ಮಣಿಗೂ ಅವರು ಹೇಳುವುದು ಸರಿ ಎನಿಸಿತು. ತಾಯಿ ಮತ್ತು ತಂಗಿಯನ್ನು ನೋಡಿಕೊಳ್ಳುವ ಜವಾಬ್ದಾರಿ ಒಂದೇ ದಿನದಲ್ಲಿ ಮಣಿಯ ಹೆಗಲಿಗೆ ಜಾರಿಬಿದ್ದಿತ್ತು. ಸುಮತಿಯ ಮದುವೆಯನ್ನೂ ಮಾಡಬೇಕಾಗಿತ್ತು. ಕಾರ್ಮಿಕ ಮುಖಂಡರು, ಮಣಿ ಮತ್ತು ಕನಕಳಿಗೆ ಸಾಂತ್ವನ ಹೇಳಿ ಮಣಿಗೆ ಕೆಲಸಕ್ಕೆ ಅರ್ಜಿ ಹಾಕಲು ಎಲ್ಲ ಕಾಗದ ಪತ್ರಗಳನ್ನು ಬೇಗನೆ ತಯಾರುಮಾಡಿ ಕೊಡುವಂತೆ ಹೇಳಿ ಹೊರಟುಹೋದರು. ಆರ್ಮುಗಮ್, ಮಣಿಗೆ ಆದಷ್ಟು ಬೇಗನೆ ಕೆಲಸ ಮಾಡಿಕೊಡುವಂತೆ ಅಯ್ಯಪ್ಪನಿಗೆ ಹೋಗುವ ಮುಂಚೆ ಕೇಳಿಕೊಂಡರು.
ಡಾ. ಎಂ. ವೆಂಕಟಸ್ವಾಮಿ ಬರೆಯುವ “ಒಂದು ಎಳೆ ಬಂಗಾರದ ಕಥೆ” ಕಾದಂಬರಿಯ ಒಂಭತ್ತನೆಯ ಕಂತು ನಿಮ್ಮ ಓದಿಗೆ

ಅಧ್ಯಾಯ – 5

ಒಂದು ದಿನ ರಾತ್ರಿ ಗೋವಿಂದ ಕತ್ತಲಲ್ಲಿ ನಿಧಾನವಾಗಿ ನಡೆದು ಬಂದು ಸೆಲ್ವಮ್ ಮನೆ ಮುಂದಿದ್ದ ಕಲ್ಲುಬಂಡೆ ಮೇಲೆ ಕುಳಿತುಕೊಂಡನು. ಆಗಲೇ ಅಲ್ಲಿ ಕುಳಿತುಕೊಂಡಿದ್ದ ಸೆಲ್ವಮ್ ತನ್ನ ಜೇಬಿನಿಂದ ಒಂದು ಬೀಡಿಯನ್ನು ತೆಗೆದು ಗೋವಿಂದನ ಕೈಗೆ ಕೊಟ್ಟು ತಾನೊಂದನ್ನು ತುಟಿಗಳ ಮೇಲೆ ಇಟ್ಟುಕೊಂಡು ಬೆಂಕಿ ಕಡ್ಡಿ ಗೀರಿ ಬೀಡಿ ಹೊತ್ತಿಸಿಕೊಂಡು ತನ್ನ ಬೀಡಿಯನ್ನು ಗೋವಿಂದನ ಕೈಗೆ ಕೊಟ್ಟ. ಗೋವಿಂದ ಬೀಡಿಯನ್ನು ತನ್ನ ತುಟಿಗಳಲ್ಲಿ ಸಿಕ್ಕಿಸಿಕೊಂಡು ಇನ್ನೊಂದು ಬೀಡಿಯಿಂದ ಬೆಂಕಿ ತಗುಲಿಸಿ ಜೋರಾಗಿ ಎಳೆದು ಹೊಗೆ ಎಳೆದ. ಬೀಡಿ ಹೊತ್ತಿಕೊಂಡು ಜೋರಾಗಿ ಉರಿಯತೊಡಗಿತು. ಇಬ್ಬರೂ ಬೀಡಿ ಸೇದುತ್ತ ಎಷ್ಟೋ ಹೊತ್ತು ಹಾಗೇ ಕುಳಿತುಕೊಂಡಿದ್ದರು. ಗೋವಿಂದನಿಗೆ ಅಳು ಬರುವುದನ್ನು ತಡೆದುಕೊಳ್ಳಲು ಆಗಲಿಲ್ಲ. ಮನೆ ಒಳಗೆ ನಿದ್ದೆ ಬರದೇ ಮಲಗಿದ್ದ ಕನಕಳಿಗೆ ಯಾರೋ ಅಳುವ ಸದ್ದು ಕೇಳಿಬಂದು ಮಣಿಯನ್ನು ಎಬ್ಬಿಸಿ “ಮಣಿ ಮನೆ ಹೊರಗೆ ಯಾರೋ ಅಳುತ್ತಿರುವ ಸದ್ದು ಕೇಳಿಸುತ್ತಿದೆ” ಎಂದಳು. ಸೆಲ್ವಮ್ ಸತ್ತಾಗಿನಿಂದ ಮಣಿ ಮನೆಯಲ್ಲೇ ಮಲಗಿಕೊಳ್ಳುತ್ತಿದ್ದನು. ಮಣಿ ನಿಧಾನವಾಗಿ ಭಯದಿಂದಲೇ ಎದ್ದು ಬಾಗಿಲು ತೆರೆದುಕೊಂಡು ಹೊರಕ್ಕೆ ಬಂದು ನೋಡುತ್ತಾನೆ.

ಅರೆ ಕತ್ತಲಲ್ಲಿ ಕಲ್ಲಿನ ಮೇಲೆ ಯಾರೋ ಕುಳಿತುಕೊಂಡಿದ್ದಾರೆ. ಮೈಮೇಲೆ ಒಂದು ಸಣ್ಣ ಟವೆಲ್ ಇದೆ. ಆವಕ್ಕಾದ ಮಣಿಯ ಗಂಟಲಿಗೆ ಹೃದಯ ಬಂದಂತಾಗಿ ಹೆದರಿಕೊಂಡು ಕಿರಿಚಿಕೊಳ್ಳುವುದರೊಳಗೆ ಗೋವಿಂದ, “ಮಣಿ ನಾನು, ಗೋವಿಂದ” ಎಂದ. ಗೋವಿಂದನ ಸದ್ದು ಕೇಳಿ ಹೊರಕ್ಕೆ ಬಂದ ಕನಕ, “ಯಾಕಣ್ಣ ಇಲ್ಲಿ ಒಬ್ಬನೇ ಕುಳಿತುಕೊಂಡಿದ್ದೀಯ?” ಎಂದಳು. ಗೋವಿಂದ ಸ್ವಲ್ಪ ಹೊತ್ತು ಏನೂ ಮಾತನಾಡಲಿಲ್ಲ. ಕನಕ, ಕುಳಿತಿರುವುದು ಗೋವಿಂದಣ್ಣನೆ ಎಂದು ಖಾತರಿಪಡಿಸಿಕೊಂಡ ಮೇಲೆ “ಮಣಿ, ನಿಮ್ಮಪ್ಪ, ಗೋವಿಂದಣ್ಣ ಇಬ್ಬರೂ ರಾತ್ರಿ ಹೊತ್ತು ದಿನಾಗಲೂ ಇಲ್ಲಿ ಕುಳಿತುಕೊಂಡು ಬೀಡಿ ಸೇದ್ತಾ ಏನೇನೊ ಮಾತನಾಡಿಕೊಳ್ಳುತ್ತಿದ್ದರು. ಅದು ಜ್ಞಾಪಕ ಬಂದು ಗೋವಿಂದಣ್ಣ ಇಲ್ಲಿ ಕುಳಿತಿರಬೇಕು” ಎಂದಳು. ಅದನ್ನು ಮಣಿ ಕೂಡ ಅನೇಕ ಸಲ ನೋಡಿದ್ದನು.

