ಎಕೆಲೋಫ಼್ ಅವರ ವೃತ್ತಿಜೀವನದ ಪ್ರತಿಯೊಂದು ತಿರುವಿನಲ್ಲೂ ಇದೇ ಕಥೆ ಪುನರಾವರ್ತನೆಯಾಗುತ್ತಿತು. ಮೂವತ್ತರ ದಶಕದ ಉತ್ತರಾರ್ಧದಲ್ಲಿ ಎಕೆಲೋಫ಼್ ಮಾನವ ವ್ಯಕ್ತಿನಿಷ್ಠೆಗೆ ಆಮೂಲಾಗ್ರ ಮತ್ತು ಹೆಚ್ಚು ಅಮೂರ್ತವಾದ ದೃಷ್ಟಿಕೋನದೆಡೆಗೆ ತಮ್ಮ ಕಾವ್ಯಪ್ರಯೋಗ ನಡೆಸುತ್ತಿದ್ದರು. ಅವರ ಸ್ನೇಹಿತ ಎರಿಕ್ ಲಿಂಡೆಗ್ರೆನ್ ತಕ್ಷಣವೇ ಈ ಯೋಜನೆಯನ್ನು ಎಲಿಯಟ್‌-ನ ಆಗ ಪ್ರಗತಿಯಲ್ಲಿದ್ದ ಕಾವ್ಯಕೆಲಸದ ಜತೆ ಸಂಬಂಧ ಜೋಡಿಸಿದರು.
ಎಸ್. ಜಯಶ್ರೀನಿವಾಸ ರಾವ್ ಬರೆಯುವ “ಲೋಕ ಕಾವ್ಯ ವಿಹಾರ” ಸರಣಿಯಲ್ಲಿ ಸ್ವೀಡನ್ ದೇಶದ ಕವಿ ಗುನ್ನಾರ್ ಎಕೆಲೋಫ಼್-ರವರ (Gunnar Ekelof, 1907-1968) ಕಾವ್ಯದ ಕುರಿತ ಬರಹ ಹಾಗೂ ಅವರ ಕೆಲವು ಅನುವಾದಿತ ಕವಿತೆಗಳು ನಿಮ್ಮ ಓದಿಗೆ

ಗುನ್ನಾರ್ ಎಕೆಲೋಫ಼್ ತಮ್ಮ ಮೊದಲ ಕವನ ಸಂಕಲನವನ್ನು 1932-ರಲ್ಲಿ ಹಾಗೂ ಎರಡನೆಯ ಸಂಕಲನವನ್ನು 1934-ರಲ್ಲಿ ಪ್ರಕಟಿಸಿದರು, ಮತ್ತು ಆಗಿನಿಂದ 1968-ರಲ್ಲಿ ಅವರ ನಿಧನದವರೆಗೆ, ಪ್ರತಿ ಎರಡು ಅಥವಾ ಮೂರು ವರ್ಷಗಳಿಗೊಮ್ಮೆ ಹೊಸ ಸಂಕಲನವೊಂದು ನಿಯಮಿತವಾಗಿ ಪ್ರಕಟವಾಗುತ್ತಾ ಬಂತು. ಭಾವನಾತ್ಮಕ ಗೀತೆಗಳ (lyric poetry) ಬರವಣಿಗೆ ಅವರ ವಯಸ್ಕ ಜೀವನದ ಪ್ರತಿ ದಿನವನ್ನೂ ಅವರನ್ನು ವಶಪಡಿಸಿಕೊಂಡಿತು. ಕಾಲಾನಂತರದಲ್ಲಿ ಎಕೆಲೋಫ಼್ ಒಂದು ರೀತಿಯ ಭಾವಗೀತಾತ್ಮಕ ಪ್ರಾಣಿಯಾಗಿಬಿಟ್ಟರು, ಶಬ್ದಗಳು ಮತ್ತು ಅರ್ಥಗಳನ್ನು ಸಾಲುಗಳಾಗಿ ಮತ್ತು ಸಾಲುಗಳನ್ನು ಕವಿತೆಗಳಾಗಿ ಜೋಡಿಸುವ ಕೆಲಸದಲ್ಲಿ ನಿರಂತರವಾಗಿ ತಮ್ಮನ್ನು ತೊಡಗಿಸಿಕೊಂಡರು.

ತಮ್ಮ ಜೀವನದ ಕೊನೆಯ ವರ್ಷಗಳಲ್ಲಿ ಅವರು ಆಗಾಗ್ಗೆ ಕಾವ್ಯವನ್ನು ತ್ಯಜಿಸುವ ಬಗ್ಗೆ ಮಾತನಾಡುತ್ತಿದ್ದರು ಮತ್ತು ಮಾನಸಿಕ ಒತ್ತಡದಿಂದ ಬಳಲಿಕೆಯ ಬಗ್ಗೆಯೂ ದೂರುತ್ತಿದ್ದರು, ಆದರೆ ಅವರ ಅಂತಿಮ ಅನಾರೋಗ್ಯದ ತಿಂಗಳುಗಳಲ್ಲಿ ಅವರು ತಮ್ಮ ಆಲೋಚನೆಗಳು ಮತ್ತು ಕನಸುಗಳನ್ನು ಟಿಪ್ಪಣಿರೂಪದಲ್ಲಿ ಬರೆದಿಡುವುದನ್ನು ಮತ್ತು ಅವುಗಳನ್ನು ಕಾವ್ಯರೂಪಕ್ಕೆ ತರುವಲ್ಲಿ ಪ್ರಯತ್ನ ಮಾಡುವುದನ್ನು ಮುಂದುವರೆಸಿದರು. ಅಂತಿಮವಾಗಿ, ಅವರು ರಚಿಸುತ್ತಿದ್ದದ್ದು ಕವಿತೆಗಳನ್ನಲ್ಲ – ಅವರು ಸ್ವತಃ ತನ್ನನ್ನೇ ರಚಿಸುತ್ತಿದ್ದರು; ಅವರ ಕವಿತೆಗಳು ಸ್ವತಃ ತನ್ನೊಳಗೆ ಹೋಗಲಿಕ್ಕಿರುವ ಮಾರ್ಗವೆಂದು ಅವರು ಹೇಳಿದ್ದರು.

ಸ್ಟಾಕ್‌ಹೋಮ್ ಮತ್ತು ಉಪ್ಸಾಲಾ ನಗರಗಳ ಸಹ-ಕವಿಗಳಲ್ಲಿ, ಮೂವತ್ತರ ದಶಕದ ಆರಂಭದಲ್ಲಿ ಎಕೆಲೋಫ಼್ ಸಾಹಿತ್ಯಿಕ ಅಭಿಪ್ರಾಯದ ನಾಯಕನಾಗಿ ತನ್ನನ್ನು ತಾನು ಸ್ಥಾಪಿಸಿಕೊಂಡರು, ಮತ್ತೆ ಆ ಸ್ಥಾನವನ್ನು ಅವರು ಎಂದಿಗೂ ಕಳೆದುಕೊಳ್ಳಲಿಲ್ಲ. ಸಾಮಾನ್ಯ ಕಾವ್ಯಾಸಕ್ತರೊಂದಿಗೆ ಅವರ ಸಂಬಂಧ ಅಷ್ಟೇನೂ ಸುಗಮವಾಗಿರಲಿಲ್ಲ ಮತ್ತು ದೀರ್ಘಕಾಲದವರೆಗೆ ಈ ಸಂಬಂಧ ಅವರ ಕಾವ್ಯಸಾಧನೆಗಿಂತ ಬಹಳ ಹಿಂದೆ ಉಳಿದಿತ್ತು. ಅವರನ್ನು ಒಂದು ನಿಗೂಢಾತ್ಮಕ ಮತ್ತು ವಿದ್ವತ್ಪೂರ್ಣ ಕವಿ ಎಂದು ಪರಿಗಣಿಸಲಾಗಿತ್ತು, ಆದರೂ ಅವರ ಕಲಿಕೆಯ ಸ್ವರೂಪವನ್ನು ನಿರ್ದಿಷ್ಟಪಡಿಸುವುದು ಕಷ್ಟಕರವಾಗಿತ್ತು; ಅವರ ವೃತ್ತಿಜೀವನದ ವಿವಿಧ ಹಂತಗಳಲ್ಲಿ ಅವರನ್ನು ಸರ್ರಿಯಲಿಸ್ಟ್ (surrealist), ಅನುಭಾವಿ, ಬಹುದೃಷ್ಟೀಯ ಮತ್ತು ದಾರ್ಶನಿಕ ಕವಿ ಎಂದೆಲ್ಲಾ ಕರೆಯಲಾಯಿತು. 1965-ರಲ್ಲಿ ಅವರ ಕವನಗಳ ಸಮಗ್ರ ಸಂಗ್ರಹದ (Dikter) ಪ್ರಕಟಣೆಯ ನಂತರವೆ ಎಕೆಲೋಫ಼್ ಅವರನ್ನು ಒಬ್ಬ ಅದ್ವಿತೀಯ ಕವಿ ಹಾಗೂ ಇಪ್ಪತನೆಯ ಶತಮಾನದ ಸ್ಕ್ಯಾಂಡಿನೇವಿಯನ್ ಕಾವ್ಯರಚನೆಕಾರರ ಮೊದಲ ಶ್ರೇಣಿಗೆ ಸೇರಿದ ಕವಿ ಎಂದು ಗುರುತಿಸಲಾಯಿತು.

