ನನ್ನ ಹೆಂಡತಿಯನ್ನು ತೋರಿಸಿ “ಆಕೆ ಕ್ಯಾರಿಯಿಂಗ್” ಅಂದೆ. ಆಕೆಯ ಮುಖ ಪೆಚ್ಚಾಯಿತು! ಅವಳ ಸೂಪರ್ವೈಸರ್‌ಗೆ ಫೋನಾಯಿಸಿ ಕೇಳಿದಳು. ಒಂದಷ್ಟು ಮಾತೂ ಕಥೆಯಾದಮೇಲೆ ಕೊಟ್ಟಳು. ನಾನು ಧನ್ಯವಾದ ಹೇಳಿ ಅದನ್ನು ಪಡೆದು ಕ್ಯಾಪ್ ತೆಗೆಯುವಾಗ “ಸರ್ ಮ್ಯಾಡಂ ಪ್ಲೀಸ್ ಅದನ್ನು ಇಲ್ಲಿ ಕುಡಿಯಬೇಡಿ” ಅಂದಳು. ನಾನು “ಇದು ಕ್ಯಾಂಟೀನ್, ಇಲ್ಲಿ ಬೇಡ ಎಂದರೆ ಹೊರಗೆ ಸಾಧ್ಯವೇ ಇಲ್ಲ” ಎಂದು ನನ್ನ ಅಸಹಾಯಕತೆ ತೋರಿದೆ. ಅದಕ್ಕವಳು ನನ್ನ ಹೆಂಡತಿಯನ್ನು ಕುರಿತು “ಮ್ಯಾಡಂ ನೀವು ಅದನ್ನು ನಿಮ್ಮ ವ್ಯಾನಿಟಿ ಬಾಗ್‌ನಲ್ಲಿ ಇಟ್ಟುಕೊಂಡು, ಟಾಯ್ಲೆಟ್‌ನ ಒಳಗೆ ಹೋಗಿ ಕುಡಿದು ಬನ್ನಿ ಪ್ಲೀಸ್!” ಅಂದಳು.
ದರ್ಶನ್‌ ಜಯಣ್ಣ ಬರೆಯುವ “ಸೌದಿ ಡೇಟ್ಸ್”‌ ಸರಣಿಯ ಆರನೆಯ ಕಂತು

ಅದು ರಂಜಾನ್ ಮಾಸ. ಆಗ ಸೌದಿಯಲ್ಲಿ ಹೋಟೆಲ್, ಕ್ಯಾಂಟೀನು, ಜ್ಯೂಸ್ ಸೆಂಟರ್, ಅಷ್ಟೇ ಏಕೆ ಬಹಿರಂಗವಾಗಿ ಯಾವ ತಿನಿಸನ್ನೂ ಮಾರಾಟ ಮಾಡುವುದು ನಿಷಿದ್ಧ. ಸೂಪರ್ ಮಾರ್ಕೆಟ್‌ಗಳು ತೆಗೆದಿರುತ್ತವಾದರೂ ಅಲ್ಲಿ ಕೊಳ್ಳಬಹುದು ಅಷ್ಟೇ ಹೊರತು ಅದನ್ನು ತಿನ್ನಬೇಕೆಂದರೆ ಮನೆಯಲ್ಲಿಯೇ… ನಮಗೆ ಆಫೀಸಿನಲ್ಲಿಯೂ ಇದು ಅನ್ವಯ. ಒಂದು ತಿಂಗಳು ಕ್ಯಾಂಟೀನ್‌ಗೆ ಬೀಗ ಹಾಕಿರುತ್ತಾರೆ. ನಾವು ಮುಸ್ಲಿಮ್ ಅಲ್ಲದವರು ತಿನ್ನಲು ಅಡ್ಡಿಯಿಲ್ಲವಾದರೂ ಅದಕ್ಕೆಂದೇ ಪ್ರತ್ಯೇಕ ಬಂಕರ್ ಒಂದಿರುತ್ತದೆ. ಅದರಲ್ಲಿ ಮನೆಯಿಂದ ತಂಡ ತಿಂಡಿ, ಊಟ ಸೇವಿಸಬಹುದು. ಅಲ್ಲಿ ನೀರಿನ ಮತ್ತು ಚಹಾ/ ಕಾಫಿಯ ವ್ಯವಸ್ಥೆ ಇರುತ್ತದೆ.

