ತಮ್ಮೂರಿನ ಹೊಳೆಗೂ ಒಂದು ಪುರಾಣವಿರುವುದು ತಿಳಿದು ನೀಲಿಗೆ ಬಹಳ ಖುಶಿಯಾಯಿತು. ಮರುಕ್ಷಣವೇ ಇನ್ನಿಲ್ಲವಾಗುತ್ತಿರುವ ಹೊಳೆಯ ನೆನಪಾಗಿ ವಿಷಾದ ಆವರಿಸಿತು. ಅವಳ ಇತಿಹಾಸದ ಶಿಕ್ಷಕರು ಕಾಣೆಯಾಗಿರುವ ನದಿಗಳ ಬಗೆಗೆ ಎಷ್ಟೊಂದು ವಿಷಯಗಳನ್ನು ಹೇಳಿದ್ದರು. ತಮ್ಮೂರಿನ ಹೊಳೆ ಹೋಗಿ ಸೇರುವ ನದಿಯೆಲ್ಲಿಯಾದರೂ ಕಾಣೆಯಾದರೆ ಅದೊಂದು ವಿದ್ಯಮಾನವಾಗಿ ಉಳಿಯುತ್ತದೆ. ಹೊಳೆ ಕಾಣೆಯಾದರೆ ಹೇಳಹೆಸರಿಲ್ಲದೇ ಮರೆಯಾಗಿಬಿಡುತ್ತದೆ. ಹೀಗೆಲ್ಲ ಯೋಚನೆಗಳು ರಾತ್ರಿಯಿಡೀ ಅವಳನ್ನು ಕಾಡತೊಡಗಿದವು. ರಾತ್ರಿ ಅವಳ ಕನಸಿನಲ್ಲಿ ಹೊಳೆ ಮತ್ತೊಮ್ಮೆ ಮೈದುಂಬಿ ಸಳಸಳನೆ ಹರಿಯಿತು.
ಸುಧಾ ಆಡುಕಳ ಬರೆಯುವ “ಹೊಳೆಸಾಲು” ಅಂಕಣದ ಇಪ್ಪತ್ತೈದನೆಯ ಹಾಗೂ ಕೊನೆಯ ಕಂತು ನಿಮ್ಮ ಓದಿಗೆ

ಅದೊಂದು ಕಡು ಬೇಸಿಗೆಯ ಮುಂಜಾನೆ. ಪರೀಕ್ಷೆಗಳೆಲ್ಲ ಮುಗಿದ ನಿರಾಳತೆಯಲ್ಲಿ ನೀಲಿ ತಡವಾಗಿಯೇ ಎದ್ದಳು. ಇಡಿಯ ಹೊಳೆಸಾಲು ತನ್ನದೇ ಲೋಕದಲ್ಲಿ ಕಳೆದುಹೋಗಿದ್ದರಿಂದ ಒಬ್ಬಳೇ ಹೊರಟು ಕಾಲುಹಾದಿ ತುಳಿಯುತ್ತಾ ಹೊಳೆಯ ಬಳಿ ಸಾಗಿದಳು. ದೂರದಿಂದಲೇ ಕೇಳಿಬರುವ ಹೊಳೆಯ ಜುಳುಜುಳು ಗಾನ ಹೊಳೆಯಂಚಿಗೆ ಬಂದರೂ ಕೇಳುತ್ತಿರಲಿಲ್ಲ. ತಳದಲ್ಲಿ ಕಂಡೂ ಕಾಣದಂತೆ ಒಂದಿಷ್ಟು ನೀರು ಹರಿಯುತ್ತಿತ್ತು. ಪುಟ್ಟ ಕಲ್ಲು ಎಸೆದರೂ ಸಾಕು ಸಳ್ಳನೆ ಮೇಲೆದ್ದು ಬರುವ ಮೀನುಗಳ ಸುಳಿವೂ ಇರಲಿಲ್ಲ. ಹೊಳೆಯ ಹರಿವಿನುದ್ದಕ್ಕೂ ಹರಿಬಿಟ್ಟ ಕರೆಂಟ್ ಮಶೀನಿನ ಪೈಪುಗಳು ಕೊನೆಯ ಹನಿಯನ್ನೂ ಬಿಡಲಾರೆನೆಂಬ ಹಠದಲ್ಲಿ ನೀರನ್ನು ಹೀರುತ್ತಿದ್ದವು. ಪಾತ್ರೆ, ಬಟ್ಟೆ ತೊಳೆಯುವವರ ಮಾತುಕತೆಯಾಗಲೀ, ನೀರಿನಲ್ಲಿ ಗುಳುಂ ಎಂದು ಹಾರಿ ಆಟವಾಡುತ್ತಿದ್ದ ಮಕ್ಕಳ ಕಲರವವಾಗಲೀ, ಎತ್ತಿನ ಮೈ ತೊಳೆಸುವ ಗಂಡಸರ ಹೆಜ್ಜೆಯ ಗುರುತಾಗಲೀ ಇರಲಿಲ್ಲ. ನೆರಿಗೆ ಬಿದ್ದ ನಾಗಜ್ಜಿಯ ತೊಗಲಿನಂತೆ ಹೊಳೆಯು ನಿರ್ಜೀವಗೊಂಡಿತ್ತು. ಪ್ರವಾಸಕ್ಕೆ ಹೊರಟ ನೀಲಿಯ ಪುಟ್ಟ ಕೈಯ್ಯಲ್ಲಿದ್ದ ನಾಣ್ಯಗಳೆಲ್ಲವನ್ನೂ ತನ್ನೊಳಗೆ ಬಚ್ಚಿಟ್ಟುಕೊಂಡು ಅವಳನ್ನು ಇಡಿಯಾಗಿ ತೋಯಿಸಿದ ಹೊಳೆಯ ತುಂಟತನ ನೆನಪಾಗಿ ನೀಲಿ ವಿಷಾದದಲ್ಲಿ ಮುಳುಗಿದಳು.

