ಪ್ರವಾಸ-ಪ್ರಯಾಣದಲ್ಲಿ ಸಹಪ್ರಯಾಣಿಕರು ನಮ್ಮ ಓದಿನ ರೀತಿಯನ್ನು ಪ್ರಭಾವಿಸುತ್ತಾರೆ. ಅಲ್ಲದೆ, ಪ್ರವಾಸ-ಪ್ರಯಾಣದ ಉದ್ದೇಶ, ಓದುವುದೇನಲ್ಲ. ರೈಲಿನಲ್ಲಾಗಲಿ, ವಿಮಾನದಲ್ಲಾಗಲಿ ನಿಮಗೆ ಊಟಕ್ಕೆ, ನಿದ್ದೆಗೆ, ಶೌಚಕ್ಕೆ ವ್ಯವಸ್ಥೆ, ಅನುಕೂಲ ಮಾಡಿಕೊಡಬಹುದೇ ಹೊರತು ಓದಿಗಲ್ಲ. ನೀವು ಓದುವುದರಿಂದ ಎಷ್ಟೋ ಸಲ ಸಹಪ್ರಯಾಣಿಕರಿಗೆ ತೊಂದರೆಯೂ ಆಗಬಹುದು. ನಿಮ್ಮನ್ನು ಒಬ್ಬ ವಿಚಿತ್ರ ಪ್ರಾಣಿಯೆಂದು ಕೂಡ ಪರಿಗಣಿಸಬಹುದು.
ಕತೆಗಾರ ಕೆ. ಸತ್ಯನಾರಾಯಣ ಬರೆದ “ಓದುವವರೆಲ್ಲ ಓದುಗರೆಲ್ಲ-ಹಾಗಾದರೆ?” ಹೊಸ ಕೃತಿಯ ಒಂದು ಬರಹ ನಿಮ್ಮ ಓದಿಗೆ

ದೀರ್ಘ ಪ್ರವಾಸ, ದೀರ್ಘ ಪ್ರಯಾಣ, ಮನೆಯಿಂದ, ಸ್ವಂತ ಊರಿನಿಂದ ಹೊರದೇಶಗಳಲ್ಲಿ, ಪರಸ್ಥಳಗಳಲ್ಲಿ ವಾಸ ಮಾಡಿದಾಗ ನಮ್ಮ ಓದುವಿಕೆ ಹೇಗಿರುತ್ತದೆ. ದಿನನಿತ್ಯದ ಪ್ರಯಾಣಕ್ಕಿಂತ ಹೆಚ್ಚು ಓದು ಸಾಧ್ಯವಾಗುತ್ತದೆ ಎಂಬುದು ನಿಜ. ಪ್ರವಾಸ-ಪ್ರಯಾಣದ ಸಂದರ್ಭದಲ್ಲಿ ಪ್ರಕೃತಿ, ದೃಶ್ಯ, ವೈಚಿತ್ರ್ಯಗಳಿಗೆ ಆದ್ಯತೆ ಕೊಡಬೇಕೋ ಇಲ್ಲ ಮನುಷ್ಯರ ಸ್ವಭಾವ, ವೈಚಿತ್ರ್ಯಗಳ ಬಗ್ಗೆ ಗಮನ ಕೊಡಬೇಕೋ?
*
ಪ್ರಯಾಣ, ಪ್ರವಾಸವೆಂದರೆ, “ಅನುಭವ ವೇದ” ಎಂದೇ ಹೇಳುತ್ತಾರೆ. ಅಂದರೆ ಪ್ರವಾಸ-ಪ್ರಯಾಣದ ಸಂದರ್ಭದಲ್ಲಿ ಓದಿಗಿಂತ ಅನುಭವ ಪಡೆಯುವುದಕ್ಕೇ ಹೆಚ್ಚು ಆದ್ಯತೆಯಿರಬೇಕು ಎಂಬುದು ತಿಳುವಳಿಕೆ. ಆದರೆ ಪ್ರವಾಸ-ಪ್ರಯಾಣ ಸಾಹಿತ್ಯವೂ ಕೂಡ ವಿಫುಲವಾಗಿ ಬೆಳೆಯುತ್ತಿದೆ. Best American Essays, Best Short Stories ಪ್ರಕಟಿಸುವಂತೆಯೇ Best Travel Writing ಸಂಪುಟಗಳನ್ನು ಕೂಡ ಪ್ರತಿವರ್ಷ ಪ್ರಕಟಿಸುತ್ತಾರೆ. ಕತೆ, ಪ್ರಬಂಧಗಳ ಸಂಪುಟಗಳಲ್ಲಿ ಕಂಡುಬರುವ ಪ್ರಕಾರ ಸಂಕರ ಪ್ರವಾಸ ಬರವಣಿಗೆಗಳಲ್ಲೂ ಕಂಡುಬರುತ್ತದೆ. ಸಣ್ಣ ಕತೆ, ಪ್ರಬಂಧ, ವ್ಯಕ್ತಿಚಿತ್ರ, ಅನುಭವ ಕಥನ, ಆತ್ಮಶೋಧನೆ, ಪ್ರಕೃತಿ ಚಿತ್ರಣ, ಎಲ್ಲವೂ ಪ್ರವಾಸ-ಪ್ರಯಾಣದ ಬರಹದಲ್ಲಿ ಸೇರಿಕೊಳ್ಳುತ್ತದೆ. ಪ್ರವಾಸ-ಪ್ರಯಾಣದ ಸಂದರ್ಭದಲ್ಲಿ ಓದಲೆಂದೇ ಪುಸ್ತಕಗಳು, ಪತ್ರಿಕೆಗಳು ಪ್ರಕಟವಾಗುತ್ತವೆ. ಬಸ್ ಸ್ಟ್ಯಾಂಡಿನಲ್ಲಿ, ರೈಲ್ವೆ ನಿಲ್ದಾಣದಲ್ಲಿ, ವಿಮಾನ ನಿಲ್ದಾಣದಲ್ಲಿ, ವಿಮಾನದೊಳಗಡೆ, ಪಂಚತಾರಾ ಹೋಟೆಲ್‌ಗಳ ಲಾಬಿಗಳಲ್ಲಿ, ಕೆಲವು ಹೋಟೆಲ್‌ಗಳಲ್ಲಿ ಕೋಣೆಯೊಳಗಡೆಯೂ ಪುಟ್ಟ ಗ್ರಂಥಾಲಯಗಳಿರುತ್ತವೆ. ವಿಮಾನದೊಳಗೆ ಕೂತಾಗಲೂ ನಿಮ್ಮ ಆಸನದ ಹತ್ತಿರ ಇರುವ/ಇಡುವ ಮ್ಯಾಗಜಿನ್‌ಗಳಲ್ಲಿ ಸರಕುಗಳ ಜಾಹಿರಾತು ಇರುವಂತೆಯೇ ಉತ್ತಮ, ಮನೋಜ್ಞ ಲೇಖನಗಳೂ ಇರುತ್ತವೆ. ನೀವು ಪ್ರವಾಸ-ಪ್ರಯಾಣದ ಸಂದರ್ಭದಲ್ಲಿ ಭೇಟಿ ಮಾಡುವ ಜನರು, ವೈಯಕ್ತಿಕವಾಗಿ ನೀಡುವ ಅನುಭವ, ನೀವು ಓದಲು ಬಯಸುವ, ಮಾಡಲೇಬೇಕೆಂದಿರುವ ಓದಿನೊಡನೆ ಸ್ಪರ್ಧಿಸುತ್ತದೆ. ನೀವು ಓದಬೇಕೆಂದುಕೊಂಡಿದ್ದ classics ಪುಟಗಳಿಗಿಂತ ಎದುರಿಗೆ ಕುಳಿತಿರುವ ಒಬ್ಬ ಸಾಮಾನ್ಯ ಮನುಷ್ಯ, ಸಾಧಾರಣ ಕುಟುಂಬಸ್ಥ, ನಿಮಗೆ ಬದುಕಿನ ನಿರಂತರ ರೈಲು ಪ್ರಯಾಣದಿಂದ. ನಾನು ಸುಮಾರು ವರ್ಷಗಳ ಕಾಲ ಪ್ರತಿ ವಾರವೂ ಗುಂತೂರಿನಿಂದ ಹೈದರಾಬಾದ್‌ಗೆ ಓಡಾಡುತ್ತಿದ್ದೆ.

