ವಿಶ್ವನಾಥನಿಗೆ ಸಹನೆಯ ಕಟ್ಟೆಯೊಡಯತೊಡಗಿತ್ತು. ‘ನೀವು ನಮ್ಮನ್ನು ಕರೆಸಿದ್ದು ನಿಮ್ಮ ಫೋನ್ ನಂಬರಿಗೆ ಲಾಟರಿ ಹತ್ತಿದೆ, ಬಹುಮಾನ ಗಳಿಸಿದ್ದೀರಿ ಬನ್ನಿ ಅಂತ, ಸುಮ್ಮನೇ ನಮ್ಮ ಬಹುಮಾನ ನಮಗೆ ಕೊಟ್ಟು ನಂತರ ಮಾತಾಡಿ, ನಾವು ನಮ್ಮ ಕೆಲಸ ಬೊಗಸೆ ಎಲ್ಲ ಬಿಟ್ಟು ಇಲ್ಲಿ ಬಂದಿದ್ದೇವೆ, ಕಂಪ್ಲೆಂಟು ಕೊಡ್ತೇನೆ ಕಂಪ್ಲೆಂಟು’ ಅಂತ ಎದ್ದು ನಿಂತು ದೊಡ್ಡ ದನಿಯಲ್ಲಿ ಕೂಗಾಡತೊಡಗಿದ್ದೇ, ಅಲ್ಲಿಯ ವ್ಯವಸ್ಥಾಪಕರು ಕಸಿವಿಸಿಗೊಂಡರು. ಈಗ ಅಲ್ಲಿದ್ದ ಬೇರೆ ಬೇರೆ ದಂಪತಿಗಳು ಇವರನ್ನೇ ಮಿಕಿ ಮಿಕಿ ನೋಡಲಾರಂಭಿಸಿದರು.
ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಸುನಂದಾ ಪ್ರಕಾಶ ಕಡಮೆ ಕತೆ “ನೀರ ಮಣಿಗಳ ಮಾಲೆ” ನಿಮ್ಮ ಓದಿಗೆ
ಜಿಟಿ ಜಿಟಿ ಮಳೆ ಸುರಿಯುತ್ತಿದ್ದ ಒಂದು ಸಂಜೆಯ ಹೊತ್ತಿನಲ್ಲಿ ತಮ್ಮ ಬೈಕನ್ನೇರಿ ವಿಳಾಸ ಹುಡುಕುತ್ತ ಬಂದ ವಿಶ್ವನಾಥ – ಮಂಜುಳಾ ದಂಪತಿ ಕೊಂಚ ಭಯ ಮಿಶ್ರಿತ ಖುಷಿಯ ಸಂಭ್ರಮದಲ್ಲೇ ಸಂಜೀವಿನಿ ಕಟ್ಟಡದ ಮೂರನೇ ಅಂತಸ್ತಿನ ಗ್ರಾನೈಟಿನ ಅಗಲ ಮೆಟ್ಟಿಲುಗಳನ್ನು ಏದುಸಿರು ಬಿಡುತ್ತಲೇ ಏರತೊಡಗಿದರು. ಮಳೆಯಲ್ಲಿ ತೊಯ್ದು ರಂಗುಗೆಡುವ ಬಿಸಾಟೂ ಇಲ್ಲದೇ ಮಂಜುಳಾ ತನ್ನ ಅಣ್ಣನ ಮಗನ ಮದುವೆಗೆ ಕೊಂಡ ಜರತಾರಿ ಸೀರೆಯನ್ನೇ ಉಟ್ಟುಕೊಂಡಿದ್ದಳು. ಯಾತಕ್ಕಾದರೂ ಇರಲಿ, ನಮಗೆ ಬಹುಮಾನ ಬಂದಿದೆಯಂತೆ, ಅದನ್ನು ತೊಗೊಳ್ಳಲು ಸಾದಾ ಸೀರೆ ಉಟ್ಟು ಯಾಕೆ ಬರುವದು? ಪತ್ರಿಕೆಯವರು ಟೀವಿಯವರು ಯಾರ‍್ಯಾರು ಬರುತ್ತಾರೆ ಗೊತ್ತಾಗುವುದಿಲ್ಲ, ನಾಳಿನ ಪತ್ರಿಕೆಯಲ್ಲಿ ಬಂದ್ರೂ ಬರಬಹುದು ಅಲ್ವೇನ್ರೀ? ಎನ್ನುತ್ತ ಗಂಡನಿಗೂ ಒಪ್ಪುವ ನೀಲಿ ಬಣ್ಣದ ಫುಲ್‌ಶರ್ಟು ತೊಡಲು ಹೇಳಿ ಕರೆತಂದಿದ್ದಳು.
‘ಸಂದೇಶ್ ಅಂತ, ನಾವು ಕಂಟ್ರಿ ಕ್ಲಬ್‌ನಿಂದ ಮಾತಾಡ್ತಿರೋದು, ಬಿಗ್ ಬಜಾರಿನಲ್ಲಿ ನೀವು ಫಿಲ್‌ಅಪ್ ಮಾಡಿದ ಕೂಪನ್; ಲಾಟರಿ ಎತ್ತಿದಾಗ ನಿಮ್ಮ ಫೋನ್ ನಂಬರ್‌ಗೆ ಬಹುಮಾನ ಬಂತು, ನಿಮಗೊಂದು ಗಿಫ್ಟ್ ಇದೆ, ಇಂಥ ದಿನ ಇಂಥ ಸಮಯ, ಬರಲೇಬೇಕು ನೀವು ಪತ್ನೀ ಸಮೇತರಾಗಿ’ ಅಂತ ಹೇಳಿದ ಆ ಮಧುರವಾದ ಫೋನಿನ ದನಿ ಇನ್ನೂ ವಿಶ್ವನಾಥನ ಕಿವಿಯಲ್ಲಿ ಅನುರಣಿಸುತ್ತಿತ್ತು. ಆಗಲೇ ಸಂದೇಶ್ ಲಾಟರಿ ಅಂತ ಆ ನಂಬರನ್ನು ವಿಶ್ವನಾಥ ತನ್ನ ಮೊಬೈಲ್‌ನಲ್ಲಿ ಫೀಡ್ ಸಹ ಮಾಡಿಕೊಂಡಿದ್ದ. ಅದೇ ಧ್ಯಾನದಲ್ಲಿ ವಿಶ್ವನಾಥ ತಲೆಗೆ ಹಾಕಿದ ಹೆಲ್ಮೆಟ್ ತೆಗೆಯುವದನ್ನೇ ಮರೆತುಬಿಟ್ಟಿದ್ದ. ಈಗ ಒಮ್ಮೆಲೇ ತಲೆ ಬೆವೆತ ಅನುಭವವಾಗಿ ನಿಧಾನ ಗದ್ದದ ಬಳಿಯ ಬಕ್ಕಲ್ ಕಳಚಿ ಹೆಲ್ಮೆಟ್ ತೆಗೆದು ಹಿಡಿದುಕೊಂಡಾಗ; ಅದರ ಮುಂಭಾಗಕ್ಕೆ ನೀರ ಮಣಿಗಳ ಮಾಲೆ ಕಟ್ಟಿ ನಿಂತಿತ್ತು. ಅದು ವಜ್ರದ ಹರಳಿನಂತೆ ಥಳ ಥಳ ಹೊಳೆಯುತ್ತಿತ್ತು. ಅದನ್ನು ಹಾಗೇ ತೋರುಬೆರಳಲ್ಲಿ ಒರೆಸಿ ಪಕ್ಕದ ಗೋಡೆಗೆ ಸಿಂಪಡಿಸಿದ. ಗೋಡೆಯಿಂದ ಕೆಳಗಿಳಿದ ಹನಿಗಳು ತೊಯ್ದ ಒಂದೆರಡು ಗೆರೆ ಮೂಡಿಸಿದವು.
ಮೇಲೇರಿದ ಕೊನೆಯ ಮೆಟ್ಟಿಲಿಂದ ಹೆಜ್ಜೆ ತೆಗೆದು ಮುಂದಿಡುವಷ್ಟರಲ್ಲಿ ಬಿಳೀ ಶರ್ಟು ನೀಲಿ ಪ್ಯಾಂಟಿನ ಸಮವಸ್ತ್ರದಲ್ಲಿರುವ ಒಬ್ಬ ಯುವಕ ‘ಹೆಲೋ ಸರ್, ಹೆಲೋ ಮ್ಯಾಡಂ, ಕಂಟ್ರಿ ಕ್ಲಬ್ ಗೆಸ್ಟ್ ಅಲ್ವೇ? ಬನ್ನಿ’ ಅಂತ ಸೆಲ್ಯೂಟ್ ಹೊಡೆದಿದ್ದ. ಆತ ಕತ್ತಿಗೆ ಬಿಗಿದುಕೊಂಡ ಟೈ ಗಾಳಿಗೆ ತುಸುವೇ ತುದಿ ಮಡಚುತ್ತ ಹಾರಾಡುತ್ತಿತ್ತು. ತಮ್ಮನ್ನು ಆಹ್ವಾನಿಸಿದ ಕಂಟ್ರಿ ಕ್ಲಬ್ಬಿನ ಸಿಕ್ಕಾ ಇರುವ ಟೈ ಅದು, ವಿಶ್ವನಾಥ ಅದರೊಳಗಿನ ಬರಹವನ್ನು ಸೂಕ್ಷ್ಮವಾಗಿ ಗಮನಿಸಿದ. ಆ ಯುವಕ ಎದುರಾದ ಒಂದು ಗಾಜಿನ ಬಾಗಿಲನ್ನು ದೂಡಿ ಒಳಕರೆದು ಒಂದು ಮೆತ್ತನೆಯ ಸೋಫಾದಲ್ಲಿ ಇಬ್ಬರನ್ನೂ ಕೂಡಿಸುತ್ತ ಅಲ್ಲೇ ಇರುವ ಗಾಜಿನ ಕೌಂಟರಿನತ್ತ ಮುಖ ಮಾಡಿ ಸಣ್ಣ ಸನ್ನೆ ಮಾಡಿ ಹೊರ ಹೊರಟ. ಕೈಯಲ್ಲಿರುವ ತೊಯ್ದ ಹೆಲ್ಮೆಟ್ಟು ಎಲ್ಲಿಡುವುದೆಂದೇ ತಿಳಿಯದ ವಿಶ್ವನಾಥ ಕೊಂಚ ಅನುಮಾನಿಸುತ್ತ ಎದುರಿನ ಗಾಜಿನ ಟೀಪಾಯಿಯ ಮೇಲೆ ಇರಿಸಿದ.