ಸೌದಿಗಳು ಉಪವಾಸ ಮಾಡುತ್ತಿದ್ದರೂ, ನಿದ್ದೆಗೆಟ್ಟಿದ್ದರೂ ಒಮ್ಮೆಯೂ ಕೃಷವಾದಂತೆ ಕಾಣುವುದಿಲ್ಲ. ಮಂಪರಿನಲ್ಲಿ ಇರುವುದನ್ನು ಕೂಡಾ ನಾನು ನೋಡಿಲ್ಲ. ಅದಲ್ಲದೇ ಹೊರಗೆ ಹವೆ ಚೆನ್ನಾಗಿದ್ದರೆ ವಾಕಿಂಗ್ ಕೂಡಾ ಮಾಡುತ್ತಾರೆ! ನನ್ನ ಟೀಮ್‌ನ ಕೆಲವರ ಜೊತೆ ನಾನು ಯಾವಾಗಲೂ ಊಟವಾದ ಮೇಲೆ ವಾಕಿಂಗ್ ಮಾಡುವುದಿದೆ. ಅವರು ರಂಜಾನ್ ಸಮಯದಲ್ಲಿಯೂ ಜೊತೆಯಾಗುತ್ತಾರೆ. ಆಗೊಮ್ಮೆ ನಾನು ಕೇಳಿದ್ದೆ “ಇಲ್ಲಿ ಉಪವಾಸವನ್ನು ಇಷ್ಟು ಚಾಚೂ ತಪ್ಪದೇ ಪಾಲಿಸುತ್ತಾರಲ್ಲ ಒಂದು ವೇಳೆ ಯಾರಿಗಾದರೂ ಡಯಾಬಿಟಿಸ್ ಇದ್ದರೆ ಅಥವಾ ಇತರೆ ತೊಂದರೆಗಳಿದ್ದರೆ ಗತಿಯೇನು?” ಅದಕ್ಕವರು “ಹೌದು ಕಷ್ಟ, ಆದರೆ ಉಪವಾಸವನ್ನ ಯಾರಿಗೆ ಸಾಧ್ಯವೋ ಅವರು ಮಾಡಬೇಕಷ್ಟೆ, ಎಳೆಯವರು, ಪೂರ್ಣ ವಯಸ್ಸಾದವರು, ಡಯಾಬಿಟಿಸ್, ಬಿಪಿ ಹಾಗೆಯೇ ಮತ್ತಾವುದೋ ತೀವ್ರವಾದ ತೊಂದರೆ ಇರುವವರು ಪಾಲಿಸಬೇಕಾಗಿಲ್ಲ. ಹಾಗೆಯೇ ನಾವು ಕೂಡ ಒಂದೆರಡು ದಿನ ಅಥವಾ ವಾರ ಕೆಲಸದಮೇಲೆ ಹೊರಗೆ ಹೋದಾಗ (ಸೌದಿಯ ಹೊರಗೆ), ತಿನ್ನಲು ಅವಕಾಶವಿದೆ. ಆದರೆ ಮುಂದಿನ ರಂಜಾನ್ ಒಳಗೆ ಎಷ್ಟು ದಿನಗಳು ಉಪವಾಸ ಮುರಿದೆವೋ ಅಷ್ಟು ದಿನ ಮತ್ತೆ ವ್ರತ ಮಾಡಬೇಕು”. ನನಗೆ ಇದು ತಿಳಿದಿರಲಿಲ್ಲ, ಖುಷಿಯಾಯಿತು.

