ಹೀಗೆ ಕಾಲ ಓಡಿತು. ಪತ್ರಗಳು ನಿಂತು ಹೋದವು. ಫೋನ್ ನಿಂತುಹೋಯಿತು. ಅವರವರ ಕೆಲಸದಲ್ಲಿ ಅವರವರು ಬ್ಯುಸಿ ಆದರು. ಓದು, ಕೆಲಸ ಹುಡುಕುವುದು, ಹಣಕಾಸಿನ ತಾಪತ್ರಯದಲ್ಲಿ ನಾವುಗಳು ಊರಿಗೆ ಹೋಗಿ ಬರುವುದು ಕಡಿಮೆಯಾಯಿತು. ಊರಿನಲ್ಲಿ ಮೊದಲು ದೊಡ್ಡ ದೊಡ್ಡಮ್ಮ, ನಂತರ ಹಿರಿಯಕ್ಕ ತೀರಿಕೊಂಡ ಸುದ್ದಿ ಹೇಗೋ ನಮ್ಮನ್ನು ತಲುಪಿತು. ಅಲ್ಲಿಗೂ ಇವಳು ಹೆಚ್ಚು ಹೋಗಿ ಬಂದು ಮಾಡುತ್ತಿರಲಿಲ್ಲ, ತನ್ನ ಗಂಡನ ಮುಂದೆ ತಾಯಿ ಮನೆಯ ಹೀನಾಯ ಪರಿಸ್ಥಿತಿ ಕಾಣಬಾರದೆಂದು ಭಾವಿಸಿ…. ಅವಳ ತಮ್ಮ ಹೆಂಡತಿಯೊಂದಿಗೆ ಕಿರಿಕಿರಿ ಮಾಡಿಕೊಂಡ. ಕುಡಿತ ಹೆಚ್ಚಾಯಿತು. ಬದುಕು ಮೂರಾ ಬಟ್ಟೆಯಾಯಿತು. ಕೊನೆಗೊಂದು ದಿನ ತೀರಿಕೊಂಡ ಸುದ್ದಿಯು ಬಂದಿತು.
“ದಡ ಸೇರದ ದೋಣಿ” ಸರಣಿಯಲ್ಲಿ ವಸಂತಕುಮಾರ್‌ ಕಲ್ಯಾಣಿ ಬರಹ

ಸುಮಾರು ಐವತ್ತು ವರ್ಷಗಳ ಹಿಂದಿನ ಮಾತು. ಊರಿನಿಂದ ಹಿಂದಿರುಗಿದ್ದ ನನ್ನ ಅಕ್ಕ ತಂಗಿ (ಎರಡನೇ ಅಕ್ಕ, ಮೊದಲನೇ ತಂಗಿ) ಒಂದು ಅಚ್ಚರಿಯ ವಿಷಯ ನನ್ನಲ್ಲಿ ಅರುಹಿದರು. “ನಿನಗೆ ಇನ್ನಿಬ್ಬರು ಅಕ್ಕ ಒಬ್ಬ ಅಣ್ಣ ಇದ್ದಾನೆ ಗೊತ್ತಾ?!” ಎಂದರು. ನನಗೆ ತಲೆ ಬುಡ ಅರ್ಥ ಆಗಲಿಲ್ಲ. “ಅಷ್ಟೇ ಅಲ್ಲ ಇನ್ನೊಬ್ಬರು ದೊಡ್ಡಮ್ಮನೂ ಇದ್ದಾರೆ” ಎಂದರು. ನಾನು ಇನ್ನಷ್ಟು ಯೋಚನೆಗೆ ಬಿದ್ದೆ. ಅವರು ತಡ ಮಾಡಲಿಲ್ಲ; “ನಾವು ಯಾವಾಗಲೂ ಊರಿನಲ್ಲಿ ದೊಡ್ಡಮ್ಮನ ಮನೆಗೆ ಹೋಗುತ್ತೇವಲ್ಲವಾ, ಅವರಿಗೂ ದೊಡ್ಡವರು ಅವರಿಗೆ ಅಕ್ಕ- ಎಲ್ಲರಿಗಿಂತ ದೊಡ್ಡವರು- ಒಬ್ಬರಿದ್ದಾರೆ” ಎಂದಾಗ ನಾನು ಇದೇನು ಹೊಸ ವಿಷಯ, ತಮಾಷೆಯೇ ನಿಜವೇ ಎಂದು ಚಿಂತಿಸುವಷ್ಟರಲ್ಲಿ ಅವರಿಬ್ಬರೂ ಮುಂದುವರೆಸಿದರು. “ಹೌದು ಈಸಲ ನಮ್ಮ ಅತ್ತಿಗೆಮ್ಮನ (ದೊಡ್ಡಪ್ಪನ ಮಗನ ಹೆಂಡತಿ) ತಾಯಿ ಮನೆ ಹತ್ತಿರ ಹೋಗಿದ್ದೆವು. ಹಾಗೆ ಗುಡ್ಡ, ಕಾಡು ನೋಡುತ್ತಾ, ಅಲ್ಲಿಯೇ ಒಂಚೂರು ಮೇಲಕ್ಕೆ ಸಣ್ಣದೊಂದು ಗುಡ್ಡದ ಮೇಲೆ ಇನ್ನೊಂದು ಮನೆ ಇತ್ತು. ಅಲ್ಲಿಗೆ ಭಾವ ಕರೆದುಕೊಂಡು ಹೋದರು. ನಮಗಂತೂ ಅಚ್ಚರಿ! ಚೆನ್ನಾಗಿ ಮಾತಾಡಿಸಿದರು, ಕಣ್ಣೀರು ಹಾಕಿದರು, ಅಮ್ಮನ ಬಗ್ಗೆ ಕೇಳಿದರು” ಹೀಗೆ ಅವರ ಮಾತು ಮುಂದುವರೆಯಿತು. ನಾನಾಗಲೇ ಕಲ್ಪನಾ ಲೋಕದಲ್ಲಿದ್ದೆ!

ಹೌದು ಕೇರಳ, ಕರ್ನಾಟಕದ ಗಡಿಭಾಗ ನಮ್ಮಮ್ಮನ ಹುಟ್ಟಿದ ಊರು. ಅದು ‘ನಮಗೆ ಸೇರಬೇಕು, ನಮಗೇ ಸೇರಬೇಕು’ ಎಂಬ ಹಗ್ಗ ಜಗ್ಗಾಟದಲ್ಲಿ, ಗೊತ್ತಲ್ಲ ಎಂದಿನಂತೆ ನಮ್ಮ ರಾಜಕಾರಣಿಗಳ ಇಚ್ಛಾಶಕ್ತಿಯ ಕೊರತೆಯಿಂದ ಆ ಭಾಗ ಕೇರಳಕ್ಕೆ ಸೇರಿ ಹೋಯಿತು. ಅಷ್ಟೇ ಅಲ್ಲ ಮುಂದಿನ ದಿನಗಳಲ್ಲಿ ಜಿಲ್ಲಾ ಕೇಂದ್ರವೂ ಆಗಿ ಹೋಯಿತು. ನಾನೀಗ ಹೇಳ ಹೊರಟಿರುವುದು ರಾಜಕೀಯದ, ಕವಿ/ ಹೋರಾಟಗಾರರ ಕೆಚ್ಚಿನ ಕತೆಯಲ್ಲ. ನಮ್ಮ (ತಾಯಿಯ) ಕುಟುಂಬದ ಮರೆತ ಬಿಳಲೊಂದು ಪ್ರತ್ಯಕ್ಷವಾಗಿ, ಕೆಲವು ಕಾಲ ನಮ್ಮೊಂದಿಗೆ ಬೆರೆತು ಪುನಃ ಹಾಗೆಯೇ ಮಾಯವಾದ ವಿಧಿಯಾಟಕ್ಕೆ ಸಿಲುಕಿದ ಅಥವಾ ತಾನು ಸಮಾಜದಲ್ಲಿ ನೆಲೆಯೂರಬೇಕೆಂಬ ತರ್ಕಕ್ಕೆ ಬದ್ಧಳಾಗಿ, ಒಂದು ಮಟ್ಟಿಗೆ ಸ್ವಾರ್ಥಿಯಾಗಿ ನಮ್ಮಿಂದ ದೂರಾದ ಹೆಣ್ಣೊಬ್ಬಳ ಕಥೆ!

ಅಕ್ಕ ತಂಗಿಯರಿಂದ ವಿಷಯ ಗ್ರಹಿಸಿದ ನಾನು, ನನ್ನಣ್ಣ ಮುಂದಿನ ಸಲದ ರಜೆಗೆ ಅಥವಾ ಯಾವುದೋ ಸಂದರ್ಭದಲ್ಲಿ ಊರಿಗೆ ಹೋದಾಗ ನಮ್ಮ (ಎಂದಿನ)ದೊಡ್ಡಮ್ಮನವರಲ್ಲಿ ಈ ಕುರಿತು ಕೇಳಿದಾಗ, ಅವರು ಯಾರೂ ಉತ್ಸಾಹ ತೋರಲಿಲ್ಲ. ಏಕೆಂದರೆ ಅವರವರ ನಡುವೆ ಸಂಬಂಧಗಳು ಹಳಸಿ ದಶಕಗಳೇ ಕಳೆದು ಹೋಗಿತ್ತು. ನಾವು ಬೆಂಗಳೂರಿನವರು, ಹೊಸ ತಲೆಮಾರಿನವರು, ಬುದ್ಧಿಜೀವಿಗಳ ಸಾಹಿತ್ಯ ಓದುತ್ತಿದ್ದವರು ಹೊಸ ಅಲೆಯ ಸಿನಿಮಾಗಳನ್ನು ನೋಡುತ್ತಿದ್ದವರು! ಪಟ್ಟು ಬಿಡದೆ ಅವರ ಮನ ಒಲಿಸಿ, ಹೊಸ ಬಂಧುಗಳನ್ನು ಕಾಣಲು ಮೂರ್ನಾಲ್ಕು ಕಿಲೋಮೀಟರ್ ನಡೆಯುತ್ತಾ ಹೊರಟೇ ಬಿಟ್ಟೆವು.

ಅಲ್ಲಿಯವರೆಗೂ ನಾವು ತಿಳಿದುಕೊಂಡಿದ್ದುದು, ನನ್ನ ತಾಯಿ, ಅವರಿಗೊಬ್ಬ ಅಣ್ಣ, ಒಬ್ಬ ತಮ್ಮ, ಒಬ್ಬ ಅಕ್ಕ ಒಬ್ಬಳು ತಂಗಿ ಎಂದು‌. ಇವರೆಲ್ಲರಿಗಿಂತಲೂ ಹಿರಿಯರು ಒಬ್ಬರು -ದೊಡ್ಡಮ್ಮ- ಇದ್ದಾರೆಂಬುದು ಈಗ ತಿಳಿದುಹೋಗಿತ್ತು. ಆ ನಂತರ ಆಗಾಗ ಅವರಿವರಿಂದ ಕೇಳಿ ತಿಳಿದು ಬುದ್ದಿಗೆ ಹೊಳೆದದ್ದು- ಅದು ಈಗಲೂ ಸತ್ಯಸ್ಯ ಸತ್ಯ ಅಲ್ಲ. ಅರಿವಿಗೆ ಬಾರದ್ದು ಬಹಳಷ್ಟು ಇದೆ- ಅವರಿಗೆ ಎಂದಿನಂತೆ ಸಣ್ಣ ಪ್ರಾಯದಲ್ಲಿ ಸ್ವಜಾತಿಯಲ್ಲೇ ಮದುವೆಯಾಯಿತು. ದುರದೃಷ್ಟವಶಾತ್ ಇಪ್ಪತ್ತೆಡರ ಹರೆಯದಲ್ಲೇ ವಿಧವೆಯಾದರು. ಮೊದಲೇ ಕಣ್ಣು ಕುಕ್ಕುವ ಬಣ್ಣ, ಪರಮ ಸುಂದರಿ! ತರುಣರ ಕಣ್ಣು ಬೀಳುತ್ತಿತ್ತು. ಯಾರೋ ಒಬ್ಬ ಅನ್ಯ ಭಾಷಿಕ, ಅನ್ಯ ಜಾತಿಯ ಪುಣ್ಯಾತ್ಮ ಮದುವೆಯಾಗುವುದಾಗಿ ಕರೆದುಕೊಂಡು ಹೋದ. ಅಜ್ಜಿ ಸಿಟ್ಟಾಗಿ “ನೀನು ನನ್ನ ಪಾಲಿಗೆ ಸತ್ತಂತೆ ನಾನು ಸತ್ತಾಗಲು ನನ್ನ ಮುಖದರ್ಶನಕೆ ಬರಬಾರದು” ಎಂದು ಶಾಪ ಹಾಕಿದರು. ಹಾಗೆಯೇ ನಡೆದುಕೊಂಡರು. (ನನ್ನ ಅಜ್ಜಿ ತೀರಿಕೊಂಡಾಗ ನಾನು ಅಮ್ಮನ ಜೊತೆ ಊರಿಗೆ ಹೋಗಿದ್ದೆ.) ಹಾಗೆ ಮನೆ ಬಿಟ್ಟವರು ಯಾರೊಟ್ಟಿಗೆ ಇದ್ದರೋ! ಹೇಗೆ ಬದುಕಿದರೋ!! ಮೂರು ಮಕ್ಕಳಂತೂ ಆಯಿತು. ಕಷ್ಟಪಟ್ಟು ದುಡಿದು ಶಾಲೆಯ ಮಕ್ಕಳಿಗೆ ಮಧ್ಯಾಹ್ನದ ಊಟ ಬಡಿಸುವ ಕೆಲಸ ಮಾಡಿ, ಪರಿಚಿತ ಸಾಹುಕಾರರ ಮನೆಯಲ್ಲಿ ಅಡುಗೆ ಮಾಡಿ ಒಟ್ಟಿನಲ್ಲಿ ದಿನ ಕಳೆದರು.

ನಾವಲ್ಲಿಗೆ ಹೋದಾಗ ನಮಗೆ ಅಚ್ಚರಿಯೋ ಅಚ್ಚರಿ. ಎಲ್ಲರ ಭೇಟಿಯಾಯಿತು. ದೊಡ್ಡಮ್ಮ ಪ್ರೀತಿಯಿಂದ ಕಣ್ಣೀರು ಹಾಕಿ ಮಾತಾಡಿಸಿ, ತನ್ನ ತಂಗಿಯ (ನನ್ನ ಅಮ್ಮನ) ಬಗೆಗೂ ವಿಚಾರಿಸಿಕೊಂಡರು. ಅವರ ಮೊದಲ ಮಗಳು ಮಾತು ಬಾರದ ಮೂಕಿ! ಎರಡನೆಯವಳೇ ಇದರ ಕಥಾ ನಾಯಕಿ. ಇನ್ನೊಬ್ಬ ಹುಡುಗ. ಮೂವರು ನನಗಿಂತಲೂ ಹಿರಿಯರೇ. ಒಂದಷ್ಟು ಹೊತ್ತು ಕೂತು ಮಾತಾಡಿ, ‘ಪೋಡಿ(ಒಂದು ರೀತಿಯ ಬಜ್ಜಿ)-ಚಾ’ ಸೇವಿಸಿ, ನಮ್ಮಲ್ಲಿಗೆ ಬರಲು ಆಹ್ವಾನವಿತ್ತು, ಏನೋ ಸಾಧಿಸಿದವರಂತೆ ಬೀಗುತ್ತಾ ನಮ್ಮ ಎಂದಿನ ದೊಡ್ಡಮ್ಮನ ಮನೆಗೆ ಹೊರಟು ಬಂದೆವು.