ಹೆಚ್ಚು ಕಡಿಮೆ ಅದೇ ಪ್ರಯಾಣಿಕರು, ಅದೇ ವ್ಯಾಪಾರಿಗಳು, ಅದೇ ರೈಲ್ವೆ ಅಧಿಕಾರಿಗಳು. ಆದರೂ ಇವರುಗಳೇ ಪ್ರತಿ ಪ್ರಯಾಣದಲ್ಲೂ ಹೊಸ ಕತೆಗಳನ್ನು, ಹೊಸ ಪ್ರಸಂಗಗಳನ್ನು ಹೇಳಿಕೊಡುತ್ತಿದ್ದರು. ನಾನು ಓದಲೆಂದು ಇಟ್ಟುಕೊಳ್ಳುತ್ತಿದ್ದ ಪುಸ್ತಕ, ಪತ್ರಿಕೆಗಳಿಂದ ಬ್ಯಾಗ್ ಭಾರವಾಗುತ್ತಿತ್ತು ಅಷ್ಟೇ. ಮಂಡ್ಯ-ಬೆಂಗಳೂರು, ಮಂಡ್ಯ-ಮೈಸೂರುಗಳ ನಡುವೆ ನಾನು ಸಾವಿರಾರು ಸಲ ಪ್ರಯಾಣ ಮಾಡಿರಬಹುದು. ಆವಾಗಲೂ ಕೂಡ ನಾನು ಬಯಸಿದಷ್ಟು ಓದಲು ಸಾಧ್ಯವಾಗಲಿಲ್ಲ ಮಾತ್ರವಲ್ಲ, ನಾನು ಹಿಂದೆ ತಿಳಿದಿದ್ದ ಕತೆಗಳಿಗೆ, ಪ್ರಸಂಗಗಳಿಗೆ ಹೊಸ ದಿಕ್ಕು, ಹೊಸ ಸಾಧ್ಯತೆಗಳು ಗೋಚರಿಸುತ್ತಿದ್ದವು. ನನ್ನ ಸೊಸೆಯ ಕಾಮನಬಿಲ್ಲು, ಮಧುಗಿರಿ ರಾಮು ಮತ್ತು ಸಾಹಿತಿ ಮುದುಕಪ್ಪ, ನಾವು ನಮ್ಮವರೆಂಬ ಸುಳ್ಳು, ಇಂತಹ ಮಿಡಿಯುವ ಕತೆಗಳನ್ನು ರೈಲು ಪ್ರಯಾಣದ ಸೊಗಸು ಇಂತಹ ದೀರ್ಘ ಪ್ರಬಂಧಗಳನ್ನು ಬರೆಯಲು ನನಗೆ ಸಾಧ್ಯವಾದದ್ದೇ ಪ್ರವಾಸ-ಪ್ರಯಾಣದಿಂದ. ಕಾರಂತರಂತಹ ವಿಶಿಷ್ಟ-ವಿಚಿತ್ರ ಪ್ರಯಾಣಿಕ, ಪ್ರವಾಸಿಯನ್ನು ನಾನು ಕಂಡೇ ಇಲ್ಲ, ಓದೇ ಇಲ್ಲ. ಜಾರುವ ಹಾದಿಯಲ್ಲಿ, ಕುಡಿಯರ ಕೂಸು, ಇಂತಹ ಕಾದಂಬರಿಗಳನ್ನು ಬರೆಯುವಾಗ, ಕುಡಿಯರ ಹಾಡಿಗಳಿಗೆ, ಉತ್ತರ ಕನ್ನಡದ ಕಾಡುಗಳಿಗೆ ಅವರು ಮತ್ತೆ ಮತ್ತೆ ಪ್ರವಾಸ ಹೋಗುತ್ತಿದ್ದರಂತೆ. ಮೊಗ ಪಡೆದ ಮನದ ದೃಶ್ಯಾವಳಿ ಉತ್ತರ ಕರ್ನಾಟಕ ಪ್ರವಾಸದ್ದು. ಕಾರಂತರಿಗೆ ಪಕ್ಕದೂರಿಗೆ ಪಯಣಿಸುವಾಗ ಇರುವ ಉತ್ಸಾಹ ಅಮೆರಿಕ ಪ್ರವಾಸದ ಬಗ್ಗೆ ಇರುವಷ್ಟೇ ಇರುತ್ತದೆ. ಪ್ರವಾಸ-ಪ್ರಯಾಣ ಎರಡರ ಪರಿಚಿತ ಸ್ವರೂಪವನ್ನು ಅವರು ಮರೆಯುತ್ತಾರೆ, ಮುರಿಯುತ್ತಾರೆ; ಅಲೆದಾಟವಾಗಿ, ಅವ್ಯವಸ್ಥೆಯ ಆಗರವಾಗಿ ಪರಿವರ್ತಿಸಿಕೊಳ್ಳುತ್ತಾರೆ. ಪ್ರವಾಸ-ಪ್ರಯಾಣದ ಸಂದರ್ಭದಲ್ಲಿ ಪ್ರಕೃತಿ, ದೃಶ್ಯ, ವೈಚಿತ್ರ್ಯಗಳಿಗೆ ಆದ್ಯತೆ ಕೊಡಬೇಕೋ ಇಲ್ಲ ಮನುಷ್ಯರ ಸ್ವಭಾವ, ವೈಚಿತ್ರ್ಯಗಳ ಬಗ್ಗೆ ಗಮನ ಕೊಡಬೇಕೋ?

