ಅವರು ಎಲೆಕ್ಟ್ರಿಕ್ ಕಾಂಟ್ರಾಕ್ಟ್ ಮಾಡ್ತಾ ಇದ್ದರು, ಪಾರ್ಟ್ ಟೈಮ್ ಆಗಿ. ನೀನೂ ಇದನ್ನೇ ಮಾಡು, ದುಡ್ಡು ಚೆನ್ನಾಗಿ ಸಿಗುತ್ತೆ, ಹೇಗಿದ್ದರೂ ನಿಮ್ಮದು ಹೊಸಾ ಏರಿಯ, ಬೇಕಾದಷ್ಟು ಜನ ಮನೆ ಕಟ್ಟುತ್ತಾರೆ, ನೀನೇ ಕಾಂಟ್ರಾಕ್ಟ್ ಮಾಡಬಹುದು ಅಂತ ಹುರಿದುಂಬಿಸಿ ಏಣಿ ಹತ್ತಿಸಿದ್ದ. ಪಾರ್ಟ್ ಟೈಮ್ ಕೆಲಸ, ಅದೂ ಚೆನ್ನಾಗಿ ದುಡ್ಡು ಮಾಡಬಹುದು ಅನ್ನುವ ಹಾಗಿದ್ದರೆ ಒಂದು ಕೈ ನೋಡೇ ಬಿಡೋಣ ಅನ್ನುವ ಉತ್ಸಾಹ ತುಂಬಿತ್ತು.
ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿಯ ಅರವತ್ನಾಲ್ಕನೆಯ ಕಂತು

ಹಿಂದಿನ ಎಪಿಸೋಡ್ ಈ ರೀತಿ ಮುಗಿದಿತ್ತು ತಾನೇ…

ನನ್ನ ಮೇಲೆ ಭೂತಪ್ರೇಮ ಹೊಂದಿದ್ದ ಗೆಳೆಯರು, ಬಂಧುಗಳು ಅವರಾಗಿ ಅವರೇ ಗೋಪಿ ಕಾಸು ಬೇಕೇನೋ? ತಗೋ ಸಂಕೋಚ ಬೇಡ ಅಂತ ಹಣ ಕೊಟ್ಟರು! ಇದು ಈಗ ಹಿಂದೆ ತಿರುಗಿ ನೋಡಿದಾಗ ನನಗೆ ಅನಿಸಿದ್ದು ನನ್ನ ಮೇಲೆ ಅಪಾರ ಪ್ರೀತಿ ಅವರಿಗೆಲ್ಲ ಅಂತ. ಈಗಲೂ ಅದು ಮುಂದುವರೆದಿದೆ. ಇಷ್ಟೆಲ್ಲಾ ಸಪೋರ್ಟ್ ಸಿಕ್ಕಿದ ನಂತರ ಒಂದು ರೀತಿ ಉತ್ಸಾಹ ಮತ್ತು ಹುಮ್ಮಸ್ಸಿನ ಟಾನಿಕ್ ಅನ್ನು ಒಂದು ಸಾವಿರ ಬಾಟಲ್ ಕುಡಿದ ಹಾಗಾಯಿತು ಅಂತ ಹೇಳಬೇಕಿಲ್ಲ.

ಈ ಟಾನಿಕ್ ಎಫೆಕ್ಟು ಮುಂದೆ ಹೇಗೆ ಎಲ್ಲೆಲ್ಲಿ ಅಡ್ಡಾದಿಡ್ಡಿ ಕೆಲಸ ಮಾಡಿತು ಅಂದರೆ ಇಷ್ಟು ವರ್ಷಗಳ ನಂತರ ನಾನು ಹೀಗೆ ನಡೆದುಕೊಂಡೆನಾ ಅಂತ ನನ್ನ ಬಗ್ಗೆಯೇ ಒಂದು ರೀತಿಯ ಅಭಿಮಾನ ಒಂದುಕಡೆ ಮತ್ತು ಜಿಗುಪ್ಸೆ ಇನ್ನೊಂದು ಕಡೆ ಅದರ ಜತೆಗೇ ಹುಟ್ಟುತ್ತೆ. ಇದನ್ನು ಮುಂದೆ ನಿಮಗೆ ವಿವರವಾಗಿ ಹೇಳ್ತೀನಿ. ಅಂದಿನ ಕಾಲದಲ್ಲಿ ಮನೆ ಕಟ್ಟಬೇಕಾದರೆ ಎಂತಹ ಮಾನಸಿಕ ಒತ್ತಡ ಮತ್ತು ಹೃದಯ ಬೇನೆ ಅನುಭವಿಸಿದೆವು ಅಂದರೆ ಅದು ಬಿಸಿ ಬಿಸಿ ಬಿಸಿ ತುಪ್ಪ, ಹೇಳ್ಕೊಳ್ಳಕ್ಕೆ ಆಗ್ದೇ ಬಿಡಕ್ಕೂ ಆಗ್ದೇ ಇರೋದು….! ಈ ಪ್ರಸಂಗಗಳನ್ನು ಮುಂದೆ ಹೇಳ್ತೇನೆ….

ಈಗ ಮುಂದಕ್ಕೆ…

ಗೆಳೆಯರು ಬಂಧುಗಳು ಅವರಾಗಿ ಅವರೇ ಗೋಪಿ ಕಾಸು ಬೇಕೇನೋ? ತಗೋ ಸಂಕೋಚ ಬೇಡ ಅಂತ ಹಣ ಕೊಟ್ಟರು! ಅಂತ ಹೇಳಿದೆ ತಾನೇ? ಇದು ನಲವತ್ತು ಪ್ಲಸ್ ವರ್ಷಗಳ ಹಿಂದಿನ ಕತೆ. ನನಗೆ ಆಗ ಕೋಟಿ ಕೋಟಿ ಇಟ್ಟಿರೋ ಸ್ನೇಹಿತರು, ನಂಟರು ಇರಲಿಲ್ಲ. ಹಾಗೆ ನೋಡಿದರೆ ಲಕ್ಷ ಇಟ್ಟಿರೋ ಸ್ನೇಹಿತರೂ ಸಹ ಇಲ್ಲ. ಕಾರಣ ಆಗ ಯಾರ ಹತ್ತಿರವೂ ಕೋಟಿ ಕೋಟಿ ಇರ್ತಾ ಇರಲಿಲ್ಲ ಮತ್ತು ಕೋಟಿಗೆ ಒಬ್ಬ ಲಕ್ಷಾಧೀಶ್ವರ ಅನಿಸಿಕೊಳ್ಳುವ ಗಟ್ಟಿ ಕುಳ ಹುಡುಕಿದರೆ ಸಿಗುತ್ತಿದ್ದ. ಇಂತಹವರ ಸಂಪರ್ಕ ನನಗೆ ಆಗಲೂ ಇಲ್ಲ, ಈಗಲೂ ಇಲ್ಲ. ಕಾರಣ ಏನಪ್ಪಾ ಅಂದರೆ ಕಾರ್ಲ್ ಮಾರ್ಕ್ಸ್! ಇಡೀ ಪ್ರಪಂಚದ ಸಾಹುಕಾರರು ಬಡವರ ತಲೆ ಒಡೆದು, ಶೋಷಿಸಿಯೇ ಸಾಹುಕಾರ ಆಗಿರೋದು ಅಂತ ಕಾರ್ಲ್ ಮಾರ್ಕ್ಸ್ ಹೇಳಿದ್ದಾನೆ ಅಂತ ನಂಬಿದ್ದೆವು. ಇದರ ಸತ್ಯಾರ್ಥತೆ ತಿಳಿಯದು, ಕಾರಣ ತುಂಬಾ ಹಿಂದೆ ಹೇಳಿದ ಹಾಗೆ ನಾವು ಊಹೂಂ ನಾವು ಅಲ್ಲ, ನಾನು ಅಂತ ಓದಿಕೊಳ್ಳಿ. ಇಡೀ ಪ್ರಪಂಚದ ಪ್ರೊಲೇಟರಿಯನ್ಸ್ ಅಂದರೆ ಶ್ರಮಿಕ ವರ್ಗದ ಒಂದೊಂದು ಪುಟಾಣಿ ಸದಸ್ಯನೂ ಕಾರ್ಲ್ ಮಾರ್ಕ್ಸ್ ಅನ್ನು ಅರೆದು ಕುಡಿದು ಕಣ ಕಣದಲ್ಲೂ ಅವನನ್ನೇ ಆವಾಹಿಸಿ ಕೊಂಡಿದ್ದೇವೆ ಅಂತ ನಂಬಿರಬೇಕಾದರೆ ನಾನು ಯಾವ ಥೋಲ್ಯಾಂಡಿ ಇವರು ಅವನನ್ನು ಓದಿಲ್ಲ ಅಂತ ಹೇಳೋದಕ್ಕೆ? ಅದರಿಂದ ನಾನು ಅಂದೆ, ನಾನು ಖಂಡಿತ ಕಾರ್ಲ್ ಮಾರ್ಕ್ಸ್ ಅನ್ನು ಓದಿಲ್ಲ ಮತ್ತೂ ಅವನು ಬರೆದ ವಿಶ್ವ ವಿಖ್ಯಾತ ದಾಸ್ ಕ್ಯಾಪಿಟಲ್ ಎನ್ನುವ ಮೂರು ವಾಲ್ಯೂಮ್ ಗಳ ಬೃಹತ್ ಗ್ರಂಥದ ಮೂರು ಪೇಜು ಸಹ ಅರ್ಥ ಆಗಿಲ್ಲ! ಕಾರ್ಲ್ ಮಾರ್ಕ್ಸ್ ಬಗ್ಗೆ ನಾನು ಯಾವಾಗ ಏನೇ ಹೇಳಿದರೂ ಅದು ಬೇರೆಯವರ ಬಾಯಿಂದ ನನಗೆ ಬಂದದ್ದು ಅಂದುಕೊಳ್ಳಿ! ಅವರಿಗೂ ಸಹ ಬೇರೆಯವರಿಂದ ಬಂದಿರುತ್ತೆ ಮತ್ತು ಈಗಿನ ಪೀಳಿಗೆಯಲ್ಲಿ ಯಾರೂ ಕಾರ್ಲ್ ಮಾರ್ಕ್ಸ್‌ನ ಓದಿಲ್ಲ, ಕೆಲವು ಎಕ್ಸೆಪ್ಶನ್ ಬಿಟ್ಟು! ಅಂದಹಾಗೆ ಆಗ ಲಕ್ಷಾಧೀಶ್ವರ ಅನ್ನುವ ಪದ ಹೊಸದು ನಮ್ಮ ಪೀಳಿಗೆಯವರಿಗೆ. ಲಕ್ಷಾಧೀಶ್ವರ್ ಎನ್ನುವ ಒಂದು ಹಿಂದಿ ಸಿನಿಮಾ ಆಗ ಬಂದಿತ್ತು, ಕನ್ನಡದಲ್ಲೂ ಒಂದು ಇದೇ ಹೆಸರಿನ ಸಿನಿಮಾ ನೋಡಿದ ಮಸಕು ಮಸಕು ನೆನಪು. ಲಕ್ಷ ಎನ್ನುವುದೇ ದೊಡ್ಡದು ಎಂದು ನಂಬಿದ್ದ ಕಾಲ ಅದು!