ಹೀಗೆ ಶುರುವಾದ ಸಂಬಂಧ ಅಥವಾ ಮುರುಟಿ ಹೋಗಿದ್ದ ಬಾಂಧವ್ಯದ ಬಳ್ಳಿ ಮತ್ತೊಮ್ಮೆ ಚಿಗುರಿತು ಎನ್ನಬಹುದು. ಆನಂತರ ಬೆಂಗಳೂರಿನ ನಮ್ಮ ಮನೆಗೆ ಬಂದು ನನ್ನಮ್ಮ (ಅವಳ ಚಿಕ್ಕಮ್ಮ) ನನ್ನು ಭೇಟಿಯಾಗಿ ಹೋದಳು. (ನಾನು ಹೇಳುವುದೆಲ್ಲ ಎರಡನೆಯವಳ ಬಗ್ಗೆಯೇ) ಅವಳ ತಮ್ಮನು ಒಂದೆರಡು ಬಾರಿ ಬಂದು ಹೋದ. ಆ ಮನೆಯಲ್ಲಿ ಅವಳೇ ಸುಶಿಕ್ಷಿತೆ. ದೊಡ್ಡವಳ ಬಗ್ಗೆ ಹೆಚ್ಚು ಗೊತ್ತಿಲ್ಲ. ಕೊನೆಯವನು ಹೈಸ್ಕೂಲ್ ಶಿಕ್ಷಣ ಮಾಡಿದ್ದಿರಬಹುದು. ಸಣ್ಣ ಪುಟ್ಟ ಕೆಲಸ ವ್ಯಾಪಾರ ಮಾಡಿಕೊಂಡಿದ್ದ. ನಮ್ಮ ಕಥಾನಾಯಕಿ ಸುತ್ತಮುತ್ತಲಿನ ಕೆಲವು ಸಹೃದಯರ ಸಹಾಯದಿಂದ ಪದವಿ ಮುಗಿಸಿದ್ದಳು. ಒಂದು ರೀತಿಯ ಮಲಯಾಳಂ ದಾಟಿಯಲ್ಲಿ ಕನ್ನಡ (ಸೊಗಸಾಗಿ) ಮಾತಾಡುತ್ತಿದ್ದಳು. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿದ್ದಳು. ಅವಳು ಬದುಕಿನಲ್ಲಿ ಎದುರಿಸಿದ ಕಷ್ಟ ಕಾರ್ಪಣ್ಯಗಳು ಒಂದು ಮಟ್ಟಿನ ಎಚ್ಚರವನ್ನು, ದಿಟ್ಟತನವನ್ನು (ಕೆಲವೊಮ್ಮೆ ತನಗೆಲ್ಲ ಗೊತ್ತು ಎಂಬ ಭಾವವನ್ನು) ತಂದು ಕೊಟ್ಟಿತ್ತು. ನನಗೆ ಪತ್ರಗಳನ್ನು ಬರೆಯುತ್ತಿದ್ದಳು. ನಾನು ಉತ್ತರಿಸುತ್ತಿದ್ದೆ. ಇಂಗ್ಲಿಷಿನ ಅಕ್ಷರಗಳು ಬಹಳ ಚಂದವಾಗಿತ್ತು. ನಂತರ ರೈಲ್ವೆ ಪರೀಕ್ಷೆಯಲ್ಲಿ ಉತ್ತೀರ್ಣಳಾಗಿ ಕೆಲಸ ಗಿಟ್ಟಿಸಿಕೊಂಡಳು. ಉತ್ತರ ಕರ್ನಾಟಕದ ಊರಿನಲ್ಲಿ ಹಾಸ್ಟೆಲ್‌ನಲ್ಲಿ ಇದ್ದುಕೊಂಡು ಕೆಲಸ ನಿರ್ವಹಿಸುತ್ತಿದ್ದಳು. ಪಾಸ್ ಇದ್ದುದರಿಂದ ಆಗಾಗ ಬಂದು ಹೋಗಿ ಮಾಡುತ್ತಿದ್ದಳು. ಇನ್ನಷ್ಟು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯಲು ಬೆಂಗಳೂರಿಗೆ ಬರಬೇಕಾದದ್ದು ಅನಿವಾರ್ಯವಾಗಿತ್ತು. ಹೆಚ್ಚಾಗಿ ನನ್ನ ಅಕ್ಕ ತಂಗಿಯರ ಮನೆಯಲ್ಲಿ ವಾಸ್ತವ್ಯ. ಒಮ್ಮೆ ಅಕ್ಕತಂಗಿಯರ ಕುಟುಂಬದ ಜೊತೆ ಸಣ್ಣದೊಂದು ಪ್ರವಾಸಕ್ಕೂ ಹೋಗಿ ಬಂದಿದ್ದಳು.

