ನನಗೆ ಒತ್ತಡ ಶುರುವಾಗಿ ಪರೀಕ್ಷೆಯ ಪ್ರವೇಶ ಪತ್ರವನ್ನು ಎಲ್ಲಾ ಕಡೆ ಹುಡುಕಿದಾಗ ರಾತ್ರಿ 10 ಘಂಟೆಯವರೆಗೂ ನನಗೆ ಸಿಗಲಿಲ್ಲ. ನನಗೆ ಏನು ಮಾಡಬೇಕು ಅಂತಾನೆ ಗೊತ್ತಾಗಲಿಲ್ಲ. ಟೆನ್ಷನ್ ಆಗಿ ಏನು ಮಾಡಬೇಕು ಎಂದು ಗೊತ್ತಾಗದೇ ಕುಳಿತಿದ್ದಾಗ ರಾತ್ರಿ 10 ಗಂಟೆಯ ಸುಮಾರಿಗೆ ನಮ್ಮ ಸೀನಿಯರ್ ‘ಅನಿಲ್’ ಹಾಸ್ಟೆಲ್ ಮೈದಾನದಲ್ಲಿ ‘ನಿನ್ನ ಹಾಲ್ ಟಿಕೆಟ್ಟು ಸಿಕ್ಕಿತು’ ಎಂದು ತಂದುಕೊಟ್ಟಾಗ ‘ಬದುಕಿದೆಯಾ ಬಡ ಜೀವವೇ’ ಎಂದುಕೊಂಡು ಆಗ ಇಂಗ್ಲೀಷ್ ಓದಲು ಕುಳಿತೆ. ಓದಿದ್ದು ಕೇವಲ ಕೆಲ ಪಾಠಗಳ ಕನ್ನಡ ಸಾರಾಂಶವಷ್ಟೇ!! ಇಷ್ಟರಲ್ಲೇ ಹೋಗಿ ಇಂಗ್ಲೀಷ್ ಪರೀಕ್ಷೆ ಬರೆದೆ.
ಬಸವನಗೌಡ ಹೆಬ್ಬಳಗೆರೆ ಬರೆಯುವ ‘ಬದುಕು ಕುಲುಮೆʼ ಸರಣಿಯ ಮೂವತ್ತನೆಯ ಕಂತು ನಿಮ್ಮ ಓದಿಗೆ
ಕ್ರಿಕೆಟ್ಟಿನಲ್ಲಿ ಬ್ಯಾಟ್ಸ್ ಮ್ಯಾನ್ ಫಾರ್ಮ್ ಕಳೆದುಕೊಂಡಾಗ ಹೊಡೆಯೋ ರನ್‌ನಂತೆ ನನ್ನ ಅಂಕಗಳು ದ್ವಿತೀಯ ಪಿಯುಸಿಯ ಪೂರ್ವಸಿದ್ಧತಾ ಪರೀಕ್ಷೆಯಲ್ಲಿ ಬಂದಿದ್ದವು. ನನಗೆ ಈಗ ಟೆನ್ಷನ್ ಶುರುವಾಯಿತು. ಮನೆಯಲ್ಲಿ ನನಗೆ ‘ಫೇಲಾದರೆ ಶಾಲೆ ಬಿಡಿಸುತ್ತೇವೆ’ ಎಂದು ಹೇಳಿದ್ದರು. ‘ಏನ್ಮಾಡೋದಪ್ಪಾ?’ ಅನ್ನೋ ಸಮಯದಲ್ಲಿ ನನ್ನ ಪಕ್ಕದ ರೂಮಿನಲ್ಲಿದ್ದ ಬಿ.ಎಸ್ಸಿ. ಓದುತ್ತಿದ್ದ ಸೀನಿಯರ್‌ಗಳಾದ ಹಾಲೇಶಣ್ಣ ಹಾಗೂ ಸಿದ್ದೇಶಣ್ಣ ನನಗೆ ತುಂಬಾ ಸಪೋರ್ಟ್ ಮಾಡಿದ್ದರು. ಅವರು ನನ್ನನ್ನು ತಮ್ಮ ಸ್ವಂತ ತಮ್ಮನಂತೆ ಓದೋಕೆ ಒತ್ತಡ ಹಾಕೋಕೆ ಶುರು ಮಾಡಿದ್ರು. ಅವರ ರೂಮಿನಲ್ಲಿ ನನಗೆ ಓದೋಕೆ ಕರೆದುಕೊಂಡು ಹೋಗ್ತಿದ್ರು. ನಮ್ಮ ಹಾಸ್ಟೆಲ್ಲಿನಲ್ಲಿ ಪಿಯುಸಿ ಓದುತ್ತಿದ್ದ ನನ್ನ ಕ್ಲಾಸ್ ಮೇಟ್‌ಗಳು ಅಷ್ಟಾಗಿ ಓದುತ್ತಿರಲಿಲ್ಲವಾದ್ದರಿಂದ ನನಗೆ ಅವರ ಜೊತೆ ಸೇರಲು ಬಿಡುತ್ತಿರಲಿಲ್ಲ. ಅವರು ಕಾಲೇಜಿಗೆ ಹೋಗುವಾಗ ಅಥವಾ ಎಲ್ಲಿಗಾದರೂ ಹೋಗುವಾಗ ಅವರು ನನ್ನನ್ನು ಅವರ ರೂಮಿನಲ್ಲಿ ಇರಿಸಿ ನನಗೆ ‘ಇಷ್ಟೇ ಓದಬೇಕು’ ಎಂಬ ಟಾರ್ಗೆಟ್ ಕೊಟ್ಟು ಹೊರಗಡೆಯಿಂದ ಬೀಗ ಹಾಕಿಕೊಂಡು ಹೋಗುತ್ತಿದ್ದರು! ವಾಪಸ್ಸು ಅವರು ರೂಮಿಗೆ ಬಂದು ನನಗೆ ಅವರು ಕಲಿಯಲು ಕೊಟ್ಟ ಪ್ರಶ್ನೆಗಳಿಗೆ ಉತ್ತರ ಕೇಳುತ್ತಿದ್ದರು. ಇದರಿಂದ ನನಗೆ ಕಲಿಯುವ ಒತ್ತಡ ಶುರುವಾಯ್ತು. ಸೀರಿಯಸ್ ಆಗಿಯೇ ಓದಿ ಅವರು ಕೇಳಿದ ಎಲ್ಲಾ ಪ್ರಶ್ನೆಗಳಿಗೆ ಉತ್ತರವನ್ನು ಒಪ್ಪಿಸುತ್ತಿದ್ದೆ. ಇದು ಹಾಗೆಯೇ ಮುಂದುವರೆಯಿತು. ಅವರು ಪ್ರಶ್ನೋತ್ತರಗಳನ್ನು ಕೇಳುವುದಷ್ಟೇ ಅಲ್ಲದೇ ನನಗೆ ತಿನ್ನಲು ಮೊಳಕೆ ಭರಿಸಿದ ಕಾಳನ್ನು ಕೊಡುತ್ತಿದ್ದರು.
ಹೀಗೆ ದಿನದಿನವೂ ನನಗೆ ಪಾಸ್ ಆಗುವ ಆತ್ಮವಿಶ್ವಾಸ ಬರುತ್ತಾ ಹೋಯಿತು. ಸಿಲಬಸ್ ಬಹಳ ಇದ್ದುದರಿಂದ ಹಾಗೂ ನಾನು ಶಿಕ್ಷಕರ ಬೋಧನೆ ಕೇಳದ ಪಾಠಗಳು ಇದ್ದುದರಿಂದ ನಾನು ಓದಿ ನೆನಪಿನಲ್ಲಿಟ್ಟುಕೊಳ್ಳೋ ಸುಲಭ ತಂತ್ರಗಳನ್ನು ಹುಡುಕುತ್ತಿದ್ದೆ. ಆಗ ನನಗೆ ನನ್ನ ಗೆಳೆಯ ಶಿವರಾಜನ ಮನೆಯಲ್ಲಿ ಸಿಕ್ಕಿದ್ದೇ ‘ರಾಜ್ ಬಪ್ನಾಸ್ ಮೈಂಡ್ ಪವರ್ ಸ್ಟಡಿ ಟೆಕ್ನಿಕ್ಸ್’ ಎಂಬ ಇಂಗ್ಲೀಷ್ ಪುಸ್ತಕ. ಇದನ್ನು ಓದಿದೆ! ಪರೀಕ್ಷೆಗೆ ಮೀಸಲಾಗಿದ್ದ ಪುಸ್ತಕಗಳನ್ನು ಓದೋದನ್ನು ಬಿಟ್ಟು ನಾನು ಇದೇ ಪುಸ್ತಕವನ್ನು ಒಂದೆರಡು ದಿನ ಓದಿ ಇದರಲ್ಲಿರುವ ತಂತ್ರಗಳನ್ನು ಅನುಸರಿಸೋಕೆ ಶುರು ಮಾಡಿದೆ. ನಾನು ಈ ತಂತ್ರಗಳನ್ನು ನನ್ನ ಗೆಳೆಯ ಲಿಂಗರಾಜನಿಗೂ ಹೇಳಿಕೊಟ್ಟೆ. ಇದೇ ತಂತ್ರಗಳನ್ನು ಸಾಧ್ಯವಿದ್ದ ಕಡೆ ಬಳಸೋಕೆ ಶುರು ಮಾಡಿದೆ. ಇವು ಫಲ ಕೊಟ್ಟವು.
