ಗಂಡನಿಂದ ಒದಗಿರುವ ವಿಪತ್ತನ್ನು ತಿಳಿದ ಪಾರ್ವತಮ್ಮ, ಚಿಂತೆಯಲ್ಲಿ ತಮ್ಮ ಆಪ್ತರೊಂದಿಗೆ ಗುಟ್ಟನ್ನು ರಟ್ಟಾಗಿಸಿದ್ದು ದೊಡ್ಡ ಪ್ರಮಾದವಾಗಿ ಬಿಟ್ಟಿತ್ತು. ಅದು ಹೇಗೋ ಈ ಕಳುವಿನ ವಿಷಯ ಬೀಗರ ಕಿವಿಗೂ ಬಿದ್ದು, ಸ್ಫೋಟವಾಗಿ, ಹುಡುಗನ ಹೆತ್ತವರು ಈಗ ಮದುವೆಗೆ ನಿರಾಕರಿಸತೊಡಗಿದ್ದರು. ರಾಮಭಟ್ಟರು ಇನ್ನಿಲ್ಲದಂತೇ ಬೇಡಿಕೊಳ್ಳುತ್ತಿದ್ದರೂ, ಕೊನೆಗೆ ನೆಂಟರಿಷ್ಟರು ದಬಾಯಿಸಿದರೂ, ಹಠದಿಂದ ಒಪ್ಪದ ಬೀಗರು, ವಾಗ್ದಾನ ಶಾಸ್ತ್ರಕ್ಕಾಗಿ ಅಲ್ಲೇ ಕುಳಿತಿದ್ದ ಹುಡುಗಿಯ ಕಡೆ ಕಣ್ಣೆತ್ತಿಯೂ ನೋಡದೇ ಹೊರ ನಡೆದುಬಿಟ್ಟರು. ಅಲ್ಲೇ ಇದ್ದ ರಾಯರು, ಅವರನ್ನೆಲ್ಲಾ ತಡೆಯ ಹೊರಟವರು ಮತ್ತೆ ಏನೋ ನಿಶ್ಚಯಿಸಿದವರಂತೇ, ಹಾಗೇ ಸುಮ್ಮನಿದ್ದುಬಿಟ್ಟರು.
ನಾನು ಮೆಚ್ಚಿದ ನನ್ನ ಕಥಾಸರಣಿಯಲ್ಲಿ ತೇಜಸ್ವಿನಿ ಹೆಗಡೆ ಬರೆದ ಕತೆ “ಮರಕತ”
“ಬುದ್ಧಿ, ತುಸು ಗಟ್ಟಿ ಹಿಡ್ಕಳಿ ಹಾಂ, ಎರ್ಡು ದಿವ್ಸದಿಂದ ಚಂಡಿ ಮಳೆ ಹೊಯ್ದು ಅರ್ಲು ಆಗ್ಬುಟದೆ… ಬಿದ್ಗಿದ್ದು ಹೋದ್ರೆ ಬಿಳಿ ಪಂಚೆ ಎಲ್ಲಾ ಕೆಂಪಾಗದೇಯಾ” ಎಂದು ಹಲ್ಕಿರಿದ ದೇವುಡುಗನ ಹುಳುಕು ಹಲ್ಲುಗಳು ನರಸಿಂಹ ರಾಯರ ಹದ್ದಿನ ಕಣ್ಣಿಗೆ ಮಂದ ಲಾಟೀನಿನ ಬೆಳಕಲ್ಲೂ ಸ್ಪಷ್ಟವಾಗಿ ಕಂಡವು. ದೂರದ ಮೈಸೂರಿನವರಾಗಿದ್ದ ಅವರಿಗೋ ಮಲೆನಾಡಿನ ಜನ, ಭಾಷೆ ಎಲ್ಲವೂ ಹೊಸತು. ಬೆಳ್ಳಂಬೆಳಗ್ಗೆ ಉಟ್ಟ ಪಂಚೆಯಲ್ಲೇ, ಬ್ಯಾಗಿಗೆ ನಾಲ್ಕು ಬಟ್ಟೆ ತುರುಕಿ ಹೊರಟಿದ್ದು. ಅದೂ ಗೆಳೆಯ ರಾಜಾರಾಮ ಹೆಗಡೆಯ ಗೋಳಾಟ ನೋಡಿ ಗಾಭರಿಯಾಗಿ. ದಾರಿಯುದ್ದಕ್ಕೂ ದಮಯಂತಿಯ ಕುರಿತು ಆತನ ಪ್ರಲಾಪವನ್ನು ಸಹಿಸಿ ಕಿವಿ ಕೆಪ್ಪಾಗುವುದೊಂದು ಬಾಕಿ. ಧೂಳೆಬ್ಬಿಸಿಕೊಂಡು ಗಡಗಡನೆ ಸಾಗುತ್ತಿದ್ದ ಕೆಂಪು ಬಸ್ಸಿನ ಕುಣಿತಕ್ಕೆ ಅವರ ಮೈಯೆಲ್ಲಾ ಬೇರೆ ಲಟಕ್ ಪಟಕ್ ಎನ್ನತೊಡಗಿತ್ತು. ಅಂತೂ ಇಂತೂ ಬಸ್ಸು ಶಿರ್ಸಿ ಪೇಟೆಯನ್ನು ತಲುಪಿದಾಗ ಸಂಜೆ ಏಳರ ಸಮಯ. ಅಲ್ಲಿಂದ ಮುಂದೆ ಐದು ಮೈಲಿ ದೂರದ ನೀರ್ಕಜೆಗೆ ಹೋಗಲು ಬಾಡಿಗೆಗೆ ತನ್ನದೇ ಊರಿನ ಎತ್ತಿನಗಾಡಿಯೊಂದನ್ನು ತರಾತುರಿಯಲ್ಲಿ ಗೊತ್ತು ಮಾಡಿಕೊಂಡು ಬಂದಿದ್ದ ರಾಜಾರಾಮ. ಅವನ ಮನಸಂತೂ ಶರವೇಗದಲ್ಲಿ ಸಾಗಿ ರಾಮಭಟ್ಟರ ಮನೆಯಂಗಳದಲ್ಲಿ ಇಳಿಯಲು ತಳಮಳಿಸುತ್ತಿತ್ತು. ಆತನ ಈ ಪರದಾಟ ನೋಡಿ ರಾಯರಿಗೋ ಒಳಗೊಳಗೇ ಮರುಕ ತುಂಬಿದ ನಗು.
`ಮಳ್ಳು ಹುಡುಗ… ಪ್ರೀತಿ ಮಾಡಲು ಗೊತ್ತು… ಅದೇ ಮನೆಯಲ್ಲಿ ವಿಷಯ ಹೇಳಿ ಧೈರ್ಯದಿಂದ ವರಿಸಲೇನು ಧಾಡಿಯಪ್ಪಾ. ಹುಡುಗಿ ಅಪ್ಪಯ್ಯನ ಬಳಿ ಇವನಪ್ಪ ಹೋಗಿ ಕೇಳಿದ್ದರೆ ಇಲ್ಲಾ ಅನ್ನುತ್ತಿದ್ದರೆ? ಈಗ ಊರಿನ ಕಡೆಯಿಂದ ಯಾರೋ ತಂದ ಅವಳ ಮದುವೆ ನಿಗಂಟಿನ ಸುದ್ದಿಗೆ ಹಾರಿಬಿದ್ದು ಆತುರದಿಂದ ನನ್ನನ್ನೂ ಎಳೆದುಕೊಂಡು ಬಂದಿದ್ದಾನೆ. ಹೇಳಿ ಕೇಳಿ ಮಳೆಗಾಲ, ಅದರ ಮೇಲೆ ಅದು ಮಲೆನಾಡು! ತನ್ನ ಗತಿ ಏನಾಗುವುದೋ ಪರಮಾತ್ಮ!” ಎಂದು ಮನದಲ್ಲೇ ಬೈದುಕೊಳ್ಳುತ್ತಾ ನಿಂತಿದ್ದಾಗಲೇ ದೇವುಡುಗನ ಎತ್ತಿನ ಬಂಡಿ ಎದುರು ನಿಂತಿದ್ದು. ಗಾಡಿಯ ಹಿಂಬದಿಗೆ ತನ್ನ ಹಾಗೂ ರಾಯರ ಬಟ್ಟೆ ತುಂಬಿದ ಟ್ರಂಕುಗಳನ್ನು ದಡ ಬಡನೆ ತುಂಬಿದ ರಾಜಾರಾಮ ಹತ್ತಲು ಅವಸರಿಸತೊಡಗಿದ. ಮೈಸೂರಿನಲ್ಲಿ ಕುದುರೆ ಗಾಡಿಯನ್ನು ಸರಾಗವಾಗಿ ಹತ್ತಿದ್ದ ರಾಯರಿಗೆ ಎತ್ತಿನ ಗಾಡಿಯ ಬಳಕೆ ಅಷ್ಟಿಲ್ಲ. ಕತ್ತಲಿನಲ್ಲಿ ಹತ್ತಲು ಪರದಾಡತೊಡಗಿದರು. ಅವರನ್ನೇ ಒಮ್ಮೆ ಮೇಲಿಂದ ಕೆಳಗೆ ನೋಡಿದ ದೇವುಡುಗ, ರಾಯರು ತೊಟ್ಟಿದ್ದ ವೇಷ ಭೂಷಣಗಳಿಂದಲೇ ಪರ ಊರಿನವರೆಂದು ಅಳೆದು, ಎಲ್ಲೆಲ್ಲೂ ತುಂಬಿರುವ ಕೆಸರಿನ ಕುರಿತು ಎಚ್ಚರಿಸುವುದು ತನ್ನ ಕರ್ತವ್ಯ ಎಂಬಂತೇ ಹೇಳಿದ್ದ. ಆದರೆ ರಾಜಾರಾಮನಿಗೋ ಈಗ ಒಂದೊಂದು ನಿಮಿಷವೂ ವರುಷದಂತೆ ಭಾಸವಾಗುತ್ತಿತ್ತು. “ಅಯ್ಯೋ ಮಾರಾಯ… ನೀ ನಿನ್ ಭಾಷೆಲಿ ಇವ್ರ ಹತ್ರ ಎಂತೆಂತೋ ಮಳ್ಳ್ ಹಲಬಡ ಆತಾ? ಇವ್ರಿಗೆ ಇಲ್ಲಿ ಭಾಷೆ ಅಷ್ಟು ಸಮ ಬರದಿಲ್ಲೆ. ನೀ ಸುಮ್ನೆ ಗಾಡಿ ಬೇಗ ಓಡ್ಸು… ಆದಷ್ಟು ಬೇಗ ಮನೆ ಸೇರ್ಬೇಕು… ಸುಮ್ನೆ ಮಾತು ಕತೆ ಆಡ್ತಾ ಸಮಯ ಕೊಲ್ಬೇಡ” ಎಂದು ಒರಟಾಗಿ ಉತ್ತರಿಸುತ್ತಾ ನರಸಿಂಹರಿಗೆ ಸಹಾಯವನ್ನಿತ್ತು, ಒಳಗೆ ಹತ್ತಿಸಿ, ತಾನೂ ಕೂತು, ಹೆಗಲು ವಸ್ತ್ರದಿಂದ ಬೆವರೊರೆಸಿಕೊಂಡ. ರಾಜಾರಾಮನ ಮಾತಿಗೆ ತುಸುವೂ ಬೇಸರಿಸದ ದೇವುಡುಗ “ಅಯ್ನೋರೆ ಕ್ವಾಪ ಎಂತಕ್ರೋ? ಹೋಗನ ಬಿಡಿ, ಇದೆಂತ ಕೆಂಪ್ ಬಸ್ಸು ಮಾಡ್ಕಂಡಿರಾ? ಅಡ್ರ ಪಡ್ರ ಮಣ್ಣಿನ ರಸ್ತೆ… ಕತ್ಲು ಬೇರೆ…. ಎತ್ತಿನ ಗಾಡಿಲಿ ಐದು ಮೈಲು ಬರ‍್ರನೆ ಹ್ವೋಪದು ಕನ್ಸೇಯಾ ಬುಡಿ…” ಎಂದು ಮತ್ತೊಮ್ಮೆ ಹಲ್ಕಿರಿದು, ಗಾಡಿಯ ಮೇಲೇರಿ ಕುಳಿತವನೇ ತನ್ನ ಎತ್ತುಗಳಿಗೆ ಹೈಯ ಹೈಯ ಎಂದು ಚುರುಕು ಮುಟ್ಟಿಸಿದ. ಅವುಗಳ ಕೊರಳಿಗೆ ಕಟ್ಟಿದ ಗೆಜ್ಜೆಯ ಲಯಬದ್ಧ ನಾದದೊಂದಿಗೆ ಗಾಡಿ ಮುಂದೋಡತೊಡಗಿತು.
ತುಸು ದೂರ ಸಾಗುತ್ತಿದ್ದಂತೇ, ಸುಧಾರಿಸಿಕೊಂಡ ರಾಯರು, ಒಳಗೆ ನೇತು ಹಾಕಿದ್ದ, ಅತ್ತಿತ್ತ ಓಲಾಡುತ್ತಿದ್ದ ಲಾಟೀನಿನ ಕಿರು ಬೆಳಕಲ್ಲೇ ಪರಿಸರವನ್ನು ಅವಲೋಕಿಸಲು ಯತ್ನಿಸಿದರು. ಊಹೂಂ, ಎತ್ತ ನೋಡಿದರತ್ತ ಕತ್ತಲೆಯದೇ ಸಾಮ್ರಾಜ್ಯ! ಕಿವಿಗಪ್ಪಳಿಸುತ್ತಿದ್ದ ಜೀರುಂಡೆಗಳ ಜೀಕ್ ಸದ್ದು, ಸುತ್ತಲೂ ಆವರಿಸಿರುವ ದಟ್ಟ ಕಾಡಿಗೆ ಸಾಕ್ಷ್ಯವನ್ನು ನೀಡುತ್ತಿತ್ತು. ದೊಡ್ಡ ಮಳೆಯೊಂದು ಆಗಷ್ಟೇ ನಿಂತುದರ ಕುರುಹಾಗಿ ಎಲೆಗಳಿಂದ ಉದುರುವ ಹನಿಗಳ ಚಿಟ ಪಟ ಸದ್ದು. ಸುಂಯ್ಯೆನ್ನುತ್ತಿರುವ ಮಲೆನಾಡಿನ ತಣ್ಣನೆಯ ಕುರ್ಗಾಳಿ ಮೈಯ್ಯೊಳಗೆ ಶೀತದ ಗುಳ್ಳೆಗಳನ್ನೇಳಿಸಲು, ಬಗಲು ಚೀಲದಲ್ಲಿದ್ದ ಉಣ್ಣೆಯ ಶಾಲೊಂದನ್ನು ತೆಗೆದು ತಲೆಯಿಂದ ಎದೆಯವರೆಗೆ ಸುತ್ತಿಕೊಂಡು ಮುದುಡಿ ಕುಳಿತರು ರಾಯರು. ದಾರಿಯೋ ಹೆಸರಿಗೆ ಇದ್ದಂತಿತ್ತು. ವಿಪರೀತ ಉಬ್ಬುತಗ್ಗುಗಳಿಂದಾಗಿ ಎತ್ತಿನ ಗಾಡಿ ಹೆಂಡ ಕುಡಿದವರಂತೇ ಓಲಾಡುತ್ತಿದ್ದುದರಿಂದ ದೃಷ್ಟಿಯನ್ನು ಏಕಾಗ್ರಗೊಳಿಸಲು ಕಷ್ಟಕರವಾಗತೊಡಗಿತ್ತು ಅವರಿಗೆ. ರಾಜಾರಾಮ ಮಾತ್ರ ಘಳಿಗೆಗೊಮ್ಮೆ ಆ ಚಳಿಯಲ್ಲೂ ಬೆವರೊರೆಸಿಕೊಳ್ಳುವುದನ್ನು ನಡೆಸುತ್ತಲೇ ಇದ್ದ. ಅವನ ಪೆಚ್ಚುಮೊಗವನ್ನು ನೋಡಿ ಅವರಿಗೆ ಮರುಕವುಂಟಾಯಿತು.
