ಜೊತೆಯಲ್ಲಿ ಯಾರೂ ಇಲ್ಲದ್ದರಿಂದ, ಅವರ ಜೋಬಿನಲ್ಲಿದ್ದ ಮೊಬೈಲ್‌ ತೆಗೆದುಕೊಂಡು ಅದಕ್ಕೆ ಬಂದ-ಹೋದ ಒಂದಷ್ಟು ನಂಬರ್‌ಗಳಿಗೆ ಕಾಲ್‌ ಮಾಡಿ ವಿಷಯ ತಿಳಿಸಿದ್ದರು. ನಂತರ ಮೃತದೇಹವನ್ನು ಊರಿಗೆ ತರಿಸಿಕೊಂಡು ಎಲ್ಲ ಕಾರ್ಯಗಳನ್ನು ಮಾಡಿ ಮನೆಗೆ ಹೋಗುವಾಗ ಯಾರ ಕಣ್ಣಲ್ಲೂ ಹನಿ ನೀರುಕಾಣಲಿಲ್ಲ… ಅವರರ್ಯಾರ ಮುಖದಲ್ಲಿ ಅಯ್ಯೋ ತಮ್ಮ ಮನೆಯ ಸದಸ್ಯನೊಬ್ಬನನ್ನು ಕಳೆದುಕೊಂಡೆವಲ್ಲ ಎನ್ನುವ ನೋವು ಕಾಣಿಸುತ್ತಿರಲಿಲ್ಲ.. ಬದಲಾಗಿ ಅಕ್ಕ-ತಂಗಿಯರಾಗಿ ಎಲ್ಲರೂ ತಮ್ಮ ಕಾರ್ಯಗಳನ್ನು ಸರಿಯಾಗಿ ಮಾಡಿ-ಮುಗಿಸಿದೆವಲ್ಲ… ದೇವರಿಗೆ ನಮ್ಮ ಮೇಲೆ ಸ್ವಲ್ಪವಾದರೂ ಕರುಣೆ ಇದೆಯಪ್ಪ.. ಎನ್ನಿಸಿತ್ತು. ಅಷ್ಟೇ.
ರೂಪಶ್ರೀ ಕಲ್ಲಿಗನೂರ್ ಬರಹ ನಿಮ್ಮ ಓದಿಗೆ

ನಮ್ಮನೆಯಿಂದ ನೂರು ಮೀಟರ್‌ ದೂರದಲ್ಲಿ ಸುಮಾರು ಎಪ್ಪತ್ತರ ಆಸುಪಾಸಿನ ಅಜ್ಜಿಯೊಬ್ಬರಿದ್ದಾರೆ. ಆ ಮನೆಯಲ್ಲಿ ಅವರೊಬ್ಬರೇ ವಾಸವಿರೋದು. ಅವರ ಗಂಡ ತೀರಿಕೊಂಡು ಐದಾರು ವರ್ಷಗಳಾಗಿರಬಹುದು. ಅವರಿಗೆ ಈ ಅಜ್ಜಿ ಎರಡನೆಯ ಹೆಂಡತಿ. ಮೊದಲನೆಯ ಹೆಂಡತಿಯ ಮಕ್ಕಳಿಬ್ಬರು ತಮ್ಮ ತಮ್ಮ ಸಂಸಾರದೊಂದಿಗೆ ಬೆಂಗಳೂರಿನಲ್ಲಿದ್ದಾರೆ. ಊರಿಗೆ ಬರೋದು ಹಬ್ಬ-ಹರಿದಿನಕ್ಕೆ ಮಾತ್ರವೇ. ಅಕ್ಕರೆಯಿಂದ ಅಮ್ಮಾಮ್ಮ ಎಂದು ನೋಡಿಕೊಳ್ಳುತ್ತಾರಾದರೂ, ಈ ಅಮ್ಮನನ್ನ ನೋಡೋದಕ್ಕಂತ ಬರೋದಕ್ಕೆ, ದೊಡ್ಡ ಕೆಲಸದಲ್ಲಿರೋರಿಗೆ ಹೇಗೆ ಸಾಧ್ಯ? ಒಂದೆರೆಡು ದಿನಗಳ ರಜಕ್ಕೆ ಪಾಪ ಅವರೆಲ್ಲ ಎಷ್ಟು ಲಾಸ್‌ ಮಾಡಿಕೊಳ್ಳಬೇಕೋ… ಹಾಗಾಗಿ ಎರಡು ವರ್ಷಗಳಲ್ಲಿ ಎರಡು ಸಲ ಬಂದುಹೋದದ್ದನ್ನು ನೋಡಿದ್ದೆನಷ್ಟೇ.