ಕಾರಂತರಿಗೆ ಎರಡೂ ಸಾಧ್ಯವಾಗುತ್ತದೆ. ಏಕೆಂದರೆ, ಅವರು ಎಷ್ಟು ಸ್ನೇಹಶೀಲರೋ ಅಷ್ಟೇ ಜಗಳಗಂಟರು, ಸಿಡುಕು ಸ್ವಭಾವದವರು. ಛತ್ರದಲ್ಲೂ ಇರಬಲ್ಲರು, ಪಂಚತಾರಾ ಹೋಟೆಲ್‌ನಲ್ಲೂ ಇರಬಲ್ಲರು. ಕುಟುಂಬಗಳೊಡನೆ ಇರಬಲ್ಲಬರು, ಅಪರಿಚಿತರ ಮನೆಗಳ ಬಾಗಿಲು ತಟ್ಟಬಲ್ಲರು. ತೇಜಸ್ವಿಯವರಿಗೆ ಅಂಡಮಾನಿಗೆ ಹೋದಾಗಲೂ ಮುಖ್ಯವಾಗುವುದು, ಅವರ ಪ್ರಕೃತಿ ಕುತೂಹಲವೇ. ಅದು ಬಿಟ್ಟರೆ ತಮ್ಮ ಮನಸ್ಸಿನಲ್ಲಿ ಈಗಾಗಲೇ ತುಂಬಿಕೊಂಡಿರುವ ಪರಿಕಲ್ಪನೆಗಳು, ವಿಚಾರಗಳೇ. ಗೋಕಾಕರಂತಹ ಕಾವ್ಯಧ್ಯಾನಿಗೆ “ಶರಧಿಗೆ ಕೊಡದಿರು ಷಟ್ಪದಿಯ ದೀಕ್ಷೆಯನು” ರೀತಿಯ ಅಜರಾಮರ ಸಾಲುಗಳು ಸಿಗುತ್ತವೆ. ಶಾಂತಿನಾಥ ದೇಸಾಯಿಯಂತಹವರು ಪ್ರಯಾಣ-ಪ್ರವಾಸವೆಲ್ಲ ಮುಗಿದ ಮೇಲೆ, ನೆನಪಿನಲ್ಲಿ, ಧ್ಯಾನದಲ್ಲಿ `ಕ್ಷಿತಿಜ’ದಂತಹ ಕತೆ ಬರೆಯುತ್ತಾರೆ. ನೈಪಾಲರಂತಹವರಿಗೆ ಎಲ್ಲಿಗೆ ಹೋದರೂ ಸಾಮಾಜಿಕ ವಿಚಾರಗಳು, ಸಾಂಸ್ಕೃತಿಕ ಸಂಬಂಧಗಳ ಬಗ್ಗೆಯೇ ಗೀಳು. ಗಾಂಧಿಯಂತೂ ಬಿಡಿ, ಹಿಂದ್ ಸ್ವರಾಜ್ ಧ್ಯಾನಿಸಿದ್ದು, ಬರೆದಿದ್ದು ಹಡಗಿನ ಪಯಣದಲ್ಲೇ.