ಮೈಸೂರಿನ ತಮ್ಮ ಬಿಡಾರದ ಪಕ್ಕದಲ್ಲೇ ಬಾಡಿಗೆಗೆ ರೂಮೊಂದನ್ನು ಪಡೆದು ಸರಕಾರಿ ಕಛೇರಿಯಲ್ಲಿ ಗುಮಾಸ್ತನಾಗಿದ್ದ ರಾಜಾರಾಮನಲ್ಲಿ ಗತಿಸಿಹೋದ ತಮ್ಮ ಕಿರಿಯ ತಮ್ಮನನ್ನೇ ಕಾಣುತ್ತಿದ್ದರು ನರಸಿಂಹರಾಯರು. ತಮಗಿಂತ ಹತ್ತು ವರುಷ ಚಿಕ್ಕವನಾಗಿದ್ದ ಅವನಲ್ಲಿ ಅದೇನೋ ವಿಶೇಷ ಪ್ರೀತಿ, ವಿಶ್ವಾಸ. ಅವನ ಮೆದು ಮಾತು, ಒಳ್ಳೆಯ ನಡತೆ ಹಾಗೂ ನಿರ್ಮಲ ಮನಸ್ಸು ಬಲು ಮೆಚ್ಚುಗೆಯಾಗಿತ್ತು ರಾಯರಿಗೆ. ರಾಜಾರಾಮನಿಗೂ ಅಷ್ಟೇ, ನರಸಿಂಹಣ್ಣ ಎಂದರೆ ಬಲು ಪ್ರೀತಿ, ಗೌರವ. ಹೋಗು ಬಾ ಅನ್ನುವಷ್ಟು ಸಲಿಗೆ ಬೆಳೆದಿತ್ತು. ತನ್ನ ಪುಕ್ಕಲು ಸ್ವಭಾವದಿಂದ ತಾನೇ ತಂದುಕೊಂಡಿದ್ದ ಈ ಪರಿಸ್ಥಿತಿಯಿಂದಾಗಿ, ಸೋತು ಹೋದಂತಿದ್ದ ರಾಜುವಿನ ಕಳಾಹೀನ ಮುಖವ ಕಂಡು ಕರುಣೆಯುಕ್ಕಿತು ರಾಯರಿಗೆ. “ಅಯ್ಯೋ ಮಂಕೆ, ನನ್ನ ಸಹವಾಸದಲ್ಲಿದ್ದೂ, ನನ್ನ ಕಾಲುಭಾಗದ ಗುಣವೂ ಬರ್ಲಿಲ್ವಲ್ಲೋ! ಧೈರ್ಯಂ ಸರ್ವತ್ರ ಸಾಧನಂ ಅಂತ ಕೇಳಿಲ್ವೇನೋ? ನಾನು ಎಷ್ಟು ಸಲ ಹೇಳಿದ್ದೀನಿ, ನಿನ್ನ ಮನೆಯವ್ರಿಗೆ ಹೇಳಿ ದಮಯಂತಿ ಜಾತಕ ಕೇಳು ಅಂತ. ನೀನೋ ಒಳ್ಳೆ ಅಮಾವಾಸ್ಯೆ, ಹುಣ್ಣಿಮೆ ಅಂತ ಲೆಕ್ಕ ಹಾಕಿ ಸುಮ್ನೆ ಕೂತೆ.
ಈಗ ಅವ್ಳ ಮದ್ವೆ ನಿಗಂಟಾಗಿರೋವಾಗ ಹೋಗಿ ಏನು ಮಾಡ್ತಿ? ಅವ್ಳ ಪಕ್ಕದ ಮನೆಯವನೇ ಆಗಿ ಹೀಗೆ ಸಮಯ ಕೊಂದಿದ್ದು ನಿನ್ನ ತಪ್ಪು. ನಿನ್ನ ಅಪ್ಪಯ್ಯ ಆಯಿನೂ ಈಗ ಅವ್ಳ ಮನೇಲಿ ಇದ್ದು ಮದ್ವೆ ತಯಾರಿ ಮಾಡ್ತಿರ್ಬಹುದು. ಕೊನೇ ಘಳಿಗೇಲಿ ಡಾಕ್ಟ್ರ ಹತ್ರ ಹೋಗುವಂತೇ ನನ್ನನ್ನು ಯಾಕೆ ಎಳ್ಕೊಂಡು ಬಂದೆ ಮಾರಾಯಾ? ಒಳ್ಳೇ ಸಹವಾಸ ನಿಂದು” ಮೆಲುದನಿಯಲ್ಲಿ ಗದರಲು ರಾಜಾರಾಮ ಇನ್ನಷ್ಟು ಬೆವರಿದ. “ಅಣ್ಣಯ್ಯ ದಮ್ಮಯ್ಯ ಅಂತೀನಿ, ಒದರಬೇಡ. ಈ ಗಾಡಿಯವನಿಗೆ ರಾಮಭಟ್ರ ಪರಿಚಯವಿದೆ. ಸುದ್ದಿ ಗೊತ್ತಾದ್ರೆ, ನಾನು ನನ್ನ ಮನೆ ಸೇರೋ ಮುಂಚೆನೇ ಹೆಣವಾಗ್ತೇನೆ! ನೋಡು, ನೀನು ದೊಡ್ಡ ಹುದ್ದೆಯಲ್ಲಿದ್ದಿ… ನನಗಿಂತ ನಾಲ್ಕು ಕಾಸು ಹೆಚ್ಚು ಸಂಪಾದನೆ ಮಾಡ್ತಿ… ಪೇಪರಲ್ಲಿ ನಿನ್ನ ಹೆಸ್ರು ಬೇರೆ ಇತ್ತೀಚಿಗೆ ಬಂದಿದೆ… ದೊಡ್ಡ ಪತ್ತೇದಾರ ಎಂಬ ಪ್ರಸಿದ್ಧಿಯೂ ಸಿಕ್ಕಿದೆ… ರಾಮಭಟ್ರಿಗೂ ನಿನ್ನ ಬಗ್ಗೆ ಬಂದಾಗೆಲ್ಲಾ ಹೇಳ್ತಿದ್ದೆ… ಅಲ್ಲದೇ, ಅವರಿಗೂ ಮೈಸೂರಲ್ಲಿರುವ ಅವರ ಕೆಲವು ಗೆಳೆಯರ ಬಾಯಿಂದ ನಿನ್ನ ಬಗ್ಗೆ ಸಾಕಷ್ಟು ತಿಳಿದಿದೆ. ಹಾಗಾಗಿ ನಿನ್ನ ವಶೀಲಿಯಲ್ಲಿ ನನ್ನ ಕೆಲ್ಸ ಆಗಬಹುದೇನೋ ಎಂಬ ದೂರದ ಆಸೆ ನೋಡು. ಇಷ್ಟಕ್ಕೂ ಮದುವೆ ಯಾವಾಗಲೋ ಎಂತೋ ನಿಕ್ಕಿ ಗೊತ್ತಿಲ್ಲ ನಂಗೆ. ಅಪ್ಪಯ್ಯನ ಪತ್ರ ಬರದೇ ಎರಡು ತಿಂಗಳಾಯ್ತು” ಅವನು ತೀರಾ ಕೆಳದನಿಯಲ್ಲಿ ಯಾಚಿಸಲು ದೊಡ್ಡ ನಿಟ್ಟುಸಿರುಬಿಟ್ಟರು ನರಸಿಂಹರಾಯರು. “ಕರ್ಮವೇ, ಈಗ ನಾ ಎಂತ ಪವಾಡ ಮಾಡಲಿ ಹೇಳು? ಮದುವೆ ಯಾವಾಗ ಎಂದೂ ಗೊತ್ತಿಲ್ಲದ ಗೂಬೆ ನೀನು. ಹ್ಮ್ಂ, ನಿನ್ನ ಹಣೇಲಿ ಭಗವಂತ ಬರ್ದಾಂಗೆ ಆಗ್ಲಿ. ನೋಡೋಣ… ನೀ ಈಗ ಧೈರ್ಯವಾಗಿರು” ತನಗೇ ಗಟ್ಟಿ ಇಲ್ಲದ ಭರವಸೆಯಿತ್ತು ಸುಮ್ಮನಾದರು. ಗಾಲಿಗಳಿಗೆ ಸಿಕ್ಕುತ್ತಿದ್ದ ಹೊಂಡಗಳಿಂದ ಗಾಡಿಯ ಓಲಾಟ ಜಾಸ್ತಿಯಾಗಿದ್ದರಿಂದ ಆಧಾರಕ್ಕೆ ಮೇಲಿನ ಹಿಡಿಕೆ ಹಿಡಿದು ಹಾಗೇ ಮತ್ತೊಮ್ಮೆ ಕಣ್ಣಾಡಿಸುತ್ತಾ ಆಕಳಿಸಿದರು.
ದಿನವಿಡೀ ಪ್ರಯಾಣಿಸಿದ್ದರಿಂದ, ಸುಸ್ತು ಮೇರೆ ಮೀರಿತ್ತು. “ಅಯ್ಯಯಪ್ಪಾ… ನನ್ನ ಬೆನ್ನು ಮುರಿದೇ ಹೋಗ್ತಿದೆ… ಇನ್ನೂ ಎಷ್ಟು ದೂರನಪ್ಪಾ ಭಟ್ರ ಮನೆಗೆ?” ಎಂದು ತಮ್ಮಷ್ಟಕ್ಕೇ ದೊಡ್ಡದಾಗಿ ಹೇಳಿಕೊಂಡಾಗ, ಅದು ಮುಂದೆ ಕೂತು ಗಾಡಿ ಓಡಿಸುತ್ತಿದ್ದವನ ಕಿವಿಗೆ ಬಿದ್ದಿತು. “ಬುದ್ಧಿ ಈಗ ಸಿಗೋ ಒಂದು ದೊಡ್ಡ ಏರನ್ನ ಇಳ್ದು, ಶ್ಯಾಂ ಹೆಗ್ದೇಡರ ತೋಟ ದಾಟಿ, ಒಂದಳ್ಳ ದಾಟ್ಬಿಟ್ರೆ ಆಯ್ತು… ನೀರ್ಕಜೆಗೆ ಕತ್ರಿ ಸಿಗ್ತದೆ… ಅಲ್ಲಿಂದ ಬರೀ ಅರ್ಧ ಫರ್ಲಾಂಗ… ಇನ್ನೊಂದ್ ತಾಸು ಅಟ್ಟೇಯಾ…” ಎನ್ನಲು ತಲೆ ತಿರುಗಿದಂತಾಯ್ತು ರಾಯರಿಗೆ. ರಾಜುವಿನ ಮೇಲೆ ವಿಪರೀತ ಕೋಪ ಬಂದು ಅವನತ್ತ ತಿರುಗಿದರೆ ಅವನೋ ತಮ್ಮ ಭರವಸೆಯನ್ನೇ ನಂಬಿ, ಸುಖ ನಿದ್ದೆಗೆ ಜಾರಿ ಬಿಟ್ಟಿದ್ದ.
“ಥತ್, ಈ ಪತ್ತೇದಾರಿ ಬುದ್ಧಿ ನನಗೇ ಮುಳುವಾಯ್ತು ಇಂದು. ಏನೋ ಪೋಲೀಸ್ ಇಲಾಖೆಯಲ್ಲಿದ್ದ ನನ್ನ ಕರುಣಾಕರ ಮಾವನಿಗೆ ಸಹಾಯ ಮಾಡಿ ಒಂದೆರ್ಡು ಕೇಸ್ ಬಗೆಹರಿಸಿದ್ದೇ ಬಂತು, ಜನ ನನ್ನನ್ನೇ ಶರ್ಲಾಕ್ ಹೋಮ್ ಅಂದ್ಕೊಬಿಟ್ಟಿದ್ದಾರೇನೋ! ಈ ಮನೆಹಾಳ ತನ್ನನ್ನು ಏನೇನು ಹೇಳಿ ಹಾಡಿ ಹೊಗಳಿದ್ದಾನೋ ಅಲ್ಲಿ ಗೊತ್ತಿಲ್ಲ… ಈಗ ನೋಡಿದ್ರೆ ಬೇತಾಳನಂತೇ ಜೋತುಬಿದ್ದಿದ್ದಾನೆ. ಇವ್ನ ಜೊತೆ ನಂದೂ ಹೆಣ ಬೀಳೊತ್ತೋ ಏನೊ… ಮೂವತ್ತೆರಡು ವರ್ಷಕ್ಕೆಲ್ಲಾ ಸತ್ತು, ಚಿಕ್ಕವಯಸ್ಸಿನ ಹೆಂಡತಿ ಶಾರದೆಯನ್ನು, ಕೂಸು ವೀಣಾಳನ್ನು ತೊರೆದು, ಬ್ರಹ್ಮರಾಕ್ಷಸನಾಗುವ ಯೋಗವಿದೆಯೋ ಏನೋ?” ತಮ್ಮ ಹುಚ್ಚಾಪಟ್ಟೆ ಆಲೋಚನೆಯಿಂದ ಅವರೊಳಗೇ ನಗುಬುಗ್ಗೆ ಎದ್ದಿತು.
ಕೂತು ಕೂತು ಬೇಸತ್ತು ಹಾಗೇ ತಿರುಗಿ ನೋಡಲು ದೂರದಲ್ಲಿ ಸಣ್ಣ ದೀಪದ ಮಿಣುಕು ಕಾಣಲು. ರಾಜುವಿನ ಮನೆ ಬಂತೇನೋ ಎಂದು ಆಸೆಗಣ್ಣಿನಿಂದ ಕತ್ತು ಉದ್ದ ಮಾಡಿ ಆ ಕಡೆಗೇ ತಿರುಗಿ ನೋಡತೊಡಗಿದರು. “ರಾಜು, ಏಯ್ ರಾಜಾರಾಮ… ಮನೆ ಬಂತಾ? ದೀಪ ಕಾಣ್ತಿದೆ ನೋಡು ಏಳೋ” ಎಂದು ತಿವಿಯಲು, ಗಡಬಡಿಸಿ ಎದ್ದ ರಾಜಾರಾಂ. ನೋಡ ನೋಡುತ್ತಿದ್ದಂತೇ ಬೆಳಕು ದೊಡ್ಡದಾಗುತ್ತಾ, ಇವರು ಸಮೀಪವಾಗುತ್ತಿದ್ದಂತೇ ಅದು ಸೂಡಿಯೆಂಬುದು ಸ್ಪಷ್ಟವಾಯಿತು. ದೊಂದಿ ಹಿಡಿದು ಬೀಸುತ್ತಾ ಯಾರೋ ಕಾಲ್ನಡಿಗೆಯಲ್ಲಿ ಅತ್ತ ಬರುತ್ತಿದ್ದರು. ಆ ವ್ಯಕ್ತಿ ತೀರಾ ಸಮೀಪ ಬಂದು ಗಾಡಿಯ ಹಿಂಭಾಗಕ್ಕೆ ಬಂದಿದ್ದೇ ರಾಜಾರಾಮನನ್ನು ಗುರುತು ಹಿಡಿದು ನಕ್ಕಿತು. “ಓಹೋ ರಾಜು… ಆರಾಮಾ? ಈಗ ಬರ್ತಾ ಇದ್ಯನ ಊರಿಗೆ? ದಮಯಂತಿ ಮದ್ವೆಗೆ ಬಂದ್ಯಾ? ಸಮಾ ಕತ್ಲಾಗೋಯ್ದು… ಮಳೆ ವಿಪರೀತ… ಗದ್ದೆ ಕೆಲ್ಸ ಎಲ್ಲಾ ನಿತ್ತೋಯ್ದು…. ಏನೋ ಪುಣ್ಯ, ಇವತ್ತೇ ಸ್ವಲ್ಪ ಹೊಳವಾಗಿದ್ದು ನೋಡು” ಮಳೆ, ಬೆಳೆ ಕಥೆಯನ್ನೆಲ್ಲಾ ಹೇಳಿ ಬಿಡುವ ಉತ್ಸಾಹದಲ್ಲಿದ್ದವರ ಮಾತಿಗೆ ಪ್ರತಿಕ್ರಿಯೆ ಕೊಡುವ ಶಿಷ್ಟಾಚಾರವನ್ನೂ ಮರೆತು ಶಕ್ತಿ ಸೋರಿದವನಂತೇ ಬೆಪ್ಪಾಗಿ ಕುಳಿತುಬಿಟ್ಟಿದ್ದ ರಾಜು. ಆದರೆ ಅವರ ಲಕ್ಷ್ಯ ಪಕ್ಕದಲ್ಲಿದ್ದ ರಾಯರತ್ತ ತಿರುಗಲು, “ಅರೆರೆ ಯಾರೋ ಬಂದಾಗಿದ್ದು! ಗೆಳೆಯನಾ? ಮೈಸೂರಿಂದ ಬಂದಿದ್ದಾ? ಇವ್ರ ಪರಿಚಯ ಆಯ್ದಿಲ್ಲೆ ನೋಡು” ಎನ್ನುತ್ತಾ ದೊಡ್ಡ ಮಾತಿಗೇ ಪೀಠಿಕೆ ಹಾಕಿಬಿಟ್ಟರು. ಇದೇ ಸಂದರ್ಭವನ್ನು ಬಳಸಿಕೊಂಡು, ಗಾಡಿಯವನೂ ಆರಾಮಾಗಿ ಕುಳಿತು ಆಯಾಸ ಪರಿಹರಿಸಿಕೊಳ್ಳುತ್ತಿದ್ದ.