ಅವತ್ತೊಂದಿನ ಮನೆಯಲ್ಲಿ ಮಾಡಿದ್ದ ಪಲಾವ್‌ ರುಚಿಕಟ್ಟಾಗಿ ಬಂದಿತ್ತು. ಹಾಗಾಗಿ ಅವರಿಗೂ ಒಂದಷ್ಟು ಕೊಟ್ಟು, ಮಾತನಾಡಿಸಿಕೊಂಡು ಬರೋಣವೆಂದು ಹೋಗಿದ್ದೆ. ಅಕ್ಕರೆಯಿಂದ ಮಾತಾಡಿಸಿದ ಅವರು, ನಾನು ಸಮಯ ಮಾಡಿಕೊಂಡು ಅವರನ್ನು ಭೇಟಿ ಮಾಡಿದ್ದಕ್ಕೆ ಹಿರಿಹಿರಿ ಹಿಗ್ಗಿದರು. ಅವರ ಆರೋಗ್ಯದ ಕುರಿತು ಮಾತನಾಡುವಾಗ, ಮೂರು ತಿಂಗಳಿಂದ ಅವರನ್ನು ಭಾದಿಸುತ್ತಿರುವ ಭುಜದ ನೋವಿನ ಬಗ್ಗೆ ಹೇಳಿ, “ಎಲ್ಲಾದ್ರೂ ಕರ್ಕೊಂಡ್‌ ಹೋಗಿ ಒಂಚೂರು ಈ ನೋವಿಗೆ ಪರಿಹಾರ ಕೊಡಿಸು ಮಗಳೇ… ನನ್‌ ಹತ್ರ ದುಡ್ಡಿದೆ… ಅದ್ಕೆ ಚಿಂತೆಯಿಲ್ಲ… ಆದ್ರೆ ಅನ್ನ ಮಾಡಿಕೊಳ್ಳೋಕೇ ಆಗ್ತಿಲ್ಲ…” ಎಂದು ನೋವು ತೋಡಿಕೊಂಡರು. ಜೊತೆಗೆ ಯಾರೂ ಇಲ್ಲದೇ ಹಿರಿಯಜೀವ ಹೀಗೆ ಒದ್ದಾಡುತ್ತಿದೆಯೆಂದು ಕೇಳಿಯೇ ಜೀವ ಹಿಂಡಿದಂತಾಯ್ತು ಅವರ ಮಾತು ಕೇಳಿ. ಹಾಗಾಗಿ ನನಗೆ ಸಾಧ್ಯವಾದಾಗ ಅಡುಗೆಯನ್ನು ಕೊಡೋದನ್ನ ಮಾಡುತಿದ್ದೆನಾದರೂ, ಒಂಚೂರು ದೂರವೇ ಇದ್ದ ಆಸ್ಪತ್ರೆಗೆ ಕರೆದುಕೊಂಡು ಹೋಗಲು ಸಮಯ ಕೂಡಿ ಬರುತ್ತಿರಲಿಲ್ಲ. ಹಾಗೂ ಹೀಗೂ ಒಮ್ಮೆ ಸಮಯ ಮಾಡಿಕೊಂಡು ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಮನೆಗೆ ಬಿಡುವಾಗ ಹೇಳಿದ್ದರು: “ನಿನ್ನ ಉಪಕಾರ ಮರೆಯೋಲ್ಲ ಮಗಳೆ… ಈ ಕಾಲದಲ್ಲಿ ಯಾರು ಹೀಗೆ ನೋಡ್ತಾರೆ ಹೇಳು… ನಮ್‌ ದೂರದ ನೆಂಟ್ರು ಒಬ್ರು ಪಕ್ಕದ ಹಳ್ಳೀಲಿದಾರೆ. ಮಕ್ಕಳೆಲ್ಲಾ ಫಾರಿನ್‌ನಲ್ಲಿರೋದು. ನಾನು ಗಟ್ಟಿಗಿತ್ತಿಅಂತಾ ಒಬ್ಬರೇ ಇರ್ತಿದ್ರು… ಅದೇನಾಯ್ತೋ ಏನೋ… ಮನೇ ಬೆಡ್‌ರೂಮಲ್ಲೇ ಸತ್ತು ಬಿದ್ದಿದ್ರಂತೆ… ಯಾರ್ಗೂ ಗೊತ್ತಾಗಿಲ್ಲ. ಮೂರ್ನಾಲ್ಕು ದಿನಾ ಆದ್ಮೇಲೆ ಯಾಕೋ ವಾಸನೆ ಬರ್ತಿದ್ಯಲ್ಲ ಅಂತ ನೋಡಿದ್ಮೇಲೆ ಊರಿನವರಿಗೆ ಗೊತ್ತಾಯ್ತಂತೆ, ಅವರು ತೀರಿಕೊಂಡಿರೋದು… ಹೆಣ ಕೊಳೆಯೋಕೆ ಶುರುಮಾಡಿತ್ತಂತೆ… ಅಯ್ಯೋ.. ಅಮ್ಮಾ… ಹಾಗೇನಾದ್ರೂ ಆದ್ರೆ ನನ್ನ ಗತಿಯೇನು…” ಎಂದು ಕಣ್ಣು ತುಂಬಿಕೊಂಡರು… “ಅಯ್ಯೋ ನೀವು ಹಾಗೆಲ್ಲ ಯಾಕೆ ಯೋಚ್ನೆ ಮಾಡ್ತೀರಿ… ನಾವಿಲ್ಲಿ ಇದ್ದೀವಲ್ಲ ಆಂಟಿ..” ಅಂದೆನಾದರೂ ಒಳಗೆಲ್ಲೋ… ನಾವು ಎಷ್ಟರ ಮಟ್ಟಿಗೆ ಇವರಿಗೆ ಆಗಬಹುದು ಎನ್ನಿಸಿತು.. ಮುಂದೇನೂ ಹೇಳಲಾಗಲಿಲ್ಲ…. ಮುಂದಿನ ವಾರ ಆಸ್ಪತ್ರೆಗೆ ಮತ್ತೆ ಭೇಟಿ ನೀಡುವುದರ ಬಗ್ಗೆ ಹಾಗೂ ಡಾಕ್ಟರ್‌ ಕೊಟ್ಟ ಮೆಡಿಸಿನ್‌ ಹತ್ತನೇ ಸಲ ಹೇಳಿಕೊಟ್ಟು ಮನೆಗೆ ವಾಪಸ್ಸಾದೆ.

ಅದ್ಯಾಕೋ ಒಂದು ತಿಂಗಳಿಂದ ಸುತ್ತಮುತ್ತೆಲ್ಲ ಸಾವಿನ ಸುದ್ದಿಯೇ.. ಆರ್‌ಸಿಬಿ ಸಂಭ್ರಮಾಚರಣೆಯ ಸಂದರ್ಭದಲ್ಲಿ ಮಗನನ್ನು ಕಳೆದುಕೊಂಡ ತಂದೆಯ ಗೋಳು ನೋಡಿದ್ದೆ… ಎಂಥಹ ಆರ್ತನಾದ ಅದು… ಜೊತೆಗೆ ತಮ್ಮದಲ್ಲದ ತಪ್ಪಿಗೆ ಯುದ್ಧಗಳಲ್ಲಿ ಸಾಯುತ್ತಿರುವವರು, ಸಂಗಾತಿಯ ಅಕ್ರಮ ಪ್ರೀತಿಗೆ ಸಿಲುಕಿ ಸತ್ತವರು, ಪ್ರವಾಸದಲ್ಲಿ ಗುಂಡಿನ ದಾಳಿಗೆ ಸಿಲುಕಿ ಸತ್ತವರು, ಅತ್ಯಾಚಾರದಲ್ಲಿ ಸತ್ತ ಮಕ್ಕಳು/ಮಹಿಳೆಯರು, ವಿಮಾನ ಅಪಘಾತ, ಹಿಂದೆಂದೂ ಕೇಳದಷ್ಟು ಹೃದಯಾಘತಗಳು…. ಅಯ್ಯೋ… ಒಂದೇ ಎರಡೇ… ಇವುಗಳನ್ನೆಲ್ಲ ಕಂಡೂ ಕಂಡೂ ಬದುಕು ನಿಜಕ್ಕೂ ದೊಡ್ಡದೇ? ಎಂಬ ಪ್ರಶ್ನೆ ಮೂಡುತ್ತಿದೆ.