ಆಫೀಸು ಕೋಣೆಯಂತಿರುವ ಆ ಗಾಜಿನ ಚೇಂಬರಿನಿಂದ ಇನ್ನೊಬ್ಬ ಯುವಕ ಅವಸರದಲ್ಲಿ ಹೊರ ಬಂದು ‘ಮಿಸ್ಟರ್ ವಿಶ್ವನಾಥ್? ಮಿಸೆಸ್ ಮಂಜುಳಾ ಅಲ್ಲವೇ?’ ಅಂತ ಅತ್ಯಂತ ವಿನಯ ತುಂಬಿದ ದೇಹಭಾಷೆಯಲ್ಲಿ ಕೇಳಿದ್ದ. ಒಂದೇ ತರಹದ ಅವರ ಯೂನಿಫಾರ್ಮನ್ನು ದಿಟ್ಟಿಸುತ್ತ ‘ಹೌದು’ ಎನ್ನುತ್ತ ಎದ್ದು ನಿಂತ ವಿಶ್ವನಾಥನನ್ನು ಕೈ ಹಿಡಿದು ಕೂಡಿಸುತ್ತ ‘ಅಯ್ಯೋ ಕೂಡಿ ಕೂಡಿ’ ಎನ್ನುತ್ತ ಆ ತರುಣ ತನ್ನ ಕೈಯಲ್ಲಿರುವ ಫೈಲಿನಲ್ಲಿದ್ದ ಒಂದು ಹಾಳೆ ತೆಗೆದು ‘ಇಲ್ಲಿ ನಡೆವ ಮೀಟಿಂಗು ಅಟೆಂಡ್ ಮಾಡಿ ನಿಮ್ಮ ಒಂದು ಗಂಟೆ ಅವಧಿಯ ಟ್ರೀಟ್‌ನಲ್ಲಿ ಪಾಲ್ಗೊಳ್ಳುತ್ತೇವೆ’ ಎಂಬ ಒಕ್ಕಣೆಯಿರುವ ಅದರ ಕೆಳಗಡೆ ಸಹಿ ಹಾಕಲು ಹೇಳಿದ. ವಿಶ್ವನಾಥ ಓದಿಕೊಂಡು ‘ಟ್ರೀಟು ದೊಡ್ಡದೇ ಇರಬೇಕು’ ಮನಸ್ಸಿನಲ್ಲೇ ಲೆಕ್ಕ ಹಾಕುತ್ತ ಸಹಿ ಹಾಕಿದ. ‘ಇವಳದೂ ಸಹಿ ಬೇಕೋ?’ ಕೇಳಿದಕ್ಕೆ ಆ ಯುವಕ ‘ಇರಲಿ ಬೇಡ, ನಿಮ್ಮದು ಸಾಕು, ಒಂದೇ ಫೆಮಿಲಿ ಅಲ್ವೇ’ ಅಂತ ಸಣ್ಣಗೆ ನಗುತ್ತ ಒಳಹೋಗಿದ್ದ. ಆಗ ಅಲ್ಲಿಂದಲೇ ಒಂದು ಸುಂದರವಾದ ಹುಡುಗಿ ಹೊರಬಂದು ಮತ್ತೆ ‘ಹಾಯ್ ಸರ್, ಹೆಲೋ ಮ್ಯಾಡಂ’ ಹೇಳುತ್ತ ಎದುರು ಕುರ್ಚಿಯಲ್ಲಿ ಕೂತು ‘ಹತ್ತು ನಿಮಿಷ ಅಷ್ಟೇ, ಒಂದು ಸೆಷನ್ ಇದೀಗ ಮುಗೀತು, ನೆಕ್ಸ್ಟ್ ನೀವೇ’ ಅಂದಳು. ಆಯ್ತು ಎನ್ನುತ್ತ ವಿಶ್ವನಾಥ ಹೆಂಡತಿಯ ಮುಖ ನೋಡಿದ. ನಸುನಗುವಿನ ಆ ಯುವತಿ ಕೂಡ ಯುವಕರ ಶೈಲಿಯ ಅಂಥದೇ ಸಮವಸ್ತ್ರ ತೊಟ್ಟಿದ್ದಳು.
‘ಮ್ಯಾಡಂ ಏನು ಸರ್ವಿಸ್‌ನಲ್ಲಿದ್ದೀರಾ?’ ಅಂತ ಅವಳು ಮಂಜುಳೆಯೊಂದಿಗೆ ಮಾತಿಗಾರಂಭಿಸಿದಾಗ ವಿಶ್ವನಾಥ ಕೋಣೆಯಲ್ಲೆಲ್ಲ ಕಣ್ಣಾಡಿಸುತ್ತ ಕುಳಿತಿದ್ದ, ಎಲ್ಲೆಡೆ ಸುಮ್ಮಸುಮ್ಮನೇ ವಿದ್ಯುದ್ದೀಪಗಳು ಉರಿಯುತ್ತಿದ್ದವು. ಅದೇಕೆ ಈ ರೀತಿ ಲೈಟ್‌ಗಳನ್ನೆಲ್ಲ ಹಚ್ಚಿಡುತ್ತೀರಿ ಅಂತ ಅವನಿಗೆ ಆ ಕ್ಷಣ ಕೇಳಿಯೇ ಬಿಡಬೇಕೆನಿಸಿದರೂ ಅಲ್ಲೇ ಸುಮ್ಮನಾದ. ಮಂಜುಳಾ ‘ನಾನು ನೌಕರಿ ಇಲ್ಲ, ಇವರು ಮಾಡುತ್ತಾರೆ, ನಾನು ಮನೆಯಲ್ಲೇ ಪ್ರೈಮರಿಯವರಿಗೆ ಟ್ಯೂಷನ್ನು ಕೊಡುತ್ತೇನೆ’ ಎಂತೇನೋ ಹೇಳುತ್ತಿದ್ದುದಕ್ಕೆ ‘ಇರಲಿ ಬಿಡಿ, ನಾನು ಮನೆಯಲ್ಲೇ ಅಂತ ಸಣ್ಣ ಮುಖ ಮಾಡಿ ಯಾಕೆ ಹೇಳುತ್ತೀರಿ? ಅವರಿಗೆ ಸರ್ವಿಸ್ ಮಾಡಲು ಶಕ್ತಿ, ನಿಮ್ಮ ಅಡುಗೆ ಮನೆಯಿಂದಲೇ ಹೋಗಬೇಕಲ್ಲವೇ?’ ಅಂತೇನೋ ಸಮಜಾಯಿಸಿ ಕೊಡುತ್ತಿದ್ದಳು. ಆಗ ಮಂಜುಳೆಯೇ ‘ಯಾಕೆ ನೀವು ಇಷ್ಟೆಲ್ಲ ಲೈಟುಗಳನ್ನು ಅದೂ ಹಗಲಿನ ವೇಳೆಯಲ್ಲಿ ಹಚ್ಚಿಟ್ಟಿದ್ದೀರಿ?’ ಅಂತ ಕೇಳಿಯೇ ಬಿಟ್ಟಿದ್ದಳು. ಆ ತರುಣಿ ಅದೇ ನಸುನಗುವಿನಲ್ಲೇ ‘ಸೋಲಾರ್ ಸಿಸ್ಟೆಮ್ ಇದೆ ಮ್ಯಾಡಂ, ಜಾಸ್ತಿ ಎಲೆಕ್ಟ್ರಿಸಿಟಿ ಬಿಲ್ ಬರುವುದಿಲ್ಲ, ನಿಮ್ಮ ಹಾಗೆ ಗಿಫ್ಟ್ ಪಡೆಯಲು ನೂರಾರು ಜನ ಬರ್ತಾರೆ, ಅವರನ್ನು ಹೇಗೆ ಕತ್ತಲಲ್ಲಿ ಕೂಡಿಸುವದು?’ ವಿಶ್ವನಾಥನ ಕಿವಿ ಇದ್ದಲ್ಲೇ ನಿಚ್ಚಳವಾಗಿತ್ತು. ಆಗಲೇ ಗೊತ್ತಾದದ್ದು ಅವನಿಗೆ ತಮ್ಮಂತೆಯೇ ಇನ್ನೂ ತುಂಬ ಜನ ಗೆಸ್ಟ್ ಬರುವವರಿದ್ದಾರೆ ಎಂದು. ‘ಎಲ್ಲಿ ನಡೀತದೆ ಫಂಕ್ಷನ್?’ ಅಂತ ಕಣ್ಣರಳಿಸಿದ್ದಳು ಮಂಜುಳಾ ‘ಇಲ್ಲೇ ಪಕ್ಕದ ಆಡಿಟೋರಿಯಂನಲ್ಲಿ’ ಸಂಭಾಷಣೆ ಹೀಗೆ ಸಾಗಿದ್ದಾಗಲೇ ಗ್ಲಾಸಿನಲ್ಲಿ ಆರೇಂಜ್ ಜ್ಯೂಸ್ ಬಂತು. ವಿಶ್ವನಾಥ ಕುಡಿದ, ಮಂಜುಳಾ ತನಗೆ ಶೀತ ಅನ್ನುತ್ತ ನಿರಾಕರಿಸಿದ್ದಳು.
