ಪಾತ್ರೆ ತೊಳೆಯುವುದು

ಅಮ್ಮ ಪಾತ್ರೆ ತೊಳೆಯಲು ಬಿಡುತ್ತಿರಲಿಲ್ಲ,
ಹೆಂಡತಿಗೆ ಇದರ ಬಗ್ಗೆ ಯಾವ ಅಳುಕೂ ಇಲ್ಲ.
ನನಗೂ ಗುಡಿಸಿ-ಸಾರಿಸುವುದಕ್ಕಿಂತ
ಪಾತ್ರೆ ತೊಳೆಯುವುದೇ ಮೇಲು ಅಂತ.
ಶ್ಯಾಮಲಾ ರಜ ಹಾಕಿದ ದಿನಗಳಲ್ಲಿ
ನನ್ನದೇ ಪಾತ್ರೆ ಮಂಜನ.

ಹೀಗಿರುವಾಗ, ಕೊರೊನಾ ಭೀತಿ ಬಂದು
ಮನುಜರೆಲ್ಲರೂ ಮನೆಸೆರೆಯಾದಾಗ,
ನನಗೆ ಈ ಕೆಲಸ ಪರ್ಮನೆಂಟಾಯಿತು.

ಎರಡು ಅಥವಾ ಮೂರು ದಿನಕ್ಕೊಮ್ಮೆ
ನೆಲ ಸಾರಿಸುವುದು,
ದಿನಾ ಪಾತ್ರೆ ತೊಳೆಯುವುದು.

ಕೆಲದಿನ ಮಧ್ಯಾಹ್ನ ನಾಲ್ಕು ಘಂಟೆಗೆ.
ಪಾತ್ರೆಯೆಲ್ಲ ತೊಳೆದ ಮೇಲೆ
ಒಂದು ಚಾ ಬಹುಮಾನ.
ಕೆಲದಿನ ಸಂಜೆ ಏಳು-ಏಳೂವರೆಯಷ್ಟ್ಹೊತ್ತಿಗೆ.
ಪಾತ್ರೆಯೆಲ್ಲ ತೊಳೆದ ಮೇಲೆ
ಊಟ ಬಹುಮಾನ.
ಕೆಲಸಲ ರಾತ್ರಿ ಊಟದ ನಂತರ.
ಪಾತ್ರೆಯೆಲ್ಲ ತೊಳೆದ ಮೇಲೆ
ನಿದ್ದೆ ಬಹುಮಾನ.

ಹಿನ್ನೆಲೆ ಸಂಗೀತ-ಗಾಯನವೂ ಇರುತ್ತಿತ್ತು,
ದಿನಾ ಬೇರೆ ಬೇರೆ ತರದ ಸಂಗೀತ.
ಮರಾಠಿ ರಂಗಗೀತೆ ಬಹಳ ಇಷ್ಟ,
ಸುಮಾರು ದಿನ ಇದನ್ನೇ ಕೇಳುತ್ತಿದ್ದೆ.
ಕೆಲದಿನ ಜ್ಯಾಜ಼್-ನ ಹಿನ್ನೆಲೆ,
ಕೆಲದಿನ ಮಧ್ಯಾಹ್ನಗಳಲ್ಲಿ ಭೀಮಣ್ಣನ ಭೀಮ್‌ಪಲಾಸಿ,
ಕುಮಾರ ಗಂಧರ್ವರ ನಿರ್ಗುಣಿ ಹಾಡುಗಳು,
ಕಿಶೋರ್ ಕುಮಾರ್ ಜತೆ ನಾನೂ ಹಾಡುತ್ತಿದ್ದೆ ಕೆಲದಿನ.
ಹೇಗೂ ಪಾತ್ರೆ ತೊಳೆಯಲೇ ಬೇಕು,
ಇವತ್ತು ಯಾವ ಸಂಗೀತ ಅಂತ
ನಿರ್ಧರಿಸುವುದೇ ಒಂದು ವಿನೋದ,
ಅದರಲ್ಲೊಂದು ಆನಂದ.

ಪಾತ್ರೆ ತೊಳೆಯುತ್ತಿರುವಾಗ,
ಓಹೋ … ಇವತ್ತು ಇಕ್ಕಳ ಕೈಜೋಡಿಸಿ
ನಮಸ್ಕಾರ ಮಾಡುತ್ತಿದೆ;
ನಮಸ್ಕಾರ, ಮಿಸ್ಟರ್ ಇಕ್ಕಳ, ಹೇಗಿದ್ದೀರಿ?

ಈ ಹಾಲಿನ ಕರೆ, ಎಣ್ಣೆಯ ಪಸೆ,
ತಿಕ್ಕುವುದು ಬಲು ತ್ರಾಸು.