1930-ರಲ್ಲಿ ಪ್ಯಾರಿಸ್‌-ನಲ್ಲಿ ವಾಸವಾಗಿದ್ದಾಗ ಎಕೆಲೋಫ಼್ ಅವರ ವೃತ್ತಿಜೀವನದ ಕಥೆ ನಿಜವಾದ ಅರ್ಥದಲ್ಲಿ ಪ್ರಾರಂಭವಾಗುತ್ತದೆ. ಅಲ್ಲಿ, ಅವರ ಸುತ್ತಲೂ ನಡೆಯುತ್ತಿದ್ದ ಕಲಾತ್ಮಕ ನವೀಕರಣ ಮತ್ತು ಹೊಸ-ಹುಟ್ಟಿನಲ್ಲಿ, ಅವರು ತಮ್ಮೊಳಗಿನ ಬಂಡಾಯದ ವೈಯಕ್ತಿಕ ಭಾವನೆಗಳಿಗೆ ಸಾಮಾಜಿಕ ಸಮಾನಾಂತರವನ್ನು ಕಂಡುಕೊಂಡರು. ಆ ಸಮಯದಲ್ಲಿ ಅವರು ಕೆಲವೇ ಕವಿತೆಗಳನ್ನು ಬರೆದಿದ್ದರು; ಹಾಗೂ ಪದಗಳನ್ನು ಮಾತ್ರ ಇಟ್ಟುಕೊಂಡು ಮೊದಲಿನಿಂದ ಮತ್ತೆ ಪ್ರಾರಂಭಿಸಲು ನಿರ್ಧರಿಸಿದರು. “ನನಗೆ ಏನೂ ತಿಳಿದಿಲ್ಲ ಎಂದು ನನಗೆ ಸ್ಪಷ್ಟವಾಗಿತ್ತು,” ಅವರು ಬರೆದಿದ್ದಾರೆ, “ನಾನು ಪದಗಳನ್ನು ಒಂದೊಂದಾಗಿ ತೆಗೆದುಕೊಂಡು ಅವುಗಳ ಮೌಲ್ಯಗಳನ್ನು ನಿರ್ಧರಿಸಲು ಪ್ರಯತ್ನಿಸಿದೆ. ನಾನು ಪದದ ಪಕ್ಕದಲ್ಲಿ ಪದವನ್ನು ಇರಿಸಿ ಮತ್ತು ಸಂಪೂರ್ಣ ವಾಕ್ಯವನ್ನು ಒಟ್ಟುಗೂಡಿಸುವಲ್ಲಿ ಬಹಳ ಕಷ್ಟಪಟ್ಟು ಯಶಸ್ವಿಯಾದೆ – ಸ್ವಾಭಾವಿಕವಾಗಿ, ಅದರಲ್ಲಿ ಯಾವುದೇ ಅರ್ಥವಿರಲಿಲ್ಲ – ಆದರೆ ಪದ ಮೌಲ್ಯಗಳಿಂದ ಕೂಡಿತ್ತು. ನಾನು ಅದರ ತಳದಲ್ಲಿರುವ ಅರ್ಥಕ್ಕಾಗಿ ಹುಡುಕುತ್ತಿದ್ದೆ – ಒಂದು ರೀತಿಯ ‘ಪದದ ರಸವಿದ್ಯೆ’ (alchemy of the word).” ಒಂದೆರಡು ವರ್ಷಗಳ ನಂತರ ಅವರು ಈ ಪ್ರಯೋಗಗಳ ಫಲಿತಾಂಶಗಳನ್ನು ಮಿತ್ರರೊಂದಿಗೆ ಹಂಚಿಕೊಂಡಾಗ, ಒಬ್ಬ ಸ್ನೇಹಿತ ಅವರನ್ನುದ್ದೇಶಿಸಿ, “ನೀನೊಬ್ಬ ಸರ್ರಿಯಲಿಸ್ಟ್,” ಎಂದು ಹೇಳಿದರು.

ಒಟ್ಟಾರೆಯಾಗಿ ಯಾವುದೋ ಒಂದು ತರಹದ ಕವಿ ಎಂದು ಗುರುತಿಸಲ್ಪಟ್ಟದ್ದಕ್ಕೆ ಸಂತೋಷಪಟ್ಟ ಎಕೆಲೋಫ಼್, ಹಲವಾರು ಸರ್ರಿಯಲಿಸ್ಟ್ ಬರಹಗಾರರನ್ನು ಓದಿದರು, ಕೆಲವನ್ನು ಅನುವಾದಿಸಿದರು ಮತ್ತು ಅವರ ಕೆಲವು ರೆಕ್ಕೆಗಳನ್ನು ಎರವಲು ಪಡೆದು ಅಂಟಿಸಿಕೊಂಡರು. ಹಲವು ವರ್ಷಗಳ ನಂತರ, ಅವರು ತಮ್ಮ ಈ ಆರಂಭಿಕ ಸಂಕಲನಗಳಲ್ಲಿನ ಸರ್ರಿಯಲಿಸ್ಟ್ ಸಿದ್ಧಾಂತದ ಅಂಶವನ್ನು ಆ ಅವಧಿ ತನ್ನಿಂದ ಪಡೆದ ಕಂದಾಯಕ್ಕಿಂತ ಹೆಚ್ಚೇನೂ ಅಲ್ಲ ಎಂದು ಪರಿಗಣಿಸಿದರು ಮತ್ತು ಅವರು ಸರ್ರಿಯಲಿಸ್ಟ್ ವಿಧಾನಗಳನ್ನು ಏಕತಾನತೆಯಿಂದ ಕೂಡಿದ ಮತ್ತು ನಿಶ್ಚಿತಾಭಿಪ್ರಾಯದ ಸಿದ್ಧಾಂತದ ವಿಧಾನಗಳೆಂದು ತಿರಸ್ಕರಿಸಿದರು. ಸಾಮಾನ್ಯವಾಗಿ ಪ್ರಭಾವದ ತಾತ್ವಿಕ ಪರಿಕಲ್ಪನೆಯಿಂದ ಅವರಿಗೆ ಯಾವುದೇ ಪ್ರಯೋಜನವಿರಲಿಲ್ಲ, ಆದರೆ ಅವರು “ಗುರುತಿಸುವಿಕೆ” (identification) ಎಂಬ ಪರಿಕಲ್ಪನೆಯನ್ನು ಬಹಳ ಆಳವಾಗಿ ನಂಬಿದ್ದರು, ಇತರರ ಕೃತಿಗಳಲ್ಲಿ ತಮ್ಮನ್ನು ತಾವು ಕಂಡುಕೊಳ್ಳುತ್ತಿದ್ದರು, ಮತ್ತು ಈ ಆರಂಭಿಕ ಸಂಕಲನಗಳಲ್ಲಿ, ಅವರು ತಮ್ಮ ವೈಯಕ್ತಿಕ ಪಟ್ಟಿಯಲ್ಲಿರುವ ಬರಹಗಾರರ ಜತೆ ಗುರುತಿಸಿಕೊಳ್ಳುತ್ತಿದ್ದರು. ಈ ಪಟ್ಟಿಯಲ್ಲಿ ಕೆಲವರು ಸರ್ರಿಯಲಿಸ್ಟ್-ರು ಸಹ ಇದ್ದರು ನಿಜ, ಆದರೆ ಮುಖ್ಯವಾಗಿ ಹೋಲ್ಡರ್ಲಿನ್ ಮತ್ತು ರಿಂಬೋವ, ಸ್ಟ್ಯಾಗ್ನೇಲಿಯಸ್ ಮತ್ತು ಸೋಡರ್‌ಗ್ರಾನ್ ಅವರೊಂದಿಗೆ ಗುರುತಿಸಿಕೊಳ್ಳುತ್ತಿದ್ದರು ಎಂಬುದು ಸ್ಪಷ್ಟವಾಗಿದೆ. ಆದಾಗ್ಯೂ, ಸರ್ರಿಯಲಿಸ್ಟ್ ಎಂಬ ಹಣೆಪಟ್ಟಿ ಅವರಿಗೆ ಅಂಟಿಕೊಂಡಿತು; ವರುಷಗಳ ನಂತರ, 1940-ರ ಹೊತ್ತಿಗೂ ಅವರನ್ನು ಪ್ಯಾರಿಸ್ ಫ್ಯಾಷನ್‌ನ ಪೂರೈಕೆದಾರ ಎಂದೇ ಪರಿಗಣಿಸಲಾಗುತ್ತಿತ್ತು.