‘ಫಂಕ್ಷನ್‌ಗೆ ಗೆಸ್ಟ್ ಯಾರು ಬರುತ್ತಾರೆ?’ ಅಂತ ಯಾವುದೋ ಲಹರಿಯಲ್ಲಿ ವಿಶ್ವನಾಥ ಆ ತರುಣಿಯೆಡೆ ತಿರುಗಿ ಕೇಳಿಯೇ ಬಿಟ್ಟ. ‘ನಮ್ಮ ಕಂಪನಿಯ ಚೇರ್ ಪರ್ಸನ್ ಬರ್ತಾರೆ, ನಿಮ್ಮ ಹಾಗೆ ಗಿಫ್ಟ್ ಪ್ಯಾಕ್ ಪಡೆದ ಇನ್ನೂ ಇಪ್ಪತ್ತು ಜನ ಬಂದಿರುತ್ತಾರೆ’ ‘ಓಹ್ ಹಾಗಾದರೆ ಇನ್ನೂ ಇಪ್ಪತ್ತು ಜನರಿಗೆ ಗಿಫ್ಟ್ ಬಂದಿದೆಯೇ?’ ‘ಹೌದು, ಅವರೆಲ್ಲ ಬರುತ್ತಾರೆ, ನೀವೂ ಅವರೆಲ್ಲರ ಪರಿಚಯ ಮಾಡಿಕೊಳ್ಳಬಹುದು, ನೋಡಿ ಈ ರೀತಿಯ ಫಂಕ್ಷನ್‌ನಲ್ಲಿ ಪಾಲ್ಗೊಳ್ಳುವದರಿಂದ ಬೇರೆ ಬೇರೆ ಜನರ ಪರಿಚಯ ಆಗ್ತದೆ, ಮತ್ತು ಯೋಚನೆಗಳು ಎಕ್ಸ್ಪ್ಯಾಂಡ್ ಆಗ್ತವೆ, ಮತ್ತು ಬೇರೆ ಬೇರೆ ನಾಲೇಡ್ಜ್ ಬರ್ತದೆ’ ಅಂತೆಲ್ಲ ತನಗೆ ಕಂಪನಿ ಕಲಿಸಿದ ವಿದ್ಯೆಯನ್ನು ಹೊರಹಾಕತೊಡಗಿದಳು. ಅಷ್ಟರಲ್ಲಿ ಇನ್ನೊಂದು ಜೋಡಿ ಬಂತು. ಅವರೂ ಎಂಥದೋ ಅಪರಿಮಿತ ಸಂಭ್ರಮದಲ್ಲಿದ್ದಂತೆ ಕಂಡರು ವಿಶ್ವನಾಥನಿಗೆ. ಅವರಿಗೂ ಥೇಟು ಇದೇ ರೀತಿಯ ಆತಿಥ್ಯ. ಏನು ಮಾಡುತ್ತಿದ್ದಾರೆ ಇವರು? ಕಾರಣವಿಲ್ಲದೇ ಯಾಕೆ ಇಂಥ ಒಳ್ಳೆಯ ಟ್ರೀಟ್ ಕೊಡುತ್ತಾರೆ? ಎಂಬ ಯೋಚನೆಗಳು ಬಂದು ಹೋದರೂ ಕಾದು ನೋಡುವಾ ಅಂತ ಸುಮ್ಮನೇ ಅತ್ತಿತ್ತ ಕಣ್ಣು ಹಾಯಿಸುತ್ತ ಮೊಬೈಲಿನಲ್ಲಿ ಒಮ್ಮೆ ಸಮಯ ನೋಡಿದ. ಚೇಂಬರಿನ ಕೌಂಟರ್ ಕಡೆ ಎದ್ದು ಹೋಗಿ ‘ನಮಗೆ ಸ್ವಲ್ಪ ಬೇರೆ ಕೆಲಸವಿತ್ತು, ಎಷ್ಟೊತ್ತು ಇನ್ನೂ?’ ಕೇಳಿದ. ‘ಎರಡೇ ಎರಡು ನಿಮಿಷ, ಕೂತ್ಕೊಳ್ಳಿ ಸಾರ್’ ಎನ್ನುವ ಉತ್ತರ ಅಲ್ಲಿ ತೀರಾ ದೈನ್ಯತೆಯಿಂದ ಬಂತು.
ವಿಶ್ವನಾಥ ಆ ವ್ಯಕ್ತಿಯನ್ನೂ ಮಂಜುಳಾ ಆ ಹೆಂಗಸನ್ನೂ ಒಮ್ಮೆ ಕಣ್ಣು ಹೊರಳಿಸಿ ನೋಡಿ ನಗಬೇಕೋ ಬೇಡವೋ ಎಂಬ ಸಂದೇಹದಲ್ಲೇ ಕೊನೆಗೂ ಮುಗುಳು ನಕ್ಕರು. ಅಷ್ಟರಲ್ಲೇ ಹೊರಗಿನಿಂದ ಬಂದ ಇನ್ನೊಬ್ಬ ತರುಣ ‘ಹಲೋ ಐ ಯಾಮ್ ಸಂದೇಶ್, ಬನ್ನಿ’ ಎನ್ನುತ್ತ ಇಬ್ಬರು ಗಂಡಸರಿಗೂ ಶೇಕ್‌ಹ್ಯಾಂಡ್ ಮಾಡಿ ಪಕ್ಕದ ಸಂಭಾಂಗಣಕ್ಕೆ ಕರೆದೊಯ್ದ. ವಿಶ್ವನಾಥನಿಗೆ ಹೆಲ್ಮೆಟ್ ತೊಗೊಳ್ಳುವದೋ ಇಲ್ಲೇ ಇಡುವುದೋ ಮತ್ತೆ ಅನುಮಾನ ಕಾಡಿತು. ಆಗ ಬಂದ ತರುಣನೇ ‘ನಿಮ್ಮ ತಲೆ ನಿಮ್ಮ ಬಳಿಯೇ ಇಟ್ಟುಕೊಳ್ಳಿ’ ಅಂತ ದೊಡ್ಡ ಜೋಕು ಮಾಡಿದವನಂತೆ ತಾನೇ ನಕ್ಕಿದ್ದ. ‘ಹೌದು ಅದೇ ಸರಿ’ ಅಂದನಾದರೂ ವಿಶ್ವನಾಥ ಮನಸ್ಸಿನಲ್ಲೇ ‘ನಮ್ಮ ತಲೆ ನಮ್ಮ ಬಳಿಯೇ ಉಂಟು’ ಅಂದುಕೊಳ್ಳುತ್ತಲೇ ಅವನನ್ನು ಹಿಂಬಾಲಿಸಿದ್ದ. ‘ಫೋನ್ ಮಾಡಿದ್ದು ನೀವೇ ಅಲ್ಲವೇ?’ ಅಂತ ಕೇಳುತ್ತಲೇ ವಿಶ್ವನಾಥ, ಲಾಟರಿ ಸಿಸ್ಟೆಮ್ಮಿನ ಕುರಿತು ಕೇಳಲಾರಂಭಿಸಿದ್ದೇ ಸಂದೇಶ್ ‘ಎಲ್ಲ ಹೇಳುತ್ತೇವೆ, ಇದೀಗ ಎಲ್ಲ ಹೇಳುತ್ತೇವೆ’ ಅಂತ ಯಾವ ಮಾತನ್ನೂ ಮುಂದುವರೆಸಲಿಲ್ಲ.
