ಪರೀಕ್ಷೆಯ ವಿಚಾರ ಮಾತಾಡುವಷ್ಟರಲ್ಲಿ ಅವರ ಸಂಬಂಧಿ ಪ್ರತ್ಯಕ್ಷವಾಗಿದ್ದ. ಗೇಟಿನಲ್ಲೆ ನಮ್ಮಿಬ್ಬರನ್ನು ನೋಡಿರಬೇಕು. ಈಗಾಗಲೆ ಪರಿಚಯವಿದ್ದುದರಿಂದ ನನ್ನನ್ನು ಮಾತಾಡಿಸಿದ. ಮಾತಾಡಿಸಿ ‘ನೀವೇಕೆ ಬಂದಿದ್ದೀರಿ’ ಅಂದ. ನಾನು ಅದೆ ‘ಕ್ಯಾಸ್ಟ್ ಇನ್ಕಮ್’ ನೆಪ ಹೇಳಿದೆ ನನ್ನ ಸ್ನೇಹಿತರು ಬಂದಿದ್ದಾರೆ ಅವರನ್ನು ಮಾತಾಡಿಸುವ ಸಲುವಾಗಿ ಬಂದಿದ್ದೆ’ ಅಂದೆ ಅನುಮಾನ ಪಡುವ ಯಾವ ಘಟನೆಯೂ ನಮ್ಮಿಬ್ಬರ ವಿಷಯದಲ್ಲಿ ನಡೆದಿರಲಿಲ್ಲ. ನನಗೆ ಒಳ್ಳೆಯವನೆಂಬ ಪಟ್ಟ ಊರಲ್ಲಿತ್ತು. ಹಾಗಾಗಿ ಮಾತಾಡಿಸಿದವಳು ಇವಳ ಪರೀಕ್ಷೆ ಮುಗಿದ ಮೇಲೆ ಊರಿಗೆ ಕರೆದುಕೊಂಡು ಹೋಗಲು ಬಂದಿದ್ದೇನೆ ಅಂದ. ನನಗೆ ಏನು ಹೇಳಲು ಮಾತೆ ಇರಲಿಲ್ಲ. ಆದರೆ ಅವಳ ಕಣ್ಣಂಚಲ್ಲಿ ನೀರು ಮಾತ್ರ ಹಾಗೆ ಉಳಿದಿತ್ತು.
“ದಡ ಸೇರದ ದೋಣಿ” ಸರಣಿಯಲ್ಲಿ ಮಾರುತಿ ಗೋಪಿಕುಂಟೆ ಬರಹ ನಿಮ್ಮ ಓದಿಗೆ

ಬದುಕು ಕೆಲವೊಮ್ಮೆ ಮಾತನ್ನು ಮರೆಸಿಬಿಡುತ್ತದೆ. ಮೌನ ಹೃದಯದಲ್ಲಿ ಕುಳಿತು ಗುಟುಕರಿಸುತ್ತದೆ. ಮಾತಾಡದೆ ಮೌನವಾಗಿದ್ದದ್ದೆ ತಪ್ಪಾಯಿತಾ? ಅಥವಾ ಮಾತಾಡಿದ್ದರೆ ಬದುಕು ಇನ್ನೊಂದು ಮಗ್ಗುಲಿಗೆ ಹೊರಳುತ್ತಿತ್ತಾ? ಎಷ್ಟೊ ಬಾರಿ ನಾನು ಮಾತಾಡಬೇಕಿತ್ತು ಅನಿಸುತ್ತದೆ. ಆದರೆ ಮೌನದ ಮುಸುಕೊದ್ದು ಸುಮ್ಮನಾಗಿದ್ದೆ.

ಅದು ಡಿಗ್ರಿ ಮುಗಿದು ಮನೆಯಲ್ಲಿದ್ದ ಕಾಲ. ಮನೆಯಲ್ಲಿ ಬೀಡಿ ಸುತ್ತಿ ಬದುಕುತ್ತಿದ್ದ ಕಾಲ. ನನ್ನಷ್ಟಕ್ಕೆ ನಾನೆ ಒಬ್ಬಂಟಿ ಬದುಕಿನ ಚೌಕಟ್ಟನ್ನು ನಿರ್ಮಿಸಿಕೊಂಡಿದ್ದೆ ಅಥವಾ ಬದುಕೆ ಅಂಥದ್ದೊಂದು ಚೌಕಟ್ಟು ಕಟ್ಟಿಕೊಟ್ಟಿತ್ತೊ ನನಗೆ ಗೊತ್ತಿಲ್ಲ. ಇಡೀ ದಿನ ಮನೆಯಲ್ಲೆ ಕಳೆಯುತ್ತಿದ್ದೆ. ಶೋಕಿ ಮಾಡಲು ತಿರುಗಾಡಲು ಮನಸ್ಸು ಇರಲಿಲ್ಲ. ಮನಸ್ಸಿಗೆ ಭವಿಷ್ಯತ್ತಿನ ಚಿಂತೆ ಸದಾ ಯೋಚನೆಯಲ್ಲಿಯೆ ಮುಳುಗಿರುತ್ತಿದ್ದ ನಾನು ಬೇರೆಯವರನ್ನು ಮಾತಾಡಿಸುತ್ತಿರಲಿಲ್ಲ. ಹೇಳಿಕೊಳ್ಳುವಂತಹ ಗೆಳೆಯರು ನನಗಿರಲಿಲ್ಲ. ಹೇಳಿಕೊಳ್ಳಲಾಗದ ಮಾತುಗಳು ವಿಪರೀತ ಕೀಳರಿಮೆ ಮನಸ್ಸು ಮತ್ತು ದೇಹವನ್ನು ಜರ್ಜರಿತಗೊಳಿಸಿತ್ತು. ನನ್ನ ದಿನಚರಿಯಲ್ಲಿ ಯಾವುದೂ ಬದಲಾವಣೆ ಎಂಬುದೆ ಇರಲಿಲ್ಲ. ದಿನಾಲು ಮನೆಯಲ್ಲಿ ಬೀಡಿ ಸುತ್ತುವುದು ವಾರದ ಕೂಲಿಯಲ್ಲಿ ಬಂದ ಹಣದಿಂದ ಮನೆಗೆ ದಿನಸಿ ಸಾಮಾನು ತರುವುದು ಮನೆ ನಡೆಸುವುದು ಹೀಗೆ ಸಾಗುತ್ತಿತ್ತು ಬದುಕು. ಬಿಡುವಿನ ವೇಳೆಯಲ್ಲಿ ಕತೆ ಕಾದಂಬರಿ ಓದುವುದು ನನ್ನ ಹವ್ಯಾಸವು ಆಗಿತ್ತು. ಕಾದಂಬರಿ ಓದುವಾಗ ಅದರಲ್ಲಿ ಬರುವ ಪಾತ್ರಗಳು ನನಗೂ ಕನೆಕ್ಟ್ ಆಗಿ ಇಮ್ಯಾಜಿನೇಷನ್‌ನಲ್ಲಿಯೆ ಹೊತ್ತು ಕಳೆಯುತ್ತಿದ್ದೆ. ಅದರಲ್ಲಿ ಆದರ್ಶದ ಬದುಕನ್ನು ನಾನು ನಡೆಸಬೇಕು ಏನನ್ನಾದರೂ ಸಾಧಿಸಬೇಕು ಎಂದು ಮನಸ್ಸು ಬಯಸ್ಸಿದರೂ ಅಂತಹ ಆರ್ಥಿಕ ಅನುಕೂಲ ಇರಲಿಲ್ಲ. ಕನಸು ಕಂಡವನು ಕನಸಿನಲ್ಲಿಯೆ ನನ್ನ ಸಂಕಲ್ಪವನ್ನು ಮರೆತು ಬಿಡುತ್ತಿದ್ದೆ.

ಅದೊಂಥರ ಹಗಲುಗನಸಿನ ಬದುಕು ನನ್ನದಾಗಿತ್ತು. ಕಾದಂಬರಿಗಳಲ್ಲಿನ ಪ್ರೇಮದ ಪ್ರಸಂಗಗಳು ನನ್ನ ಅಚ್ಚುಮೆಚ್ಚಿನ ಭಾಗಗಳು. ಅವುಗಳನ್ನು ಓದಿಯೆ ನನ್ನ ಮನಸ್ಸನ್ನು ಶಮನ ಮಾಡಿಕೊಳ್ಳುತ್ತಿದ್ದೆ. ಕಾದಂಬರಿಗಳಲ್ಲಿನ ನಾಯಕಿಯಂತೆ ನನಗೊಬ್ಬಳು ಪ್ರೀತಿಯ ಸಿಂಚನವನ್ನುಂಟುಮಾಡುವ ಹುಡುಗಿ ಸಿಗಬಹುದೆ ಎಂದು ಯೋಚಿಸುವ ಹೊತ್ತಿಗೆ ಛೆ ಛೆ.. ನನ್ನಂಥವರಿಗಲ್ಲ ಎಂದು ಒಳಮನಸ್ಸು ಹೇಳುತ್ತಿತ್ತು. ಅದು ಹುಡುಗಾಟಿಕೆಯೇ.!? ಖಂಡಿತ ಇಲ್ಲ ಅಲ್ಲೊಬ್ಬ ಪ್ರಬುದ್ಧನಿದ್ದ ಅದರಲ್ಲಿ ನಾನಿದ್ದೆ ಎಂಬುದೆ ಸತ್ಯ.

ಹೀಗಿರುವಾಗಲೆ ಶ್ರಾವಣದ ಇಳಿಸಂಜೆಯಲ್ಲಿ ಮನೆಯಲ್ಲಿ ಕೆಲಸ ಮಾಡುವಾಗ ಪಕ್ಕದ ಮನೆಯ ಹುಡುಗಿ ದೋಸೆ ಹಂಚು ಬೇಕೆಂದು ಕೇಳಿಕೊಂಡು ಬಂದಿದ್ದಳು. ಮನೆಯ ಒಳಗಡೆ ಪಡಸಾಲೆಯಲ್ಲಿ ಬೀಡಿ ಕೆಲಸ ಮಾಡುತ್ತಿದ್ದ ನನಗೆ ಅವಳ ಧ್ವನಿಯಲ್ಲಿ ವಿಶೇಷವೇನೊ ಇದೆಯೆನಿಸಿತು. ಇಲ್ಲಿಯವರೆಗೂ ಹಾಸ್ಟೆಲಿನಲ್ಲಿ ಇದ್ದು ಓದುತ್ತಿದ್ದ ನಾನು ನಾನಾಯಿತು ನನ್ನ ಓದಾಯಿತು ಎಂಬಂತಿದ್ದವನು ಅಲ್ಲಿಯವರೆಗೂ ಯಾವ ಹುಡುಗಿಯನ್ನೂ ಸಲಿಗೆಯಿಂದ ಮಾತಾಡಿಸುವುದಿರಲಿ ಕಣ್ಣೆತ್ತಿಯೂ ನೋಡದ ಅಪ್ಪಟ ಹಳ್ಳಿಗ. ಯಾವಾಗಾದರೊಮ್ಮೆ ಹಬ್ಬಕ್ಕೊ ಸಮಾರಂಭಗಳಿಗಷ್ಟೆ ಮನೆಗೆ ಬಂದು ಹೋಗುತ್ತಿದ್ದವನು ಅಕ್ಕಪಕ್ಕದ ಮನೆಯಲ್ಲಿ ಏನಿದೆ ಯಾರ್ಯಾರಿದ್ದಾರೆ ಎಂದು ವಿಚಾರಿಸುವ ಗೊಡವೆಗೂ ಹೋಗುತ್ತಿರಲಿಲ್ಲ. ಹೀಗಿರುವಾಗ ಕೆಲಸವಿಲ್ಲದೆ ಮನೆಯಲ್ಲಿ ಸೇರಿಕೊಂಡರು ನಾನಾಯಿತು ನನ್ನ ಕೆಲಸವಾಯಿತು ಎಂಬಂತೆ ಮಾತುಗಳೆ ಮರೆತವನಂತೆ ಬದುಕುತ್ತಿದ್ದವನು ದೋಸೆ ಹಂಚಿನ ಸದ್ದು ಕೇಳಿ ಹೊರಬಂದವನು ಆ ಹುಡುಗಿಯನ್ನು ನೋಡಿದೆ. ಅಮ್ಮ ಅಡುಗೆ ಮನೆಯಲ್ಲಿ ಅಡುಗೆ ಮಾಡುತ್ತಿದ್ದಳು ಅಕ್ಕ ಬೇರೊಂದು ಕೆಲಸದಲ್ಲಿ ನಿರತಳಾಗಿದ್ದಳು. ಇರಿ ಅಮ್ಮನಿಗೆ ಹೇಳುವೆ ಎಂದು ಅಡುಗೆ ಮಾಡುತ್ತಿದ್ದ ಅಮ್ಮನನ್ನು ಕೂಗಿ ಅಮಾ ಇವರಿಗೆ ದೋಸೆ ಹಂಚು ಬೇಕಂತೆ ಅಂದೆ. ಅಷ್ಟು ಸುಲಭವಾಗಿ ಅಡುಗೆ ಪರಿಕರವನ್ನು ಕೊಡದ ಅಮ್ಮ ಒಮ್ಮೆ ದುರುಗುಟ್ಟಿ ನೋಡಿ, ದೋಸೆ ಹಂಚು ಇದೆ; ಆದರೆ ಅದರಲ್ಲಿ ದೋಸೆ ಒಯ್ಯುವುದಕ್ಕೆ ಬರುವುದಿಲ್ಲ ಎಂದು ಬಿಟ್ಟಳು. ಸುಮ್ಮನೆ ನಿಂತಿದ್ದ ಆ ಹುಡುಗಿ ಒಮ್ಮೆ ನನ್ನನ್ನು ಅಮ್ಮನನ್ನು ನೋಡಿದಳು. “ನೆನ್ನೆ ಚೆನ್ನಾಗಿಯೇ ಇತ್ತಲ್ಲ ದೋಸೆನೂ ಮಾಡಿದ್ದೆ. ಸುಮ್ಮನೆ ಸುಳ್ಳು ಹೇಳ್ತಿಯಲ್ಲಮ್ಮ ಅದೇನು ಸವೆದು ಹೋಗುವುದಿಲ್ಲ ಕೊಡು” ಎಂದ ನನ್ನನ್ನೇ ದುರುಗುಟ್ಟಿಕೊಂಡು ನೋಡಿದ ಅಮ್ಮ ಅಡುಗೆ ಮನೆಗೆ ಹೋಗಿ ದೋಸೆಅಂಚನ್ನು ತಂದುಕೊಟ್ಟಳು. ಅದನ್ನು ಪಡೆದ ಅವಳು ನನ್ನನ್ನೊಮ್ಮೆ ನೋಡಿ ನಕ್ಕಳು. ಸುಳಿ ಮಿಂಚೊಂದು ಸುಳಿದು ನನ್ನೆದೆಗೆ ಮಳೆ ಬರಿಸಿದಂತಾಯಿತು. ಶ್ರಾವಣದ ಸಂಜೆ ಮಳೆ ಬೋರ್ಗರೆಯುತ್ತಾ ಹಟ್ಟಿಯ ಅಂಗಳವನ್ನು ತೋಯಿಸಿತು. ಮಳೆಯಲ್ಲಿ ‘ದೋಸೆಹಂಚನ್ನು’ ಹಿಡಿದು ಓಡಿದ ಹುಡುಗಿಯನ್ನೆ ದಿಟ್ಟಿಸುತ್ತಾ ನೋಡಿದವನು ಮಳೆಯ ಅಬ್ಬರದಲ್ಲಿ ಮಳೆ ಮತ್ತು ಹುಡುಗಿ ಅಚ್ಚೊತ್ತಿದ್ದಂತೆ ಉಳಿದು ಬಿಟ್ಟರು. ಇಲ್ಲಿಂದ ಶುರುವಾದ ಪ್ರೀತಿ ಮಾತಿಲ್ಲದೆ ಮೌನವಾಗಿಯೇ ಸಾಗುತ್ತಿತ್ತು.