ರಾಜುವಿನ ಪರಿಸ್ಥಿತಿ ಅರಿತ ರಾಯರೇ, ಸ್ನೇಹದ ಮುಗುಳ್ನಗೆ ನಕ್ಕು, ಅವನ ಅಂಡಿಗೆ ಕಾಣದಂತೇ ಮೆಲ್ಲನೆ ಚಿವುಟಬೇಕಾಯ್ತು. ಹಾಯ್ ಎಂಬ ಸಣ್ಣ ಸದ್ದು ಮಾಡುತ್ತಾ ಎಚ್ಚೆತ್ತ ರಾಜು ಪೆಚ್ಚು ನಗೆ ನಗುತ್ತಾ… “ಹೌದು ವಿಷ್ಣು ಮಾಸ್ತರೆ… ಈಗಷ್ಟೇ ಬರ್ತಿಪ್ಪದು… ಇವರು ನರಸಿಂಹರಾಯರು… ಮೈಸೂರಿನಲ್ಲಿಪ್ಪದು. ದೊಡ್ಡ ಜನ… ನಮ್ಮ ಊರು ನೋಡಲೆ ಹೇಳಿ ಬಂದಿದ್ದು… ಮತ್ತೆ… ಮನೇಲೆಲ್ಲಾ ಆರಾಮಾ?” ಎಂದು ಬಲವಂತದ ನಗೆಯೊಂದಿಗೆ ಉತ್ತರಿಸುತ್ತಾ, ತುಸು ತಡವರಿಸುತ್ತಲೇ ಮತ್ತೆ ಪ್ರಶ್ನಿಸಿದ… “ಮಾಸ್ತ್ರೆ ದಮಯಂತಿ ಮದ್ವೆ ನಿಕ್ಕಿ ಆಯ್ದಾ? ಅಡ ಪಡ ಸುದ್ದಿ ಸಿಕ್ಕಿದ್ದಷ್ಟೇ…. ಯಾವತ್ತು ಮದ್ವೆ?” ಧ್ವನಿ ಆಳದಿಂದ ಬಂದಂತಿತ್ತು. ಕತ್ತಲೆಯು ಅವನ ಮುಖಭಾವವನ್ನು ಬಹು ಚೆನ್ನಾಗಿ ಮರೆಮಾಚಿದ್ದರಿಂದ ಅವರಿಗೂ ಗೊತ್ತಾಗಲಿಲ್ಲ. “ಹೂಂ… ತಿಂಗಳ ಹಿಂದೆ ನಿಕ್ಕಿ ಆಯ್ದು. ನಂಗೂ ಕರೆಯ ಬಂಜು… ಹೋಗವು. ಇವತ್ತಿಗೆ ನಾಲ್ಕು ದಿನ ಇದ್ದು ಮದ್ವೆಗೆ ನೋಡು. ಅಯ್ಯೋ… ಎಂತ ಸಂಭ್ರಮನೋ ಏನೋ ಮಾಣಿ… ನಮ್ಮ ದೇಶದ ದುರ್ದೈವ ನೋಡು. ಸ್ವಾತಂತ್ರ್ಯ ಸಿಕ್ಕಿ ಇಪ್ಪತ್ತು ವರ್ಷನೇ ಆಗೋತು… ಇನ್ನೂ ನಮ್ಮ ಹಳ್ಳಿಗೆ ಕರೆಂಟು ಇಲ್ಲೆ… ರಸ್ತೆ ಸರಿ ಆಯ್ದಿಲ್ಲೆ… ದುಡ್ಡೆಲ್ಲಾ ಆ ದರಿದ್ರ ಚೀನ, ಪಾಕಿಸ್ತಾನ ದೇಶಗಳ ಜೊತೆಗೆ ಯುದ್ಧ ಮಾಡದ್ರಲ್ಲೇ ಖರ್ಚಾಗ್ತಿದ್ದು ಕಾಣ್ತು! ಎರ್ಡು ವರ್ಷದ ಹಿಂದೆ ಪಾಕಿಸ್ತಾನದ ಜೊತೆಗಾದ ಯುದ್ಧದಲ್ಲಿ ಎಷ್ಟು ಜನ ನಮ್ಮ ಸೈನಿಕರು ಸತ್ತ ಗೊತ್ತಿದ್ದಾ? ಪೇಪರಲ್ಲಿ, ರೇಡಿಯೋದಲ್ಲಿ ಹೇಳದಕ್ಕಿಂತ ಜಾಸ್ತಿ ಹೋಗಿರ್ತ್ವಡ…. ಮಿಲ್ಟ್ರೀಲಿ ಇದ್ದು, ಚೀನಾ ಯುದ್ಧದಲ್ಲಿ ಒಂದು ಕಾಲ್ ಕಳ್ಕ ಬಂದ ದಾಸಪ್ಪ ಹೇಳ್ತಿದ್ದ. ಅದೆಂತದೇ ಆದ್ರೂ ಆ ಯುದ್ಧದಲ್ಲಿ ನಾವೇ ಗೆದ್ದಿದ್ದು ಬಿಡು… ಕಾಶ್ಮೀರ ಉಳ್ಕಂಡಿದ್ದೇ ನಮ್ಮ ಸೈನಿಕರ ಪರಾಕ್ರಮದಿಂದಡ. ಆದ್ರೆ ದೇಶದ ಸ್ಥಿತಿ ಏನೂ ಸರಿ ಇಲ್ಯಪ್ಪ… ಬಡತನ ಕಿತ್ತು ತಿಂತಾ ಇದ್ದು ಜನರನ್ನ…. ಈ ಸಮಯದಲ್ಲಿ ಮದ್ವೆ, ಮುಂಜಿಗೆಲ್ಲಾ ಜಾಸ್ತಿ ಗೌಜಿ ಎಂತಕ್ಕೆ ಹೇಳಿ ನಾ ಒಂದ್ಮಾತು ಹೇಳಾಯ್ದು ಭಟ್ರಿಗೆ. ಅವ್ರಿಷ್ಟ… ನಡಸ್ತಾ ಇದ್ರು… ನಾವು ಹೋಗಿ ಹೋಳ್ಗೆ ತಿಂದು ಹರಸಿ ಬಂದ್ರಾತು… ಸರಿ ಸರಿ… ಪಾಪ ದೂರದಿಂದ ಬಂದು ಸಾಕಾಗಿತ್ತು ನಿಮ್ಮ ಗೆಳಯಂಗೆ… ಹೋಗಿ ಮೊದ್ಲು ಮನೆ ಸೇರ್ಕಂಡು ಮಲ್ಗಿ… ಊರ್ತೋಟದಲ್ಲಿ ನಳ ದಮಯಂತಿ ನಾಟ್ಕ ಇದ್ದಡ…. ನಾ ನೋಡಲೆ ಹೊಂಟಿ…. ನಾಳೆ ಸಿಗ್ತಿ” ಮಳೆ ಹೊಯ್ದಂತೇ ಒಂದುಸುರಿಗೇ ಎಲ್ಲವನ್ನೂ ಹೊರ ಹಾಕಿ, ಯಾರ ಪ್ರತ್ಯುತ್ತರಕ್ಕೂ ಕಾಯದೇ, ಹಿಡಿದಿದ್ದ ಸೂಡಿಯನ್ನು ಮುಂದೆ ಹಿಂದೆ ಬೀಸುತ್ತಾ, ದಾಪುಗಾಲಿನಲ್ಲಿ ಮುನ್ನೆಡೆದು ಬಿಟ್ಟರು. ವಿಷ್ಣು ಮಾಸ್ತರರ ಅಪ್ಪ ಸ್ವಾತಂತ್ರ್ಯ ಹೋರಾಟಗಾರರಾಗಿದ್ದವರು. ಅಪ್ಪನ ಆದರ್ಶದಡಿಯಲ್ಲೇ ಬೆಳೆದ ಅವರೂ ಸಹಜವಾಗಿಯೇ ಸದಾ ದೇಶದ ಕುರಿತೇ ಚಿಂತಿಸುತ್ತಿದ್ದರು. ಆದರೆ ಅವರ ಬೇರಾವ ಮಾತುಗಳೂ ರಾಜಾರಾಮನ ಕಿವಿಯನ್ನಂತೂ ಮುಟ್ಟಲಿಲ್ಲ. ತನ್ನ ದಮಯಂತಿಯ ಮದುವೆಗೆ ಇನ್ನು ಉಳಿದಿರುವುದು ಕೇವಲ ನಾಲ್ಕೇ ದಿವಸಗಳು ಎಂಬ ಘೋರ ಸತ್ಯ ತಿಳಿದು ಅವನ ನಿದ್ದೆಯೆಲ್ಲಾ ಹಾರಿ ಹೋಗಿತ್ತು.
ಎತ್ತುಗಳು ಏದುಸಿರು ಬಿಡುತ್ತಾ ಘಲ್ ಘಲ್ ಸದ್ದಿನೊಂದಿಗೆ ಮುಂದೋಡುತ್ತಿದ್ದವು. ರಾತ್ರಿ ಹತ್ತು ಗಂಟೆಯ ಸುಮಾರಿಗೆ ಎತ್ತಿನ ಗಾಡಿ ರಾಜಾರಾಮನ ಮನೆಯ ಮುಂದೆ ನಿಂತಿತು. ಇಬ್ಬರಿಗೂ ಸುಸ್ತು ಎಷ್ಟು ಆವರಿಸಿತ್ತೆಂದರೆ…. ಮನೆಯವರೊಂದಿಗೆ ಸಂಭಾಷಿಸಿದ್ದು, ಬಡಿಸಿದ್ದನ್ನು ಏನೆಂದೂ ನೋಡದೇ ಉಂಡಿದ್ದು, ಎಲ್ಲವೂ ಅರೆ ನಿದ್ದೆಯಲ್ಲೇ. ಅಂತಿಂತು ಇಬ್ಬರೂ ಹಾಸಿಗೆ ಕಾಣುವಾಗ ಮಧ್ಯ ರಾತ್ರಿ ಸಮೀಪಿಸತೊಡಗಿತ್ತು.
*****
ನರಸಿಂಹರಾಯರು ಕಣ್ಬಿಟ್ಟಾಗ ಸೂರ್ಯ ದೊಡ್ಡಕಣ್ಣು ಬಿಟ್ಟಾಗಿತ್ತು. ಕಷ್ಟದಿಂದ ಆಲಸ್ಯ ತೊರೆದು ಏಳ ಹೊರಟರೆ ಮೈ ಕೈಯೆಲ್ಲಾ ಮಣ ನೋವು. ಪಕ್ಕದ ಹಾಸಿಗೆ ಖಾಲಿಯಾಗಿದ್ದು ಕಂಡು ರಾಜಾರಾಮ ಮಹಡಿಯ ಕೆಳಗಿರಬೇಕೆಂದು ತಿಳಿದು ಪ್ರಯಾಸದಿಂದ ಮೈಮುರಿದು ಎದ್ದರು. ಶಾರದೆಯ ಇಂಪಾದ ಬಳೆಗಳ ದ್ವನಿಯ ಜೊತೆಗೆ ಬರುತ್ತಿದ್ದ ಘಮ್ಮೆನ್ನುವ ಕಾಫಿಯ ಪರಿಮಳದ ನೆನಪಾಗಿ ಕಿರುನಗು ಮೂಡಿತು. ನಿಧಾನಕ್ಕೆ ಕೆಳಗಿಳಿದು ಬಂದವರಿಗೆ ಮನೆಯವರಿಂದ ರಾಜೋಪಚಾರವೇ ಕಾದಿತ್ತು. “ರಾಜು ಏನೇನೋ ಹೇಳಿ ನನ್ನ ಹೆಸರ ಎತ್ತರಿಸಿಬಿಟ್ಟಿದ್ದಾನೆ ಮಳ್ಳ… ಸುಮ್ಮನೇ ನನಗೆ ಈಗ ಫಜೀತಿ” ಎಂದು ಒಳಗೊಳಗೆ ಪೇಚಾಡುತ್ತಲೇ ಅವನ ಅಪ್ಪ, ಅಮ್ಮನ ಉಪಚಾರಕ್ಕೆ ಸಂಕೋಚದಿಂದ ಸ್ಪಂದಿಸಿದರು. ಮೊಗೆಕಾಯಿಯ ತೆಳ್ಳೇವು, ಬಾಳೆ ಹಣ್ಣಿನ ಪಾಯಸದ ಭರಪೂರ ಸಮಾರಾಧನೆಯ ನಂತರ, ದೇಹದಾಲಸ್ಯವ ಓಡಿಸಲು ಶುದ್ಧ ತೆಂಗಿನೆಣ್ಣೆಯ ಸವರಿಕೊಂಡು, ಹಂಡೆಯಲ್ಲಿದ್ದ ಬಿಸಿಬಿಸಿ ನೀರಿನ ಸ್ನಾನಕ್ಕೆ ಏರ್ಪಾಡು ಮಾಡಿಸಿದ್ದ ರಾಜಾರಾಮ. ಅವನ ಈ ಪರಿಯ ಓಲೈಕೆ ಕಂಡು ತುಸು ಸಿಟ್ಟೂ, ನಗುವೂ ಏಕಕಾಲಕ್ಕೆ ಉಂಟಾಗತೊಡಗಿತು ರಾಯರಿಗೆ. `ಈ ಬಡಪಾಯಿಗೆ ತಮ್ಮಿಂದೇನು ಸಹಾಯ ಸಾಧ್ಯವಪ್ಪಾ?!’ ಎಂದೇ ತಲೆ ಕೆರೆದುಕೊಳ್ಳತೊಡಗಿದರು. ಮಧ್ಯಾಹ್ನದ ಭೋಜನದ ನಂತರ ರಾಜುವಿನ ಅಪ್ಪ ಅಮ್ಮ ಪಕ್ಕದಲ್ಲೇ ಇದ್ದ ರಾಮಭಟ್ಟರ ಮನೆಗೆ, ಅವರ ಮಗಳ ಮದುವೆ ತಯಾರಿಯಲ್ಲಿ ಕೈಯಾಡಿಸಲು ಹೊರಟಾಗ ಇದೇ ನೆಪವನ್ನಿಟ್ಟುಕೊಂಡು ರಾಜುವೂ ರಾಯಣ್ಣನನ್ನು ಎಬ್ಬಿಸಿಕೊಂಡು ಹೊರಟುಬಿಟ್ಟ.
