ನಮಗೆ ಗೊತ್ತಿರುವ ಹೊಸ ಆಸ್ಟ್ರೇಲಿಯಾದ ಉಧ್ಭವ ಮತ್ತು ಬೆಳೆದಿದ್ದು ಅದೆಷ್ಟು ವಿವಾದಗಳನ್ನೊಳಗೊಂಡಿತ್ತು, ಎಂದು ಒತ್ತಿ ಹೇಳುತ್ತದೆ. ಆಸ್ಟ್ರೇಲಿಯಾದ ಬಗ್ಗೆ ಈಗಲೂ ಇರುವ ಸುಳ್ಳುಪೊರೆಗಳನ್ನು ಛೇದಿಸುತ್ತಾ ಕಾರ್ಯಕ್ರಮವು ವೀಕ್ಷಕರ ಮುಂದೆ ಅನೇಕ ಸಾಕ್ಷ್ಯಗಳನ್ನು ಇಡುತ್ತದೆ. ಹಿಂದಿನ ರಾಜಕೀಯ ನಾಯಕರು, ಪ್ರಮುಖ ಸರ್ಕಾರಿ ಅಧಿಕಾರಿಗಳು, ಚರಿತ್ರೆ-ದಾಖಲೆಗಳನ್ನು ಅಭ್ಯಸಿಸುವ ನಿಪುಣರು, ಅಬೊರಿಜಿನಲ್ ಆಸ್ಟ್ರೇಲಿಯನ್ ವಿದ್ವಾಂಸರು ಮತ್ತು ಹಿರಿಯರು ಎಂಬಂತೆ ನೂರಾರು ಜನರನ್ನು ಸಂದರ್ಶಿಸಿ ಅವರ ದೃಷ್ಟಿಕೋನಗಳನ್ನು ತೋರಿಸಿದ ಈ ಸರಣಿ ಡಾಕ್ಯುಮೆಂಟರಿ ಬಹಳ ಉಪಯುಕ್ತವಾಗಿದೆ.
ಡಾ. ವಿನತೆ ಶರ್ಮ ಬರೆಯುವ “ಆಸ್ಟ್ರೇಲಿಯಾ ಪತ್ರ” ನಿಮ್ಮ ಓದಿಗೆ
ಪ್ರಿಯ ಓದುಗರೆ,
ಇಲ್ಲಿ ಭಾರತೀಯರಿರುವ ಫೇಸ್ ಬುಕ್ ಪುಟಗಳಲ್ಲಿ ಆಗಾಗ ಮಗಳಿದ್ದಾಳೆ, ಮಗನಿದ್ದಾನೆ, ವರ/ವಧು ಹುಡುಕುತ್ತಿದ್ದೀವಿ, ಭಾರತೀಯರು ಯಾರಾದರೂ ಗೊತ್ತಿದ್ದರೆ ನಮಗೆ ತಿಳಿಸಿ, ಎಂದು ಪ್ರಕಟವಾಗುತ್ತಿರುತ್ತದೆ. ಬಹುಶಃ ಈ ಯುವಜನರು ಇಲ್ಲಿ ಆಸ್ಟ್ರೇಲಿಯಾದಲ್ಲಿ ಬೆಳೆದವರು. ನನಗನಿಸುವುದು ಅವರ ತಾಯಿ-ತಂದೆಯರು ತಾವು ಬಿಟ್ಟುಬಂದ ದೇಶದ ಬಗ್ಗೆ ಇರುವ ನಂಟಿನಿಂದ ಈ ರೀತಿ ತಮ್ಮ ಮಕ್ಕಳಿಗೆ ಭಾರತೀಯ ಸಂಗಾತಿಯೆ ಬೇಕು ಎಂದು ಬಯಸುತ್ತಾರಾ. ಇಲ್ಲಾ, ತಮ್ಮ ಸಂಸ್ಕೃತಿಯವರೇ ಸಿಕ್ಕರೆ ಹೊಂದಾಣಿಕೆ ಸುಲಭ, ಎಂದಾ. ಇವೆರಡನ್ನೂ ಬಿಟ್ಟು ದೇಶ ತೊರೆದು ಬಂದರೂ ತಮ್ಮ ಭಾರತೀಯ ಅಸ್ಮಿತೆಯನ್ನು ಪಲ್ಲಟಗೊಳಿಸಲು ಸಾಧ್ಯವಿಲ್ಲವಾ. ಇರಲಿ, ಅವರ ನಿಲುವು ಅವರಿಗೆ ಸೇರಿದ್ದು.
ಇದು ಭಾರತೀಯರ ವಿಷಯವಾದರೆ, ಅತ್ತ ಕಡೆ ವಲಸಿಗರಲ್ಲದ ಆಸ್ಟ್ರೇಲಿಯನ್ನರು ಭಾರತೀಯರನ್ನು ಭಾರತೀಯ ಏಕ ಸಂಸ್ಕೃತಿಯ ನೆಲೆಗಟ್ಟಿನಲ್ಲೇ ಇರಿಸಿ ನೋಡಲು ಬಯಸುತ್ತಾರೆ. ಈ ಬಗ್ಗೆ ಹೆಚ್ಚಿನ ಮಂದಿಯಲ್ಲಿ ಮಿಶ್ರ ಭಾವನೆಗಳಿವೆ, ಆಲೋಚನೆಗಳಿವೆ. ಸುಮಾರು ಇಪ್ಪತ್ತೈದು ವರ್ಷಗಳಿಂದ ಆಸ್ಟ್ರೇಲಿಯಾದ (ಮಧ್ಯೆ ಕೆಲವು ವರ್ಷಗಳು ಇಂಗ್ಲೆಂಡಿನ ವಾಸಿ) ವಿವಿಧ ನಗರಗಳಲ್ಲಿ ವಾಸಿಸಿರುವ ನನಗೆ ಆಸ್ಟ್ರೇಲಿಯಾದ ಪರಿಚಯ ಒಂದಷ್ಟುಮಟ್ಟಿಗೆ ಇದೆ. ನಾನು ಭಾರತೀಯ ಮೂಲದವಳು, ನನ್ನ ಗಂಡ ಬ್ರಿಟನ್ ಮೂಲದವರು, ಮಕ್ಕಳು ಆಸ್ಟ್ರೇಲಿಯನ್ನರು. ನನ್ನ ಗಂಡನಿಗೆ ತೊಂಬತ್ತರ ದಶಕದಲ್ಲಿ ಯೂಕೆ ಮತ್ತು ಅಮೆರಿಕೆಯಲ್ಲಿ ನಡೆಸಿದ್ದ ಆಸ್ಟ್ರೇಲಿಯಾ ಪ್ರವಾಸ ಪ್ರಚಾರದ ಬಗ್ಗೆ ಕೇಳಿ ನೋಡಿದ, ಚೆನ್ನಾದ ಅನುಭವವಿದೆ. ತೊಂಬತ್ತರ ದಶಕದ ಹೆಸರಾಂತ ಆಸ್ಟ್ರೇಲಿಯನ್ ಟೀವಿ ನಟ ಪೌಲ್ ಹೋಗನ್ ಅವರ ‘shrimp ಆನ್ ದ ಬಾರ್ಬಿ’ ಜಾಹೀರಾತು ಅದೆಷ್ಟು ಜನಪ್ರಿಯವಾಗಿತ್ತು, ಅದನ್ನು ನೋಡಿ, ಮಾರು ಹೋಗಿ ಅನೇಕ ಅಮೆರಿಕನ್ನರು ಮತ್ತು ಬ್ರಿಟನ್ನಿನವರು ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿದ್ದರು, ಎಂದು ನೆನೆಸಿಕೊಳ್ಳುತ್ತಾರೆ.