ಆಗಾಗ ಮನೆಯಲ್ಲಿ ‘ಅಟ್ಗುಣಿ’ ಆಡುವಾಗ ಅವಳು ಬಂದು ಸೇರಿಕೊಳ್ಳುತ್ತಿದ್ದಳು. ನಾನು ನನ್ನ ಮಾತನ್ನು ನನ್ನ ತಂಗಿಗೆ ಹೇಳುತ್ತಿದ್ದೆ. ಅವಳು ಮಾತಿಗೆ ನನ್ನ ತಂಗಿಯನ್ನೆ ಅವಲಂಬಿಸುತ್ತಿದ್ದಳು. ನಂತರ ಕೆಲಸದ ನೆಪದಲ್ಲಿ, ‘ಚೌಕಾಬಾರಾ’ ಆಡುವಾಗ, ಒಂದೆಡೆ ಸೇರಿದರೂ ನೇರಾಮಾತು ಇಬ್ಬರೂ ಆಡಲೆ ಇಲ್ಲ. ದಿನಗಳುರುಳಿದವು. ನನಗಂತೂ ಕನ್ಫರ್ಮ್ ಆಗಿತ್ತು ಆ ಹುಡುಗಿಯ ಮನಸ್ಸಿನಲ್ಲಿ ನಾನಿದ್ದೇನೆ ಆದರೂ ಮಾತಾಡಲು ಇಬ್ಬರಿಗೂ ಭಯ. ರಾತ್ರಿ ಪೂರ ಅವಳನ್ನು ನೆನೆಯುವುದು ಮನಸ್ಸಿಗೆ ಬಂದ ಕವನವನ್ನು ಗೀಚುವುದು, ಬದುಕಿನಲ್ಲಿ ನಿರಾಸೆಯನ್ನೆ ಉಂಡ ನನಗೆ ಇದು ಬರ್ಕತ್ತಾಗುತ್ತಾ ಅಥವಾ ಹೇಳಿದರೆ ಅನಾಹುತವೆ ನಡೆದರೆ, ಊರೆ ನನ್ನನ್ನು ಹೊರಗಟ್ಟಿದರೆ ಏನೇನೊ ಯೋಚನೆಗಳು ನನ್ನ ಮನಸ್ಸನ್ನು ಒಕ್ಕು ಜಗಳ ಮಾಡುತ್ತಿದ್ದವು.

ಹೀಗಿರುವಾಗಲೆ ಅವರು ಮನೆಯನ್ನು ಬದಲಾಯಿಸಿ ಊರಿನ ಇನ್ನೊಂದು ಭಾಗದಲ್ಲಿದ್ದ ಮನೆಗೆ ಹೋದರು. ರೆಕ್ಕೆ ಮುರಿದ ಪಕ್ಷಿಯಂತಾಯಿತು ನನ್ನ ಮನಸ್ಸು. ಒಂದು ವಾರ ಹುಡುಗಿಯ ಸುಳಿವಿರಲಿಲ್ಲ. ಅವಳೇನೂ ನನ್ನ ಮರೆತೆ ಬಿಟ್ಟಳಾ ಅಥವಾ ಹುಡುಗಾಟಿಕೆಗೆ ಪ್ರೀತಿಯ ಜಲಕನ್ನು ಹರಿಸಿಹೋದಳಾ ಅಥವಾ ಅವಳು ಬೇರೆ ಊರಿಗೆ ಹೋಗಿರಬಹುದಾ!? ನಾನು ದಾಳವಾದೆನಾ!? ಅವಳ ಬಗ್ಗೆ ಯಾರಲ್ಲಾದರೂ ವಿಚಾರಿಸೋಣವೆಂದರೆ ಅದು ಬೇರೆ ಅನಾಹುತಕ್ಕೆ ದಾರಿಯಾಗಬಹುದಾ? ಕೇಳೋಣವೆಂದರೆ ಹತ್ತಿರವಾದ ಗೆಳೆಯರು ಯಾರಿದ್ದಾರೆ ನನಗೆ? ಇಂತದೆ ಪ್ರಶ್ನೆಗಳು ನನ್ನ ಮನಸ್ಸಿನಲ್ಲಿ ಮೂಡಿ ಮೌನವಾಗತೊಡಗಿದವು. ನಾನು ಅಷ್ಟು ದುರ್ಬಲನಾಗಿರುವನೆ ಛೆ! ನನ್ನಂಥವರಿಗಲ್ಲ ಈ ಪ್ರೀತಿ ಪ್ರೇಮ… ಬಿಟ್ಟಾಕು. ಭವಿಷ್ಯದ ಬದುಕಿನ ನಡುವಲ್ಲಿ ನಿಂತವನಿಗೆ ಇಂತಹ ಪ್ರಶ್ನೆಗಳು ಸಹಜವೆನಿಸಿದವು. ನನಗೆ ಅನೇಕ ಜವಾಬ್ದಾರಿಗಳಿವೆ ಇಡೀ ಮನೆಯ ಭವಿಷ್ಯ ನನ್ನ ಬದುಕಿನ ದಾರಿಯನ್ನೆ ಅವಲಂಬಿಸಿದೆ. ನನಗೆ ಸರಿಬರುವುದಿಲ್ಲ ಎಂದು ಯೋಚಿಸಿದವನಿಗೆ ಆಕಾಶದ ತಿಳಿನೀಲ ನಡುವಲ್ಲಿ ಬೆಳಗುತ್ತಿದ್ದ ಚಂದ್ರ ಮಂಪರು ಮಂಪರಾಗಿ ಕಂಡ ರಗ್ಗೊದ್ದು ಮುಸುಕೆಳೆದವನಿಗೆ ಕಣ್ಣಂಚಿನ ನಿದ್ದೆ ಯಾವಾಗಲೂ ಆವರಿಸಿಕೊಳ್ಳುತ್ತಿದ್ದ ಹೀಗೆ ದಿನಗಳು ದೂಡುತ್ತಿದ್ದವು.