ಎಕೆಲೋಫ಼್ ಅವರ ವೃತ್ತಿಜೀವನದ ಪ್ರತಿಯೊಂದು ತಿರುವಿನಲ್ಲೂ ಇದೇ ಕಥೆ ಪುನರಾವರ್ತನೆಯಾಗುತ್ತಿತು. ಮೂವತ್ತರ ದಶಕದ ಉತ್ತರಾರ್ಧದಲ್ಲಿ ಎಕೆಲೋಫ಼್ ಮಾನವ ವ್ಯಕ್ತಿನಿಷ್ಠೆಗೆ ಆಮೂಲಾಗ್ರ ಮತ್ತು ಹೆಚ್ಚು ಅಮೂರ್ತವಾದ ದೃಷ್ಟಿಕೋನದೆಡೆಗೆ ತಮ್ಮ ಕಾವ್ಯಪ್ರಯೋಗ ನಡೆಸುತ್ತಿದ್ದರು. ಅವರ ಸ್ನೇಹಿತ ಎರಿಕ್ ಲಿಂಡೆಗ್ರೆನ್ ತಕ್ಷಣವೇ ಈ ಯೋಜನೆಯನ್ನು ಎಲಿಯಟ್‌-ನ ಆಗ ಪ್ರಗತಿಯಲ್ಲಿದ್ದ ಕಾವ್ಯಕೆಲಸದ ಜತೆ ಸಂಬಂಧ ಜೋಡಿಸಿದರು. ಸಮಸ್ಯೆ ಮತ್ತು ವಿಧಾನವನ್ನು ಸಂಪೂರ್ಣವಾಗಿ ತನ್ನದೇ ಎಂದು ಎಕೆಲೋಫ಼್ ಪರಿಗಣಿಸಿದರು; ಆ ಸಮಯದಲ್ಲಿ ಅವರು ಎಲಿಯಟ್-ನ ‘ಫೋರ್ ಕ್ವಾರ್ಟೆಟ್ಸ್’-ನ ಯಾವುದೇ ಭಾಗವನ್ನು ಓದಿರಲಿಲ್ಲ. “ನಿಸ್ಸಂದೇಹವಾಗಿ,” ಅವರು ಹೇಳಿದರು, “ನನ್ನ ಜೀವನದುದ್ದಕ್ಕೂ ಎಲಿಯಟ್ ನನ್ನ ಮುಂದೆ ಇಡಲ್ಪಡುತ್ತಾನೆ. ನಿಜವೇನೆಂದರೆ, ನಾನು ಹೇಳಬೇಕೆಂದಿರುವುದು ಎಲಿಯಟ್ ತನ್ನ ಕವಿತೆಗಳಲ್ಲಿ ಹೇಳುವುದಕ್ಕಿಂತ ಸಂಪೂರ್ಣವಾಗಿ ಭಿನ್ನವಾಗಿದೆ.” ಎಕೆಲೋಫ಼್ ನಂತರ ‘ಫೋರ್ ಕ್ವಾರ್ಟೆಟ್ಸ್’-ನ ಒಂದು ಭಾಗವಾದ “ಈಸ್ಟ್ ಕೋಕರ್”-ನ್ನು ಅನುವಾದಿಸಿದರು ಮತ್ತು ಎಲಿಯಟ್‌-ನ್ನು ಒಬ್ಬ ಮಹತ್ವದ ಕವಿಯೆಂದು ಕಂಡುಕೊಂಡರು, ಆದರೆ ಎಲಿಯಟ್‌-ರೊಂದಿಗೆ ಅವರು ತಮ್ಮನ್ನು ಗುರುತಿಸಿಕೊಂಡಿದ್ದಾರೆಂಬ ವಿಷಯದ ಮಟ್ಟವನ್ನು ನಲವತ್ತು ಮತ್ತು ಐವತ್ತರ ದಶಕದಲ್ಲಿ ಸ್ವೀಡಿಷ್ ವಿಮರ್ಶಕರು ಖಂಡಿತವಾಗಿಯೂ ಉತ್ಪ್ರೇಕ್ಷಿಸಿದರು. ಇವರಿಬ್ಬರ ಪದ್ಯ ಶೈಲಿಗಳು, ತಾತ್ಕಾಲಿಕವಾಗಿ, ಸ್ವಲ್ಪಮಟ್ಟಿಗೆ ಹೋಲುತ್ತಿದ್ದವು; ಆದರೆ ಈ ಇಬ್ಬರು ಕವಿಗಳ ನಿರ್ಣಯಗಳು ಬಹಳ ಭಿನ್ನವಾಗಿದ್ದವು.