ಮೇಲಿನ ಪ್ರಶ್ನೆಯನ್ನು ನಾನು ಕೇಳಿದ ಉದ್ದೇಶ ರಂಜಾನ್ ಸಮಯದಲ್ಲೊಮ್ಮೆ ನಾನೂ ನನ್ನ ಹೆಂಡತಿ ಹತ್ತಿರದ ಬಹರೈನ್ ದೇಶಕ್ಕೆ ಹೋಗಿದ್ದೆವು. ನಮಗೆ ಈ ಒಂದು ಊರಿನ ದೇಶ 120 ಕಿಲೋಮೀಟರ್ ದೂರ ಮಾತ್ರ. ಅಲ್ಲಿಗೆ ಸೌದಿಯ ರೆಸಿಡೆಂಟ್‌ಗಳಿಗೆ “ಆನ್ ಅರೈವಲ್ ವೀಸಾ” ಕೊಡುತ್ತಾರೆ. ಕಾರಿನಲ್ಲಿ ಕುಳಿತೇ ಪಾಸ್‌ಪೋರ್ಟ್ ಮತ್ತು ನಮ್ಮ ಸೌದಿಯ ರೆಸಿಡೆನ್ಸಿ ಕೊಟ್ಟರೆ ವೀಸಾ ಕೊಡುತ್ತಾರೆ. ಒಂದು ಬಾರಿ 12 ದಿನಕ್ಕೆ ವೀಸಾ ಕೊಡುತ್ತಾರೆ. ಸೌದಿಯಲ್ಲಿ ಒಂದು ಕಾಲದಲ್ಲಿ ಸಿನಿಮಾ ಥೀಯೇಟರ್‌ಗಳಿರಲಿಲ್ಲ ಹಾಗಾಗಿ ಹಲವರು ವೀಕೆಂಡ್‌ಗಳಲ್ಲಿ, ರಜಾದಿನಗಳಲ್ಲಿ ಬಹ್ರೇನ್‌ಗೆ ಹೋಗುತ್ತಿದ್ದರು ಅದು ಈಗ ಕಡಿಮೆಯಾಗಿದೆ. ಸೌದಿಯಲ್ಲಿ ಆಲ್ಕೋಹಾಲ್ ಪೂರ್ಣ ನಿಷಿದ್ಧ ಹಾಗಾಗಿ ಈಗಲೂ ಹಲವು ಮಂದಿ ಅದರಲ್ಲೂ ಪಶ್ಚಿಮದವರು ರಜಾದಿನಗಳಲ್ಲಿ ಅಲ್ಲಿಗೆ ಹೋಗುತ್ತಾರೆ. ಒಂದು ಬಾರ್ಡರ್ ಕ್ರಾಸ್ ಮಾಡಿಬಿಟ್ಟರೆ ಪ್ರಪಂಚವೇ ಬದಲಾಗುವ, ಎಲ್ಲ ಕಟ್ಟಳೆಗಳೂ ಮಾಯವಾಗುವ ಪರಿ ನನ್ನ ಯಾವೊತ್ತಿನ ಅಚ್ಚರಿ.

ಹಾಗೊಮ್ಮೆ ಅಲ್ಲಿಗೆ ಹೋದಾಗ ಹೆಂಡತಿ ಐದು ತಿಂಗಳ ಗರ್ಭಿಣಿ. ಅಲ್ಲಿನ ಮ್ಯೂಜಿ಼ಯಂ ಒಂದಕ್ಕೆ ಹೋಗಿ ಅವಳನ್ನ ಅಲ್ಲಿಯೇ ಸೋಫಾದಲ್ಲಿ ಕೂರಿಸಿ ನಾನು ಅದು ಇದೂ ನೋಡುತ್ತಿದ್ದೆ. ನಾವು ತಂದಿದ್ದ ನೀರಿನ ಬಾಟಲಿ ಖಾಲಿಯಾಗಿದೆ ಮತ್ತು ಅವಳಿಗೆ ಬಾಯಾರಿಕೆಯಾಗಿದೆ. ನನಗೆ ಫೋನು ಮಾಡಿದಳು. ನಾನು ಅವಳೂ ಅಲ್ಲಿದ್ದ ಕ್ಯಾಂಟೀನಿಗೆ ಹೋದೆವು. ಅಲ್ಲಿ ಒಂದು ಬಾಟಲಿ ನೀರು ಕೊಳ್ಳಲು ಹೋದರೆ ಅಲ್ಲಿದ್ದ ಫಿಲಿಪಿನೋ ಮಹಿಳೆ ಕೊಡಲೊಳ್ಳಲು. ನಾನು