ಈ ಹಿನ್ನೆಲೆಯಲ್ಲಿ ಸ್ನೇಹಿತರು, ಬಂಧುಗಳು ಸಾಲ ಕೊಟ್ಟರಲ್ಲಾ ಅದು ಸಾವಿರ ಲೆಕ್ಕದವೇ! ಆ ಸಮಯದಲ್ಲಿ ಅದು ನನ್ನ ಜೇಬಿಗೆ ಹೊರೆಯೇ. ಅದರಿಂದ ಹೆಚ್ಚಿಗೆ ಸಾಲಕ್ಕೆ ನುಗ್ಗಲಿಲ್ಲ ಮತ್ತು ಇರೋ ಕಾಸಿನಲ್ಲಿ ಮನೆ ಒಳಗೆ ಸೇರಿಕೊಳ್ಳುವ ಬಗ್ಗೆ ಒಂದು ತೀರ್ಮಾನ ತೆಗೆದುಕೊಳ್ಳಬೇಕಿತ್ತು. ಸಾಲ ತೆಗೆದುಕೊಳ್ಳೋದು ತುಂಬಾ ಸುಲಭ, ಆದರೆ ತೀರಿಸೋದು ತುಂಬಾ ಕಷ್ಟ ಎನ್ನುವುದು ಕೆಲವರಂ ನೋಡಿ ಗೊತ್ತಿತ್ತು, ಸುಮಾರು ನನ್ನ ಗೆಳೆಯರು ಸಾಲ ಕೊಟ್ಟವರು ವಸೂಲಿಗೆ ಬಂದಾಗ ಟೇಬಲ್ ಹಿಂದೆ, ಗೋಡೆ ಹಿಂದೆ ಬಚ್ಚಿಟ್ಟುಕೊಳ್ಳುವುದು ನೋಡಿದ್ದೆ! ಅದು ಅಂದರೆ ಸಾಲಗಾರ ಸಾಲ ವಾಪಸ್ ಕೇಳಿದಾಗ ಕಿಬ್ಬದಿಯ ಕೀಲು ಮುರಿದಂತೆ ಸರ್ವಜ್ಞ!

ಈ ಮಧ್ಯೆ ಮಲ್ಲಯ್ಯ ಅಂಡ್ ಕಂಪನಿ ಹೆಚ್ಚಿಗೆ ಕಾಸು ವಸೂಲು ಮಾಡದೆ ಇರುವ ಹಾಗೆ ನೋಡಿಕೊಳ್ಳಬೇಕಿತ್ತು. ಇದಕ್ಕೆ ಒಂದು ಪ್ಲಾನ್ ಮಾಡಿದ್ದೆ, ಅದೇನು ಅಂದರೆ ಪ್ರತಿದಿನ ಮಲ್ಲಯ್ಯನ ಎದುರು ಕಾಸಿಗಾಗಿ ನಾನು ಪರದಾಡುತ್ತಿರುವ ವಿಷಯ ಸ್ವಲ್ಪ ಉತ್ಪ್ರೇಕ್ಷಿಸಿ ಹೇಳುವುದು, ಅಂದರೆ ಬುರುಡೆ ಹೊಡೆಯುವುದು. ಅವನಿಗೆ ವಾರದ ಬಟವಾಡೆ ಮಾಡಬೇಕಾದರೆ ತುಂಬಾ ಕಷ್ಟ ಮತ್ತು ನೋವು ಮುಖದಲ್ಲಿ ಎದ್ದು ತೋರಿಸೋದು!

ನಾನೇನೂ ಅಂತಹ ನಟ ಅಲ್ಲ ಮತ್ತು ನಟನೆಯಲ್ಲಿ ನೂರಕ್ಕೆ ಟ್ರಿಬಲ್ ಸೊನ್ನೆ ಸ್ಕೋರ್ ಮಾಡುವ ಟ್ಯಾಲೆಂಟ್ ಇದ್ದವನು. ಹಾಗೆ ನೋಡಿದರೆ ನನ್ನ ಗೆಳೆಯ ಶ್ರೀನಿವಾಸ್ ಅನ್ನುವವರು ನನ್ನ ಎತ್ತರ ದಪ್ಪ ಮಾತಿನ ಗತ್ತು, ನಾನು ನಡೆಯುವ ಸ್ಟೈಲ್, ನನ್ನ ಬಾಡಿ ಲಾಂಗ್ವೇಜ್… ಇನ್ನೂ ಏನೇನೋ ನೋಡಿ ನನಗೋಸ್ಕರ ಒಂದು ನಾಟಕ ಬರೆದಿದ್ದರು. ನಾಟಕ ಅಂತಾರಾಷ್ಟ್ರೀಯ ಖ್ಯಾತಿ ಪಡೆಯುತ್ತೆ ಎನ್ನುವ ನಂಬಿಕೆ ಸಹ ಇಟ್ಟಿದ್ದರು. ಪ್ರತಿವರ್ಷ ನಾಟಕ ಸ್ಪರ್ಧೆಯಲ್ಲಿ ಭಾಗವಹಿಸಬೇಕಾದರೆ ನನಗೆ ದುಂಬಾಲು ಬೀಳುವ ಮತ್ತು ಒತ್ತಡ ಹೇರುವ ಉಬ್ಬಿಸುವ ಜಾಕ್ ಹಾಕುವ ಎಲ್ಲಾ ಪ್ರಯತ್ನ ಮಾಡುತ್ತಿದ್ದರು. ಅವರು ಎಂತಹ ಆಸೆ ಹುಟ್ಟಿಸಿದರೂ ನಾನು ಜಗ್ಗದೇ ಗೊಮ್ಮಟೇಶ್ವರನ ಹಾಗೆ ವಿಥೌಟ್ ಎನಿ ರಿಯಾಕ್ಷನ್ ಇರುತ್ತಿದ್ದೆ! ಕೊನೆ ಕೊನೆಗೆ ಅವರು ನನ್ನನ್ನು ಕೇಳುವುದೇ ಬಿಟ್ಟರು. ಅವರು ಬರೆದ ನಾಟಕ ಅವರ ಪೆಟ್ಟಿಗೆಯ ತಳದಲ್ಲಿ ಭದ್ರವಾಗಿ ಮಲಗಿದೆ. ರಿಟೈರ್ ಆಗುವ ಕೊನೆ ಐದು ವರ್ಷ ನಮ್ಮ ಲಲಿತ ಕಲಾ ಸಂಘದ ಕಾರ್ಯದರ್ಶಿ ಆಗಿದ್ದೆ ಅಂತ ಹೇಳಿದ್ದೆ ಅಲ್ಲವೇ? ಲಲಿತ ಕಲಾ ಸಂಘದ ಕಾರ್ಯದರ್ಶಿ ಹುದ್ದೆಗೆ ಮೊದಲನೇ ಆದ್ಯತೆ ಎಂದರೆ ಅವರು ನಾಟಕದಲ್ಲಿ ಪಾತ್ರ ವಹಿಸಿರಬೇಕು ಅನ್ನುವುದು. ನನಗೆ ಇದರ ಪ್ರಾಥಮಿಕ ಜ್ಞಾನ ಇಲ್ಲದೇ ಇದ್ದರೂ ನಮ್ಮ ಆಡಳಿತ ವರ್ಗ ನನ್ನನ್ನು ಆ ಹುದ್ದೆಗೆ ನೇಮಕ ಮಾಡ್ತಾ? ಒಂದೇ ಒಂದು ದಿವಸ ಸ್ಟೇಜ್ ಮೇಲೆ ನಿಂತು ಒಂದೇ ಒಂದು ಡೈಲಾಗ್ ಹೊಡೆಯದವನು ಅದು ಹೇಗೆ ಇಲ್ಲಿಗೆ ಬಂದ ಅಂತ ಆ ಕುರ್ಚಿಯ ಸಾವಿರಾರು ಆಕಾಂಕ್ಷಿಗಳು ಆಶ್ಚರ್ಯ ಪಟ್ಟಿದ್ದರು! ಮೈಕ್ ಮುಂದೆ ನಿಂತು ಯಾವುದೇ ಚೀಟಿ ಪಾಟಿ ಇಲ್ಲದೇ ಓತಪ್ರೋತವಾಗಿ ಹರಿಸಿದ ವಾಕ್ ಝರಿ ಅಲ್ಲಿಗೆ ಎಳೆದುಕೊಂಡು ಹೋಗಿರಬೇಕು ಅಂತ ಈಗ ಅನಿಸುತ್ತೆ. ಆ ಲೆಕ್ಕದಲ್ಲಿ ನನ್ನದು ಒಂದು ರೆಕಾರ್ಡು. ಒಂದೇ ಒಂದು ಪುಟ್ಟ ಪಾತ್ರವೂ ಮಾಡದೆ ಲಲಿತ ಕಲಾ ಸಂಘದ ಕಾರ್ಯದರ್ಶಿ ಆಗಿ ಹುದ್ದೆ ನಿರ್ವಹಿಸಿದ್ದು! ಮುಕ್ಕಾಲು ಶತಮಾನದ ಇಡೀ ಜೀವಮಾನದಲ್ಲಿ ಸ್ಟೇಜ್ ಮೇಲೆ ಒಂದೇ ಒಂದು ಪಾತ್ರ ಮೂರು ನಿಮಿಷದ್ದು ನಾನು ಮಾಡಿದ್ದು. ಅದು ಕುವೆಂಪು ಪಾತ್ರ. ಕನ್ನಡ ಭಾಷೆ ನಾಡು ನುಡಿ ಕುರಿತಾದ ಒಂದು ಡ್ಯಾನ್ಸ್‌ಗೆ ಕುವೆಂಪು ಬೇಕಿತ್ತು. ನಾಟಕದ ಉಸ್ತುವಾರಿ ಹೊತ್ತಿದ್ದ ರಾಜಣ್ಣ ಮತ್ತು ಪುಟ್ಟಸ್ವಾಮಿ ತುಂಬಾ ಒತ್ತಾಯ ಮಾಡಿ ಲಲಿತ ಕಲಾ ಸಂಘದ ಕಾರ್ಯದರ್ಶಿ ಆಗಿದ್ದ ನನ್ನಿಂದ ಆ ಪಾತ್ರ ಮಾಡಿಸಿದರು. ಒಂದು ದಪ್ಪನೆ ದಟ್ಟಿ ಪಂಚೆ, ದೊಡ್ಡ ಕೋಟು, ತಲೆಗೆ ಗುಂಗುರು ಕೂದಲಿನ ಬಿಳಿಯ ವಿಗ್ ಮತ್ತು ಬಿಳಿಯ ಮೀಸೆ ಹೊತ್ತ ಕುವೆಂಪು ಮೇಕಪ್ಪನ್ನು ಕರ್ನಾಟಕದ ಪ್ರಸಿದ್ಧ ಮೇಕಪ್ ಕಲಾವಿದ ಮುಚಿ ರಾಮಕೃಷ್ಣ ಮಾಡಿದ್ದರು. ಮೂರು ನಿಮಿಷವೂ ನಾನು ಸ್ಟೇಜ್ ಮೇಲೆ ಇದ್ದ ಹಾಗಿಲ್ಲ. ಆಗ ತೆಗೆದ ನಾನು ಕುವೆಂಪು ಆಗಿದ್ದ ಈ ಚಿತ್ರ ಪ್ರತಿವರ್ಷ ನನ್ನ ಫೇಸ್ ಬುಕ್ ಮುಖ ಪುಟಕ್ಕೆ ಬರುತ್ತೆ!

