ಮಾತನಾಡಿ ‘ಒಳ್ಳೆಯವರಾಗಿ’ ಕಾಣುವ ಆಸೆಯೇ ಡೋಂಗಿಗಳ ಬಡಾಯಿಗೆ ಜೈಹೋ ಎನ್ನುವಂತೆ ಮಾಡಿರುತ್ತದೆ.
ಎಸ್. ನಾಗಶ್ರೀ ಅಜಯ್ ಬರೆಯುವ “ಲೋಕ ಏಕಾಂತ” ಅಂಕಣ ಬರಹ ನಿಮ್ಮ ಓದಿಗೆ

“ನನ್ನ ವಯಸ್ಸಿನ ಎಲ್ಲರೂ ಸ್ವಂತ ಮನೆ ಕಟ್ಟಿ, ಮಕ್ಕಳನ್ನು ಡ್ಯಾನ್ಸು, ಸ್ವಿಮ್ಮಿಂಗ್, ಸಂಗೀತ, ನಾಟಕ ಅಂತ ಕಳಿಸಿ, ವಾರಾಂತ್ಯದಲ್ಲಿ ಹೆಂಡತಿ ಜೊತೆ ಅಡುಗೆಮನೆಯಲ್ಲಿ ಹೊಸರುಚಿ ಮಾಡಿ ಏನೆಲ್ಲ ಸರ್ಕಸ್ ಮಾಡ್ತಿದ್ದಾರೆ. ಆದರೆ ನಾನು ಬರಿಗೈ ದಾಸ. ಬ್ಯಾಂಕ್ ಬ್ಯಾಲೆನ್ಸು, ಆಸ್ತಿ, ಹೇಳಿಕೊಳ್ಳುವಂತಹ ಉದ್ಯೋಗ ಏನೂ ಇಲ್ಲ. ಇನ್ನು ಸರಿಯಾಗಿ ಹೇಳಬೇಕೆಂದರೆ ನನ್ನ ಹೆಂಡತಿಗೂ ನನಗೂ ಮಧ್ಯೆ ಮಾತು ಮುಗಿದು ಮೂರು ವರ್ಷಗಳಾಗಿವೆ. ವಿಪರೀತ ಪ್ರತಿಭೆ ಮತ್ತು ಸ್ವಾಭಿಮಾನ ನನ್ನ ಆಸ್ತಿ” ಹೀಗಂತ ಒಬ್ಬ ನಲವತ್ತೈದರ ಆಸುಪಾಸಿನ ವ್ಯಕ್ತಿ ತನ್ನ ಬಣ್ಣಿಸುತ್ತಿದ್ದರೆ ಮಾತು ಮರೆತು ಸುಮ್ಮನುಳಿದಿರುತ್ತೇವೆ.

“ಅವರೆಲ್ಲ ತಿಂಗಳಿಗೊಮ್ಮೆ ಪಾರ್ಲರ್‌ಗೆ ಹೋಗಿ, ಪ್ರತಿದಿನ ವಾಕಿಂಗ್, ಜಿಮ್ ಅಂತ ನಾನಾವಿಧವಾಗಿ ದೇಹದಂಡಿಸಿ, ಪುರುಸೊತ್ತಾಗಿ ಕೂತು ಇಂಥದ್ದೇ ಸೀರೆ, ಇದೇ ಒಡವೆ, ಇಷ್ಟೇ ನಗು ಅಂತ ಪಾಡುಪಟ್ಟು ಚೆಂದ ಕಾಣಬೇಕು. ನಿಜ ಹೇಳ್ತೀನಿ ಕೇಳು. ನಂಗೆ ಸಿಹಿ ಇಷ್ಟ. ನಿದ್ದೆ ಇಷ್ಟ. ‌ಮಧ್ಯಾಹ್ನ ಊಟವಾದ ಮೇಲೆ ಧೊಪ್ ಅಂತ ಹಾಸಿಗೆ ಮೇಲೆ ಬೀಳ್ತೀನಿ. ಸಿಕ್ಕಿದ್ದೊಂದು ಸಲ್ವಾರ್ ತೊಟ್ಟು ಆಚೆ ಬರ್ತೀನಿ. ದೇವರು ಕೊಟ್ಟ ಮೈಬಣ್ಣ, ಗಂಡ ಮಾಡಿಸಿಕೊಟ್ಟ ಚಿನ್ನ ಸಾಕು ನಾನು ಸುಂದರಿ ಅನ್ನೋಕೆ” ಅಂತ ಕಳೆದುಕೊಳ್ಳುತ್ತಿರುವ ಆರೋಗ್ಯದ ಬಗ್ಗೆ ಕಿಂಚಿತ್ತೂ ಅರಿವಿಲ್ಲದೆ ಹೆಣ್ಣು ಉಬ್ಬುತ್ತಿರುತ್ತಾಳೆ.