ರಾಮಭಟ್ಟರ ಮನೆಯೋ ರಾಜುವಿನ ಮನೆಗಿಂತ ಎರಡು ಪಟ್ಟು ದೊಡ್ಡದು! ಹದಿನಾರಂಕಣದ ಮನೆಯ ತುಂಬೆಲ್ಲಾ ನೆಂಟರಿಷ್ಟರು ತುಂಬಿದ್ದರು. ಅವರ ನಡುವೆ ದಮಯಂತಿಯ ಕಿರುನೋಟಕ್ಕಾಗಿ ಹಾತೊರೆಯುತ್ತಾ ಚಡಪಡಿಸಿ ಕುಳಿತಿದ್ದ ರಾಜು. ನರಸಿಂಹರಾಯರ ಕರಾಮತ್ತಿನ ಹಲವು ಕಥೆಗಳನ್ನು ಹಲವರಿಂದ ಈ ಮೊದಲೇ ಕೇಳಿದ್ದ ರಾಮಭಟ್ಟರ ಸಂತಸಕ್ಕೆ ಪಾರವೇ ಇರಲಿಲ್ಲ. ಒಮ್ಮೆ ಭೇಟಿಯಾಗಬೇಕೆಂದು ಬಯಸಿದವರೇ ಮನೆ ಬಾಗಿಲಿಗೆ ಬಂದಿದ್ದು ಅವರಲ್ಲಿ ಬಲು ಹುರುಪು ತುಂಬಿತ್ತು. ಸಂಭ್ರಮದಲ್ಲಿ ಓಡಾಡುತ್ತಾ ಒತ್ತಾಯದಿಂದ ಬಿಸಿ ಬಿಸಿ ಕಷಾಯ ಹಾಗೂ ಹಲಸಿನ ಹಪ್ಪಳದ ಸತ್ಕಾರ ಮಾಡಿದರು. “ನಿಮ್ಮಂತವರು ನಮ್ಮಲ್ಲಿಗೆ ಬರುವುದೇ ಅಪರೂಪ. ಮೂರು ದಿನಕ್ಕೆಲ್ಲಾ ಮಗಳ ಮದುವೆಯಿದೆ. ಹೇಳಿ ಕರೆಯಿಸಿದ ಹಾಗೆ ಬಂದಿದ್ದೀರಿ. ಮುಗಿಸಿಯೇ ಹೋಗದು ನೋಡಿ… ರಾಜಾರಾಮ ಒಳ್ಳೆ ಕೆಲ್ಸ ಮಾಡ್ದೆ ನೀನು, ಇವ್ರ ಕರ್ಕಂಡು ಬಂದು. ಇಂದು ನಾಳೆ ಎಲ್ಲಾ ಇವ್ರಿಗೆ ನಮ್ಮ ಊರು ತೋರ್ಸು…. ನಾಡಿದ್ದು ನಾಂದಿ… ಮರ್ದಿನ ಮದ್ವೆ. ಅದೆಲ್ಲಾ ಮುಗ್ಸಿದ ಮೇಲೆ ಬೇರೆ ಮಾತು. ಶಂಭು ನಿನ್ನ ಮಗನ್ನ ಈ ಮೂರ್ದಿನ ನಮ್ಮನೇಲಿ ಇಟ್ಕತ್ತಿ…. ಅಂವ ಇಲ್ಲದೇ ನರಸಿಂಹರಾಯರು ಇಲ್ಲಿ ಉಳ್ಯದಿಲ್ಲೆ…. ಹಾಂ, ನಿಂಗವೂ ಮನೇಲಿ ಒಲೆ ಹಚ್ಚದೇ ಬೇಡ… ನಮ್ಮಲ್ಲೇ ಊಟ ತಿಂಡಿ… ಆಜ್ಞೆ ಇದು ನಂದು ತಿಳ್ಕ… ವಯಸ್ಸಲ್ಲಿ ಹಿರಿಯ ನಾನು…” ಎಂದು ಆತ್ಮೀಯತೆಯ ಅಧಿಕಾರದಿಂದ ಹೇಳಲು, ಅವರ ಆತ್ಮೀಯತೆಗೆ ಕಟ್ಟು ಬಿದ್ದ ರಾಜಾರಾಮನ ಹೆತ್ತವರೂ ತಲೆಯಾಡಿಸಿಯೇ ಬಿಟ್ಟರು. ಅಷ್ಟರ ಮಟ್ಟಿಗೆ ರಾಜುವಿಗೂ ತುಸು ಸಮಾಧಾನ ಸಿಕ್ಕಿತು. ಕಣ್ಸನ್ನೆಯಲೇ ಗೆಳೆಯನಿಗೆ ಏನಾದರೂ ಮಾಡುವಂತೆ ಕೋರುತ್ತಲೇ ತನ್ನ ಹುಡುಗಿಗಾಗಿ ಎಲ್ಲೆಡೆ ಹುಡುಕಾಡತೊಡಗಿದ. ಇತ್ತ ರಾಯರಿಗೋ ಒಳ್ಳೇ ಪೀಕಲಾಟ.
`ಅಷ್ಟು ಮರ್ಯಾದಿ ಕೊಡುತ್ತಿರುವವರಲ್ಲಿ, ಈಗ ಮದುವೆಗೆ ಮೂರು ದಿವಸ ಇರುವಾಗ, ಏನು ಹೇಳಿ ಕೇಳಿ ಮಾಡೋದಪ್ಪಾ!’ ಎಂದು ತೋಚದೇ ತಲೆ ಕೆಟ್ಟಿತು. ಹುಸಿಗೆಮ್ಮಿನೊಡನೆ ಗಂಟಲು ಸರಿ ಪಡಿಸಿಕೊಳ್ಳುತ್ತಾ, “ಭಟ್ರೆ… ಭರ್ಜರಿ ಮನೆ ನಿಮ್ಮದು… ಖುಶಿ ಆಯ್ತು ನೋಡಿ… ಮತ್ತೆ… ಅಳಿಯ ಆಗುವವನ ಮನೆ ಎಲ್ಲಿ? ಜನ ಎಲ್ಲಾ ಹೇಗೆ? ಅಯ್ಯೋ ಈಗಂತೂ ಎಲ್ಲೆಡೆ ಬೇಡದ ಚಟಗಳ ಹಾವಳಿ ಮಾರಾಯರೆ…” ಎಂದು ಪೀಠಿಕೆ ಹಾಕಲು ರಾಜು ಚುರುಕಾದ. “ಅಯ್ಯೋ ನಿಜ ನೀವು ಹೇಳಿದ್ದು ರಾಯರೇ… ಅದಕ್ಕೇ ನಾನು ಸಮಾ ವಿಚಾರಿಸಿದ್ದೇನೆ. ಮದುವೆಯನು ಭರ್ಜರಿಯಾಗಿ ಮಾಡುತ್ತಿದ್ದೇನೆ. ಒಳ್ಳೆಯ ಜನ ಎಂದೇ ತುಸು ದುಡ್ಡು ಕಾಸು ಕೈ ಬಿಟ್ಟು ಹೋದರೂ ತಲೆ ಬಿಸಿ ಮಾಡ್ದೇ, ದೊಡ್ಡ ಕುಳವಾಗಿರುವ ಈ ಜಾಗಕ್ಕೆ ಮುಂದಾಗಿದ್ದು. ಅವರಲ್ಲಿ ಭರ್ಜರಿ ಜಮೀನಿದೆ… ಮಗಳಿಗೇನೂ ಕೊರತೆ ಆಗ್ದು ಬಿಡಿ. ಹಾಂ… ಸುಮ್ಮನೇ ನಮ್ಮದೇ ಪುರಾಣ ಹೇಳಿ ಊರು ನೋಡಲು ಬಂದಿರುವ ನಿಮಗೆ ಬೇಸರ ಮಾಡಲಾರೆ. ಈಗ ನೀವು ರಾಜುವಿನ ಒಟ್ಟಿಗೆ ತುಸು ತಿರುಗಾಡಿ ಬನ್ನಿ… ಮತ್ತೆ ಸಂಜಿಗೆ ಸಿಗುವ…” ಎನ್ನುತ್ತಾ ಕವಳದ ಬಟ್ಟಲಿನಿಂದ ಅಡಕೆ ಹೋಳೊಂದನ್ನು ಬಾಯಿಗೆ ಹಾಕಿಕೊಂಡವರೇ, ಕೆಲಸದ ನೆನಪಾಗಿ ಹಾಗೇ ಕೊಟ್ಟಿಗೆಯತ್ತ ನಡೆದುಬಿಟ್ಟರು. ಅಸಹಾಯಕ ನೋಟದಿಂದ ರಾಜುವಿನತ್ತ ತಿರುಗಿದ ನರಸಿಂಹರಿಗೆ ಕಂಡಿದ್ದು ಕಣ್ಣಂಚು ತುಂಬಿದ ಅವನ ಮುಖ. ರಾಜಾರಾಮನ ಬಳಿ ಸಾರಿ ಪಿಸು ದನಿಯಲ್ಲಿ “ಏಳೋ ಮಾರಾಯ… ತೋಟ ತೋರ್ಸು… ನಿಂಗೆ ಬೇರೇ ಏನೋ ಒಳ್ಳೆಯದೇ ಕಾದಿದೆ ಅಂದ್ಕೊ… ಈಗ ಹೀಗೆ ಇಲ್ಲಿ ಕಣ್ಣೀರು ಹಾಕ್ಬೇಡ… ನಾನು ಒಮ್ಮೆಯಾದ್ರೂ ದಮಯಂತಿ ನಿನ್ನ ಕಣ್ಣಿಗೆ ಬೀಳೋ ಹಾಂಗೆ ಮಾಡ್ತಿನಿ… ಅಷ್ಟು ಮಾತ್ರ ನನ್ನಿಂದ ಸದ್ಯದಲ್ಲಿ ಸಾಧ್ಯ ನೋಡು… ಈಗ ಏಳು ಇಲ್ಲಿಂದ” ಎಂದು ದಬ್ಬಿಕೊಂಡೇ ಹೊರಟರು.
ಸಾಯಂಕಾಲದ ಹೊತ್ತಿಗೆ ಮನೆ ಸೇರಿದ ರಾಯರು ಚಹಾ, ಚುಡುವದ ಸಂಭ್ರಮದ ಹೊತ್ತಿಗೆಲ್ಲಾ ನಯವಾಗಿ ಮಾತಾಡಿ, ಒಂದೆರಡು ನಗೆ ಚಟಾಕಿಯನ್ನೂ ಹಾರಿಸಿ, ಭಟ್ಟರ ಪತ್ನಿಯಾದ ಪಾರ್ವತಮ್ಮನ ವಿಶ್ವಾಸವನ್ನೂ ಗಳಿಸಿಬಿಟ್ಟರು. “ಪಾರ್ವತಕ್ಕ… ಅಕ್ಕಾ ಅಂತಾ ಕರೀಬಹುದಲ್ವಾ ನಿಮ್ಮನ್ನ? ರಾಜು ನಿಮ್ಗೆ ಪಾತತ್ತೆ ಹೇಳ್ತಾನೆ ಗೊತ್ತು, ಆದ್ರೆ ನಾನು ಅಕ್ಕ ಎಂದೇ ಕರೆಯುವೆ. ಯಾಕಂದ್ರೆ ನಂಗೂ ನಿಮ್ಮಷ್ಟೇ ವಯಸ್ಸಿನ ಇಬ್ಬರು ಅಕ್ಕಂದಿರು ಇದ್ದಾರೆ ಊರಲ್ಲಿ. ಹಾಂ, ನೀವೀಗ ಕೊಟ್ರಲ್ಲ ಅವಲಕ್ಕಿ ಚುಡುವ… ಭಾರಿ ಮಸ್ತಿದೆ. ತುಂಬಾ ಇಷ್ಟ ಆಯ್ತು. ನಾನು ಹೋಗೋವಾಗ ತುಸು ಕಟ್ಟಿಕೊಂಡು ಹೋಗುವೆ. ಹಾಂ, ನನ್ನ ಹೆಂಡತಿ ಶಾರದೆಯಲ್ಲಿ ಹೇಳಿ ಮಾಡಿಸುವೆ. ಹೌದು, ತಂಗಿ ದಮಯಂತಿ ಎಲ್ಲಿ ಕಾಣ್ಸೋದೇ ಇಲ್ಲಾ? ಅಷ್ಟು ನಾಚಿಕೇನಾ?” ಎಂದು ಸಲಿಗೆವಹಿಸಿ ಕೇಳಿಬಿಟ್ಟರು. ಪತಿಯಿಂದ ರಾಯರ ಬಗ್ಗೆ ಬಹುವಾಗಿ ಈ ಮೊದಲೇ ಕೇಳಿದ್ದ ಪಾರ್ವತಮ್ಮನ ಖುಶಿಗೆ ಪಾರವೇ ಇರದಂತಾಯ್ತು. ಪೇಟೆಯಲ್ಲಿ ಹೆಸರು ಮಾಡಿದವರು ತಮ್ಮ ಕೈ ರುಚಿಗೆ ಕೊಟ್ಟ ಬಿರುದಿನಿಂದ ಉಬ್ಬಿ ಹೋಗಿ ಗಲಗಲನೆ ನಗುತ್ತಾ, “ಧಾರಾಳ ಕೊಂಡುಹೋಗಿ ರಾಯರೇ… ನಾನೇ ಕಟ್ಟಿ ಕೊಡ್ತೆ… ಇನ್ನೂ ಸ್ವಲ್ಪ ಹಾಕ್ಲಾ? ಅಲ್ಲಾ ನಮ್ಮನೇ ಕೂಸು ಇಲ್ಲೇ ಎಲ್ಲೋ ಇತ್ತಪ ಇಷ್ಟೋತ್ತು… ತಂಗಿ… ದಮಯಂತಿ… ಇಲ್ಬಾ… ಮೈಸೂರಿಂದ ದೊಡ್ಡ ಜನ ಬಂಜ… ನಮಸ್ಕಾರ ಮಾಡು….” ಎಂದು ಗಟ್ಟಿಯಾಗಿ ಕೂಗಲು, ಒಳ ಕೋಣೆಯಲ್ಲೆಲ್ಲೋ ಇದ್ದ ಹುಡುಗಿ ಕೈ ಬಳೆಗಳ ಸದ್ದಿನ ಜೊತೆ, ಕಾಲ್ಗೆಜ್ಜೆಯ ನಾದವನ್ನು ಬೀರುತ್ತಾ ನಿಧಾನ ನಡೆದು ಬರಲು ರಾಜಾರಾಮ ಕುಳಿತಲ್ಲೇ ಶಿಲೆಯಾದ.
ಹಸಿರು ಪತ್ತಲವನ್ನು ಉಟ್ಟು, ಅದರ ಸೆರಗನ್ನು ಮೈತುಂಬಾ ಹೊದ್ದು, ಎಳೆಯ ಕೆನ್ನೆಗಳಿಗೆ ಅರಿಶಿನ ಬಳಿದುಕೊಂಡು, ಎಣ್ಣೆಹಾಕಿ ಬೈತಲೆ ತೆಗೆದು ಬಿಗಿಯಾಗಿ ಒಂದು ಜಡೆ ಹಾಕಿ, ಮಲ್ಲಿಗೆ ಹೂವ ಮುಡಿದ ಸುಮಾರು ಹದಿನಾರು ವರುಷದ ಆಸುಪಾಸಿನ ದಮಯಂತಿ, ನರಸಿಂಹರ ಮುಂದೆ ಬಂದು ತುಸುವೇ ತಲೆ ಎತ್ತಿ ನಮಸ್ಕಾರ ಮಾಡಿದಳು. ಆಗ ಅಲ್ಲೇ ಪಕ್ಕದಲ್ಲೇ ಇದ್ದ ರಾಜಾರಾಮನ ಕಂಡಿದ್ದೇ ಅವಳ ಕಣ್ಣಾಲಿಗಳು ತುಂಬಿಕೊಳ್ಳಲು ತಲೆ ತಗ್ಗಿಸಿ, ತಕ್ಷಣ ಅಲ್ಲಿಂದ ಒಳಗೆ ನಡೆದುಬಿಟ್ಟಳು. ಇತ್ತ ದುಃಖ ತಪ್ತನಾದ ರಾಜಾರಾಮನೂ ಕಣ್ಣೀರ ಸುರಿಸಲು ಏಕಾಂತವನ್ನರಸಿ, ಏನೋ ಕೆಲಸದ ನೆಪ ಹೇಳಿ ಹೊರನಡೆಯಲು, ಪಾಪದ ಹುಡುಗರ ಈ ಸಂಕಟ ನೋಡಿ ಮತ್ತೂ ಕೆಡುಕೆನಿಸಿತು ರಾಯರಿಗೆ. “ಛೇ, ಎಂಥಾ ಅನರ್ಥವಾಗೋಯ್ತು! ಈ ಕೂಸೂ ಇವನಷ್ಟೇ ಬೇಯುತ್ತಿದೆಯಲ್ಲಾ…. ಹೆಂಡತಿ ಶಾರದೆಯನ್ನಾದರೂ ಜೊತೆಗೆ ಕರೆತಂದಿದ್ದರೆ ಏನಾದರೂ ಉಪಾಯ ಮಾಡಬಹುದಿತ್ತೇನೋ. ಪಾಪಿ ರಾಜು, ನಿಂತ ಕಾಲಲ್ಲೇ ಓಡಿಸಿಕೊಂಡು ಬಂದ” ಎಂದು ಅವನನ್ನೇ ಮತ್ತೊಮ್ಮೆ ಬೈದುಕೊಂಡರು. ಪರ ಊರಿನಲ್ಲಿ, ಅರಿಯದ ಜನರ ನಡುವೆ ಒಂಟಿಯಾದ ತನ್ನ ಭಾಗ್ಯವನ್ನು ನೋಡಿ, ಸ್ವಯಂ ಹಳಿದುಕೊಳ್ಳುತ್ತಾ, ಹೆಬ್ಬಾಗಿಲಿನಲ್ಲಿದ್ದ ಬೆಂಚಲ್ಲಿ ಕುಳಿತಾಗಲೇ ರಾಮಭಟ್ಟರು ಬಹು ಆತಂಕ ಹೊತ್ತ ಮೊಗದೊಂದಿಗೆ ಅವರ ಬಳಿ ಬಂದಿದ್ದು.