*****
ಅಂತಸ್ತಿನ ಇಡಿಯಾಗಿ ಹರಡಿಕೊಂಡಿರುವ ಹವಾನಿಯಂತ್ರಿತ ಸಭಾಂಗಣವದು. ಅಲ್ಲೊಂದು ಇಲ್ಲೊಂದು ಹೀಗೆ ಗೋಲಾಕಾರದಲ್ಲಿ ನೀಟಾಗಿ ಜೋಡಿಸಿದ ಟೇಬಲ್ಲು ಕುರ್ಚಿಗಳು. ಅದರ ಮೇಲೆ ಹಾಸಿದ ಬಿಳಿಯ ಮಕಮಲ್ಲಿನ ವಸ್ತ್ರ. ಒಂದು ಟೇಬಲ್ಲಿನಲ್ಲಿ ಆ ಗಂಡ ಹೆಂಡತಿಯೂ ಇನ್ನೊಂದು ಟೇಬಲ್ಲಿಗೆ ಈ ಗಂಡ ಹೆಂಡತಿಯೂ ಕುಳಿತರು. ಇನ್ನೂ ಹತ್ತು ಹನ್ನೆರಡು ಟೇಬಲ್ಲುಗಳು ಖಾಲಿ ಬಿದ್ದಿದ್ದವು. ಹದಿನೈದು ನಿಮಿಷ ಆ ಸಭಾಂಗಣದ ಶ್ರೀಮಂತಿಕೆಯನ್ನು ಸವಿಯುತ್ತ ಕೂತಿರುತ್ತಿದ್ದಂತೆಯೇ ಇನ್ನೂ ನಾಲ್ಕು ಜೋಡಿಗಳು ಅದೇ ಗತ್ತಿನಲ್ಲಿ ಬಂದು ಕೂತವು. ಒಟ್ಟೂ ಆರು ಜೊತೆ ದಂಪತಿಗಳಲ್ಲಿ ತನ್ನ ಪರಿಚಯದವರು ಯಾರಾದರೂ ಇದ್ದಾರೋ ಅಂತ ವಿಶ್ವನಾಥನೂ ಮಂಜುಳೆಯೂ ಅವರೆಲ್ಲರ ಬದಿ ಒಮ್ಮೆ ಕಣ್ಣಾಡಿಸಿದರು. ಆ ಜೋಡಿಗಳೂ ಹಾಗೆಯೇ ಬೇರೆ ದಂಪತಿಗಳನ್ನೇ ದಿಟ್ಟಿಸುತ್ತಿದ್ದರು.
‘ಲೇಡೀಸ್ ಆಂಡ್ ಜಂಟಲ್‌ಮನ್’ ಅಂತ ಆರಂಭಿಸಿದ ಒಬ್ಬ ವ್ಯಕ್ತಿ ಎಲ್ಲರನ್ನುದ್ದೇಶಿಸಿ ಇಂಗ್ಲೀಷ್ ಹಾಗೂ ಹಿಂದಿಯಲ್ಲಿ ದೂರದಲ್ಲೇ ನಿಂತು ಭಾಷಣ ಮಾಡಿದ. ಎಲ್ಲರೂ ತಮಗೆ ಅರ್ಥವಾದವರಂತೆ ಮುಖದಲ್ಲಿ ನಗು ಅರಳಿಸಿಕೊಂಡು ಚಪ್ಪಾಳೆ ಹೊಡೆದರು. ಲಾಟರಿ ಹೊಡೆದು ಬಹುಮಾನ ಗೆದ್ದ ಪುರಸ್ಕೃತರಲ್ಲವೇ ಎಂಬ ಹಮ್ಮು ಬಿಮ್ಮು ಎಲ್ಲ ಗಂಡ ಹೆಂಡಿರ ಮುಖದಲ್ಲೂ ಎದ್ದು ಕಾಣುತ್ತಿತ್ತು. ಎಲ್ಲ ಟೇಬಲ್ಲಿನಲ್ಲೂ ಸರ್ವಾಲಂಕೃತ ಪತ್ನೀ ಸಮೇತರಾಗಿ ಬಂದು ಕೂತ ದಂಪತಿಗಳು. ಸುತ್ತಲೂ ಝಗಮಗಿಸುವ ವಿದ್ಯುದ್ದೀಪಗಳ ಬೆಳಕು. ಹೊರಗೆ ಕತ್ತಲೆ ಆವರಿಸಿದ್ದೇ ಮಂಜುಳೆಗೆ ತಿಳಿಯಲಿಲ್ಲ. ವಿಶ್ವನಾಥ ಪದೇ ಪದೇ ತನ್ನ ಪುಟ್ಟ ಮೊಬೈಲನ್ನು ಶರ್ಟಿನ ಜೇಬಿನಿಂದ ತೆಗೆದು ಸಮಯ ನೋಡುತ್ತಿದ್ದ. ತಮ್ಮ ನಿಯಮಗಳನ್ನು ಕಾಮನ್ ಆಗಿ ಎಲ್ಲರಿಗೂ ಹೇಳಿ ಮುಗಿದ ನಂತರ ಎಲ್ಲ ದಂಪತಿಗಳ ಟೇಬಲ್ಲಿಗೂ ಒಬ್ಬೊಬ್ಬರು ಸಮವಸ್ತ್ರ ತೊಟ್ಟ ಯುವಕರು ನಡೆದು ಬಂದರು. ಆ ಯುವಕರ ಹಿಂದೆಯೇ ಹಬೆಯಾಡುವ ಬ್ರೂ ಇನ್ಸಟಂಟ್ ಕಾಫಿ ಬಂತು. ವಿಶ್ವನಾಥ ಕಾಫಿ ಹೀರುತ್ತ ‘ಇದೇನು ಕಾಫಿ ಸಿಸ್ಟೆಮ್ ನಿಮ್ಮದು? ಈ ಕಡೆಯೆಲ್ಲ ನಾವು ಚಹದವರು’ ಅಂತೇನೋ ಮಾತಿಗಿಳಿದಿದ್ದ.
‘ಹಾಯ್, ನಮಸ್ಕಾರ’ ಎನ್ನುತ್ತ ಮಂಜುಳೆಯ ಟೇಬಲ್ಲಿಗೆ ಬಂದು ವಿನಯಶೀಲನಾಗಿ ಕೈಕುಲುಕಿ ಎದುರು ಕುರ್ಚಿಯಲ್ಲಿ ಆಗಲೇ ಆಸೀನನಾಗಿದ್ದ ಯುವಕ ತನ್ನ ಹೆಸರು ಚೇತನ್ ಎಂದು ಪರಿಚಯಿಸಿಕೊಂಡಿದ್ದ. ವಿಶ್ವನಾಥನ ಕಾಫಿ ಮತ್ತು ಚಹದ ವಿಷಯವನ್ನು ಅವನು ಕೇಳಿಸದಂತೆ ನಟಿಸಿದ. ಇವರೂ ‘ಹಾಯ್ ಹೆಲೋ’ ಹೇಳಿ ಹಲ್ಲು ಗಿಂಜುತ್ತ ಆ ಹುಡುಗನ ಜೊತೆ ಆಪ್ತ ಸಮಾಲೋಚನೆಯಲ್ಲಿ ತೊಡಗಿದರು. ವಿಶ್ವನಾಥ ‘ನೀವು ಇಲ್ಲಿ ಎಷ್ಟು ವರ್ಷದಿಂದ ಕೆಲಸಕ್ಕಿದ್ದೀರಿ? ಎಷ್ಟು ಸಂಬಳ ಕೊಡುತ್ತಾರೆ? ನಿಮ್ಮ ಮನೆಯೆಲ್ಲಿ? ನೀವು ಕಲಿತದ್ದೆಷ್ಟು?ʼ ಅಂತೆಲ್ಲ ಆ ಹುಡುಗನ ಪೂರ್ವಾಪರ ವಿಚಾರಿಸಿಕೊಳ್ಳತೊಡಗಿದ್ದೇ ಚೇತನ ಇದ್ದಲ್ಲೇ ಚೇತರಿಸಿಕೊಂಡು ‘ಓಕೆ ಇಲ್ಲಿ ನನ್ನದು ಮುಖ್ಯವಲ್ಲ, ಈವತ್ತು ನೀವು ನಮ್ಮ ಗೆಸ್ಟ್, ನಿಮ್ಮ ಬಗ್ಗೆ ಹೇಳಿ’ ಅನ್ನುತ್ತ ಟೈ ಸರಿ ಮಾಡಿಕೊಳ್ಳುತ್ತ ನೆಟ್ಟಗೆ ಕೂತು ಬೇರೆ ವಿಷಯ ತೆಗೆದು ವಿಚಾರಣೆಗೆ ಸಿದ್ಧಗೊಂಡಿದ್ದ. ಆ ಯುವಕನ ಹಣೆಯಲ್ಲಿ ಜಾರಿ ಬೀಳುತ್ತಿದ್ದ ತಲೆಗೂದಲು ಆತ ಮೇಲೆ ಮಾಡಿಕೊಂಡ ತಕ್ಷಣ ಪುನಃ ಅಲ್ಲೇ ಬೀಳುತ್ತಿತ್ತು. ‘ನೋಡಿ ಸಾರ್, ನೀವು ಹುಟ್ಟಿ ಬೆಳೆದದ್ದು ಎಲ್ಲೋ, ನಾನು ಹುಟ್ಟಿ ಬೆಳೆದದ್ದು ಎಲ್ಲೋ, ಆದರೂ ಈಗ ನಾವು ಒಬ್ಬರಿಗೊಬ್ಬರು ಆತ್ಮೀಯರಾಗಿದ್ದೇವೆ, ಇವೆಲ್ಲ ಋಣಾನುಬಂಧ’ ಹುಡುಗ ತನ್ನ ವಯಸ್ಸಿಗೆ ಮೀರಿದ ಮಾತಾಡುತ್ತಿದ್ದಾನೆ ಅನ್ನಿಸಿತು ವಿಶ್ವನಾಥನಿಗೆ.