ಪ್ರವಾಸ-ಪಯಣದ ಸಂದರ್ಭದಲ್ಲಿ ಇಷ್ಟೇ ಓದಬೇಕು, ಇಂತಹದನ್ನೇ ಓದಬೇಕು ಎಂದು ನಾವು ಮೊದಲೇ ನಿರ್ಧರಿಸಿಕೊಂಡುಬಿಟ್ಟಿರುತ್ತೇವೆ. ಪ್ರಕೃತಿ ದೃಶ್ಯಗಳನ್ನು ಹೇಗೆ ನೋಡಬೇಕು ಎಂಬುದರ ಬಗ್ಗೆ ನಮಗೆ ನಾವು ಹೋಗುವ ಮುನ್ನವೇ ವಿಶ್ವಕೋಶ, National Geography, ಗೂಗಲ್ ತರಬೇತಿ ಕೊಟ್ಟಿರುತ್ತದೆ. ಫೋಟೋಗಳನ್ನು ಯಾವ ರೀತಿ ತೆಗೆಯಬೇಕು ಎಂಬ ತರಬೇತಿ ಕೂಡ ಪಡೆದಿರುತ್ತೇವೆ. ಪುಸ್ತಕ ಕ್ರಿಮಿಗಳಾದ ನನ್ನಂತಹವರು ಪ್ರವಾಸ ಕಥನಗಳನ್ನು ಕೂಡ ಜೊತೆಯಲ್ಲಿ ತೆಗೆದುಕೊಂಡು ಹೋಗಿರುತ್ತೇವೆ. ಅಂದರೆ ಅನುಭವದ, ವಿಚಾರಗಳ, ಪುನರುಕ್ತಿ, ಪುನರಭಿನಯದ ಗೀಳು ನಮ್ಮನ್ನು ಬಿಡುವುದೇ ಇಲ್ಲ. ದೀರ್ಘ ಪ್ರವಾಸ, ದೀರ್ಘ ಪ್ರಯಾಣ, ಮನೆಯಿಂದ, ಸ್ವಂತ ಊರಿನಿಂದ ಹೊರದೇಶಗಳಲ್ಲಿ, ಪರಸ್ಥಳಗಳಲ್ಲಿ ವಾಸ ಮಾಡಿದಾಗ ನಮ್ಮ ಓದುವಿಕೆ ಹೇಗಿರುತ್ತದೆ. ದಿನನಿತ್ಯದ ಪ್ರಯಾಣಕ್ಕಿಂತ ಹೆಚ್ಚು ಓದು ಸಾಧ್ಯವಾಗುತ್ತದೆ ಎಂಬುದು ನಿಜ. ಇದಕ್ಕಿಂತ ಮುಖ್ಯವಾಗಿ ನಾನು ದೇಶದೊಳಗೇ ಆಗಲಿ, ಹೊರಗಡೆಗೆ ಹೋದಾಗಲೇ ಆಗಲಿ, ಸ್ಥಳೀಯ ಪತ್ರಿಕೆಗಳನ್ನು, ಜಿಲ್ಲಾ ಪತ್ರಿಕೆಗಳನ್ನು ಸಂಗ್ರಹಿಸಿ ಓದಲು ಇಷ್ಟಪಡುತ್ತೇನೆ. ಆಯಾ ದೇಶದ ಕತೆಗಾರರ, ಪ್ರಬಂಧಕಾರರ ಸಂಪುಟಗಳನ್ನು ಗಮನಿಸುತ್ತೇನೆ. ಓದು ವಿಶಾಲವಾಗುವುದರ ಜೊತೆಗೆ, ನಾವು ಹೋದ ಕಡೆಯಲ್ಲಾ ಪಡೆಯುವ ಅನುಭವಕ್ಕೆ ಒಂದು ವಿಶಾಲವಾದ ಚೌಕಟ್ಟು ಕೂಡ ಸಿಗುತ್ತದೆ. ನಿಮಗೆ ಆಶ್ಚರ್ಯವಾಗುವ ಇನ್ನೊಂದು ಮಾತನ್ನು ಕೂಡ ಇಲ್ಲಿ ಸೇರಿಸಬೇಕು. ಹೀಗೆಲ್ಲಾ ಪ್ರವಾಸ-ಪ್ರಯಾಣ ಹೋದಾಗಲೆಲ್ಲ, ನಾನು ಇಂಗ್ಲಿಷ್ ಪುಸ್ತಕಗಳನ್ನು/ಪತ್ರಿಕೆಗಳನ್ನು ಓದುವುದು ಅನಿವಾರ್ಯ. ಆದರೆ ನನಗೆ ಇದೆಲ್ಲ ಕನ್ನಡ ಪದಗಳಾಗಿ, ಸಾಲುಗಳಾಗಿ ಕಾಣುತ್ತಿರುತ್ತವೆ. ಒಂದೇ ಊರಿಗೆ, ಅದೇ ದೇಶಕ್ಕೆ ಮತ್ತೆ ಮತ್ತೆ ಭೇಟಿ ನೀಡುವ ಅವಕಾಶಗಳು ಸಿಗುತ್ತವೆ. ಆವಾಗ ಹಿಂದಿನ ಪ್ರಯಾಣದಲ್ಲಿ ಬರೆದುಕೊಂಡಿದ್ದ ದಿನಚರಿಗಳನ್ನು ಮತ್ತೊಮ್ಮೆ ಓದಿದರೆ, ಅದು ಬೇರೆಯೇ ಬೆಳಕಿನಲ್ಲಿ ಕಾಣುತ್ತದೆ. ದೀರ್ಘ ವಾಸ್ತವ್ಯದ ಸಂದರ್ಭದಲ್ಲಿ, ನಾನು ವಾಸಿಸುತ್ತಿರುವ ಕುಟುಂಬದ ಸದಸ್ಯರು, ನೆರೆಹೊರೆಯವರು ಓದುತ್ತಿರುವ ಪುಸ್ತಕಗಳನ್ನು ಗಮನಿಸಿ, ಸಾಧ್ಯವಾದರೆ, ಕಡ ಪಡೆದು ಓದಲು ಪ್ರಯತ್ನಿಸುತ್ತೇನೆ. ಈ ರೀತಿಯ ಕೃತಿಗಳ ಓದು ಸಂಪೂರ್ಣವಾಗದಿದ್ದರೂ, ಈಗಾಗಲೇ ಓದಿರುವವರ ಜೊತೆ ಮಾತುಕತೆಯನ್ನಂತೂ ಆಡಬಹುದಲ್ಲ. ಪ್ರಯಾಣದಲ್ಲಿ, ಪ್ರವಾಸದಲ್ಲೆ ನಾವೇನು ಹೊಸ ವ್ಯಕ್ತಿಗಳಾಗುವುದಿಲ್ಲ. ಸ್ವದೇಶದಲ್ಲಿ, ಸ್ವಗೃಹದಲ್ಲಿದ್ದಾಗ ಓದಲು ಪ್ರಾರಂಭಿಸಿ, ಮುಗಿಸಲಾಗದೇ ಹೋಗಿದ್ದ ಕೃತಿ-ವಿಚಾರಗಳು ನಮ್ಮೊಡನೆಯೇ ಬಂದು ಬೇರೆ ವಾತಾವರಣದಲ್ಲಿ ಓದಿಸಿಕೊಳ್ಳುತ್ತವೆ, ಬರೆಸಿಕೊಳ್ಳುತ್ತವೆ ಕೂಡ. ನಾನು ಬಲ್ಲ ಕನ್ನಡದ ಕತೆಗಾರರೊಬ್ಬರು ಅಮೆರಿಕಕ್ಕೆ ಬಂದು ಮೂರು ಮುನ್ನುಡಿಗಳನ್ನು ಬರೆದರು. ನನಗೆ ಅಂತಹ ಅವಕಾಶ ಸಿಗಲಿಲ್ಲ. ಅಮೆರಿಕ ಪ್ರವಾಸಕ್ಕೆ ಮುಂಚೆ ನಾನು ಅಮೆರಿಕದ ಬದುಕಿನ ಬಗ್ಗೆ ನೀಳ್ಗತೆಗಳನ್ನು ಬರೆಯುತ್ತಿದ್ದೆ. ಪ್ರವಾಸ ಮಾಡಿದ ಮೇಲೆ ಪ್ರವಾಸ ಕಥನಗಳನ್ನು ಬರೆದೆ. ಅಲ್ಲದೆ, ನೀವು ಒಂದೇ ದೇಶಕ್ಕೆ, ಒಂದೇ ಸ್ಥಳಕ್ಕೆ ಮತ್ತೆ ಮತ್ತೆ ಹೋಗುತ್ತಿದ್ದರೆ, ಅಲ್ಲಿ ದೀರ್ಘವಾಗಿ ವಾಸ ಮಾಡುತ್ತಿದ್ದರೆ, ನಿಮ್ಮ ದೇಶದ ಮನೆಯಲ್ಲೇ ಇದ್ದಂತಾಗಿಬಿಡುತ್ತದೆ. ಹೊಸ ಓದು, ಹೊಸ ಬರಹ ಯಾವುದೂ ಸಾಧ್ಯವಾಗುವುದಿಲ್ಲ. ನೆದರ್‌ಲ್ಯಾಂಡ್ ಗ್ರಂಥಾಲಯಗಳಿಗೆ, ಪುಸ್ತಕದಂಗಡಿಗಳಿಗೆ ಹೋದರೆ ಅಲ್ಲಿ ಬರೇ ಡಚ್ ಭಾಷೆಯ ಪುಸ್ತಕಗಳು. ಅದರಲ್ಲಿ ತಪ್ಪೇನು? ಪ್ರವಾಸಿಗರಿಗಾಗಿ ಅವರೇಕೆ ತಮ್ಮ ಭಾಷಾ ಆದ್ಯತೆಗಳನ್ನು ಬದಲಾಯಿಸಿಕೊಳ್ಳಬೇಕು?