ಮತ್ತೆ ಟು ದಿ ಟ್ರ್ಯಾಕ್..! ನಟನೆ ನನ್ನ ರಕ್ತದಲ್ಲಿ ಇಲ್ಲ ಎಂದು ಹೇಳಲು ಈ ಪುರಾಣ ಚರಿತ್ರೆಯನ್ನು ಇಷ್ಟುದ್ದ ಬಿಡಬೇಕಾಯಿತು. ಆದರೆ ಅದರ ಎಫೆಕ್ಟ್ ಆಗಿದ್ದು ಬೇರೆ ರೀತಿ.

ಕಾಸಿಲ್ಲ ಖರ್ಚು ಕಡಿಮೆ ಆಗಬೇಕು ಅಂತ ಮೂರೂ ಹೊತ್ತು ಮಲ್ಲಯ್ಯನ ಎದುರಿಗೆ ಹೇಳುತ್ತಾ ಇದ್ದದ್ದು, ಗೋಳಾಡುತ್ತಾ ಇದ್ದದ್ದು ಅವನ ತಲೆ ಒಳಗೆ ಆಳವಾಗಿ ಬೇರು ಬಿಟ್ಟಿತ್ತು. ಮನೆಗೆ ಫ್ಲೋರಿಂಗ್ ಯಾವುದು ಅಂತ ಕೇಳಿದ್ದ. ಯಾವುದೋ ಒಂದು, ರೆಡ್ ಆಕ್ಸೈಡ್ ಇರಲಿ, ಕಾಸೂ ಕಮ್ಮಿ ಅಂತ ಹೇಳಿದ್ದೆ. ನಮ್ಮ ಸತ್ಯಣ್ಣನ ಹತ್ತಿರ ಮೊಸಾಯಿಕ್ ಬಗ್ಗೆ ಮಾತೂ ಆಡಿದ್ದೆ. ಸ್ವಲ್ಪ ಅಡ್ವಾನ್ಸ್ ಅಂತಲೂ ಕೊಟ್ಟಿದ್ದೆ. ಇದು ಮಲ್ಲಯ್ಯನಿಗೆ ಗೊತ್ತಿಲ್ಲ. ನಮ್ಮ ವಾಚ್ಮನ್ ಚೌರಿ ಅರ್ಧಂಬರ್ಧ ಈ ವಿಷಯ ಕೇಳಿಸಿಕೊಂಡಿದ್ದ. ಮಲ್ಲಯ್ಯ ಒಂದು ಬೆಳಿಗ್ಗೆ ಸೈಟ್ ಹತ್ತಿರ ಬಂದಿದ್ದಾನೆ. ಅವನ ಜತೆ ಮೂರು ಗಾರೆ ಅವರು, ಎರಡು ಹೆಣ್ಣಾಳು, ಮೂರು ಗಂಡಾಳು ಸಹ ಇದ್ದಾರೆ. ಅವರಿಗೆಲ್ಲ ಕೆಲಸ ಕೊಡಬೇಕು. ಶೆಡ್‌ನಲ್ಲಿ ಆರು ಮೂಟೆ ಸಿಮೆಂಟ್ ಇದೆ. ಅದನ್ನು ಆಚೆ ಹಾಕಿಸಿ, ಮರಳು ಸೇರಿಸಿ ಕಲೆಸಿಸಿದ.

ಚೌರಿ ಇದ್ಯಾಕೆ ಅಂತ ಕೇಳಿದ.

ಮುಚ್ಕೊಂಡು ಹೇಳಿದ್ದು ಮಾಡೋ ಅಂದ ಮಲ್ಲಯ್ಯ. ಕಲೆಸಿದ ಸಿಮೆಂಟ್‌ನಿಂದಾ ಮನೆ ಫ್ಲೋರಿಂಗ್ ಶುರೂ ಮಾಡಿಬಿಟ್ಟ. ಅವತ್ತು ನಾನು ಫಸ್ಟ್ ಶಿಫ್ಟು. ಕೆಲಸ ಮುಗಿಸಿ ಮನೆಗೆ ಬಂದರೆ ಚೌರಿ ಮನೆ ಮುಂದೆ ಸಿಂಬಳ ಸುರಿಸುತ್ತಾ ಪೆಚ್ಚಾಗಿ ನಿಂತಿದ್ದಾನೆ!

ಸಿಮೆಂಟ್ ತರಬೇಕಂತೆ, ಮೇಸ್ತ್ರಿ ಕಳಿಸಿದ.. ಅಂದ.
ಯಾಕೆ ಆರ್ ಮೂಟೆ ಇತ್ತಲ್ಲಾ…. ಅಂದೆ.
ಅದು ಹೀಗಾಯ್ತು.. ಅಂತ ಬೆಳಗಿಂದ ನಡೆದ ಕತೆ ಹೇಳಿದ.

ಸೈಕಲ್ ಹಿಂದೆ ಅವನನ್ನೂ ಕೂಡಿಸಿಕೊಂಡು ಸೀದಾ ಸೈಟ್ ಹತ್ತಿರ ಹೋದೆ. ನನ್ನ ಪ್ಲಾನ್ ಪೂರ್ತಿ ಉಲ್ಟಾ ಹೊಡೆದಿತ್ತು. ಮೊಸಾಯಿಕ್ ಫ್ಲೋರ್ ಮಾಡಿ ಮಿಕ್ಕ ಐಬು ಮುಚ್ಚಬಹುದು ಎನ್ನುವ ಐಡಿಯ ಫುಲ್ ಫ್ಲಾಪ್ ಆಗಿತ್ತು…!