ಬೇಸಿಗೆಯ ಕಡುಮಧ್ಯಾಹ್ನದಲಿ ಕಾಡಿನ ಒಡಲಿನಿಂದ ಗುರುಂ…. ಎನ್ನುವ ಶಬ್ದ ಎಡೆಬಿಡದೇ ಕೇಳಿಬರುತ್ತಿತ್ತು. ಅದೆಷ್ಟೋ ವರ್ಷಗಳಿಂದ ಕಾಡಿನಲ್ಲಿ ಬೆಳೆದುನಿಂತ ದೊಡ್ಡ ಮರಗಳನ್ನು ರೀಪು, ಪಕಾಸುಗಳಾಗಿ ಬದಲಾಯಿಸುವ ಗರಗಸದ ಸದ್ದು ಅದು ಎಂಬುದು ಹೊಳೆಸಾಲಿನ ಪುಟ್ಟ ಮಕ್ಕಳಿಗೂ ತಿಳಿದಿತ್ತು. ಆದರೆ ಕಾಡಿಗೆ ಇನ್ನು ಮನುಷ್ಯರು ಮತ್ತು ಸಾಕುಪ್ರಾಣಿಗಳ ಪ್ರವೇಶವಿಲ್ಲವೆಂದು ತಂತಿ ಬೇಲಿ ಕಟ್ಟಿ ಕಾಯುತ್ತಿದ್ದ ಫಾರೆಸ್ಟ್ ಇಲಾಖೆಯ ಸಿಬ್ಬಂದಿಗಳು ಮಾತ್ರ ಈ ಶಬ್ದಕ್ಕೆ ಕುರುಡಾಗಿದ್ದರು. ಸರಕಾರ ಕೊಡುವ ಅಲ್ಪ ಸಂಬಳಕ್ಕಿಂತ ತಿಂಗಳಿಗೊಮ್ಮೆ ಸಿಗುವ ಹೊಳೆಸಾಲಿನ ಗಿಂಬಳವೇ ಹೆಚ್ಚಾಗಿದ್ದುದೇ ಅವರ ಕಿವುಡುತನಕ್ಕೆ ಕಾರಣವಾಗಿತ್ತು. ಕಾಡಿಗೆ ಬೇಲಿಯೆದ್ದ ಬಳಿಕ ದನಕಾಯುವ ಕೆಲಸಕ್ಕೆ ವಿರಾಮ ಸಿಕ್ಕಿತ್ತು. ಹೊಳೆಸಾಲಿನ ದನಕರುಗಳೆಲ್ಲ ಹಟ್ಟಿಯಲ್ಲಿಯೇ ಬಂಧಿಯಾಗಿ ಒಣಹುಲ್ಲು ಮೇಯುತ್ತಿದ್ದವು. ತಾನು ಪುಟ್ಟ ಹುಡುಗಿಯಾಗಿದ್ದಾಗ ಕಾಡಿನಲ್ಲಿ ಬಾಯಾರಿಕೆಯಾಗಿ ಕಂಗೆಟ್ಟಾಗ ಪುಟ್ಟ ಬಾಯಿಗೆ ನೀರು ಸುರಿದ ಬಳ್ಳಿಗಳೆಲ್ಲ ಮರವು ನೆಲಸಮಗೊಂಡಾಗ ತಾವು ಉರುಳಿ ಚೆಲ್ಲಾಪಿಲ್ಲಿಯಾಗಿರಬಹುದೆಂಬ ಯೋಚನೆಯಿಂದ ನೀಲಿಯ ಕಣ್ಣಂಚಿನಲ್ಲಿ ನೀರಾಡಿತು.

