ನಿನಗೆ ಎರಡೆರಡು ಕಣ್ಣು

ಚೆಲುವೆ ನಮ್ಮೊಲವಿಗೆ ಒಂದೇ ಕಣ್ಣು
ನಿನಗೆ ಎರಡೆರಡು ಕಣ್ಣು
ನನಗೆ ಮೈಯೆಲ್ಲಾ ಕಣ್ಣು
ಆದರೂ ಆ ಕಣ್ಣುಗಳಿಗೂ
ನಿನ್ನ ಮೇಲೆಯೇ ಕಣ್ಣು

ಚೆಲುವೆ ಬಾ ಬಳಿ ಎವೆ ತಾಕದೇ,
ಎದೆ ತಾಕುವಂತೆ ನನ್ನೊಮ್ಮೆ ಕೂಗು
ಎಷ್ಟೋತ್ತು ನನಗೂ ನಿನಗೂ
ಈ ಮಾಯೆಯ ಹಂಗು

ಬಾ ತೊರೆದು
ನಾವೇ ಸೃಷ್ಟಿಸುವ
ಮಗದೊಂದು ಮಾಯೆಯಾ
ಅಲ್ಲಿ ನಾನೇ ಬೇರು, ನೀನೇ ಬಳ್ಳಿ
ನಾ ನಿನ್ನ ಕೂಡಿ, ನೀ ನನ್ನ ಕೂಡಿ
ಬೆಳೆಸುವ ನಮದೊಂದು ಕುಡಿ

ಆಗ ನಾ ಹಸಿರುಮರ,
ನೀ ನನ್ನಾಸರ ಹೂವಾ
ಇಷ್ಟೇ ಗೆಳತಿ ಈ ಬದುಕು ಭವಸಾಗರ
ಪಯಣಿಸುವ ಬಾರ, ನೀ ಈಗ ದೌಡ ಏರ

ಗೆಳತಿ ನೀ ಕ್ಷೇಮವೇ!?

ಕಾಲೇಜಿನ ಹೆಂಚು, ಕ್ಲಾಸ್ ರೂಮಿನ ಬೆಂಚು, ಬೋರ್ಡು, ಡಸ್ಟರು ಧೂಳು ಹಿಡಿದಿವೆ,
ಇಲ್ಲಿ ಯಾರು ಬಂದಿಲ್ಲವೇ?
ಏನನ್ನೂ ಬರೆದಿಲ್ಲವೇ?
ಹೌದು! ನೀನಿಲ್ಲಿಲ್ಲವೇ?

7A Hallನ seminar ಡೆಸ್ಕು, ಟೇಬಲು,
ಮೈಕು ಒಂಟಿಯಾಗಿವೆ ಕಾರಣ ನೀನಿಲ್ಲಿಲ್ಲವೇ!?
ಲೈಬ್ರೆರಿಯ ಬುಕ್ಕು ಪೇಪರು, ಮಂಕಾಗಿವೆ,
ಕಾರಣ ನೀನಿಲ್ಲಿ ಓದಲಿಲ್ಲವೇ?
ನನ್ನ ಪೆನ್ನಿನ ಇಂಕು ಮತಿಗೆಟ್ಟಿದೆ
ಕಾರಣವಿಷ್ಟೇ ನಾನೇನನ್ನು ಬರೆಯಲಿಲ್ಲವೇ?
ಗೆಳತಿ ನೀ ಕ್ಷೇಮವೇ!?

ಇತರರಿಗೆ ಮರಗುವ ನಿನ್ನ ಮೆದು ಕರಳಿಗೆ
ಅದ್ಯಾವ ತರ ಬಿಸಿತಾಪ ತಾಕಿತು?
ಅಷ್ಟೇಕೆ ವಿಷಮ ಜ್ವರ ಏರಿತು!?
ಮಾಡುವೇ ನಾ ನಿನಗೆ ತಾಕೀತು;
ಗಟ್ಟಿಯಾಗಿರು ನೀ ಈ ಜಡ್ಡು
ಹೋಗುವುದು ಅನಾಮತ್ತು,
ನಿನಗಾಗಿ ಆ ಜಡತ್ವದ ದೇವರಿಗೆ ಕಳಿಸುವೆ ಇಂದು ಅಹವಾಲದ ಮಾತು,

ಗೆಳತಿ ನೀ ಕ್ಷೇಮದಿಂದಿರು,
ಬೆಡ್ ಮೇಲಿಂದ ಎದ್ದು ನಡೆಯುತಿರು,
ಮೆತ್ತನೆಯ ಅಡುಗೆ ತಿನ್ನುತ್ತಿರು,
ಕಾಯಿಸಿದ ನೀರು ಕುಡಿಯುತ್ತಿರು,
ಸರಿಯಾಗಿ ಮಾತ್ರೆ ನುಂಗುತ್ತಿರು,
ಬದಿ ಬದಲಿಸಿ ಮಲಗುತ್ತಿರು,
ನೀ ಗುಣಮುಖವಾಗುವವರೆಗೂ
ಕ್ಷಮೆ ಇರಲಿ ನನ್ನ ಬಾಧೆಗೂ
ಗೆಳತಿ ನೀ ಕ್ಷೇಮದಿಂದಿರು!

ಪ್ರಸಾದ್‌ ಗುಡ್ಡೋಡಗಿ ಮೂಲತಃ ಬಿಜಾಪುರ ಜಿಲ್ಲೆಯವರು.
ಧಾರವಾಡದ ಕರ್ನಾಟಕ ಕಲಾ ಮಹಾವಿದ್ಯಾಲಯದಲ್ಲಿ ಬಿ ಎ ತೃತೀಯ ವರ್ಷದಲ್ಲಿ ಓದುತ್ತಿದ್ದಾರೆ.
ಕತೆ ಕವನ ಬರೆಯುವುದು ಇವರ ಹವ್ಯಾಸವಾಗಿದೆ.