ಅದೊಂದು ದಿನ ಅವಳು ಮರೆಯಾಗಿ ಹದಿನೈದು ದಿನಗಳೆ ಕಳೆದಿದ್ದವು. ಸೈಕಲ್ಲನ್ನು ಏರಿ ನಮ್ಮ ಮನೆಯ ಮುಂದೆ ಹಾದುಹೋದಳು. ಮನೆಯ ವರಾಂಡದಲ್ಲಿ ಬೀಡಿ ಕೆಲಸ ಮಾಡುತ್ತಿದ್ದ ನನಗೆ ಅರೆ ಇದೇನು ಆ ಹುಡುಗಿ ಇದ್ದಾಂಗಿದಾಳಲ್ಲ ಎನಿಸುವಷ್ಟರಲ್ಲಿ ‘ಬೆಲ್’ ಹೊಡೆಯತೊಡಗಿದಳು. ದಡಬಡಿಸಿ ಹೊರಗೆ ಬಂದು ನೋಡುವಷ್ಟರಲ್ಲಿ ಮನೆಯ ಮುಂಭಾಗದ ರಸ್ತೆಯ ತಿರುವಲ್ಲಿ ಮರೆಯಾಗುವಷ್ಟರಲ್ಲಿ ಅವಳದೊಂದು ನಗೆ ಪಾಸಾಗಿತ್ತು. ನಂತರ ಪ್ರತಿದಿನ ಸಾಯಂಕಾಲ ಸಮಯದಲ್ಲಿ ಯಾವುದೊ ಒಂದು ನೆಪದಲ್ಲಿ ಬರುತ್ತಿದ್ದಳು. ಒಂದುನೋಟ ಒಂದು ನಗೆ ಇಷ್ಟರಲ್ಲೆ ಮುಗಿದುಹೋಗುತ್ತಿತ್ತು. ಸೆಪ್ಟಂಬರ್ ರಜೆ ಬಂದಿತ್ತು. ಒಂದಿನ ನಾನು ನನ್ನ ತಂಗಿ ಕೆಲಸವನ್ನೆಲ್ಲಾ ಮುಗಿಸಿ ಸಂಜೆ ಸಮಯದಲ್ಲಿ ಮನೆಯ ಮುಂಭಾಗದ ವರಾಂಡದಲ್ಲಿ ಚೌಕಾಬಾರಾ ಆಡುವಾಗ ಅವಳು ಬಂದು ಸೇರಿದಳು. ಆಡಿದ ಆಟದಲ್ಲಿ ನಾನು ಗೆದ್ದಿದ್ದೆ. ನೀವು ಮೋಸ ಮಾಡಿದಿರಿ ಎಂದೇನೊ ಹೇಳಿದಳು. ನಾನು ಮೋಸ ಮಾಡಿ ಗೆದ್ದಿರಲಿಲ್ಲ. ಹುಣಸೆಪಿತ್ತವನ್ನು ಬಿಸಾಕಿ ಬಿಡುಬಿಸಾಗಿ ಎದ್ದು ಬಂದಿದ್ದೆ. ನಂತರ ಒಂದೆರಡು ದಿನ ಆಕೆ ಅತ್ತ ಸುಳಿಯಲಿಲ್ಲ. ನಾನು ಅವಳನ್ನು ಮರೆಯಲಿಲ್ಲ. ಆದರೆ ಇದು ಹುಡುಗಾಟದ್ದು ಅನಿಸತೊಡಗಿತ್ತು. ಇನ್ನು ಪಿಯುಸಿ ಎರಡನೆ ವರ್ಷದಲ್ಲಿ ಓದುತ್ತಿದ್ದ ಅವಳಿಗೆ ಅಪ್ರಬುದ್ಧತೆ ಇತ್ತು. ಬಿಟ್ಟುಬಿಡುವುದೆ ಒಳ್ಳೆಯದು ಅನಿಸಿತು. ಒಂದೆರಡು ದಿನ ಅಲ್ಲೆಲ್ಲಿಯೂ ಸುಳಿಯಲಿಲ್ಲ. ಇದ್ದಕ್ಕಿದ್ದಂತೆ ಅದೆ ಸೈಕಲ್ಲನ್ನು ಏರಿ ಬಂದಿದ್ದಳು. ಅಮ್ಮನಿಗೂ ಪರಿಚಯ ಇದ್ದಿದ್ದರಿಂದ ನೇರ ಮನೆಗೆ ಬಂದಿದ್ದಳು. ಅಕ್ಕನನ್ನು ಮಾತಾಡಿಸಿ ಹೋದಳು. ನನ್ನದೂ ಮೌನವೆ ಉತ್ತರವಾಗಿತ್ತು. ಪ್ರತಿದಿನ ಯಾವುದಾದರೂ ನೆಪವಿಟ್ಟುಕೊಂಡೆ ಮನೆಯ ಮುಂಭಾಗದ ರಸ್ತೆಯಲ್ಲಿ ಹಾದುಹೋಗುತ್ತಿದ್ದಳು. ರಸ್ತೆಯ ತಿರುವಲ್ಲಿ ಒಂದು