ಅಡೋನೀಸ್ ಅವರ ಕಾವ್ಯ ಮತ್ತು ವಿಮರ್ಶೆ ಅರೇಬಿಕ್ ಕಾವ್ಯದ ಬೆಳವಣಿಗೆಯ ಮೇಲೆ ದೂರಗಾಮಿ ಪ್ರಭಾವ ಬೀರಿವೆ. ಶಾಸ್ತ್ರೀಯ ಕಾವ್ಯದಲ್ಲಿ ಆಳವಾಗಿ ಬೇರೂರಿದ್ದಾಗ್ಯೂ ಸಮಕಾಲೀನ ಅರೇಬಿಕ್ ಸಮಾಜದ ಅವಸ್ಥೆ ಮತ್ತು ಪ್ರತಿಕ್ರಿಯೆಗಳನ್ನು ತೋರಿಸುವಂತಹ ಹೊಸ ಕಾವ್ಯಾತ್ಮಕ ಭಾಷೆ ಮತ್ತು ಲಯಗಳನ್ನು ಸೃಷ್ಟಿಸಿದೆ.
ಎಸ್. ಜಯಶ್ರೀನಿವಾಸ ರಾವ್ ಬರೆಯುವ “ಲೋಕ ಕಾವ್ಯ ವಿಹಾರ” ಸರಣಿಯಲ್ಲಿ ಸಿರಿಯಾ (Syria) ದೇಶದ ಅರೇಬಿಕ್ (Arabic) ಭಾಷಾ ಕವಿ ಅಡೋನೀಸ್-ರವರ (Adonis – Ali Ahmad Said Esber) ಕಾವ್ಯದ ಕುರಿತ ಬರಹ ಹಾಗೂ ಅವರ ಕೆಲವು ಅನುವಾದಿತ ಕವಿತೆಗಳು ನಿಮ್ಮ ಓದಿಗೆ
“ಅಡೋನೀಸ್” ಎಂಬುದು ಅಲಿ ಅಹ್ಮದ್ ಸಯಿದ್ ಎಸ್ಬರ್ ಅವರ ಕಾವ್ಯನಾಮ. 1930-ರಲ್ಲಿ ಸಿರಿಯಾ ದೇಶದ ಕಸ್ಸಾಬಿನ್ ಗ್ರಾಮದಲ್ಲಿ ಜನಿಸಿದ ಇವರು, ಹದಿಮೂರು ವರ್ಷದ ಹುಡುಗನಾಗಿದ್ದಾಗಲೇ ತಾನೊಬ್ಬ ಕವಿಯಾಗುವೆನೆಂದು ತಿಳಿದಿದ್ದರು. ಸಿರಿಯಾ ದೇಶದ ರಾಷ್ಟ್ರಪತಿ ಶುಕ್ರಿ ಅಲ್-ಕುವೈತ್ಲಿ ತಮ್ಮ ಗ್ರಾಮಕ್ಕೆ ಬರುತ್ತಿದ್ದಾರೆಂದು ತಿಳಿದಾಗ, ಆ ಹುಡುಗ ರಾಷ್ಟ್ರಪತಿಯ ಸಮ್ಮುಖದಲ್ಲಿ ಒಂದು ಕವಿತೆಯನ್ನು ಓದಲು ಹತ್ತಿರದ ಪಟ್ಟಣಕ್ಕೆ ಕಾಲ್ನಡಿಗೆಯಲ್ಲಿ ಪಯಣಿಸಿದನು. ಆಶ್ಚರ್ಯವೆಂಬಂತೆ, ಆ ಬಾಲಕವಿ ತನ್ನ ಕವಿತೆಯನ್ನು ರಾಷ್ಟ್ರಪತಿಯ ಎದುರು ಓದಿದನು, ಹಾಗೂ ಈ ಕವಿತೆಯನ್ನು ಮೆಚ್ಚಿದ ರಾಷ್ಟ್ರಪತಿ ಪ್ರತಿಯಾಗಿ ಅವನಿಗೆ ಶಿಕ್ಷಣದ ಭರವಸೆ ನೀಡಿದರು. ಅಡೋನೀಸ್-ರ ಜೀವನದ ಕಥೆಯಲ್ಲಿ ಇಂತಹ ಅಸಾಧ್ಯ ವಿಷಯಗಳು ಯಾವಾಗಲೂ ಕಂಡುಬರುತ್ತವೆ.