ಗೋವಿಂದ, “ಕನಕಕ್ಕ ನೀನು ಮಲಗಕ್ಕ. ಮಣಿ ನೀನೂ ಒಳಗಡೆ ಹೋಗಿ ಮಲಗು. ಸೆಲ್ವಮ್ ಜ್ಞಾಪಕ ಬಂದಾಗೆಲ್ಲ ನಾನು ಇಲ್ಲಿಗೆ ಬಂದು ಕುಳಿತುಕೊಂಡು ಹೋಗ್ತೀನಿ. ನೀವೇನು ಭಯಪಡಬೇಡಿ. ಮಲಗಿಕೊಳ್ಳಿ” ಎಂದ. ಕನಕಳಿಗೆ ದುಃಖ ಒತ್ತರಿಸಿ ಬರುತ್ತಿತ್ತು. ಮಣಿಗೂ ಹಾಗೇ ಆಗಿತ್ತು. ಮಣಿ ಗೋವಿಂದನ ಪಕ್ಕದಲ್ಲಿ ಕಲ್ಲಿನ ಮೇಲೆ ಕುಳಿತುಕೊಳ್ಳುತ್ತಾ, “ಅಮ್ಮ ಸ್ವಲ್ಪ ಹೊತ್ತು ಗೋವಿಂದ ಮಾವನ ಜೊತೆ ಕುಳಿತುಕೊಂಡು ಬರ್ತೀನಿ. ನೀನು ಒಳಗಡೆ ನಡಿಯಮ್ಮ” ಎಂದ. ಕನಕ ಒಳಕ್ಕೆ ಹೋಗಿ ಚಿಲಕ ಹಾಕದೆ ಬಾಗಿಲು ಮುಚ್ಚಿ ಪಕ್ಕದಲ್ಲಿದ್ದ ಕಲ್ಲನ್ನು ಬಾಗಿಲಿಗೆ ಅಡ್ಡ ತಳ್ಳಿದಳು. ಅವರಿಬ್ಬರೂ ಬಹಳ ಹೊತ್ತು ಮಾತನಾಡುತ್ತ ಕುಳಿತುಕೊಂಡಿದ್ದರು, ಕತ್ತಲು ಅವರ ಮಾತುಗಳನ್ನು ಮೌನವಾಗಿ ಕೇಳಿಸಿಕೊಳ್ಳುತ್ತಿತ್ತು.

ಸೆಲ್ವಮ್ ಸತ್ತ 11ನೇ ದಿನ ತಿಥಿ ಮುಗಿದ ಮರು ದಿನ ಮಣಿಯ ಮಾವ ಆರ್ಮುಗಮ್ (ತಾಯಿಯ ಅಣ್ಣ), ಕಾರ್ಮಿಕರ ಯುನಿಯನ್ ಮುಖಂಡ ಅಯ್ಯಪ್ಪ ಮತ್ತು ಇನ್ನೊಬ್ಬ ಕಾರ್ಮಿಕ, ಮಣಿ ಮನೆ ಹೊರಗೆ ಕಲ್ಲಿನ ಮೇಲೆ ಕುಳಿತುಕೊಂಡು ಮಾತನಾಡುತ್ತಿದ್ದರು. ಗಣಿಗಳಲ್ಲಿ ಅಪಘಾತವಾಗಿ ಯಾರೇ ಕಾರ್ಮಿಕ ಸತ್ತೋದರೂ ಒಂದಷ್ಟು ಹಣ ದಪನ್ ಮಾಡಲು ತುರ್ತಾಗಿ ದೊರಕುತ್ತಿತ್ತು. ಅದನ್ನು ಬಿಟ್ಟರೆ ಸತ್ತ ಕಾರ್ಮಿಕನ ಕುಟುಂಬಕ್ಕೆ ಗ್ರ್ಯಾಚುಟಿ ಮತ್ತು ಭವಿಷ್ಯನಿಧಿ ಹೆಸರಿನಲ್ಲಿ ತೀರಾ ಕಡಿಮೆ ಹಣ ದೊರಕುತ್ತಿತ್ತು. ಇನ್ನು ಪಿಂಚಣಿ ಎಂಬ ಹೆಸರೇ ಗಣಿ ಕಾರ್ಮಿಕರಿಗೆ ಗೊತ್ತಿರಲಿಲ್ಲ. ಈ ಗ್ರ್ಯಾಚುಟಿ ಮತ್ತು ಭವಿಷ್ಯನಿಧಿಯನ್ನು ಪಡೆದುಕೊಳ್ಳಲು ಮಣಿ ಮತ್ತು ಅವನ ತಾಯಿ ನಾಲ್ಕಾರು ಸಲ ಆಡಳಿತ ಕಚೇರಿಗಳಿಗೆ ಅಲೆದಾಡಿ ಅಧಿಕಾರಿಗಳನ್ನು ನೋಡಿ ಬಂದರು. ಕೊನೆಗೂ ಒಂದಷ್ಟು ಹಣ ದೊರಕಿ ಸಮಾಧಾನವಾಗಿತ್ತು.

ಸತ್ತ ಕಾರ್ಮಿಕನ ಮಕ್ಕಳಲ್ಲಿ ಒಬ್ಬ ಗಂಡಿಗೆ ಮಾತ್ರ ಗಣಿಗಳಲ್ಲಿ ಕೆಲಸ ದೊರಕುತ್ತದೆ. ಬಂದಿದ್ದವರ ಜೊತೆಗೆ ಈಗ ಅದರ ಬಗ್ಗೆ ಮಾತುಕತೆ ನಡೆಯುತ್ತಿದ್ದು ಮಣಿಯನ್ನು ಕೆಲಸಕ್ಕೆ ಸೇರಿಕೊಳ್ಳುವಂತೆ, ಓದುವುದಿದ್ದರೆ ಕೆಲಸ ಮಾಡಿಕೊಂಡೇ ಮುಂದುವರಿಸಬಹುದು ಎನ್ನುವಂತೆ ಕಾರ್ಮಿಕ ಮುಖಂಡ ಅಯ್ಯಪ್ಪ ಮಣಿಗೆ ಸಲಹೆ ಮಾಡಿದರು. ಮಣಿಗೂ ಅವರು ಹೇಳುವುದು ಸರಿ ಎನಿಸಿತು. ತಾಯಿ ಮತ್ತು ತಂಗಿಯನ್ನು ನೋಡಿಕೊಳ್ಳುವ ಜವಾಬ್ದಾರಿ ಒಂದೇ ದಿನದಲ್ಲಿ ಮಣಿಯ ಹೆಗಲಿಗೆ ಜಾರಿಬಿದ್ದಿತ್ತು. ಸುಮತಿಯ ಮದುವೆಯನ್ನೂ ಮಾಡಬೇಕಾಗಿತ್ತು. ಕಾರ್ಮಿಕ ಮುಖಂಡರು, ಮಣಿ ಮತ್ತು ಕನಕಳಿಗೆ ಸಾಂತ್ವನ ಹೇಳಿ ಮಣಿಗೆ ಕೆಲಸಕ್ಕೆ ಅರ್ಜಿ ಹಾಕಲು ಎಲ್ಲ ಕಾಗದ ಪತ್ರಗಳನ್ನು ಬೇಗನೆ ತಯಾರುಮಾಡಿ ಕೊಡುವಂತೆ ಹೇಳಿ ಹೊರಟುಹೋದರು. ಆರ್ಮುಗಮ್, ಮಣಿಗೆ ಆದಷ್ಟು ಬೇಗನೆ ಕೆಲಸ ಮಾಡಿಕೊಡುವಂತೆ ಅಯ್ಯಪ್ಪನಿಗೆ ಹೋಗುವ ಮುಂಚೆ ಕೇಳಿಕೊಂಡರು.