ನೀವು ತೆರೆದ ಮನಸ್ಸಿನಿಂದಲೇ ಹೊಸ ಊರು, ಹೊಸ ದೇಶಕ್ಕೆ ಪ್ರವಾಸ ಹೋಗುತ್ತೀರಿ. ವಸ್ತುನಿಷ್ಠವಾಗಿ ಗ್ರಹಿಸುತ್ತೀರಿ, ಬರೆಯುತ್ತೀರಿ ಎಂದಿಟ್ಟುಕೊಳ್ಳಿ. ಇಷ್ಟೇ ಕಾರಣಕ್ಕೆ ಮುಂದಿನ ತಲೆಮಾರಿನ ಓದುಗರು ನಿಮ್ಮ ಅನುಭವ, ಓದನ್ನು, ಬರವಣಿಗೆಯನ್ನು ಸರಿಯಾಗಿ ಗ್ರಹಿಸುತ್ತಾರೆ ಎಂದರ್ಥವಲ್ಲ. ಫಾಹಿಯಾನಿನ ಪ್ರವಾಸ ಬರವಣಿಗೆ ಚಂದ್ರಗುಪ್ತನ ಕಾಲದ ಜೀವನದ ಚಿತ್ರಣ ಕೊಡುತ್ತದೆ ಎಂದು ಶಾಲಾ ಪುಸ್ತಕಗಳಲ್ಲಿ ಮತ್ತೆ ಮತ್ತೆ ಓದಿಕೊಂಡೇ ಬಂದಿದ್ದ ನನಗೆ ಅವನ ಕೃತಿಯನ್ನು ಮೂಲದಲ್ಲಿ ಇಡಿಯಾಗಿ ಓದುವ ಅವಕಾಶ ಸಿಕ್ಕಿದಾಗ ನಾಚಿಕೆಯಾಯಿತು. ಏಕೆಂದರೆ, ಫಾಹಿಯಾನ್ ತನ್ನ ಪ್ರವಾಸಿ ಬರವಣಿಗೆಯಲ್ಲಿ ಬೌದ್ಧ ಧರ್ಮದ ಅನುಯಾಯಿಗಳ ಸ್ವರೂಪ, ಬೌದ್ಧ ಧರ್ಮ ಹರಡುತ್ತಿದ್ದ ಸ್ವರೂಪ, ಇವುಗಳ ಬಗ್ಗೆಯೂ ಬರೆದಿದ್ದಾನೆ. ಈಗ ನಾನು ನನ್ನ ಗೆಳೆಯರಿಗೆ ಫಾಹಿಯಾನ್ ಹೀಗೆಲ್ಲ ಬರೆದಿದ್ದಾನೆ ಎಂದು ಹೇಳಲು ಹೊರಟರೂ, ಯಾರೊಬ್ಬರೂ ಕೇಳುವುದಿಲ್ಲ. ಹಾಗಾಗಿ, ಪ್ರವಾಸ-ಪ್ರಯಾಣದ ಓದು-ಬರಹ ಎರಡನ್ನೂ ನಾವು ನಮ್ಮ ಸ್ವ-ಸಂತೋಷಕ್ಕಾಗಿ ಮಾಡುವುದು ಒಳ್ಳೆಯದು. ಬಾಬರ್‌ನಾಮ ಕೃತಿಯನ್ನು ಈಚೆಗೆ ಓದಿದವರು, ಬಾಬರ್ ತನ್ನ ಪ್ರವಾಸ ಕಥನದಲ್ಲಿ ಬಾಬರಿ ಮಸೀದಿ ಬಗ್ಗೆ ಬರೆದೇ ಇಲ್ಲ ಎಂದು ಹೇಳಿದರು. ನಿಜ ಬಾಬರಿ ಮಸೀದಿ ಇದ್ದ ಸ್ಥಳ ಅವನಿಗೆ ಕಂಡಿತ್ತೇ, ಕಂಡಿದ್ದರೆ ಮುಖ್ಯವೆನಿಸಿತ್ತೇ ಇಲ್ಲವೇ ಎಂದು ಹೇಳುವುದು ಹೇಗೆ?