ಅವರ ಹಳ್ಳಿಯಿಂದ ಅವರು ಓದಿಗಾಗಿ ಡಮಾಸ್ಕಸ್-ಗೆ, ನಂತರ ಲೆಬೆನಾನ್ ದೇಶದ ರಾಜಧಾನಿ ಬೆಯ್ರೂತ್-ಗೆ ತೆರಳಿದರು. ಬೆಯ್ರೂತ್-ನಲ್ಲಿ ಅವರು ‘ಶಿರ್’ ಎಂಬ ಹೆಸರಿನ ಪತ್ರಿಕೆಯನ್ನು ಸ್ಥಾಪಿಸಿದರು. ಈ ಪತ್ರಿಕೆಯು ಇಪ್ಪತ್ತನೇ ಶತಮಾನದ ಅರೇಬಿಕ್ ಆಧುನಿಕತಾವಾದಿ ಯೋಜನೆಯಲ್ಲಿ ಕೆಲವು ಮೂಲಭೂತ ವಿಚಾರಗಳು ಮತ್ತು ನಿಲುವುಗಳಿಗೆ ವೇದಿಕೆಯಾಗಿತ್ತು. ಅಡೋನೀಸ್ ಯಾವಾಗಲೂ ಹಳೆಯ ಮತ್ತು ಹೊಸ, ಸಂಪ್ರದಾಯ ಮತ್ತು ನವ್ಯವಿಚಾರಧಾರೆಗಳ ಮುಖಾಮುಖಿಯಲ್ಲಿ ಮತ್ತು ಬದಲಾವಣೆ ಮತ್ತು ವಿವಾದದ ಗಡಿಗಳಲ್ಲಿರುತ್ತಾರೆ. ಅವರ ಕವನ ಸಂಕಲನಗಳ ಸುದೀರ್ಘ ಪಟ್ಟಿಯಲ್ಲಿ ಅವರು ಅರೇಬಿಕ್ ಕಾವ್ಯರೂಪಗಳೊಂದಿಗೆ ಆಟವಾಡುತ್ತಾರೆ, ನಿರಂತರವಾಗಿ ವಿಕಸನಗೊಳ್ಳುತ್ತಿರುವ ಅರೇಬಿಕ್ ಕವಿತೆಯನ್ನು ನಿರ್ಮಿಸಲು ಹಳೆಯ ಕಾವ್ಯರೂಪಗಳನ್ನು ಒಡೆಯುತ್ತಾರೆ. ಇವುಗಳಲ್ಲಿ ಕೆಲವು ಶೀರ್ಷಿಕೆಗಳೆಂದರೆ The Songs of Mihyar the Damascene, A Time Between Ashes and Roses, Concerto al-Quds ಹಾಗೂ ಇನ್ನೂ ಅನುವಾದವಾಗದೇ ಇರುವ Mufrad bi- s̩īghat al-jamʿ (Singular in Plural Form) ಹಾಗೂ al-Kitab (The Book).
1961-ರಲ್ಲಿ ಪ್ರಕಟವಾದ ಅಡೋನೀಸ್ ಅವರ ಮೂರನೇ ಕವನ ಪುಸ್ತಕ, Songs of Mihyar the Damascene, ಆಗ ಅಸ್ತಿತ್ವದಲ್ಲಿದ್ದ ಅರೇಬಿಕ್ ಕಾವ್ಯಲಕ್ಷಣಗಳನ್ನು ನಿರ್ಣಾಯಕವಾಗಿ ಭೇದಿಸಿತು ಹಾಗೂ ಅರೇಬಿಕ್ ಕಾವ್ಯಾತ್ಮಕ ಭಾಷೆಯಲ್ಲಿ ಹೊಸ ತಿರುವನ್ನು ತಂದಿತು. 141 ಪದ್ಯಗಳನ್ನು (ಹೆಚ್ಚಾಗಿ ಸಣ್ಣ ಪದ್ಯಗಳು) ಏಳು ವಿಭಾಗಗಳಲ್ಲಿ ಜೋಡಿಸಿದ ಕಾವ್ಯಸರಣಿಯಿದು. ಮೊದಲ ಆರು ವಿಭಾಗಗಳು ‘ಕೀರ್ತನೆಗಳಿಂದ’ (psalms) ಪ್ರಾರಂಭವಾಗುತ್ತವೆ ಮತ್ತು ಅಂತಿಮ ವಿಭಾಗವು ಏಳು ಸಣ್ಣ ಚರಮಗೀತೆಗಳ ಸರಣಿಯಾಗಿದೆ. ಈ ಕಾವ್ಯಸರಣಿಯಲ್ಲಿ ಕವಿಯು ಹನ್ನೊಂದನೇ ಶತಮಾನದ ಆರಂಭದಲ್ಲಿ, ಈಗಿರುವ ಇರಾನ್ ದೇಶದ ಡೇಯ್ಲಾಮ್ ನಗರದ ಖ್ಯಾತ ಹೆಸರಾದ ಮಿಹ್ಯಾರ್-ನ ಪ್ರತಿಮೆಯನ್ನು ಸಮಕಾಲೀನ ಡಮಾಸ್ಕಸ್-ಗೆ ವರ್ಗಾಯಿಸುತ್ತಾನೆ. ಮಿಹ್ಯಾರ್-ನ ಬಗ್ಗೆಯಿರುವ ಈ ಪದ್ಯಗಳು ಒಂದು ಸರಣಿ ಅಥವಾ ಸುಳಿಯ ರೂಪದಲ್ಲಿ, ನಿರೂಪಣೆಯಲ್ಲದ ‘ತುಣುಕುಗಳ’ ಮಾದರಿಯಲ್ಲಿ ಬರೆಯಲಾಗಿ, ಮಿಹ್ಯಾರ್-ನ ಪಾತ್ರವನ್ನು ಭಾಷೆಯ ಕಾರ್ಯಯಂತ್ರದ ಆಳದಲ್ಲಿ ಇರಿಸಲಾಗಿದೆ. ಇಲ್ಲಿ ವೈಯಕ್ತಿಕ ಆಯ್ಕೆಯನ್ನು ಹಾಗೆಯೇ ಉಳಿಸಿ, ಕವಿಯು ಪದ್ಯಗಳಲ್ಲಿ ‘ನಾನು’ ಎಂಬುದನ್ನು ಕಿತ್ತು ತೆಗೆಯುತ್ತಾರೆ.