ನಾನು ಈಗ ಲಿಂಗರಾಜನಿದ್ದ ರೂಮಲ್ಲೇ ಉಳಿಯತೊಡಗಿದೆ. ಅಲ್ಲಿ ಮಹಾಂತೇಶ ಎಂಬ ಹೆಸರಿನವನಿದ್ದ. ಅವನೂ ನಮ್ಮ ಕಾಲೇಜಿನವ. ಪಕ್ಕದ ರೂಮಿನಲ್ಲಿ ಒಬ್ಬ ಇಂಜಿನಿಯರಿಂಗ್ ಸೀನಿಯರ್ ಇದ್ದರು. ಅವರ ವಿಶೇಷ ಏನಪ್ಪಾ ಅಂದ್ರೆ ಅವರು ಓದಲು ಶುರು ಮಾಡುವಾಗ ಕ್ಯಾಸೆಟ್ ಹಾಕಿ ಕೇಳುವಂತೆ ಇದ್ದ ಚಿಕ್ಕ ಟೇಪ್ ರೆಕಾರ್ಡರ್ (ವಾಕ್ ಮ್ಯಾನ್) ನಲ್ಲಿ ಹಾಡನ್ನು ಹಾಕಿ ಈಯರ್ ಫೋನನ್ನು ಕಿವಿಯಲ್ಲಿ ಇಟ್ಟುಕೊಂಡು ಓದಲು ಶುರು ಮಾಡುತ್ತಿದ್ದರು. ನನಗೆ ಅವರನ್ನು ನೋಡಿ ತುಂಬಾ ವಿಶೇಷ ಎನಿಸೋದು. ತಡೆದುಕೊಳ್ಳಲಾರದೇ ಅವರಿಗೆ ಈ ಬಗ್ಗೆ ಕೇಳಿಯೇ ಬಿಟ್ಟೆ. ‘ಅದು ಹೇಗೆ ನೀವು ಓದುತ್ತೀರಿ ಈ ರೀತಿ ಹಾಡು ಹಾಕಿಕೊಂಡು?’ ಎಂದು. ಅವರು ಅದಕ್ಕೆ ಅವರು ‘ನನಗೆ ಹಾಡು ಹಾಕಿಕೊಳ್ಳದೇ ಓದಲು ಆಗುವುದಿಲ್ಲ’ ಎಂಬ ಅವರ ಉತ್ತರ ನನ್ನನ್ನು ದಂಗುಬಡಿಸಿತ್ತು. ನನ್ನ ರೂಮ್ ಮೇಟ್ ಹತ್ತಿರ ಇದು ಇತ್ತು. ನಾನೂ ಈ ರೀತಿ ಹಾಡನ್ನು ಹಾಕಿಕೊಂಡು ಓದಲು ಪ್ರಯತ್ನಿಸಿ ಸೋತೆ. ನನಗೆ ಓದಿದ್ದಕಿಂತ ಹಾಡೇ ನೆನಪಾಗುತ್ತಿತ್ತು!! ಹಾಗಾಗಿ ಇದರ ಪ್ರಯತ್ನ ಕೈ ಬಿಟ್ಟೆ.
ನನಗೆ ಹಾಡು ಕೇಳುವುದು ಅಂದರೆ ಪಂಚಪ್ರಾಣವಾಗಿತ್ತು. ಆದರೆ ಆಗ ಈಗಿನಂತೆ ಸೌಲಭ್ಯಗಳು ಇರಲಿಲ್ಲ. ಹಾಡು ಕೇಳಲು ಕ್ಯಾಸೆಟ್ ಹಾಕಬಹುದಾಗಿದ್ದ ಟೇಪ್ ರೆಕಾರ್ಡರ್ (ವಾಕ್ ಮ್ಯಾನ್ ಎಂಬ ನೆನಪು) ಇದ್ದವು. ನನ್ನ ಚಿಕ್ಕಪ್ಪನ ಮನೆಯಲ್ಲಿ ಒಂದು ಟೇಪ್ ರೆಕಾರ್ಡರ್ ಇತ್ತು. ಅವರ ಮನೆಗೆ ಹೋದಾಗ ನಾನು ಹಾಡು ಕೇಳುತ್ತಿದ್ದೆ. ಅವರ ಮನೆಯಲ್ಲಿ ಇದ್ದ ಕ್ಯಾಸೆಟ್ಟುಗಳೇ ಕಡಿಮೆ ಇದ್ದುದರಿಂದ ನಾನು ‘ಹಗಲುವೇಷ’ ಚಲನಚಿತ್ರದ ‘ಜಗ್ಗದು ಜಗ್ಗದು ಯಾರಿಗೂ ಜಗ್ಗದು ಇಂಡಿಯಾ…’ ಹಾಡನ್ನು ಬಹಳ ಕೇಳುತ್ತಿದ್ದೆ. ‘ಮನೆತನ’ ಧಾರವಾಹಿ ಆಗ ಬಹಳ ಪ್ರಚಲಿತದಲ್ಲಿದ್ದ ಧಾರಾವಾಹಿ. ಪ್ರಾರಂಭದಲ್ಲಿ ಶುರುವಾಗುತ್ತಿದ್ದ ‘ಇಂದು ನಿನ್ನಯದಲ್ಲ ಮನೆತನ…’ ಹಾಡಿನ ಟ್ಯೂನ್ ನನಗೆ ಬಹಳ ಇಷ್ಟವಾಗುತ್ತಿತ್ತು. ನನಗೆ ಹಾಡನ್ನು ಕೇಳೋ ಹುಚ್ಚು ಎಷ್ಟಿತ್ತು ನನ್ನ ರೂಮ್ ಮೇಟ್‌ನ ಬಳಿಯಿದ್ದ ಈ ಟೇಪ್ ರೆಕಾರ್ಡರ್‌ನಲ್ಲಿ ‘ಪುಕಾರ್’ ‘ತಾಲ್’ ‘ದಿಲ್ ತೋ ಪಾಗಲ್ ಹೇ’ ಹಿಂದಿ ಚಲನಚಿತ್ರದ ಹಾಡುಗಳನ್ನು ಕೇಳುತ್ತಿದ್ದೆ. ಕನ್ನಡದ ಪ್ರೀತ್ಸೆ, ಉಪೇಂದ್ರ ಫಿಲಂಗಳ ಹಾಡುಗಳನ್ನು ಕೇಳುತ್ತಿದ್ದೆ. ಈ ಹಾಡು ಕೇಳುವ ಹುಚ್ಚೂ ಸಹ ನನಗೆ ಉಳಿದಿದ್ದ ಸ್ವಲ್ಪವೇ ದಿನದ ಪರೀಕ್ಷೆಯ ಕೆಲ ದಿನಗಳನ್ನು ತಿಂದುಹಾಕಿತ್ತು.

ಪರೀಕ್ಷೆ ಬಂದೇ ಬಿಟ್ಟಿತು. ಮೊದಲನೇ ದಿನ ಕನ್ನಡ ಪರೀಕ್ಷೆ. ಆಗ ವಿಜ್ಞಾನ ವಿಭಾಗದವರೆಂದರೆ ಕನ್ನಡ ಅವಧಿಗೆ ಚಕ್ಕರ್ ಹೊಡೆಯುವುದು ಎಂಬ ಭಾವನೆ ಬಹಳ ವಿದ್ಯಾರ್ಥಿಗಳಿಗೆ ಬೇರೂರಿತ್ತು. ಇದು ಇಂಗ್ಲೀಷ್ ವಿಷಯದಲ್ಲೂ ಇತ್ತು. ನಾನು ಭಾಷೆಯ ವಿಷಯಗಳ ಪುಸ್ತಕಗಳನ್ನೂ ಇಟ್ಟುಕೊಂಡಿರಲಿಲ್ಲ. ಪರೀಕ್ಷೆಯ ಹಿಂದಿನ ದಿನ ಬೆಳಗ್ಗೆ ಹೋಗಿ ಎಂ.ಸಿ.ಸಿ ಗೈಡ್ ತಕ್ಕೊಂಡು ಓದಲು ಕುಳಿತೆ. ಇದರಲ್ಲಿ ಸಾಧ್ಯವಾದಷ್ಟು ಪಾಠಗಳ ಸಾರಾಂಶವನ್ನಷ್ಟೇ ಓದಿದೆ. ಪರೀಕ್ಷೆಯನ್ನು ಚೆನ್ನಾಗಿ ಬರೆದೆ. ಇಂಗ್ಲೀಷ್ ವಿಷಯದಲ್ಲೂ ಹೀಗೆಯೇ ಮಾಡಲು ಹೋದೆ. ಆದರೆ ದುರಾದೃಷ್ಟ ನಾನು ಪರೀಕ್ಷಾ ಹಾಲ್ ಟಿಕೇಟ್ಟನ್ನು ಕಳೆದುಕೊಂಡು ಬಿಟ್ಟಿದ್ದೆ! ಆಗ ನನಗೆ ಒತ್ತಡ ಶುರುವಾಗಿ ಪರೀಕ್ಷೆಯ ಪ್ರವೇಶ ಪತ್ರವನ್ನು ಎಲ್ಲಾ ಕಡೆ ಹುಡುಕಿದಾಗ ರಾತ್ರಿ 10 ಘಂಟೆಯವರೆಗೂ ನನಗೆ ಸಿಗಲಿಲ್ಲ. ನನಗೆ ಏನು ಮಾಡಬೇಕು ಅಂತಾನೆ ಗೊತ್ತಾಗಲಿಲ್ಲ. ಟೆನ್ಷನ್ ಆಗಿ ಏನು ಮಾಡಬೇಕು ಎಂದು ಗೊತ್ತಾಗದೇ ಕುಳಿತಿದ್ದಾಗ ರಾತ್ರಿ 10 ಗಂಟೆಯ ಸುಮಾರಿಗೆ ನಮ್ಮ ಸೀನಿಯರ್ ‘ಅನಿಲ್’ ಹಾಸ್ಟೆಲ್ ಮೈದಾನದಲ್ಲಿ ‘ನಿನ್ನ ಹಾಲ್ ಟಿಕೆಟ್ಟು ಸಿಕ್ಕಿತು’ ಎಂದು ತಂದುಕೊಟ್ಟಾಗ ‘ಬದುಕಿದೆಯಾ ಬಡ ಜೀವವೇ’ ಎಂದುಕೊಂಡು ಆಗ ಇಂಗ್ಲೀಷ್ ಓದಲು ಕುಳಿತೆ. ಓದಿದ್ದು ಕೇವಲ ಕೆಲ ಪಾಠಗಳ ಕನ್ನಡ ಸಾರಾಂಶವಷ್ಟೇ!! ಇಷ್ಟರಲ್ಲೇ ಹೋಗಿ ಇಂಗ್ಲೀಷ್ ಪರೀಕ್ಷೆ ಬರೆದೆ.