ಇದು ಉಲ್ಟಾ ಕೂಡ ಆಗಬಹುದು. ಉದ್ಯೋಗ, ಹಣ, ಆಸ್ತಿ, ಕುಟುಂಬದ ಕಾಳಜಿಲ್ಲದ ಹೆಣ್ಣು ಹಾಗೂ ಅಸಡ್ಡಾಳು ಜೀವನಶೈಲಿಯ ಗಂಡು ಅಂತಲೇ ತೆಗೆದುಕೊಳ್ಳಿ.‌ ಹೆಣ್ಣು-ಗಂಡೆಂಬ ಬೇಧವಿಲ್ಲದೆ “ನಾನಿರೋದೇ ಹೀಗೆ. ಬದಲಾಗುವ ಅವಶ್ಯಕತೆಯಾಗಲಿ ಅನಿವಾರ್ಯವಾಗಲಿ ನನಗಿಲ್ಲ. ಇನ್ನೂ ಬೇಕಿದ್ರೆ ನೀವೆ ನನ್ನ ಹಾದಿಗೆ ಬನ್ನಿ. ನಾ ದಾರಿ ರಹದಾರಿ…” ಎನ್ನುವವರನ್ನು ಭೇಟಿಯಾಗಿಯೇ ಇರುತ್ತೀರಿ. ಸಂಗೀತ, ಸಾಹಿತ್ಯ, ಸಿನಿಮಾ ಲೋಕದ ದಿಗ್ಗಜರೇ ಇರಲಿ‌. ಜನಸಾಮಾನ್ಯರೇ ಇರಲಿ. ತಾನು ಹೇಗಿದ್ದರೂ ಶ್ರೇಷ್ಠ ಎಂಬ ಮದವೇರಿಬಿಟ್ಟರೆ ಅಧಃಪತನದ ಹಾದಿಗೆ ವಾಯುವೇಗ.

ತೀರ ಅತಿಯೆನಿಸುವಷ್ಟು ಅಲ್ಲದಿದ್ದರೂ ನಾವೆಲ್ಲರೂ ಒಂದಿಲ್ಲೊಮ್ಮೆ ಈಗಿರುವುದೇ ಚೆಂದ ಎಂದುಕೊಳ್ಳಲು ಆಸೆಪಟ್ಟವರೇ. ಬಡತನ, ಅನಾರೋಗ್ಯ, ಅಜ್ಞಾನಗಳನ್ನು ರಮ್ಯವಾಗಿ ಚಿತ್ರಿಸುತ್ತಾ ಪರಿಶ್ರಮದಿಂದ ಮೇಲೇರಿದವರ ಸಾಧನೆಯನ್ನು ಕಡೆಗಣಿಸಿ ಮಾತನಾಡುತ್ತಾ ಹುಸಿ ಆನಂದ ಹೊಂದಿದವರೇ. ಬಹಳಷ್ಟು ಸಲ ಎದುರಿನವರ ಮೂಗಿನ ನೇರಕ್ಕೆ ಮಾತನಾಡಿ ‘ಒಳ್ಳೆಯವರಾಗಿ’ ಕಾಣುವ ಆಸೆಯೇ ಡೋಂಗಿಗಳ ಬಡಾಯಿಗೆ ಜೈಹೋ ಎನ್ನುವಂತೆ ಮಾಡಿರುತ್ತದೆ. “ನಿಜ..ನಿಜ.. ನಿಮ್ಮಷ್ಟು ಪ್ರತಿಭಾವಂತರನ್ನು ಕಂಡಿದ್ದೇ ನಮ್ಮ ಅದೃಷ್ಟ.‌ ಮನೆ, ದುಡ್ಡು, ಆಸ್ತಿ ಕಟ್ಕೊಂಡು ಏನು ಪ್ರಯೋಜನ? ನಾಲ್ಕು ಜನರ ಮನಸ್ಸಿನಲ್ಲಿ ಉಳಿಯುವುದು ಶ್ರೀಮಂತನಲ್ಲ. ‌ಹೃದಯವಂತ.‌ ನೀವು ಅಂತಹ ಅಪರೂಪದ ಮನುಷ್ಯ.” ಎಂದು ಉಬ್ಬಿಸಿದವರೇ ತಿಂಗಳ ತಿಂಗಳ ಇ.ಎಂ.ಐ ಕಟ್ಟಿ ಸ್ವಂತದ್ದು ಅಂತ ಗೂಡು ಮಾಡಲು, ಊರಿನ ಜಮೀನಿಗೆ ಬೋರು ಹಾಕಿಸಲು, ಮಕ್ಕಳ ಓದಿಗೆ ಲೋನ್ ತೆಗೆಯಲು ಹಗಲಿಡೀ ಬೆವರು ಸುರಿಸುತ್ತಿರುತ್ತಾರೆ.‌ ಹೋಗುವಾಗ ಹೊತ್ಕೊಂಡು ಹೋಗೋಕಾಗಲ್ಲ ಅಂತ ಬದುಕಿರುವಾಗ ಬೀದಿಯಲ್ಲಿ ಬೀಳೋಕಾಗುತ್ತಾ? ಎಂಬ ತರ್ಕವನ್ನು ಅವರೇನು ನಾವೂ ಬೆಂಬಲಿಸುತ್ತೇವೆ.