ವಿಮರ್ಶಕರು ಮತ್ತು ಸಾಮಾನ್ಯ ಕಾವ್ಯಾಸಕ್ತರೊಂದಿಗೆ ಎಕೆಲೋಫ಼್-ಗೆ ಇದ್ದ ಅನೇಕ ತೊಡಕುಗಳು ಅವರ ಕಾವ್ಯದ ಪರಿಕಲ್ಪನೆಯಲ್ಲಿ ಅಂತರ್ಗತವಾಗಿದ್ದವು. ಅವರು ಒಮ್ಮೆ ಒಂದು ಉತ್ತಮ ಭಾವಗೀತೆಯನ್ನು ವಿಕಿರಣಶೀಲ ವಸ್ತುವಿನ (radioactive matter) ಒಂದು ತುಂಡಿಗೆ ಹೋಲಿಸಿದರು. ಶಕ್ತಿಯನ್ನು ನೀಡುವ ಸಾಮರ್ಥ್ಯವು ವಿಷಯವನ್ನು ರೂಪಿಸುವ ಕಣಗಳ ನಡುವಿನ ಸಂಬಂಧಗಳಿಗಿಂತ ಕಡಿಮೆ ಗ್ರಹಿಸಿದ ವಿಷಯದ ವಿಷಯವಾಗಿದೆ, ಬಲದ ರೇಖೆಗಳನ್ನು ಹೊರಸೂಸುವ ಅರ್ಥಗಳ ನಡುವೆ ಸ್ಥಾಪಿಸಲಾದ ಸೂಕ್ಷ್ಮ ವ್ಯತ್ಯಾಸಗಳು ಮತ್ತು ಅಪಶ್ರುತಿಗಳು ಎಂದು ಅವರು ಹೇಳಿದರು. “ಇದು ದೊಡ್ಡ ಪರಿಣಾಮಗಳ ವಿಷಯವಲ್ಲ,” ಅವರು ಮುಂದುವರಿಸಿದರು, “ಆದರೆ, ಇದೇ ರೂಪಕವನ್ನು ಮುಂದುವರಿಸಿ ಹೇಳುವುದಾದರೆ, ನಮಗೆ ಅಗ್ರಾಹ್ಯವಾಗಿರುವ ಸಣ್ಣ ಅಲೆಗಳ ವಿಷಯ.” ಅಂತಹ ಕಾವ್ಯ ಎಷ್ಟೇ ನಮ್ಮ ಮನಕರಗಿಸಿದರೂ, ಮತ್ತು ಅದರ ಪರಿಣಾಮ ಎಷ್ಟೇ ಶಾಶ್ವತವಾಗಿದ್ದರೂ, ಅದು ಓದುಗರಿಗೆ ವಿಷಯದ ರೀತಿಯಲ್ಲಿ ಹೆಚ್ಚೇನೂ ಕೊಡಲ್ಲ. ವಿಷಯವಿದ್ದರೆ ಅದನ್ನು ಪ್ಯಾರಾಫ್ರೇಸ್ ಮೂಲಕ, ರೀತಿಯ ಮತ್ತು ಪರಿಣಾಮದ ಪ್ರಕಾರ ತೂಗಬಹುದು ಮತ್ತು ಅಳೆಯಬಹುದು. ಇಷ್ಟಾದ ಮೇಲೂ, ಗುರುತಿಸಬಹುದಾದ ವಿಷಯವನ್ನು ತನ್ನ ಓದುಗರು ಬಯಸುತ್ತಾರೆ ಎಂದು ಎಕೆಲೋಫ಼್-ಗೆ ತಿಳಿದಿತ್ತು, ಆದರೆ ಕವಿಯಾಗಿ ಅದನ್ನು ಒದಗಿಸುವ ಬಯಕೆ ಅವರಲ್ಲಿ ಕಡಮೆಯೇ ಆಗಿತ್ತು. ಅವರ ತಾಂತ್ರಿಕ ಬೆಳವಣಿಗೆಯಲ್ಲಿನ ಪ್ರಮುಖ ಬದಲಾವಣೆಗಳು ಸಾಹಿತ್ಯಿಕ ಹೊದಿಕೆಗಳಿಲ್ಲದ ಕಾವ್ಯದ ದಿಕ್ಕಿನಲ್ಲಿದ್ದವು, ಗೋರಾನ್ ಪ್ರಿಂಟ್ಜ್-ಪಾಹ್ಲ್ಸನ್ (ಸ್ವೀಡಿಷ್ ಕವಿ ಹಾಗೂ ವಿಮರ್ಶಕ, Goran Printz-Pahlson) ಹೇಳಿದಂತೆ, ಮೂಲಭೂತವಾಗಿ ಮನುಜ ಗುಣವಿಲ್ಲದ ಎಲ್ಲವನ್ನೂ ತೆಗೆದುಹಾಕಲಾದ ಕಾವ್ಯ.

ಎಕೆಲೋಫ಼್ ಮತ್ತು ಅವರ ಕಾವ್ಯಾಸಕ್ತರ ನಡುವಿನ ತಪ್ಪು ತಿಳುವಳಿಕೆಗೆ ಎರಡನೇ ಪ್ರಮುಖ ವಿಷಯವೆಂದರೆ ಅವರ ಕಾವ್ಯದ ನಿರಂತರ ಬದಲಾಗುವ ಸ್ವರೂಪ. ಸ್ವೀಡಿಷ್ ಕವಿಗಳ ಸ್ಥಿರವಾದ ಕೃತಿಗಳಿಗೆ ಒಗ್ಗಿಹೋದ ವಿಮರ್ಶಕರು ಎಕೆಲೋಫ಼್ ಸಂಕಲನದಿಂದ ಸಂಕಲನಕ್ಕೆ ಭಿನ್ನರಾಗಿದ್ದಾರೆ ಮತ್ತು ಪ್ರತಿ ಹೊಸ ಸಂಕಲನವು ಅವರು ಹಿಂದೆ ಪ್ರಕಟಿಸಿದ್ದನ್ನು ಬದಲಾಯಿಸುತ್ತದೆ ಎಂದು ದೂರಿದರು. ವಿಮರ್ಶಕರು ಎಕೆಲೋಫ಼್-ರ ಕೃತಿಗಳ ವೈವಿಧ್ಯತೆಯನ್ನು ಒತ್ತಿಹೇಳುವಲ್ಲಿ ಒಲವು ತೋರಿದರೆ, ಎಕೆಲೋಫ಼್ ಅವರ ಕಾಳಜಿ ಅವರ ಕಾವ್ಯದ ಅಂತರ್ನಿಹಿತ ನಿರಂತರತೆಯ ಬಗ್ಗೆ ಇರುತ್ತಿತ್ತು. ಅವರು ಕಾವ್ಯ ಬರೆಯುತ್ತಿರುವವರೆಗೆ, ಅವರ ಇಡೀ ಕೃತಿಗಳಲ್ಲಿ ಅವಿಚ್ಛಿನ್ನ ಚಲನೆ ಇತ್ತು ಮತ್ತು ಅವರ ‘ಸ್ಥಾನ’ ಯಾವಾಗಲೂ ಬದಲಾಗುತ್ತಿತ್ತು. ಅವರ ನಿಧನದ ಸಮಯದಲ್ಲಿ ಅವರ ಸಮಗ್ರ ಕಾವ್ಯದ ಬಗ್ಗೆ ಯಾವುದೇ ಸ್ವೀಕಾರಾರ್ಹ ಒಮ್ಮತದ ಅಭಿಪ್ರಾಯವಿರಲಿಲ್ಲ, ಮತ್ತು ನಾವು ನಿರ್ಣಯಿಸಬಹುದಾದ ಮಟ್ಟಿಗೆ, ಈಗಲೂ ಯಾವುದೇ ಒಮ್ಮತದ ಅಭಿಪ್ರಾಯವಿಲ್ಲ.

ಎಕೆಲೋಫ಼್ ಅವರು 1907-ರಲ್ಲಿ ಸ್ಟಾಕ್‌ಹೋಮ್‌ನಲ್ಲಿ ಜನಿಸಿದರು. ಅವರು ಲಂಡನ್ ಮತ್ತು ಉಪ್ಸಾಲಾದಲ್ಲಿ ಕೆಲ ಕಾಲದ ಮಟ್ಟಿಗೆ ಓರಿಯೆಂಟಲ್ ಭಾಷೆಗಳ ಅಧ್ಯಯನ ಮಾಡಿದರು, ಆದರೆ ಅವರು ತಮ್ಮ ಶಿಕ್ಷಣವನ್ನು ಪೂರ್ಣಗೊಳಿಸಲೇ ಇಲ್ಲ; ಆದಾಗ್ಯೂ, 1958-ರಲ್ಲಿ ಉಪ್ಸಾಲಾ ವಿಶ್ವವಿದ್ಯಾಲಯವು ಅವರಿಗೆ ಗೌರವ ಡಾಕ್ಟರೇಟ್ ನೀಡಿ ಸನ್ಮಾನಿಸಿತು.

1932-ರಲ್ಲಿ sent på Jorden (late arrival on earth) ಎಂಬ ಕವನ ಸಂಕಲನದೊಂದಿಗೆ ಎಕೆಲೋಫ಼್ ಅವರು ತಮ್ಮ ಕಾವ್ಯಪಯಣವನ್ನು ಪ್ರಾರಂಭಿಸಿದರು, ಇದು ಸ್ಟ್ರಾವಿನ್‌ಸ್ಕಿ-ಯ (Stravinsky) ಸಂಗೀತ‌ದಿಂದ ಹಾಗೂ ಎಕೆಲೋಫ಼್-ರ ಪ್ಯಾರಿಸ್ ವಾಸದಿಂದ ಪ್ರಭಾವಿತವಾದ ಅವರ ‘surrealistic suicide book’ ಎಂದು ಕರೆಯಲ್ಪಡುತ್ತದೆ. ಮುಕ್ತ ಛಂದಸ್ಸು ಮತ್ತು ಅಸಾಂಪ್ರದಾಯಿಕ ಪದ ಬಳಕೆಯ ಈ ಕ್ರಾಂತಿಕಾರಿ ಸಂಪುಟದ ನಂತರ Dedikation (1934) (Dedication) ಎಂಬ ಸಂಕಲನ ಪ್ರಕಟವಾಯಿತು; ಇದರ ನಂತರ, ಅವರ ವಿಶಿಷ್ಟವಾದ ದ್ವಂದ್ವತೆ ಮತ್ತು ಆವರ್ತಕ ಸ್ವರಗುಚ್ಛಗಳ, ಅವರ ಕಾವ್ಯಜೀವನಕ್ಕೆ ಮಹತ್ವದ ತಿರುವು ಕೊಟ್ಟ ಸಂಗ್ರಹ Färjesång (1941) (Ferry Song) ಪ್ರಕಟವಾಯಿತು.