ಸಾವೇ ಸತ್ಯ… ಸಾವು ನಿತ್ಯ… ಹಾಗಂತ ಎಲ್ಲ ಸಾವೂ ದುರಾದೃಷ್ಟಕವಲ್ಲ… ಕೆಲವರ ಸಾವು ಕೆಲವರಿಗೆ ಅತೀವ ದುಃಖವನ್ನು ನೀಡಿದರೆ, ಇನ್ನೂ ಕೆಲವರ ಸಾವು ಕೆಲವರಿಗೆ ನೆಮ್ಮದಿಯ ನಿಟ್ಟುಸಿರು ಬಿಡುವಂತೆ ಮಾಡುತ್ತದೆ.

ಕಳೆದ ವಾರವಷ್ಟೇ ನಮ್ಮ ಕುಟುಂಬದಲ್ಲಿ ದೂರದ ಸಂಬಂಧಿಯೊಬ್ಬರು ತೀರಿಕೊಂಡರು. ಪರಮ ಕುಡುಕ ಎಂದೇ ಹೇಳಬೇಕು ಆ ಮನುಷ್ಯನನ್ನು. ಕುಡಿಯಲಿಕ್ಕೂ ಊಟಕ್ಕೂ ಅವರಿವರ ಬಳಿ ಕೈ ಚಾಚಿ, ಅಲ್ಲಲ್ಲಿ ಸಿಕ್ಕ ಪುಡಿಗಾಸಿನಲ್ಲಿ ಜೀವನ ಮಾಡುತ್ತಿದ್ದ ಆ ಮನುಷ್ಯ ಮನೆಗೆ ಮಾರಿ ಊರಿಗೆ ಉಪಕಾರಿ. ಉಪಕಾರಿ ಅಂದರೆ ಯಾರಿಗಾದರೂ ಉಪಯೋಗ ಮಾಡುವಂಥವರೇನೂ ಅಲ್ಲವಾದರೂ ಸಿಕ್ಕಾಗಲೆಲ್ಲ ಮೋಡಿಯ ಮಾತಾಡಿ, ತಮ್ಮ ಬಗ್ಗೆ ಅನುಕಂಪ ಹುಟ್ಟಿಸಿಕೊಳ್ಳುವ ಛಾತಿ ಅವರಲ್ಲಿತ್ತು. ಅವರ ಕುಟುಂಬದ ಒಳಿತಿನ ಬಗ್ಗೆ, ಜಗತ್ತಿನ ಒಳಿತಿನ ಕುರಿತು ಹರಟೆ ಕೊಚ್ಚುವುದನ್ನು ಕೇಳಿದವರಿಗೆ, “ಛೇ… ಎಂಥ ಒಳ್ಳೆಯ ಮನುಷ್ಯನಪ್ಪ… ಇಂಥವನಿಗೆ ದುಡ್ಡಿರುವ ಸಹೋದಿರಯರಾರೂ ಸಹಾಯಾನೇ ಮಾಡ್ತಿಲ್ಲವಲ್ಲ ಪಾಪ…” ಎಂದುಕೊಳ್ಳುತ್ತಾ ನೂರರ ನೋಟೊಂದನ್ನು ತೆಗೆದು ಕೊಟ್ಟುಬಿಡಬೇಕು. ಅಂಥ ಮಾತುಗಳು ಅವರದ್ದು…. ಆದರೆ ಸ್ವಂತ ಅಕ್ಕ-ತಂಗಿಯರಿಗೆ ಬಗೆದ ದ್ರೋಹಗಳನ್ನಾಗಲೀ, ಕೊಟ್ಟ ತೊಂದರೆಗಳನ್ನಾಗಲೀ ಅವರ್ಯಾರೂ ಯಾರ ಮುಂದೆಯೂ ಡಂಗುರ ಸಾರಿಲ್ಲ! ಹಾಗೆ ಸಾರಿದ್ದರೆ ಇಷ್ಟು ಹೊತ್ತಿಗೆ ಅವರಿಗೆ ಕುಡಿಯಲು ನೀರೂ, ತಿನ್ನಲು ಊಟವಿಲ್ಲದೆಯೂ ಎಂದೋ ಸತ್ತು ಹೋಗಿರುತ್ತಿದ್ದರಷ್ಟೇ.

