ನಮಗೇನು ಬೇಕು? ಒಂದು ಒಳ್ಳೆಯ ಬಿಡುವು, ನಮ್ಮದೆನ್ನುವ ಸ್ವಲ್ಪ ಸಮಯ, ಜೀವನಕ್ಕೊಂದು ಗುರಿ, ಹತ್ತಿರದವರ ಮೆಚ್ಚುಗೆ ಮತ್ತು ಅಹಂಕಾರಕ್ಕಿಂತ ವಿನಮ್ರತೆಯಲ್ಲಿ ಸುಖ ಕಾಣುವ ಮನಃಸ್ಥಿತಿ. ಪ್ರತಿದಿನವೂ ಅರ್ಧಗಂಟೆಯಾದರೂ ವ್ಯಾಯಾಮ, ನಡಿಗೆ, ಯೋಗ ಇತ್ಯಾದಿಗೆ ಸಮಯ ಮೀಸಲಿಡುವುದು, ಮರೆತುಹೋದ ಹವ್ಯಾಸಗಳೊಂದಿಗೆ ಮತ್ತೆ ಸಖ್ಯ ಬೆಳೆಸುವುದು, ಹೊಸತನ್ನು ಕಲಿಯುವುದು, ಉದ್ಯೋಗ ಮತ್ತು ವೈಯಕ್ತಿಕ ಬದುಕಿನ ನಡುವೆ ಅಂತರ ಕಾಯ್ದುಕೊಳ್ಳುವುದು ಹಾಗೂ ನಮ್ಮ ಇಂದಿನ ಬದುಕು ಹಲವರ ಕನಸೆಂಬುದನ್ನು ಮನಗಾಣುವುದು ಸಹಾಯ ಮಾಡಬಹುದು. ಕಲೆ, ಸಾಹಿತ್ಯ, ಸಂಗೀತ, ಯೋಗ, ಚಾರಣ, ಅಡುಗೆ, ಫೋಟೋಗ್ರಫಿ… ಆಸಕ್ತಿಗೆ ಹಲವು ದಾರಿ.
ಎಸ್. ನಾಗಶ್ರೀ ಅಜಯ್ ಬರೆಯುವ “ಲೋಕ ಏಕಾಂತ” ಅಂಕಣ ಬರಹ ನಿಮ್ಮ ಓದಿಗೆ

“ಈಗ ಅಪ್ಪ- ಅಮ್ಮನೂ ಪಕ್ಕದ ಬೀದಿಗೆ ಬಂದಿದ್ದಾರೆ ಕಣೆ. ಇಲ್ಲಿ ಮಾವ, ಗಂಡ, ನನ್ನೆರಡು ಮಕ್ಕಳನ್ನು ಸಂಭಾಳಿಸೋದಲ್ಲದೆ ಅಲ್ಲಿ ಅವರನ್ನೂ ನೋಡಬೇಕು. ಒಂದು ವಯಸ್ಸಿನ ನಂತರ ಜವಾಬ್ದಾರಿಗಳು ಹೆಗಲು ಜಗ್ಗಲು ಶುರು ಮಾಡಿದರೆ ನಮಗೆ ಸುಸ್ತಾದಾಗ ಒರಗುವ ಆಸರೆಗೆ ಹುಡುಕುವಂತಾಗತ್ತೆ. ಮನೆಯವರು, ಹೆತ್ತವರ ಮೇಲೆ ಪ್ರೀತಿಯಿಲ್ಲವೆಂದಲ್ಲ.‌ಅಸಲಿಗೆ ಇದು ಪ್ರೀತಿ, ವಿಶ್ವಾಸ, ಉಪಕಾರ ಸ್ಮರಣೆ, ಕರ್ತವ್ಯಗಳ ಸಮಾಚಾರವಲ್ಲ.‌ ಒಬ್ಬ ವ್ಯಕ್ತಿ ಕೊಡುತ್ತಲೇ ಹೋದರೆ ತುಂಬಿಕೊಳ್ಳುವುದು ಎಲ್ಲಿಂದ ಎಂಬ ಪ್ರಶ್ನೆ ಕಣೆ. ಕೆಲವು ಸಲ ಎಲ್ಲ ಬಿಟ್ಟು ಓಡಿ ಹೋಗೋಣ ಅನ್ನಿಸುತ್ತೆ. ಇಷ್ಟ ಬಂದಷ್ಟು ಹೊತ್ತಿಗೆ ಎದ್ದು, ಚೊಂಬು ಕಾಫಿ ಕುಡಿದು, ಹಿತ್ತಲ ಒಗೆಯುವ ಬಂಡೆ ಹತ್ತಿರ ಕೂತು ಕಾಡುಹರಟೆ ಹೊಡೆಯುತ್ತಾ, ನಾಯಿ ಬೆಕ್ಕು ಪಾರಿವಾಳ ಗುಬ್ಬಚ್ಚಿಗಳನ್ನು ಗಮನಿಸುತ್ತಾ, ಕಣ್ಣಿಗಿಳಿಯುವಷ್ಟು