‘ನಿಮ್ಮ ಮನೆಯಲ್ಲೂ ಪಾತಿ ಮಾಡಿದಾರಾ?’ ಎಂದು ಸುಮ್ಮನೆ ಮಾತಿಗೆ ಒಮ್ಮೆ ಕೇಳಿದ್ದೆ. ‘ನಮ್ಮನೆ ಮುಂದೆ ಲಾಲ್ ಬಾಗೇ ಇದೆಯಲ್ಲ?’ ಎಂದು ಫಟ್ಟನೆ ಹೇಳಿದಾಗ ಬೆಚ್ಚಿಬೀಳುವ ಹಾಗಾಯಿತು. ಅದೊಂದು ಮಹಾವಾಕ್ಯದಂತೆ ಕೇಳಿಸಿತ್ತು. ಲಾಲ್ ಬಾಗಿನ ಎದುರು ಇರುವ ಸ್ಲಮ್ಮಿನಲ್ಲಿ ಅವರದ್ದು ಜೋಪಡಿ ವಾಸ. ಹೈದರ್ ಅಲಿ ಟಿಪ್ಪು ಸುಲ್ತಾನರು ದೇಶ ವಿದೇಶಗಳಿಂದ ತರಿಸಿ ಬೆಳೆಸಿರುವ ಅಪರೂಪದ ವೃಕ್ಷಗಳ ನಡುವೆಯೇ ಬೆಳೆಯುತ್ತಿರುವ ಮಗು ಅವಳು. ನಾನು ಪಾಠ ಮಾಡುವ ಶೇಕ್ಸ್‌ಪಿರ್ ನೆನಪಾಗಿದ್ದ. ಅತ್ಯಂತ ಗಹನವಾದ ಸತ್ಯಗಳನ್ನು ಅವ ತುಂಬ ಗೌಣವಾದ ಪಾತ್ರಗಳ ಬಾಯಲ್ಲಿ ಹೇಳಿಸುತ್ತಾನೆ.
ಖ್ಯಾತ ಲೇಖಕಿ, ಅನುವಾದಕಿ ಸುಕನ್ಯಾ ಕನಾರಳ್ಳಿ ಹೊಸ ಅಂಕಣ “ಕಡೆಗಣ್ಣಿನ ಬಿಡಿನೋಟಇಂದಿನಿಂದ ಪ್ರತಿ ಬುಧವಾರಗಳಂದು ನಿಮ್ಮ ಓದಿಗೆ

ಮಹಾವಾಕ್ಯ!

ನನ್ನ ಸಹ-ಉದ್ಯೊಗಿ, ನಂತರ ಹೆಡ್, ಪ್ರಿನ್ಸಿಪಾಲಿನಿಯೂ ಆದ  ಬದುಕಿನ ಅತ್ಯಂತ ಆಪ್ತ ಸ್ನೇಹಿತೆಯ ಮನೆ ಇದ್ದದ್ದು ಬೆಂಗಳೂರಿನ ಜಯನಗರದಲ್ಲಿ. ಎರಡು ಮಕ್ಕಳನ್ನು ಹೆತ್ತು ಇನ್ನೆರಡು ಮಕ್ಕಳನ್ನು ದತ್ತು ತೆಗೆದುಕೊಂಡಿದ್ದ ಆಕೆ ನನಗಿಂತ ಒಂದೂವರೆ ದಶಕದಷ್ಟು ಹಿರಿಯಳು. ಸ್ನೇಹಕ್ಕೆ ವಯಸ್ಸಿನ ಹಂಗಿಲ್ಲ ಎಂದು ಯಾವತ್ತೂ ನಂಬಿದವಳು ನಾನು. ಇಲ್ಲದಿದ್ದರೆ ಹರಿ ಹೇಗೆ ನನ್ನ ಸಂಗಾತಿಯಾಗುತ್ತಿದ್ದ?