ಇನ್ನು ನಮಗೆ ಆಗ ಪರೀಕ್ಷೆಗೆಂದು ಓದಿಕೊಳ್ಳಲು ಪರೀಕ್ಷೆಯ ಮಧ್ಯೆ ಒಂದೊಂದು ದಿನ ಬಿಡುವು ಸಿಗುತ್ತಿತ್ತು. ಆ ಸಮಯದಲ್ಲಾದರೂ ಓದುತ್ತಿದ್ದೆವಾ? ಇಲ್ಲ! ನಾನು ಮತ್ತು ಲಿಂಗರಾಜ ಪಾಸಾದರೆ ಹೇಗಿದ್ದರೂ ರಿಜೆಕ್ಟ್ ಮಾಡುತ್ತೇವೆ ಆಗ ಮುಂದಿನ ವರ್ಷ ಚೆನ್ನಾಗಿ ಓದಲು ನೋಟ್ಸ್ ಬೇಕೆಂದು ಟಾಪ್ ಲೆಕ್ಚರ್‌ಗಳ ನೋಟ್ಸನ್ನು ಸಂಗ್ರಹಿಸುತ್ತಿದ್ದೆವು. ಉದಾಹರಣೆಗೆ ನಮಗೆ ನಾಳೆ ಭೌತಶಾಸ್ತ್ರದ ಪರೀಕ್ಷೆ ಇತ್ತು ಎಂದಿಟ್ಟುಕೊಳ್ಳಿ, ನಾವು ಜೀವಶಾಸ್ತ್ರದ ನೋಟ್ಸ್ ಸಂಗ್ರಹಿಸಲು ಹೋಗುತ್ತಿದ್ದೆವು!! ನನಗೆ ರಸಾಯನಶಾಸ್ತ್ರವು ದ್ವಿತೀಯ ಪಿಯುಸಿಯ ಜನವರಿ ತಿಂಗಳು ಬರುವವರೆಗೂ ಒಂಚೂರು ಗೊತ್ತಿರಲಿಲ್ಲ. ಆದರೆ ನನ್ನ ಅದೃಷ್ಟ ನಾಗಪ್ರಕಾಶನೆಂಬ ನನ್ನ ಗೆಳೆಯನ ಸಹಾಯದಿಂದ ಸಿದ್ದರಾಜು ಎಂಬ ರಸಾಯನಶಾಸ್ತ್ರದ ಉಪನ್ಯಾಸಕರು ಸಿಕ್ಕರು. ಅವರು ಆಗ ದಾವಣಗೆರೆಯ ಟಾಪ್ ಕಾಲೇಜ್ ಆಗಿದ್ದ ‘ಅನುಭವ ಮಂಟಪ’ದ ಹುಡುಗರಿಗೆ ಬಿಟ್ಟರೆ ಬೇರೆ ಯಾರಿಗೂ ಟ್ಯೂಷನ್ ಮಾಡುತ್ತಿರಲಿಲ್ಲ. ನನ್ನನ್ನು ಅದ್ಹೇಗೋ ಸೇರಿಸಿಕೊಂಡರು. ಆಗ ಉಳಿದಿದ್ದು ಕೇವಲ 4 ಪಾಠ. ಅವರ ಪಾಠ ಎಷ್ಟು ಇಷ್ಟ ಆಯ್ತು ಎಂದರೆ ಇವತ್ತಿಗೂ ನಾನು ನನ್ನ ವಿದ್ಯಾರ್ಥಿಗಳಿಗೆ ಇದೇ ವಿಧಾನದಲ್ಲಿ ಹೇಳಿಕೊಟ್ಟು ಮಕ್ಕಳ ಪ್ರೀತಿಗೆ ಪಾತ್ರನಾಗಿದ್ದೇನೆ. ಅವರು ನನಗೆ ‘ನೀನು ಮೊದಲೇ ಟ್ಯೂಷನ್ನಿಗೆ ಬಂದಿದ್ದರೆ ನಿನ್ನಿಂದ 100 ಕ್ಕೆ ನೂರು ಅಂಕಗಳನ್ನು