ಮೊನ್ನೆ ತಾನೇ ಪೌಲ್ ಹೋಗನ್ ಅವರು ನಟಿಸಿದ, ಅಮೆರಿಕನ್ನರಿಗೆ ಹುಚ್ಚುಹಿಡಿಸಿದ್ದ ಪ್ರಸಿದ್ಧ ಚಲನಚಿತ್ರ ‘Crocodile Dundee’ ತೆರೆಮರೆಯ ಕಥೆಗಳನ್ನು ಹೇಳಿದ ಕಾರ್ಯಕ್ರಮವೊಂದು ಪ್ರಸಾರವಾಗಿತ್ತು. ಆ ಆ ಕಾರ್ಯಕ್ರಮದಲ್ಲಿ ಮಾತನಾಡುತ್ತಾ, ತಾನು ಸೃಷ್ಟಿಸಿದ Mick Dundee ಪಾತ್ರ ಅದೆಷ್ಟು ಜನಪ್ರಿಯವಾಯ್ತು ಎಂದು ಪೌಲ್ ಹೋಗನ್ ಹೇಳುತ್ತಾರೆ. ಇತ್ತೀಚೆಗೆ ಹತ್ತು ಪ್ರಸಿದ್ಧ ಆಸ್ಟ್ರೇಲಿಯನ್ ನಟರ ಪಟ್ಟಿಯೊಂದು ಪ್ರಕಟವಾಗಿತ್ತು, ಅದರಲ್ಲಿ ತನ್ನ ಹೆಸರಿರಲಿಲ್ಲ; ಆದರೆ ಪಟ್ಟಿಯ ಮೊದಲ ಸ್ಥಾನದಲ್ಲಿ ಇದ್ದದ್ದು Mick Dundee ಎಂದು ಹೇಳುತ್ತಾ ನಗುತ್ತಾರೆ. ‘Crocodile Dundee’ ಚಲನಚಿತ್ರ ಆಸ್ಟ್ರೇಲಿಯಾವನ್ನು ಹೊರಜಗತ್ತಿಗೆ, ಮುಖ್ಯವಾಗಿ ಅಮೆರಿಕನ್ನರಿಗೆ, ಪರಿಚಯಿಸಿತು ಎನ್ನುತ್ತಾರೆ. ಚಿತ್ರದ ನಾಯಕಿ ನ್ಯೂಯಾರ್ಕ್ ನಗರದವಳು, ಅರ್ಧ ಕತೆ ನ್ಯೂಯಾರ್ಕ್ ನಗರದಲ್ಲಿ ನಡೆಯುತ್ತದೆ.

ಇನ್ನು ನನ್ನ ಮಟ್ಟಿಗೆ ಹೇಳುವುದಾದರೆ, ನನ್ನ ಸ್ವಂತ ಕುತೂಹಲ, ಆಸಕ್ತಿ ಮೇರೆಗೆ ನಾನು ಮೂಲನಿವಾಸಿಗಳ ಆಸ್ಟ್ರೇಲಿಯಾ ಬಗ್ಗೆ ತಿಳಿಯಲು ಒಂದಷ್ಟು ಅಧ್ಯಯನ, ಕೆಲಸದ ಅನುಭವಗಳನ್ನು ಗಳಿಸಿದ್ದೀನಿ. ಇದರಿಂದ ಆಸ್ಟ್ರೇಲಿಯನ್ ಇತಿಹಾಸ, ಸಂಸ್ಕೃತಿಗಳ ವಿರೋಧಾಭಾಸಗಳು, ಜ್ವಲಂತವಾಗಿರುವ ಸಮಸ್ಯೆಗಳ ಬಗ್ಗೆ ಸದಾ ಗಮನವಿದೆ.