ಅರೇಬಿಕ್ ಕಾವ್ಯದಲ್ಲಿ ಔಪಚಾರಿಕ ರಚನೆಯ ಸಂಪ್ರದಾಯವನ್ನು ಮುರಿದು, ಅಡೋನೀಸ್-ರು ಮುಕ್ತ ಪದ್ಯ, ವ್ಯತ್ಯಾಸಿ ಛಂದಸ್ಸು (variable meters), ಮತ್ತು ಗದ್ಯ ಕಾವ್ಯಗಳೊಂದಿಗೆ ಪ್ರಯೋಗಗಳನ್ನು ಮಾಡುತ್ತಾ, ಗಡಿಪಾರು ಮತ್ತು ರೂಪಾಂತರದ ವಿಷಯಗಳನ್ನು ಏಕಕಾಲದಲ್ಲಿ ವಿನೋದಾತ್ಮಕ ಮತ್ತು ಪ್ರವಾದಿಯ ಧ್ವನಿಯಲ್ಲಿ ಬರೆಯುತ್ತಾರೆ. 2010-ರ ಸಂದರ್ಶನವೊಂದರಲ್ಲಿ ಅಡೋನೀಸ್-ರು ಹೀಗೆ ಹೇಳಿದರು, “ನಾನು ಅರಬ್ ಸಂಪ್ರದಾಯ ಮತ್ತು ಪುರಾಣಗಳಿಗೆ ಕಟ್ಟುಬೀಳದೇ ಅವುಗಳಿಂದ ತೆಗೆದುಕೊಳ್ಳಲು ಬಯಸುವೆ; ನಾನು ಕಾವ್ಯಾತ್ಮಕ ಪಠ್ಯದ ರೇಖಾತ್ಮಕತೆಯನ್ನು ಮುರಿಯಲು ಬಯಸುತ್ತೇನೆ – ಅದನ್ನು ಅಸ್ತವ್ಯಸ್ತವಾಗಿಸಲು, ಅಂದುಕೊಳ್ಳಿ. ಕವಿತೆಯು ಒಂದೇ ಹಗ್ಗದ ನೇರ ಆಲೋಚನೆಗಿಂತ ಹೆಚ್ಚಾಗಿ ಒಂದು ಜಾಲದಂತಿರಬೇಕು.”
ಅಡೋನೀಸ್-ರು ತನ್ನ ವಿಮರ್ಶಕರಿಗೆ ಅವರು ಕಾಪಾಡಲೆಂದು ಹೊರಟಿರುವ ಪರಂಪರೆಯ ಬಗ್ಗೆ ಎಷ್ಟು ಕಡಿಮೆ ತಿಳಿದಿದ್ದಾರೆ ಎಂಬುದನ್ನು ತೋರಿಸಿವುದೇ ತನ್ನ ಧ್ಯೇಯವನ್ನಾಗಿ ಮಾಡಿದರು. ಅವರು ಹನ್ನೆರಡು ವರ್ಷಗಳ ಕಾಲ ಅರೇಬಿಕ್ ಕಾವ್ಯ, ತತ್ವಶಾಸ್ತ್ರ ಮತ್ತು ನ್ಯಾಯಶಾಸ್ತ್ರದ ಗ್ರಂಥಗಳಲ್ಲಿ ಮುಳುಗಿದರು. ಇದರ ಫಲಿತಾಂಶವಾಗಿ ಅವರು ವಿಶ್ವಕೋಶಗಳಿಗೆ ಹೋಲುವಂತಹ ವಿಸ್ತಾರದ ಎರಡು ಕೃತಿಸಂಗ್ರಹಗಳನ್ನು ಪ್ರಕಟಿಸಿದರು: ಮೂರು-ಸಂಪುಟಗಳ Anthology of Arabic Poetry (1964-68), ಇದು ಆರನೇಯ ಶತಮಾನದಿಂದ ಹತ್ತೊಂಬತ್ತನೇ ಶತಮಾನದವರೆಗಿನ ಕವಿತೆಗಳನ್ನು ಒಳಗೊಂಡಿವೆ, ಮತ್ತು ಐತಿಹಾಸಿಕ ವಿಮರ್ಶೆಯ ನಾಲ್ಕು-ಸಂಪುಟಗಳ ಕೃತಿ, The Fixed and the Transformative (1974). ಈ ಎರಡೂ ಕೃತಿಗಳಲ್ಲಿ, ಶಾಸ್ತ್ರೀಯ ಪರಂಪರೆಯೊಳಗೆ ಸಮಾಧಿಯಾಗಿರುವ “ಆಧುನಿಕ” ಪ್ರತಿ-ಪರಂಪರೆಯನ್ನು ಕಂಡುಕೊಳ್ಳುವುದಾಗಿ ಅಡೋನೀಸ್-ರು ಹೇಳಿಕೊಂಡಿದ್ದಾರೆ. ಅಬ್ಬಾಸಿಡದ್ ಕವಿಗಳು, ಸೂಫಿ ಶೇಖ್‌ಗಳು, ಶಿಯಾ ದೈವಗಳು ಮತ್ತು