ಸಂಜೆಯ ತಂಪಿನಲ್ಲಿ ಬಯಲಿಗಿಳಿದರೆ ಹಸಿರಿನ ಸುಳಿವೇ ಇರಲಿಲ್ಲ. ಕೆಮ್ಮಣ್ಣಿನ ಹೊದಿಕೆಯನ್ನು ಹೊದ್ದ ಗದ್ದೆಗಳು ಸುಟ್ಟ ಗಾಯದಂತೆ ಕಾಣುತ್ತಿದ್ದವು. ಗದ್ದೆಯಂಚಿನಿಂದ ತೇಲಿಬರುತ್ತಿದ್ದ ಸುವ್ವಿ ಹಾಡಿಗೆ ಹಂಬಲಿಸಿ ಗಾಳಿ ಅಲ್ಲೆಲ್ಲ ಸುಳಿಯುತ್ತಿರುವಂತೆ ನೀಲಿಗೆ ಅನಿಸಿತು. ಅಲ್ಲಲ್ಲಿ ಪೇರಿಸಿದ್ದ ಮಣ್ಣಿನ ಗುಪ್ಪೆಯ ಮೇಲೆ ಬದುಕಲೋ, ಬೇಡವೋ ಎಂಬಂತೆ ತೆಂಗು, ಕಂಗಿನ ಸಸಿಗಳು ತಲೆಬಗ್ಗಿಸಿ ನಿಂತಿದ್ದವು. ಊರ ಮಾರಿ ಪಲ್ಲಕ್ಕಿಯ ಮೇಲೆ ಬರುವಾಗ ಭತ್ತದ ರಾಶಿ ಕಂಡರೆ ತೂರಾಡಿಬಿಡುವಳೆಂದು ಗಡಬಡಿಸಿ ತುಂಬುತ್ತಿದ್ದ ದೃಶ್ಯಗಳು ನೀಲಿಯ ಕಣ್ಮುಂದೆ ಹಾದುಹೋದವು. ಹೊಳೆಸಾಲಿನ ಬದಲಾವಣೆಯ ಗಾಳಿ ಮಾರಿಗುಡಿಯನ್ನೂ ಮಾರ್ಪಡಿಸಿತ್ತು. ಸುತ್ತ ಎದ್ದುನಿಂತ ಚಂದ್ರಶಾಲೆ ಮತ್ತು ಕಟಾಂಜನ ಭಕ್ತರು ಮತ್ತು ದೇವಿಯ ಅಂತರವು ಹೆಚ್ಚುವಂತೆ ಮಾಡಿತ್ತು. ವರ್ಷದಲ್ಲೊಮ್ಮೆ ಬಲಿ ಪಡೆಯುವ ಕಾಲದಲ್ಲಿ ಪೂಜಾರಿಯ ಮೈಯ್ಯೇರಿ ಬಂದು ಊರ ಜನರ ಸುಖ-ದುಃಖಗಳನ್ನೆಲ್ಲ ವಿಚಾರಿಸಿ, ನೊಂದವರನ್ನೆಲ್ಲ ಸಂತೈಸಿ ಮರೆಯಾಗುವ ಮಾರಿ ಇದೀಗ ಪ್ರತಿವಾರವೂ ಬಂದು ಜನರ ಅಹವಾಲುಗಳನ್ನು ಸ್ವೀಕರಿಸುತ್ತಿದ್ದಳು. ಕಷ್ಟಪರಿಹಾರಕ್ಕೆ ಬಗೆಬಗೆಯ ಪೂಜೆಗಳು, ಹರಕೆಗಳು, ಅವುಗಳಿಗೆ ಸಂದಾಯವಾಗಬೇಕಾದ ಹಣದ ಮೊತ್ತವನ್ನು ಸೂಚಿಸುವ ಬೋರ್ಡುಗಳು ಗುಡಿಯ ಮುಂದೆ ರಾರಾಜಿಸುತ್ತಿದ್ದವು. ಊರ ಹಸುಗಳನ್ನು ಕಾಯುವ ಹುಲುಗಿರ್ತಿಗೀಗ ಪೂರ್ತಿ ನಿರುದ್ಯೋಗವಾಗಿ ಪೂಜೆಯೂ ಇಲ್ಲದಂತಾಗಿತ್ತು. ಹಳೆಯ ಪರಿಚಯದ ಹಿರಿಯರಷ್ಟೇ ವರ್ಷಕ್ಕೊಮ್ಮೆ ಕಾಲೆಳೆಯುತ್ತಾ ಹೋಗಿ ಹರಕೆ ಒಪ್ಪಿಸಿ ಬರುತ್ತಿದ್ದರು.

ಗೌಡಮಾಸ್ರ‍್ರು ನಿವೃತ್ತಿಯಾದ ಮೇಲೆ ಊರಿನ ಶಾಲೆಗೆ ಬಂದ ಹೊಸ ಅಕ್ಕೋರು ಪೇಟೆಯಿಂದ ಬೆಳಗಿನ ಬಸ್ಸಿಗೆ ಬಂದು ಸಂಜೆಯ ಬಸ್ಸಿಗೆ ಮರಳಿ ಹೋಗುತ್ತಿದ್ದುದರಿಂದ ಅವರ ಪರಿಚಯ ಊರಿನವರಿಗೆ ಅಷ್ಟಾಗಿ ಇರಲಿಲ್ಲ, ಅವರಿಗೂ ಊರಿನ ಪರಿಚಯವಿರಲಿಲ್ಲ. ಊರಿನವರ ಒತ್ತಾಸೆಯಿಂದ ಹೊಳೆಯ ಈಚೆಗೆ ಇತ್ತೀಚೆಗೆ ಒಂದು ಅಂಗನವಾಡಿ ತೆರೆದಿದ್ದರಿಂದ ಪುಟ್ಟ ಮಕ್ಕಳೀಗ ಕೋಳಿಗಳ ಹಿಂದೆ ಓಡುವುದನ್ನು ಬಿಟ್ಟು ಅಲ್ಲಿಗೆ ಹೋಗುತ್ತಿದ್ದರು. ಹದಿಹರೆಯದ ಮಕ್ಕಳೆಲ್ಲರೂ ಹೋಟೆಲ್ ಕೆಲಸ, ಮನೆಗೆಲಸ ಎಂದು ಊರನ್ನು ಬಿಟ್ಟಿದ್ದರು. ಉದಾಸಗೊಂಡ ನೀಲಿ ಸಂಜೆಯಿಳಿಯುವ ವೇಳೆಗಾಗಲೇ ಸಾತಜ್ಜಿಯ ಮನೆಯ ಬಾಗಿಲು ತಟ್ಟಿದಳು.