ಇರಲಿ, ಆಕೆಯ ಮನೆಯ ಔಟ್ ಹೌಸಿನಲ್ಲಿ ನಾನು ಬಾಡಿಗೆಗೆ ಇದ್ದೆ.  ಕಾಫಿತೋಟದ ಹರವಾದ ಮನೆಯಲ್ಲಿ ಬೆಳೆದ ನೀವು ಔಟ್ ಹೌಸಿನಲ್ಲಿ? ಎಂದು ತುಂಬ ಮಂದಿ ಹುಬ್ಬೇರಿಸಿದ್ದರು. ನನಗೆ ಆಕೆಯ ಹತ್ತಿರದಲ್ಲಿ ಇರಬೇಕಿತ್ತು. ಅವಳ ಕಷ್ಟಸುಖದಲ್ಲಿ ಆತ್ಮೀಯವಾಗಿ ಪಾಲುಗೊಳ್ಳಬೇಕಿತ್ತು. ದಿನಾ ನನ್ನ ಕಾರಿನಲ್ಲಿ ಅವಳನ್ನು ಕರೆದುಕೊಂಡು ಹೋಗಿ ಕರೆತರುವುದು ನಾನು ತುಂಬ ಖುಷಿಯಿಂದ ಮಾಡುತ್ತಿದ್ದ ಕೆಲಸ. ಯಾವ ವಿಶ್ವವಿದ್ಯಾಲಯವೂ ಕಲಿಸಲಾಗದ ಬದುಕಿನ ಪಾಠಗಳನ್ನು ನನಗೆ ಹೇಳಿಕೊಟ್ಟವಳು ಅವಳು, ರಮಣಿ!

ಅಲ್ಲಿದ್ದಾಗ ಮನೆಕೆಲಸಕ್ಕೆ ಬರುತ್ತಿದ್ದ ಹೆಂಗಸಿನ ಸುಮಾರು ನಾಲ್ಕು ವರ್ಷದ  ಮಗು ಒಮ್ಮೆ ಬಂದಿತ್ತು. ಅದೇನು ಅರಳು ಹುರಿದಂಥ ಮಾತು! ಆ ಧೈರ್ಯ, ಆತ್ಮವಿಶ್ವಾಸ, ನಿರ್ಭಿಡೆಯ ಮಾತು ನನ್ನನ್ನು ಮೈಮರೆಸುತ್ತಿತ್ತು. ಮನೆಯ ಎದುರಿಗಿದ್ದ ಪುಟ್ಟ ಜಾಗದಲ್ಲಿ ಹೂವಿನ ಪಾತಿ ಮಾಡಿ ಏನಾದರೂ ಬೆಳೆಯಲು ಪ್ರಯತ್ನಿಸುತ್ತಿದ್ದೆ. ಅವಳಿಗೆ ಅದರಲ್ಲಿ ನನಗೆ ಸಹಾಯ ಮಾಡಲು ಮಹಾ ಖುಷಿ.

‘ನಿಮ್ಮ ಮನೆಯಲ್ಲೂ ಪಾತಿ ಮಾಡಿದಾರಾ?’ ಎಂದು ಸುಮ್ಮನೆ ಮಾತಿಗೆ ಒಮ್ಮೆ ಕೇಳಿದ್ದೆ. ‘ನಮ್ಮನೆ ಮುಂದೆ ಲಾಲ್ ಬಾಗೇ ಇದೆಯಲ್ಲ?’ ಎಂದು ಫಟ್ಟನೆ ಹೇಳಿದಾಗ ಬೆಚ್ಚಿಬೀಳುವ ಹಾಗಾಯಿತು.

ಅದೊಂದು ಮಹಾವಾಕ್ಯದಂತೆ ಕೇಳಿಸಿತ್ತು.

ಲಾಲ್ ಬಾಗಿನ ಎದುರು ಇರುವ ಸ್ಲಮ್ಮಿನಲ್ಲಿ ಅವರದ್ದು  ಜೋಪಡಿ ವಾಸ. ಹೈದರ್ ಅಲಿ ಟಿಪ್ಪು ಸುಲ್ತಾನರು ದೇಶ ವಿದೇಶಗಳಿಂದ ತರಿಸಿ ಬೆಳೆಸಿರುವ ಅಪರೂಪದ ವೃಕ್ಷಗಳ ನಡುವೆಯೇ ಬೆಳೆಯುತ್ತಿರುವ ಮಗು ಅವಳು.