ವಾರೆನೋಟ ಬೀರಿ ಹೋಗುತ್ತಿದ್ದಳು. ಅವಳು ಬಂದಾಗಲೆಲ್ಲಾ ನಾನು ಹೊರಗೆ ನಿಲ್ಲುತ್ತಿದ್ದೆ. ಅಕ್ಕನಿಗೆ ಹೇಳುತ್ತಿದ್ದೆ ಈಗ ನೋಡ್ತಾಳೆ ನೋಡಕ ಅನ್ನುತ್ತಿದ್ದೆ. ಅವಳು ಹಾಗೆಯೆ ಮಾಡುತ್ತಿದ್ದಳು. ಅಕ್ಕ ಒಂದಿನ ಬೈಯ್ದಳು… ನೀನು ಇನ್ನೂ ಓದಬೇಕು. ಇವಾಗಲೆ ಇಂತವೆಲ್ಲ ಬೇಡ ಅನ್ನುತ್ತಿದ್ದಳು. ಅಕ್ಕ ನಾನೇನು ಅವಳನ್ನು ಎಲ್ಲಿಯೂ ಮೀಟ್ ಆಗಿಲ್ಲ ಇಲ್ಲಿಯವರೆಗೂ ಅವಳ ಸಮೀಪ ನಿಂತು ಮಾತಾಡಿದ್ದು ಕಡಿಮೆ. ಆ ಧೈರ್ಯವೂ ನನಗಿಲ್ಲ. ಅಂಥದ್ದೇನೂ ಆಗುವುದಿಲ್ಲ ಬಿಡು ಎನ್ನುತ್ತಿದ್ದೆ. ನನ್ನದು ಶುದ್ಧ ಪ್ರೀತಿ. ಮೌನದಲ್ಲಿ ಕೂತು ಮನೆ ಮಾಡಿತ್ತಾದರೂ ಕಾದಂಬರಿಗಳನ್ನು ಓದಿ ಭಾವಾವೇಶಕ್ಕೆ ಒಳಗಾಗಿ ಹೀಗೆ ನಡೆದುಕೊಂಡೆನಾ ಎಂದು ಆಗ ಅನಿಸಿತ್ತು. ನನಗೆ ಗೊತ್ತಿತ್ತು ಆ ಹುಡುಗಿಯ ಮನಸ್ಸಿನಲ್ಲಿ ನಾನಿದ್ದೇನೆ ಆದರೆ ಅದು ಕೈಗೂಡುವುದೆ ಎಂಬ ಪ್ರಶ್ನೆ ಕಾಡುತ್ತಲೆ ಇತ್ತು. ಇಂತವೆಲ್ಲ ಮಾಡುವಷ್ಟು ಧೈರ್ಯ ಇವನಿಗಿಲ್ಲವೆಂದು ಅಕ್ಕನು ಸುಮ್ಮನಾಗಿದ್ದಳು. ಅದು ಹುಡುಗಾಟಿಕೆಯಾಗಿತ್ತಾ ಗೊತ್ತಿಲ್ಲ.

ಆದರೆ ಇಬ್ಬರೂ ಸಂಧಿಸುವ ಕಾಲ ಬಂದೆ ಬಿಟ್ಟಿತು. ಆ ಹುಡುಗಿಯ ಪರೀಕ್ಷೆಯ ದಿನಗಳು ಅವಳು ಓದುವುದಕ್ಕಷ್ಟೆ ನಮ್ಮ ಊರಿಗೆ ಬಂದಿದ್ದಳು. ಪರೀಕ್ಷೆ ಮುಗಿದ ಮೇಲೆ ಅವಳು ವಾಪಸ್ ಊರಿಗೆ ಹೋಗುತ್ತಾಳೆ. ಏನಾದರೂ ಹೇಳಿಬಿಡಬೇಕು ಎಂದುಕೊಂಡವನಿಗೆ ಪರೀಕ್ಷೆ ನಾಳೆ ಕೊನೆಯಾಗುತ್ತೆ ಅನ್ನುವಾಗ ತಾಲ್ಲೂಕು ಕೇಂದ್ರದಲ್ಲಿ ಪರೀಕ್ಷೆ ನಡೆಯುತ್ತಿದ್ದರಿಂದ ನನ್ನ ಕ್ಯಾಸ್ಟ್ ಇನ್ಕಮ್ ಮಾಡುಸ್ಬೇಕು ಅಂತೇಳಿ ಬಸ್ ಚಾರ್ಜಿಗೆ ದುಡ್ಡು ಪಡೆದು ಹೋಗಿದ್ದೆ. ಪರೀಕ್ಷಾ ಕೇಂದ್ರದಲ್ಲಿ ಅವಳನ್ನು ಭೇಟಿಯಾಗಿ ಕಳೆದ ವಿಷಯಗಳ ಪರೀಕ್ಷೆ ಹೇಗೆ ಬರೆದಿರಿ ಎಂದು ವಿಚಾರಿಸಿದೆ. ಒಂದೆರಡು ಮಾತಾಡುವಷ್ಟರಲ್ಲಿ ಪರೀಕ್ಷೆ ಬೆಲ್ ಒಡೆಯಿತು. ಇನ್ನು ಹೇಳಬೇಕಾದ ಮಾತುಗಳು