ವಿಶ್ವನಾಥ ತನ್ನ ನೌಕರಿಯ ಸಂಗತಿ, ಮನೆಯಲ್ಲಿರುವ ನಾಲ್ಕನೇ ಕ್ಲಾಸಿನಲ್ಲಿ ಓದುತ್ತಿರುವ ಹತ್ತು ವರ್ಷದ ಮಗ ಆಕಾಶ್‌ನ ಕುರಿತು, ಹೆಂಡತಿ ಮನೆಯಲ್ಲಿ ಪ್ರೈಮರಿ ಮಕ್ಕಳಿಗೆ ಟ್ಯೂಷನ್ ಹೇಳುವ ವಿಷಯವೆಲ್ಲವನ್ನೂ ಹೇಳುತ್ತ ತಾವಿನ್ನೂ ಬಾಡಿಗೆ ಮನೆಯಲ್ಲಿದ್ದು ಒಂದು ಸರಿಯಾದ ಅಪಾರ್ಟಮೆಂಟಿನ ಸಿಂಗಲ್ ಬೆಡ್ ರೂಂ ಕಿಚನ್ ಹೊಂದಿದ ಮನೆಯೊಂದನ್ನು ಹುಡುಕುತ್ತಿರುವುದಾಗಿ ಹೇಳಿಬಿಟ್ಟಿದ್ದ. ಎದುರು ಕೂತ ಚೇತನ್‌ಗೆ ಇದ್ದಲ್ಲೇ ಜೀವ ಬಂದಂತಾಯಿತು. ‘ನೀವು ಹೇಳುತ್ತಿರುವುದು ಸರಿ, ಮನುಷ್ಯನಾದವನಿಗೆ ಒಂದು ದೊಡ್ಡ ಕನಸಿರಬೇಕು, ಕನಸಿದ್ದರೆ ಬದುಕಿನಲ್ಲಿ ತುಂಬಾ ಮುಂದೆ ಬರಬಹುದು, ನಿಮ್ಮ ಕನಸುಗಳನ್ನು ಸಾಕಾರ ಮಾಡಲಿಕ್ಕಾಗಿಯೇ ನಮ್ಮ ಕಂಪನಿ ಹಗಲೂ ರಾತ್ರಿ ದುಡಿಯುತ್ತಿದೆ’ ‘ಓಹೋ, ನಿಮ್ಮ ಕಂಪನಿಯ ಮೂಲ ಊರು ಯಾವುದು?’ ‘ಬೆಂಗಳೂರು ಸಾರ್’ ಇಲ್ಲಿ ಈ ಶಾಖೆ ಶುರುವಾಗಿ ಒಂದು ವರ್ಷ ಆಯ್ತು’ ವಿಶ್ವನಾಥ ಮಂಜುಳೆ ದಂಪತಿಗಳಿಬ್ಬರೂ ಮಂತ್ರಮುಗ್ಧರಾಗಿ ಕೇಳಿದರು.
ಮತ್ತೆ ಚೇತನ್‌ನೇ ಮುಂದುವರೆದ. ‘ನಿಮಗೆ ಎಲ್ಲವೂ ನಿಗದಿತ ಸಮಯಕ್ಕೆ ಆಗಿದೆ, ಈಗ ಒಂದು ಸೈಟು ಕೊಳ್ಳುವ ಬರೀ ಒಂದೇ ಕೆಲಸ ಬಾಕಿ ಉಳಿದಿರುವುದು, ನಮ್ಮ ಕಂಪನಿಯ ಹಿಡಿತದಲ್ಲಿ ನಾಲ್ಕು ಸೈಟುಗಳಿವೆ’ ನೀವು ಇಷ್ಟಪಟ್ಟರೆ ಇಂದೇ ನೀವು ಒಂದು ಸೈಟಿನ ಮಾಲಿಕರಾಗುತ್ತೀರಿ. ‘ಹೌದೇ? ಎಲ್ಲಿದೆ ಅದು?’ ‘ಬೆಂಗಳೂರಿನಲ್ಲಿ’ ‘ಬೆಂಗಳೂರಿನಲ್ಲಾದರೆ ನಮಗೆ ಕಷ್ಟವೇ’ ‘ಯಾಕೆ ಕಷ್ಟ? ಮುಂದೆ ಮಗ ಎಂಜಿನಿಯರೋ ಡಾಕ್ಟರೋ ಆದರೆ ಅಲ್ಲಿಯೇ ಸೈಟು ಬೇಕಲ್ಲವೇ’ ‘ಅರೆ, ಯಾರು ಹೇಳಿದರು ಅವ ಎಂಜಿನಿಯರ್ ಡಾಕ್ಟುç ಆಗ್ತಾನೆ ಅಂತ?’ ‘ಯಾರೆ ಯಾಕೆ ಹೇಳ್ಬೇಕು ಸಾರ್, ನಿಮ್ಮನ್ನು ನೋಡಿದರೆ ಗೊತ್ತಾಗತ್ತೆ, ನಿಮ್ಮ ಮನೆಯವರ ಸ್ಪಂದನೆ ನೋಡಿದರೆ ಗೊತ್ತಾಗತ್ತೆ, ನಿಮ್ಮ ಮಗ ದೊಡ್ಡ ಹುದ್ದೆಗೆ ಹೋಗಲೇಬೇಕು’ ‘ಆದರೂ ಅವನಿಗೆ ಅಂತ ಈಗಲೇ ಅಲ್ಲಿ ಸೈಟು ಖರೀದಿಸಿಡುವಷ್ಟು ನನ್ನ ಬಳಿ ಬಜೆಟ್ ಇಲ್ಲ, ಮತ್ತು ಹಾಗೆ ಮಾಡುವುದರಲ್ಲಿ ಅರ್ಥವೇನಿದೆ?’ ‘ಇರಲಿ ಬಿಡಿ ಸಾರ್ ಒಂದು ಸೈಟು, ಇಷ್ಟು ಸೋವಿ ರೇಟಿಗೆ ಇಷ್ಟು ಸುಲಭಕ್ಕೆ ನಿಮಗೆ ಎಲ್ಲಿಯೂ ಸಿಗುವುದಿಲ್ಲ, ನೋಡಿ ಇಲ್ಲಿ ಕೂತ ಹದಿಮೂರು ಜೋಡಿಗಳಲ್ಲಿ ಯಾರಾದರೂ ನಾಲ್ವರು ತೊಗೊಂಡುಬಿಟ್ಟರೆ, ಆಮೇಲೆ ನೀವು ಎಷ್ಟು ಬೇಸರಪಟ್ಟರೂ ಅದು ಸಿಗುವುದಿಲ್ಲ, ದೊಡ್ಡ ಮನಸ್ಸು ಮಾಡಿ ಸಾರ್’ ‘ಹೌದೇ, ಇಷ್ಟು ಒತ್ತಾಯ ಮಾಡುತ್ತೀರೆಂದರೆ ತೋರಿಸಿ ನೋಡ್ವಾ, ಯಾವ ಏರಿಯಾ, ಎಷ್ಟು ದರ ಅಂತಲಾದರೂ ತಿಳಿಸಿ’ ಆ ತರುಣ ಅತ್ಯುತ್ಸಾಹದಲ್ಲಿ ಕೈಯಲ್ಲಿದ್ದ ಫೈಲ್ ತೆರೆದು ‘ನೋಡಿ ಸಾರ್, ದೇವನಹಳ್ಳಿಯ ವಿಮಾನ ನಿಲ್ದಾಣದ ಹತ್ತಿರ ಇರುವ ಸೈಟು, ತುಂಬಾ ಬೆಲೆ ಬಾಳುವ ಸೈಟು, ಅವರಿಗೆ ಏನೋ ಸ್ವಲ್ಪ ಹಣದ ತೊಂದರೆಯಿಂದ ಇದನ್ನು ಮಾರುತ್ತಿದ್ದಾರೆ’ ‘ಹೌದೇ, ಎಷ್ಟಿದೆ ಅಳತೆ?’ ‘ನಲವತ್ತು ಬಾಯ್ ಮೂವತ್ತರ ಎರಡು, ಐವತ್ತು ಬಾಯ್ ಮೂವತ್ತರ ಎರಡು ಸೈಟುಗಳು’ ಅನ್ನುತ್ತ ಕಾಗದದ ಮಡಿಕೆ ಬಿಚ್ಚಿ ಅದರ ನಕಾಶೆಯಲ್ಲಿ ಕೈ ಬೆರಳಾಡಿಸಿ ತೋರಿಸಲಾರಂಭಿಸಿದ.