ನಾನು ಪಾಠ ಮಾಡುವ ಶೇಕ್ಸ್‌ಪಿರ್ ನೆನಪಾಗಿದ್ದ. ಅತ್ಯಂತ ಗಹನವಾದ ಸತ್ಯಗಳನ್ನು ಅವ ತುಂಬ ಗೌಣವಾದ ಪಾತ್ರಗಳ ಬಾಯಲ್ಲಿ ಹೇಳಿಸುತ್ತಾನೆ.

ಮಗು ಬೇಡವೇ ಎಂದು ಹಲವು ಮಂದಿ ಕೇಳಿದ್ದರು. ಭೂಮಿಯ ಮೇಲೆ ಎಷ್ಟೊಂದು ಮಕ್ಕಳಿವೆಯಲ್ಲ? ಎಂದು ಉತ್ತರಿಸಿದಾಗ ನನ್ನ ತಲೆಯಲ್ಲಿ ಇದ್ದದ್ದು ಈ ಹುಡುಗಿಯ ಮಾತೇ. ವೆಲ್ಲಿಂಗ್ಟನ್ನಿನ  ನಮ್ಮ ಮೂರಂತಸ್ತಿನ ಮನೆಯಲ್ಲಿ ಒಂದಕ್ಕಿಂತ ಹೆಚ್ಚು ಮಕ್ಕಳಿಗೆ ಜಾಗವಿತ್ತು. ಕಿವಿನಾಡಿನ ಸರಕಾರ ಹಲವಾರು ಮನೆಭೇಟಿ, ಮತ್ತು ಸಂದರ್ಶನಗಳ ನಂತರ ಹರಿ ಮತ್ತು ನಾನು  ವಿದ್ಯಾಭ್ಯಾಸದ ಮಟ್ಟದಲ್ಲಿ, ಬದುಕಿನ ಶೈಲಿಯಲ್ಲಿ, ಮತ್ತು ಆರ್ಥಿಕ ಮಟ್ಟದಲ್ಲಿ ದತ್ತು ತೆಗೆದುಕೊಳ್ಳಲು eminently qualified ಎಂದು ಶರಾ ಬರೆದು ಒಪ್ಪಿಗೆ ನೀಡಿತ್ತು. ಯುದ್ಧದಿಂದ ನಲುಗಿದ್ದ ದೇಶದ ಅಥವಾ ನಿರಾಶ್ರಿತ ಸಮುದಾಯದ ಮಗು ಎಂದು ನಿರ್ಧರಿಸಿದ್ದೆವು. ಆದರೆ ದತ್ತು ತೆಗೆದುಕೊಳ್ಳುವ ಪ್ರೊಸೀಜರ್ ಮಾತ್ರ ಸರಳವೇ ಅಲ್ಲ.  ಅದು ಎರಡು ದೇಶಗಳ ನಡುವೆ ನಡೆಯಬೇಕಾದ ಕಾಂಪ್ಲಿಕೇಟೆಡ್ ಪೇಪರ್ ವರ್ಕ್. ಶಕ್ತಿ ಮೀರಿ ಪ್ರಯತ್ನಿಸಿ ನಾನು ಹರಿ ಕೈ ಚೆಲ್ಲಿದ್ದೆವು.

ಮಹಾವಾಕ್ಯ ಹೊಮ್ಮುವುದು ಎಲ್ಲಿ? ತಲುಪುವುದು ಹೇಗೆ? ಋಷಿಗಳೇ ಆಗಬೇಕೆ?

ಭಾಷೆಯ ಅನಂತ ಸಾಧ್ಯತೆಗೆ ಮತ್ತೊಮ್ಮೆ ವಿಸ್ಮಯ ಮೂಡಿತ್ತು.