ಕಳೆದವಾರ ಇನ್ನೊಂದೂರಿನಲ್ಲಿರುವ ತಮ್ಮ ದೊಡ್ಡ ತಂಗಿಯ ಮನೆಯಲ್ಲಿ ತಿಂಗಳ ಕಾಲವಾದರೂ “ಟೆಂಟ್‌” ಹಾಕಲೆಂದೇ ಬ್ಯಾಗಿನಲ್ಲಿ ಸಾಕಷ್ಟು ಬಟ್ಟೆಯನ್ನೆಲ್ಲ ತುರುಕಿಕೊಂಡು ಬಸ್‌ ಏರಿ ಹೊರಟಿದ್ದಾರೆ. ನಡುವೆ ರೈಲು ಹಿಡಿಯಬೇಕಿತ್ತು. ಅಷ್ಟರಲ್ಲಿ ಅವರಿಗೆ ಸಣ್ಣಗೆ ಎದೆ ನೋವು ಕಾಣಿಸಿಕೊಂಡಿದೆ. ಕೈಲಿದ್ದ ಚೀಲ ಜಾರಿ, ಅಲ್ಲೇ ಕುಸಿದು ಬಿದ್ದಿದ್ದಾರೆ. ಅದನ್ನು ಕಂಡ ರೈಲ್ವೇ ಪೋಲೀಸರು ತಕ್ಷಣವೇ ಅವರಬಳಿ ಧಾವಿಸಿ ಬಂದು ನಾಡಿಮಿಡಿತ ನೋಡಿ, ಕಡಿಮೆ ಎನ್ನಿಸಿ, ತಕ್ಷಣ ಆಸ್ಪತ್ರೆಗೆ ಸೇರಿಸಿದ್ದಾರೆ. ಆದರೆ ಆಸ್ಪತ್ರೆಗೆ ತಲುಪುವಷ್ಟರಲ್ಲಿ ಉಸಿರು ನಿಂತು ಹೋಗಿತ್ತು. ಜೊತೆಯಲ್ಲಿ ಯಾರೂ ಇಲ್ಲದ್ದರಿಂದ, ಅವರ ಜೋಬಿನಲ್ಲಿದ್ದ ಮೊಬೈಲ್‌ ತೆಗೆದುಕೊಂಡು (ಬೇಸಿಕ್‌ ಮಾಡೆಲ್‌ ಮೊಬೈಲಾಗಿತ್ತು ಅದು ಹಾಗೂ ಲಾಕ್‌ ಇರಲಿಲ್ಲ ಕೂಡ) ಅದಕ್ಕೆ ಬಂದ-ಹೋದ ಒಂದಷ್ಟು ನಂಬರ್‌ಗಳಿಗೆ ಕಾಲ್‌ ಮಾಡಿ ವಿಷಯ ತಿಳಿಸಿದ್ದರು. ನಂತರ ಮೃತದೇಹವನ್ನು ಊರಿಗೆ ತರಿಸಿಕೊಂಡು ಎಲ್ಲ ಕಾರ್ಯಗಳನ್ನು ಮಾಡಿ ಮನೆಗೆ ಹೋಗುವಾಗ ಯಾರ ಕಣ್ಣಲ್ಲೂ ಹನಿ ನೀರುಕಾಣಲಿಲ್ಲ… ಅವರರ್ಯಾರ ಮುಖದಲ್ಲಿ ಅಯ್ಯೋ ತಮ್ಮ ಮನೆಯ ಸದಸ್ಯನೊಬ್ಬನನ್ನು ಕಳೆದುಕೊಂಡೆವಲ್ಲ ಎನ್ನುವ ನೋವು ಕಾಣಿಸುತ್ತಿರಲಿಲ್ಲ.. ಬದಲಾಗಿ ಅಕ್ಕ-ತಂಗಿಯರಾಗಿ ಎಲ್ಲರೂ ತಮ್ಮ ಕಾರ್ಯಗಳನ್ನು ಸರಿಯಾಗಿ ಮಾಡಿ-ಮುಗಿಸಿದೆವಲ್ಲ… ದೇವರಿಗೆ ನಮ್ಮ ಮೇಲೆ ಸ್ವಲ್ಪವಾದರೂ ಕರುಣೆ ಇದೆಯಪ್ಪ.. ಎನ್ನಿಸಿತ್ತು. ಅಷ್ಟೇ.