ತೆಗೆಸುತ್ತಿದ್ದೆ’ ಎಂಬ ಮಾತಿನಿಂದ ಪ್ರೇರಣೆಗೊಂಡು ಹಿಂದಿನ ಪಾಠಗಳ ಅವರ ನೋಟ್ಸ್ ತೆಗೆದುಕೊಂಡು ಓದಿದೆ. ಅವರು ನನಗೆ ತುಂಬಾ ಕ್ಲೋಸ್ ಆದರು. ಎಲ್ಲಿಯವರೆಗೂ ಅಂದರೆ ನಾಳೆ ರಸಾಯನಶಾಸ್ತ್ರದ ಪರೀಕ್ಷೆ ಇದ್ದಾಗ ‘ಪರೀಕ್ಷೆಯಲ್ಲಿ ಬರಬಹುದಾದ ಅತೀ ಮುಖ್ಯ ಪ್ರಶ್ನೆಗಳನ್ನು ಬರೆದುಕೊಡಿ’ ಎಂದು ಅವರ ಬಳಿ ಕೇಳಲು ಹೋಗಿದ್ದೆ! ಅವರೂ ಸಹ ಯಾವುದೇ ಬೇಸರ ಮಾಡಿಕೊಳ್ಳದೇ ಬರೆದುಕೊಟ್ಟಿದ್ದರು!!
ಇನ್ನು ಭೌತಶಾಸ್ತ್ರದ ವಿಷಯವನ್ನು ಓದಲು ಒಂದು ಪ್ಲ್ಯಾನ್ ಮಾಡಿದ್ದೆ. ಆಗ ‘ನರೇಂದ್ರ’ ಎಂಬ ನನ್ನ ಕ್ಲಾಸ್ ಮೇಟ್ ಬೆಂಗಳೂರಿನ ಯಾವುದೋ ಒಂದು ಸಂಸ್ಥೆ ಪ್ರಕಟಿಸಿದ 5 ಮಾದರಿ ಪತ್ರಿಕೆಗಳನ್ನು ನನಗೆ ಕೊಟ್ಟು ಅವನ್ನು ಬಿಡಿಸಲು ಅವನ ರೂಮಿಗೆ ಕರೆದುಕೊಂಡು ಹೋಗಿದ್ದ. ನಾನು ಅವಕ್ಕೆ ಉತ್ತರ ಹುಡುಕಿ ಐದೂ ಪತ್ರಿಕೆಗಳನ್ನು ಬಿಡಿಸಿದ್ದೆವು. ಆದರೆ ಅದನ್ನು ನಮ್ಮ ಕ್ಲಾಸ್ ಮೇಟ್ ಒಬ್ಬ ಜೆರಾಕ್ಸ್ ಮಾಡಿಕೊಂಡು ಕೊಡುತ್ತೇನೆಂದು ಹೇಳಿ ಕೊಡದೇ ಕೈಕೊಟ್ಟಿದ್ದ. ಕೊನೆಗೆ ಮತ್ತೊಮ್ಮೆ ಅದನ್ನು ವಾಪಾಸ್ಸು ಪಡೆಯಲು ಹರಸಾಹಸ ಮಾಡಿ ಅದನ್ನು ಪಡೆದೆವು. ನರೇಂದ್ರ ನನಗೆ ಹಲವು ವಿಷಯದಲ್ಲಿ ತುಂಬಾ ಸಹಾಯ ಮಾಡಿದ್ದಾನೆ. ಅವನು ನನಗೆ ಕ್ಲಾಸ್ ಮೇಟ್ ಆದರೂ ವಯಸ್ಸಿನಲ್ಲಿ ನನಗಿಂತ ದೊಡ್ಡವನಾಗಿದ್ದ. ಅಲ್ಲದೇ ನನಗೆ ಅವನು ನನಗೆ ಬೇಕಾದ ಬಟ್ಟೆಬರೆಗಳನ್ನೆಲ್ಲಾ ಕೊಟ್ಟಿದ್ದಾನೆ. ಅವನ ಸಹಾಯವನ್ನು ಮರೆಯಲು ಸಾಧ್ಯವಿಲ್ಲ.