ಆಂಡಲೂಸಿಯನ್ ತತ್ವಜ್ಞಾನಿಗಳ ಬರಹಗಳಲ್ಲಿ, ಸಾಂಪ್ರದಾಯಿಕತೆಯನ್ನು ತಿರಸ್ಕರಿಸಿದ ಭಿನ್ನಮತೀಯರ ಪರಂಪರೆಯನ್ನು ಕಂಡುಕೊಂಡರು. ಏಕೀಕೃತ ಸಂಪ್ರದಾಯ ಎಂಬುದೇ ಇಲ್ಲ ಎಂಬುದಕ್ಕೆ ಇಲ್ಲಿ ಪುರಾವೆ ಸಿಕ್ಕಿತು. ಬದಲಾಗಿ, ಭೂತಕಾಲದಲ್ಲಿ ಅನೇಕ ಭೂತಕಾಲಗಳು ಇರುವುದು ಮತ್ತು ಇವುಗಳಲ್ಲಿ ಕೆಲವು ವರ್ತಮಾನದಲ್ಲಿ ಉಪಯುಕ್ತವಾಗಲೂಬಹುದು ಎಂದು ಅರಿತರು.

ಅವರ ಪುಸ್ತಕ Identité inachevée ನಲ್ಲಿ ಅವರು, “ಧರ್ಮವೆಂಬುದು ಇಡೀ ಸಮಾಜದ ಮೇಲೆ ಹೇರಿದ ಒಂದು ಸಂಸ್ಥೆಯಾಗಿದೆ (institution), ಈ ಧರ್ಮವನ್ನು ನಾನು ವಿರೋಧಿಸುತ್ತೇನೆ, ಆದರೆ ವೈಯಕ್ತಿಕ ಧಾರ್ಮಿಕ ಸ್ವಾತಂತ್ರ್ಯವನ್ನು ನಾನು ಬೆಂಬಲಿಸುತ್ತೇನೆ,” ಎಂದೆನ್ನುತ್ತಾರೆ. ಅವರು ತಮ್ಮನ್ನು ಒಬ್ಬ “ವಿಧರ್ಮಿ ಅನುಭಾವಿ” (pagan mystic) ಎಂದು ವರ್ಣಿಸುತ್ತಾರೆ. ಈ ವರ್ಣನೆಯನ್ನು ವಿವರಿಸುತ್ತಾ, ಅವರು ಹೇಳುತ್ತಾರೆ:
“ನನ್ನ ಅರ್ಥದಲ್ಲಿ ಅನುಭಾವವು ಈ ಕೆಳಗಿನ ಅಂಶಗಳ ಮೇಲೆ ಸ್ಥಾಪಿತವಾಗಿದೆ: ಮೊದಲನೆಯದಾಗಿ, ವಾಸ್ತವವೆಂಬುದು ಸಮಗ್ರವಾದದ್ದು, ಮಿತಿಯಿಲ್ಲದ್ದು, ಹಾಗೂ ಅನಿಯಂತ್ರಿತವಾದದ್ದು; ಇದು ನಮಗೆ ಬಹಿರಂಗಪಡಿಸಿದಂತಹದ್ದು ಹಾಗೂ ಕಾಣುವಂತಹದ್ದು; ಹಾಗೂ, ಅದೃಶ್ಯವಾಗಿರುವ ಮತ್ತು ನಮ್ಮಿಂದ ಮರೆಮಾಡಲಾಗಿರುವಂತಹದ್ದು – ಇವೆರಡೂ ಆಗಿವೆ. ಎರಡನೆಯದಾಗಿ, ನಮಗೆ ಕಾಣುವಂತಹದ್ದು ಮತ್ತು ಬಹಿರಂಗಪಡಿಸಿದಂತಹದ್ದು ಸತ್ಯದ ನಿಜವಾದ ಅಭಿವ್ಯಕ್ತಿಯಾಗಿರುವುದಿಲ್ಲ; ಇದು ಬಹುಶಃ ಸತ್ಯದ ಮೇಲ್ನೋಟದ, ಕ್ಷಣಿಕ, ಅಲ್ಪಕಾಲಿಕ ಅಂಶದ ಅಭಿವ್ಯಕ್ತಿಯಾಗಿರುವುದು. ವಾಸ್ತವವನ್ನು ಸತ್ಯವಾಗಿ ವ್ಯಕ್ತಪಡಿಸಲು ಸಾಧ್ಯವಾಗಬೇಕಾದರೆ, ಮರೆಮಾಚಿರುವುದನ್ನು ಹುಡುಕಿ ತೆಗೆದು ನೋಡುವ ಪ್ರಯತ್ನ ಸಹ ಮಾಡಬೇಕು. ಮೂರನೆಯದಾಗಿ, ಸತ್ಯವು ಸಿದ್ಧವಾದುದಲ್ಲ, ಪೂರ್ವನಿರ್ಮಿತವಾದುದಲ್ಲ…. ನಾವು ಪುಸ್ತಕಗಳಿಂದ ಸತ್ಯವನ್ನು ಕಲಿಯುವುದಿಲ್ಲ! ಸತ್ಯವನ್ನು