ಮ್ಯಾಜಿಕ್ಕು

ಎಷ್ಟು ಕತ್ತರಿಸಿದರೂ ಮತ್ತೆ ಬೆಳೆಯುವ ಉಗುರಿನ ಹಾಗೆ
ಟೇಬಲ್ಲುಗಳ ಮೇಲೆ ಸೇರಿಕೊಳ್ಳುವ ಕಾಗದದ ಚೂರುಗಳು
ಅಸಡಾಬಸಡಾ ಆಗಿ ಆಕಳಿಸುತ್ತಾ ಬಿದ್ದಿರುವ ವಸ್ತುಗಳು
ನೆನಪಿಗಿರಲೆಂದು ಹಾವಪೊರೆಯಂತೆ ಮೂಡಿದ ಕಾಫಿ ಕಲೆಯ ಗುರುತುಗಳು
ಮತ್ತೆ ಓದಿದರಾಯಿತೆಂದು ಕಿವಿ ಮಡಚಿ ಬಿಸಾಡಿರುವ ಪುಸ್ತಕದ ಪುಟಗಳು
ಬದುಕಿನದ್ದೇ ರೂಪದಂತಿರುವ ಇಯರ್ ಫೋನಿನ ಸಿಕ್ಕುಗಳು
ಅರ್ಧಂಬರ್ಧ ತುಂಬುಳಿದ ಪದಬಂಧದ ಖಾ ಲಿ ಚೌಕಗಳು
ಏನೋ ಕಟ್ಟಲು ಹೋಗಿ ಮತ್ತೇನೋ ಗೋಜಲಾಗುವ ಆಲೋಚನೆಗಳೆಲ್ಲಾ
ಎಲ್ಲಾ ಇಷ್ಟೇ
ಇನ್ನು ಇದಿಷ್ಟೇ
ನೀನು ಇದಷ್ಟೇ ಎಂದು ಪಿಸುಗುಟ್ಟುವಾಗ
ದೀರ್ಘವಾದೊಂದು ಉಸಿರೆಳೆದು
ಆ ನಿನ್ನ ಪುಟ್ಟ ಕೈಗಳ ಬಳಸಿ
ಎಲ್ಲವನ್ನೊಮ್ಮೆ ಪಕ್ಕಕ್ಕೆ ಸರಿಸಿ
ಜಡವನ್ನೆಲ್ಲ ಕೊಂಚ ಹದ ಮಾಡಿ ಜೀವ ತುಂಬಿದ ಹಾಗೆ
ನೀರು ಚಿಮುಕಿಸಿ ಬಟ್ಟೆಯನು ಹಸಿ ಮಾಡಿ ಒರೆಸಿ
ಅಟ್ಟದ ಮೇಲಿದ್ದ ಹಳೆಯ ದಿನಪತ್ರಿಕೆಯ ಸಿನಿಮಾ ರಂಜನೆಯ ಪುಟವೊಂದನ್ನು ಹೊಸದಾಗಿ ಹಾಸಿ
ಕೆನ್ನೆ ಗಿಂಡಿ ಕಣ್ಣು ಮಿಟುಕಿಸುವ ಪ್ರೇಮಿಯ ಹಾಗೆ
ಮತ್ತೊಂದು ಹೊಸ ಆಟಕ್ಕೆ ಕರೆಯುವ ತುಂಟತನದಲ್ಲಿ
ಅದೇ ಕೋಣೆಯ ಅದೇ ಬೆಳಕಿನ ಧಾರೆಯನ್ನು ಹೊಸ ರೂಪದಲ್ಲಿ ಕಾಣುವ ನಿನ್ನ ಕಣ್ಣುಗಳಲ್ಲಿ
ಸಂಜೆಯ ಅಂಗಳಕ್ಕೆ ನೀರೊಡೆದಾಕ್ಷಣ ಏಳುವ ಮಣ್ಣಿನ ಘಮದ ಹಾಗೆ
ನಿಂತ ನೆಲ ಕಾಲ ಕೆಳಗೆ ಕುಸಿಯುವಾಗ ಆಕಾಶಕ್ಕೆ ಮುಖಮಾಡಿ ಮರವಾಗಿ ರೆಕ್ಕೆಬಿಚ್ಚುವ ವಿಶ್ವಾಸದಲ್ಲಿ
ಮಿಣುಕುಹುಳುಗಳ ಸಂಗ ಕಟ್ಟುವಾಗ ಅವರ ತವರ ಕತ್ತಲ ನೆನಪನ್ನೂ ಸೇರಿಸಿಕೊಳ್ಳುವ ಮಮತೆಯಲ್ಲಿ
ಎಂಥದೆಂತು ಘನಕಾರ್ಯಗಳ ಚರ್ಚೆ ಮುನಿಸುಗಳೆಲ್ಲ ಕೂಡಿ ಅನ್ನ ಬೇಯಿಸುವಾಗ ಆವಿಯಾಗುವ ಘಳಿಗೆಗಳಲ್ಲಿ
ಸ್ನೇಹಿತರ ಜೊತೆ ಹರಟುವ ಮೆಹಫಿಲ್ಲಿನಲ್ಲಿ ಆರಾಮಾಗಿ ಕವಿತೆ ಓದುವ ನಿನ್ನ ಪ್ರೀತಿಯಲ್ಲಿ
ದೈನಿಕದೊಳಗಿನ ಪುಟ್ಟ ಕ್ರಾಂತಿಗಳನ್ನು ಸಂಭ್ರಮಿಸುವಲ್ಲಿ
ಕಾಲುದಾರಿಗಳಲ್ಲಿ ನಡೆವ ನಿನ್ನ ಬಯಕೆಗಳಲ್ಲಿ
ಹಸ್ತಲಾಘವಗಳ ಅಪ್ಪುಗೆಯ ಬಿಸುಪಿನಲ್ಲಿ
ಹರಿಯುತ್ತದೆ ಮ್ಯಾಜಿಕ್ಕು
ನದಿಯಂತೆ
ಜೀವಸೆಲೆಯಂತೆ
ಪ್ರಿಯ ಗೆಳತಿ ನೀನೊಬ್ಬಳು ಮ್ಯಾಜಿಕ್ ಸುಂದರಿಯಂತೆ
ಎಂದೆ ಮೆಚ್ಚಿಸಲು ಅಳುಕುತ್ತಾ
ಅವಳು ಫಳ್ಳನೆ ಜೋರಾಗಿ ನಕ್ಕಳು
ನಕ್ಕು ಭುಜತಟ್ಟಿ ಎಂದಳು
ವಿಶ್ವಾಸದಿಂದೆಂಬಂತೆ
ನನಗೆ ಗೊತ್ತು
ಮ್ಯಾಜಿಕ್ಕು