“ರಾಯರೇ ಪ್ರಮಾದವಾಗಿ ಬಿಟ್ಟಿದೆ! ಕ್ಷಮಿಸಿ… ಅತಿಥಿಗಳಾದ ನಿಮಗೆ ತೊಂದ್ರೆ ಕೊಡ್ಬೇಕಾಗಿದೆ. ನೀವು ತಿಳಿದವರು, ನಿಮ್ಮಂದ ಮಾತ್ರ ಈ ಸಹಾಯ ಸಾಧ್ಯ. ದಯವಿಟ್ಟು ಸಹಾಯ ಮಾಡಿ…” ಎಂದು ಮೆಲುವಾಗಿ ಹೇಳುತ್ತಾ ಅವರ ಅಂಗೈ ಒತ್ತಲು ಅಚ್ಚರಿಯಾಯಿತು ರಾಯರಿಗೆ. “ಭಟ್ಟರೆ ಇಷ್ಟೆಲ್ಲಾ ಯಾಚನೆ ಯಾಕೆ? ನಾನೂ ನಿಮ್ಮವನೇ ಎಂದು ತಿಳಿಯಿರಿ… ಎಂತ ಸಮಸ್ಯೆ ಬಂದಿದೆ ಹೇಳಿ ನೋಡೋಣ” ಎನ್ನಲು, ಅತ್ತಿತ್ತ ನೋಡಿದ ಭಟ್ಟರು ಸನ್ನೆಯಲ್ಲೇ ತಮ್ಮನು ಹಿಂಬಾಲಿಸಲು ಹೇಳಿ ಮನೆಯ ಜಗುಲಿಯಲ್ಲಿದ್ದ ಮಹಡಿಯ ಮೆಟ್ಟಿಲುಗಳನ್ನೇರಲು, ಅವರನ್ನೇ ಮೌನವಾಗಿ ಹಿಂಬಾಲಿಸಿದರು ರಾಯರು.
*****
ಮೆತ್ತಿಯ ಮೇಲಿದ್ದ ನಾಲ್ಕು ಕೋಣೆಗಳಲ್ಲೇ ತುಸು ದೊಡ್ಡದಾಗಿದ್ದ ಕೋಣೆಯೊಳಗೆ ಹೋದ ಭಟ್ಟರು, ರಾಯರು ಒಳ ಬರುತ್ತಿದ್ದಂತೇ ಬಾಗಿಲು ಹಾಕಿ ಚಿಲುಕ ಹಾಕಿ ಬಿಡಲು ಅವರಿಗೆ ಅಚ್ಚರಿಯಾಯಿತು. ಅವರತ್ತ ಗಮನ ಕೊಡದೇ, ಕೋಣೆಯಲ್ಲಿದ್ದ ದಪ್ಪ ಬಾಗಿಲಿನ ಮರದ ಕಪಾಟನ್ನು ತಮ್ಮ ಸೊಂಟದಲ್ಲಿ ಸಿಕ್ಕಿಸಿದ್ದ ಕೀ ಗೊಂಚಲಿನಲ್ಲಿದ್ದ ಕೀಯೊಂದರಿಂದ ತೆಗೆದು, ಅದರ ಡ್ರಾವರಿನೊಳಗಿದ್ದ ಪುಟ್ಟ ಕೆಂಪು ಪೆಟ್ಟಿಗೆಯ ಮುಚ್ಚಳವನ್ನು ತೆರೆದು ರಾಯರ ಎದುರು ಇಟ್ಟರೆ, ಅದು ಖಾಲಿಯಾಗಿತ್ತು. ಮ್ಲಾನವದನರಾಗಿ ಭಟ್ಟರು ಅಲ್ಲೇ ಇದ್ದ ಮಂಚದ ಮೇಲೆ ಕುಸಿದು ಕೂರಲು, ಗಾಭರಿಗೊಂಡರು ನರಸಿಂಹರು. “ಅಲಾ, ಏನಾಯ್ತು ಭಟ್ಟರೆ? ಈ ಬಾಕ್ಸ್‌ನಲ್ಲೇನಿತ್ತು? ಏನಾದ್ರೂ ಕಳುವಾಗಿದ್ಯೇ?” ಎಂದು ಕಳಕಳಿಯಿಂದ ಅವರ ಹೆಗಲ ಮೇಲೆ ಕೈ ಹಾಕಿ ಕೇಳಲು ಹನಿಗಣ್ಣಾದರು ರಾಮಭಟ್ಟರು. “ರಾಯರೇ ಎಂತ ಹೇಳಲಿ? ಇನ್ನು ನಿಮ್ಮ ಬಳಿ ವಿಷಯ ಮುಚ್ಚಿಟ್ಟರೆ ಕೆಲಸ ಆಗದು. ನೋಡಲೇನೋ ನಮ್ಮದು ದೊಡ್ಡ ಕುಳ. ಇಷ್ಟು ದೊಡ್ಡ ಮನೆ, ಆಳು ಕಾಳು ಇದೆ ಎಂದೆನಿಸುವುದು. ಆದರೆ ಸಾಲ ಸೋಲದಿಂದ ನಮ್ಮಲ್ಲಿ ಉಳಿದುಕೊಂಡಿರುವುದು ಈಗ ಎರಡಕರೆ ತೋಟವಷ್ಟೇ! ನಮ್ಮ ಏಕೈಕ ಮಗನ ಬದುಕಿಗೆ ಅದು ಬೇಡವೇ? ಅಳಿಯ ಮಾಣಿಯ ಅಪ್ಪ ಆ ತೋಟಕ್ಕೇ ಕಣ್ಣು ಹಾಕಿದ್ದ. ಆದರೆ ಅದನ್ನು ಕೊಡಲು ಮನಸೊಪ್ಪಲೇ ಇಲ್ಲಾ. ಮಗಳಂತೇ ಮಗನೂ ನಮ್ಮ ರಕ್ತವೇ ತಾನೇ? ಅಳಿಯನದು ಕನ್ಯಾ ರಾಶಿ, ಒಳ್ಳೇ ಜಾತಕ ಎಂದು ಜೋಯಿಸರು ಬೇರೆ ಹೇಳಿದ್ದರು. ಸರಿ… ಮುತ್ತಜ್ಜನ ಕಾಲದಿಂದ ನಮ್ಮೊಂದಿಗಿದ್ದ ಹೆಬ್ಬೆರಳಿನ ಗಾತ್ರದ ಸಾವಿರಗಟ್ಟಲೆ ರೂಪಾಯಿ ಬೆಲೆಬಾಳುವ ಮರಕತ ಮಣಿಯನ್ನು ಮದುವೆಯಲ್ಲಿ ಉಡುಗೊರೆಯಾಗಿ ಕೊಡ್ತೀನಿ ಎಂದಿದ್ದೆ. ಹೇಗೂ ಪಚ್ಚೆ ಕನ್ಯಾ ರಾಶಿಗೆ ಚೆನ್ನಾಗಿ ಒಪ್ಪುತ್ತೆ. ಮದುವೆಯದಿನ ಪರರ ಸೊತ್ತಾಗುವ ಅದನ್ನು ಮತ್ತೊಮ್ಮೆ ನೋಡಿ ಬಿಡುವ ಎಂಬ ಆಸೆಯಿಂದ ಬಂದರೆ, ಪೆಟ್ಟಿಗೆ ಖಾಲಿಯಾಗಿದೆ!!
ತಪ್ಪು ನಂದೇ, ಅದನ್ನು ಆವತ್ತೇ ಬೇರೆಡೆ ಇಟ್ಟು ಬಿಡಬೇಕಿತ್ತು… ಗೋಪಾಲನ ಜೊತೆ ಜಗಳವಾದ ಮೇಲೂ ನಿರ್ಲಕ್ಷಿಸಿದ್ದು ಸರಿಯಲ್ಲಾ… ಅಯ್ಯೋ ದೇವ್ರೇ ಈಗೇನು ಮಾಡ್ಲಿ? ಈ ಸುದ್ದಿ ಹೊರ ಬಿದ್ದರೆ ಮಗಳ ಮದುವೆಯ ಗತಿ ಏನು?” ಎಂದು ಸಣ್ಣ ದನಿಯಲ್ಲಿ ಅಳಲು ಶುರುಮಾಡಿಬಿಟ್ಟರು. ಇದೀಗ ರಾಯರ ಪತ್ತೇದಾರಿ ಬುದ್ಧಿ ಸಂಪೂರ್ಣ ಜಾಗೃತಗೊಂಡಿತು. “ಭಟ್ಟರೇ ಈ ಗೋಪಾಲ ಯಾರು? ಯಾಕೆ ಜಗಳ ಆಯ್ತು? ಅಲ್ಲಾ ಕಪಾಟಿನ ಕೀ ಗೊಂಚಲು ಸದಾ ನಿಮ್ಮೊಂದಿಗೇ ಇರುತ್ತದೆಯಲ್ಲಾ… ಮತ್ತೆ ಹೇಗೆ ಈ ಕಳುವು?” ಎಂದು ನೇರವಾದ ಪ್ರಶ್ನೆಗಳನ್ನು ಹಾಕಿದರು. ತುಸು ಅತ್ತು ಹಗುರಾಗಿ ಸಮಾಧಾನಿಸಿಕೊಂಡ ಭಟ್ಟರು ಸಾವಕಾಶವಾಗಿ ಉತ್ತರಿಸತೊಡಗಿದರು.
“ರಾಯರೇ ಗೋಪಾಲ ನನ್ನ ದಾಯವಾದಿ ತಮ್ಮ. ಅವನಿಗೆ ಮೊದಲಿನಿಂದಲೂ ನನ್ನಲ್ಲಿದ್ದ ಈ ಪಚ್ಚೆ ಮಣಿಯ ಮೇಲೆ ಕಣ್ಣಿತ್ತು. ವಂಶಾವಳಿಯಲ್ಲಿ ಅದು ನನ್ನ ಪಾಲಿಗೆ ಬಂದಾಗಲೇ ಅಸಮಾಧಾನ ತೋರಿದ್ದ. ಅದು ಹೇಗೋ ಈಗ ಅವನಿಗೆ ನಾನದನ್ನು, ಬೀಗರಿಗೆ ಕೊಡುತ್ತಿರುವುದು ತಿಳಿದು ಬಿಟ್ಟಿದೆ. ಎರಡು ದಿನದ ಹಿಂದೆ ಕೊಡುವ ಮುನ್ನ ಒಮ್ಮೆ ನನಗೆ ತೋರಿಸು ಎಂದಾಗ, ಜಗಳ ಏಕೆಂದು ನಾನೇ ಇಲ್ಲಿಗೆ ಕರೆದು ತೋರಿಸಿ ಒಳಗಿಟ್ಟಿದ್ದೆ. ಅದೇ ದಿನ ಮಧ್ಯಾಹ್ನವೇ ಆತ ಮತ್ತೆ ತಗಾದೆ ತೆಗೆದು, ಅದರಲ್ಲಿ ನನಗೂ ಪಾಲಿದೆ ಅರ್ಧ ಮೊತ್ತವನ್ನಾದರೂ ಪಾವತಿಸಿ ಪಚ್ಚೆ ಮಣಿಯನ್ನು ಕೊಡು ಎಂದು ಜಗಳವಾಡಿದ್ದ. ನಾನೂ ತುಸು ಒರಟಾಗೇ ಬೈದು ಸಾಗಹಾಕಿದ್ದೆ. ಆದರೆ ಅದನ್ನೆಲ್ಲಾ ಮರೆತ ಆತ, ಮರುದಿನವೇ ಬಂದು ಕ್ಷಮೆ ಕೋರಿ, ಮದುವೆಯ ತಯಾರಿಗೆ ಸೇರಿಕೊಂಡಿದ್ದ. ಎಷ್ಟೆಂದರೂ ದಾಯವಾದಿ ತಮ್ಮ, ಈ ಸಮಯದಲ್ಲಿ ನಿಷ್ಠುರ ಸಲ್ಲ ಎಂದು ನಾನೂ ಸುಮ್ಮನಾಗಿದ್ದೆ. ಈಗ ನೋಡಿದರೆ ಪರಾಮಶಿ ಆಗಿ ಬಿಟ್ಟಿದೆ. ಅವನದೇ ಕೆಲಸ ಇದು… ಇವತ್ತು ಬೆಳಗ್ಗಿನಿಂದ ನನ್ನ ನೋಡಿ ಮುಸಿಮುಸಿ ನಗುತ್ತಿದ್ದಾನೆ ಮನೆಹಾಳ. ನನ್ನ ಕೆಲಸದ ಒತ್ತಡದಲ್ಲಿ ಎಲ್ಲೋ ಬೀಗ ಮರೆತು ಇಟ್ಟು ಬಿಡುತ್ತಿರುತ್ತೇನೆ. ಬಹುಶಃ ಆ ಸಮಯವನ್ನೇ ಕಾದು ದುಷ್ಟ ಎಗರಿಸಿ ಕದ್ದಿದ್ದಾನೆ. ನೆಂಟರಿಷ್ಟರು ತುಂಬಿರುವ ಮನೆ… ಗಟ್ಟಿ ಕೇಳುವಂತೆಯೂ ಇಲ್ಲಾ. ಈ ಮನೆಯಿಂದ ಆತ ಹೊರಬಿದ್ದರೆ, ನನ್ನ ಜನರ ಕಳಿಸಿ ಕೈ ಕಾಲು ಮುರಿಸಿಯಾದರೂ ಕೇಳಿಯೇನು. ಅಂವ ನರಿ ಬುದ್ಧಿಯವ…. ಮನೆಯಿಂದ ಹೊರಗೇ ಬೀಳುತ್ತಿಲ್ಲ…. ನಿನ್ನೆಯೇ ಹೆಂಡತಿ ಸಮೇತ ಇಲ್ಲಿಗೆ ಬಂದು ಝಂಡಾ ಹಾಕಿಬಿಟ್ಟಿದ್ದಾನೆ. ನಾಳೆ ನಾಂದಿ ಬೇರೆ…. ತುಂಬಿದ ಜನರ ಮುಂದೆ ವಿಷಯ ಹೊರಗೆ ಬಿದ್ದು ಬೀಗರಿಗೆ ಗೊತ್ತಾದರೆ, ಮದುವೆಯೇ ನಿಂತು ಹೋಗುತ್ತದೆ. ಮುಂದೆ ಮಗ್ಳ ಭವಿಷ್ಯದ ಗತಿ?! ಈ ದುಃಖದಲ್ಲಿ ನಾನು ಆಜೀವ ಪರ್ಯಂತ ಬೇಯಬೇಕು. ನೀವೇ ಈಗ ಇದರಿಂದ ಪಾರು ಮಾಡಿ….” ಎನ್ನುತ್ತಾ ಅವರ ಕಾಲಿಗೆರಗಲು, ಹಾರಿ ಎದ್ದು ನಿಂತರು ರಾಯರು. “ಅಯ್ಯೋ ಎಂತ ಕೆಲಸ ಮಾಡುತ್ತಿದ್ದೀರಿ ನೀವು… ವಯಸ್ಸಿನಲ್ಲಿ ನಾನು ನಿಮಗಿಂತ ಬಲು ಚಿಕ್ಕವ… ಏಳಿ ಎದ್ದೇಳಿ, ನನ್ನ ಕೈಲಾದದ್ದನ್ನು ಮಾಡುತ್ತೇನೆ ಧೈರ್ಯವಾಗಿರಿ. ಆ ಭಗವಂತ ಕಾಪಾಡುವ” ಎಂದು ಭಟ್ಟರಿಗೆ ಸಮಾಧಾನ ಮಾಡಿ, ಭರವಸೆ ಕೊಟ್ಟು, ಅದರೊಂದಿಗೆ ರಾಜಾರಾಮನಿಗಿತ್ತ ಅಭಯವನ್ನೂ ನೆನೆದು, ಎರಡೆರಡು ಭಾರವನ್ನು ಹೊತ್ತು ಕೆಳಗಿಳಿದು ಬರುವಾಗಲೇ ರಾಜು ಎದುರಾಗಿದ್ದ.