ಪ್ರವಾಸ-ಪ್ರಯಾಣದ ಸಂದರ್ಭದಲ್ಲಿ ನಮ್ಮ ಮನಸ್ಸು ಹೇಗಿರುತ್ತದೆಂಬುದು ಮುಖ್ಯ. ಅನ್ನಾ ಕರೆನೀನಾ ಕಾದಂಬರಿಯುದ್ದಕ್ಕೂ ರೈಲು ಪ್ರಯಾಣ ಮಾಡುತ್ತಾಳೆ. ವ್ರಾಂಸ್ಕಿ ಜೊತೆ ಯುರೋಪಿಗೂ ಹೋಗುತ್ತಾಳೆ. ಆದರೆ ಅವಳು ಯಾವಾಗಲೂ ಸ್ವಮಗ್ನಳು. ರೈಲಿನಲ್ಲಿ ಕುಳಿತುಕೊಂಡು ಓದುವ ಕಾದಂಬರಿಯ ಮೇಲೆ ಅವಳಿಗೆ ಏಕಾಗ್ರತೆ ಸಾಧ್ಯವಾಗುವುದೇ ಇಲ್ಲ.

ಪ್ರವಾಸ-ಪ್ರಯಾಣದಲ್ಲಿ ಸಹಪ್ರಯಾಣಿಕರು ನಮ್ಮ ಓದಿನ ರೀತಿಯನ್ನು ಪ್ರಭಾವಿಸುತ್ತಾರೆ. ಅಲ್ಲದೆ, ಪ್ರವಾಸ-ಪ್ರಯಾಣದ ಉದ್ದೇಶ, ಓದುವುದೇನಲ್ಲ. ರೈಲಿನಲ್ಲಾಗಲಿ, ವಿಮಾನದಲ್ಲಾಗಲಿ ನಿಮಗೆ ಊಟಕ್ಕೆ, ನಿದ್ದೆಗೆ, ಶೌಚಕ್ಕೆ ವ್ಯವಸ್ಥೆ, ಅನುಕೂಲ ಮಾಡಿಕೊಡಬಹುದೇ ಹೊರತು ಓದಿಗಲ್ಲ. ನೀವು ಓದುವುದರಿಂದ ಎಷ್ಟೋ ಸಲ ಸಹಪ್ರಯಾಣಿಕರಿಗೆ ತೊಂದರೆಯೂ ಆಗಬಹುದು. ನಿಮ್ಮನ್ನು ಒಬ್ಬ ವಿಚಿತ್ರ ಪ್ರಾಣಿಯೆಂದು ಕೂಡ ಪರಿಗಣಿಸಬಹುದು. ಮದ್ರಾಸಿನಿಂದ ಬೆಂಗಳೂರಿಗೆ ರಾತ್ರಿ ಬಸ್‌ನಲ್ಲಿ ಪ್ರಯಾಣ ಮಾಡುತ್ತಿದ್ದಾಗ ನಾನು ಒಮ್ಮೆ ಲೇಡಿ ಕಂಡಕ್ಟರ್‌ಳನ್ನು ಕೇಳಿದೆ. ಬೆಳಗಿನಿಂದ ನನಗೆ ಈವತ್ತಿನ ಪೇಪರ್ ಓದಲು ಸಾಧ್ಯವಾಗಿಲ್ಲ. ಈಗ ದೀಪ ಹಾಕಿಕೊಂಡು ಓದಲೇ ಎಂದು ಕೇಳಿದಾಗ, ಕಂಡಕ್ಟರ್ ಹೇಳಿದ ಮಾತು-ನನ್ನದೇನು ಅಡ್ಡಿಯಿಲ್ಲ. ಸಹಪ್ರಯಾಣಿಕರನ್ನು ಕೇಳಿ ಎಂದು.

ಆದರೆ ದಿನವೇ ಮುಗಿದುಹೋಗುತ್ತಿದೆ ಅಲ್ಲವೇ! ಈಗ ದಿನಪತ್ರಿಕೆಯನ್ನು ಓದುವುದರಿಂದ ಏನು ಲಾಭ- ಪ್ರಶ್ನೆ ನನ್ನನ್ನು ದಂಗುಬಡಿಸಿತು. ಸಾವಿರಾರು ಅಡಿ ಎತ್ತರದಲ್ಲಿ ವಿಮಾನ ಹೋಗುತ್ತಿರುವಾಗ, ಸಹಪ್ರಯಾಣಿಕರೆಲ್ಲ ಗಾಢ ನಿದ್ದೆಯಲ್ಲಿ ಮಲಗಿರುವಾಗ, ಓದಲೆಂದು Study Light ಹಾಕಿಕೊಳ್ಳುವುದು ಉದ್ಧಟತನವೆನಿಸುತ್ತದೆ.