ಅವರು ತೀರಿಕೊಂಡದ್ದು, ಅವರಿದ್ದ ಊರಿನಿಂದಲೂ ಹಾಗೂ ತಲುಪಬೇಕಾದ ಊರಿನಿಂದಲೂ ದೂರ… ಇದು ಅವರ ಎಲ್ಲ ಬಳಗದವರಿಗೆ ಎಷ್ಟು ನಿರಾಳ ಒದಗಿಸಿತ್ತು.. ಏಕೆಂದರೆ ಪದೇಪದೇ ಅಕ್ಕ-ತಂಗಿಯರ ಜೊತೆಗೆ ಜಗಳ ಮಾಡುತ್ತಿದ್ದ ಈ ಮನುಷ್ಯ ಜಗಳ ಆದಾಗಲೊಮ್ಮೆ ಅವರ ಮೇಲೆ ಸುಳ್ಳು ಕಂಪ್ಲೆಂಟ್‌ ಕೊಡುವ ಚಾಳಿಯಿಟ್ಟುಕೊಂಡಿದ್ದ. ಹಾಗಾಗಿ ಈತ ಯಾವುದೋ ಊರಲ್ಲಿ, ಊರ ಜನರ ಕಣ್ಣಮುಂದೆ ಸತ್ತದ್ದು, ಪೋಲೀಸರಿಗೆ ಈ ವಿಷಯದಲ್ಲಿ ತಾವು ಯಾವ ಸಮಜಾಯಿಷಿಯನ್ನೂ ಹೇಳಬೇಕಾಗಿಲ್ಲವಲ್ಲ ಎಂಬುದೇ ಅವರ ಸಮಾಧಾನಕ್ಕೆ ಕಾರಣವಾಗಿತ್ತು. ಜೊತೆಗೆ ಬದುಕಿನುದ್ದಕ್ಕೂ ತಮ್ಮನ್ನು ಗೋಳುಹೊಯ್ದುಕೊಂಡವನಿಗೇನಾದರೂ ಹುಷಾರಿಲ್ಲದೇ ಆಸ್ಪತ್ರೆಗೆ ಸೇರಿಸಿದ್ದರೆ, ಆ ಚಾಕರಿಯ ಕರ್ಮವೊಂದು ತಮ್ಮ ಮೇಲೆ ಬೀಳುತ್ತಿತ್ತು. ಆದ್ದರಿಂದ ಹೀಗೆ ಯಾವ ನೋವಿಲ್ಲದೇ ಅವರು ಹೋಗಿದ್ದು ಈ ಅಕ್ಕತಂಗಿಯರಿಗೆ ಸಮಾಧಾನ ಕೊಟ್ಟಿತ್ತು…

ಇನ್ನೊಂದು ಮನೆಯವರ ಕತೆ ಹೀಗಿದೆ: ಆ ಮನೆಯ ಗಂಡಸಿಗೆ ಯಾವೊತ್ತೂ ಸರಿಯಾದ ಕೆಲಸವಿರಲಿಲ್ಲ. ಮನೆ ಹಾಗೂ ಮಗಳ ಜವಾಬ್ದಾರಿಯನ್ನು ಹೆಂಡತಿಯ ಮನೆಯವರೇ ಯಾವತ್ತಿನಿಂದ ನೋಡಿಕೊಂಡು ಬಂದಿದ್ದಾರೆ. ಹಾಗಾಗಿ ತಾನು ಮಾಡುವ ಸಣ್ಣಪುಟ್ಟ ಕೆಲಸದಲ್ಲಿ ಸಿಗುವ ಹಣವನ್ನೆಲ್ಲ ಅಂದೇ ಕುಡಿದು ಖಾಲಿಮಾಡಿಕೊಂಡು ನಂತರ ಮನೆ ಸೇರುವ ಅಭ್ಯಾಸ ಆತನದ್ದು. ಸಾಕಷ್ಟು