ಹಾಗೆ ಉಳಿದಿದ್ದವು. ನನ್ನ ಪೆಚ್ಚುಮೋರೆ ನೋಡಿಯೇ ಅವಳು ನಾಳೆ ಪರೀಕ್ಷೆ ಮುಗಿಯುತ್ತದೆ ಎಲ್ಲರೂ ಸಿನಿಮಾಕ್ಕೆ ಹೋಗುತ್ತಿದ್ದಾರೆ ಎಂದಷ್ಟೆ ಹೇಳಿದ್ದಳು. ನಾನು ಉತ್ತರಿಸಿದ್ದೆ. ನಾಳೆ ಮತ್ತೆ ಬರುತ್ತೇನೆ ಸಿನಿಮಾಕ್ಕೆ ಹೋಗೋಣ ಎಂದಿದ್ದೆ. ಅದು ತತ್ ಕ್ಷಣಕ್ಕೆ ಕೊಟ್ಟ ಉತ್ತರವಾಗಿತ್ತು. ಆದರೆ ನಾಳೆಗೆ ದುಡ್ಡು ಎಲ್ಲಿಂದ ಹೊಂದಿಸುವುದು? ಮನೆಯಲ್ಲಿ ಪದೆ ಪದೇ ಕೇಳಿದರೆ ಅವರೆಲ್ಲಿ ಕೊಟ್ಟಾರು ಎಂಬ ಪ್ರಶ್ನೆ ಮೂಡಿದ್ದವು. ವಾಪಸ್ ಬಂದು ಅಕ್ಕನನ್ನು ಪೀಡಿಸಿ ಅವಳ ಹತ್ತಿರ ಇದ್ದ ಐವತ್ತು ರೂಪಾಯಿ ಅಮ್ಮನಿಂದ ಐವತ್ತು ರೂಪಾಯಿ ಪಡೆದು ಅದೆ ತಾಲ್ಲೂಕು ಕೇಂದ್ರದ ಕ್ಯಾಸ್ಟ್ ಇನ್ಕಮ್ ನೆಪ ಹೇಳಿ ಮರುದಿನ ಹೊರಟೆ. ಯಾವುದೊ ಆತ್ಮವಿಶ್ವಾಸ ನನ್ನನ್ನು ಧೈರ್ಯದ ಜಾಡಿನಲ್ಲಿ ಮುನ್ನಡೆಸಿತು ಅಥವಾ ಅವಳಲ್ಲಿ ಹೇಳಿಕೊಳ್ಳುವ ಮಾತು ಹಾಗೆ ಮಾಡಿತ್ತೊ ಗೊತ್ತಿಲ್ಲ.

ಅಂತೂ ಹೊರಟೆ… ಕೊನೆಯ ದಿನದ ಪರೀಕ್ಷೆ ಮುಗಿಯುವಷ್ಟರಲ್ಲಿ ಅಲ್ಲಿಗೆ ಹೋಗಿದ್ದೆ. ಅಲ್ಲಿಯೂ ಪರೀಕ್ಷೆಯ ವಿಚಾರ ಮಾತಾಡುವಷ್ಟರಲ್ಲಿ ಅವರ ಸಂಬಂಧಿ ಪ್ರತ್ಯಕ್ಷವಾಗಿದ್ದ. ಗೇಟಿನಲ್ಲೆ ನಮ್ಮಿಬ್ಬರನ್ನು ನೋಡಿರಬೇಕು. ಈಗಾಗಲೆ ಪರಿಚಯವಿದ್ದುದರಿಂದ ನನ್ನನ್ನು ಮಾತಾಡಿಸಿದ. ಮಾತಾಡಿಸಿ ‘ನೀವೇಕೆ ಬಂದಿದ್ದೀರಿ’ ಅಂದ. ನಾನು ಅದೆ ‘ಕ್ಯಾಸ್ಟ್ ಇನ್ಕಮ್’ ನೆಪ ಹೇಳಿದೆ ನನ್ನ ಸ್ನೇಹಿತರು ಬಂದಿದ್ದಾರೆ ಅವರನ್ನು ಮಾತಾಡಿಸುವ ಸಲುವಾಗಿ ಬಂದಿದ್ದೆ’ ಅಂದೆ ಅನುಮಾನ ಪಡುವ ಯಾವ ಘಟನೆಯೂ ನಮ್ಮಿಬ್ಬರ ವಿಷಯದಲ್ಲಿ ನಡೆದಿರಲಿಲ್ಲ. ನನಗೆ ಒಳ್ಳೆಯವನೆಂಬ ಪಟ್ಟ ಊರಲ್ಲಿತ್ತು. ಹಾಗಾಗಿ ಮಾತಾಡಿಸಿದವಳು ಇವಳ ಪರೀಕ್ಷೆ ಮುಗಿದ ಮೇಲೆ ಊರಿಗೆ ಕರೆದುಕೊಂಡು ಹೋಗಲು ಬಂದಿದ್ದೇನೆ ಅಂದ. ನನಗೆ ಏನು ಹೇಳಲು ಮಾತೆ ಇರಲಿಲ್ಲ. ಆದರೆ ಅವಳ ಕಣ್ಣಂಚಲ್ಲಿ ನೀರು ಮಾತ್ರ ಹಾಗೆ ಉಳಿದಿತ್ತು. ನನಗೆ ಬೇಸರವಾಗಿ ಹೊರಬಂದೆ. ಆದರೂ ಅವಳು ಸಿನಿಮಾಕ್ಕೆ ಬಂದೆ ಬರುತ್ತಾಳೆ ಎಂದು ಹೊರಗಡೆ ಕಾದಿದ್ದೆ. ಅವಳು ಮತ್ತೆ ಬರಲಿಲ್ಲ. ನಾನು ಊರಿಗೆ ವಾಪಾಸಾಗಿದ್ದೆ. ನಂತರ ಎರಡು ವರ್ಷ ಮನೆಯಲ್ಲಿ ಕೂತು ಕೆಲಸ ಮಾಡುವುದಕ್ಕಿಂತ ಬೆಂಗಳೂರಿಗೆ ಹೋಗೋಣ ನಂತರ ಓದೋಣ ಎಂದು ಬೆಂಗಳೂರನ್ನು ಅಲೆದದ್ದಾಯಿತು. ಬೆಂಗಳೂರಿನಲ್ಲಿ ಭೇಟಿಯಾಗಲು ನನ್ನ ಸ್ನೇಹಿತನ ಮನೆಯ ಹತ್ತಿರ ಹೋಗಿದ್ದೆ. ಅವರು ಇವಳು ನನ್ನುಡುಗಿಯ ಮದುವೆ ವಿಚಾರವನ್ನು ಸಹಜವಾಗಿಯೇ ಹೇಳಿದ್ದರು. ನಮ್ಮ ಮನಸ್ಸಿನ ಪ್ರೀತಿ ಯಾರಿಗೂ ತಿಳಿದಿರಲಿಲ್ಲ. ನಾನೂ ಬೆಂಗಳೂರಿನ ಗಲ್ಲಿಗಲ್ಲಿಗಳಲ್ಲಿ ಕೆಲಸ ಹುಡುಕುವಾಗ ಅವಳು ಮರೆತೆ ಹೋಗಿದ್ದಳು. ಆದರೂ ಅವಳ ಮದುವೆಯ ದಿನ ಗೊತ್ತಾದದ್ದು ಕಾಕತಾಳಿಯವ ಅನಿಸಿತ್ತು. ಬಾ ಹೋಗೋಣ ಎಂದು ಸ್ನೇಹಿತ ಕರೆದರೂ ನಾನು ನಿರ್ಭಾವುಕನಾಗಿ ಇಲ್ಲ ನೀವು ಹೋಗಿ ಎಂದು ಎದ್ದು ಬಂದಿದ್ದೆ.

ನಂತರ ವೃತ್ತಿಪರ ತರಬೇತಿ ಪಡೆದು ಶಿಕ್ಷಕನಾಗಿ ಸೇರಿಕೊಂಡ ಮೇಲೂ ನಮ್ಮ ಭೇಟಿಯಾಗಿರಲಿಲ್ಲ. ಅದು ಮುಗಿದ ಅಧ್ಯಾಯವಾಗಿತ್ತು. ಅದು ಹುಡುಗಾಟಿಕೆಗೆ ಹುಟ್ಟಿದ ಪ್ರೀತಿಯಾ ಇಲ್ಲ ಅವಳು ನನ್ನ ಸಂಗಾತಿಯಾಗಿದ್ದರೆ ಬದುಕು ಚೆನ್ನಾಗಿರುತ್ತಿತ್ತಾ? ಬದುಕಿಗೊಂದು ಅರ್ಥ ಇರುತ್ತಿತ್ತಾ? ಹಾಗೆ ಮಾಡಲು ನನಗೆ ಧೈರ್ಯವಿತ್ತಾ… ಅವಳನ್ನು ಕೇಳಿದರೆ ಒಪ್ಪುತ್ತಿದ್ದಳಾ? ಇಲ್ಲ ನಮ್ಮಿಬ್ಬರ ಮಧ್ಯೆ ‘ಜಾತಿಯ’ ಕಂದಕವೂ ಇತ್ತು. ಅದು ನಮ್ಮನ್ನು ಬೇರೆ ಮಾಡಿತ್ತಾ? ಅವಳು ನನ್ನನ್ನು ಮತ್ತೆ ಸ್ಮರಿಸಿಕೊಂಡಳಾ? ಇಂತಹ ಯಾವ ಪ್ರಶ್ನೆಗಳಿಗೂ ಈಗ ಉತ್ತರವಿಲ್ಲ. ಅವಳು ಬದುಕು ಸಾಗಿಸುತ್ತಿದ್ದಾಳೆ ನಾನು ನನ್ನ ಬದುಕಿನಲ್ಲಿ ನಡೆಯುತ್ತಲೇ ಇದ್ದೇನೆ. ‘ಸುಖಾಸುಮ್ಮನೆ ಹುಟ್ಟಿದ ಪ್ರೀತಿ ದಡ ತಲುಪದೆ ಮಗುಚಿ ಬಿತ್ತಾ’ ಅದನ್ನು ಶ್ರಾವಣದ ಇಳಿ ಸಂಜೆಯ ಮಳೆಯೆ ಹೇಳಬೇಕು.