“ಎಲ್ಲಿ ಹೋಗಿದ್ದೆ ಅಣ್ಣಯ್ಯ! ನನ್ನ ಬದುಕೇ ಇಲ್ಲಿ ನಾಶವಾಗ್ತಿದೆ… ನೀ ನೋಡಿದ್ರೆ ಆರಾಮಾಗಿದ್ದೀಯಾ. ಅಲ್ಲಾ… ರಾಮ ಮಾವ ಎಂತಕ್ಕೆ ಗುಟ್ಟಾಗಿ ಕರೆದದ್ದು ನಿನ್ನ? ಎಂತ ವಿಷ್ಯ? ನಾನು ಆವಾಗ್ಲೇ ನೀವಿಬ್ರು ಮೇಲೆ ಹೋಗಿದ್ದನ್ನ ಗಮನಿಸಿದ್ದೆ” ಎಂದು ವಿಚಾರಿಸಲು, `ಅಬ್ಬಾ ಇವನ ಕಣ್ಣೇ!’ ಎಂದು ಮನದಲ್ಲೇ ಮೆಚ್ಚಿಕೊಂಡು, ನಿಜ ಸಂಗತಿಯ ಬಾಯ್ಬಿಡಲು ಹೋದವರು ತೆಪ್ಪಗಾದರು. “ಮೊದಲೇ ತಲೆ ಕೆಟ್ಟಿದೆ ಈತನದು. ಈ ಸುದ್ದಿ ತಿಳಿದರೆ ಹಾಲು ಕುಡಿದವನಂತೇ ಡಂಗುರ ಸಾರಿ, ಮದುವೆ ಮುರಿಸಲು ಯತ್ನಿಸುವ. ಹೌದು, ದಮಯಂತಿ ಇವನಿಗೆ ಸಿಗಬೇಕು… ಹಾಗಂತ ನನ್ನ ಮೇಲೆ ವಿಶ್ವಾಸವನ್ನಿಟ್ಟ ಭಟ್ಟರಿಗೆ ದ್ರೋಹ ಬಗೆಯಲಾರೆ. ಎರಡಕ್ಕೂ ಪರಿಹಾರ ಬೇಕು ಈಗ. ನೋಡುವ…” ಎಂದು ಸ್ವಗತಿಸುತ್ತಾ, ಅವನಿಗೆ ಏನೋ ಒಂದು ಹಾರಿಕೆಯ ಉತ್ತರ ಕೊಟ್ಟು, ಅವನಿಂದ ಬಿಡಿಸಿಕೊಂಡು, ಏನೋ ನಿಶ್ಚಯಿಸಿದವರಂತೇ ಗೋಪಾಲಭಟ್ಟನಿದ್ದಲ್ಲಿಗೆ ನೇರ ತೆರಳಿದರು.
ಹಿತ್ತಲ ಜಗುಲಿಯಲ್ಲಿ ಚಕ್ಕುಲಿ ಸುತ್ತುತ್ತಿದ್ದ ಹೆಂಗೆಳೆಯರ ನಡುವೆ ಕುಳಿತು, ತನ್ನ ಬಾಯಿಯಲ್ಲಿ ತುಂಬಿದ್ದ ಕವಳದ ರಸವನ್ನು ಒರೆಸಿಕೊಳ್ಳುತ್ತಾ, ನಗೆ ಚಟಾಕಿ ಹಾರಿಸುತ್ತಿದ್ದ ಗೋಪಾಲ. ಅಷ್ಟೊತ್ತಿಗಾಗಲೇ ಭಟ್ಟರ ಬಾಯಿಯಿಂದ ನರಸಿಂಹರಾಯರ ಗುಣ ವಿಶೇಷಣಗಳು ಅಲ್ಲಿದ್ದ ಹಲವರಿಗೆ ತಿಳಿದು ಹೋಗಿದ್ದವು. ಅಂತೆಯೇ, ಮೆಲ್ಲನೆ ಅವನ ಹಿಂಭಾಗಕ್ಕೆ ಬಂದು ರಾಯರು ಹೆಗಲು ತಟ್ಟಿದಾಗ, ಹಿಂತಿರುಗಿದ ಗೋಪಾಲನು ಛಕ್ಕನೆ ಅವರ ಗುರುತು ಹಿಡಿದು, ಹುಳ್ಳನೆ ನಕ್ಕು ಕೈ ಕುಲುಕಿದ. ಅವನ ಕೈಗೆ ಮೆತ್ತಿದ್ದ ಪಾನಿನ ರಸ ಅವರ ಕೈತಾಗಲು, ಅವರಿಗೆ ತುಸು ಹೇವರಿಕೆಯಾದರೂ, ಇನಿತೂ ತೋರ್ಪಡಿಸದೇ, ಮುಗುಳ್ನಕ್ಕರು.
“ಗೋಪಾಲಭಟ್ಟರು ಎಂದರೆ ತಾವೋ? ನಿಮ್ಮ ಬಳಿ ತುಸು ಮಾತನಾಡುವುದಿತ್ತಲ್ಲ… ಇತ್ತ ಬರುವಿರಾ?” ಎನ್ನಲು, ಕವಳದ ರಸ ಜಾರದಂತೇ ಮೊಗ ಮೇಲು ಮಾಡಿಕೊಂಡು “ಆಗಲಿ, ಬನ್ನಿ ಹಿತ್ತಲ ಅಂಗಳದ ಕಡೆ ಹೋಗುವ ತಿಂಗಳ ಬೆಳಕಿದೆ ಇಂದು” ಎಂದು ತಾನೇ ಮುಂದಾಗಿ ಸಾಗಿದ ಗೋಪಾಲ.
“ಗೋಪಾಲಭಟ್ಟರೆ ನಾನು ನೇರ ವಿಷಯಕ್ಕೆ ಬಂದು ಬಿಡುವೆ. ನಿಮ್ಮ ಅಣ್ಣ ರಾಮಭಟ್ಟರು ಎಲ್ಲಾ ವಿಷಯ ಹೇಳಿದ್ದಾರೆ. ವಿಷಯ ಏನು ಅಂತ ನಿಮಗೂ ಗೊತ್ತು. ಸುಮ್ಮನೇ ಸಮಯ ವ್ಯರ್ಥ ಯಾಕೆ? ಅವರ ಪದಾರ್ಥ ಅವರಿಗೆ ಕೊಟ್ಟು ಬಿಡಿ. ಈ ಪೋಲೀಸು, ಕೋರ್ಟು ಅಲೆದಾಟದ ಕರಕರೆಯೆಲ್ಲಾ ಯಾಕಾಗಿ ಅಲ್ಲವೇ?” ಎಂದು ಮಾರ್ಮಿಕವಾಗಿ ನಗಲು, ಅಲ್ಲೇ ಇದ್ದ ತೆಂಗಿನ ಸಸಿಯ ಬುಡಕ್ಕೆ ಪಿಚಕ್ಕನೆ ಕವಳ ತುಪ್ಪಿದ ಗೋಪಾಲ ಗಹಗಹಿಸಿ ನಗತೊಡಗಿದ.
“ರಾಯರೇ… ನಿಮ್ಮ ಬಗ್ಗೆ ನಾನೂ ಸಾಕಷ್ಟು ಕೇಳಿದ್ದೇನೆ. ಸಂಜೆ ರಾಮಣ್ಣ ನಿಮ್ಮನ್ನು ಮೆತ್ತಿಯ ಮೇಲೆ ಕರೆದೊಯ್ಯುತ್ತಿದ್ದುದನ್ನು ನಾನೂ ಗಮನಿಸಿದ್ದೇನೆ. ಇರಲಿ. ಆಂ… ಏನಂದ್ರಿ? ಅವರ ವಸ್ತು? ಮರಕತ ಮಣಿ ನನ್ನ ವಂಶಕ್ಕೂ ಸೇರಿದ್ದು… ಪಾಲು ಕೊಡಲು ಒಪ್ಪದಿದ್ದಾಗ ಕಸಿಯುವುದೇ ಸರಿ ಅಲ್ವೆ? ಹೌದು. ನಾನೂ ನೇರವಾಗಿ ಹೇಳ್ತೇನೆ. ನಾನೇ ಆ ಮಣಿ ಕದ್ದಿದ್ದು… ಛೇ, ಛೇ… ಕದ್ದಿದ್ದಲ್ಲ… ತೆಗ್ದಿದ್ದು. ಇನ್ನು ನಿಮ್ಮ ಪತ್ತೇದಾರಿಕೆ ಬುದ್ಧಿ ನನ್ನೊಂದಿಗೆ ಬೇಡ ಹಾಂ! ಇಕಳಿ… ಇದು ನಮ್ಮ ರೂಮಿನ ಕೀ… ನಿಮಗೇ ಕೊಟ್ಟು ಬಿಡುತ್ತೇನೆ. ಬೇಕಾದ್ದು ಮಾಡಿ… ಮೂಲೆ ಮೂಲೆ ಹುಡುಕಿ. ಬೇಕಿದ್ದರೆ ಬೇರೆ ಕೋಣೆಗಳನ್ನೂ ತದಕಿ. ಪಚ್ಚೆ ಮಣಿ ಸಿಕ್ಕರೆ ಅದು ಅಣ್ಣನದು. ಇಲ್ಲದಿದ್ದರೆ ತೆಪ್ಪಗಿದ್ದುಬಿಡಿ ಸರೀನಾ? ಹಾಂ… ನನ್ನ ಏಕೈಕ ಕುಲಪುತ್ರನ ಮೇಲಾಣೆ… ಮರಕತ ಮಣಿ ಇದೇ ಮನೆಯಲ್ಲಿದೆ ರಾಯರೇ. ಬೇರೆಲ್ಲೋ ಸಾಗಿಸಿಲ್ಲ, ಮಣ್ಣಲ್ಲಿ ಹುಗಿದಿಲ್ಲ. ತಾಕತ್ತಿದ್ದರೆ ಹುಡುಕಿರಿ ನಾನೂ ನೋಡ್ತೇನೆ” ಎಂದು ನೇರಾನೇರ ಪಂಥವನ್ನೇ ಹಾಕಿ, ಕುಹಕವಾಗಿ ನಗಲು, ರಾಯರು ಮನದಲ್ಲೇ ಶಪಥ ಮಾಡಿ ಬಿಟ್ಟರು. ಶತಾಯುಗತಾಯು ಮರಕತ ಮಣಿಯನ್ನು ರಾಮ ಭಟ್ಟರಿಗೆ ಕೊಡಿಸಿಯೇ ಸಿದ್ಧ ಎಂದು. ಮತ್ತೆ ಅವನಲ್ಲಿ ಮಾತು ಮುಂದುವರಿಸಿ ಪ್ರಯೋಜನವಿಲ್ಲದ್ದು ಕಂಡ ರಾಯರು ತಣ್ಣಗೆ ಅಲ್ಲಿಂದ ಹೊರಟರು. ಹೋಗುವಾಗ ಸಂಕೋಚವಿಲ್ಲದೇ ಗೋಪಾಲನು ತಾನಾಗೇ ಮುಂದೆ ಚಾಚಿದ್ದ ಅವನ ಕೋಣೆಯ ಬೀಗವನ್ನೊಯ್ದೇ ಹೋಗಿದ್ದು.
ರಾಜಾರಾಮನಿಗೋ ಇದಾವುದರ ಅರಿವೆಯೂ ಇರಲಿಲ್ಲ… ಬೇಕೂ ಆಗಿರಲಿಲ್ಲ. ತಲೆನೋವಿನ ನೆಪವೊಡ್ಡಿ, ಸೀದಾ ತನ್ನ ಮನೆಗೆ ಹೋಗಿ ಮುಸುಕು ಹಾಕಿ ಮಲಗಿ ಬಿಟ್ಟಿದ್ದ ತನ್ನನ್ನೇ ನಂಬಿ ಬಂದಿದ್ದ ರಾಯಣ್ಣನನ್ನೂ ಮರೆತು. ಇದು ರಾಯರಿಗೆ ವರವೇ ಆಗಿತ್ತು. ಅಂತೆಯೇ ಒಂದೆಡೆ ಕುಳಿತು ಏಕಾಗ್ರ ಚಿತ್ತದಿಂದ ಚಿಂತಿಸಲು ತೊಡಗಿದರು. ಇತರರಿಗೆ ಅನುಮಾನ ಬಾರದಂತೇ, ರಾಮ ಭಟ್ಟರಿಗೊಂದು ಮಾತು ತಿಳಿಸಿಯೇ, ರಾತ್ರಿಯೂಟಕ್ಕೆಂದು ಎಲ್ಲರೂ ಅಂಗಳದ ಚಪ್ಪರಕ್ಕೆ ಹೋದಾಗ, ಲಾಟೀನು ಹಿಡಿದುಕೊಂಡು ಗೋಪಾಲನ ಕೋಣೆಯ ಹೊಕ್ಕು ಅವನ ಟ್ರಂಕು, ಅದರೊಳಗಿನ ಕೆಲವು ಬಟ್ಟೆಗಳು, ಮುರುಕು ಪೆಟ್ಟಿಗೆಗಳನೆಲ್ಲಾ ಜಾಲಾಡಿದ್ದಾಯಿತು. ಊಟವನ್ನೂ ಮರೆತು, ಬೇರೆ ನಾಲ್ಕೈದು ಕೋಣೆಗಳನ್ನೂ ಭಟ್ಟರ ಸಹಕಾರದೊಂದಿಗೇ ಹುಡುಕಾಡಿದರು. ಊಹೂಂ, ಮಣಿ ಹೋಗಲಿ… ಹೊಳೆವ ಸೂಜಿಯೂ ಕಣ್ಣಿಗೆ ಬೀಳಲಿಲ್ಲ. ಇನ್ನೇನಿದ್ದರೂ ನಾಳೆ ಹಗಲಲ್ಲೊಮ್ಮೆ ಎಲ್ಲವನ್ನೂ ಝಾಡಿಸಿ ನೋಡುವ ಎಂದು ಬಗೆದು, ಜಗುಲಿಯಲ್ಲಿ ತಮಗಾಗಿ ಬಿಡಿಸಿದ್ದ ಹಾಸಿಗೆಯಲ್ಲಿ ಅಡ್ಡಾದರು. ನಿದ್ದೆ ಯಾವಾಗ ಆವರಿಸಿತೋ ಅವರಿಗೂ ಅರಿವಾಗಲಿಲ್ಲ.

ಮರುದಿನ ನಾಂದಿಯಂತೂ ಹೇಗೋ ಗುಟ್ಟು ರಟ್ಟಾಗದಂತೇ ನೆರವೇರಿಬಿಟ್ಟಿತು. ಚಿಂತಾಕ್ರಾಂತ ಮೊಗದಲ್ಲೇ ರಾಮಭಟ್ಟರು ಹಾಗೂ ಪಾರ್ವತಮ್ಮ ದಂಪತಿಗಳು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ದಮಯಂತಿಯ ಕಣ್ಣಂತೂ ಅತ್ತೂ ಅತ್ತೂ ಊದಿಕೊಂಡು ಬಿಟ್ಟಿತ್ತು. ನೆಂಟರಿಷ್ಟರೆಲ್ಲಾ ಮಗಳು ತವರು ತೊರೆದು ಹೋಗುವ ದುಃಖವೇ ಪಾಪ ಬಾಧಿಸುತ್ತಿದೆ ಎಂದೇ ಭಾವಿಸಿದ್ದರು. ಆದರೆ ನರಸಿಂಹರಾಯರು ಮಾತ್ರ ಅರೆ ನಿಮಿಷವೂ ಸುಮ್ಮನೆ ಕೂರದೇ ಮತ್ತೊಮ್ಮೆ ಎಲ್ಲೆಡೆ ತಮ್ಮ ಚೂಪುಗಣ್ಣಿಂದ ಚೆನ್ನಾಗಿ ತಡಕಾಡಿಯಾಗಿತ್ತು. ನಡುವೆ ಗೋಪಾಲನ ಚಲನವಲನಗಳನ್ನೂ ಸೂಕ್ಷ್ಮವಾಗಿ ಗಮನಿಸುತ್ತಾ ಬಂದರು. ಆಗೊಂದು ವಿಶೇಷತೆ ಅವರಿಗೆ ಕಂಡಿತು. ಎಲ್ಲೇ ಹೋದರೂ ಗೋಪಾಲ ತನ್ನ ಎಡಗೈನಲ್ಲೊಂದು ಬೆಳ್ಳಿಯ ಪುಟ್ಟ ಪೆಟ್ಟಿಗೆ ಹಿಡಿದುಕೊಂಡಿರುವುದು ಗಮನಕ್ಕೆ ಬಂತು. ಆಗಾಗ ಅದರಿಂದ ತಾನೇ ತಯಾರಿಸಿಟ್ಟುಕೊಂಡಿರುವ ಬೀಡವನ್ನು ತೆಗೆದು ಅಗಿಯುವುದು ಅವನ ಪ್ರಿಯ ಹವ್ಯಾಸವೆಂದು ಗಮನಿಸಿದರು. ಯಾಕೋ ಆ ಪೆಟ್ಟಿಗೆಯ ಮೇಲೇ ಕಣ್ಣು ಬಿತ್ತು ಮತ್ತು ಅದು ಗೋಪಾಲನ ಗಮನಕ್ಕೂ ಬಂದಿತು. ಅವನು ನೇರವಾಗಿ ಬಂದು, ರಾಯರ ಮುಂದೆಯೇ ತನ್ನ ಪಾನಿನ ಪೆಟ್ಟಿಗೆಯ ಮುಚ್ಚಳ ತೆರೆದಿಟ್ಟು, ಹುಬ್ಬು ಹಾರಿಸಿ ಕೆಣಕಿ ನಕ್ಕ. ರಾಯರು ಕುತೂಹಲದಿಂದ ಇಣುಕಿ ನೋಡಿದರೆ, ನಾಲ್ಕೈದು ಮಡಚಿದ ಬೀಡಗಳ ಕಟ್ಟು. ಎಳೆಯ ಚಿಗುರಿನ ಹಸಿರು ವೀಳ್ಯದೆಲೆಯೊಳಗೆ ಏಲಕ್ಕಿ, ಪಚ್ಚೆ ಕರ್ಪೂರ, ಅಡಿಕೆ, ಸುಣ್ಣವನ್ನು ಬೆರೆಸಿ, ತ್ರಿಕೋನಾಕಾರದಲ್ಲಿ ಮಡಚಿ ಕಟ್ಟಿ, ಲವಂಗವೊಂದನ್ನು ಸಿಕ್ಕಿಸಿಟ್ಟುಕೊಂಡಿದ್ದ. “ರಾಯರೇ ಬಲು ಚಲೋ ಇದೆ ಬೀಡಾ, ನಾನೇ ತಯಾರಿಸಿದ್ದು, ತಿಂದು ನೋಡಿ. ಹಾಂಗೇ ನಿಮ್ಗೆ ಬೇಕಾದ್ದೂ ಇದರಲ್ಲಿದೆಯೋ ಕಾಣಿ…” ಎಂದು ಕಿಸಿಕಿಸಿ ನಗಲು ರಾಯರ ಮನದೊಳಗೆ ಲಾವಾ ಕುದಿದರೂ ತಡೆದುಕೊಂಡು ಮುಗುಳ್ನಗುತ್ತಲೇ ತೋರ್ಬೆರಳಿನಿಂದ ಬೀಡಗಳನ್ನು ತಡಕಾಡಿದ್ದಾಯ್ತು. ಫಲಿತಾಂಶ ಮಾತ್ರ ಶೂನ್ಯ. ಇದೇ ಚಿಂತೆಯಲ್ಲೇ ರಾಯರಿಗೆ ಮಧಾಹ್ನದ ಊಟವೂ ರುಚಿಸಲಿಲ್ಲ.