ಪ್ರವಾಸ ಸಾಹಿತ್ಯ, ಪ್ರಯಾಣ ಸಾಹಿತ್ಯ ಎಂದು ನಾವು ವರ್ಗೀಕರಿಸಿಕೊಂಡಿರುವುದಷ್ಟೆ. ಹಾಗೆಂದು ಅದನ್ನು ಇನ್ನೊಂದು ಪ್ರವಾಸ, ಪ್ರಯಾಣದಲ್ಲಿ ಓದಲೇಬೇಕೆಂಬ ಕಡ್ಡಾಯವಾದರೂ ಎಲ್ಲಿದೆ? ಪ್ರವಾಸ, ಪ್ರಯಾಣದ ಓದನ್ನು ಕುರಿತು ಮಾತನಾಡುವಾಗ ನಿರಂತರ ಪ್ರಯಾಣ, ಪ್ರವಾಸ, ಮರುಪ್ರವಾಸ, ಮರುಪ್ರಯಾಣ ಮಾಡುವವರನ್ನು ಕುರಿತು ಯೋಚಿಸಬೇಕು.

ನಾನು ಒಂದು ಸಲ ದೆಹಲಿಯಲ್ಲಿ ಉಳಿದುಕೊಂಡಿದ್ದ ಹೋಟೆಲಿನಲ್ಲಿ ಗಗನಸಖಿಯರು ಕೂಡ ತಂಗುತ್ತಿದ್ದರು. ವಾರಗಟ್ಟಲೆ ಇರಬೇಕಾದ್ದರಿಂದ ಒಡನಾಟವೂ ಬೆಳೆಯಿತು. ಲಾಬಿಯಲ್ಲಿ, ಭೋಜನಾಲಯದಲ್ಲಿ ಮತ್ತೆ ಮತ್ತೆ ಸಿಗುತ್ತಿದ್ದರು. ಅವರಲ್ಲಿ ಕೆಲವರು ಸ್ನಾತಕೋತ್ತರ ಪದವೀಧರರೂ, ಎಂಬಿಎ ಮಾಡಿದವರೂ ಇದ್ದರು. ಉತ್ತಮ ಕೌಟುಂಬಿಕ ಹಿನ್ನೆಲೆಯೂ ಇತ್ತು. ಹೋದ ಕಡೆಯೆಲ್ಲ ಪಂಚತಾರಾ ಹೋಟೆಲುಗಳಲ್ಲಿ ತಂಗುತ್ತಿದ್ದರು.

ಅವರಲ್ಲಿ ಯಾರೂ ಯಾವ ದೇಶದ ಪತ್ರಿಕೆಗಳನ್ನೂ ಓದುತ್ತಿರಲಿಲ್ಲ. ಕೆಲವರಿಗೆ ಶೋಭಾಡೇ ಎಂಬ ಪತ್ರಕರ್ತೆ, ಸಾಹಿತಿ ಮಾತ್ರ ಗೊತ್ತಿತ್ತು. ಸಮಯ ಸಿಕ್ಕಾಗಲೆಲ್ಲ ನಿದ್ದೆ ಮಾಡುವುದು ಇಲ್ಲ ಚೆಸ್ ಆಡುವುದು, ಇಲ್ಲ ಕೇರಂ ಆಡುವುದು, ಈ ಕಡೆಗೇ ಅವರ ಗಮನ. ವಿಮಾನ ನಿಲ್ದಾಣದಿಂದ ಹೊರಗಿರುವ ಆಸುಪಾಸಿನ ಅಂಗಡಿಗಳಿಗೂ ಅವರು ಹೋಗುತ್ತಿರಲಿಲ್ಲವಂತೆ. ಇಪ್ಪತ್ತುನಾಲ್ಕು ಗಂಟೆಯೂ ಹಾರಾಡಬೇಕಾದರೆ, ಬೇರೆ ಬೇರೆ time zoneಗಳಲ್ಲಿ ಓಡಾಡಬೇಕಾದರೆ, ಬದುಕಬೇಕಾದರೆ, ಹಗಲು-ರಾತ್ರಿಯ ವ್ಯತ್ಯಾಸವೇ ಇಲ್ಲದೆ ಕಾಲ ಕಳೆಯಬೇಕಾದವರ ಓದುಗಾರಿಕೆ ಹೇಗಿರುತ್ತದೆ ಎಂಬ ನನ್ನ ಕುತೂಹಲವೇ ಅಮಾನವೀಯ ಅನ್ನಿಸಿತು. ಅಲ್ಲದೆ, ನಮಗೆ ಪ್ರಯಾಣ, ಪ್ರವಾಸ ಎಂದು ಕಾಣುವುದು, ಅವರಿಗೆ ದುಡಿಮೆಯ ದೈನಿಕವಾಗಿರುತ್ತದೆ. ನಮ್ಮ ದುಡಿಮೆ, ದೈನಿಕದಿಂದ ನಮಗೆ ಆಯಾಸವಾಗುವ ಹಾಗೆ ಅವರಿಗೂ ಆಗಿರುತ್ತದೆ.