ಪರಿಪರಿಯಾಗಿ ಬೇಡಿದೆ, ಹೂಂ ಹೂಂ ಸೂತಾರಾಮ್ ಆಕೆ ಕೊಡಲಿಲ್ಲ. ನಂತರ ನನ್ನ ಹೆಂಡತಿಯನ್ನು ತೋರಿಸಿ “ಆಕೆ ಕ್ಯಾರಿಯಿಂಗ್” ಅಂದೆ. ಆಕೆಯ ಮುಖ ಪೆಚ್ಚಾಯಿತು! ಅವಳ ಸೂಪರ್ವೈಸರ್‌ಗೆ ಫೋನಾಯಿಸಿ ಕೇಳಿದಳು. ಒಂದಷ್ಟು ಮಾತೂ ಕಥೆಯಾದಮೇಲೆ ಕೊಟ್ಟಳು. ನಾನು ಧನ್ಯವಾದ ಹೇಳಿ ಅದನ್ನು ಪಡೆದು ಕ್ಯಾಪ್ ತೆಗೆಯುವಾಗ “ಸರ್ ಮ್ಯಾಡಂ ಪ್ಲೀಸ್ ಅದನ್ನು ಇಲ್ಲಿ ಕುಡಿಯಬೇಡಿ” ಅಂದಳು. ನಾನು “ಇದು ಕ್ಯಾಂಟೀನ್, ಇಲ್ಲಿ ಬೇಡ ಎಂದರೆ ಹೊರಗೆ ಸಾಧ್ಯವೇ ಇಲ್ಲ” ಎಂದು ನನ್ನ ಅಸಹಾಯಕತೆ ತೋರಿದೆ. ಅದಕ್ಕವಳು ನನ್ನ ಹೆಂಡತಿಯನ್ನು ಕುರಿತು “ಮ್ಯಾಡಂ ನೀವು ಅದನ್ನು ನಿಮ್ಮ ವ್ಯಾನಿಟಿ ಬಾಗ್‌ನಲ್ಲಿ ಇಟ್ಟುಕೊಂಡು, ಟಾಯ್ಲೆಟ್‌ನ ಒಳಗೆ ಹೋಗಿ ಕುಡಿದು ಬನ್ನಿ ಪ್ಲೀಸ್!” ಅಂದಳು. ನನ್ನ ಹೆಂಡತಿ ಹಾಗೆಯೇ ಮಾಡಿದಳು.

ಬಹ್ರೇನ್ ಎಲ್ಲ ಕಟ್ಟಳೆಗಳನ್ನು ಮೀರಿದ ಮುಸ್ಲಿಂ ದೇಶ ಅಲ್ಲಿಯೂ ಈ ರೀತಿ ಒಂದು ಬಾಟಲಿ ನೀರಿಗೆ ಕಷ್ಟ ಬರಬಹುದು ಎಂದು ನಾನು ಎಣಿಸಿರಲಿಲ್ಲ. ಆದರೆ ಇದು ರಂಜಾನ್ ಮಾಸದ ಆಚರಣೆ ಅಷ್ಟೇ ಎಂಬುದನ್ನು ಸಾಂಸ್ಕೃತಿಕವಾಗಿ ತಿಳಿದುಕೊಂಡಾಗ ಎಲ್ಲದರ ಅರಿವಾಗುತ್ತದೆ. ನಿಮ್ಮ ಸುತ್ತಮುತ್ತಲಿನ ಮುಕ್ಕಾಲು ಪಾಲು ಜನ ಉಪವಾಸ ಇರುವಾಗ ಅವರ ಮುಂದೆ ನಾವು ಭಿಡೆಯಿಲ್ಲದೆ ತಿನ್ನುವುದು ಕುಡಿಯುವುದು ಮಾಡಬಾರದು ಎನ್ನುತ್ತದೆ ಇಲ್ಲಿಯ ಪದ್ಧತಿ. ಇದರ ವಿಶ್ಲೇಷಣೆ ಮಾಡುವುದು ಈ ಬರಹದ ಉದ್ದೇಶವಲ್ಲ. ನಮಗಿಂತ ಭಿನ್ನವಾದ, ರೀತಿ ನೀತಿಗಳು, ಕಟ್ಟಳೆಗಳು ಪ್ರಪಂಚದಲ್ಲಿ ಇರುತ್ತವೆ; ಅವನ್ನು ಆ ಪರಿಧಿಯಲ್ಲಿಯೇ ನೋಡಬೇಕು ಎಂಬುದು ಆಶಯ.