ಮಧ್ಯಂತರ

ಹುಣ್ಣಿಮೆಯಂತಹ ಗೆಳೆಯರು ಫೋನಿಸುವುದನ್ನು ನಿಲ್ಲಿಸಿರುತ್ತಾರೆ
ಯಾರದ್ದೋ ಸಂಜೆಯ ಖಾಲಿತನಗಳನ್ನು ತುಂಬಲು ನಾವೊಂದು ಕೇವಲ ಆಕೃತಿಯಾಗಿ ಉಳಿದಿರುತ್ತೇವೆ
ಸುತ್ತಲೂ ಕಿಕ್ಕಿರಿದ ಜನರ ನಡುವೆ ನಮ್ಮ ಪ್ರಭಾವಳಿಗೆ
ಅಸ್ತಿತ್ವವೇ ಇರುವುದಿಲ್ಲ
ನೆನಪಿಸಿಕೊಳ್ಳುವ ಎಲ್ಲಾ ಜಾಗಗಳೂ ಮತ್ತೇನೋ ಹೊಸಕೆಲಸದಲ್ಲಿ ನಿರತವಾಗಿರುತ್ತವೆ
ಮುಖಕ್ಕೆ ಬಿದ್ದ ನೀಲಿ ಬೆಳಕಲ್ಲಿ ನೂರಾರು ಇನ್ಸ್ಟಾ ರೀಲುಗಳು
ನದಿಯ ಸುಳಿಯ ಸೆಳವಿನಂತೆ ಒಳಕ್ಕೆ ಎಳೆಯುತ್ತಿರುತ್ತವೆ
ಆತ್ಮದ ದನಿಯೊಂದು ಕೂಗುತ್ತಿರುತ್ತದೆ
ಇಲ್ಲ ಇದಲ್ಲ ನೀನು ಇದ್ಯಾವುದೂ ಅಲ್ಲ
ಮುದವೊಂದು ಮರೆತು ಹೋಗಿ
ಉಸಿರು ಇರುವುದೇ ಕಟ್ಟಲಿಕ್ಕೆಂದು
ಕುಣಿಸುತ್ತಿರುತ್ತದೆ ತನ್ನದೆ ಲಯ ತಾಳದಲ್ಲಿ

ಉಸಿರು ಕುಸಿಯುವ ಆ
ಯಾವ ಮಾಯಕದಲ್ಲೋ ಏನೋ
ಇಲ್ಲಿ ಹೀಗೆ
ಬೀಗ ಜಡಿದಿದ್ದ ತಾರಸಿಯ ಮೇಲೆ
ಅದೇ ತಿಂಗಳ ಬೆಳಕು ಚೆಲ್ಲಿದೆ
ಬಟ್ಟೆಗಳು ದಾರಿಗಳಂತೆ ತೂಗುತ್ತಿವೆ
ತೆಂಗು ಗರಿಗಳು ತಾಯಿಯಂತೆ ಕುಶಲ ಕೇಳಿವೆ
ಗಂಟಲ ಸೆರೆ ತಂತಾನೆ ಉಬ್ಬಿ ಕಣ್ಣಲ್ಲಿ ನೀರ ಬಿಂದು
ಹುಸಿನೀರ ಹುಡುಕಿ ಅಲೆದದ್ದು ನೆನಪಿಗೆ ನಿಂತಿವೆ
ಖಾಲಿ ಹಾಳೆಯ ಮೇಲೆ ಪದದ ಕರುಣೆ ಮತ್ತೆ ಕೈ ಹಿಡಿದಿದೆ
ಒಂಟಿತನದ ಒಂದೊಂದೇ ಅಕ್ಷರ ಈಗ ಮಾಯವಾಗುತ್ತಿದೆ

ಈ ಕಿಟಕಿ ಈ ಕುರ್ಚಿ ಈ ಮೌನ
ಒಂಟಿತನ ಈ ಕ್ಷಣಕ್ಕೆ ಏಕಾಂತದ ವೇಷ ಹಾಕಿರಬಹುದು
ಈ ಹೊತ್ತು
ಕಣ್ಣಾ ಮುಚ್ಚಾಲೆಯಾಟಕ್ಕೆ ಕೇವಲ ಮಧ್ಯಂತರವಿರಬಹುದು
ಮಾಯಕವೊಂದು ಮತ್ತೆ ನಿದ್ದೆ ಹೋಗಿರಬಹುದು…