ಕೆಲವರಿಗೆ ಮರುಪ್ರಯಾಣ, ಮರುಪ್ರವಾಸದ ಅದೃಷ್ಟವೂ ಇರುತ್ತದೆ. ಆಂಡ್ರೆ ಮಾರ್ಲೊ ಎಂಬ ಫ್ರೆಂಚ್ ಸಾಹಿತಿಗೆ ಹಾಗೆ ಮತ್ತೆ ಮತ್ತೆ ಚೀನಾಗೆ ಪ್ರವಾಸ ಮಾಡುವ ಮತ್ತು ಆ ದೇಶದೊಳಗೂ ಪ್ರಯಾಣ ಮಾಡುವ ಅವಕಾಶ ದೊರೆಯಿತು. Man’s Fate, Man’s Estate ಕಾದಂಬರಿಗಳನ್ನು ಬರೆಯಲು ಸಾಧ್ಯವಾಯಿತು. ನೈಪಾಲರದು ಪ್ರಯಾಣವೆನ್ನಬೇಕೋ, ಪ್ರವಾಸವೆನ್ನಬೇಕೋ ಗೊತ್ತಾಗುವುದಿಲ್ಲ. ಏಳೆಂಟು ವರ್ಷಗಳ ಅಂತರದಲ್ಲಿ ಮತ್ತೆ ಮತ್ತೆ ಭಾರತಕ್ಕೆ ಪ್ರವಾಸ ಬಂದು, ಇಲ್ಲ ದೇಶದೊಳಗಡೆ ಪ್ರಯಾಣ ಮಾಡಿ, ಪ್ರವಾಸ, ಸಾಂಸ್ಕೃತಿಕ ಕಥನವನ್ನು ಬರೆಯುತ್ತಿದ್ದರು. ಲೇಖಕರ ಪ್ರವಾಸ, ಪ್ರಯಾಣದ ಬರವಣಿಗೆಯನ್ನು ಎಲ್ಲ ವರ್ಗದ ಪ್ರಯಾಣಿಕರು, ಪ್ರವಾಸಿಗಳಿಗೆ ಮಾನದಂಡ ಮಾಡಿಕೊಳ್ಳುವುದು ಕೂಡ ಅಷ್ಟು ಸರಿಯಲ್ಲವೇನೋ?

ಪ್ರವಾಸಿಗಳಿಗೆ, ಪ್ರಯಾಣಿಕರಿಗೆಂದೇ ಬರೆಯುವ ಪುಸ್ತಕಗಳು, ಪತ್ರಿಕೆಗಳು ಹೆಚ್ಚಾಗಿ ಮಾರ್ಗದರ್ಶನ ಸ್ವರೂಪದವು, ಮಾಹಿತಿ ಸ್ವರೂಪದವು. ಅವುಗಳನ್ನು ಕೊಳ್ಳಲು, ಓದಲು ನಮಗೆ ಎಲ್ಲ ರೀತಿಯ ಪ್ರಚೋದನೆಯೂ ಇರುತ್ತದೆ. ಓದುವುದರಿಂದ ಯಾವ ರೀತಿಯ ಲಾಭವೂ ಆಗುವುದಿಲ್ಲ.

ಕೆಲವು ರೀತಿಯ ಪ್ರಯಾಣ, ಪ್ರವಾಸದಲ್ಲಿ ನೀವು ಓದಬೇಕೆಂದರೂ, ನಿಮ್ಮ ಹತ್ತಿರ ಒಳ್ಳೆಯ ಪುಸ್ತಕಗಳಿದ್ದರೂ ಸಾಧ್ಯವಾಗುವುದಿಲ್ಲ. ಮಾನಸ ಸರೋವರದ ಪ್ರವಾಸ, ಥಾರ್ ಮರುಭೂಮಿಯ ಪ್ರವಾಸದಲ್ಲಿ ನಾನು ಇದನ್ನು ಸ್ವಂತ ಅನುಭವದಿಂದ ತಿಳಿದುಕೊಂಡೆ.

ಮನುಷ್ಯನಿಗೆ ಅಹಂಕಾರ ಯಾವ ಕಾರಣದಿಂದಲಾದರೂ ಬರಬಹುದು. ನಮ್ಮ ಅಧಿಕಾರ, ಪಾಂಡಿತ್ಯ, ಓದು, ಜಾತಿ-ವರ್ಗದ ಹಿನ್ನೆಲೆ, ಹೀಗೆ ಹತ್ತು ಹಲವು ಕಾರಣಗಳಿಗಾಗಿ. ಪ್ರವಾಸ, ಪ್ರಯಾಣ ಮಾಡುವುದರಿಂದಲೂ ಅಹಂಕಾರ ಬರುತ್ತದೆ. ನಾವು ವಿಶಿಷ್ಟ, ವಿಶೇಷ ವ್ಯಕ್ತಿಗಳೆಂದು ಭ್ರಮಿಸುತ್ತೇವೆ. ಮಾನಸ ಸರೋವರದ ಪ್ರವಾಸಕ್ಕೆ ಹೋದ ಮೇಲೆ ನನಗೂ ನನ್ನ ಬಗ್ಗೆ ಆ ರೀತಿಯ ಭಾವನೆ ಬಂದಿತ್ತು. ಉಳಿದ ಕಡೆ ಪ್ರವಾಸ ಹೋಗಲು, ಬೇರೆ ರೀತಿಯ ಪ್ರವಾಸ ಕಥನಗಳನ್ನು ಓದಲು ಮನಸ್ಸೇ ಬರುತ್ತಿರಲಿಲ್ಲ. ಜೀವನದ ಉಳಿದ, ಬೇರೆ ಬೇರೆ ಸಂದರ್ಭದಲ್ಲಿ ಓದುವ ರೀತಿಯಲ್ಲೇ ನಾವು ಪ್ರವಾಸ, ಪ್ರಯಾಣದ ಸಂದರ್ಭದಲ್ಲೂ ಓದುತ್ತೇವೆ ಅನಿಸುತ್ತದೆ. ಪ್ರವಾಸ, ಪ್ರಯಾಣದ ಸಂದರ್ಭದಲ್ಲಿ ನಮ್ಮ ವ್ಯಕ್ತಿತ್ವ ಇದ್ದಕ್ಕಿದ್ದಂತೆ ಬೇರೆಯಾಗುವುದು ಸಾಧ್ಯವಿಲ್ಲವಷ್ಟೆ!