ಕೆಲದಿನ ಮೊದಲು ಚಮಚ-ಸೌಟುಗಳು,
ನಂತರ ಪ್ಲೇಟುಗಳು, ಬಾಣಲೆ, ಕಾವಲಿ,
ದೊಡ್ಡ ಪಾತ್ರೆಗಳು, ಸಣ್ಣ ಪಾತ್ರೆಗಳು,
ಲೋಟಗಳು, ಕೊನೆಗೆ ಬಟ್ಟಲುಗಳು.
ಈ ಬಟ್ಟಲುಗಳು ತುಂಬಾ ಕಿರಿಕಿರಿ.

ಈ ಬಟ್ಟಲುಗಳ ಕಿರಿಕಿರಿ ಮುಗಿಸಿ ಬಿಡುವ
ಅಂತ ಕೆಲದಿನ ಮೊದಲು ಬಟ್ಟಲುಗಳು.
ಪ್ಲೇಟುಗಳು, ಬಾಣಲೆ, ಕಾವಲಿ
ತೊಳೆಯುವುದು ಸುಲಭ.
ಚಮಚ-ಸೌಟುಗಳು
ಒಂದೇ ಸಲ ತೊಳೆದುಬಿಡಬಹುದು.

ಆಹಾ, ಮಿಸ್ಟರ್ ಇಕ್ಕಳ,
ಇವತ್ತು ನೀವು ಮೊಸಳೆನಾ?

ಕೆಲವೊಂದು ದಿನ ದೊಡ್ಡ ಪಾತ್ರೆಗಳಿಂದ
ಮಂಜನ ಪ್ರಾರಂಭ.
ಕಿರಿಕಿರಿ ಬಟ್ಟಲುಗಳು ನಡುವಿನಲ್ಲಿ ತೂರಿಸಿಬಿಡುವುದು,
ಕೊನೆಗೆ ಚಮಚ-ಸೌಟುಗಳು.

ಹೇಗೂ ಪಾತ್ರೆ ತೊಳೆಯಲೇ ಬೇಕು.

04 September 2023

ಬುಧವಾರದ ಅತಿಥಿ

ಕಾಸು ಕಾಸು ಕೂಡಿಸಿ
ಮನೆ ಕಟ್ಟುವುದು,
ಅಲ್ಲ,
ಕಟ್ಟಿಸುವುದು;
ಮನೆಯ ಸುತ್ತ
ಕಾಂಪೌಂಡ್ ವಾಲ್
ಏರಿಸುವುದು;
ಗೋಡೆ ಮತ್ತು ಮನೆಯ
ಮಧ್ಯ ಜಾಗದಲ್ಲಿ
ಗಿಡ ಮರ ಬೆಳೆಸುವುದು;
ಸಣ್ಣ ಉದ್ಯಾನವೊಂದು ಏಳುವುದು;
ಚಿಟ್ಟೆಗಳು ಹಕ್ಕಿಗಳು ದುಂಬಿಗಳು
ಹಾರಾಡುವುದು;
ಕ್ರಿಮಿ ಕೀಟ ಹುಳ ಹುಪ್ಪಟೆ
ಇವೂ ಇರುವುದು.

ಇವೆಲ್ಲಕ್ಕಿಂತ ಮಜಾಂದ್ರೆ
ಪ್ರತಿ ಬುಧವಾರ ಮಧ್ಯಾಹ್ನ ಒಂದೂವರೆಗೆ
ಅಲಾರಮ್ ಇಟ್ಟುಕೊಂಡು
ಬಂದಹಾಗೆ ಬರುವ ಓತಿಕೇತ.

ಒಂದೊಂದು ಕಣ್ಣು ಒಂದೊಂದು ಕಡೆ
ಸ್ವತಂತ್ರವಾಗಿ ಗಿರ್ರನೆ ತಿರುಗುವುದು;
ಎಡ ಬಲ ಮೇಲೆ ಕೆಳಗೆ
ನೃತ್ಯವಾಗಿ ತಲೆ ಕೊಂಕಿಸುವುದು;
ಬಾಲ ಬೇರೆಯಾಗಿ ಆಡುವುದು;
ನಾಲಿಗೆ ಛಾವಟಿಯ ಹಾಗೆ
ರಪ್ ರಪ್ ಅಂತ ಫಕ್ಕನೆ ಚಲಿಸುವುದು;
ನಿಂತಲ್ಲೆ ಮೇಲೆ ಕೆಳಗೆ ಮುಂದೆ ಹಿಂದೆ
ಕಾಲುಗಳ ಏರಿಸುವುದು ಇಳಿಸುವುದು
ಮಡಚುವುದು ಚಾಚುವುದು;
ಬಣ್ಣ ಬಣ್ಣ ಬದಲಾಯಿಸಿ ತೋರಿಸುವುದು;
ಏಳೆಂಟು ನಿಮಿಷ ಹೀಗೆ ಪ್ರದರ್ಶನ
ಕೊಟ್ಟು ಲಂಚ್ ಮಾಡಿಕೊಂಡು
ಹೋಗಿಬಿಡುವುದು.