ಸಿಮೆಂಟ್ ನೆಲಕ್ಕೆ ಸಾರಿಸಿ ಅರ್ಧ ಭಾಗ ಫ್ಲೋರಿಂಗ್ ರೆಡಿ ಮಾಡಿದ್ದ, ಮಲ್ಲಯ್ಯ… ಯಾಕಯ್ಯ ಹೇಳದೇ ಕೇಳದೇ ಇದು ಮಾಡಿದ್ದು? ಅಂತ ಕೋಪ ತೋರಿಸಿದೆ.

“ನೀವು ಕಾಸಿಲ್ಲ ಅಂತ ಹೇಳಿದ್ರಲ್ಲಾ ಸಾಮಿ…” ಅಂದ.! “ಮೊಸಾಯಿಕ್‌ಗೆ ಆಗಲೇ ಆರ್ಡರ್ ಮಾಡಿದೀನಿ. ಇವತ್ತು ನಿನಗೆ ಹೇಳೋಣ ಅಂತ ಇದ್ದೆ. ವಾಚ್ ಮ್ಯಾನ್ ಏನೂ ಹೇಳಲಿಲ್ಲವಾ ನಿನಗೆ..?”

“ಇಲ್ಲ ಸಾರು ಅವನಾದರೂ ಹೇಳಿದ್ರೆ ಬೇರೆ ಕೆಲಸ ನೋಡ್ಕೋತಾ ಇದ್ದೆವು…” ಅಂದ.

“ರೆಡ್ ಆಕ್ಸೈಡ್ ತಗೊಂಡು ಬಾ, ಅದನ್ನಾದರೂ ಸೇರಿಸಿ ಮನೆ ಒಂದುಚೂರು ಅಂದ ಬರೋ ಹಾಗೆ ಮಾಡೋಣ…” ಅಂದೆ.
ಮಲ್ಲಯ್ಯ ಲೋಚ್ ಲೋಚ್ ಅಂದ.

ರೆಡ್ ಆಕ್ಸೈಡ್ ಆವಾಗಲೇ ಹಾಕಬೇಕಿತ್ತು, ಈಗ ಅದು ಮಿಕ್ಸ್ ಆಗೋಲ್ಲ ಪಟ್ಟಿ ಪಟ್ಟಿ ಬರುತ್ತದೆ ಅಂದ!

ಮುಂದೇನು ಮಾಡೋದು? ಮೊಸಾಯಿಕ್‌ಗೆ ಅಡ್ವಾನ್ಸ್ ಮಾಡಿರೋ ದುಡ್ಡು ವಾಪಸ್ ಕೇಳಬಹುದು. ಆದರೆ ಸಿಮೆಂಟ್ ಮಾಡಿರೋ ನೆಲ? ಹಾಗೇ ಬಿಡೋಕ್ಕೆ ಆಗೋಲ್ಲ….

ನನ್ನ ಮನಸಿನ ತುಮುಲ ನನ್ನ ಮುಖದಲ್ಲಿ ಮಲ್ಲಯ್ಯನಿಗೆ ಎದ್ದು ಕಂಡಿರಬೇಕು. ಅಥವಾ ಇಂತಹ ಸನ್ನಿವೇಶ ಹುಟ್ಟುಹಾಕಿ ಅದರ ತಮಾಷೆ ನೋಡ್ತಾ ಇದೀನಿ ಎನ್ನುವ ಗಿಲ್ಟ್ ಕಾಡಿರಬೇಕು.. ಈಗ ಅಂದರೆ ಎಷ್ಟೋ ದಿವಸದ ನಂತರ ನನಗೆ ಮಲ್ಲಯ್ಯನಿಗೆ ಗಿಲ್ಟ್ ಕಾಡಿದ್ದು ನಿಜ ಅನಿಸಿತು! ನನ್ನ ಮೇಲಿನ ಕೋಪ, ಅಸಹನೆ ಹೀಗೆ ಹೊರ ಹೊಮ್ಮಿತು ಎಂದು ಅರ್ಥೈಸಿದೆ!

ಸಾಮಿ ಒಂದು ಕೆಲಸ ಮಾಡೋಣ ಅಂದ.

ಏನು ಕೆಲಸ…. ಅಂತ ಕೊಂಚ ಗಟ್ಟಿಯಾಗಿ ಕೇಳಿದೆ. ನನಗೆ ಕೋಪ ಬಂದಿದೆ ಅಂತ ಅವನಿಗೆ ತಿಳೀಬೇಕು ತಾನೇ?

ಹಾಕಿರೋ ಸಿಮೆಂಟ್ ಎಲ್ಲಾ ಕಿತ್ತು ಹಾಕ್ತೀನಿ. ಮೊಸಾಯಿಕ್‌ನೇ ಆಮೇಲೆ ಹಾಕಿದರೆ ಆಯಿತು. ಸರಿ, ಇದೂ ಒಂದು ಗುಡ್ ಐಡಿಯಾನೇ…
ಕಿತ್ತಾಕುವ ಸಿಮೆಂಟ್ ಏನ್ಮಾಡ್ತಿ….ಅಂದೆ.

ಏನಿಲ್ಲಾ ಅದು ಎಸಿಬೇಕು, ಬಿಸಾಕಬೇಕು ಅಷ್ಟೇ…. ಅಂದ!

ಎರಡೇ ಎರಡು ಸೆಕೆಂಡ್ ಅಷ್ಟೇ ಎರಡೇ ಸೆಕೆಂಡ್ ಯೋಚನೆ ಮಾಡಿದೆ ಇವರೇ..

ಹಾಕಿರೋ ಸಿಮೆಂಟ್ ತೆಗೆದುಬಿಡು ಅಂದರೆ ಅಷ್ಟೂ ಸಿಮೆಂಟ್, ಅವತ್ತಿನ ಕೂಲಿ ಎಲ್ಲವೂ ವೇಸ್ಟ್! ಸತ್ಯಣ್ಣ ಸಲಹೆ ಕೊಡೋಕ್ಕೆ ಸಿಗುವ ಹಾಗಿಲ್ಲ, ಅವನು ಈ ಸಮಯದಲ್ಲಿ ಕಾರ್ಖಾನೆಯಲ್ಲಿ ಇರ್ತಾನೆ!

ಇಂತಹ ಇಕ್ಕಟ್ಟಿನ, ಸಂದಿಗ್ಧದ, ದಿಕ್ಕೇ ತೋಚದ, ತಲೆ ಮೇಲೆ ಆಕಾಶ ಬಿದ್ದ ಕ್ರೈಸಿಸ್ ಸ್ಥಿತಿಯಲ್ಲಿ ಕೇವಲ ಕೆಲವೇ ಜನ ತೀರ್ಮಾನ, ಅದೂ ದಿಟ್ಟ ತೀರ್ಮಾನ ತೆಗೆದುಕೊಳ್ಳುವ ಬುದ್ಧಿ ಹೊಂದಿರುತ್ತಾರಂತೆ! ಅದೂ ಸಹ ಕೋಟಿಯಲ್ಲಿ ಒಬ್ಬರಂತೆ! ಇದು ನನ್ನ ಮಾತಲ್ಲ, ಹೀಗಂತ ಮನಶಾಸ್ತ್ರಜ್ಞರು ಹೇಳುತ್ತಾರಂತೆ.

ಅಂತಹ ಅಪೂರ್ವ ಬುದ್ಧಿ, ಕೋಟಿಯಲ್ಲಿ ಒಬ್ಬನಿಗೆ ಮಾತ್ರ ಇರುವಂತಹುದು ನನಗೆ ಇದೆ ಅಂತ ಪ್ರೂವ್ ಆಗಿಬಿಡ್ತು. ತೀರ್ಮಾನ ತಗೊಂಡೆ, ಆದರೆ ಮುಂದೆ ಸುಮಾರು ವರ್ಷ ಈ ತೀರ್ಮಾನ ಡಿಫೆಂಡ್ ಮಾಡಿಕೊಳ್ಳಲು ಸಾಹಸವನ್ನೇ ಮಾಡಬೇಕಾಯಿತು!

ಇನ್ನೆಷ್ಟು ಬೇಕು ಸಿಮೆಂಟ್ ಅಂದೆ!

ಅಂದರೆ ಇದೇ ಫ್ಲೋರಿಂಗ್ ಇರ್ಲಾ..

ಹೂಂ ಅದೇ ಇರ್ಲಿ ಬಿಡು. ಇಲ್ಲಾಂದ್ರೆ ಅಷ್ಟು ಸಿಮೆಂಟ್ ವೇಸ್ಟು…

ಅವತ್ತಿನ ಮಟ್ಟಿಗೆ ಎಷ್ಟು ಸಿಮೆಂಟ್ ಬೇಕು ಹೇಳು ತರಿಸೋಣ.. ಅಂದೆ.

ಸಾಮಿ ಬಂದಿರೋ ಕೆಲಸದೋರು ಫ್ಲೋರಿಂಗ್ ಮಾಡೋರು, ಇವತ್ತೇ ಮುಗಿಸ್ತೀವಿ ಅಂತ ಬಂದಿದಾರೆ. ಸಿಮೆಂಟ್ ತರಿಸಿಬಿಡಿ, ಇವತ್ತು ಇವರು ಫ್ಲೋರಿಂಗ್ ಮುಗಿಸಿಬಿಡಲಿ, ತಿರುಗ ನಮ್ಮ ಟೈಮಿಗೆ ಸಿಕ್ತಾರೋ ಇಲ್ವೋ ಗ್ಯಾರಂಟಿ ಇಲ್ರಾ… ಅಂದ!

