ಮುಂದಿನ ಕೆಲ ವರ್ಷಗಳ ಕಾಲ ಆ ಪತ್ರ ಹಾಗೆಯೇ ಇಲ್ಲದ ಅಜ್ಜನ ಹೆಸರನ್ನು ವಿಳಾಸವಾಗಿಸಿಕೊಂಡು ಬಂದು ನಮಗೆಲ್ಲ ಶುಭಾಶಯ ಹೇಳುತ್ತಿತ್ತು. ಕೊನೆಗೊಂದು ದಿನ ಯಾರಿಂದಲೋ ಗೊತ್ತಾದ ವಿಷಯವೇನೆಂದರೆ ಆ ಪತ್ರದ ಬುಡದಲ್ಲಿ ‘ಶುಭಕೋರುವವರು – ABC ಆಚಾರ್’ ಎಂದು ಬರೆದಿರುತ್ತಿದ್ದ, ಅಜ್ಜ ಹೇಳುತ್ತಿದ್ದ ಆಚಾರ್ ಇದ್ದರಲ್ಲ, ಅವರೂ ತೀರಿಹೋಗಿ ಕೆಲ ವರ್ಷಗಳೇ ಆಗಿದ್ದವು! ಅವರ ಮಗನೇ ಅವರ ಹೆಸರಿನಲ್ಲಿ ಈ ಶುಭಾಶಯ ಪತ್ರವನ್ನು ಗ್ರಾಹಕರಿಗೆ ಕಳಿಸುತ್ತಿದ್ದ! ಹೇಗೆ ಅವರ ದೃಷ್ಟಿಯಲ್ಲಿ ತೀರಿಹೋದ ಬಳಿಕವೂ ಅಜ್ಜ ಜೀವಂತವಾಗಿದ್ದನೋ ಹಾಗೇ ನಮ್ಮೆಲ್ಲರ ದೃಷ್ಟಿಯಲ್ಲಿ ಆಚಾರರೂ ಜೀವಂತವಾಗಿದ್ದರು!
ವಿನಾಯಕ
ಅರಳಸುರಳಿ ಬರೆಯುವ ಅಂಕಣ “ಆಕಾಶ ಕಿಟಕಿ”ಬರಹ ನಿಮ್ಮ ಓದಿಗೆ

ಬಹಳ ವರ್ಷಗಳ ಕೆಳಗೆ ನಾನು ಚಿಕ್ಕವನಿದ್ದಾಗ ನಮ್ಮನೆಗೆ ಅಜ್ಜನ ಹೆಸರಿಗೆ ಪ್ರತೀ ವರ್ಷ ಯುಗಾದಿಗೆ ಹಾಗೂ ದೀಪಾವಳಿಗೆ ತಪ್ಪದೇ ಎರಡು ಶುಭಾಶಯದ ಕಾಗದ ಬರುತ್ತಿತ್ತು. ಶಿವಮೊಗ್ಗದ ಯಾವುದೋ ಜ್ಯುವೆಲ್ಲರಿ ಶಾಪಿನವರು ಅದನ್ನು ಕಳಿಸುತ್ತಿದ್ದರು. ಅಂಚೆ ಮಾಮ ಶಾಲೆಗೇ ಬಂದು ಅದನ್ನು ನನ್ನ ಕೈಯಲ್ಲಿಟ್ಟರೂ ನಾನು ಮಾತ್ರ ಊರ ದಾರಿಯಿಂದ ನಮ್ಮನೆಯ ಮಣ್ಣು ದಾರಿಗೆ ಹೊರಳಿಕೊಂಡ ಏಕಾಂತದ ಕ್ಷಣದಲ್ಲಿಯೇ ಅದನ್ನು ತೆರೆದೋದುತ್ತಿದ್ದೆ. ಮಾಸಲು ಬಿಳಿಯ ಹೊದಿಕೆಯ ತೆಗೆದೊಡನೆ ಬಣ್ಣದ ದೀಪಗಳ ಚಿತ್ರವಿರುವ ಚಂದದ ಶುಭಾಶಯದ ಕಾರ್ಡೊಂದು ಹೊರಬರುತ್ತಿತ್ತು. ಅದು ಯಾವಾಗಲೂ ಅಜ್ಜನ ಹೆಸರಿಗೇ ಬರುತ್ತಿತ್ತು ಹಾಗೂ ಅದರಲ್ಲಿ ಈ ಯುಗಾದಿ/ದೀಪಾವಳಿ ನಿಮ್ಮ ಹಾಗೂ ನಿಮ್ಮ ಕುಟುಂಬದವರ ಬಾಳಲ್ಲಿ ಬೆಳಕು, ಸಂತೋಷ ತರಲಿ ಎಂಬ ಹಾರೈಕೆಯುಳ್ಳ ಕವನವಿರುತ್ತಿತ್ತು.

ಇದೇನೆಂದು ಅಮ್ಮನನ್ನು ಕೇಳಿದಾಗ ಗೊತ್ತಾಗಿದ್ದೇನೆಂದರೆ ಗಟ್ಟಿ ಇದ್ದ ದಿನಗಳಲ್ಲೊಮ್ಮೆ ಅಜ್ಜ ಶಿವಮೊಗ್ಗಕ್ಕೆ ಹೋಗಿ ಆ ಜ್ಯುವೆಲ್ಲರಿಯಿಂದ ಏನನ್ನೋ ಕೊಂಡು ತಂದಿದ್ದನಂತೆ. ಅಲ್ಲಿ ಅವನ ವಿಳಾಸ ತೆಗೆದುಕೊಂಡಿದ್ದ ಜ್ಯುವೆಲ್ಲರಿಯ ಹಿರಿಯ ಮಾಲಿಕರು ಅಲ್ಲಿಂದ ಮುಂದೆ ವರ್ಷಕ್ಕೆರಡು ಬಾರಿ ಹೀಗೆ ಶುಭಾಶಯ ಕಾಗದ ಕಳಿಸಲಾರಂಭಿಸಿದ್ದರು. ತಮ್ಮ ಅಂಗಡಿಯಲ್ಲಿ ಖರೀದಿ ಮಾಡಿದ ಎಲ್ಲರಿಗೂ ಯುಗಾದಿ ಹಾಗೂ ದೀಪಾವಳಿಯ ಶುಭಾಶಯ ಕಳುಹಿಸುವುದು ಅವರ ಅಥವಾ ಆ ದಿನಗಳ ಕೆಲ ಆಭರಣದಂಗಡಿಗಳ ಹವ್ಯಾಸವಾಗಿತ್ತು. ಗ್ರಾಹಕರನ್ನು ಮತ್ತೆ ತಮ್ಮ ಅಂಗಡಿಗೇ ಕರೆಸಿಕೊಳ್ಳುವ ಉಪಾಯ ಎಂದು ಎಷ್ಟೇ ಅಂದುಕೊಂಡರೂ ಆ ಪತ್ರ, ಬಣ್ಣದ ಚಿತ್ರ, ಶುಭ ಸಂದೇಶಗಳ ಮೂಲಕ ಆ ಅಪರಿಚಿತ ವ್ಯಕ್ತಿಗೆ ನಮ್ಮನ್ನು ಬೆಸೆಯುತ್ತಿದ್ದ ಆ ಓಲೆ ಮಾತ್ರ ಚಂದವಾಗಿಯೇ ಕಾಣುತ್ತಿತ್ತು.

ನಾನು ಆ ಓಲೆಯ ಓದುತ್ತಿದ್ದ ಹೊತ್ತಿಗೆ ಅಜ್ಜನಿಗೆ ವಯಸ್ಸಾಗಿತ್ತು. ನಿಜ ಹೇಳಬೇಕೆಂದರೆ ಅದೊಂದು ಸಲ ಹೊರತುಪಡಿಸಿ ಮತ್ತವನು ಆ ಅಂಗಡಿಗೆ ಹೋಗಿಯೇ ಇರಲಿಲ್ಲ. ಆದರೂ ಆ ಶುಭಾಶಯ ಪತ್ರ ಬಂದಾಗೆಲ್ಲ ಅವನು “ಹೋ.. ಆಚರರ ಕಾಗ್ದ” ಎಂದು ತೆರೆದೋದುತ್ತಿದ್ದ. ಹಬ್ಬ ಹತ್ತಿರ ಬಂದ ದಿನಗಳಲ್ಲಿ “ಮಗುವೇ, ಆಚಾರ್ರ ಕಾಗ್ದ ಬರ್ಲೀಲ್ವಾ?” ಎಂದು ಕೇಳುತ್ತಿದ್ದ. ಬಂದ ಪತ್ರವನ್ನು ತೆರೆದೋದಿ ತನ್ನ ಕೋಣೆಯ ಕಿಟಕಿಯ ಮೇಲೆ ಎತ್ತಿಡುತ್ತಿದ್ದ. ಬರುಬರುತ್ತ ಅಜ್ಜನಿಗೆ ವಯಸ್ಸಾಯಿತು. ಅವನು ಹಾಸಿಗೆ ಹಿಡಿದ. ಕೊನೆಗೊಂದು ದಿನ ಹೋಗಿಯೇಬಿಟ್ಟ. ಆ ಬಳಿಕವೂ ಹೊರ ಲಕೋಟೆಯ ಮೇಲೆ “ಶ್ರೀಯುತ ವಾಸುದೇವ ಮೂಡುಗುಡ್ಡೆ ಇವರಿಗೆ” ಎಂದು ಬರೆದುಕೊಂಡ ಆ ಶುಭಾಶಯ ಪತ್ರ ಬರುತ್ತಲೇ ಇತ್ತು.