ಹುಡುಕಬೇಕು, ಅಗೆಯಬೇಕು, ಕಂಡುಹಿಡಿಯಬೇಕು. ಇದರ ತಾತ್ಪರ್ಯವೇನೆಂದರೆ, ಪ್ರಪಂಚವು ಒಂದು ಪೂರ್ಣವಾದ ಕಾರ್ಯವಲ್ಲ. ಇದು ಪ್ರತಿಮೆಗಳು, ಸಂಬಂಧಗಳು, ಭಾಷೆಗಳು, ಪದಗಳು ಮತ್ತು ವಸ್ತುಗಳ ನವೀಕರಣದಲ್ಲಿ, ಹಾಗೂ ದಿವ್ಯಜ್ಞಾನ, ಸೃಷ್ಟಿ, ಹಾಗೂ ನಿರ್ಮಾಣಗಳ ನಿರಂತರವಾಗಿ ಹೊಳೆಯುವ ಬೆಳಕಿನಲ್ಲಿ ಇರುತ್ತವೆ.”
ಫ್ರಾನ್ಸ್‌ನಲ್ಲಿ ಅವರ ಪುಸ್ತಕ Adoniada-ದ ಬಿಡುಗಡೆಯ ಸಂದರ್ಭದಲ್ಲಿ ಸಂದರ್ಶನವೊಂದರಲ್ಲಿ ಅವರು ತಮ್ಮ ದೃಷ್ಟಿಯಲ್ಲಿ ಧರ್ಮ ಮತ್ತು ಕಾವ್ಯಗಳು ವಿರೋಧಾತ್ಮಕವಾಗಿವೆ, ಏಕೆಂದರೆ “ಧರ್ಮವು ಒಂದು ಸಿದ್ಧಾಂತವಾಗಿದೆ, ಅದು ಒಂದು ಉತ್ತರವಾಗಿದೆ, ಆದರೆ ಕಾವ್ಯವು ಯಾವಾಗಲೂ ಪ್ರಶ್ನೆಯಾಗಿ ಉಳಿಯುತ್ತದೆ” ಎಂದು ಹೇಳಿದರು.
“ತಮ್ಮ ಕಾವ್ಯ ಮತ್ತು ವಿದ್ವತ್ ಬರಹಗಳ ಮೂಲಕ ಅಡೋನೀಸ್ ಸದಾ ಪ್ರಯತ್ನಿಸಿದ್ದು ಭಾಷೆಯನ್ನು, ಕಾವ್ಯವನ್ನು ಪುನರ್‌ರೂಪಿಸಿಕೊಂಡು ಸಮಕಾಲೀನ ಅರಬ್ಬೀ ಕಾವ್ಯದಲ್ಲಿ ಹೊಸ ಸಂಚಲನ ಮೂಡಿಸುವುದಕ್ಕೆ. ಹಾಗೆ ಮಾಡುವುದರ ಮೂಲಕ ಅರಬ್ಬೀ ಕಾವ್ಯ, ಸಂಸ್ಕೃತಿಗೆ ಹೊಸ ಸ್ವರೂಪ ಒದಗಿಸಿದ ಶ್ರೇಯ ಅವರದ್ದು. ಅರಬ್ಬೀ ಸಂಸ್ಕೃತಿಯ ಸಂದರ್ಭದ ಹೊರೆಗೆ, ಅಡೋನೀಸ್ ಜಾಗತಿಕ ಮಾನ್ಯತೆಯುಳ್ಳ, ದೂರದೂರದ ದೇಶಭಾಷೆಗಳ ಕಾವ್ಯವನ್ನು ಪ್ರಭಾವಿಸಿದ ಕವಿ. ಕಾವ್ಯವೆಂದರೆ ಅಸ್ತಿತ್ವದಲ್ಲಿರುವ ಪರಿಕಲ್ಪನೆಗಳನ್ನು ಮೀರಲು ನಡೆಸುವ ಉಲ್ಲಂಘನೆ ಎನ್ನುವಂತೆ ಬರೆಯುವ ಅಡೋನೀಸ್, ಸೃಜನಶೀಲವಲ್ಲದ ಸಮಾಜ, ಇತರರು ಸೃಜಿಸಿದ ಸಂಗತಿಗಳ ಗ್ರಾಹಕ ಮಾತ್ರವಾಗುತ್ತದೆ ಎನ್ನುತ್ತಾರೆ. ಇದುವೇ ಅರಬ್ ಸಂಸ್ಕೃತಿಯ ಕುರಿತಾಗಿ ಅಡೋನೀಸ್ ಅವರಲ್ಲಿರುವ ದಟ್ಟ ವಿಷಾದ,” ಎಂದು ಕನ್ನಡದ ಖ್ಯಾತ ಕವಿ, ವಿಮರ್ಶಕ, ಹಾಗೂ ಅನುವಾದಕರಾದ ಡಾ. ಕಮಲಾಕರ ಕಡವೆಯವರು, “ಕಾಲ ದೇಶಗಳ ಮೇರೆಯಿಲ್ಲದ ಅರಬ್ ಕವಿ ಅಲಿ ಅಹ್ಮದ್,” (ಆಂದೋಲನ; ಜನವರಿ 10, 2021; ಪುಟ 11) ಎಂಬ ಅಡೋನೀಸ್ ಕವಿಯ ಕುರಿತಾದ ಲೇಖನದಲ್ಲಿ ಬರೆಯುತ್ತಾರೆ.