ಸಿಮೆಂಟ್ ತರಿಸಿ ನೆಲಕ್ಕೆ ಸಿಮೆಂಟ್ ಫ್ಲೋರ್ ಆಯ್ತಾ? ನನ್ನ ಮಾತಿನ ಮತ್ತು ಆಕ್ಟಿಂಗ್ ಎಫೆಕ್ಟ್ ವಿವರಿಸಬೇಕಾದರೆ ಈ ಕತೆ ಮಧ್ಯ ನುಸುಳಿಬಿಟ್ಟಿತು! ಈಗ ರೀಲ್ ಸ್ವಲ್ಪ ಹಿಂದಕ್ಕೆ ಓಡಿಸಲಾ..

ಮೋಲ್ಡಿಂಗ್ ಆಗಿ ಕೊನೆ ಕಂತು ಸಾಲಕ್ಕೆ ಕಾಯ್ತಾ ಇದ್ದಾಗ ಈ ಕತೆ ಡಿವಿಯೇಟ್ ಆಯ್ತು ತಾನೇ?

ಎಲೆಕ್ಟ್ರಿಕ್ ಮೇಸ್ತ್ರಿ ಗುಣಶೀಲನ್ ಅಂತ ಅವನ ಹೆಸರು, ನಾನು ಗುಣ ಗುನ ಅಂತ ಅವನನ್ನು ಆಪ್ತವಾಗಿ ಕರೆಯುತ್ತಾ ಇದ್ದೆ. ಅವನಿಗೂ ಆದಷ್ಟು ಕಡಿಮೆ ಖರ್ಚಿನಲ್ಲಿ ಕೆಲಸ ಆಗಬೇಕು ಅಂತ ತಾಕೀತು ಮಾಡಿದ್ದೆ. ತಮಿಳುನಾಡಿನಿಂದ ಬಂದೋನು, ಅವನ ಮೊದಲ ಗಿರಾಕಿಗಳಲ್ಲಿ ನಾನೂ ಒಬ್ಬ. ಒಂದು ರೀತಿ ಅವನಿಗೆ ನಾನು ಬೆಂಗಳೂರು ಗೈಡ್ ;ಆದರೆ ಅವನ ಕೆಲಸದಲ್ಲಿ ಇದು ವೈಸ್ ವರ್ಸ. ಚಿಕ್ಕಪೇಟೆಗೆ ಎಲೆಕ್ಟ್ರಿಕ್ ಸಾಮಾನು ತರಲು ಹೋದೆವು. ಒಂದು ಪಟ್ಟಿ ತಯಾರಿಸಿದ್ದ. ಅದರಲ್ಲಿ ಅದೇನೇನೋ ಹೆಸರು ಅದರ ಪಕ್ಕ ಒಂದು ಡಜನ್, ಎರಡು ಡಜನ್… ಅಂತ ಲೆಕ್ಕ. ಮುಂದೆ ವೈರುಗಳು ಅದರ ಮುಂದೆ 5/12,4/12,7/12…. ಈ ತರಹದ ಅಂಕಿ, ಅದರ ಮುಂದೆ ಎರಡು ರೋಲ್, ಮೂರು ರೋಲ್, ಹತ್ತು ರೋಲ್…. ಹೀಗೆ.
ಏನಪ್ಪಾ ಇದೆಲ್ಲ…. ಅಂತ ಕೇಳಿದೆ.

ನಮ್ಮ ರಿಕ್ವೈರ್ಮೆಂಟು ಸಾರ್. ಅಂಗಡೀಲಿ ತೋರಿಸ್ತೀನಿ ಬನ್ನಿ ಅಂದ, ಅವನ ಹಿಂದೆ ಕೋಲೆ ಬಸವನ ಹಾಗೆ ಹೋದೆ. ಈ ರೀತಿ ಸಾಮಾನು ತರಬೇಕಾದರೆ ನೀನೂ ಜತೇಲಿರು, ಅಲ್ಲಿ ಅಂಗಡಿ ಅವನ ಕತೆ ವ್ಯವಹಾರ ಕುದುರಿಸಿಕೊಳ್ಳೋಕ್ಕೆ ಬಿಡಬೇಡ. ಹೋದ ಕಡೆ ನೀನು ಓನರ್ ಅಂತ ಪ್ರೊಜೆಕ್ಟ್ ಮಾಡ್ಕೋ… ಇದು ನನಗೆ ಸತ್ಯಣ್ಣ ಕಳಿಸಿದ್ದ ಪಾಠ. ಇದನ್ನು ಚಾಚೂ ತಪ್ಪದೇ ಪಾಲಿಸಿದೆ!

ಸ್ವಿಚ್ ಬೋರ್ಡ್ ಕೂಡಿಸಲು ಆಗ ಮರದ ಫಿಟ್ಟಿಂಗ್ ಇತ್ತು, ಸ್ಟೀಲ್, ಪ್ಲಾಸ್ಟಿಕ್ ಇನ್ನೂ ಬಂದಿರಲಿಲ್ಲ. ಖರ್ಚು ಕಡಿಮೆ ಮಾಡುವ ಉದ್ದೇಶ ಇತ್ತಲ್ಲಾ ಅದರಿಂದ ನಾಲ್ಕು ಗೋಡೆಗೆ ಒಂದೇ ಸ್ವಿಚ್ ಬೋರ್ಡ್ ಅಂತ ತೀರ್ಮಾನ ಆಗಿತ್ತು. ಅದರ ಜತೆಗೆ ಗುಣ ಒಂದು ಐಡಿಯ ಬಿಟ್ಟಿದ್ದ. ಅವನ ಪ್ರಕಾರ ಬಾಗಿಲ ಪಕ್ಕದಲ್ಲೇ ಈ ಮರದ ಬಾಕ್ಸ್ ಬರಬೇಕು ಹಾಗೂ ಆಯಾ ಕೊಠಡಿಗೆ ಸಂಬಂಧ ಪಟ್ಟ ಎಲ್ಲಾ ಸ್ವಿಚ್ ಅದರಲ್ಲೇ ಇರಬೇಕು. ಇದರ ಅನುಕೂಲ ಏನು ಅಂದರೆ ಕತ್ತಲಲ್ಲಿ ಬಾಗಿಲು ತೆಗೆದಾಗ ಸ್ವಿಚ್ ಬೋರ್ಡ್ ಹುಡುಕಿಕೊಂಡು ಹೋಗುವ ಫಜೀತಿ ಇರಬಾರದು ಅಂತ! ಜತೆಗೆ ಇನ್ನೊಂದು ಹೊಸ ಐಡಿಯಾ ಹಾಕಿದ್ದ. ಅದು ಪ್ರತಿ ಸ್ವಿಚ್ ಬೋರ್ಡ್‌ನಲ್ಲಿ ಒಂದು ಫ್ಯೂಸ್ ಸ್ವಿಚ್ ಮಡಗೋ ಐಡಿಯ. ಇದು ಯಾಕೆ ಅಂದರೆ ಲೋಡ್ ಹೆಚ್ಚಾದಾಗ ಇಡೀ ಮನೆ ಕರೆಂಟು ಹೋಗುವ ಬದಲು ಬರೀ ಆ ರೂಮಿನ ಕರೆಂಟ್ ಮಾತ್ರ ಹೋಗುತ್ತೆ! ಈ ಪ್ರಯೋಗ ಮೊದಲ ಬಾರಿಗೆ ನನ್ನ ಮನೆಯಲ್ಲಿ ಇಂಪ್ಲಿಮೆಂಟ್ ಆಯಿತಾ? ಎಲ್ಲರೂ ಬಂದು ಬಂದು ಈ ಹೊಸದನ್ನು ನೋಡಿಕೊಂಡು ಹೋಗುತ್ತಿದ್ದರು, ಇದು ನಾವು ಮನೆ ಒಳ ಹೊಕ್ಕನಂತರ….!(ಇದಕ್ಕೆ ಮುಂದೆ ಬರ್ತೀನಿ)