ಕೆಲ ದಿನಗಳ ಬಳಿಕ, ಹೀಗೆ ಬಂದ ಆ ಪತ್ರವನ್ನು ನೋಡಿದ ನೆಂಟರೊಬ್ಬರು “ವಾಸಜ್ಜ ಹೋಗಿದ್ದನ್ನ ಈ ಆಚಾರ್ರಿಗೆ ಹೇಳ್ಬೇಕಲ್ಲ ಬಾಲಣ್ಣ” ಎಂದು ಅಪ್ಪನಿಗೆ ಹೇಳಿ ನಕ್ಕಿದ್ದರು. ಆ ಲಘು ಚರ್ಚೆ ಹಾಗೇ ಮುಂದುವರೆದು ಕೊನೆಗೆ ಅಪ್ಪ “ಇರ್ಲಿ ಬಿಡು. ಅವರ ದೃಷ್ಟಿಲಾದ್ರೂ ಅಪ್ಪಯ್ಯ ಹಿಂಗೇ ಬದುಕಿರ್ಲಿ” ಎಂದು ತಮಾಷೆಗೇ ಎಂಬಂತೆ ಹೇಳಿದ್ದ. ಅದು ಆ ಕ್ಷಣದ ಲಯದಲ್ಲಿ ತಾನು ಹೇಳಿದ್ದ ಮಾತಾಗಿತ್ತಾದರೂ ಮುಂದೆಯೂ ಆ ಮಾತನ್ನು ಅಪ್ಪ ಆಗಾಗ ನೆನಪು ಮಾಡಿಕೊಳ್ಳುತ್ತಿದ್ದ. ಮುಂದಿನ ಕೆಲ ವರ್ಷಗಳ ಕಾಲ ಆ ಪತ್ರ ಹಾಗೆಯೇ ಇಲ್ಲದ ಅಜ್ಜನ ಹೆಸರನ್ನು ವಿಳಾಸವಾಗಿಸಿಕೊಂಡು ಬಂದು ನಮಗೆಲ್ಲ ಶುಭಾಶಯ ಹೇಳುತ್ತಿತ್ತು. ಕೊನೆಗೊಂದು ದಿನ ಯಾರಿಂದಲೋ ಗೊತ್ತಾದ ವಿಷಯವೇನೆಂದರೆ ಆ ಪತ್ರದ ಬುಡದಲ್ಲಿ ‘ಶುಭಕೋರುವವರು – ABC ಆಚಾರ್’ ಎಂದು ಬರೆದಿರುತ್ತಿದ್ದ, ಅಜ್ಜ ಹೇಳುತ್ತಿದ್ದ ಆಚಾರ್ ಇದ್ದರಲ್ಲ, ಅವರೂ ತೀರಿಹೋಗಿ ಕೆಲ ವರ್ಷಗಳೇ ಆಗಿದ್ದವು! ಅವರ ಮಗನೇ ಅವರ ಹೆಸರಿನಲ್ಲಿ ಈ ಶುಭಾಶಯ ಪತ್ರವನ್ನು ಗ್ರಾಹಕರಿಗೆ ಕಳಿಸುತ್ತಿದ್ದ! ಹೇಗೆ ಅವರ ದೃಷ್ಟಿಯಲ್ಲಿ ತೀರಿಹೋದ ಬಳಿಕವೂ ಅಜ್ಜ ಜೀವಂತವಾಗಿದ್ದನೋ ಹಾಗೇ ನಮ್ಮೆಲ್ಲರ ದೃಷ್ಟಿಯಲ್ಲಿ ಆಚಾರರೂ ಜೀವಂತವಾಗಿದ್ದರು!