ಇನ್ನೊಂದು ತಮಾಷೆಯ ಸಂಗತಿಯೆಂದರೆ ಗಣಿತ ಪರೀಕ್ಷೆಗೆ ನನಗೆ 3 ದಿನ ಬಿಡುವು ಇತ್ತು. ನನಗೆ ಗಣಿತ ತುಂಬಾ ಇಷ್ಟದ ವಿಷಯ. ಈ 3 ದಿನದಲ್ಲಿಯಾದರೂ ಚೆನ್ನಾಗಿ ಓದಿದ್ದರೆ ಒಂದು ಹಂತದವರೆಗಾದರೂ ಅಂಕಗಳನ್ನು ತೆಗೆಯುತ್ತಿದ್ದೆ. ಆದರೆ ಒಂದು ದಿನ ಯಾರೋ ಚಾಲೆಂಜ್ ಮಾಡಿದರು ಎಂದು ಹಿಂದಿಯ ‘ತಾಲ್’ ಫಿಲಂ ನೋಡಲು ಸೆಕೆಂಡ್ ಶೋ ಗೆ ಹೋಗಿದ್ದೆ. ಮಾರನೇ ದಿನ ಉಳಿದ ಒಂದು ದಿನವಾದರೂ ಓದದೇ ಹಾಸ್ಟೆಲ್ಲಿನ ಯಾರೋ ಒಬ್ಬರು ‘ಪ್ರಶ್ನೆಪತ್ರಿಕೆ ಲೀಕ್’ ಆಗಿದೆ ಎಂದು ತಿಳಿಸಿ ಕೈಯಲ್ಲಿ ಬರೆದ ಒಂದು ಗಣಿತ ಪತ್ರಿಕೆಯನ್ನು ಕೊಟ್ಟಿದ್ದರು. ನಾವು ಇದನ್ನೇ ನಂಬಿ ರಾತ್ರಿಯಿಡೀ ನಿದ್ರೆ ಮಾಡದೇ ಒಂದೂ ಲೆಕ್ಕವನ್ನೂ ಬಿಡದೇ ಕಲಿತಿದ್ದೆ. ಚೆನ್ನಾಗಿ ಅಂಕಗಳು ಬರುತ್ತಾವೆಂದು ಪರೀಕ್ಷೆಗೆ ಹೋದರೆ ಅಲ್ಲಿ ಪ್ರಶ್ನೆ ಪತ್ರಿಕೆ ನೋಡಿದಾಗ ನನಗೆ ತುಂಬಾ ಬೇಸರವಾಯ್ತು. ಒಂದಾದರೂ ಪ್ರಶ್ನೆ ಅದರಲ್ಲಿ ಬಂದಿರಲಿಲ್ಲ. ‘ಬಕ್ರಾ ಆದೆವು’ ಅಂದುಕೊಂಡ್ವಿ. ‘ಇದು ನನ್ನ ಕರ್ಮ’ ಎಂದು ಬೇಸರಿಸಿಕೊಂಡು ಕೊಟ್ಟ ಪತ್ರಿಕೆಯನ್ನಾದರೂ ಬಿಡಿಸಲು ಹೋದರೆ ರಾತ್ರಿಯಿಡೀ ನಿದ್ರೆಯಿಲ್ಲದೇ ಹೋಗಿದ್ದರಿಂದ ನನಗೆ ಬರುತ್ತಿದ್ದ ಸುಲಭ ಪಾಠದ ಲೆಕ್ಕಗಳೂ ಮಾಡಲು ಬರದಂತಾಯಿತು. ಅಂದು ಕಲಿತ ಲಾಜಿಕ್ಸ್, ಮ್ಯಾಟ್ರಿಕ್ಸ್, ಕ್ಯಾಲ್ಕೂಲಸ್ ಪಾಠದ ಲೆಕ್ಕಗಳನ್ನು ಇಂದೂ ಮಾಡುವ ನಾನು ಅಂದು ಪರೀಕ್ಷೆಯಲ್ಲಿ ನಾನು ಕಲಿತಿದ್ದು ನನಗೆ ಕರ್ಣನ ವಿದ್ಯೆಯಂತಾಗಿದ್ದನ್ನು ನೆನಪಿಸಿಕೊಂಡರೆ ಇಂದಿಗೂ ಬೇಸರವಾಗುತ್ತದೆ.