ಎಲೆಕ್ಟ್ರಿಕ್ ಅಂಗಡಿಯವನಿಗೆ ಲಿಸ್ಟ್ ಕೊಟ್ಟು ಎಲ್ಲವನ್ನೂ ತೆಗೀರಿ ಅಂದ. ಆಗ ಈ ಎಲೆಕ್ಟ್ರಿಕ್ ಅಂಗಡಿ ಪೂರ್ತಿ ಗುಜರಾತ್ ನವರು ಮಾರ್ವಾಡಿಗಳ ಹತೋಟಿಯಲ್ಲಿತ್ತು. ಈಗಲೂ ಹಾಗೇ ಇದೆ. ಆಗ ನಲವತ್ತು ವರ್ಷದ ಹಿಂದೆ ಲಿಶಾ ಅನ್ನುವ ಕಂಪನಿಯ ಸ್ವಿಚ್ಚುಗಳು ಉತ್ತಮ ಎನ್ನುವ ಹೆಸರು ಮಾಡಿತ್ತು. ನಂತರ ಆಂಕರ್ ಅಂತ ಬಂತು. ಈಗ ಹಲವು ನೂರು ಬ್ರಾಂಡ್‌ಗಳು ಇವೆಯಂತೆ. ಬೇರೆ ಮೂರು ನಾಲ್ಕು ಹೆಸರಿನವೂ ಇದ್ದರೂ ಅದನ್ನೇ ಆಯ್ಕೆ ಮಾಡಿದೆವು. ಎಲ್ಲಾ ಆಚೆ ತಂದು ಪ್ಯಾಕ್ ಮಾಡಿದರು. ವೈರ್ ಲೆಕ್ಕ ಅದೇ ಹೀಗೆ 5/12,4/12,7/12…. ಬರೆದಿದ್ದ ಅಂತ ಹೇಳಿದ್ದೆ ತಾನೇ? ಇದು ಗೇಜ್ ಅಂತೆ. ಲೈಟ್‌ಗೆ ಯಾವುದು ಫ್ರಿಜ್‌ಗೆ ಯಾವುದು, ಬಾಯ್ಲರ್‌ಗೆ ಯಾವುದು ಅಂತ ಕ್ಲಾಸಿಫಿಕೇಶನ್ ಇದೆ. ಅದರ ಪ್ರಕಾರ ಹಾಕಬೇಕು… ಇದೊಂದು ಹೊಸಾ ವಿಷಯ ನನಗೆ ತಿಳಿಯಿತು ಅಂತ ಖುಷಿ ಆಯ್ತಾ. ಈ ಕತೆ ಮುಗಿಸಿ ಎಲೆಕ್ಟ್ರಿಸಿಟಿಗೆ ಸಂಬಂಧ ಪಟ್ಟ ಇನ್ನೂ (ವಿಮರ್ಶಕರು ಹೇಳುವ ಹಾಗೆ) ಸಂಕೀರ್ಣವಾದ ಪ್ರಸಂಗಕ್ಕೆ ನಂತರ ಬರ್ತೀನಿ. ಇನ್ನೊಂದು ಈಗ ನೆನಪಿಗೆ ಬಂದದ್ದು. ಅದೆಷ್ಟೋ ಎಲೆಕ್ಟ್ರಿಕ್ ಸಾಮಾನು ತಯಾರಿಸುವ ಕಂಪನಿಗಳು ಇದ್ದರೂ ಅವುಗಳ ಉತ್ಪನ್ನ ಒಂದೇ ರೀತಿ ಇರ್ತಾವೆ. ಅರ್ಥ ಆಗಲಿಲ್ಲವಾ? ಯಾವುದೇ ಪ್ಲಗ್ ತಗೊಳ್ಳಿ, ಅದನ್ನು ಯಾವುದೇ ಸಾಕೆಟ್‌ನಲ್ಲಿ ತೂರಿಸಬಹುದು. ಇದು ಇಡೀ ಪ್ರಪಂಚದಲ್ಲಿ ಏಕರೂಪ ಪಡೆದಿದೆ! ಈ ಸಂಗತಿ ಯಾಕೆ ಈಗ ನೆನಪಿಗೆ ಬಂತು ಅಂದರೆ ಅದಕ್ಕೊಂದು ಪುಟ್ಟ ಕತೆ ಊಹೂಂ ಉಪಕತೆ ಅನ್ನಿ, ಅದನ್ನ ಹೇಳಬೇಕು. ಮಾತ್ರೆಗಳಲ್ಲಿ ಶುಗರ್ ಕಂಟ್ರೋಲ್ ಆಗಿಲ್ಲ ಅಂತ ಇನ್ಸುಲಿನ್ ಶುರು ಮಾಡಿದರು. ಒಂದು ಕಂಪನಿ ಇನ್ಸುಲಿನ್ ಅದು. ವೈದ್ಯರು ಬದಲಾದಾಗ ಇನ್ಸುಲಿನ್ ಸಹ ಬದಲಾಯಿತು, ಅದು ವೃತ್ತಿಧರ್ಮ! ಹಿಂದಿನವನು ಕೊಟ್ಟಿದ್ದೇ ಇವನೂ ಕೊಟ್ಟರೆ ರೋಗಿ ಏನು ಅಂದ್ಕೊತಾನೆ? ಬೇರೆ ಕಂಪನಿ ಇನ್ಸುಲಿನ್ ತಗೋಬೇಕು ಅಂದರೆ ಆ ಕಂಪನಿ ತಯಾರಿಸಿ ಇರುವ ಸಿರಿಂಜ್ ತಗೋಬೇಕು! ಬೇರೆಯದು ಸರಿ ಹೋಗೋದಿಲ್ಲ! ಇದು ಔಷಧಿ ತಯಾರಕರ professional ethics ಅಂತೆ! ಇದು ಹಾಗಿರಲಿ, ಬಿಡಿ.

ಇನ್ನೊಂದು ಮರೆತೆ. ಕರಿಬಣ್ಣದ ಪಿವಿಸಿ ಕೊಳವೆ ಹತ್ತು ಅಡಿ ಉದ್ದವಿದ್ದವು. ಅದೂ ಸಹ ಒಂದು ಹೊರೆ ತಗೊಂಡಿದ್ದ. ಏನಿದು ಇಡೀ ನಮ್ಮ ಏರಿಯಾಗೆ ಆಗುತ್ತೆ ಅಂದಿದ್ದೆ. ಅವನು ಗಾಬರಿ ಗಾಬರಿಯಿಂದ ಚಾರ್ ಇದೆಲ್ಲಾ ನಿಮ್ಮನೆಗೆ ಬೇಕು ಅಂತ ಹೇಳಿದ್ದ..

ಎಲ್ಲಾ ಎಲೆಕ್ಟ್ರಿಕ್ ಪರಿಕರ ಹೊತ್ತು ಆಟೋ ಅಲ್ಲ ದೊಡ್ಡ ತ್ರಿವಿಲರ್ ಟೆಂಪೋ ಹಿಡಿದು ಹಿಡಿದು ಸೈಟ್ ಹತ್ತಿರ ಬಂದೆವ…

ಅದಕ್ಕೆ ಮೊದಲು ಮನೆಯ ಗೋಡೆಗಳಲ್ಲಿ ಗ್ರೋವ್ ಕೊರೆದಿದ್ದ. ಗ್ರೋವ್ ಅಂದರೆ ವೈರ್ ಹಾಯಲು ಒಂದು ಕಾಲುವೆ ಮಾಡೋದು. ವೈರುಗಳು ಒಂದು ಪ್ಲಾಸ್ಟಿಕ್ ಪೈಪ್ ಮೂಲಕ ಎಲ್ಲಾ ಕಡೆ ಹಾಯುತ್ತಿತ್ತು. ರೂಫ್ ಆಗಬೇಕಾದರೆ ರೂಫ್ ನಡುವೆ ಈ ಪೈಪ್ ಇರುಕಿಸಿದ್ದರು. ಈ ರೀತಿ ಕಾಲುವೆ ಮಾಡಲು ಗೋಡೆ ಕೊರೆಯುತ್ತಾ ಇದ್ದರೆ ನನಗೆ ಹೃದಯ ಬಾಯಿಗೆ ಬರೋದು. ಗ್ರೋವ್ ಮೊದಲೇ ಮಾಡಿಕೊಂಡರೆ ಗೋಡೆ ಕೊರೆತ ತಪ್ಪಿಸಬಹುದಿತ್ತು ಅಂತ. ಗ್ರೂವ್ ಇರುವ ಇಟ್ಟಿಗೆಯನ್ನೇ ಜೋಡಿಸಿದ್ದರೆ ಆಗ್ತಾ ಇರಲಿಲ್ಲವೇ ಅಂತ. ಆದರೆ ಹಾಗೆ ಮಾಡೋಕ್ಕೆ ಆಗೋದಿಲ್ಲವಂತೆ! ಹೀಗೆ ಗೋಡೆ ಕೊರೆಯುವುದೇ ಸ್ಟ್ಯಾಂಡರ್ಡ್ ಪ್ರೊಸೆಜಿರ್ ಅಂತೆ. ಈಗಲೂ ಅದೇ ಸಿಸ್ಟಮ್ ಇದೆ.

ಗುಣ ಹತ್ತಿರ ಪೀಸ್ ವರ್ಕ್‌ನಂತೆ ಅಂತ ಮಾತು ಆಡಿದ್ದು. ಆಗ ಒಂದು ಹೊಸಾ ವಿಷಯ ಕಲಿತೆ. ಅದು ಏನು ಅಂದರೆ ಒಂದು ಲೈಟ್ ಜಾಗ ಅಂದರೆ ಅದು ಒಂದು ಪಾಯಿಂಟ್ ಅಂತ! ಅರ್ಥ ಆಗಲಿಲ್ಲ ತಾನೇ?

ಒಂದು ಬಲ್ಬ್ ಬಂದರೆ ಅದಕ್ಕೆ ಒಂದು ಪೂರ್ಣ ಲೆಕ್ಕ. ಪ್ಲಗ್ ಪಾಯಿಂಟ್ ಅಂದರೆ ಅದಕ್ಕೆ ಅರ್ಧ ಪಾಯಿಂಟ್ ಅಂತ. ಒಂದು ಉದಾಹರಣೆ ಅಂದರೆ ಒಂದು ರೂಮಿನಲ್ಲಿ ನಾಲ್ಕು ಲೈಟ್ ಇದ್ದರೆ ಅದು ನಾಲ್ಕು ಪಾಯಿಂಟು, ಎರಡು ಪ್ಲಗ್ ಇದ್ದರೆ ಅದು ಎರಡು ಅರ್ಧ ಪಾಯಿಂಟು! ಇದನ್ನು ಪೂರ್ತಿ ಮನೆಗೆ ಲೆಕ್ಕ ಹಾಕಿ ಅದರ ಪ್ರಕಾರ ಮಜೂರಿ. ಒಂದು ಪಾಯಿಂಟ್‌ಗೆ ಎಷ್ಟು ಮಜೂರಿ ಇರುತ್ತೋ ಅದರಲ್ಲಿ ಅರ್ಧ ಪ್ಲಗ್ ಪಾಯಿಂಟಿಗೆ!