ಬೆಳಿಗ್ಗೆ ಕನಕಳ ಅಣ್ಣ ಆರ್ಮುಗಮ್ ಮನೆ ಹೊರಗೆ ಕುಳಿತುಕೊಂಡು ತಂಗಿ ಕನಕಳಿಗೆ “ನೋಡಮ್ಮ ತಂಗಚ್ಚಿ. ಈಗ ಮಣಿ ಮತ್ತು ನನ್ನ ಮಗಳು ಸುಶೀಲ ಮದುವೆ ಬಗ್ಗೆ ಪ್ರಸ್ತಾಪ ಮಾಡುವುದು ಸರಿಯಲ್ಲ. ಮಣಿ ಮೊದಲು ಕೆಲಸಕ್ಕೆ ಸೇರಿಕೊಳ್ಳಲಿ. ಅನಂತರ ಮದುವೆ ಮಾತುಗಳನ್ನು ಮಾತನಾಡೋಣ” ಎಂದರು. ಕನಕ, “ಆ ವಿಷಯ ನಾನು ನೋಡಿಕೊಳ್ತೀನಿ ನೀನು, ನನಗೆ ಬಿಡಣ್ಣ” ಎಂದಳು. ಆರ್ಮುಗಮ್, “ಅಯ್ಯೋ ಆಗಲ್ಲಮ್ಮ ತಂಗಚ್ಚಿ. ಕಾಲ ಕೆಟ್ಟೋಗಿದೆ. ಇದೆ ಸಮಯ ಮಣಿಗೆ ಕೆಲಸ ಸಿಕ್ಕುತ್ತೆ ಅಂತ ಯಾರಾದರೂ ಮಣಿಗೆ ಗಾಳ ಹಾಕಬಹುದು. ನಿನಗೆ ಗೊತ್ತಲ್ಲ? ಗಣಿಗಳಲ್ಲಿ ಅಪಘಾತ ಆಗಿದ್ದೆ ಇಬ್ಬರು ಮೂವರು ಮಹಿಳೆಯರು ಹಣ ಬರುತ್ತೆ ಅಂತ ನಾನು ಅವರ ಪತ್ನಿ. ನಾನು ಇವನ ಪತ್ನಿ ಅಂತ ಹಣಕ್ಕಾಗಿ ಬರುವುದು? ಸಧ್ಯಕ್ಕೆ ಸೆಲ್ವಮ್ ಕೇಸ್‌ನಲ್ಲಿ ಯಾರೂ ಬರಲಿಲ್ಲ. ದೇವರ ದಯೆ” ಎಂದ. ಕನಕ, “ಅಯ್ಯೋ ಮಣಿ ಹಾಗೆಲ್ಲ ಹೋಗುವುದಿಲ್ಲಣ್ಣ. ಆ ವಿಷಯ ನನಗೆ ಬಿಟ್ಟುಬಿಡಿ” ಎಂದಳು. ಆರ್ಮುಗಮ್, “ಆಯಿತಮ್ಮ. ನೀನು ಇದ್ದೀಯ. ನನಗೇನೂ ಭಯ ಇಲ್ಲ ಬಿಡು” ಎಂದ. ಅಲಮೇಲು, ಅಣ್ಣ ತಂಗಿಯ ಮಾತುಗಳನ್ನು ಮನೆ ಒಳಗೆ ಕುಳಿತುಕೊಂಡು ಕೇಳಿಸಿಕೊಳ್ಳುತ್ತಿದ್ದಳು.