ಇಷ್ಟೇ… ನೆನಪೆಂದರೆ.. ಇರುವೆಂದರೆ.. ನಾವು ಕಳೆದುಕೊಂಡ ಅದೆಷ್ಟೋ ಪ್ರೀತಿ ಪಾತ್ರ ಜೀವಗಳು ಜಗದ ಕಣ್ಣಲ್ಲಿ ಇಲ್ಲವಾಗಿರುತ್ತಾರೆ ನಿಜ, ಆದರೂ ನಾವು ಮಾತ್ರ ಉತ್ತರದ ನಿರೀಕ್ಷೆಯಿಲ್ಲದ ಇಂಥ ನೂರು ನೆನಪಿನೋಲೆಗಳನ್ನು ಅವರ ಹೆಸರಿಗೆ ಬರೆಯುತ್ತಲೇ ಇರುತ್ತೇವೆ. ಬರೆದು ಬರೆದು ಅಂಚೆ ಡಬ್ಬಿಗೆ ಹಾಕುತ್ತಲೇ ಇರುತ್ತೇವೆ. ಇಲ್ಲವಾದ ಜೀವವೊಂದು ಬಿಟ್ಟುಹೋದ ಯಾವುದೋ ನೆನಪೊಂದನ್ನು ನೆನೆದು ಫಳಕ್ಕನೆ ಕಣ್ತುಂಬಿಕೊಳ್ಳುವುದಿದೆಯಲ್ಲ? ಅದೆಲ್ಲವೂ ಅವರಿಗೆ ಬರೆಯುವ ಒಂದೊಂದು ಪತ್ರವೇ. ಯಾರಿಗೂ ಕಾಣದಂತೆ ಅವನ್ನೆಲ್ಲ ಅಂಚೆಗೆ ಹಾಕಿ ಸುಮ್ಮನಾಗಿಬಿಡುತ್ತೇವೆ ನಿಶ್ಯಬ್ಧವಾಗಿ. ಮೇಲೆಲ್ಲೋ ಕಾಣದ ಲೋಕದಲ್ಲಿರುವ ಅವರನ್ನು ತಲುಪಿಯೇ ಬಿಡುತ್ತದೆಂಬ ನಂಬಿಕೆಯಲ್ಲಿ.. ಆ ಮೂಲಕ ಅವರನ್ನು ಜೀವಂತವಾಗಿಟ್ಟುಕೊಳ್ಳುತ್ತೇವೆ.