ಸೌಂದರ್ಯ ಅನ್ನೋದು ನೋಡುಗನ ಕಣ್ಣಲ್ಲಿದೆ. ನಕ್ಕಾಗ ಪ್ರತಿಯೊಬ್ಬರೂ ಚೆಂದ ಕಾಣ್ತಾರೆ. ಅಯ್ಯೋ ದೇವರು ಕೊಡಬೇಕು ಆಯಸ್ಸು ಆರೋಗ್ಯ.. ಅಂತೆಲ್ಲ ಬೂಟಾಟಿಕೆ ಮಾಡಿದವರ ಸರ್ಚ್ ಹಿಸ್ಟರಿ ಭರ್ತಿ ಏಳು ದಿನದಲ್ಲಿ ಮೂರು ಕೆಜಿ ಇಳಿಸುವುದು ಹೇಗೆ? ಶಿಲ್ಪಾ ಶೆಟ್ಟಿ ಪ್ರತಿದಿನ ಕುಡಿಯುವ ಹಸಿರು ಜ್ಯೂಸಲ್ಲಿ ಏನೇನಿರುತ್ತೆ? ಕಣ್ಣಿನ ಕೆಳಗಿನ ಕಪ್ಪು ಉಂಗುರ ಹೋಗಲಾಡಿಸಲು ಅಕ್ಕಿಹಿಟ್ಟು ಹಚ್ಚಿ, ರಾತ್ರಿ ಹೊತ್ತು ಮೊಸರು ತಿನ್ನಬಾರದೇಕೆ? ನೀಲಿ ಸೀರೆಗೆ ಹಾಕಬೇಕಾದ ಒಡವೆಯ ಬಣ್ಣಗಳು… ಇತ್ಯಾದಿ ‘ಅಗತ್ಯ’ ಮಾಹಿತಿಯಿರುತ್ತದೆ.

ಎಲ್ಲವನ್ನೂ ಸಿಹಿಯಾಗಿ ಕೇಳುವಂತೆ ಹೇಳುವ ಭರದಲ್ಲಿ ಸತ್ಯ ಸದ್ದಿಲ್ಲದೆ ಅಡಗಿ ಕೂರುತ್ತಿದೆ.‌ ಹಾಗಾಗಿಯೇ ಮುಂದಿನ ಸಲ ಆರ್ಥಿಕ ವಿಷಯಗಳಲ್ಲಿ ಜಾಣತನ ಮಾಡುವಾಗ, ಆರೋಗ್ಯದ ಬಗ್ಗೆ ಗಂಭೀರವಾಗಿ ಯೋಚಿಸುವಾಗ ವಸ್ತುನಿಷ್ಠವಾಗಿ ನಡೆದುಕೊಳ್ಳೋಣ. ಕಡೆಗೂ ನಮ್ಮ ಬದುಕನ್ನು ನಾವೇ ಈಸಬೇಕು. ಇದ್ದು ಜಯಿಸಬೇಕು. ಅಂದಮೇಲೆ ಪೊಳ್ಳು ಜಂಬ, ಜಯಕಾರಗಳಲ್ಲಿ ಕಳೆದುಹೋಗುವುದಕ್ಕಿಂತ ವಿನಮ್ರವಾಗಿ ಕಲಿತು ಅರ್ಥ ಹುಡುಕೋಣ. ಸಾರ್ಥಕವೆನ್ನೋಣ.