ಅಡೋನೀಸ್ ಅವರ ಕಾವ್ಯ ಮತ್ತು ವಿಮರ್ಶೆ ಅರೇಬಿಕ್ ಕಾವ್ಯದ ಬೆಳವಣಿಗೆಯ ಮೇಲೆ ದೂರಗಾಮಿ ಪ್ರಭಾವ ಬೀರಿವೆ. ಶಾಸ್ತ್ರೀಯ ಕಾವ್ಯದಲ್ಲಿ ಆಳವಾಗಿ ಬೇರೂರಿದ್ದಾಗ್ಯೂ ಸಮಕಾಲೀನ ಅರೇಬಿಕ್ ಸಮಾಜದ ಅವಸ್ಥೆ ಮತ್ತು ಪ್ರತಿಕ್ರಿಯೆಗಳನ್ನು ತೋರಿಸುವಂತಹ ಹೊಸ ಕಾವ್ಯಾತ್ಮಕ ಭಾಷೆ ಮತ್ತು ಲಯಗಳನ್ನು ಸೃಷ್ಟಿಸಿದೆ. ಸಮಕಾಲೀನ ಅರೇಬಿಕ್ ಕಾವ್ಯಕ್ಕೆ ಅಡೋನೀಸ್-ರ ಮುಖ್ಯ ಕೊಡುಗೆಗಳಲ್ಲಿ ಒಂದು ಸ್ವಾತಂತ್ರ್ಯ – ವಿಷಯಗಳ ಸ್ವಾತಂತ್ರ್ಯ ಹಾಗೂ ಅನನ್ಯವಾದ ಕಾವ್ಯಾತ್ಮಕ ದೃಷ್ಟಿಯ ಮೂಲಕ ಪದಗಳ ಸ್ವಾತಂತ್ರ್ಯ.
ಟಿ. ಎಸ್. ಎಲಿಯಟ್ ಇಂಗ್ಲಿಷ್ ಭಾಷೆಯ ಕಾವ್ಯದ ಆಧುನಿಕತೆಯಲ್ಲಿ ವಹಿಸಿದ ಪಾತ್ರಕ್ಕೆ ಹೋಲಿಸಬಹುದಾದಂತಹ ಪಾತ್ರವನ್ನು ಅಡೋನೀಸ್-ರನ್ನು ಅರೇಬಿಕ್ ಸಾಹಿತ್ಯದ ಆಧುನಿಕತೆಯಲ್ಲಿ ವಹಿಸಿದ್ದಾರೆ ಎಂದು ಪರಿಗಣಿಸಲಾಗಿದೆ. ಸಾಹಿತ್ಯ ಮತ್ತು ಸಾಂಸ್ಕೃತಿಕ ವಿಮರ್ಶಕ ಎಡ್ವರ್ಡ್ ಸಯಿದ್-ರು, “ಇಂದಿನ ಅತ್ಯಂತ ಧೈರ್ಯಶಾಲಿ ಮತ್ತು ಪ್ರಚೋದನಾಕಾರಿ ಅರಬ್ ಕವಿ” ಎಂದು ಅಡೋನೀಸ್-ರನ್ನು ಕರೆದಿದ್ದರು. ಅಡೋನೀಸ್ ಅವರ The Pages of Day and Night ಎಂಬ ಸಂಗ್ರಹವನ್ನು ಅನುವಾದಿಸಿದ ಕವಿ ಸ್ಯಾಮ್ಯುವೆಲ್ ಜಾನ್ ಹೆಯ್ಜೋ-ರವರು ಅಡೋನೀಸ್-ರನ್ನು ಅರೇಬಿಕ್ ಕಾವ್ಯದ ತಿರುವಿನಲ್ಲಿ ಇರಿಸಿ, ಅರೇಬಿಕ್ ಕಾವ್ಯವನ್ನು ಅಡೋನೀಸ್-ಪೂರ್ವ ಯುಗ ಹಾಗೂ ಅಡೋನೀಸ್ ನಂತರದ ಯುಗಗಳಾಗಿ ವಿಂಗಡಿಸಬಹುದು, ಎಂದು ಅಭಿಪ್ರಾಯಪಟ್ಟಿದ್ದಾರೆ.