1950-ರ ದಶಕದಲ್ಲಿ ಎಕೆಲೋಫ಼್ ಅವರು ಪೂರ್ಣ ರಚನೆಗಳಿಂದ ದೂರ ಸರಿದು, Strountes (1955) (Nonsense) ಸಂಕಲನದಲ್ಲಿ ಕಂಡಂತೆ ತುಣುಕು ರೂಪಕಗಳಲ್ಲಿ ಕಾವ್ಯರಚನೆ ಮಾಡಲು ಪ್ರಾರಂಭಿಸಿದರು. Strountes ಮತ್ತು En natt i Otocac (1961) (A night in Otocac) ಎಂಬ ಕವನ ಸಂಕಲನಗಳಲ್ಲಿ ಅವರು ‘absurd’ ಹಾಗೂ ‘anti-poetic’ ಕಾವ್ಯ ಪ್ರಯೋಗಗಳನ್ನು ಮಾಡಿದರು. En Mölna-Elegi (1960) (A Mölna Elegy) ಎಂಬ ಕಾವ್ಯಕೃತಿಯ ರಚನೆಯಲ್ಲಿ, ಅದನ್ನು ಬರೆದು ಮುಗಿಸುವಲ್ಲಿ ಎಕೆಲೋಫ಼್-ಗೆ ಸುಮಾರು ಇಪ್ಪತ್ತು ವರ್ಷಗಳ ಕಾಲ ಹಿಡಿಯಿತು. ಲ್ಯಾಟಿನ್ ಮತ್ತು ಗ್ರೀಕ್ ಭಾಷೆಗಳಲ್ಲಿನ ಅನೇಕ ಉಲ್ಲೇಖಗಳು ಮತ್ತು ಉದ್ಧರಣಗಳಿಂದ ತುಂಬಿದ ಕಷ್ಟಪಟ್ಟು ಬರೆದ ಕಾವ್ಯಕೃತಿ ಇದು. ಅವರ ಕಾವ್ಯಕೃಷಿಯ ಕೊನೆಯ ದಶಕದಲ್ಲಿ Dīwān över Fursten av Emgión (1965) (Diwan over the Prince of Emgión), Sagan om Fatumeh (1966) (The Tale of Fatumeh), and Vägvisare till underjorden (1967) (Guide to the Underworld) ಎಂಬ ಮೂರು ಸಂಕಲನಗಳು ಕಂಡು ಬರುತ್ತವೆ. ಈ ಮೂರು ಸಂಕಲನಗಳನ್ನು ಒಟ್ಟು ಸೇರಿಸಿ Byzantine Trilogy ಎಂದು ಕರೆಯುತ್ತಾರೆ. ಈ ಸಂಕಲನಗಳು ಎಕೆಲೋಫ಼್ ಅವರ ಇರುವಿಕೆ ಮತ್ತು ಕ್ಷಣಿಕತೆಯ ಏಕಕಾಲಿಕ ಅನುಭವದ ಅತ್ಯುತ್ತಮ ಕಾವ್ಯಾತ್ಮಕ ಅಭಿವ್ಯಕ್ತಿಯನ್ನು ಒಳಗೊಂಡಿದೆ.

ಸಾಹಿತ್ಯಕ್ಕಾಗಿರುವ ನೊಬೆಲ್ ಪ್ರಶಸ್ತಿಯೊಂದನ್ನು ಹೊರತುಪಡಿಸಿ, ಎಕೆಲೋಫ಼್ ಅವರಿಗೆ ಹಲವಾರು ಪ್ರಮುಖ ಪ್ರಶಸ್ತಿಗಳು ಹಾಗೂ ಸ್ವೀಡನ್ ದೇಶದ ಎಲ್ಲಾ ಪ್ರಮುಖ ರಾಷ್ಟ್ರೀಯ ಸಾಹಿತ್ಯ ಪ್ರಶಸ್ತಿಗಳು ಲಭಿಸಿವೆ. ಅವರ ಅತ್ಯುತ್ತಮ ಸಾಧನೆಯೆಂದು ಪರಿಗಣಿಸಲಾದ Byzantine Trilogy-ಯ ಮೂರು ಕವನ ಸಂಕಲನಗಳಿಗೆ 1966-ರಲ್ಲಿ ನಾರ್ಡಿಕ್ ಕೌನ್ಸಿಲ್ ಸಾಹಿತ್ಯ ಪ್ರಶಸ್ತಿಯನ್ನು ನೀಡಲಾಯಿತು. 1958-ರಲ್ಲಿ ಎಕೆಲೋಫ಼್ ಅವರು ಸ್ವೀಡಿಷ್ ರಾಯಲ್ ಅಕಾಡೆಮಿಯ ಸದಸ್ಯರಾದರು.

ಹದಿನೈದು ಕವನ ಸಂಕಲನಗಳನ್ನಲ್ಲದೆ, ಎಕೆಲೋಫ಼್-ರವರು ಹಲವಾರು ಭಾಷೆಗಳಿಂದ (ವಿಶೇಷವಾಗಿ ಫ್ರೆಂಚ್, ಜರ್ಮನ್, ಲ್ಯಾಟಿನ್, ಪರ್ಷಿಯನ್ ಮತ್ತು, ಗಮನಾರ್ಹವಾಗಿ, ಇಂಗ್ಲಿಷ್‌ನಿಂದ ಟಿ. ಎಸ್. ಎಲಿಯಟ್‌-ರ The Love Song of J. Alfred Prufrock) ಅನುವಾದಿಸಿದ ನಾಲ್ಕು ಅನುವಾದಿತ ಕವನ ಸಂಕಲನಗಳು, ಹಾಗೂ ನಾಲ್ಕು ಪ್ರಬಂಧ ಸಂಕಲನಗಳನ್ನು ಸಹ ರಚಿಸಿದರು. ಅವರು ಸ್ವೀಡಿಷ್ ಕವಿ ಈಡಿತ್ ಸೋಡರ್‌ಗ್ರಾನ್ ಅವರಿಂದ ಆಳವಾಗಿ ಪ್ರಭಾವಿತರಾಗಿದ್ದರು. ಎಕೆಲೋಫ಼್ ಅವರ ಶೈಲಿಯನ್ನು ಅನುಕರಿಸುವುದು ಕಷ್ಟವಾದರೂ, 1940-ರ ದಶಕದಿಂದ ಹಲವಾರು ಸ್ವೀಡಿಷ್ ಕವಿಗಳು ಅವರಿಗೆ ಋಣಿಯಾಗಿದ್ದಾರೆ.

ನಾನು ಇಲ್ಲಿ ಕನ್ನಡಕ್ಕೆ ಅನುವಾದ ಮಾಡಿರುವ ಗುನ್ನಾರ್ ಎಕೆಲೋಫ಼್-ರವರ ಒಂಬತ್ತು ಕವನಗಳಲ್ಲಿ ಮೊದಲ ಮೂರು ಕವನಗಳನ್ನು ಮಲೆನಾ ಮೋರ್ಲಿಂಗ್ (Malena Mörling) ಹಾಗೂ ಜೊನಸ್ ಎಲೆರ್ಸ್ತರೋಮ್ (Jonas Ellerström) ಜಂಟಿಯಾಗಿ, ಹಾಗೂ ನಂತರದ ಆರು ಕವನಗಳನ್ನು ಲೆನರ್ಡ್ ನೇಥನ್ (Leonard Nathan) ಹಾಗೂ ಜೆಮ್ಸ್ ಲಾರ್ಸನ್ (James Larson) ಜಂಟಿಯಾಗಿ ಮೂಲ ಸ್ವೀಡಿಷ್ ಭಾಷೆಯಿಂದ ಇಂಗ್ಲಿಷ್‌-ಗೆ ಅನುವಾದಿಸಿದ್ದಾರೆ.

(Leonard Nathan ಹಾಗೂ James Larson ಇಂಗ್ಲಿಷ್-ಗೆ ಅನುವಾದಿಸಿದ ಗುನ್ನಾರ್ ಎಕೆಲೋಫ಼್-ರವರ ಆಯ್ದ ಕವನಗಳ ಸಂಕಲನಕ್ಕೆ ಅವರಿಬ್ಬರು ಬರೆದ “ಇಂಟ್ರೊಡಕ್ಷಣ್”-ನಿಂದ ಆಯ್ದ ಭಾಗಗಳನ್ನು ಕನ್ನಡಕ್ಕೆ ಅನುವಾದಿಸಿ ಈ ಕವಿ-ಪರಿಚಯ ಲೇಖನದಲ್ಲಿ ಬಳಸಿರುವೆ; Songs of Something Else: Selected Poems of Gunnar Ekelof [The Lockert Library of Poetry in Translation]; Translated by Leonard Nathan and James Larson. New Jersey and Surrey: Princeton University Press, 1982)


ಕಾವ್ಯಮೀಮಾಂಸೆ
ಮೂಲ: Poetics

ಆಲಿಸಬೇಕು ನೀನು ನಿಶ್ಶಬ್ದವನ್ನು,
ಘೋಷಣೆಗಳ, ಸುಳುಹುಗಳ ಹಿಂದಿರುವ ನಿಶ್ಶಬ್ದವನ್ನು,
ಅಲಂಕಾರಶಾಸ್ತ್ರದಲ್ಲಿರುವ ಅಥವಾ
ವಿದ್ಯುಕ್ತವಾಗಿ ಸಂಪೂರ್ಣವೆಂದು
ಕರೆಯಲ್ಪಡುವಂತಹದರಲ್ಲಿರುವ ನಿಶ್ಶಬ್ದವನ್ನು.
ಇದು ಅರ್ಥಪೂರ್ಣತೆಯ ಒಳಗೆ
ಅರ್ಥಶೂನ್ಯತೆಯನ್ನು ಹುಡುಕುವ ಕಾರ್ಯ,
ಹಾಗೂ ಇದರ ತಿರುಗು ದಿಕ್ಕಿನ ಹುಡುಕಾಟವೂ ಹೌದು.
ಮತ್ತೆ ನಾನು ಕಲಾತ್ಮಕವಾಗಿ ರಚಿಸಲು ಯತ್ನಿಸುವ
ಎಲ್ಲವೂ
ಪ್ರತಿಯಾಗಿ ಕಲಾರಹಿತವಾದ ಯಾವುದೋ
ಒಂದರಂತೆ ಮೂಡಿಬರುತ್ತೆ.
ಹಾಗೂ
ಸಮಸ್ತ ಪೂರ್ಣತೆಯೊಳಗೆ ಶೂನ್ಯತೆ ತುಂಬಿದೆ.
ನಾನೇನು ಬರೆದಿರುವೆನೋ,
ಬರೆದಿರುವೆ ನಾನು ಸಾಲುಗಳ ನಡುವೆ.


ಹೂವುಗಳು ಕಿಟಕಿಯಲ್ಲಿ ನಿದ್ರಿಸುತ್ತಿವೆ
ಮೂಲ: The flowers are sleeping in the window

ಹೂವುಗಳು ಕಿಟಕಿಯಲ್ಲಿ ನಿದ್ರಿಸುತ್ತಿವೆ
ಹಾಗೂ
ಲಾಂದ್ರವು ಬೆಳಕನ್ನು ನಿಟ್ಟಿಸಿ ನೋಡುತ್ತಿದೆ,
ಮತ್ತೆ
ಕಿಟಕಿಯು ಕತ್ತಲಿನೊಳಗೆ ನಿರ್ಭಾವುಕವಾಗಿ ದಿಟ್ಟಿಸುತ್ತಿದೆ,
ತೈಲಚಿತ್ರಗಳು ತಮಗೆ ಒಪ್ಪಿಸಿದ ವಸ್ತುವನ್ನು
ನೀರಸವಾಗಿ ಪ್ರದರ್ಶಿಸುತ್ತಿವೆ,
ಹಾಗೂ
ನೊಣಗಳು ಗೊಡೆಗಳ ಮೇಲೆ ನಿಶ್ಚಲವಾಗಿ ನಿಂತು
ಆಲೋಚಿಸುತ್ತಿವೆ.

ಹೂವುಗಳು ರಾತ್ರಿಯ ಕಡೆಗೆ ವಾಲುತಿವೆ
ಹಾಗೂ
ಲಾಂದ್ರವು ಬೆಳಕನ್ನು ಚಿಮ್ಮಿಸುತಿದೆ,
ಬೆಕ್ಕೊಂದು ಮೂಲೆಯಲ್ಲಿ ಕೂತು ಮಲಗುವಾಗ
ಜತೆಯಿರಲೆಂದು ಉಣ್ಣೆಯ ನೂಲುಗಳನ್ನು ಹೆಣೆಯುತಿದೆ,
ಸ್ಟವ್ವಿನ ಮೇಲಿರುವ ಕಾಫಿ-ಕುಂಡ ಆಗಾಗ
ಆರಾಮದ ಗೊರಕೆ ಹೊಡೆಯುತ್ತಿರುತ್ತೆ,
ಮತ್ತೆ
ಮಕ್ಕಳು ನೆಲದ ಮೇಲೆ ಕೂತು
ಪದಗಳೊಂದಿಗೆ ಸದ್ದಿಲ್ಲದೆ ಆಟವಾಡುತ್ತಿದ್ದಾರೆ.

ಬಿಳಿಯ ಬಟ್ಟೆ ಹಾಸಿ ಸಜ್ಜಾಗಿರುವ ಮೇಜು
ಯಾರಿಗೋ ಕಾಯುತಿದೆ,
ಇನ್ನೆಂದೂ ಬರುವುದಿಲ್ಲ ಅವನ ಹೆಜ್ಜೆಗಳು
ಮೆಟ್ಟಲುಗಳ ಏರಿ.

ದೂರದಲ್ಲಿ ನಿಶ್ಶಬ್ದವನ್ನು ಭೇದಿಸುವ ರೈಲು
ವಸ್ತುಗಳ ರಹಸ್ಯವನ್ನು ಬಯಲು ಮಾಡುವುದಿಲ್ಲ,
ಆದರೆ ವಿಧಿಯು ಗಡಿಯಾರದ ಬಡಿತಗಳನ್ನು
ದಶಾಂಶಗಳಲ್ಲಿ ಎಣಿಸುತ್ತಿದೆ.


ಹಾಡಿದ ಹಾಡು
ಮೂಲ: Sung

ಈ ರಾತ್ರಿ ನಕ್ಷತ್ರಖಚಿತ ನಿರ್ಮಲ ರಾತ್ರಿ.
ನಿರ್ಮಲವಾದ ತಣ್ಣನೆಯ ಗಾಳಿ.
ಹುಡುಕುತ್ತಿದೆ ಚಂದಿರ ಎಲ್ಲ ವಸ್ತುಗಳಲ್ಲಿ
ಕಳೆದುಕೊಂಡ ತನ್ನ ಪಿತ್ರಾರ್ಜಿತಕ್ಕಾಗಿ.

ಒಂದು ಕಿಟಕಿ, ಒಂದು ಹೂವರಳಿದ ಕೊಂಬೆ,
ಅಷ್ಟೇ ಸಾಕು:
ಭೂಮಿಯಿಲ್ಲದೆ ಹೂವುಗಳಿಲ್ಲ.
ಆಕಾಶವಿಲ್ಲದೆ ಭೂಮಿಯಿಲ್ಲ.
ಸ್ವಲ್ಪವಾದರೂ ಅರಳಿಕೆಯಿಲ್ಲದೆ ಆಕಾಶವಿಲ್ಲ.