ರಾಜಾರಾಮನಂತೂ ಆ ಕಡೆ ತಲೆಯನ್ನೇ ಹಾಕಿರಲಿಲ್ಲ. ಅವನ ಕುರಿತು ಆಲೋಚಿಸಲೂ ಪುರುಸೊತ್ತಿಲ್ಲದ ರಾಯರು ಒಂದೆಡೆ ಕುಳಿತು ಎಲ್ಲವನ್ನೂ ಮತ್ತೊಮ್ಮೆ ನಿಧಾನವಾಗಿ ಮಥಿಸತೊಡಗಿದರು. ತಾವು ಅಲ್ಲಿಗೆ ಬಂದ ಕ್ಷಣ, ಜನರ ಮುಖ ಪರಿಚಯದ ಘಳಿಗೆ, ಗೋಪಾಲನ ರೂಮಿನ ಪ್ರತಿಯೊಂದು ವಸ್ತುವಿನ ಚಿತ್ರಣ, ಹೀಗೆ ಎಲ್ಲವೂ ರೀಲಿನಂತೇ ಹರಿಯತೊಡಗಿತು ಅವರ ಸ್ಮೃತಿ ಪಟಲದೊಳಗೆ. ಊಹೂಂ, ಆದರೂ, ಏನೊಂದೂ ಸುಳಿವು ಸಿಗುತ್ತಿಲ್ಲ. ಕಣ್ಮುಚ್ಚಿ ಕಾಣದ ದೈವವನ್ನೂ ನೆನೆದರು. ಆ ರಾತ್ರಿಯನ್ನು ಭಾರವಾದ ಹೃದಯದೊಂದಿಗೆ ಐದು ಜೀವಗಳು ಬೆಳಗುಮಾಡಿದವು.
*****
ಗರ್ನಾಲಿನ ಸದ್ದಿನೊಂದಿಗೆ ಬೀಗರಾಗಮನದ ಸೂಚನೆ ತಿಳಿಯಿತು. ಢವಗುಡುವ ಎದೆಯೊಂದಿಗೇ ಎದುರುಗೊಳ್ಳುವ ಶಾಸ್ತ್ರವಾಗಿ, ಚಾ ತಿಂಡಿಯ ಸಮಾರಾಧನೆಯೂ ಮುಗಿಯಿತು. ರಾಯರು ಕಾಟಾಚಾರಕ್ಕೆ ಹುಡುಗನ ಮನೆಯವರ ಬಳಿ ನಾಲ್ಕು ಮಾತನಾಡಿದವರೇ ಗೋಪಾಲನ ಬೆನ್ನು ಹತ್ತಿ ಹೊರಟರು. ಆತನೋ ಬಹಳ ಖಯಾಲಿಯಲ್ಲಿ, ಎಲ್ಲರನ್ನೂ ಬಿಟ್ಟಿ ಉಪಚರಿಸುತ್ತಾ ಬಾಯೊಳಗಿನ ಕವಳ ಕಡಿಮೆಯಾದಂತೇ ತನ್ನ ಕೈಯೊಳಗಿದ್ದ ಪೆಟ್ಟಿಗೆಯಿಂದ ಬೀಡ ತೆಗೆದು ಜಗಿಯುವುದು ಮತ್ತು ಕವಳದ ಬಟ್ಟಿಲಿದ್ದಲ್ಲಿಗೆ ಹೋಗಿ, ಮತ್ತೊಂದು ಹೊಸ ಬೀಡ ತಯಾರಿಸಿಕೊಂಡು ತುಂಬಿಸಿಕೊಳ್ಳುವುದನ್ನು ಮಾಡುತ್ತಲೇ ಇದ್ದ. ರಾಯರ ತಲೆ ಕೆಟ್ಟು ಹೋಯಿತು. “ನಿಜಕ್ಕೂ ಪಚ್ಚೆ ಮಣಿ ಇಲ್ಲೇ ಇದೆಯೋ ಅಥವಾ ಈ ದುರುಳ ಬೇರೆಡೆ ಸಾಗಿಸಿದ್ದಾನೋ? ಊಹೂಂ, ಇಲ್ಲಾ, ಇಂಥಾ ಖದೀಮರಲ್ಲಿ ಒಂದು ವಿಚಿತ್ರ ಚಟವಿರುತ್ತದೆ…. ಪಂಥ ಹಾಕಿದ ಮೇಲೆ ಅಷ್ಟರ ಮಟ್ಟಿಗೆ ಸಾಚಾ ಇದ್ದೇ ಇರುತ್ತಾರೆ. ನೋಡುವ ಸಮಯ ಇನ್ನೂ ಮೀರಿಲ್ಲ. ಮದುವೆ ಮಾಣಿ ಒಳ್ಳೆಯವನೇ ಆಗಿ, ಮರಕತವನ್ನು ಮರೆತು, ವಜ್ರದಂಥ ಹುಡುಗಿಯ ವರಿಸಬಾರದೆಂದಿಲ್ಲವಲ್ಲ! ರಾಜಾರಾಮನನ್ನು ಮೈಸೂರಿಗೆ ಕರೆದೊಯ್ದು ಹೇಗಾದರೂ ಸಮಾಧಾನಿಸಬಹುದು. ಈಗ ಭಟ್ಟರ ಮರ್ಯಾದೆ ಉಳಿಯಲಿ ಮೊದಲು….” ಎಂದು ಸಮಾಧಾನ ಮಾಡಿಕೊಳ್ಳುತ್ತಾ, ಅದೇ ಗುಂಗಿನಲ್ಲೇ, ಒಳ ಬರುತ್ತಿದ್ದ ವಿಷ್ಣು ಮಾಸ್ತರರನ್ನು ಢಿಕ್ಕಿ ಹೊಡೆಯಲು, ಅವರ ಕೈಯೊಳಗಿದ್ದ ಸಾಮಗ್ರಿಯೊಂದು ಕೆಳಗೆ ಬಿದ್ದು ಬಿಟ್ಟಿತು. “ತಪ್ಪಾಯ್ತು ಸ್ವಾಮಿ… ಗ್ಯಾನ ಎಲ್ಲೋ ಇತ್ತು…. ಕ್ಷಮಿಸಿ” ಎನ್ನುತ್ತಾ ಬಗ್ಗಿದ ರಾಯರು, ಕೆಳೆಗೆ ಬಿದ್ದಿದ್ದ ಆ ವಸ್ತುವನ್ನು ಹೆಕ್ಕಿ ಕೊಡಲು ಹೊರಟಾಗ, ಅವರಿಗೆ ಅಲ್ಲಿ ದೊಡ್ಡ ಅಚ್ಚರಿ ಕಾದಿತ್ತು.
ಗೋಪಾಲನ ಕೈಯೊಳಗಿದ್ದಂಥದೇ ಬೆಳ್ಳಿಯ ಪುಟ್ಟ ಪೆಟ್ಟಿಗೆ! ಅಂದು ರಾತ್ರಿ ಸಿಕ್ಕಿದ್ದ ಪರಿಚಯದ ಸಲಿಗೆಯನ್ನೇ ಬಳಸಿಕೊಂಡು, ಬಿಡದೇ ವಿಷ್ಣು ಮಾಸ್ತರರನ್ನು ಪೂಸಿ ಹೊಡೆದು, ಅವರಲ್ಲಿದ್ದ ಆ ಪೆಟ್ಟಿಗೆಯನ್ನು ಮತ್ತೆ ಪಡೆದು ಸಂಪೂರ್ಣ ತಡಕಾಡಿದರು. ಅದರೊಳಗೆ ಸ್ವಲ್ಪ ಅಡಿಕೆ ಪುಡಿ ತುಂಬಿಕೊಂಡಿತ್ತು ಅಷ್ಟೇ. ರಾಯರು ಸೂಕ್ಷ್ಮವಾಗಿ ಗಮನಿಸಿದಾಗ, ಪೆಟ್ಟಿಗೆಯ ಅರ್ಧ ಭಾಗದ ನಂತರ, ಮತ್ತೊಂದು ಖಾನೆಗಾಗಿ, ಪುಟ್ಟ ತಗಡಿನ ಹೊದಿಕೆಯನ್ನು ಕೂರಿಸಲು ಮಾಡಿರುವ ಜಾಗವನ್ನು ಕಂಡಿದ್ದೇ ಅವರ ಕಣ್ಗಳು ಅರಳಿದವು. ತಕ್ಷಣ ನಿನ್ನೆ ಗೋಪಾಲನ ಪೆಟ್ಟಿಗೆಯೊಳಗೆ ಕೈಯ ಹಾಕಿ ಬೀಡ ತಡಕಿದಾಗ, ಅದರ ತಳ ಮಾತ್ರ ಬಹು ಬೇಗ ಸಿಕ್ಕಿದ್ದು ಅವರಿಗೆ ನೆನಪಾಗಿ, ರಾಯರ ಅನುಮಾನ ಮತ್ತಷ್ಟು ಖಚಿತವಾಯ್ತು. ಆದರೆ ಈ ಪೆಟ್ಟಿಗೆಯಲ್ಲಿ ಯಾವುದೇ ಅಂತಸ್ತು ಇರಲಿಲ್ಲಿ…. ಒಂದೇ ಖಾನೆಯಿತ್ತು! “ಮೇಷ್ಟ್ರೇ, ಈ ಪೆಟ್ಟಿಗೆ ಬಹು ಚೆಂದವಿದೆ…. ಎಲ್ಲಿ ತಗೊಂಡ್ರಿ? ನಂಗೂ ಒಂದು ಬೇಕಿತ್ತು…. ಇದಕ್ಕೆ ಇನ್ನೊಂದು ಖಾನೆ ತಳದಲ್ಲಿ ಇರಬೇಕಲ್ಲಾ…. ಆ ಸವಲತ್ತೂ ಇದೆಯೇ ಇದರಲ್ಲಿ?” ಎಂದು ವಿಚಾರಿಸಲು, ಉತ್ಸಾಹಗೊಂಡ ಅವರು “ಹೌದು ರಾಯರೇ, ಕಳೆದ ವರ್ಷ ಶಿರ್ಸಿ ಪ್ಯಾಟೆಯಲ್ಲಿ ನಡೆದ ಮಾರಿಕಾಂಬಾ ಜಾತ್ರೆಯಲ್ಲಿ ತಗಂಡಿದ್ದು. ಇದು ಖರೇ ಬೆಳ್ಳಿಯದ್ದಲ್ಲಾ ಮತ್ತೆ…. ನಾನೊಬ್ನೇ ಅಲ್ಲಾ, ಇನ್ನೂ ತುಂಬಾ ಜನ ಖರೀದಿ ಮಾಡಿದ್ದಾರೆ. ನಮ್ಮ ರಾಮ್‌ಭಟ್ಟನ ತಮ್ಮ ಗೋಪಾಲನೂ ನನ್ನೊಟ್ಟಿಗೇ ತಗೊಂಡಿದ್ದು. ಇದರ ಮಧ್ಯದಲ್ಲೊಂದು ತಗಡಿನ ಹೊದಿಕೆ ಇತ್ತು. ಸುಮ್ಮನೇ ಎರಡೆರಡು ಖಾನೆ ಎಂತಕ್ಕೆ ಹೇಳಿ ಅದ್ನ ತೆಗೆದು ಬಿಟ್ಟೆ…” ಎಂದು ಇನ್ನೂ ಏನೇನೋ ಹೇಳುತ್ತಿದ್ದವರನ್ನು ಮಧ್ಯದಲ್ಲೇ ನಿಲ್ಲಿಸಿದ ರಾಯರು, `ಈಗ ಬಂದೆ ಮೇಷ್ಟ್ರೇ….’ ಎನ್ನುತ್ತಾ ಧಿಗ್ಗನೆ ಅಲ್ಲಿಂದೆದ್ದು, ದೇವರ ಕೋಣೆಯಲ್ಲಿದ್ದ ರಾಮಭಟ್ಟರಲ್ಲಿಗೆ ಹೋಗುವುದಕ್ಕೂ, ಅಲ್ಲಿಂದ ಜೋರು ಧ್ವನಿಗಳು ಹೊರಬೀಳುವುದಕ್ಕೂ ಸಮನಾಯ್ತು.
ಗಂಡನಿಂದ ಒದಗಿರುವ ವಿಪತ್ತನ್ನು ತಿಳಿದ ಪಾರ್ವತಮ್ಮ, ಚಿಂತೆಯಲ್ಲಿ ತಮ್ಮ ಆಪ್ತರೊಂದಿಗೆ ಗುಟ್ಟನ್ನು ರಟ್ಟಾಗಿಸಿದ್ದು ದೊಡ್ಡ ಪ್ರಮಾದವಾಗಿ ಬಿಟ್ಟಿತ್ತು. ಅದು ಹೇಗೋ ಈ ಕಳುವಿನ ವಿಷಯ ಬೀಗರ ಕಿವಿಗೂ ಬಿದ್ದು, ಸ್ಫೋಟವಾಗಿ, ಹುಡುಗನ ಹೆತ್ತವರು ಈಗ ಮದುವೆಗೆ ನಿರಾಕರಿಸತೊಡಗಿದ್ದರು. ರಾಮಭಟ್ಟರು ಇನ್ನಿಲ್ಲದಂತೇ ಬೇಡಿಕೊಳ್ಳುತ್ತಿದ್ದರೂ, ಕೊನೆಗೆ ನೆಂಟರಿಷ್ಟರು ದಬಾಯಿಸಿದರೂ, ಹಠದಿಂದ ಒಪ್ಪದ ಬೀಗರು, ವಾಗ್ದಾನ ಶಾಸ್ತ್ರಕ್ಕಾಗಿ ಅಲ್ಲೇ ಕುಳಿತಿದ್ದ ಹುಡುಗಿಯ ಕಡೆ ಕಣ್ಣೆತ್ತಿಯೂ ನೋಡದೇ ಹೊರ ನಡೆದುಬಿಟ್ಟರು. ಅಲ್ಲೇ ಇದ್ದ ರಾಯರು, ಅವರನ್ನೆಲ್ಲಾ ತಡೆಯ ಹೊರಟವರು ಮತ್ತೆ ಏನೋ ನಿಶ್ಚಯಿಸಿದವರಂತೇ, ಹಾಗೇ ಸುಮ್ಮನಿದ್ದುಬಿಟ್ಟರು.