ನಾನು ಇಲ್ಲಿ ಕನ್ನಡ ಭಾಷೆಗೆ ಅನುವಾದಿಸಿರುವ ಅಡೋನೀಸ್-ರವರ ಹನ್ನೆರಡು ಕವನಗಳಲ್ಲಿ ಮೊದಲ ಕವನವನ್ನು ಸ್ಯಾಮ್ಯುವೆಲ್ ಹೆಯ್ಜೋ (Samuel Hazo), ಹಾಗೂ ನಂತರದ ಹನ್ನೊಂದು ಕವನಗಳನ್ನು ಖಾಲಿದ್ ಮತ್ತವಾ-ರವರು (Khaled Mattawa) ಮೂಲ ಅರೇಬಿಕ್ ಭಾಷೆಯಿಂದ ಇಂಗ್ಲಿಷಿಗೆ ಅನುವಾದಿಸಿರುವರು.

೧
ಪಯಣ
ಮೂಲ: The Passage
ನಾನು ಹಿಮದ ಹಾಗೂ ಬೆಂಕಿಯ
ಬಾಳಿನಲ್ಲಿ ಪಾಲ್ಗೊಳ್ಳಲು
ಕೋರಿದೆ.
ಆದರೆ ಹಿಮವಾಗಲಿ ಬೆಂಕಿಯಾಗಲಿ
ನನ್ನನ್ನು ತಮ್ಮೊಳಗೆ ಕರೆದುಕೊಳ್ಳಲಿಲ್ಲ.
ಸುಮ್ಮನಾದೆ ನಾನು.
ಕಾದೆ ಹೂವುಗಳ ಹಾಗೆ,
ನಿಂತೆ ಬಂಡೆಗಳ ಹಾಗೆ.
ಪ್ರೇಮದಲ್ಲಿ ನನ್ನನ್ನು ನಾನೇ
ಕಳೆದುಕೊಂಡೆ.
ಬೇರಾಗಿ ಹೋದೆ ನಾನು
ನೋಡುತ್ತಾ ನಿಂತೆ
ನಾನು ಕಂಡ ಬಾಳಿನ ಕನಸು
ಮತ್ತು
ಬಾಳಿನ ಬದಲಾಗುತ್ತಿರುವ ಕನಸಿನ
ನಡುವೆ
ಅಲೆಯ ಹಾಗೆ ಓಲಾಡಲಾರಂಭಿಸುವ
ತನಕ.
೨
ಒಂದು ಕೋಟು
ಮೂಲ: A Coat
ನಮ್ಮ ಮನೆಯಲೊಂದು ಕೋಟು ಇದೆ
ನಮ್ಮಪ್ಪನ ಬದುಕು ಅವನ ಆಯಾಸದ
ನೂಲುಗಳಿಂದ ಹೊಲೆದ ಕೋಟು.
ಅದು ನನಗೆ ಹೇಳುತ್ತೆ – ಈ ರಗ್ಗಿನ ಮೇಲೆ ಕೂತಿದ್ದೆ ನೀನು
ತುಂಡರಿಸಿದ ರೆಂಬೆಯಂತೆ,
ಅವನ ಮನದಲ್ಲಿ ನೀನಾಗ
ನಾಳೆಯ ನಾಳೆಯಾಗಿದ್ದೆ.
ನಮ್ಮ ಮನೆಯಲೊಂದು ಕೋಟು ಇದೆ
ಅಲ್ಲೆಲ್ಲೋ ಎಸೆದ, ಯಾರೂ ಕಂಡುಕೊಳ್ಳದ ಕೋಟು
ನನ್ನನ್ನು ಈ ಸೂರಿಗೆ,
ಈ ಗಾರೆಗೆ, ಈ ಕಲ್ಲುಗಳಿಗೆ ನಂಟುಕಟ್ಟಿಸಿದೆ,
ಅದರ ತೂತುಗಳಲ್ಲಿ ನಾನು
ನನ್ನಪ್ಪನ ಅಪ್ಪಿಸಿಕೊಳ್ಳುವ ಕೈಗಳ ಕಾಣುತ್ತೇನೆ,
ಅವನ ಹೃದಯವ, ಮತ್ತು ಅವನೊಳಗೆ
ಬಹು ಆಳದಲ್ಲಿ ನೆಲೆಸಿದ ಹಂಬಲವ ಕಾಣುತ್ತೇನೆ.
ಅದು ನನ್ನನ್ನು ಕಾಪಾಡುತ್ತದೆ, ನನ್ನನ್ನು ಹೊದೆಯುತ್ತದೆ,
ನನ್ನ ದಾರಿಯುದ್ದಕ್ಕೂ ಪ್ರಾರ್ಥನೆಗಳ ಸಾಲು ಕಟ್ಟುತ್ತದೆ,
ನನ್ನಪ್ಪನ ಕೊಳಲನ್ನು ನನಗೊಪ್ಪಿಸುತ್ತದೆ,
ಒಂದು ಕಾಡು, ಒಂದು ಹಾಡು.