ಎಣ್ಣೆಯೊತ್ತಿಕೊಂಡು ಹಂಡೆಯೊಲೆಯ ನೀರನ್ನು ಮೊಗೆಮೊಗೆದು ಹಾಕಿಕೊಂಡು ಉಸ್ಸೆಂದು ಅರ್ಧಗಂಟೆ ಮಲಗೆದ್ದು, ಬಿಸಿಯಡುಗೆ ಉಂಡು ಊರ ಸಮಾಚಾರ ಮಾತನಾಡುತ್ತಲೋ, ಕೈಲೊಂದು ಕತೆಪುಸ್ತಕ ಹಿಡಿದು ಓದುತ್ತಲೋ ದಿನವೊಂದನ್ನು ಕಳೆಯಬೇಕೆನ್ನಿಸುತ್ತದೆ. ಈ ನಿರಂತರ ಓಟದ ದೈನಿಕದಲ್ಲಿ ಹೀಗೆ ಕನಸುವುದೂ ಎಷ್ಟು ದುಬಾರಿ ಅಲ್ವಾ? ಸ್ಕೂಲು, ಓದು, ಬಟ್ಟೆಬರೆ, ಸಮಾರಂಭಗಳು, ಆಸ್ಪತ್ರೆವಾಸ, ಕೊಂಕು ಮಾತು, ಭವಿಷ್ಯದ ಚಿಂತೆ, ಭೂತಕಾಲದ ಗುಮ್ಮ… ಇದಕ್ಕೆ ಕೊನೆ ಬೇಕಿಲ್ಲ. ‌ಒಂದು ಅರ್ಧವಿರಾಮ ಬೇಕು ಅನ್ಸತ್ತೆ. ಆಗ ತವರೊಂದು ಇರಬೇಕು. ಎರಡು ದಿನವಿದ್ದು ರೀಚಾರ್ಜ್ ಆಗಿ ವಾಪಸ್ ಬರಲು.” ಅವಳು ಹೇಳುತ್ತಿದ್ದರೆ ಈ ಕನವರಿಕೆ ಸಾರ್ವತ್ರಿಕವೆನಿಸಿತ್ತು.

ಬಹಳ ಸಲ ನಮ್ಮ ಬದುಕು ಅಷ್ಟೇನೂ ದುರ್ಭರವಾಗಿರುವುದಿಲ್ಲ. ಅಗತ್ಯಗಳನ್ನು ಪೂರೈಸುವಷ್ಟು ಹಣ, ಸ್ವಂತದ ಗೂಡು, ನಮ್ಮದೆನ್ನುವ ಕುಟುಂಬ, ಮಕ್ಕಳು-ಮರಿಯಿದ್ದೂ ಇನ್ನೇನೋ ಬೇಕೆನಿಸುತ್ತದೆ. ಅದನ್ನು ಪಡೆಯಲು ಸೋಷಿಯಲ್ ಮೀಡಿಯಾ, ಮದುವೆಯಾಚೆಗಿನ ಸಂಬಂಧ, ರೋಚಕ ಗೆಳೆತನ, ಯಾರದ್ದೋ ಮುಲಾಜಿನ ಜೊತೆಗೆ ನಂಟು ಬೆಸೆಯಲು ಹೋಗಿ ರಾಡಿಯೆಬ್ಬಿಸಿಕೊಂಡವರಿದ್ದಾರೆ. ಗಂಡನ್ನ ಬಿಟ್ಟರೂ ರೀಲ್ಸ್ ಮಾಡುವುದು ಬಿಡಲ್ಲ, ಮಕ್ಕಳನ್ನು ಕೊಂದಾದರೂ ಪ್ರಿಯಕರನೊಂದಿಗೆ ಓಡಿಹೋಗುವೆ, ಹತ್ತುಜನರ ಕಣ್ಣುಕುಕ್ಕುವ ಹಾಗೆ ಬದುಕಲು ಗಂಡನ್ನ ಪೀಡಿಸಿ ಚಿನ್ನ, ಬಟ್ಟೆ ತೆಗೆಸಿಕೊಳ್ಳುವೆ ಎಂದು ರಚ್ಚೆ ಹಿಡಿದವರು ನೆಮ್ಮದಿಯನ್ನಂತೂ ಕಂಡಿರುವುದಿಲ್ಲ. ಆದರೆ ಏನು ಬೇಕೆಂಬುದರ ಸ್ಪಷ್ಟತೆಯಿಲ್ಲದೆ ದಿಕ್ಕುತಪ್ಪಿ ಹಳವಂಡಗಳಲ್ಲಿ ಸಿಲುಕಿರುತ್ತಾರೆ. ಅಷ್ಟಕ್ಕೂ ಮತ್ತೇನೋ ಬೇಕೆನ್ನಿಸಿದ ಹೊತ್ತಿಗೆ ಸಿಗಬೇಕಾದ್ದೇನು?