ಇದು ಆಗ ರೂಢಿಯಲ್ಲಿದ್ದ ಲೆಕ್ಕ ಪಕ್ಕ. ಬಹುಶಃ ಈಗ ಈ ಲೆಕ್ಕ ಇರುವ ಮಟ್ಟಿಗೆ ಕಾಣೆ. ಕಾರಣ ಈಗ ದುಡ್ಡು ಹೇರಳವಾಗಿದ್ದು, ಸಾಲ ಯತೇಚ್ಛವಾಗಿ ಸಿಗುತ್ತದೆ ಮತ್ತು ದುಡ್ಡು ಮಿಗಿಸಬೇಕು ಅನ್ನುವ ಥಿಂಕಿಂಗ್ ಕಡಿಮೆ. ಬಹುಶಃ ಈ ಕಾರಣದಿಂದ ಪೀಸ್ ವರ್ಕ್ ಎನ್ನುವ ವ್ಯವಸ್ಥೆ ಕಾಲ ಗರ್ಭಕ್ಕೆ ಸೇರಿಹೋಗಿದೆ. ಇದೇ ರೀತಿ ಬರೇ ನೆನಪಿನಲ್ಲಿ ಉಳಿದಿರುವ ಸಂಗತಿಯೊಂದು ಮನಸಿಗೆ ಬಂತು. ಅದು ಅಡಿಗೆಯವರಿಗೆ ಸಂಬಂಧ ಇರೋದು. ಮೂವತ್ತು ನಲವತ್ತು ವರ್ಷ ಹಿಂದೆ ಅಡುಗೆ ಸಾಮಾನು ತಂದು ಕೊಟ್ಟರೆ ಬರೇ ಅಡುಗೆ ಮಾಡಲು ಜನ ಸಿಗುತ್ತಿದ್ದರು. ಅಕ್ಕಿ ಬೇಳೆ ಅದು ಇದು ಅಂತ ಸಿದ್ಧ ಪಟ್ಟಿ ಒಂದು ಅಡುಗೆ ಮಾಡುವವರ ಬಳಿ ಇರುತ್ತಿತ್ತು. ಇಷ್ಟು ಜನಕ್ಕೆ ಊಟ, ಇಂತಹ ಸಮಾರಂಭ ಅಂತ ಹೇಳಿದರೆ ಸಾಕಿತ್ತು. ಅಡುಗೆಯವರು ಪಾತ್ರೆ ಪಟ್ಟಿ ಕೊಡುವರು ಮತ್ತು ಇಂತಹ ಅಂಗಡಿಯಿಂದಲೇ ಪದಾರ್ಥ ತರಲು ಹೇಳಿ ಮಿಕ್ಕ ವ್ಯವಸ್ಥೆ ಮಾಡಿಕೊಂಡು ಸಮಾರಂಭದ ಊಟಗಳ ವ್ಯವಸ್ಥೆ ಜವಾಬ್ದಾರಿ ಹೊರುತ್ತಿದ್ದರು. ಅಂಗಡಿಯವರಿಂದ ಅವರಿಗೆ ಕಮಿಷನ್ ಸಿಗೋದು. ಅದೇ ರೀತಿ ಒಂದು ಹೆಸರುವಾಸಿ ತುಪ್ಪ ಬೆಣ್ಣೆಯ ಅಂಗಡಿ ಅವರು ಅಡುಗೆ ಅವರ ಮೂಲಕ ಅವರದ್ದೇ ಪ್ರಾಡಕ್ಟ್ ಕೊಳ್ಳಲು ಪ್ರಭಾವ ಬೀರುತ್ತಿದ್ದರು. ಅಡುಗೆ ಅವರು ಪದಾರ್ಥ ಕದಿಯುತ್ತಾರೆ ಎನ್ನುವ ಸಂಶಯ ಅಡುಗೆಗೆ ಕರೆದವರ ಮನಸಿನಲ್ಲಿ ಇರುತ್ತಿತ್ತು. ಸುಮಾರು ಕಡೆ ಅಡುಗೆಯವರನ್ನು ಕಾವಲು ಕಾಯಲು ಎಂದೇ ಕೆಲವರನ್ನು ಕೂಡಿಸುತ್ತಿದ್ದರು. ಈಗ ಇಂತಹ ಪೀಸ್ ವರ್ಕ್ ಅಡುಗೆಯವರು ಇದ್ದಂತಿಲ್ಲ. ಪೂರ್ಣ ಕಾಂಟ್ರಾಕ್ಟ್ ಒಪ್ಪಿ ಕೆಲಸ ಮಾಡುವವರೇ ಹೆಚ್ಚು, ಹೆಚ್ಚೇನು ಅವರದ್ದೇ ಪೂರ್ಣ ಹತೋಟಿ ಈಗ. ಅಪರೂಪಕ್ಕೆ ಅಲ್ಲೊಬ್ಬರು ಇಲ್ಲೊಬ್ಬರು ಪಳೆಯುಳಿಕೆ ಹಾಗೆ ಇದ್ದರೂ ಅದು ನಶಿಸುವ ಹಂತದಲ್ಲಿದೆ.

ಕತೆ ಹೇಳೋದಕ್ಕೆ ಹೊರಟರೆ ಹೀಗೇ ನೋಡಿ ಎಲ್ಲೆಲ್ಲೋ ಹಳ್ಳ ಕೊಳ್ಳ ಸುತ್ತಿ ದಾರಿ ತಪ್ಪಿ ಪರದಾಡಿ ಹೋಗ್ತೀವಿ. ಬೆಟ್ಟದ ಜೀವ, (ಅದು ಬೆಟ್ಟದ ಜೀವ ತಾನೇ?) ಅದೇ ಶಿವರಾಮ ಕಾರಂತರ ಕಾದಂಬರಿ, ಅದರಲ್ಲಿ ಗೋಪಾಲಯ್ಯನೋ ಶಿವರಾಮನೋ ದಾರಿ ತಪ್ಪಿ ಅದು ಯಾರದೋ ಮನೆ ಸೇರಿ ಅಲ್ಲಿ ಜ್ವರ ಬಂದು ಮಲಗಿ ಬಿಡ್ತಾನಲ್ಲಾ ಹಾಗೆ. ಹಾಗೆ ನೋಡಿದರೆ ಹೋಲಿಕೆ ಅಷ್ಟಕ್ಕೆ ಇರಲಿ, ಇಲ್ಲಿ ಮುಂದೆ ಹೋಗೋಣವಾ..