‘ಅಲ್ಲ, ನೀವು ನಮಗೆ ಕರೆದದ್ದು ಗಿಫ್ಟ್ ಕೊಡುತ್ತೇವೆ ಬನ್ನಿ ಅಂತ, ಇಲ್ಲಿ ನಡೆಯುತ್ತಿರೋದು ಏನು?’ ಎಂಬ ರೀತಿಯಲ್ಲಿ ವಿಶ್ವನಾಥ ಬೇಸರ ವ್ಯಕ್ತಪಡಿಸಿದ್ದಕ್ಕೆ, ‘ನೋಡಿ ಸಾರ್, ಇಂಥ ಸೈಟು ನಿಮಗೆ ಜೀವಮಾನದಲ್ಲಿ ಸಿಗುವದಿಲ್ಲ, ಮ್ಯಾಡಂ ನೀವಾದರೂ ಸ್ವಲ್ಪ ಹೇಳಿ’ ಅನ್ನುತ್ತ ಚೇತನ್ ದುಂಬಾಲು ಬಿದ್ದ. ‘ಹೋಗಲಿ, ರೇಟೆಸ್ಟು?’ ‘ಮೂವತ್ತು ನಲವತ್ತರ ಸೈಟಿಗೆ ಕೇವಲ ಹನ್ನೆರಡು ಲಕ್ಷ, ಈಗಲೇ ಎಲ್ಲ ಕಟ್ಟಿಬಿಡುವದಲ್ಲ, ಅಡ್ವಾನ್ಸ್ ಅಂತ ಕೇವಲ ಇಪ್ಪತ್ತು ಸಾವಿರ ಕಟ್ಟಿದರೆ ಆಯಿತು’ ‘ಉಳಿದದ್ದು?’ ‘ಕಂತಿನ ಮೇಲೆ ಒಂದೊಂದೇ ಲಕ್ಷ ತುಂಬುವದು’ ಪಕ್ಕದ ಟೇಬಲ್ಲಿನಲ್ಲಿ ಎಂಥದೋ ಗದ್ದಲ ಕೇಳಿತು. ಅದೇನು ಅಂತ ಎಲ್ಲರೂ ಅತ್ತ ಲಕ್ಷö್ಯ ಕೊಟ್ಟರು.
ಆ ಟೇಬಲ್ಲಿನ ಯುವಕ ಎದ್ದು ನಿಂತು ‘ನೋಡಿ ಈ ರೇವಣ್ಕರ್ ದಂಪತಿ ಸೈಟ್ ಬುಕ್ ಮಾಡಿದ್ದಾರೆ ಇಪ್ಪತ್ತು ಸಾವಿರದ ಚೆಕ್ ನೀಡಿ’ ಎನ್ನುತ್ತ ಚೆಕ್ಕನ್ನು ಎತ್ತಿ ತೋರಿಸಿದ. ಅವರನ್ನು ಎದ್ದು ನಿಲ್ಲಿಸಿ ಎಲ್ಲರಿಂದ ಅಭಿನಂದನಾಪೂರ್ವಕ ಚಪ್ಪಾಳೆ ಹೊಡೆಸಿದ. ಎಲ್ಲ ಟೇಬಲ್ಲಿನ ದಂಪತಿಗಳು ಆ ದಂಪತಿಗಳನ್ನು ಸ್ವಲ್ಪ ಅಸೂಯೆಯ ದೃಷ್ಟಿಯಿಂದ ನೋಡಿ ಪುನಃ ಮಾತಿಗೆ ಕುಳಿತರು. ‘ನೋಡಿ ಮ್ಯಾಡಂ, ಈಗ ಉಳಿದಿರೋದು ಬರೀ ಮೂರೇ ಮೂರು ಸೈಟುಗಳು, ನೀವು ಈಗಲೇ ಮನಸ್ಸು ಮಾಡದಿದ್ದರೆ ಅದು ಬೇರೆಯವರ ಪಾಲಾಗುತ್ತದೆ. ಬರೀ ಹತ್ತು ಲಕ್ಷಕ್ಕೆ ಅದೂ ಬೆಂಗಳೂರಿನಂಥ ಕಡೆಯಲ್ಲಿ ಸೈಟುಗಳು ಸಿಗುವುದೇ ಇಲ್ಲ’ ವಿಶ್ವನಾಥನಿಗೆ ಒಮ್ಮೆಲೇ ತಲೆ ಗಿರಿಕ್ ಅಂತು. ‘ನಿಮಗೇನು ತಲೆಗಿಲೆ ಕೆಟ್ಟಿದೆಯೇನ್ರೀ, ನಾವು ಇಲ್ಲಿಯವರು, ಬೆಂಗಳೂರಿನಲ್ಲಿ ಯಾಕೆ ಸೈಟು ತೊಗೋಬೇಕು? ನೀವು ಈ ಹಿಂಸೆ ಯಾಕೆ ಕೊಡುತ್ತಿದ್ದೀರಿ ಅಂತ ನನಗೆ ಗೊತ್ತಾಗುತ್ತಿಲ್ಲ’ ಕೋಪದಿಂದಲೇ ಸಿಡಿದಿದ್ದ ವಿಶ್ವನಾಥ. ‘ಅಲ್ಲ ಸಾರ್, ದೊಡ್ಡ ಮನಸ್ಸು ಮಾಡಿ, ನೋಡಿ ಅವರು ಹ್ಯಾಗೆ ಕೂತಲ್ಲೇ ಒಂದು ಸೈಟು ಹೊಡೆದುಕೊಂಡುಬಿಟ್ಟರು, ಜಾಣ ದಂಪತಿಗಳು ಅವರು, ನೀವೂ ಜಾಣರಾಗಿ’ ಜಾಣತನದ ಸುದ್ದಿ ಬಂದದ್ದೇ ವಿಶ್ವನಾಥನಿಗೆ ಪಿತ್ತ ಸರಕ್ಕನೆ ನೆತ್ತಿಗೇರಿತ್ತು. ‘ಎಲ್ಲ ಗೊತ್ತರೀ, ಆ ದಂಪತಿ ನಿಮ್ಮವರೇ, ನಮ್ಮ ಮುಂದೆ ನಾಟಕ ಮಾಡಬೇಡಿ, ಸೈಟಂತೆ, ಚೆಕ್ ಅಂತೆ, ನಮಗೆ ಸುಮ್ಮನೇ ಮೋಸದ ಜಾಲ ಹೆಣೆಯಲು ನಿಮ್ಮದೇ ಕುತಂತ್ರ ಇದು’ ಅಂತೆಲ್ಲ ಕೂಗಾಡಹತ್ತಿದ ವಿಶ್ವನಾಥ.
‘ಹಾಗಲ್ಲ ಸರ್’ ಅನ್ನುತ್ತ ಮರ‍್ನಾಲ್ಕು ಹುಡುಗರು ವಿಶ್ವನಾಥನನ್ನು ಸಂಭಾಳಿಸಲು ಬಂದಿದ್ದರು. ಬೆಂಗಳೂರಿನಲ್ಲಿ ಬೇಡವಾದರೆ, ಇಲ್ಲಿಯೇ ಯಶಸ್ವಿ ಡೆವಲರ‍್ಸ್ ಅನ್ನುವ ಕಂಪನಿ ಧಾರವಾಡದಲ್ಲಿ ಹೈಕೋರ್ಟ ಹತ್ತಿರ ಸೈಟು ರೆಡಿ ಮಾಡುತ್ತಿದೆ, ಅದನ್ನಾದರೂ ನೋಡಿ’ ಅಂದದ್ದೇ ಅಷ್ಟು ಹೊತ್ತು ಸುಮ್ಮನೇ ಕೂತ ಮಂಜುಳಾ ‘ಹೌದೇ? ಇಲ್ಲಿಯೇ ಇದೆಯೇ?’ ಎನ್ನುತ್ತ ಅವರಂದದ್ದನ್ನು ಆಸಕ್ತಿಯಿಂದ ಕೇಳುತ್ತ ವಿಶ್ವನಾಥನಿಗೆ ‘ರೀ, ಇಲ್ಲೇ ಇದೆಯಂತೆ, ಇದಾದರೂ ನೋಡಬಾರದೇ?’ ಅಂತ ರಮಿಸಿದ್ದೇ ತಡ ವಿಶ್ವನಾಥ ‘ಹೆಂಡಿರನ್ನು ಬೇರೆ ಜೊತೆಯಲ್ಲಿ ಕರೆಸುತ್ತೀರಿ, ನಿಮ್ಮ ಮೋಸ ಗೊತ್ತಾಗದೇ ಅವರು ಒತ್ತಾಯ ಮಾಡಲಿ ಎಂಬುದಕ್ಕಾಗಿ, ದಂಪತಿಗಳಲ್ಲಿ ಜಗಳ ಹಚ್ಚಿಡುವ ರೀತಿಯಲ್ರಿ ನಿಮ್ದು, ನೀವು ಉದ್ಧಾರವಾಗುವುದಿಲ್ಲ’ ದೊಡ್ಡದಾಗೇ ಬಾಯಿ ತೆಗೆದ. ಅದನ್ನೂ ಮೀರಿ ಅವರೆಲ್ಲ ಸುತ್ತುವರೆದು ಒಮ್ಮೆಲೇ ‘ನಿಮ್ಮ ದುಡ್ಡು ಬೇಡ, ಇಲ್ಲಿ ಮೋಸ ಗೀಸ ಏನೂ ಇಲ್ಲ, ಈಗ ಕೇವಲ ಹತ್ತು ಸಾವಿರ ಕೊಡಿ ಅಷ್ಟೇ’ ‘ಒಂದು ನೈಯಾ ಪೈಸೆಯೂ ಕೊಡುವುದಿಲ್ಲ’ ‘ಹಾಗೇಕೆ ಬೀಪಿ ಹೆಚ್ಚಿಸಿಕೊಂಡಿದ್ದೀರಿ? ನಾವು ನಿಮ್ಮ ಒಳ್ಳೆಯದಕ್ಕೇ ಹೇಳಿದ್ದು’ ‘ನಮ್ಮ ಸಂಬಂಧಗಳೇ ನೀವು? ನಮ್ಮ ಒಳ್ಳೆಯದನ್ನು ಬಯಸಲಿಕ್ಕೆ?’ ‘ಅಯ್ಯೋ ಒಳ್ಳೆಯದು ಬಯಸಲು ಸಂಬಂಧಿಗಳೇ ಆಗಬೇಕೆ?’ ‘ನೊಡಿ ನಿಮ್ಮ ಮಿಸೆಸ್‌ಗೆ ಮನಸ್ಸಿದೆ, ಕಮೀಟ್ ಆಗಿಬಿಡಿ’