ತಂಗಿಯ ಮನೆಯಲ್ಲಿದ್ದಾಗ ಕೆಲವೊಮ್ಮೆ ತಂಗಿಯ ಗಂಡನ ಜೊತೆ ಎಲ್ಲಾ ತಿಳಿದಂತೆ ಮಾತನಾಡುತ್ತಿದ್ದುದು, ಮಕ್ಕಳಿಗೆ ನೀತಿ ಪಾಠ ಹೇಳುತ್ತಿದ್ದುದು ಸ್ವಲ್ಪ ಕಿರಿಕಿರಿಯ ವಿಷಯವಾಗಿದ್ದರೂ ಅವಳ ಹಿನ್ನೆಲೆ ಹಾಗೂ ಇನ್ನಿತರೆ ಕಾರಣಗಳಿಂದಾಗಿ ಸಹಿಸಿಕೊಂಡಿದ್ದರು. ಇದರ ನಡುವೆ ಅವಳ ತಮ್ಮನಿಗೆ ಅವನಿಚ್ಚೆ ಪಟ್ಟ ಹುಡುಗಿಯೊಂದಿಗೆ ಮದುವೆ ಮಾಡಿದಳು. ಇಂತಹ ಸಂದರ್ಭಗಳಲ್ಲಿ ನನ್ನ ಎರಡನೆಯ ಅಕ್ಕ ಹಾಗೂ ಭಾವ ಸಾಕಷ್ಟು ಮುತುವರ್ಜಿ ವಹಿಸುತ್ತಿದ್ದರು. ಇವಳಿಗೂ ನಂಟು ನೋಡುತ್ತಿದ್ದರೂ ಯಾವುದೂ ಸರಿಹೊಂದುತ್ತಿರಲಿಲ್ಲ. ಕೊನೆಗೂ ಕೇರಳದ ಅವಳ ಊರಿನ ಮಹನೀಯರೊಬ್ಬರ ಕಾಳಜಿ, ಪ್ರಯತ್ನದಿಂದ ಬ್ಯಾಂಕಿನಲ್ಲಿ ಕೆಲಸದಲ್ಲಿದ್ದ ಹುಡುಗನೊಬ್ಬನ ಸುಳಿಹು ಸಿಕ್ಕಿ, ಮಾತುಕತೆ ನಡೆದು ಮದುವೆ ನಿಶ್ಚಯವಾಯಿತು. ಎಂದಿನಂತೆ ನನ್ನ ಅಕ್ಕ ಭಾವನವರೇ ಮುಂದೆ ನಿಂತು ಧಾರೆ ಎರೆದು ಕೊಟ್ಟರು. ಈ ಸಂದರ್ಭದಲ್ಲಿ ನನ್ನ ಚಿಕ್ಕಮ್ಮ (ನನ್ನ ತಾಯಿಯ ತಂಗಿ) ಚಿಕ್ಕಪ್ಪ ಭಾಗವಸಿದ್ದರು‌. ಎಲ್ಲವೂ ಒಂದು ಘಟ್ಟ ತಲುಪಿತು. ಮದುವೆಯ ನಂತರ ದಂಪತಿ ಉತ್ತರ ಕರ್ನಾಟಕದ ಊರಿನಲ್ಲಿ ನೆಲೆಗೊಂಡರು.