ಮೇಲಿನ ಹಿನ್ನೆಲೆಗಳಲ್ಲಿ ನಾನು, ನನ್ನ ಗಂಡ ಇತ್ತೀಚೆಗೆ ‘ದಿ ಐಡಿಯಾ ಆಫ್ ಆಸ್ಟ್ರೇಲಿಯಾ’ ಕಾರ್ಯಕ್ರಮದ ನಾಲ್ಕು ಭಾಗಗಳನ್ನು ನೋಡಿದೆವು. SBS ಟೀವಿ ಚಾನೆಲ್ಗಾಗಿ ಈ ಡಾಕ್ಯುಮೆಂಟರಿಯನ್ನು ಮಾಡಿದ್ದು. ಪ್ರಸಿದ್ಧ ಆಸ್ಟ್ರೇಲಿಯನ್ ನಟಿ ರೇಚೆಲ್ ಗ್ರಿಫಿತ್ಸ್ ನಡೆಸಿಕೊಟ್ಟ ಈ ಸೀರೀಸ್ನಲ್ಲಿ ಅನೇಕ ಆಧಾರ-ಸಹಿತ ವಿವರಗಳು, ಸಂದರ್ಶನಗಳು ಬಹಳ ಆಸಕ್ತಿದಾಯಕವೂ, ವಿಷಯಜ್ಞಾನವನ್ನು ಹೆಚ್ಚಿಸಿದ್ದೂ ಆಗಿತ್ತು. ಮುಖ್ಯವಾಗಿ ನಮಗೆ ಗೊತ್ತಿರುವ ಹೊಸ ಆಸ್ಟ್ರೇಲಿಯಾದ ಉಧ್ಭವ ಮತ್ತು ಬೆಳೆದಿದ್ದು ಅದೆಷ್ಟು ವಿವಾದಗಳನ್ನೊಳಗೊಂಡಿತ್ತು, ಎಂದು ಒತ್ತಿ ಹೇಳುತ್ತದೆ. ಆಸ್ಟ್ರೇಲಿಯಾದ ಬಗ್ಗೆ ಈಗಲೂ ಇರುವ ಸುಳ್ಳುಪೊರೆಗಳನ್ನು ಛೇದಿಸುತ್ತಾ ಕಾರ್ಯಕ್ರಮವು ವೀಕ್ಷಕರ ಮುಂದೆ ಅನೇಕ ಸಾಕ್ಷ್ಯಗಳನ್ನು ಇಡುತ್ತದೆ. ಹಿಂದಿನ ರಾಜಕೀಯ ನಾಯಕರು, ಪ್ರಮುಖ ಸರ್ಕಾರಿ ಅಧಿಕಾರಿಗಳು, ಚರಿತ್ರೆ-ದಾಖಲೆಗಳನ್ನು ಅಭ್ಯಸಿಸುವ ನಿಪುಣರು, ಅಬೊರಿಜಿನಲ್ ಆಸ್ಟ್ರೇಲಿಯನ್ ವಿದ್ವಾಂಸರು ಮತ್ತು ಹಿರಿಯರು ಎಂಬಂತೆ ನೂರಾರು ಜನರನ್ನು ಸಂದರ್ಶಿಸಿ ಅವರ ದೃಷ್ಟಿಕೋನಗಳನ್ನು ತೋರಿಸಿದ ಈ ಸರಣಿ ಡಾಕ್ಯುಮೆಂಟರಿ ಬಹಳ ಉಪಯುಕ್ತವಾಗಿದೆ.