ದೂರವಾಣಿ ತಂತಿಗಳು
ಮೂಲ: Telephone lines

ದೂರವಾಣಿ ತಂತಿಗಳು ಗುನುಗುನಿಸುತ್ತಿವೆ ಈ ರಾತ್ರಿ
ಶ್ರುತಿಕಡ್ಡಿಯ ಧ್ವನಿ, ಮತ್ತೊಂದು ಧ್ವನಿ
ಏರುತ್ತೆ, ಇಳಿಯುತ್ತೆ, ನಿಲ್ಲುತ್ತೆ, ಮತ್ತೆ ಏರುತ್ತೆ
ಮತ್ತೊಂದು ಧ್ವನಿ, ಮತ್ತೆ ಈಗ ಗಾನಮೇಳದ ಹಾಗೆ
ಧ್ವನಿಗಳು ಕೂಡುತ್ತವೆ, ಬಗೆಯುತ್ತವೆ, ಏರುತ್ತವೆ
ಯಾರಾದರೂ ಮಾತನಾಡುತ್ತಿದ್ದಾರಾ ನಮ್ಮ ಒಳಗೆ ಕೇಳುವೆ ನೀ
ಯಾರ ದನಿಯೇನಾದರೂ ಕೇಳಿಬರುತ್ತಿದೆಯಾ ಕೇಳುವೆ ನೀ
ಯಾರ ದನಿಯಾದರೂ ನಮಗೇನಂತೆ
ನಾವು ಒಬ್ಬರಿನ್ನೊಬ್ಬರಿಗಾಗಿ ಹಾಡುವೆವು
ನಾವು ಒಬ್ಬರಿನ್ನೊಬ್ಬರ ಜತೆಗೂಡಿ ಹಾಡುವೆವು


ನೀನು ಇಷ್ಟು ದೂರ ಬಂದಿರುವೆಯಾದರೆ
ಮೂಲ: When you have come as far

ನನ್ನ ಹಾಗೆ ನೀನು ಕೂಡ ಅರ್ಥಹೀನತೆಯಲ್ಲಿ
ಇಷ್ಟು ದೂರ ಬಂದಿರುವೆಯಾದರೆ
ಪ್ರತಿ ಪದವು ಮತ್ತೊಮ್ಮೆ ಸ್ವಾರಸ್ಯಕರವಾಗುತ್ತೆ:
ಪುರಾತತ್ವದ ಗುದ್ದಲಿಯಿಂದ ಕಳಿಮಣ್ಣನ್ನು ಅಗೆಯುವಾಗ
ದೊರೆತ ನಿಧಿಗಳಂತೆ:
ಆ ಪುಟ್ಟ ಪದ “ನೀನು,”
ಯಾರದೋ ಕೊರಳಿನಲ್ಲಿ ಒಂದೊಮ್ಮೆ ಜೋತಿದ್ದ
ಒಂದು ಮಣಿಯಾಗಿದ್ದಿರಬಹುದು;
ಆ ವೈಭವದ ಪದ “ನಾನು,”
ಯಾವನೋ ಹಲ್ಲಿಲ್ಲದಂವ ಗಟ್ಟಿಯಾದ ಮಾಂಸವನ್ನು
ಸಿಗಿಯಲು ಬಳಸುತ್ತಿದ್ದ
ಚೂಪಾದ ಕಲ್ಲಿನ ಚೂರಾಗಿದ್ದಿರಬಹುದು.


ಏಕಾಂತ
ಮೂಲ: Solitude

ಆ ಏಕಾಂತ, ಏಕಾಂತ ಬೇಕೆಂಬ ಸಂಕಲ್ಪ
ಏಕಾಂತದ ಅಗತ್ಯ, ಕೊನೆಗೆ
ಏಕಾಂತದ ಸಿದ್ಧಾಂತ ಹಾಗೂ ಮತತತ್ವ –
ಒಪ್ಪಿಕೊಳ್ಳುವೆ ನಾನು
ಇದೆಲ್ಲದರ ಅರ್ಥ ಬಡತನವೆಂದು!
ಆದರೆ ಮನೋಭಾವದಿಂದ ಬಡವನಾಗಿರುವುದು ಅಗತ್ಯವೇ ಅಲ್ಲವೆ?
ಕುಗ್ಗುತ್ತಾ ಕುಗ್ಗುತ್ತಾ ಬೃಹತ್ತಾದ ಯಾವುದರಂತೋ ಆಗುವುದು!
ಬಡತನ ಬೇರೆ ಯಾವುದನ್ನೋ ಪ್ರತಿನಿಧಿಸುತ್ತದೆ
ಯಾರು ಶ್ರೀಮಂತನೋ ಅವನು ಮಾತ್ರ
ಬಡತನವನ್ನು ನಿರ್ವಹಿಸಬಲ್ಲ ಹಾಗೂ
ಯಾರಿಗೆ ಧ್ವನಿ ಕೇಳಿಸುತ್ತೋ ಅವನು ಮಾತ್ರ
ನಿಶ್ಶಬ್ದವನ್ನು ನಿರ್ವಹಿಸಬಲ್ಲ.


ನಿನಗೆ ನಾನು ಬರೆಯುತ್ತಿದ್ದೇನೆ
ಮೂಲ: I write to you

ನಿನಗೆ ನಾನು ಬರೆಯುತ್ತಿದ್ದೇನೆ ದೂರದ ನಾಡಿನಿಂದ
ಬಣ್ಣವಿಲ್ಲ ಅದಕ್ಕೆ
ನಿನಗೆ ಕೊಡಲು ಯಾವ ಪ್ರತಿಮೆಗಳೂ ಇಲ್ಲ ಅದರ ಹತ್ತಿರ
ನಿನಗೆ ಯೋಚಿಸಲಿಕ್ಕೆ ಯಾವ ಯೋಚನೆಯೂ ಕೊಡುವುದಿಲ್ಲ ಅದು
ಅದೊಂದು ದೂರದ ನಾಡು
ಹೇಗೆ ತಲುಪುವುದು ಆ ನಾಡನ್ನು?

ಅನುಸರಿಸುವುದರಿಂದ ಮಾತ್ರ ಸಾಧ್ಯ
ವಿಚಾರಗಳಿಂದ, ಅಭಿಪ್ರಾಯಗಳಿಂದಲ್ಲ
ಬೆನ್ನಟ್ಟುವುದರಿಂದ ಯಾವ ಪ್ರಯೋಜನವೂ ಇಲ್ಲ
ತೋರ್ಕೆಯಿಂದಲೂ ಯಾವ ಪ್ರಯೋಜನವೂ ಇಲ್ಲ:
ನಿನಗೆ ನಿಜವೆಂದು ಅನಿಸುವುದನ್ನು
ನಿಜವಾಗಿಯೂ ಅನುಸರಿಸಿದರೆ
ನೀನಲ್ಲಿ ತಲುಪುವೆ.
ನಿನ್ನ ಹಿಂದೆ ನೀನು ನಿನ್ನನ್ನು ಬಿಟ್ಟು ನಿನ್ನ ಹಿಂದೆ
ಮೈಲಿಗಳ ಮೈಲಿಗಳ ಮೈಲಿಗಳ ದಾಟಿ
ನಿನ್ನ ಹಿಂದೆ ನಿನ್ನ ಹಿಂದೆ ನೀನು ನಿನ್ನನ್ನು ಬಿಟ್ಟಾಗ
ನೀನಲ್ಲಿ ತಲುಪುವೆ.