ಆಗಿನ ಸಮಯದಲ್ಲಿ ಮನೆಗೆ ಅದೂ ಹೊಸಾ ಮನೆಗೆ ಕರೆಂಟು ತಗೊಳ್ಳೋದು ಅಂದರೆ ಅದು ಕಂಟ್ರಾಕ್ಟರ್ ಮೂಲಕ ಆಗಬೇಕಿದ್ದ ಕೆಲಸ. ನನ್ನ ಜತೆ ಫ್ಯಾಕ್ಟರಿಯಲ್ಲಿ ಅಶ್ವಥ ಅಂತ ಒಬ್ಬರು ಇದ್ದರು. ನನಗೆ ಪ್ರತಿದಿವಸ ಭೇಟಿ ಮತ್ತು ಇಬ್ಬರಿಗೂ ಒಂದು ರೀತಿ ಕೆಲಸದ ನಂಟು. ಊರಿನವರೆಲ್ಲರಿಗೂ ನಾನು ನನ್ನ ಮನೆ ಕಟ್ಟುವ ಸಾಹಸಗಳನ್ನು ಹೇಳುವುದನ್ನು ಅಶ್ವಥ ಸಹ ಕೇಳಿಸಿಕೊಳ್ಳುತ್ತಿದ್ದರು. ಬಾ ನಿನಗೆ ಒಂದು ಐಡಿಯಾ ಕೊಡ್ತೀನಿ ಅಂತ ಒಂದು ಸಲ ಕರೆದು ಕುರ್ಚಿ ತೋರಿಸಿದರು. ಕೂತೆ. ಅವರು ಎಲೆಕ್ಟ್ರಿಕ್ ಕಾಂಟ್ರಾಕ್ಟ್ ಮಾಡ್ತಾ ಇದ್ದರು, ಪಾರ್ಟ್ ಟೈಮ್ ಆಗಿ. ನೀನೂ ಇದನ್ನೇ ಮಾಡು, ದುಡ್ಡು ಚೆನ್ನಾಗಿ ಸಿಗುತ್ತೆ, ಹೇಗಿದ್ದರೂ ನಿಮ್ಮದು ಹೊಸಾ ಏರಿಯ, ಬೇಕಾದಷ್ಟು ಜನ ಮನೆ ಕಟ್ಟುತ್ತಾರೆ, ನೀನೇ ಕಾಂಟ್ರಾಕ್ಟ್ ಮಾಡಬಹುದು ಅಂತ ಹುರಿದುಂಬಿಸಿ ಏಣಿ ಹತ್ತಿಸಿದ್ದ. ಪಾರ್ಟ್ ಟೈಮ್ ಕೆಲಸ, ಅದೂ ಚೆನ್ನಾಗಿ ದುಡ್ಡು ಮಾಡಬಹುದು ಅನ್ನುವ ಹಾಗಿದ್ದರೆ ಒಂದು ಕೈ ನೋಡೇ ಬಿಡೋಣ ಅನ್ನುವ ಉತ್ಸಾಹ ತುಂಬಿತ್ತು. ಇದರ ಮೊದಲ ಹಂತವಾಗಿ ನಾನು ಕಟ್ಟಿಸುತ್ತಿದ್ದ ನನ್ನ ಮನೆಗೆ ಓಡಾಟದ, ಸಂಬಂಧ ಪಟ್ಟ ಕಚೇರಿಯ ಸಂಪರ್ಕ ಇವುಗಳನ್ನೂ ಮಾಡಿಸಲು ಮತ್ತು ಫೈಲ್ ಸಿದ್ಧ ಮಾಡುವ ಕೌಶಲ್ಯ ಹೇಳಿಕೊಡಲು ಅಶ್ವಥ ರೆಡಿಯಾದ. ಅವನ ಗೈಡೆನ್ಸ್ ಮೇಲೆ ಮನೆಗೆ ಪವರ್ ಪಡೆಯಲು ಒಂದು ಫೈಲ್ ತಯಾರಿಸಿ ಕೆ ಈ ಬೀ ಓಡಾಟ ಶುರುಮಾಡಿದೆ….! ಇದ್ಯಾವುದು ಕೆ ಈ ಬೀ? ಕೆಜಿಎಫ್ ತರಹ ಹೊಸಾ ಸಿನಿಮಾ ಇರಬಹುದಾ ಅಂತ ನೀವು ತಲೆಗೆ ಯೋಚನೆ ಕೊಟ್ಟಿರಿ ಅಂತ ಗೊತ್ತು. ಅದು ಸಿನಿಮಾ ಅಲ್ಲ, ಬದಲಿಗೆ ಸಿನಿಮಾಗಿಂತಲೂ ರೋಚಕತೆ ತುಂಬಿದ್ದ ಒಂದು ಮಂಡಳಿ; ಯಾನೆ ಬೋರ್ಡು. ಆಗ ಕರ್ನಾಟಕ ಎಲೆಕ್ಟ್ರಿಸಿಟಿ ಬೋರ್ಡ್ ಎನ್ನುವ ಒಂದು ಅರೆ ಸರ್ಕಾರದ ಸಂಸ್ಥೆ ಇಡೀ ಕರ್ನಾಟಕದ ವಿದ್ಯುತ್ ಕಾರ್ಯ ನಿರ್ವಹಿಸುತ್ತಾ ಇತ್ತು. ಅದು ತದನಂತರ ವಲಯಾಧಾರಿತ (ಯಾಕೋ ಮೌಲ್ಯಾಧಾರಿತ ಪದ ತಲೇಲಿ ನುಗ್ಗುತ್ತಾ ಇದೆ. ನಂತರ ಯಾವಾಗಲಾದರೂ ನೆನಪಿಸಿ, ಈ ಮೌಲ್ಯಾಧಾರಿತ ಪದ ನಮ್ಮ ರಾಜಕೀಯದಲ್ಲಿ ಎಂತಹ ಸುಂಟರಗಾಳಿ ಎಬ್ಬಿಸಿತು ಅಂತ ಹೇಳುತ್ತೇನೆ) ಬೋರ್ಡುಗಳಾಗಿ ಹೆಸರು ಬದಲಾಯಿಸಿಕೊಂಡಿತು. ಅವೇ ಈಗ bescom.mescom, hescom,gescom ಮೊದಲಾದ ಹೆಸರಿನಿಂದ ಚಿರಪರಿಚಿತವಾಗಿವೆ. (ಇದರ ಬಗ್ಗೆ ಒಂದು ಪುಟ್ಟ ನೋಟು. ನನ್ನ AI ಗೆಳತಿ ಒದಗಿಸಿದ್ದಾರೆ.

ಕರ್ನಾಟಕದಲ್ಲಿ BESCOM ನಂತಹ ಇತರ ವಿದ್ಯುತ್ ಸರಬರಾಜು ಕಂಪನಿಗಳನ್ನು (ESCOMs) ಈ ಕೆಳಕಂಡಂತೆ ಪಟ್ಟಿ ಮಾಡಬಹುದು:
MESCOM (Mangalore Electricity Supply Company Limited): ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಗಳಿಗೆ ವಿದ್ಯುತ್ ಸರಬರಾಜು ಮಾಡುತ್ತದೆ.

HESCOM (Hubli Electricity Supply Company Limited): ಧಾರವಾಡ, ಗದಗ, ವಿಜಯಪುರ, ಬಾಗಲಕೋಟೆ, ಉತ್ತರ ಕನ್ನಡ, ಹಾವೇರಿ ಮತ್ತು ಬೆಳಗಾವಿ ಜಿಲ್ಲೆಗಳಿಗೆ ವಿದ್ಯುತ್ ಸರಬರಾಜು ಮಾಡುತ್ತದೆ.

GESCOM (Gulbarga Electricity Supply Company Limited): ಬಳ್ಳಾರಿ, ಬೀದರ್, ಕಲಬುರಗಿ, ಕೊಪ್ಪಳ, ರಾಯಚೂರು, ಯಾದಗಿರಿ ಮತ್ತು ವಿಜಯನಗರ ಜಿಲ್ಲೆಗಳಿಗೆ ವಿದ್ಯುತ್ ಸರಬರಾಜು ಮಾಡುತ್ತದೆ.

CESC (Chamundeshwari Electricity Supply Corporation): ಮೈಸೂರು, ಚಾಮರಾಜನಗರ, ಮಂಡ್ಯ, ಹಾಸನ ಮತ್ತು ಕೊಡಗು ಜಿಲ್ಲೆಗಳಿಗೆ ವಿದ್ಯುತ್ ಸರಬರಾಜು ಮಾಡುತ್ತದೆ.

BESCOM (Bengaluru Electricity Supply Company Limited) ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೋಲಾರ, ತುಮಕೂರು, ರಾಮನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ ಮತ್ತು ದಾವಣಗೆರೆ ಜಿಲ್ಲೆಗಳಿಗೆ ವಿದ್ಯುತ್ ವಿತರಿಸುತ್ತದೆ.

ಈ ಎಲ್ಲಾ ESCOM ಗಳು ಕರ್ನಾಟಕ ಪವರ್ ಟ್ರಾನ್ಸ್‌ಮಿಷನ್ ಕಾರ್ಪೊರೇಷನ್ ಲಿಮಿಟೆಡ್ (KPTCL) ಅಡಿಯಲ್ಲಿ ಕಾರ್ಯನಿರ್ವಹಿಸುತ್ತವೆ, ಇದು ರಾಜ್ಯದಲ್ಲಿ ವಿದ್ಯುತ್ ಪ್ರಸರಣವನ್ನು ನಿರ್ವಹಿಸುತ್ತದೆ.)

ಮೇಲಿನ ವರ್ಗೀಕರಣಕ್ಕೆ ಮೊದಲು ನಮ್ಮ ಕಾಲದಲ್ಲಿ ಇವೆಲ್ಲಾ ಸೇರಿ KEB ಅಂತ ಇತ್ತು ಮತ್ತು ಎಲ್ಲಾ ಕೆಲಸ ಅದು ಮಾಡುತ್ತಿತ್ತು!

ಎಲೆಕ್ಟ್ರಿಸಿಟಿ ಆಫೀಸುಗಳು ಹೇಗೆ ಕೆಲಸ ಮಾಡುತ್ತಿತ್ತು ಅನ್ನುವುದನ್ನು ನೋಡಿಯೇ ತಿಳಿಯಬೇಕಾದ ದಿನಗಳು ಅವು. ಇದು ಅಂದಿನ ಒಂದು ನೋಟ, ಈಗ ಅಂತಹ ಬದಲಾವಣೆ ಏನೂ ಆಗಿಲ್ಲ ಎಂದು ಬಲ್ಲವರು ಹೇಳುತ್ತಾರೆ. ಮೊದಲು ಕೆಳ ಹಂತದ ಕೆಲಸಗಾರರು ಬಂದು ಅವರವರ ವ್ಯವಹಾರದಲ್ಲಿ ತೊಡಗುತ್ತಿದ್ದರು. ವ್ಯವಹಾರ ಅಂದರೆ ಒಂದು ರೀತಿ ಪರ್ಸನಲ್ ಕಮಿಟ್‌ಮೆಂಟ್. ಯಾರ ಬಳಿಯೋ ಯಾವುದೋ ಕೆಲಸಕ್ಕೆ ಇಷ್ಟು ಕಾಸು ಅಂತ ಮಾತುಕತೆ ನಡೆದಿರುತ್ತೆ ನೋಡಿ ಅಂತಹ ವ್ಯವಹಾರ ಅದು. ಎಲ್ಲಾ ನೌಕರರೂ ಹೀಗೆ ಕಮಿಟ್ ಆದವರು ಅಲ್ಲ ಅಂದರೂ ಹೆಚ್ಚಿನವರು ಇದೇ ಗುಂಪು. ಅರಸನ ಅಂಕೆ ಮತ್ತು ದೆವ್ವದ ಕಾಟ ಇಲ್ಲವಾದ್ದರಿಂದ ಯತೇಚ್ಛವಾಗಿ ಸಂಪಾದನೆ, ಕಳ್ಳ ಸಂಪಾದನೆ…!

ಇಂತಹವರ ಕಡೆಯಿಂದ ನನ್ನ ಮನೆಗೆ ಕರೆಂಟ್ ಪಡೆಯಲು ಪಟ್ಟ ಹರಸಾಹಸ ನಿಮಗೆ ಹೇಳಲೇ ಬೇಕು. ಈಗ ಅದಕ್ಕೇ ಬರ್ತೀನಿ… ಮುಂದಿನ ಎಪಿಸೋಡಿನವರೆಗೆ ಕೊಂಚ ವೈಟ್ ಮಾಡಿ ಸರ…

ಇನ್ನೂ ಉಂಟು….