ಬದಲಾದ ಕಾಲಮಾನದಲ್ಲಿ, ಸಂದೇಶದ ಮಾಧ್ಯಮಗಳು ಬೇರೆಯಾಗಿರುವ ಹೊತ್ತಿನಲ್ಲೂ ಮನುಷ್ಯ ಸಂಬಂಧಗಳು ಹೀಗೇ ಹರಿಯುವುದನ್ನು ನೋಡಿದಾಗ ಮನಸ್ಸು ತುಂಬಿ ಬರುತ್ತದೆ.‌ ಫೇಸ್ಬುಕ್ಕಿನಲ್ಲಿ ನಮಗೆ ಅಷ್ಟಾಗಿ ಪರಿಚಯವಿಲ್ಲದ, ಪೋಸ್ಟು-ಕಮೆಂಟು-ಲೈಕುಗಳ ಮೂಲಕವಷ್ಟೇ ಗೊತ್ತಿರುವ ಎಷ್ಟೋ ವ್ಯಕ್ತಿಗಳಿರುತ್ತಾರೆ. ಅವರು ಹಾಕುವ ಪೋಸ್ಟುಗಳಿಗೆ ಕಮೆಂಟಿಸುವ ಮೂಲಕವೋ, ಅವರ ಕಮೆಂಟಿಗೆ ಇನ್ನೆಲ್ಲೋ ಉತ್ತರಿಸುವ ಮುಖಾಂತರವೋ ನಾವು ಅವರೊಟ್ಟಿಗೆ ಪರೋಕ್ಷ ಸಂಪರ್ಕ ಸಾಧಿಸಿರುತ್ತೇವೆ.‌ ಇಂತಿಪ್ಪ ಪ್ರೊಫೈಲುಗಳು ಅಚಾನಕ್ಕಾಗಿ ಯಾವ ಸದ್ದುಗದ್ದಲವಿಲ್ಲದೇ ನಿಶ್ಯಬ್ಧವಾಗಿ ಬಿಡುತ್ತವೆ. ಅವರು ಯಾರು, ಯಾಕೆ ಎಲ್ಲೂ ಕಾಣಿಸಿಕೊಳ್ಳುತ್ತಿಲ್ಲ, ಅವರಿಗೆ ಏನಾಗಿದೆ ಎಂಬ ಯಾವುದೇ ಮಾಹಿತಿಯೂ ಕಾಣದ ಪ್ರೊಫೈಲಿನಲ್ಲಿ ಎಷ್ಟೋ ವರ್ಷಗಳ ಹಿಂದೆ ಹಾಕಿದ್ದೇ ಅವರ ಕೊನೆಯ ಪೋಸ್ಟಾಗಿ ಉಳಿದು ಹೋಗಿರುತ್ತದೆ.‌ ಹೀಗೆ ಕಣ್ಮರೆಯಾದ ವ್ಯಕ್ತಿಯ ಹುಟ್ಟಿದ ದಿನ ಬಂದಾಗ ಎಷ್ಟೋ ಮಂದಿ ಶುಭ ಕೋರಿ ಅವರ ಗೋಡೆಯ ಮೇಲೆ ಶುಭಾಶಯ ಬರೆಯುತ್ತಾರೆ. ನೂರು ವರ್ಷ ಖುಷಿಯಾಗಿ ಬಾಳಿ ಎಂದು ಹಾರೈಸುತ್ತಾರೆ.

ಕೆಲವೊಮ್ಮೆ ಹೀಗೆ ಹಾರೈಸಿಕೊಂಡ ವ್ಯಕ್ತಿ ಎಷ್ಟೋ ದಿನಗಳ ಕೆಳಗೇ ತೀರಿ ಹೋಗಿರುತ್ತಾರೆ. ಆದರೆ ಈ ಸತ್ಯ ಗೊತ್ತಿಲ್ಲದ ಎಷ್ಟೋ ಮಂದಿಯ ಅರಿವಿನಲ್ಲಿ ಮಾತ್ರ ಅವರು ಜೀವಂತವಾಗಿರುತ್ತಾರೆ.

ಎಲ್ಲೋ ಓದಿದ ನೆನಪು. ವಾರಗಟ್ಟಲೆ ಟ್ರಕ್ಕಿಂಗ್ ಮಾಡುವ ಹವ್ಯಾಸವಿರುವ ವ್ಯಕ್ತಿಯೊಬ್ಬರು ಗೊಂಡಾರಣ್ಯವೊಂದನ್ನು ಹೊಗ್ಗುತ್ತಾರೆ. ನೆಟ್ವರ್ಕ್ ಇಲ್ಲದ, ಅಸಲಿಗೆ ಹೊರ ಜಗತ್ತಿನ ಸಂಪರ್ಕವೇ ಇಲ್ಲದ ಕಾಡಿನೊಳಗೆ ಹದಿನಾಲ್ಕು ದಿನಗಳನ್ನು ಕಳೆದು ಹೊರಬಂದ ದಿನ ಅವರಿಗೊಂದು ಆಘಾತಕಾರಿ ವಿಷಯ ಗೊತ್ತಾಗುತ್ತದೆ.‌ ಅವರು ಟ್ರಕ್ಕಿಂಗ್ ಆರಂಭಿಸಿದ ಮೊದಲ ದಿನವೇ ಊರಿನಲ್ಲಿದ್ದ ಅವರ ತಾಯಿ ತೀರಿ ಹೋಗಿರುತ್ತಾರೆ. ಸಂಪರ್ಕಿಸಲು ಆಗದ ಕಾರಣ ಸುದ್ದಿ ಅವರನ್ನು ತಲುಪದೇ ಉಳಿದಿರುತ್ತದೆ. ಆ ಬಗ್ಗೆ ನೆನಪಿಸಿಕೊಂಡ ಆ ವ್ಯಕ್ತಿ ಹೀಗೆ ಹೇಳುತ್ತಾರೆ:

“ಅವರೆಲ್ಲರಿಗೆ ಅಮ್ಮ ಅಂದೇ ಹೊರಟು ಹೋದಳು. ನನ್ನ ಪಾಲಿಗೆ ಮಾತ್ರ ಆಕೆ ಹದಿನಾಲ್ಕು ದಿನ ಹೆಚ್ಚಿಗೆ ಬದುಕಿದ್ದಳು”

*****

ಕೆಲ ತಿಂಗಳ ಹಿಂದೆ ಊರಿನ ಬಸ್ಸಿನಲ್ಲಿ ಅಪ್ಪನ, ಬೇರೆ ಶಹರದಲ್ಲೆಲ್ಲೋ ಇರುವ ಗೆಳೆಯರೊಬ್ಬರು ಸಿಕ್ಕಿದರು‌. ಆತ ತಮ್ಮ ಬಾಲ್ಯದ ಚಂದದ ದಿನಗಳಲ್ಲಿ ಕೆಲವನ್ನು ಅಪ್ಪನ ಜೊತೆ ಕಳೆದಿದ್ದರು. ಇಬ್ಬರೂ ಕೂಡಿ ಕಾಡು ಮೇಡು ಅಲೆದಿದ್ದರು. ಸೊಪ್ಪು, ಕಟ್ಟಿಗೆ ಆಯ್ದಿದ್ದರು. ದನ ಕಾಯುವವರಿಂದ ಕಾಡಿ ಬೇಡಿ ಕೊಳಲು ಮಾಡಿಸಿಕೊಂಡು ಊದಿದ್ದರು.

“ನಿಮ್ಮಪ್ಪ ಒಳ್ಳೆಯ ಹವ್ಯಾಸೀ ನಾಟಕ ಕಲಾವಿದ. ಒಳ್ಳೆಯ ವೇದಿಕೆ ಸಿಕ್ಕಿದ್ದರೆ ಎಲ್ಲೋ ಇರುತ್ತಿದ್ದರು. ಓದಿಕೊಂಡಿದ್ದ. ಬದುಕಿನ ಬಗ್ಗೆ ತುಂಬಾ ಚೆನ್ನಾಗಿ ಮಾತಾಡುತ್ತಿದ್ದ. ಕಾಡು ಮೇಡು ಅಲೆಯುತ್ತ ನಾವು ಬಹಳಷ್ಟು ಹರಟಿದ್ದೆವು” ಎನ್ನುತ್ತ ಅಚಾನಕ್ಕಾಗಿ “ಈಗ್ಲೂ ಅಪ್ಪ ಹಾಗೇ ಇದಾನಾ? ಇತ್ತೀಚೆಗೆ ನಾಟಕ ಏನಾದರೂ ಮಾಡಿದ್ದಾನಾ?” ಎಂದುಬಿಟ್ಟರು.

ಅಂದು, ಎಷ್ಟೋ ವರ್ಷಗಳ ಕೆಳಗೆ ಅಜ್ಜನ ವಿಷಯದಲ್ಲಿ ಅಪ್ಪ ಹೇಳಿದ್ದ ‘ಅವರ ದೃಷ್ಟಿಯಲ್ಲಾದ್ರೂ ಅಪ್ಪಯ್ಯ ಜೀವಂತವಾಗಿರ್ಲಿ’ ಎಂಬ ಮಾತು ಫಳಕ್ಕನೆ, ಇದೇ ಕೆಲ ನಿಮಿಷದ ಹಿಂದಷ್ಟೇ ಹೇಳಿದ್ದೇನೋ ಎಂಬಂತೆ ನನ್ನ ಸ್ಮೃತಿ ಪಟಲದಲ್ಲಿ ಚಿಮ್ಮಿ ಬಂದಿತು.

ತೀರಿಕೊಂಡ ಎರಡು ವರ್ಷಗಳ ಬಳಿಕವೂ ಅಪ್ಪನನ್ನು ಜೀವಂತವಾಗಿಯೇ ಇಟ್ಟುಕೊಂಡಿರುವವರ ಅರಿವಿನಿಂದ ಅಪ್ಪ ಇಲ್ಲವಾಗುವ ಕ್ಷಣವನ್ನು ನೋಡುವ ಧೈರ್ಯವಾಗದೇ ಕಿಟಕಿಯಾಚೆಗೆ ನೋಡುತ್ತ ‘ಅಪ್ಪ ಹೋಗಿ ಬಿಟ್ರು’ ಎಂದೆ.