ಮತ್ತೆ ಮುಂದಿನ ಬುಧವಾರದ
ವರೆಗೆ ಕಾಯುವುದು.

14 November 2023

ಕಿಂದರಿಜೋಗಿ

ಶಿವಮೊಗ್ಗದ ಗಾಂಧಿ ಪಾರ್ಕಿನ ಎದುರು
ಲಾಟ್ರಿ ಟಿಕೆಟ್ ಮಾರುತ್ತಿದ್ದ ಅವನು
ಆಟೋದಲ್ಲಿ ಕೂತು
ಲೌಡ್ ಸ್ಪೀಕರ್-ನಲ್ಲಿ ದನಿಯವನದು
ಮೊಳಗುತ್ತಿತ್ತು:

“ಬನ್ನಿ ಸಾರ್ ಬನ್ನಿ
ಪಂಚ ಪಾಂಡವರಂತೆ
ಐದು ಬಣ್ಣಗಳಲ್ಲಿ
ಐದು ಶ್ರೇಣಿಗಳಲ್ಲಿ
ಕರ್ನಾಟಕ ರಾಜ್ಯ ಲಾಟ್ರಿ
ಬನ್ನಿ ಸಾರ್ ಬನ್ನಿ.”
(ಯಾವಾಗಲೂ ‘ಸಾರ್’ …😃)
“ಯಾರಿಗುಂಟು ಯಾರಿಗಿಲ್ಲ ಈ ಭಾಗ್ಯ
ಬನ್ನಿ ತೊಗೊಳ್ಳಿ ಸಾರ್
ಯಾರಿಗ್ಗೊತ್ತು
ಇವತ್ತು ಸೈಕಲ್ ಹೊಡಿತಿದ್ದೀರಾ
ನಾಳೆ ಕಾರ್-ನಲ್ಲಿ ಓಡಾಡಬಹುದು
ನಾಳೆ ಯಾರು ಕಂಡಿದ್ದಾರೆ
ಯಾರಿಗುಂಟು ಯಾರಿಗಿಲ್ಲ ಈ ಭಾಗ್ಯ
ಬನ್ನಿ ಸಾರ್ ಬನ್ನಿ.”

ನಲವತ್ತು ವರ್ಷಗಳ ಹಿಂದೆ
ಹೊಸದಾಗಿ ಬಂದಿದ್ದೆ ಶಿವಮೊಗ್ಗಕ್ಕೆ
ಕೇಳಿದ್ದೆ ಈ ಮಂತ್ರವ ಮೊದಲ ಸಲ ಆಗ.
ಶಿವಮೊಗ್ಗದಲ್ಲಿದ್ದ ಏಳು ವರ್ಷ
ಗಾಂಧಿ ಪಾರ್ಕಿನೊಳಗಿನಿಂದ
ಶಾರ್ಟ್-ಕಟ್ ತಗೊಂಡು
ಕಾಲೇಜಿಗೆ ಹೋಗುತ್ತಿದ್ದೆ,
ಲಾಟ್ರಿಯಂವ
ಮೊಳೆ ಹೊಡೆದ ಹಾಗೆ
ಅಲ್ಲೇ ಇರುತ್ತಿದ್ದ,
ಅದೇ ಮಂತ್ರ ಜಪಿಸುತ್ತಿದ್ದ.

ನಲವತ್ತು ವರ್ಷಗಳ ನಂತರ
ಆ ಮಂತ್ರ
ಉರು ಹೊಡೆದ ಹಾಗೆ
ಹಾಗೇ ನೆನಪಾಗುತ್ತಿದೆ
ಈಗ ಇಲ್ಲಿ
ಹೈದರಾಬಾದಿನಲ್ಲಿ.

ಈಗ ಅಲ್ಲಿ
ಬಹು ದೊಡ್ಡ ಬಂಗಾರ
ಮಾರುವ ಅಂಗಡಿ ಬಂದಿದೆ.

ಅದೂ ಒಂದು ಕನಸು,
ಇದೂ ಒಂದು ಕನಸು.

ಯಾರಿಗುಂಟು ಯಾರಿಗಿಲ್ಲ ಈ ಭಾಗ್ಯ!

04 January 2024