ಬಾಗಿದ ಬೆನ್ನಿನ ಸಾತಜ್ಜಿ ಕೋಲು ಊರಿಕೊಂಡು ಅಂಗಳದ ಅಂಚಿನಲ್ಲಿ ಬೆಳೆದ ಹರಿವೆಯ ಬುಡಗಳಿಗೆ ನೀರುಣಿಸುತ್ತಿದ್ದಳು. ನೀಲಿಯನ್ನು ಕಂಡವಳೇ, “ಬಾ ಕೂಸೇ, ನಿನ್ನ ಸಾಲೆಯ ಪರಿಕ್ಸಿಯೆಲ್ಲ ಮುಗೀತೇನೆ?” ಎಂದಳು. “ಆಯ್ತು ಸಾತಜ್ಜಿ, ಮತ್ತೀಗ ಎರಡು ತಿಂಗಳು ರಜೆ. ಅಯ್, ನಿಮ್ಮನೆಯ ಹರಿವೆ ಎಷ್ಟು ಚಂದ ಬೆಳದದೆ ಅಜ್ಜೀ” ಎನ್ನುತ್ತಾ ಕೆಂಪಗೆ ಅರಳಿದ್ದ ತಂಪು ಎಲೆಗಳನ್ನು ಕೈಯ್ಯಿಂದ ಸವರಿದಳು. “ಹರಿವೆ ಸೊಪ್ಪು ಬೆಳಸೋದಂದ್ರೆ ಹೆಣ್ಮಕ್ಕಳನ್ನು ಬೆಳೆಸಿದ ಹಾಗೆ ಕೂಸೆ. ತಿಂಡಿ, ತಿನಿಸು, ಪ್ರೀತಿ ಎಲ್ಲಾನೂ ಧಾರಾಳ ಕೊಟ್ರೆ ಸರಕ್ಕಂತ ಬೆಳೆದುಬಿಡ್ತವೆ. ಇದೆಲ್ಲ ಎಂಥಾ ಬೆಳೆ? ಮೊದಲು ನಮ್ಮ ಹೊಳಿ ತುಂಬಿ ಹರಿಯೋ ಹೊತ್ತಲ್ಲಿ ಗದ್ದೆ ಕೊಯ್ಲು ಮುಗೀತಂದ್ರೆ ಭತ್ತದ ಕೂಳಿಗಳನ್ನೆಲ್ಲ ಒತ್ತರೆ ಮಾಡಿ ಇಡಿ ಗದ್ದೆ ತುಂಬ ಹರಿವೆ ಬಿತ್ತತಿದ್ದೊ. ಕೋಳಿ ಪಿಷ್ಟಿ ಗೊಬ್ಬರ ಬೀರಿ ಹೊಳೆಯ ತಂಪು ನೀರನ್ನು ಕೊಡದಿಂದ ತಂದು ಕೈ ಅಡ್ಡವಿಟ್ಟು ನಿಧಾನವಾಗಿ ಸುರಿದರೆ ತಿಂಗಳೊಂದರಲ್ಲಿ ಇಡಿಯ ಗದ್ದೆ ಕೆಂಪು ಸೀರೆಯುಟ್ಟ ಹುಡುಗಿ ಹಂಗೆ ಕಾಣ್ತಿತ್ತು.” ಎಂದು ಬೊಚ್ಚು ಬಾಯಗಲಿಸಿ ನಕ್ಕಳು.

ಸಾತಜ್ಜಿಯ ಬಾಯಲ್ಲಿ ಹೊಳೆಯ ಮಾತು ಬಂದಿದ್ದೆ ನೀಲಿ ಕಣ್ಣರಳಿಸಿ ಕೇಳಿದಳು, “ಅಜ್ಜೀ, ನಮ್ಮೂರಿನ ಹೊಳೆಯ ಹೆಸರೇನು ಹೇಳು?” ಅಜ್ಜಿ ಕೆಂಪು ಹರಿವೆ ದಂಟನ್ನು ಚಟಚಟನೆ ಒಂದೊಂದೇ ಮುರಿಯುತ್ತಾ ಹೇಳಿದಳು, “ತೆಗಿ ಕೂಸೇ, ಹೊಳೆಗೆಲ್ಲಾ ಹೆಸರೆಲ್ಲಿ ಇರ್ತದೆ. ಊರಿನ ಹೆಸರನ್ನೇ ಹೊಳೆಗೂ ಇಡೋದು. ಇಕಾ, ಇದೀಗ ನಮ್ಮ ಊರಿನಲ್ಲಿ ಹರಿತದಲ್ಲ, ಅದ್ಕೆ ಈ ಹೊಳೆಗೆ ನಮ್ಮೂರಿನದೇ ಹೆಸರು.” ನೀಲಿ ಕೇಳಿದಳು, “ಅಲ್ಲಾ ಅಜ್ಜಿ, ಹೊಳೆ ಈಗ ಹರಿಯೋದನ್ನೇ ನಿಲ್ಲಿಸಿದೆಯಲ್ಲ, ಹಾಗಾದರೆ ನಮ್ಮೂರ ಹೊಳೆ ಬತ್ತಿ ಹೋಯ್ತು ಅಂದರೆ ಪುಸ್ತಕದಲ್ಲಿ ದಾಖಲಿಸೋದಕ್ಕಾದರೂ ಅದಕ್ಕೊಂದು ಹೆಸರು ಬೇಕಲ್ವೆ?” ಸಾತಜ್ಜಿ ಮುರಿದ ಹರಿವೆ ದಂಟುಗಳನ್ನು ಅಲ್ಲಿಯೇ ಬೆಳೆದ ಬಳ್ಳಿಯೊಂದನ್ನು ಕಿತ್ತು ಕಟ್ಟುತ್ತಾ ಹೇಳಿದಳು, “ಪುಸ್ಸಕದಾಗೆಲ್ಲ ಬರೋಕೆ ಅದೇನು ನದಿಯೆ? ಸಾಗರವೆ? ಯಕಶ್ಚಿತ್ ಒಂದು ಸಣ್ಣ ಹೊಳೆ ಮಗಳೇ. ನಮ್ಮೂರಿನಲ್ಲಿರೋ ಅದೆಷ್ಟೋ ಜನರು ಹುಟ್ಟವ್ರೆ, ಸತ್ತವ್ರೆ. ಅದೆಲ್ಲ ನಿಮ್ಮ ಪುಸ್ಸಕದಾಗೆ ಬಂದದ್ಯೆ? ಇದೂ ಹಂಗೆ. ಆದರೂ ಸಳಸಳ ಹರಿಯೋ ಹೊಳೆಯನ್ನು ಇಲ್ಲದಾಗೆ ಮಾಡಿ ಊರ ಜನ ಎಲ್ಲ ದೇವಿ ಶಾಪಕ್ಕೆ ಎದೆಯೊಡ್ಡಿದರಲ್ಲ ಅಂತ ಬ್ಯಾಜರಾಯ್ತದೆ ಮಗಳೇ. ಈ ಕಾಲ ಅಂಬೋದು ಕೂಡ ನೀರಿನಾಂಗೆ. ಹರಿತಾನೇ ಇರ್ತದೆ, ನೀರು ಬದಲಾದ ಹಾಗೆ ಕಾಲವೂ ಬದಲಾಗ್ತಾನೆ ಇರ್ತದೆ. ಕಲಿಗಾಲದಲ್ಲಿ ಹೀಗೆಲ್ಲ ನಡಿತದೆ. ಆ ಮಾದೇವಿ ನಿಮ್ಮನ್ನೆಲ್ಲ ಕಾಪಾಡಲಿ.” ಎಂದವಳೇ ಊರ ದೇವಿಮನೆಯಿದ್ದೆಡೆಗೆ ತಿರುಗಿ ಅಲ್ಲಿಂದಲೇ ಕೈಜೋಡಿಸಿದಳು. ಇನ್ನೇನು ಕತ್ತಲಿಳಿಯುವ ಹೊತ್ತಾದ್ದರಿಂದ ಸಾತಜ್ಜಿ ಕೊಟ್ಟ ಹರಿವೆ ಸೊಪ್ಪಿನ ಕಟ್ಟನ್ನು ಹಿಡಿದ ನೀಲಿ ಓಡುವ ನಡಿಗೆಯಲ್ಲಿ ಮನೆಯೆಡೆಗೆ ಬಂದಳು.

ರಾತ್ರಿಯೂಟದ ನಂತರ ಅಪ್ಪನ ಹಾಸಿಗೆಯಲ್ಲಿ ಕುಳಿತ ನೀಲಿ ಅಪ್ಪನಲ್ಲಿ ಕೇಳಿದಳು, “ನಿಮ್ಮ ಯಕ್ಷಗಾನದಲ್ಲಿ ಇದ್ದಬಿದ್ದ ದೇವರಿಗೆಲ್ಲ ಸ್ಥಳಪುರಾಣಗಳಿವೆಯಲ್ಲ, ಹಾಗೇ ನದಿಗಳಿಗೇನಾದರೂ ಸ್ಥಳಪುರಾಣಗಳಿವೆಯಾ?” ಅಪ್ಪ ಉತ್ಸಾಹದಿಂದ ಹೇಳಿದರು, “ಇಲ್ಲದೇ ಮತ್ತೆ? ಗಂಗಾನದಿಯನ್ನು ಭೂಮಿಗಿಳಿಸುವ ಯಕ್ಷಗಾನವನ್ನು ನೋಡಬೇಕು ನೀನು. ಮೇಳಿಗೆಯೂರಿನ ಸದಾನಂದ ಹೆಗಡೆಯವರ ಶಿವನನ್ನು ಮರೆಯಲಿಕ್ಕೇ ಸಾಧ್ಯವಿಲ್ಲ. ಭಗೀರಥ ತಪಸ್ಸು ಮಾಡಿ ಭೂಮಿಗೆ ಗಂಗೆಯನ್ನು ತರುವ ಸಂದರ್ಭದಲ್ಲಿ ಗಂಗೆಯು ದೇವಲೋಕದಿಂದ ಧುಮುಕಿ ಭೂಮಿ ಕೊಚ್ಚಿ ಹೋಗಬಾರದೆಂದು ಶಿವನ ಮೊರೆ ಹೋಗುತ್ತಾನೆ. ಗಂಗೆ ಭೂಮಿಗೆ ಬರುವ ದೃಶ್ಯದಲ್ಲಿ ಸದಾನಂದ ಹೆಗಡೆಯವರು ಬಿಚ್ಚುಮಂಡೆ ಮಾಡಿಕೊಂಡು ರಥವೇರಿ ನಿಲ್ಲುವ ಗಾಂಭೀರ್ಯವನ್ನು ನೋಡಬೇಕು ನೀನು. ಅಷ್ಟೇ ಚಂದದ ಗಂಗೆಯ ವೇಷ ಕೆಳಗಿನೂರಿನ ಗಜಾನನ ಹೆಗಡೆಯವರದ್ದು. ನೀಲಿಯ ಸೀರೆಯ ಸೆರಗನ್ನು ಗರಗರನೆ ತಿರುಗಿಸುತ್ತಾ ರಂಗಕ್ಕೆ ಬರುವ ಚಂದವನ್ನು ಯಾರೂ ಮರೆಯಲು ಸಾಧ್ಯವಿಲ್ಲ.” ಎನ್ನುತ್ತಾ ಗಂಗಾವತರಣ ಯಕ್ಷಲೋಕದೊಳಗೇ ಹೋಗಿಬಿಟ್ಟರು. “ಹಾಗಿದ್ರೆ ನಮ್ಮ ಹೊಳೆಗೂ ಹಾಗೆ ಸ್ಥಳಪುರಾಣವಿದೆಯಾ?” ಎಂದಳು. ಯಕ್ಷಲೋಕದ ಕನಸಿನಿಂದ ಈಚೆಗೆ ಬರಲು ಸಿದ್ಧವಿರದ ನೀಲಿಯ ತಂದೆ, “ಇಶ್ಶಿ.. ಹೊಳೆಗೆಲ್ಲ ಎಂಥಾ ಪುರಾಣವೆ?” ಎಂದು ಕೈಚೆಲ್ಲಿದರು. “ಮತ್ತೆ? ಸಾತಜ್ಜಿ ಹೇಳಿದ್ರು, ಹೊಳೆ ಕಳದೋದ್ರೆ ದೇವಿ ಮುನಿಸ್ಕೋತಾಳೆ ಅಂತ. ದೇವಿಗೂ, ಹೊಳೆಗೂ ಏನು ಸಂಬಂಧ?” ಎಂದಳು. ನೀಲಿಯ ಅಪ್ಪ ಕ್ಷಣಕಾಲ ಯೋಚಿಸಿ, “ಓ ಅದಾ, ಈ ಹೆಂಗಸರೆಲ್ಲ ಗದ್ದೆ ನೆಟ್ಟಿಯಲ್ಲಿ ಹಾಡ್ತಿದ್ರಲ್ಲ, ಸುವ್ವಿಹಾಡು. ಅದರಲ್ಲಿ ಏನೋ ಕಥೆ ಬರ್ತದೆ ಮಾರಾಯ್ತಿ. ಈಗೆಲ್ಲ ಮರ್ತೋದಹಾಗಾಗಿದೆ.” ಎನ್ನುತ್ತಾ ಮರೆವನ್ನು ನಟಿಸಿದರು. ನೀಲಿ ಬಡಪೆಟ್ಟಿಗೆ ಬಿಡುವ ಅಂದಾಜಿನಲ್ಲಿರಲಿಲ್ಲ. “ನೆನಪಿದ್ದಷ್ಟನ್ನು ಹೇಳು. ಈಗಂತೂ ಗದ್ದೆನೆಟ್ಟಿಯೂ ಇಲ್ಲ, ಸುವ್ವೀ ಹಾಡೂ ಇಲ್ಲ. ನನಗಾದರೂ ತಿಳಿದಿರಲಿ.” ಎಂದಳು.

ಅಪ್ಪ ನೆನಪಿನ ಕೋಶವನ್ನು ಬಿಡಿಸುತ್ತಾ ಹೋದರು, “ಇಲ್ಲಿಂದ ಐದು ಮೈಲು ದೂರ ಕಾಡಿನ ದಾರಿಯಲ್ಲಿ ನಡೆದರೆ ಕರಿಕಲ್ಲು ಎನ್ನುವ ಗುಡ್ಡ ಸಿಗುತ್ತದೆ. ಅಲ್ಲೊಂದು ದೇವಿಯ ಗುಡಿಯಿದೆ. ಅಲ್ಲಿರುವ ಕಾಡ ಜನರು ದೇವಿಗೆ ಪೂಜೆ, ಬಲಿ ಎಲ್ಲ ಮಾಡ್ತಾರೆ. ನಮ್ಮೂರ ದೇವಿಯಮ್ಮ ಮತ್ತು ಆ ಕರಿಕಲ್ಲ ದೇವಿಯಮ್ಮ ಇಬ್ಬರೂ ಒಂದೇ ತಾಯ ಮಕ್ಕಳು. ಅಕ್ಕ-ತಂಗಿ ಅಂದಮೇಲೆ ಮನೆಗೆ ಹೋಗೋದು, ಬರೂದು ಎಲ್ಲ ಇರಲೇಬೇಕಲ್ಲ. ಆ ತಾಯಿ ಇಲ್ಲಿಗೆ ಬರ್ತಿದ್ಲು, ಇವಳು ಅಲ್ಲಿಗೆ ಹೋಗ್ತಿದ್ಲು. ಎಲ್ಲ ನಡುರಾತ್ರಿಯಲ್ಲಿ ನಡೀತಿದ್ದ ಕಥೆ. ದೇವಿ ಹೋಗಿ, ಬಂದು ಮಾಡೋವಾಗ ಅವಳ ಗೆಜ್ಜೆ ನಾದ, ಕೈಬಳೆಗಳ ಕಿಣಿಕಿಣಿ ಎಲ್ಲ ಕೇಳ್ತಿತ್ತು ಅಂತ ನನ್ನಜ್ಜ ಚಿಕ್ಕವನಿರುವಾಗ ಅವನಜ್ಜ ಕಥೆ ಹೇಳಿದ್ದನಂತೆ. ಹೀಗೆ ನಡಿತಿರೋವಾಗ ಊರಿನಲ್ಲಿ ಜನರ ಸಂಖ್ಯೆ ಹೆಚ್ಚಾಯ್ತು, ಸೂಡಿ ಕಟ್ಟಿಕೊಂಡು ಆಚೆ ಈಚೆ ಓಡಾಡೋದೂ ಶುರುವಾಯ್ತು. ಅಕ್ಕ- ತಂಗೀರು ಹೋಗಿ ಬರೋದನ್ನು ಅವ್ರು, ಇವ್ರು ನೋಡತೊಡಗಿದರು. ಹಾಗೆ ನೋಡಿದವರೆಲ್ಲ ಚಳಿಜ್ವರ ಬಂದು ಸಾಯತೊಡಗಿದರು. ನಮ್ಮೂರ ನಾಗಪ್ಪಜ್ಜನ ಹಿರೀಕರಿಗೆ ಇದರಿಂದ ಬಾಳ ಬೇಜಾರಾಗಿ ಒಂದಿನ ಕರಿಕಲ್ಲು ಗುಡ್ಡಕ್ಕೆ ಹೋಗಿ ದೇವಿಯೆದುರು ಅಹವಾಲು ಇಟ್ಟರಂತೆ. “ಅರೆ ದೇವಿ, ನೀನು ನಿನ್ನ ತಂಗಿ ಮನೆಗೆ, ನಿನ್ನ ತಂಗಿ ನಿನ್ನ ಮನೆಗೆ ಬರೋದಕ್ಕೆ ನಮ್ಮದೇನೂ ತಕರಾರಿಲ್ಲ. ಆದರೆ ನೀವು ಓಡಾಡೋದನ್ನು ನೋಡಿದ ನಮ್ಮೂರ ಜನರನ್ಯಾಕೆ ಕೊಲ್ತೀರಿ? ನಿಮ್ಮ ದಾರಿ ನಿಮಗೆ ಕಂಡುಕೊಳ್ಲಿಕ್ಕೆ ಆಗ್ಲಿಲ್ಲ ಅಂದ್ರೆ ನೀವೆಂಥ ದೇವತೇರು ಮತ್ತೆ?” ಎಂದೆಲ್ಲ ಕೂಗಾಡಿ ಎಷ್ಟು ಹೊತ್ತಾದ್ರೂ ಉತ್ತರ ಬರದಿದ್ರಿಂದ ಸಿಟ್ಟು ಬಂದು ದೇವಿಗುಂಡಿಯೆದುರಿನ ದೊಡ್ಡ ಬಂಡೆಯನ್ನು ದೂಡಿಯೇಬಿಟ್ಟರಂತೆ. ಆ ನೋಡು ಬಸ್ ಅಂತ ಶಬ್ದ ಮಾಡುತ್ತ ಉಕ್ಕಿದ ನೀರಿನ ಬುಗ್ಗೆ ನಮ್ಮೂರಿನ ಹೊಳೆಯಾಗಿ ಹರಿಯಿತಂತೆ. ಅಲ್ಲಿಂದ ಮುಂದೆ ದೇವಿಯರ ಓಡಾಟವೆಲ್ಲ ಹೊಳೆಯ ನೀರಿನಲ್ಲೇ ಆದ್ದರಿಂದ ಶಬ್ದವಾಗಲೀ, ಗುರುತಾಗಲೀ ಕಾಣಿಸಲಿಲ್ಲ ಅಂತ ಒಂದು ಕತೆ ನೋಡು.” ಎಂದರು.

ತಮ್ಮೂರಿನ ಹೊಳೆಗೂ ಒಂದು ಪುರಾಣವಿರುವುದು ತಿಳಿದು ನೀಲಿಗೆ ಬಹಳ ಖುಶಿಯಾಯಿತು. ಮರುಕ್ಷಣವೇ ಇನ್ನಿಲ್ಲವಾಗುತ್ತಿರುವ ಹೊಳೆಯ ನೆನಪಾಗಿ ವಿಷಾದ ಆವರಿಸಿತು. ಅವಳ ಇತಿಹಾಸದ ಶಿಕ್ಷಕರು ಕಾಣೆಯಾಗಿರುವ ನದಿಗಳ ಬಗೆಗೆ ಎಷ್ಟೊಂದು ವಿಷಯಗಳನ್ನು ಹೇಳಿದ್ದರು. ತಮ್ಮೂರಿನ ಹೊಳೆ ಹೋಗಿ ಸೇರುವ ನದಿಯೆಲ್ಲಿಯಾದರೂ ಕಾಣೆಯಾದರೆ ಅದೊಂದು ವಿದ್ಯಮಾನವಾಗಿ ಉಳಿಯುತ್ತದೆ. ಹೊಳೆ ಕಾಣೆಯಾದರೆ ಹೇಳಹೆಸರಿಲ್ಲದೇ ಮರೆಯಾಗಿಬಿಡುತ್ತದೆ. ಹೀಗೆಲ್ಲ ಯೋಚನೆಗಳು ರಾತ್ರಿಯಿಡೀ ಅವಳನ್ನು ಕಾಡತೊಡಗಿದವು. ರಾತ್ರಿ ಅವಳ ಕನಸಿನಲ್ಲಿ ಹೊಳೆ ಮತ್ತೊಮ್ಮೆ ಮೈದುಂಬಿ ಸಳಸಳನೆ ಹರಿಯಿತು.