ಚೆನ್ನಾಗಿ ಓದುವ ಒಳ್ಳೆಯ ಅಂಕ ತೆಗೆಯುವ ಮಕ್ಕಳಿಗೆ ಸಿಗುವ ಮೆಚ್ಚುಗೆ, ಹುಡುಗಿಯರ ಪೈಕಿ ಎದ್ದು ಕಾಣುವ ರೂಪವಿರುವ ತರುಣಿಗೆ ಸಿಗುವ ಅವಕಾಶ, ಪ್ರತಿಭೆಯ ಕಾರಣಕ್ಕೆ ಸಿಗುವ ವೇದಿಕೆ, ಹಣ, ವಿದ್ಯೆ, ಅಂತಸ್ತಿನಿಂದ ಸಿಗುವ ಸಾಮಾಜಿಕ ಮನ್ನಣೆ ನಮ್ಮೊಳಗಿನ ಅಹಂಕಾರಕ್ಕೆ ನೀರೆರೆದಿರುತ್ತದೆ. ಇತರರಿಗಿಂತ ನಾನು ವಿಶೇಷ ಎಂದುಕೊಳ್ಳುವಲ್ಲಿ ಸಂತೋಷ ಸಿಕ್ಕಿರುತ್ತದೆ. ಮುವ್ವತ್ತೈದರ ಸುಮಾರಿಗೆ ಈ ಬಗೆಯ ಗುರುತಿಸುವಿಕೆ ಕಡಿಮೆಯಾಗುವುದು ಸಹಜ. ಎಲ್ಲರು ನನ್ನತ್ತ ಗಮನವಹಿಸಲೆಂಬ ಆಸೆ ಏನೇನೋ ಆಟವಾಡಿಸಿರುತ್ತದೆ. ಬದುಕು ಸೂತ್ರ ಕಳೆದ ಗಾಳಿಪಟ. ಒಂದೆಡೆ ಹೆಗಲು ಜಗ್ಗುವ ಕರ್ತವ್ಯದ ಭಾರ ಮತ್ತೊಂದೆಡೆ ಗತಕಾಲದ ವೈಭವವನ್ನು ಮರಳಿ ಪಡೆಯಬೇಕೆನ್ನುವ ಹಠ ಸೇರಿ ಸುಸ್ತು ಹೊಡೆಸುವ ದಿನಗಳವು.

ಹಾಗಿದ್ದರೆ ನಮಗೇನು ಬೇಕು? ಒಂದು ಒಳ್ಳೆಯ ಬಿಡುವು, ನಮ್ಮದೆನ್ನುವ ಸ್ವಲ್ಪ ಸಮಯ, ಜೀವನಕ್ಕೊಂದು ಗುರಿ, ಹತ್ತಿರದವರ ಮೆಚ್ಚುಗೆ ಮತ್ತು ಅಹಂಕಾರಕ್ಕಿಂತ ವಿನಮ್ರತೆಯಲ್ಲಿ ಸುಖ ಕಾಣುವ ಮನಃಸ್ಥಿತಿ. ಪ್ರತಿದಿನವೂ ಅರ್ಧಗಂಟೆಯಾದರೂ ವ್ಯಾಯಾಮ, ನಡಿಗೆ, ಯೋಗ ಇತ್ಯಾದಿಗೆ ಸಮಯ ಮೀಸಲಿಡುವುದು, ಮರೆತುಹೋದ ಹವ್ಯಾಸಗಳೊಂದಿಗೆ ಮತ್ತೆ ಸಖ್ಯ ಬೆಳೆಸುವುದು, ಹೊಸತನ್ನು ಕಲಿಯುವುದು, ಉದ್ಯೋಗ ಮತ್ತು ವೈಯಕ್ತಿಕ ಬದುಕಿನ ನಡುವೆ ಅಂತರ ಕಾಯ್ದುಕೊಳ್ಳುವುದು ಹಾಗೂ ನಮ್ಮ ಇಂದಿನ ಬದುಕು ಹಲವರ ಕನಸೆಂಬುದನ್ನು ಮನಗಾಣುವುದು ಸಹಾಯ ಮಾಡಬಹುದು. ಕಲೆ, ಸಾಹಿತ್ಯ, ಸಂಗೀತ, ಯೋಗ, ಚಾರಣ, ಅಡುಗೆ, ಫೋಟೋಗ್ರಫಿ… ಆಸಕ್ತಿಗೆ ಹಲವು ದಾರಿ. ನಮ್ಮಿಷ್ಟದ ದಾರಿಯಲ್ಲಿ ನಡೆಯಲು ಶುರು ಮಾಡಿದರೆ ತಾನಾಗಿಯೇ ಅವಕಾಶ, ಮನ್ನಣೆ, ಮೆಚ್ಚುಗೆ ಸಿಗುತ್ತದೆ. ಆರೋಗ್ಯಕರ ಸ್ನೇಹ, ಸವಾಲು, ಸಂಬಂಧಗಳು ಮೆರುಗು ಹೆಚ್ಚಿಸುತ್ತವೆ.ಮತ್ತು ಈ ದಾರಿ ವೈಯಕ್ತಿಕ ಬದುಕಿನ ಏಕತಾನತೆಯನ್ನು ಮೀರಲಿರುವ ಸುಂದರ ಮಾರ್ಗ.

ಹಳೆಯ ಸ್ನೇಹಿತರನ್ನು ಭೇಟಿ ಮಾಡುವುದು, ಮಹಿಳಾ ಸಂಘದಲ್ಲಿ ಗುರುತಿಸಿಕೊಳ್ಳುವುದು, ಈ ದಿನ ಅಡುಗೆಮನೆಗೆ ರಜೆಯೆಂದು ಘೋಷಿಸುವುದು, ಬಹಳ ದಿನಗಳಿಂದ ಪ್ರಯತ್ನಿಸಲು ಆಸೆಯಿದ್ದ ರೀತಿ ಸಿಂಗಾರಗೊಳ್ಳುವುದು, ಇಷ್ಟ-ಕಷ್ಟ, ಅಭಿಪ್ರಾಯಗಳನ್ನು ಒಳಗೆ ನುಂಗಿಕೊಳ್ಳದೆ ಸಂದರ್ಭೋಚಿತವಾಗಿ ಹೇಳುವುದು, ಸಣ್ಣಪುಟ್ಟ ಪ್ರವಾಸಗಳಿಗೆ ಒಬ್ಬರೇ ಹೋಗಿಬರುವುದು, ನಮ್ಮಿಷ್ಟದ ಅಡುಗೆ, ಹೋಟೆಲ್, ಸಿನಿಮಾದ ರುಚಿಯನ್ನು ಮನೆಯವರಿಗೂ ಪರಿಚಯಿಸುವುದು…. ಓಹ್ ಒಳಗು ಖಾಲಿಯೆನಿಸಿದಾಗ ಇಂತಹ ಸಾವಿರ ರೀಚಾರ್ಜ್ ಪಾಯಿಂಟುಗಳಿವೆ. ಎಷ್ಟೋ ಸಲ ವಿಪರೀತ ಬೋರ್ ಎನ್ನಿಸಿದ ದಿನ ಬೋರ್ ಹೊಡೆಸಿಕೊಂಡೇ ಇರುವುದು ಒಳ್ಳೆಯದು. ಸದಾ ಮನರಂಜನೆ ದುರಭ್ಯಾಸವಾಗಿ ಪರಿಣಮಿಸಬಹುದು.‌ ಮತ್ತದೇ ಬೇಸರ ನೇಸರನೊಮ್ಮೆ ಮುಳುಗೆದ್ದರೆ ಮಾಯವಾಗುವ ಜಾದೂ ನೋಡಲಾದರೂ ಬೋರ್ ಆಗಲಿ ಬಿಡಿ. ನಾನೇ ನನ್ನ ಫೇವರಿಟ್ ಎನ್ನುವ ಕರೀನಾ ಆಗೋಣ ಅಥವಾ ಇಡೀ ಬ್ರಹ್ಮಾಂಡದಲ್ಲಿ ‘ನಾನು’ ಧೂಳಿಗೂ ಸಮವಲ್ಲ ಎಂಬ ಅಧ್ಯಾತ್ಮವಾದರೂ ಆಶ್ರಯಿಸೋಣ. ಒಟ್ಟಿನಲ್ಲಿ ಸಮಾಧಾನ ತಂದುಕೊಳ್ಳೋಣ. ಏನಂತೀರಿ?