ನಮಗೆ ತಿಳಿದಿರುವ ಪ್ರಜಾಪ್ರಭುತ್ವದ ಬುನಾದಿ ಹೊಂದಿರುವ ಅಖಂಡ ಆಸ್ಟ್ರೇಲಿಯಾದ ರಚನೆಯಾಗಿದ್ದು ೧೯೦೧ ನೇ ಇಸವಿಯಲ್ಲಿ. ಅಂದರೆ ಸುಮಾರು ೧೨೫ ವರ್ಷಗಳ ಹಿಂದೆ. ಬೇರೆ ಬೇರೆ ವಸಾಹತುಶಾಹಿ ದೇಶಗಳಲ್ಲಿ ಆದಂತೆ, ವಸಾಹತುಶಾಹಿಗಳ ಮುಷ್ಟಿಯಿಂದ ಆಸ್ಟ್ರೇಲಿಯಾವನ್ನು ಬ್ರಿಟನ್ನಿನ ರಾಜಪ್ರಭುತ್ವ ತನ್ನ ಹಿಡಿತಕ್ಕೆ ತೆಗೆದುಕೊಂಡಿತ್ತು. ಆಗಲೂ ಕೂಡ ಇದ್ದ ಆರು ರಾಜ್ಯಗಳು ತಮ್ಮಷ್ಟಕ್ಕೆ ತಾವು ವಸಾಹತುಗಳಾಗಿ ಪ್ರತ್ಯೇಕ ಆಡಳಿತ ನಡೆಸಿದ್ದವು. ದೇಶದ ಆರು ರಾಜ್ಯಗಳನ್ನು (ನ್ಯೂ ಸೌತ್ ವೇಲ್ಸ್, ಕ್ವೀನ್ಸ್ಲ್ಯಾಂಡ್, ವಿಕ್ಟೋರಿಯಾ, ಸೌತ್ ಆಸ್ಟ್ರೇಲಿಯಾ, ತಸ್ಮಾನಿಯಾ ಮತ್ತು ವೆಸ್ಟೆರ್ನ್ ಆಸ್ಟ್ರೇಲಿಯಾ ಎಂಬ ಆರು ರಾಜ್ಯಗಳು) ಒಗ್ಗೂಡಿಸಿ ಏಕತೆಯ ಒಂದು ಫೆಡರಲ್ ಅಸ್ಮಿತೆಯನ್ನು ಕೊಟ್ಟು, ಚುನಾವಣಾ ಪದ್ಧತಿಯ ಮೂಲಕ ಕೇಂದ್ರೀಯ ಸರ್ಕಾರವನ್ನು ರಚಿಸಿ ಹೊಸ ರೂಪುರೇಖೆಗಳನ್ನು ಜಾರಿಗೆ ತರುವ ಯೋಜನೆ ಜಾರಿಗೆ ಬಂದದ್ದು ಜನವರಿ ೧, ೧೯೦೧. ಇದನ್ನು ಫೆಡರೇಶನ್ ಡೇ ಎಂದು ಕರೆಯುತ್ತಾರೆ. ಇಲ್ಲಿಂದ ಮುಂದೆ ಪ್ರಧಾನ ಮಂತ್ರಿ ಆಯ್ಕೆ ಮತ್ತು ಕೇಂದ್ರ ಸರ್ಕಾರ ರಚನೆ, ರಾಜ್ಯಮಟ್ಟದಲ್ಲಿ ಪ್ರೀಮಿಯರ್ (ಮುಖ್ಯಮಂತ್ರಿ) ಮತ್ತು ರಾಜ್ಯಸರ್ಕಾರ ವ್ಯವಸ್ಥೆ ನಡೆಯುತ್ತಿದೆ.