ಬೆಳಗಾಗುತ್ತಲೇ ನೀಲಿ ಸಡಗರದಿಂದ ಸಿದ್ಧಳಾಗತೊಡಗಿದಳು. ಇದ್ದಕ್ಕಿದ್ದಂತೆ ಹೊರಡುವ ತಯಾರಿ ನಡೆಸುತ್ತಿರುವ ಅವಳನ್ನು ಅಮ್ಮ ಪ್ರಶ್ನಾರ್ಥಕವಾಗಿ ನೋಡಿದಳು. ನೀಲಿ ತನ್ನ ಪುಟ್ಟ ಚೀಲವನ್ನು ಹೆಗಲಿಗೇರಿಸುತ್ತ ಅಮ್ಮನಿಗೆ ಹೇಳಿದಳು, “ಅಮ್ಮಾ, ನಾಳೆಯಿಂದ ಅಣ್ಣನಿಗೆ ರಜೆ. ಅವನೂ ಇಲ್ಲಿಗೆ ಬರುತ್ತಾನೆ. ಅದಕ್ಕೆ ಇವತ್ತೇ ಅವನಿರುವಲ್ಲಿಗೆ ಹೋಗಿ ನಗರದ ಕಾಲೇಜಿನ ಅರ್ಜಿಫಾರಂ ಅನ್ನು ತೆಗೆದುಕೊಂಡು ಬರ್ತೇನೆ. ಹಾಗೆಯೇ ಹತ್ತಿರದಲ್ಲಿರುವ ಹುಡುಗಿಯರ ಹಾಸ್ಟೆಲ್ಲಿಗೂ ಅರ್ಜಿ ಸಲ್ಲಿಸಲು ಏನೇನು ಬೇಕು ಎಂದೆಲ್ಲ ಮಾತಾಡಿ ಬರ್ತೇನೆ.” ಎಂದಳು. ಅಮ್ಮ ಕಳವಳದಿಂದ, “ಅಲ್ಲಾ ಮಗ, ಹುಡುಗಿಯಾಗಿ ನಿನಗೆ ಕಾಲೇಜು, ಗಿಲೇಜು ಎಲ್ಲ ಬೇಕಾ? ಇಲ್ಲೇ ನಿನ್ನ ಶಾಲೆಯ ಹತ್ತಿರವೇ ಯುವತಿ ಮಂಡಲದಿಂದ ಹೊಲಿಗೆ ತರಬೇತಿಯನ್ನು ಈ ವರ್ಷವೇ ಶುರು ಮಾಡ್ತಾರಂತೆ. ನೀನೂ ಸೇರಿ ಹೊಲಿಗೆ, ನೇಯ್ಗೆ ಎಲ್ಲ ಕಲಿತರೆ ಸಾಕಲ್ಲ?” ಎಂದಳು. ನೀಲಿ ಅಮ್ಮನನ್ನು ಅಪ್ಪಿ ಮುದ್ದಾಡುತ್ತಾ, “ಅಮ್ಮಾ, ಹೊಲಿಗೆ, ನೇಯ್ಗೆ ಎಲ್ಲಾ ನೀನು ಕಲಿ. ನಿನಗೆ ಅದೆಲ್ಲ ಎಷ್ಟು ಇಷ್ಟ ಅಂತ ನನಗೆ ಗೊತ್ತು. ನಾನು ಮಾತ್ರ ಕಾಲೇಜಿಗೆ ಹೋಗಿ ನನಗೆ ಬೇಕಾದ್ದನ್ನು ಕಲಿತೇನೆ.” ಎಂದಳು. ಅಮ್ಮ ಅವಳ ಕೈಯ್ಯಿಂದ ಬಿಡಿಸಿಕೊಳ್ಳುತ್ತಾ, “ಅಪ್ಪನ್ನ ಒಂದ್ಮಾತು ಕೇಳು ಮಾರಾಯ್ತಿ. ಒಬ್ಳೇ ಆ ದೂರದ ಊರಿನಲ್ಲಿ ಇರೋದಂದ್ರೆ ನಂಗಂತೂ ಹೆದರಿಕೆ” ಎಂದಳು. “ಅರೆ! ನಾನೆಲ್ಲಿ ಒಬ್ಳೇ ಹೋಗ್ತಿದ್ದೇನೆ. ಹೊಳೆಸಾಲಿನ ಹುಡುಗಿ ನಾನು. ನನ್ನ ಜತೆ ಹೊಳೆನೂ ಬರತ್ತೆ. ಇಗಾ, ನಿನ್ನೆ ನಮ್ಮೂರ ಸಾತಜ್ಜಿ ಹೇಳಿದ್ರು, ನಮ್ಮೂರ ಹೊಳೆಗೆ ಹೆಸರೇ ಇಲ್ಲ. ಆದ್ರೆ ಅದು ಹೋಗಿ ಸೇರೋ ನದಿಗೆ ಹೆಸರಿದೆ ಅಂತ. ಆ ಹೆಸರಿರೋ ನದಿ ಹರಿತಾ ಇರೋದು ಅದೇ ಪೇಟೆಯ ಪಕ್ಕ ಗೊತ್ತಾ? ಹಾಗಾಗಿ ಹೊಳೆಯ ಹಾಗೆ ನಾನು ಹರಿದು ನದಿ ಹತ್ರ ಹೋಗ್ತಿದ್ದೇನೆ ಅಷ್ಟೆ.” ಎಂದವಳೇ ಅಮ್ಮನನ್ನು ಎತ್ತಿಹಿಡಿದು ಹರ‍್ರೇ… ಎಂದಳು. “ಅಯ್ಯೋ, ಬಿಡು ಮಾರಾಯ್ತಿ. ನೀನೋ, ನಿನ್ನ ಮಾತೋ? ಏನೊಂದು ಅರ್ಥವಾಗ್ತಿಲ್ಲ. ಈಗ ಜಾಗ್ರತೆಯಾಗಿ ಹೋಗಿಬಾ” ಎಂದು ಕೈಬೀಸಿದಳು.

ದಡತುಂಬಿ ಹರಿವ ಹೊಳೆಯ ಉತ್ಸಾಹವನ್ನು ಮೈದುಂಬಿಕೊಂಡ ನೀಲಿ ಹೊಳೆಸಾಲನ್ನು ತನ್ನ ಹಿಂದೆ ಬಿಟ್ಟು ಮುಂದೆ ನಡೆಯತೊಡಗಿದಳು.

(ಅಂಕಣ ಮುಗಿಯಿತು…)