ನಾವು ಬದುಕುವ ಪ್ರತೀ ಕ್ಷಣವನ್ನು ವರ್ತಮಾನದಲ್ಲಿ ಬದುಕಬೇಕು. ಇಂದಿನ ಕಾರ್ಯವನ್ನು ಪ್ರಾಮಾಣಿಕವಾಗಿ ಇಂದೇ ಮಾಡಿದರೆ ಸುಲಭವಾಗಿ ಅದರ ಫಲ ಪಡೆಯಬಹುದು. ‘ನಾಳೆ ಎಂದವನ ಮನೆ ಹಾಳು’, ‘ಅಂದಿನ ಕೆಲಸವನ್ನು ಅಂದೇ ಮಾಡು ‘Now or never’, ‘Stitch in time saves nine’ ಎಂಬ ವಾಕ್ಯಗಳು ನಮಗೆ ‘ಇಂದಿನ’ ಮಹತ್ವವನ್ನು ತಿಳಿಸುತ್ತವೆ. ನಮ್ಮ ಜೀವನದ ಪ್ರತೀ ಕ್ಷಣವನ್ನೂ ವ್ಯರ್ಥವಾಗಿ ಕಳೆಯದೇ ಸದುಪಯೋಗಪಡಿಸಿಕೊಂಡರೆ ನಾವು ಮಹತ್ತರವಾದುದನ್ನು ಸಾಧಿಸಬಹುದು. ಅದಕ್ಕೆ ಬರೀ ಸಾಧಿಸಿದವರ ಉದಾಹರಣೆಯಷ್ಟೇ ಅಲ್ಲದೇ, ಸಾಧಿಸುವ ಟ್ಯಾಲೆಂಟ್ ಇದ್ದೂ ಆ ಅವಕಾಶ ಕಳೆದುಕೊಂಡವರ ನಮ್ಮಂತವರ ಜೀವನದ ಉದಾಹರಣೆಗಳೂ ಕೆಲವರಿಗೆ ಪಾಠವಾಗಲಿ ಎಂದು ಬಯಸುತ್ತೇನೆ. ಮುಂದೆ ಜೀವಶಾಸ್ತ್ರದ ಪರೀಕ್ಷೆಯ ಬಗ್ಗೆ ಇನ್ನೂ ಕುತೂಹಲಕರವಾದ ಮಾಹಿತಿಯಿದೆ. ಮುಂದೆ ಅದನ್ನು ತಿಳಿಸುತ್ತೇನೆ. ಹೊಸ ವರ್ಷ 2025 ನಿಮಗೆ ಒಳಿತನ್ನು ಉಂಟು ಮಾಡಲಿ ಎಂದು ಆಶಿಸುತ್ತೇನೆ. ನಮಸ್ಕಾರ…

ಬಸವನಗೌಡ ಹೆಬ್ಬಳಗೆರೆ ಶಿವಮೊಗ್ಗದ ಸ.ಪ್ರೌ.ಶಾಲೆ, ಮಸಗಲ್ಲಿನಲ್ಲಿ ವಿಜ್ಞಾನ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರಬಂಧ, ಲೇಖನ, ಕವನ ಹಾಗೂ ಕಥೆ ಬರೆಯುವುದು ಹಾಗೂ ಓದುವುದು ಇವರ ಹವ್ಯಾಸಗಳು. “ಬೋಳಾಯಣ” ಇವರ ಪ್ರಕಟಿತ ಹನಿಗವನ ಸಂಕಲನ.

This is good gowdre!
ಅಂದಿನ ದಿನಗಳನ್ನು ಕಣ್ಣಿಗೆ ಕಟ್ಟುವಂತೆ ಚಿತ್ರಿಸಿದ್ದೀರಿ ಬಸವನಗೌಡ ಸರ್… ನಮ್ಮ ಕಾಲೇಜು ಜೀವನಕ್ಕೆ ತುಂಬಾ ಸಾಮ್ಯವಿದೆ… ಇಂತಹ ಉತ್ತಮ ಬರಹಗಳು ಇನ್ನಷ್ಟು ಬರಲಿ ಸರ್… Thank you Sir 👏👏👌👌
Superb
ಕೆಟ್ಟ ಮೇಲೆ ಬುದ್ದಿ ಬಂತು ಅಡುಗೆ ಅದ ಮೇಲೆ ಒಲೆ ಉರಿತು ಎನ್ನುವ ಹಾಗೆ ಬಾಲ್ಯದಲ್ಲಿ ನಮ್ಮ ಬುದ್ದಿ ಮಟ್ಟದ ಕೊರತೆಯಿಂದ ಇವೆಲ್ಲವೂ ಸಹಜ ಅಲ್ವಾ ಗೌಡ್ರೆ ಅವಾಗ ಆಗೆ ಮಾಡ್ದೆ eddidare😭ಇಂದು ಅವನ್ನೆಲ್ಲ ಜ್ಞಾಪಿಸಿಕೊಳ್ಳುತ್ತಿರ್ಲಿಲ್ಲ ಅಲ್ವಾ ಏನೇ ಆಗಲಿ ಈಗಲೂ ಉತ್ತಮವಾದ ಸ್ಥಿತಿಯಲ್ಲಿ ಇದ್ದೀರಾ ಅಲ್ವಾ ಅದರಲ್ಲೇ ತೃಪ್ತಿ ಪಟ್ಟುಕೊಳ್ಳೋಣ