ಹೀಗೆ ಕಾಲ ಓಡಿತು. ಪತ್ರಗಳು ನಿಂತು ಹೋದವು.( ಕೆಲಸದಲ್ಲಿದ್ದ ಅಕ್ಕ-ಭಾವನ ಕಾರ್ಖಾನೆಗೆ ಅಪರೂಪಕ್ಕೊಮ್ಮೆ ಬರುತ್ತಿದ್ದ) ಫೋನ್ ನಿಂತುಹೋಯಿತು. ಅವರವರ ಕೆಲಸದಲ್ಲಿ ಅವರವರು ಬ್ಯುಸಿ ಆದರು. ಓದು, ಕೆಲಸ ಹುಡುಕುವುದು, ಹಣಕಾಸಿನ ತಾಪತ್ರಯದಲ್ಲಿ ನಾವುಗಳು ಊರಿಗೆ ಹೋಗಿ ಬರುವುದು ಕಡಿಮೆಯಾಯಿತು. ಊರಿನಲ್ಲಿ ಮೊದಲು ದೊಡ್ಡ ದೊಡ್ಡಮ್ಮ, ನಂತರ ಹಿರಿಯಕ್ಕ ತೀರಿಕೊಂಡ ಸುದ್ದಿ ಹೇಗೋ ನಮ್ಮನ್ನು ತಲುಪಿತು. ಅಲ್ಲಿಗೂ ಇವಳು ಹೆಚ್ಚು ಹೋಗಿ ಬಂದು ಮಾಡುತ್ತಿರಲಿಲ್ಲ, ತನ್ನ ಗಂಡನ ಮುಂದೆ ತಾಯಿ ಮನೆಯ ಹೀನಾಯ ಪರಿಸ್ಥಿತಿ ಕಾಣಬಾರದೆಂದು ಭಾವಿಸಿ…. ಅವಳ ತಮ್ಮ ಹೆಂಡತಿಯೊಂದಿಗೆ ಕಿರಿಕಿರಿ ಮಾಡಿಕೊಂಡ. ಕುಡಿತ ಹೆಚ್ಚಾಯಿತು. ಬದುಕು ಮೂರಾ ಬಟ್ಟೆಯಾಯಿತು. ಕೊನೆಗೊಂದು ದಿನ ತೀರಿಕೊಂಡ ಸುದ್ದಿಯು ಬಂದಿತು.

ಈಗಲೂ ನಾವುಗಳು ಆಗಾಗ ಅವಳ ನೆನಪು ಮಾಡಿಕೊಳ್ಳುತ್ತೇವೆ. ಸುಮಾರು ಮೂವತ್ತೈದು- ನಲುವತ್ತು ವರ್ಷಗಳ ಹಿಂದೆ ಗೆಳೆಯರ ಮದುವೆಗೆಂದು ಆ ಊರಿಗೆ ಹೋಗಿದ್ದಾಗ ವಿಳಾಸ ಹುಡುಕಿ ಹೋಗಿ ಒಂದೆರಡು ಗಂಟೆ ಅಲ್ಲಿ ಕಳೆದು ಬಂದಿದ್ದೆ. ಅಚಾನಕ್ ಬೆಳಕಿಗೆ ಬಂದಿದ್ದ ಕಳೆದು ಹೋಗಿದ್ದ ಬಾಂಧವ್ಯವೊಂದು ಮರುಕಳಿಸಿತ್ತು. ಆದರೆ ಅದರ ಬಾಳಿಕೆ ಕೇವಲ ಕೆಲವು ವರ್ಷ ಮಾತ್ರ ಇತ್ತು. ಅವಳಿಗೂ ಎರಡು ಮಕ್ಕಳಾದುವಂತೆ. ತನ್ನ ಬದುಕಿನ ಮುಖ್ಯ ಘಟ್ಟದಲ್ಲಿ ದಾರಿ ತೋರಿ ಬದುಕಿಗೆ ಆಸರೆಯಾದವರನ್ನು, ಪ್ರೀತಿ ತೋರಿಸಿದ ಬಂಧುಗಳನ್ನು -ಮುಖ್ಯವಾಗಿ ಅಕ್ಕ ಭಾವನನ್ನು -ಹೀಗೆ ಮರೆತೇ ಹೋಗಿಬಿಡಬಹುದೇ. ಬದುಕೆಂದರೆ ಅಷ್ಟೇಯೇ?!