‘ದಿ ಐಡಿಯಾ ಆಫ್ ಆಸ್ಟ್ರೇಲಿಯಾ’ ಡಾಕ್ಯುಮೆಂಟರಿ ಆಸ್ಟ್ರೇಲಿಯಾವು ಒಂದು ಬಹು ಸುಂದರ, ಶಾಂತಿದಾಯಕ, ಬಹುಸಂಸ್ಕೃತಿಗಳ ಸ್ವರ್ಗಸಮಾನ ದೇಶ ಎನ್ನುವ ಏಕಪ್ರತಿಮೆಯನ್ನು ಸವಾಲಿಗೆ ಒಡ್ಡುತ್ತದೆ. ಆಸ್ಟ್ರೇಲಿಯನ್ ಸ್ಲೋಗನ್ ಆದ ಎಲ್ಲರಿಗೂ ‘ಫೇರ್ ಗೋ’ (ಸಮಾನತೆ, ಸಮತೆ) ಇರುವ ಸಾಧ್ಯತೆಯನ್ನು ಅಲ್ಲಗೆಳೆಯುತ್ತದೆ. ಕಾರ್ಯಕ್ರಮಕ್ಕೆಂದು ಸಂದರ್ಶಿಸಿದ ಹಲವರು ಸಾಕ್ಷಿ-ಆಧಾರ ಸಮೇತ ಆಸ್ಟ್ರೇಲಿಯಾದ ವಸಾಹತು ಕರಾಳ ಇತಿಹಾಸವನ್ನು ಕುರಿತು ಮಾತನಾಡುತ್ತಾರೆ. ಮೂಲನಿವಾಸಿಗಳ ಮತ್ತು ವಸಾಹತುಶಾಹಿಗಳ ಮಧ್ಯೆ ಇರುವ ಕಂದಕವನ್ನು ತೋರಿಸುತ್ತಾರೆ. ‘ಫೇರ್ ಗೋ’ ಎನ್ನುವುದು ಮೂಲನಿವಾಸಿಗಳಿಗೆ ಯಾಕೆ ಅನ್ವಯಿಸಿಲ್ಲ ಎಂದು ಪ್ರಶ್ನಿಸುತ್ತಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಿದ್ದ ಫೆಡರೇಶನ್ ಆಸ್ಟ್ರೇಲಿಯಾ ರಚನೆಯ ನಂತರದ ವರ್ಷಗಳಲ್ಲಿ ಯಾಕೆ ‘ವೈಟ್ ಆಸ್ಟ್ರೇಲಿಯಾ’ (ಬಿಳಿಯರಿಗಾಗಿ ಮಾತ್ರ ಆಸ್ಟ್ರೇಲಿಯಾ) ಎಂದಿದ್ದ ಕಾನೂನು ಜಾರಿಗೆಗೆ ಬಂತು, ಯೂರೋಪಿಯನ್ನರ ಮೂಲವುಳ್ಳವರಿಗೆ ಮಾತ್ರ ಆಸ್ಟ್ರೇಲಿಯಾದಲ್ಲಿ ಸ್ವಾಗತ ಎನ್ನುವ ಕಾನೂನು ಅದು ಹೇಗೆ ಒಪ್ಪಿಗೆಯಾಯ್ತು ಎಂದೆಲ್ಲ ಪ್ರಶ್ನಿಸುತ್ತದೆ. ‘ಬಹು ಸಂಸ್ಕೃತಿಗಳ ದೇಶ’ ಎನ್ನುವ ರಾಜಕೀಯ ಪೊಳ್ಳನ್ನು ಅದು ಚುಚ್ಚುತ್ತದೆ. ದೇಶದ ಆರ್ಥಿಕ ಪ್ರಗತಿಗಾಗಿ ಮಾತ್ರ ಒಪ್ಪಿಕೊಂಡ ಬಹುಸಂಸ್ಕೃತಿಗಳ ರಾಜಕೀಯ ಅಜೆಂಡಾವನ್ನು ಅದು ವಿಶ್ಲೇಷಿಸುತ್ತದೆ.

ಇಂತಹ ಅನೇಕ ವಿಶ್ಲೇಷಣೆಗಳ ಮೂಲಕ ಕಾರ್ಯಕ್ರಮವು ‘ಆಸ್ಟ್ರೇಲಿಯನ್ ಅಂದರೆ ಯಾರು’ ಆಸ್ಟ್ರೇಲಿಯನ್ ಅಸ್ಮಿತೆಯೆಂದರೆ ಏನದು, ಎನ್ನುವ ಬಹಳ ಗಹನವಾದ ಪ್ರಶ್ನೆಯನ್ನು ನಮ್ಮ ಮುಂದಿಡುತ್ತದೆ. ಕಾರ್ಯಕ್ರಮದ ರೂವಾರಿ ರೇಚೆಲ್ ಗ್ರಿಫಿತ್ಸ್ ಹೇಳಿರುವಂತೆ, ಇಂತಹ ಪ್ರಶ್ನೆಗಳನ್ನು ಕೇಳುತ್ತಾ, ಕೇಳಿಕೊಳ್ಳುತ್ತಾ ನಾವೆಲ್ಲರೂ ಮುಂದೆ ಸಾಗಬೇಕಿದೆ. ಮುಂಬರುವ ವರ್ಷಗಳಲ್ಲಿ ಆಸ್ಟ್ರೇಲಿಯಾವನ್ನು ಮುನ್ನಡೆಸುವ ಜವಾಬ್ದಾರಿ ನಮ್ಮಈಗಿನ ಕಿರಿಯ ವಯಸ್ಸಿನ ಯುವಜನತೆಗೆ ಸೇರಿದ್ದು. ಅವರಿಗೆ ಆಸ್ಟ್ರೇಲಿಯಾದ ಇತಿಹಾಸ ಗೊತ್ತಿರಬೇಕು. ನಮ್ಮ ಅತ್ಯಂತ ಪುರಾತನ ಅಬೊರಿಜಿನಲ್ ಸಂಸ್ಕೃತಿಗಳ ಪರಿಚಯವಿರಬೇಕು. ಆಸ್ಟ್ರೇಲಿಯನ್ ಸಮಾಜಕ್ಕೆ ಅತ್ಯವಶ್ಯಕವಿರುವ ಬಹುಸಂಸ್ಕೃತಿಗಳ ಜನರನ್ನು ಗೌರವಿಸಿ ಎಲ್ಲರಿಗೂ ‘ಫೇರ್ ಗೋ’ ಸಿಗಬೇಕು. ಈಗಿರುವ ಸಮಸ್ಯೆಗಳನ್ನು, ಇನ್ನೂ ಬಾಕಿಯಿರುವ ಕೆಲಸಗಳನ್ನು ಎದುರಿಸಲು ನಮಗೆ ನಿಜವಾದ ಆಸ್ಟ್ರೇಲಿಯಾ ಎಂದರೆ ಏನು ಎನ್ನುವುದು ಅರ್ಥವಾಗಬೇಕು.

ಡಾ. ವಿನತೆ ಶರ್ಮ ಬೆಂಗಳೂರಿನವರು. ಈಗ ಆಸ್ಟ್ರೇಲಿಯಾದಲ್ಲಿ ವಾಸವಾಗಿದ್ದಾರೆ. ಕೆಲ ಕಾಲ ಇಂಗ್ಲೆಂಡಿನಲ್ಲೂ ವಾಸಿಸಿದ್ದರು. ಮನಃಶಾಸ್ತ್ರ, ಶಿಕ್ಷಣ, ಪರಿಸರ ಅಧ್ಯಯನ ಮತ್ತು ಸಮಾಜಕಾರ್ಯವೆಂಬ ವಿಭಿನ್ನ ಕ್ಷೇತ್ರಗಳಲ್ಲಿ ವಿನತೆಯ ವ್ಯಾಸಂಗ ಮತ್ತು ವೃತ್ತಿ ಅನುಭವವಿದೆ. ಪ್ರಸ್ತುತ ಸಮಾಜಕಾರ್ಯದ ಉಪನ್ಯಾಸಕಿಯಾಗಿದ್ದಾರೆ. ಇವರು ೨೦೨೨ರಲ್ಲಿ ಹೊರತಂದ ‘ಭಾರತೀಯ ಮಹಿಳೆ ಮತ್ತು ವಿರಾಮ: ಕೆಲವು ಮುಖಗಳು, ಅನುಭವ ಮತ್ತು ಚರ್ಚೆ’ ಪುಸ್ತಕದ ಮುಖ್ಯ ಸಂಪಾದಕಿ. ಇತ್ತೀಚೆಗೆ ಇವರ ‘ಅಬೊರಿಜಿನಲ್ ಆಸ್ಟ್ರೇಲಿಯಾಕ್ಕೊಂದು ವಲಸಿಗ ಲೆನ್ಸ್’ ಕೃತಿ ಪ್ರಕಟವಾಗಿದೆ.