ವರ್ಷದಿಂದ ಇದೇ ನಡೆದುಕೊಂಡು ಬಂದಿರೋದ್ರಿಂದ, ಕೆಲ ವರ್ಷಗಳ ಹಿಂದೆ ಅವರಿಗೆ ಮೂತ್ರಪಿಂಡ ಕೈಕೊಡಲು ಶುರುವಾಗಿ, ಜೊತೆಗೆ ಸಕ್ಕರೆ ಕಾಯಿಲೆಯೂ ಜೊತೆಗೂಡಿ ನರಳಿಕೊಂಡು ಓಡಾಡಲಾರಂಭಿಸಿದರು. ಹಾಗಂತ ಕುಡಿತ ಬಿಟ್ಟಿದ್ದಾರೆಂದರೆ ಅದೂ ಇಲ್ಲ. ಹೇಗೋ ಹಣ ಹೊಂದಿಸಿಕೊಂಡು ಕುಡಿತದ ಚಟ ಮುಂದುವರೆಸಿಕೊಂಡೇ ಬಂದರು… ಅದೆಲ್ಲ ವಿಪರೀತಕ್ಕೆ ಹೋಗಿ, ಆರೋಗ್ಯ ತೀರಾ ಹದಗೆಟ್ಟ ನಂತರ ಒಂದು ತಿಂಗಳು ಮಂಗಳೂರಿನ ಆಸ್ಪತ್ರೆಯಲ್ಲಿ ಕಳೆದು ಮೊನ್ನೆ ಮನೆಗೆ ವಾಪಸ್ಸಾಗಿದ್ದಾರೆ. ನೋಡಿದರೆ ಜೀವವಿದೆಯೋ ಇಲ್ಲವೋ ಎನ್ನುವಂತಾಗಿರುವ ಆ ಮನುಷ್ಯನ ಎಲ್ಲಾ ಅಂಗಾಂಗಗಳು ವಿಫಲವಾಗಿವೆ. ಇಡೀ ಬದುಕಲ್ಲಿ ಹೆಂಡತಿಯ ಒಂದೇ ಮಾತನ್ನು ಕೇಳದ ಆಸಾಮಿಯನ್ನು, ಅದೇ ಹೆಂಡತಿ ಹಗಲೂ ರಾತ್ರಿ ನೋಡಿಕೊಂಡು ಹೈರಾಣಾಗಿ ಹೋಗಿದ್ದಾರೆ. “ಎಲ್ಲಾ ಆರ್ಗನ್‌ಗಳೂ ಹೋಗಿವೆಯಂತೆ. ತುಂಬಾ ನರಳೋದ್ರ ಬದ್ಲು ಆದಷ್ಟು ಬೇಗ ಹೋದ್ರೆ ಒಳ್ಳೆಯದೇ… ಎಲ್ಲರಿಗೂ ಒಳ್ಳೆಯದು…” ಎನ್ನುವಾಗ ಆಸ್ಪತ್ರೆಯಲ್ಲಿ ಇಷ್ಟು ದಿನ ನರಳಿದ್ದು ಅವರೋ ಅಥವೋ ಇವರೋ ಅನ್ನುವಂತಿತ್ತು ಅವರ ಹಿಂಡಿದ ಮುಖ…

ಅವರ ಮನೆಯಿಂದ ಹೊರಟಾಗ, ನಾಲ್ಕು ದಿನಗಳ ಈ ಪುಟ್ಟ ಬದುಕಲ್ಲಿ ಯಾರಿಗೆ ಸಹಾಯ ಮಾಡದಿದ್ದರೂ ಮನೆಯವರೇ ನೆನಪಿನಿಂದ ಕಿತ್ತು ಹಾಕುವಂತೆ ಬದುಕು ಮಾಡಬಾರದಷ್ಟೇ ಎನ್ನಿಸಿತು…