ಸಿಗರೇಟ್ ಕುಡಿಯುತ್ತಾ ಮನೆ ಕಡೆಗೆ ಬರುತ್ತಿದ್ದ ಮಣಿ, ಕನಕ ಮತ್ತು ಆರ್ಮುಗಮ್ ಮನೆ ಮುಂದೆ ಕಲ್ಲಿನ ಮೇಲೆ ಕುಳಿತುಕೊಂಡಿರುವುದನ್ನು ನೋಡಿ ದೂರದಲ್ಲೇ ಸಿಗರೇಟ್ ಬಿಸಾಕಿ ಹತ್ತಿರಕ್ಕೆ ಬಂದು “ಏನಮ್ಮ ಅಣ್ಣಾ ತಂಗಿ ಹೊರಗಡೆ ಕುಳಿತುಕೊಂಡು ಏನೋ ರಹಸ್ಯ ಮಾತನಾಡ್ತಾ ಇದ್ದಂತಿದೆ?” ಎಂದು ನಕ್ಕ. ಕನಕ, “ನಮ್ಮ ಕಷ್ಟ ನಾವು ಏನೋ ಮಾತನಾಡಿಕೊಳ್ತೀವಿ ನಿನಗ್ಯಾಕೆ ಬಿಡಪ್ಪ” ಎಂದಳು. ಎದ್ದುನಿಂತ ಆರ್ಮುಗಮ್, “ನಾನು ಬರ್ತೀನಿ ಮಣಿ. ನಿನಗೆ ಕೆಲಸ ಸಿಕ್ಕಿದ ಮೇಲೆ ಎಲ್ಲಾ ಸರಿಯೋಗುತ್ತೆ. ನಿಮ್ಮ ತಾಯಿ ತಂಗೀನ ಚೆನ್ನಾಗಿ ನೋಡಿಕೊಳ್ಳಪ್ಪ. ನಾವು ಊರಿಗೆ ಹೋಗ್ತಾ ಇದ್ದೀವಿ” ಎಂದ. ಮನೆ ಒಳಗಿದ್ದ ಅಲಮೇಲು ಮತ್ತು ಸುಮತಿ ಇಬ್ಬರೂ ಹೊರಕ್ಕೆ ಬಂದರು. ಎಲ್ಲರೂ ಸೇರಿ ಬಸ್ ನಿಲ್ದಾಣದ ಕಡೆಗೆ ನಡದೇಹೊರಟರು. ಕನಕ ಮತ್ತು ಮಣಿ ಬಸ್ ನಿಲ್ದಾಣಕ್ಕೆ ಹೋಗಿ ಆರ್ಮುಗಮ್ ಕುಟುಂಬವನ್ನು ಬಸ್ ಹತ್ತಿಸಿ ಬಂದರು.

ಹಿಂದಕ್ಕೆ ಬರುತ್ತಿದ್ದಾಗ ಮಣಿ, “ಅಣ್ಣ ತಂಗಿ ಇಬ್ಬರೂ ಸೇರಿಕೊಂಡು ಮಾವನ ಮಗಳನ್ನು ನನಗೆ ಕಟ್ಟಾಕಲು ಏನಾದರೂ ಪ್ಲಾನ್ ಮಾಡ್ತಾ ಇದ್ದೀರಾ? ಏನು?” ಎಂದ ನಗುತ್ತಾ. ಕನಕ ಅವನ ಕಡೆಗೆ ನೋಡುತ್ತ ಮನಸ್ಸಿನಲ್ಲೇ “ಈ ನನ್ನ ಮಗ ಅವರಪ್ಪನನ್ನೇ ಮೀರಿಸಿ ಬಿಡುತ್ತಾನೆ. ಎಲ್ಲವೂ ಅದೇಗೆ ಇವನಿಗೆ ತಿಳಿದುಬಿಡುತ್ತದೆ?” ಎಂದುಕೊಂಡಳು ಕಣ್ಣುಗಳಲ್ಲೇ.

(ಹಿಂದಿನ ಕಂತು: ಸ್ಫೋಟಕ್ಕೆ ಬಲಿಯಾದ ಬದುಕು..)