ದುಃಖದ ಮಡುವಲ್ಲಿ ಕುಳಿತ ಕುಟುಂಬಕ್ಕೆ ಆಪ್ತೇಷ್ಟರೆಲ್ಲಾ ಸಾಂತ್ವನ ಹೇಳುತ್ತಿರುವಾಗಲೇ ವಿಷಯ ತಿಳಿಯ ವಿಷ್ಣುಮಾಸ್ತರರು ಬಂದು ಸಮಾಧಾನಿಸುತ್ತಾ… “ರಾಮ್‌ಭಟ್ಟ, ಆಗಿದ್ದು ಆಗೋಯ್ತು, ಆಗಿದ್ದೆಲ್ಲಾ ಒಳ್ಳೇದಕ್ಕೇ ಅಂದ್ಕೊ… ನಾವೆಲ್ಲಾ ಒಳ್ಳೆ ಜನ ಅಂತ ತಂಗಿ ಮದ್ವೆಗೆ ಮುಂದಾಗಿದ್ರೆ ಅವ್ರು ಹೀಂಗೆ ಮಾಡದಾ? ಬರೀ ಆಸ್ತಿ, ಹಣಕ್ಕೆ ಬಾಯ್ಬಿಟ್ಟು ನಮ್ಮ ಹುಡುಗಿ ತಗಂಡು ಹೋಗಿ ನಾಳೆ ಹೇಂಗೆ ಬಾಳಿಸಿಸ್ತಿದ್ರೋ ಅವ್ರು? ಬಿಟ್ಟಾಕು ಅವ್ರನ್ನ…. ಗನಾ ಮಾಣೀ ನಾ ಹುಡ್ಕಿ ತರ್ತೆ ಬಿಡು” ಎಂದು ಹೇಳುತ್ತಿರುವಾಗಲೇ ಅಲ್ಲಿಗೆ ಗೋಪಾಲನ ಆಗಮನವಾಯ್ತು. “ಅಯ್ಯೋ ಛೇ…. ನಮ್ಮ ದಮಯಂತಿಗೆ ಅನ್ಯಾಯವಾಗೋಯ್ತು…. ಪಾಪ…” ಎಂದು ಇನ್ನೂ ಏನೋ ಹೇಳತೊಡಗಿದಂತೇ, ಭಟ್ಟರು ವಿಪರೀತ ಸಿಟ್ಟಿನಿಂದ ನಡುಗುತ್ತಾ, ಅವರ ಮೇಲೇರಿ ಹೊರಡಲು, ಈಗ ಮುಂದೆ ಬಂದ ನರಸಿಂಹರಾಯರು, ಅವರನ್ನು ಗಟ್ಟಿಯಾಗಿ ಹಿಡಿದು ತಡೆದು, ಸ್ವಸ್ಥಾನದಲ್ಲಿ ಕೂರಿಸಿದರು. “ಭಟ್ಟರೆ ಸಿಟ್ಯಾಕೆ ಸುಮ್ಮನೇ? ಮಾಸ್ತರರು ಹೇಳಿದ್ದು ನೂರಕ್ಕೆ ನೂರು ಸತ್ಯ ನೋಡಿ. ದುಡ್ಡಿಗಾಗಿ ಸಾಯುವ ಅಂಥ ಕಟುಕರ ಜೊತೆ ಹೂವಂಥ ನಿಮ್ಮ ಮಗಳು ಹೇಗೆ ಬಾಳುತ್ತಿದ್ದಳು ಹೇಳಿ? ಆಗುವುದೆಲ್ಲಾ ಒಳ್ಳೆಯದಕ್ಕೇ. ಇನ್ನು ನಿಮ್ಮ ಮರಕತ ಮಣಿ ಚಿಂತೆ ಬಿಡಿ. ಅದು ಎಲ್ಲಿದೆ ಎಂಬುದರ ಮಾಹಿತಿ ಸಿಕ್ಕಿದೆ ನೋಡಿ… ಅದನ್ನೇ ಹೇಳಲು ಬರುವಷ್ಟರಲ್ಲೇ ಅವಾಂತರ ಆಗಿ ಹೋಯ್ತು” ಎನ್ನಲು ಎಲ್ಲರಲ್ಲೂ ವಿದ್ಯುತ್ ಸಂಚಾರವಾದರೆ, ಗೋಪಾಲನ ಮೊಗದಲ್ಲಿ ಅಚ್ಚರಿ, ತುಸು ಆತಂಕ.
ಗೋಪಾಲಭಟ್ಟನ ಬಳಿ ಬಂದ ರಾಯರು ಅವನ ಒಪ್ಪಿಗೆಯನ್ನೂ ಕೇಳದೇ ಅವನ ಕೈಯಲ್ಲಿದ್ದ ಬೀಡದ ಪೆಟ್ಟಿಗೆ ಸೆಳೆದುಕೊಳ್ಳಲು ಅಕ್ಷರಶಃ ಗಾಭರಿಬಿದ್ದ ಆತ. “ಅಯ್ಯೋ ಇದೆಂತಾ ಜಬರದಸ್ತಿ? ನಿನ್ನೆ ನಾನೇ ಪೆಟ್ಟಿಗೆ ತೆರೆದುಕೊಟ್ಟು, ನೀವೇ ಖುದ್ದಾ ಕೈಯಾಡಿಸಿ ನೋಡೆಲ್ಲಾ ಆಯ್ದಲ್ಲಾ? ಮತ್ತೆಂತಕ್ಕೆ ಈಗ? ನೋಡಿ… ಸುಮ್ಮನೇ ಗಲಾಟೆ ಬ್ಯಾಡ… ನಾನು ಸುಮ್ಮನೆ ಬಿಡದಿಲ್ಲೆ ಹಾಂ” ಎಂದೆಲ್ಲಾ ಬಡಬಡಿಸುತ್ತಲೇ ಮತ್ತೆ ಅವರ ಕೈಯಿಂದ ಕಿತ್ತುಕೊಳ್ಳಲು ಬಂದವನನ್ನು ಹಿಂಬದಿಯಿಂದ ಎಳೆದು, ಅವನ ತೋಳುಗಳನ್ನು ಗಟ್ಟಿಯಾಗಿ ತನ್ನ ಕೈಯೊಳಗೆ ಕಟ್ಟಿಹಾಕಿಕೊಂಡ ರಾಜಾರಾಮ. ಇನ್ನೇನು ದಮಯಂತಿ ತನ್ನಿಂದ ಶಾಶ್ವತವಾಗಿ ದೂರವಾಗುತ್ತಾಳೆಂಬ ನೋವಿನಲ್ಲಿ ತನ್ನ ಮನೆಯ ಜಗುಲಿಯಲ್ಲಿ ಕುಳಿತು ನಿಃಶ್ಯಬ್ದವಾಗಿ ಅಳುತ್ತಿದ್ದವನಿಗೆ, ಭಟ್ಟರ ಮನೆಯಿಂದ ಬರಬರನೆ ಹೊರಟ ಬೀಗರ ದಂಡು ಕಂಡು ಅಚ್ಚರಿಯಾಗಿ ಹೊರಬಂದಾಗಲೇ ಎಲ್ಲಾ ವಿಷಯ ತಿಳಿದಿದ್ದು. ಈ ಅನಿರೀಕ್ಷಿತ ಆನಂದಾಶ್ಚರ್ಯದಿಂದ ಆತನಲ್ಲಿ ನೂರ್ಬಲ ಬಂದಂತಾಗಿ, ಒಂದುಸುರಿಗೇ ಓಡಿ ಬಂದಿದ್ದ.
“ಹೌದಪ್ಪಾ ಗೋಪಾಲ… ನಿನ್ನೆ ನೀನೇ ತೋರಿಸಿದ್ದೆ ಪೆಟ್ಟಿಗೆಯನ್ನ…. ಇವತ್ತು ಅದನ್ನೇ ಮತ್ತೊಮ್ಮೆ ನೋಡಿದರೇನು ಈಗ? ತಡಿಯಪ್ಪ ಸ್ವಲ್ಪ” ಎಂದವರೇ ದುಃಖ ಮರೆತು, ಕುತೂಹಲದಿಂದ ತಮ್ಮನ್ನೇ ನೋಡುತ್ತಿದ್ದವರ ಮುಂದೆ ಆ ಪೆಟ್ಟಿಗೆ ತೆರೆದು ಅದರೊಳಗಿನ ಹಸಿರು ಬೀಡಗಳನ್ನೆಲ್ಲಾ ನೆಲಕ್ಕೆ ಸುರಿಯಲು ಮಧ್ಯದಲ್ಲೊಂದು ಪುಟ್ಟ ತೆಳುವಾದ ತಗಡಿನ ಶೀಟು ಕಂಡಿತು. ಅದನ್ನು ಕಂಡಿದ್ದೇ ಗೊಪಾಲನ ಮೊಗ ಕಪ್ಪಿಟ್ಟರೆ ರಾಯರ ಮೊಗದಲ್ಲಿ ಮಿಂಚು. ನಿಧಾನಕ್ಕೆ ಆ ತಗಡನ್ನೆಬ್ಬಿಸಿ ತೆರೆಯಲು ತಳದಲ್ಲಿ ಹೆಬ್ಬೆರಳಿನ ಗಾತ್ರ ಹೊಳೆವ ಮರಕತ ಮಣಿ ಹಸುರು ಕಿರಣ ಬೀರುತ್ತಾ ಬೆಳಗುತ್ತಿತ್ತು!
ಹೀಗೆ, ಅಮೂಲ್ಯ ಮರಕತ ಮಣಿಯನ್ನಲ್ಲದೇ, ಅಷ್ಟೇ ಬೆಲೆಬಾಳುವ ಗುಣವುಳ್ಳ, ಕನ್ಯಾ ರಾಶಿಯದೇ ಅಳಿಯ ಮಾಣಿಯನ್ನೂ, ರಾಮಭಟ್ಟರಿಗೆ ದೊರಕಿಸಿ ಕೊಟ್ಟ ಕೀರ್ತಿಯ ಜೊತೆಗೆ, ಎದೆತುಂಬಾ ಪ್ರೀತಿ, ಹಾರೈಕೆ, ಆಶೀರ್ವಾದಗಳ ಉಡುಗೊರೆಗಳ ಹೊತ್ತು, ಎರಡು ದಿವಸಗಳ ನಂತರ ನರಸಿಂಹರಾಯರ ಸವಾರಿ ಒಂಟಿಯಾಗಿ ಮೈಸೂರಿನತ್ತ ಪ್ರಯಾಣ ಹೊರಟಿತು. ಅವರ ಮನದ ತುಂಬೆಲ್ಲಾ ಈಗ ಅಲ್ಲಿ ತಮಗಾಗಿ ಕಾಯುತ್ತಿರುವ ಶಾರದೆಯದೇ ನೆನಪು.
*****
ತೇಜಸ್ವಿನಿ ಹೆಗಡೆ
`ಮರಕತ’ – ಇದು ನನ್ನ ಮೊತ್ತ ಮೊದಲ ಪತ್ತೇದಾರಿ ಕಥೆಯಾಗಿದೆ. ಬಾಲ್ಯದಲ್ಲಿ ನಾನು ವ್ಯೂಮ್ಕೇಶ್ ಬಕ್ಷಿ, ತೆಹಿಕಿಕಾತ್ ಮುಂತಾದ ಪತ್ತೇದಾರಿ ಧಾರಾವಾಹಿಗಳನ್ನು ಬಹಳ ನೋಡುತ್ತಿದ್ದೆ. ಅಲ್ಲಿ ಕಥೆಯ ಕೊನೆಯಲ್ಲಿ ಸುರುಳಿ ಬಿಚ್ಚುವ ರಹಸ್ಯಕ್ಕಾಗಿ ಕುತೂಹಲದಿಂದ ಕಾದು, ಕೊನೆಗೆ ಅಂತ್ಯ ತೋರುವ ನಿಜವನ್ನು ಕಂಡು ಬೆರಗಾಗಿ ಕಣ್ಣರಳಿಸುತ್ತಿದ್ದೆ. ಹೀಗಾಗಿ ಅಂತಹ ಒಂದು ಕಥೆಯನ್ನು ಬರೆಯ ಹೊರಟಾಗ ಸಹಜವಾಗಿ ನನಗೇ ಅದೊಂದು ಸವಾಲಾಗಿತ್ತು. ತುಸು ಹಿಂಜರಿಕೆಯಲ್ಲೇ ಬರೆಯ ಹೊರಟವಳು ಕ್ರಮೇಣ ನಾನೇ ವ್ಯೂಮ್ಕೇಶ್ ಬಕ್ಷಿಯಾಗಿ ಅದರೊಳಗೆ ಧುಮುಕಿ ಕಥೆ ಮುಗಿಸಿದ್ದೆ. ಅನುಮಾನದಲ್ಲೇ ಒಂದಿಬ್ಬರಿಗೆ ಓದಲು ಕೊಟ್ಟಾಗ ಅವರು “ಕುತೂಹಲಭರಿತ ಕಥೆ, ಇಷ್ಟವಾಯ್ತು” ಎಂದು ಮೆಚ್ಚಿದಾಗ ಎಷ್ಟೋ ಸಮಾಧಾನವಾಗಿತ್ತು. ಅಲ್ಲದೇ, ಪ್ರಸ್ತುತ ಕಥೆ ನಡೆವ ಪರಿಸರ ನನ್ನ ಅಚ್ಚುಮೆಚ್ಚಿನ, ನಾವು ಬಾಲ್ಯದಲ್ಲಿ ಆಡಿ, ಕುಣಿದು ಬೆಳೆದ ಮಲೆನಾಡು. ಹೀಗಾಗಿ ರಚಿಸುವಾಗ ಆಪ್ತವೆನಿಸಿತ್ತು. ಅಜ್ಜ, ಅಜ್ಜಿ ನಮಗೆ ಅವರ ಕಾಲದ ಜನಜೀವನ, ಸಮಾಜ, ಜನರ ಕುರಿತು ಹಲವು ಕಥೆಗಳನ್ನು ಹೇಳುತ್ತಿದ್ದರು. ಅವುಗಳನ್ನು ಕಲ್ಪಿಸಿಕೊಂಡೇ ಇಲ್ಲಿ ಅದನ್ನು ತುಸು ಅಳವಡಿಸುವ ಪ್ರಯತ್ನ ಮಾಡಿದ್ದೇನೆ. `ಮರಕತ’ ಎಂದರೆ ಪಚ್ಚೆ ಮಣಿ. ಚಿಕ್ಕವಳಿದ್ದಾಗ ನನಗೆ ಬಣ್ಣಬಣ್ಣದ ಮಣಿಗಳನ್ನು ಒಟ್ಟು ಹಾಕುವ ಹವ್ಯಾಸವಿತ್ತು. ಅದರ ಮಧುರ ಸ್ಮರಣೆಯೂ ಈ ಕಥೆಯ ರಚನೆಯಲ್ಲಿ ಪ್ರಮುಖ ಪಾತ್ರವಹಿಸಿದೆ ಎನ್ನಬಹುದು. ಹೀಗೆ ಹತ್ತು ಹಲವು ಕಾರಣಗಳಿಂದಾಗಿಯೇ `ಮರಕತ’ ಕಥೆ ಸ್ವರಚಿತ ಕಥೆಗಳಲ್ಲಿ ನನ್ನ ಮೆಚಿನ ಕೆಲವು ಕಥೆಗಳಲ್ಲಿ ಒಂದಾಗಿದೆ.

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ

ಮೊದಮೊದಲು ಎನ್ ನರಸಿಂಹಯ್ಯ, ಮಾ.ರಾ ಮಮೂರ್ತಿ,ಮಾ ಭೀ ಶೇ, ಟಿ ಕೆ ರಾಮರಾವ್ ಇವರ ಪತ್ತೆದಾರಿ ಕಾದಂಬರಿಗಳನ್ನು ನಂತರ ಇಂಗ್ಲೀಷಿನ ಜೇಮ್ಸ್ ಹಾಡ್ಲಿ ಚೇಸ್ ಹಾಗೂ ಪೆರಿಮೆಸನ್ ಕಥಗಳನ್ನು ಓದುತ್ತಿದ್ದ ನನಗೆ ‘ಮರಕತ’ ತುಂಬಾ ಇಷ್ಟವಾಯಿತು ಒಂದು ಸರಳ ಕಥೆಯನ್ನು ಕುತೂಹಲಭರಿತವಾಗಿ ಪೋಣಿಸಿದ್ದಾರೆ. ಅಂತ್ಯ ಮುಖ್ಯವಾಗಿ ಪ್ರೇಮಿಗಳು ಒಂದಾಗುವುದು ಬಹಳ ಸಂತಸ ತಂದಿತು. ಒಳ್ಳೆಯದಾಗಲಿ.