ವಿಶ್ವನಾಥನಿಗೆ ಸಹನೆಯ ಕಟ್ಟೆಯೊಡಯತೊಡಗಿತ್ತು. ‘ನೀವು ನಮ್ಮನ್ನು ಕರೆಸಿದ್ದು ನಿಮ್ಮ ಫೋನ್ ನಂಬರಿಗೆ ಲಾಟರಿ ಹತ್ತಿದೆ, ಬಹುಮಾನ ಗಳಿಸಿದ್ದೀರಿ ಬನ್ನಿ ಅಂತ, ಸುಮ್ಮನೇ ನಮ್ಮ ಬಹುಮಾನ ನಮಗೆ ಕೊಟ್ಟು ನಂತರ ಮಾತಾಡಿ, ನಾವು ನಮ್ಮ ಕೆಲಸ ಬೊಗಸೆ ಎಲ್ಲ ಬಿಟ್ಟು ಇಲ್ಲಿ ಬಂದಿದ್ದೇವೆ, ಕಂಪ್ಲೆಂಟು ಕೊಡ್ತೇನೆ ಕಂಪ್ಲೆಂಟು’ ಅಂತ ಎದ್ದು ನಿಂತು ದೊಡ್ಡ ದನಿಯಲ್ಲಿ ಕೂಗಾಡತೊಡಗಿದ್ದೇ, ಅಲ್ಲಿಯ ವ್ಯವಸ್ಥಾಪಕರು ಕಸಿವಿಸಿಗೊಂಡರು. ಈಗ ಅಲ್ಲಿದ್ದ ಬೇರೆ ಬೇರೆ ದಂಪತಿಗಳು ಇವರನ್ನೇ ಮಿಕಿ ಮಿಕಿ ನೋಡಲಾರಂಭಿಸಿದರು. ಇಡೀ ವಾತಾವರಣವೇ ಕಲುಷಿತವಾದದ್ದು ಕಂಡು ಸಂಘಟಕರು ಇಬ್ಬರನ್ನೂ ಎದ್ದು ನಿಲ್ಲಿಸಿ ಒಂದು ಗಿಫ್ಟ್ ಪ್ಯಾಕ್ ಕೊಟ್ಟು ಎಲ್ಲರಿಂದ ಚಪ್ಪಾಳೆ ಹೊಡೆಸಿದ್ದರು. ವಿಶ್ವನಾಥನಿಗೆ ಅದೇ ವಿನಯದಿಂದ ಶೇಕ್ ಹ್ಯಾಂಡ್ ಮಾಡಿದ ಚೇತನ ‘ಥ್ಯಾಂಕ್ಯು ಸಾರ್, ನೀವು ಬಂದದ್ದು ನಮಗೆ ತುಂಬಾ ಸಂತೋಷ, ಪುನಃ ಬನ್ನಿ’ ಎಂದು ರೂಢಿಯಂತೆಯೇ ಹೇಳಿಬಿಟ್ಟಿದ್ದ. ‘ಮತ್ತೇನು ಬರುವುದು ಇಲ್ಲಿ? ಸಾರ್ವಜನಿಕರಿಗೆ ಮೋಸ ಮಾಡುತ್ತೀರಿ, ನಮ್ಮ ವೇಳೆ ಹಾಳುಮಾಡುತ್ತೀರಿ ನೀವು, ಒಂದು ಜ್ಯೂಸು ಒಂದು ಕಾಫಿ ಬಿಟ್ಟೀ ಕೊಟ್ಟ ಹಾಗೆ ಮಾಡಿ ನಮ್ಮನ್ನು ಸಾಲದಲ್ಲಿ ನರಳುವ ಹಾಗೆ ಮಾಡ್ತೀರಿ ನೀವು’ ಅನ್ನುತ್ತ ವಿಶ್ವನಾಥ ಕಣ್ಣು ಇನ್ನಷ್ಟು ಕೆಂಪು ಮಾಡಿಕೊಂಡು ರಭಸದಲ್ಲೇ ಹೊರಬಂದಿದ್ದ. ‘ಇದೆಲ್ಲ ಕಾಮನ್ ಇವೆಲ್ಲಾ ಕಾಮನ್’ ಎನ್ನುತ್ತ ಸಂಘಟಕರು ಉಳಿದವರನ್ನು ಸಮಾಧಾನಪಡಿಸುತ್ತಿದ್ದರು.
ಹೆಂಡತಿಯನ್ನು ಜಗ್ಗಿಕೊಂಡು ಹೊರಬಂದ ವಿಶ್ವನಾಥ ಮೆಟ್ಟಿಲಿಳಿಯುತ್ತಿದ್ದಂತೆಯೇ ಗಿಫ್ಟ್ ಪ್ಯಾಕ್ ಒಡೆದು ನೋಡಿದ, ಆರು ಗಾಜಿನ ಬೌಲುಗಳಿದ್ದವು. ‘ಇದಾದರೂ ಯಾತಕ್ಕಾದÀರೂ ಬಳಕೆಯಾಗ್ತದೆ ಬಾ, ಇಷ್ಟು ಹೊತ್ತು ನಮ್ಮ ಟೈಮ್ ವೇಸ್ಟ್ ಮಾಡಿದ್ದಕ್ಕೆ ಇದು ಗಿಫ್ಟ್ ಅಂತ ತಿಳಿಯುವ, ಯಾರಾದರೂ ಗೆಸ್ಟ್ ಬಂದಾಗ ಜಾಮೂನು ಮಾಡಿದರೆ ಇದರಲ್ಲೇ ಹಾಕಿಕೊಡುವಿಯಂತೆ’ ಅಂತ ಮಾತಾಡಿಕೊಳ್ಳುತ್ತ ಇಬ್ಬರೂ ದಡ ದಡ ಬೈಕಿನೆಡೆಗೆ ಬರುವಷ್ಟರಲ್ಲಿ ಪುನಃ ಜಿಟಿಜಿಟಿ ಮಳೆ ಶುರುವಾಯ್ತು. ತೊಯ್ದೇವೆಂದರೂ ಪೂರ್ತಿ ತೋಯಿಸದ ಮಳೆ ಅದು. ಭ್ರಮಾಧೀನ ಪೊರೆ ಕಳಚುವ ಸಂದರ್ಭದ ಘಟನೆಗಳು ಮತ್ತೆ ಮತ್ತೆ ದೃಶ್ಯವಾಗಿ ಮೂಡಿ, ಇಬ್ಬರ ಪ್ರಜ್ಞೆಯ ಆಳದಲ್ಲೆಲ್ಲೋ ತಮ್ಮ ನಂಬಿಕೆಗೇ ಕೊಡಲಿಯೇಟು ಬಿದ್ದಂತೆ ಚಡಪಡಿಸಿಹೋದರು. ಇಬ್ಬರ ಮನಸ್ಸೂ ಎಲ್ಲ ಖಾಲಿ ಖಾಲಿ ಅನ್ನುವಂಥ ಒಂದು ಬಗೆಯ ಅನುಭೂತಿಯಲ್ಲಿ ಮೀಯುತ್ತಿತ್ತು. ಏನೂ ತಿಳಿಯಲಿಲ್ಲ ಅಂದುಕೊಂಡರೂ ಎಲ್ಲವೂ ತಿಳಿದುಹೋಗಿತ್ತು. ತಮಗರಿವಿಲ್ಲದೇ ನಿತಾಂತ ಮೌನಕ್ಕೆ ಶರಣಾಗಿದ್ದರು.

ಬರುವಾಗ ಇದ್ದ ಹುಮ್ಮಸ್ಸು ಇಬ್ಬರಲ್ಲೂ ಹೀಗೆ ಮರಳುವಾಗ ಉಳಿದಿರಲಿಲ್ಲ. ಮಂಜುಳಾ ಸಣ್ಣ ಮಳೆಗೆ ಸೆರಗನ್ನೇ ತಲೆಯ ಮೇಲೆ ಮರೆ ಮಾಡಿಕೊಂಡಳು. ಜರತಾರಿ ಸೀರೆಯ ಸೆರಗು ನೆಂದು ತೊಪ್ಪೆಯಾಗತೊಡಗಿ ಇದ್ದಲ್ಲೇ ಜರಿಗಳೆಲ್ಲ ಮುಡುಗಿ ಹೋಗಿದ್ದವು. ವಿಶ್ವನಾಥ ತನ್ನ ಕಂಕುಳಲ್ಲಿದ್ದ ಹೆಲ್ಮೆಟ್ ಧರಿಸಿದ. ತುಂತುರು ತುಂತುರು ಮಳೆ. ಮನೆಗೆ ಬಂದು ಸೇರುವ ಹೊತ್ತಿಗೆಲ್ಲ ಪುನಃ ಹೆಲ್ಮೆಟ್ಟಿನ ಮುಂಭಾಗಕ್ಕೆ ನೀರ ಹನಿಗಳ ಮಾಲೆ ಕಟ್ಟಿನಿಂತಿತ್ತು. ಶಹರದ ರಸ್ತೆಯ ವಿದ್ಯುದ್ದೀಪಗಳು ಅದರಲ್ಲಿ ಝಗಮಗ ಪ್ರತಿಫಲಿಸಿ, ವಿಶ್ವನಾಥನ ಕಣ್ಣಿಗೆ ಅವು ಒಮ್ಮೆಲೇ ಚಿನ್ನದ ಬಣ್ಣದ ಹನಿಗಳಂತೆ ಕಂಡವು.