ಅದೊಂದು ದೂರದ ನಾಡು
ನಿಕಟತೆ ಇಲ್ಲ ಅಲ್ಲಿ
ನೀನಲ್ಲಿಗೆ ಬಂದಾಗ ನಿನಗೊಂದು
ದೂರದ ನಾಡು ಕಂಡುಬರುತ್ತೆ ಅಷ್ಟೇ
ದೂರವಾಗಿರುವ ಒಂದು ನಾಡು
ಬೇರೆ ಏನೂ ಇಲ್ಲ ಅಲ್ಲಿ
ಆದ್ದರಿಂದ ಎಲ್ಲವೂ ಭಿನ್ನವಾಗಿದೆ
ಅಲ್ಲಿನ ಹುಲ್ಲು ದೂರವಾಗಿರುತ್ತೆ
ಹುಲ್ಲು ಮೇಯುವ ದನಗಳು ದೂರವಾಗಿರುತ್ತವೆ
ಮನೆಗಳು ಕೊಟ್ಟಿಗೆಗಳು ದೂರವಾಗಿರುತ್ತವೆ
ಲಾಯಗಳು ದೂರವಾಗಿರುತ್ತವೆ,
ಬಾವಿಗಳು ದೂರದಲ್ಲಿರುತ್ತವೆ
ಎಲ್ಲವೂ ದೂರವಾಗಿರುತ್ತವೆ – ನೆಲ ಮತ್ತು ಜಲ,
ಭೂಮಿ ಮತ್ತು ಆಕಾಶ ದೂರವಾಗಿದ್ದಂತೆ
ನೀನು ಮತ್ತು ನೀನು ಪ್ರೀತಿಸುವವಳು ದೂರವಾಗಿದ್ದಂತೆ
ಹೌದು, ಇದು ಹೀಗೆಯೇ,
ಹೇಗೆ ಇದೆಯೋ ಹಾಗೇಯೇ
ನಾಡಾಗಿರುವ ಒಂದು ನಾಡು ಅದು
ದೂರವಾಗಿರುವ ನಾಡು ಅದು, ಅದೂ ಒಂದು ನಾಡೇ ಹೌದು
ದೂರವಾಗಿರುವ ನಾಡು ಅದು


ರಾತ್ರಿಯಲ್ಲಿ ಮಲಗಿರುವುದು
ಮೂಲ: To lie by night

ತೆರೆದ ಕಿಟಕಿಯ ಮುಂದೆ ರಾತ್ರಿಯಲ್ಲಿ ಮಲಗಿರುವುದು
ಹೊರಗೆ ಅಡವಿಯೊಳಗಿನ ಪಿಸುಮಾತುಗಳನ್ನು ಆಲಿಸುವುದು
ಆಲೋಚನೆಗಳ ಬರವಿಗೆ ಕಾರಣವಾಗುತ್ತೆ:
ಎಲೆಗಳೊಳಗೆ ಅಲೆಗಳು ಬಂದು ಹೋಗುತ್ತಿರುತ್ತವೆ
ಹಡಗು ತನ್ನನ್ನು ನೇರ್ಪಡಿಸಿಕೊಳ್ಳುತ್ತೆ,
ಮತ್ತೆ ಮೇಲಕ್ಕೇಳುತ್ತೆ
ಬುಸುಗುಟ್ಟುವ ನೊರೆಗಳ ಶಿಖರಗಳು
ಹಡಗಿನ ಪಕ್ಕಗಳಿಂದ ಕುದಿಯುತ್ತಾ ಹೋಗುತ್ತವೆ –
ಈಗೀಗ ದಿನಗಳ, ಘಂಟೆಗಳ ಮೀರಿ,
ಈ ಲೋಕವ ಮೀರಿ
ನಾನು ಪಯಣಿಸುತ್ತಿದ್ದೇನೆಂಬ ಅನಿಸಿಕೆ ವಿರಳವಾಗಿದೆ!
ಆದಾಗ್ಯೂ, ಇಂದು ರಾತ್ರಿ ನಾನು ಸಾಧಿಸಿರುವೆ
ಅಡವಿಯ ಚಲಿಸುವ ಶಬ್ದವ ಮೀರಿ ಹೋಗಿರುವೆ:
ನಾಳೆ ನಾನು ಬೇರೊಂದು ನಾಡಿನಲ್ಲಿರುವೆನೆಂಬ
ವಿಷಯ ತಿಳಿದು ನೆಮ್ಮದಿಯೆನಿಸುತ್ತಿದೆ.


ಯಾಕೆ ಹಾಡುತ್ತಿರುವೆ ಓ ನನ್ನ ಹಕ್ಕಿಯೇ
ಮೂಲ: Why do you sing my bird

ಎಷ್ಟೊಂದು ಛಳಿಯಿದೆ ಈಗಲೂ,
ಆದರೂ ಯಾಕೆ ಹಾಡುತ್ತಿರುವೆ ಓ ನನ್ನ ಹಕ್ಕಿಯೇ?
ಮರದ ಜೀವರಸ ಏರಿ ಬರುತ್ತದೆಯೆ ನಿನ್ನೊಳಗೆ,
ಅಲ್ಲಿ ಎತ್ತರದ ರೆಂಬೆಯ ಮೇಲೆ
ಕೂತಿರುವ ಓ ಧ್ವನಿಗಳ ಕುಸುಮವೇ?
ನಿನ್ನ ಸುತ್ತಲಿನ ವ್ಯೋಮವನ್ನು ವ್ಯಾಕುಲತೆಯಿಂದ ತುಂಬುವೆ.
ಅಲ್ಲಿ ದೂರದಲ್ಲಿ ನಮ್ಮ ದೃಷ್ಟಿಯಿಂದ ಆಚೆಗೆ
ತನ್ನ ಕೊರೆಯುವ ಹಿಮದ ಜತೆಗೆ
ಒಂದು ಅಸ್ವಸ್ಥ ಸೂರ್ಯಾಸ್ತವಿದೆ.
ನಾಳೆಯೆಂಬುದು ಇಂದು, ಇತ್ತೀಚೆಗೆಂಬುದು ಈಗ,
ಹಾಗೂ ಇರುವುದೆಲ್ಲವೂ ಇಲ್ಲಿದೆ:
ಮನೆಯಿಲ್ಲದಿರುವಿಕೆಯಲ್ಲಿ ಮನೆ,
ಅನನುಸರಣೆಯಲ್ಲಿ ಅನುಸರಣೆ!
ಓ ವಲಸೆ ಹಕ್ಕಿಯೇ!

ನನ್ನ ಗತವು ನಿನ್ನೊಳಗೆ ಜೀವಿಸುತ್ತಿದೆ,
ಕಡಲಿನಾಚೆ ಬಿದ್ದವರು ಅಥವಾ ಬಿಸಿಲಿನಲ್ಲಿ ಸುಟ್ಟುಹೋದವರು,
ನಿನ್ನೊಳಗೆ ಜೀವಿಸುತ್ತಿರುವ ಇವರೆಲ್ಲರೂ,
ನಿನ್ನೊಳಗೆ ಮನುಜನಿಗೆ, ಮೃಗಕ್ಕೆ ದಾರಿಯಾಗಿ
ಮಾರ್ಗವಾಗಿ ಜೀವನವನ್ನು ಒಂದಾಗಿಸುವೆ ನೀನು.
ನಿಶ್ಚಲತೆಯೂ ಒಂದು ದಾರಿಯೇ
ತನ್ನಿಂದ ತನಗೆ ವಿದಾಯ ಹೇಳುವ ಈ ಸಂಜೆಯ ಹಾಗೆ.
ವಿದಾಯ ಹಕ್ಕಿಗೂಡಿನಲ್ಲಿದೆ,
ಗೂಡಿನ ಕೊನೆಯಲ್ಲಿರುವ ಮೊಟ್ಟೆಯಲ್ಲಿದೆ,
ನಮ್ಮ ಜತೆಗೆ ಹುಟ್ಟಿದ್ದು ಅದು.
ಅದಕ್ಕೇ ನೀನು ನನಗಾಗಿ ಹಾಡುತ್ತಿರುವೆ ಓ ಹಕ್ಕಿಯೇ,
ಅದಕ್ಕೇ ಈ ಒರಟು ಛಳಿ ಕೂಡ ಹೊಸತೆಂದನಿಸುತಿದೆ.
ಪ್ರಲೋಭಕ ನಾದಗಳು, ಪ್ರಲೋಭಕ ನಾದಗಳು ಕೇಳಿಬರುತ್ತಿವೆ,
ನಿನ್ನ ಕೊಕ್ಕಿನಲ್ಲಿ ನೀನು ಇಲ್ಲಮೆಯ ಕೀಟವನ್ನು ಹಿಡಿದಾಗ ನೀಗುವ ಹಸಿವೇ,
ಆಗ ಪ್ರತಿ ಕ್ಷಣವೂ ಶೂನ್ಯಭರಿತ ವ್ಯೋಮದಲ್ಲಿ ಅದೃಶ್ಯವಾಗುತ್ತೆ.