(ಸುನಂದಾ ಪ್ರಕಾಶ ಕಡಮೆ)
‘ನೀರ ಮಣಿಗಳ ಮಾಲೆ’ ಯಾಕಿಷ್ಟವೆಂದರೆ..
ಇಂದಿನ ಜಾಗತೀಕರಣ ವ್ಯವಸ್ಥೆಯ ಸಂದರ್ಭದಲ್ಲಿ ತೀರಾ ವಾಸ್ತವದ ಒಂದು ಅನುಭವವಾಗಿ ನನ್ನನ್ನು ಕಾಡಿದ್ದರಿಂದ ನನಗೆ ಈ ಕತೆ ಇಷ್ಟವಾಯಿತು. ಒಂದರ್ಥದಲ್ಲಿ ಈ ಕತೆಯು ಕಲ್ಪನೆಯ ನಿರೂಪಣೆಯನ್ನು ಹೊಂದಿಲ್ಲ. ಇದೊಂದು ವಾಸ್ತವದ ಪುನರ್ ಸೃಷ್ಟಿಯೇ ಹೌದು. ಕತೆ ಕಟ್ಟುವಾಗ ಮಾತ್ರ ವಿಷಯ ವಸ್ತುವೊಂದು ನನಗೆ ಗೊತ್ತಿಲ್ಲದೇ ಒಂದು ನೆನಪಾಗಿ, ಒಂದು ಚಿತ್ರವಾಗಿ, ಒಂದು ಅನುಭವವಾಗಿ ಬಂದು ನನ್ನ ಕಥಾ ಚೌಕಟ್ಟನ್ನು ಅಲಂಕರಿಸಿತು.
ಮನಸ್ಸನ್ನು ಘಾಸಿಗೊಳಿಸಿದ ಸಂವೇದನೆಯೊಂದು ತಲೆಯಲ್ಲೇ ತನ್ನ ಆಕೃತಿಯನ್ನು ಪಡೆಯುತ್ತಿರುತ್ತದೆ, ಬರೆಯಲು ಕೂತ ಕೂಡಲೇ ಅದು ಈಗಲೇ ನಡೆದಂತೆ ಒಂದಕ್ಕೊಂದು ಕೊಂಡಿ ಕೂಡಿಸಿಕೊಂಡು ಮೈದಾಳಿ ಬಿಡುತ್ತದೆ. ಕತೆ ಅಂತರಂಗದಿಂದ ಹೊರಬಂದ ಕೂಡಲೇ ಆಅ ವೇದನೆಯಿಂದಲೇ ಹೊರಬಂದ ಎಂಥದೋ ಬಿಡುಗಡೆ ಮನಸ್ಸಿಗೆ. ಓದುಗರು ಓದಿ ಅದರ ಕುರಿತು ಮಾತಾಡಿದ ಮೇಲಂತೂ ನೋವು ಅರ್ಥ ಕಳಕೊಂಡು, ಒಂದು ತಮಾಷೆಯ ಸಂಗತಿಯಾಗಿಬಿಡುವ ಆ ಕ್ಷಣವಿದೆಯಲ್ಲ, ಅದು ನಿಜಕ್ಕೂ ಬರೆದ ಮನಸ್ಸೊಂದು ಹತ್ತಿಯಷ್ಟೇ ಹಗುರಗೊಳ್ಳುವ ಘಳಿಗೆ. ಈ ಕತೆ ಅಂಥದೊಂದು ಹಗುರನ್ನು ಧಾರಾಳವಾಗಿ ನನ್ನ ಮನಸ್ಸಿಗೆ ನೀಡಿದ್ದರಿಂದ ನನಗೆ ಈ ಕತೆ ಇಷ್ಟವಾಗಿದೆ.
ಸುಲಭದಲ್ಲಿ ಹಣ ಗಳಿಸುವದಕ್ಕಾಗಿ ಯಾವು ಯಾವುದೋ ಕಂಪನಿಗಳು ಮೋಸಜಾಲವನ್ನು ಹೆಣೆದು ಕೂತು, ಬಹುಮಾನದ ಆಮಿಷ ತೋರಿಸಿ, ಮಧ್ಯಮ ವರ್ಗದ ಜನಸಾಮಾನ್ಯರನ್ನು ವಂಚನೆಯಲ್ಲಿ ಮುಳುಗಿಸುವ ಅನೇಕ ಬಗೆಯ ನಾಟಕೀಯ ವೈಪರೀತ್ಯಗಳು ಇಂದು ನಮ್ಮ ಪಟ್ಟಣಗಳಲ್ಲಿ ಕಾಣಸಿಗುತ್ತವೆ, ಮಧ್ಯಮ ವರ್ಗದ ಕುಟುಂಬ ಸದಸ್ಯರ ಮೆಂಟಾಲಿಟಿಗಳನ್ನು ಅಭ್ಯಸಿಸಿ ನಡೆಸುವ ಇಂಥ ಆಟಗಳು ಹಲವು ಸ್ವಾರ್ಥಗಳನ್ನು ಒಡಲಲ್ಲಿಟ್ಟುಕೊಂಡಿರುತ್ತವೆ. ಅಂಥವುಗಳಲ್ಲಿ ಈ ಕತೆಯಲ್ಲಿ ಬರುವ ಕಂಟ್ರಿ ಕ್ಲಬ್ಬಿನ ಬಹುಮಾನದ ಪ್ರಕರಣವೂ ಒಂದು. ಇದರಲ್ಲಿ ಬರುವ ಕೆಲ ಸನ್ನಿವೇಶಗಳು ನನಗೆ ವೈಯಕ್ತಿಕವಾಗಿ ಅನುಭವಕ್ಕೆ ನಿಲುಕಿರುವಂಥವುಗಳೇ. ಹಾಗಾಗಿ ಕಥಾ ವಸ್ತುವಿನ ಕುರಿತಾದ ವೇದನೆಯ ಕುರಿತಾಗಿ ಮತ್ತು ಅದು ಅಕ್ಷರ ರೂಪದಲ್ಲಿ ಹೊರಬಿದ್ದ ಕೂಡಲೇ ಅದರಿಂದ ಪಡೆದ ಮುಕ್ತಿಯ ಬಗ್ಗೆ ನಾನು ಹೇಳಿದ್ದು, ಈ ಕತೆ ಇಷ್ಟವಾಗಲು ಇದೂ ಒಂದು ಕಾರಣವಿದ್ದೀತು. ಇದನ್ನು ಓದಿದವರು ಇದು ತಮ್ಮದೂ ಅನುಭವ ಅಥವಾ ಇಂಥ ಪ್ರಸಂಗದಲ್ಲೇ ತಮಗೆ ಬೇರೆ ರೀತಿಯ ಅನುಭವವಾಗಿದೆ ಅಂತ ಅವರು ತಂತಮ್ಮ ಅನುಭವ ಹೇಳಿಕೊಳ್ಳುವಾಗಲಂತೂ, ಈ ಬರವಣಿಗೆ ಸಾರ್ಥಕ ಎಂಬ ಭಾವ ಮೂಡಿದೆ. ಜಾಗತೀಕರಣ ಎಳೆದು ತಂದಿರುವ ಸುಲಭದಲ್ಲಿ ಹಣ ಲಪಟಾಯಿಸುವ ಇಂಥ ಸಂದರ್ಭಗಳನ್ನು ಹೇಗೆ ನಿಭಾಯಿಸಬೇಕೆಂಬ ಮತ್ತು ಇಂಥ ವಂಚನೆಗಳಿಂದ ಹೇಗೆ ದೂರವಿರಬೇಕೆಂಬ ವಿವೇಚನೆಯೊಂದು ಈ ಕತೆ ಓದುವುದರಿಂದ ಸಹೃದಯರಿಗೆ ದೊರಕಿದರೆ, ನನ್ನ ಶ್ರಮ ಸಾರ್ಥಕ.

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ

ನಿಜ ಮೇಡಮ್ ಇಂತಹ ವಂಚನೆಗಳು ನಮ್ಮ ಬಹುತೇಕ ಜನರಿಗೆ ಆಗಿವೆ. ಬಹುಮಾನದ ಆಸೆಗೆ ದಂಪತಿಗಳು ಅದೆಷ್ಟೋ ದೂರದ ಊರುಗಳಿಗೆ ಹೋಗಿ ಬಂದಿದ್ದು ಇದೆ.ನಿಮ್ಮ ಕಥೆ ಓದಿನ ಖುಷಿ ಕೊಟ್ಟು,ಅನೇಕರ ಕಣ್ಣು ತೆರೆಸಿ ಎಚ್ಚರಿಕೆಯ ಸುಳಿವನ್ನು ಕೊಟ್ಟಿದೆ.