೩
ಕಾವ್ಯಾರಂಭ
ಮೂಲ: The Beginning of Poetry
ಅತೀ ಉತ್ತಮವಾದ ಇರುವಿಕೆ ಎಂದರೆ
ಒಂದು ಕ್ಷಿತಿಜವಾಗಿರುವುದು.
ಮತ್ತೆ, ಮಿಕ್ಕವರೆಲ್ಲಾ? ಕೆಲವರಿಗೆ ನೀನೊಂದು ಉಲಿ ಎಂದೆನಿಸುತ್ತದೆ
ಉಳಿದವರಿಗೆ ನೀನದರ ಮಾರುಲಿ ಎಂದೆನಿಸುತ್ತದೆ.
ಅತೀ ಉತ್ತಮವಾದ ಇರುವಿಕೆ ಎಂದರೆ
ಬೆಳಕಿಗೆ, ಕತ್ತಲೆಗೆ ಒಂದು ನೆಪವಾಗಿರುವುದು
ಅಲ್ಲಿ ನಿನ್ನ ಕೊನೆಯ ಮಾತುಗಳು ನಿನ್ನ ಮೊದಲ ಮಾತುಗಳಾಗುತ್ತವೆ.
ಮತ್ತೆ, ಮಿಕ್ಕವರೆಲ್ಲಾ? ಕೆಲವರು ನಿನ್ನನ್ನು ಸೃಷ್ಟಿಯ ನೊರೆಯಾಗಿ ಕಾಣುತ್ತಾರೆ
ಉಳಿದವರು ನಿನ್ನನ್ನು ಸೃಷ್ಟಿಕರ್ತ ಎಂದುಕೊಳ್ಳುತ್ತಾರೆ.
ಅತೀ ಉತ್ತಮವಾದ ಇರುವಿಕೆ ಎಂದರೆ
ಒಂದು ಗುರಿಯಾಗಿರುವುದು –
ಮೌನ ಮತ್ತು ಪದಗಳ ಮಧ್ಯೆ
ಒಂದು ಸಂಧಿಮಾರ್ಗ.
೪
ಚಿಂದಿಬಟ್ಟೆ
ಮೂಲ: Rag
ನಾನು ನಡೆಯುತ್ತಿದ್ದೇನೆ – ನನ್ನದೆಂದು ಹಿಡಿದುಕೊಳ್ಳಲು ಏನೂ ಇಲ್ಲ,
ಮಸಕಾಗಿ ಕಾಣುವ ನನ್ನ ಕೈಗಳು ಮಾತ್ರ.
ಸಮಯದ ಎಲೆಗಳು ಸುತ್ತಲೂ ಹಾರಾಡುತ್ತಿವೆ, ನಾನಾಗ ಕೇಳುವೆ,
ಯಾಕೆ ನನ್ನಿಂದ ಇವನ್ನು ಓದಿ ಮುಗಿಸಲಾಗುತ್ತಿಲ್ಲ?
ಕೊಚ್ಚೆನೀರಿನಲ್ಲಿ ತೊಯ್ದ ಚಿಂದಿಬಟ್ಟೆಯಂತಿರುವ ದಿನದಂದು
ಕೆಫೆಯೊಂದರ ಬಾಗಿಲಲ್ಲಿ, ರಸ್ತೆಯ ಆರಂಭದಲ್ಲಿ,
ಕಾವ್ಯ ಬರುತ್ತದೆ
ಒಬ್ಬ ಕಾಲಜ್ಞಾನಿಯ ಆಕಾರದಲ್ಲಿ ಹೋಗಿಬಿಡುತ್ತದೆ.
೫
ಸಂಗೀತ
ಮೂಲ: Music
ಏನಿಲ್ಲ, ಏನೂ ಇಲ್ಲ – ಮಂದ ಗಾಳಿಯೊಂದು ಮರದ
ಗಿಟಾರುಗಳನ್ನು ನುಡಿಸುತ್ತಿದೆ.
ಏನಿಲ್ಲ, ಏನೂ ಇಲ್ಲ. ಖಾಲಿ ಎಲ್ಲ.
ಶಬ್ದಗಳಿಂದ ಇದನ್ನು ತುಂಬಿಸಲು ಯಾವ ಉಪಾಯವೂ ಇಲ್ಲ.
ಮತ್ತೆ ನಾನು ಕನಸುವೆ, ಕನಸು ಕಾಣುವೆ
ಮತ್ತೆ ಆ ಕನಸು ಮತ್ತೆನಲ್ಲ ಬಾಲ್ಯಾವಸ್ಥೆಯಲ್ಲಿರುವ ಯಥಾರ್ಥ.
ನಿನ್ನನ್ನು ನೀನೇ ಕೇಳಿಕೊ, ನನ್ನನ್ನು ಕೇಳಬೇಡ –
ಕ್ಷಿತಿಜದ ಎದುರು ಅಡ್ಡಗೋಡೆಯೇನೂ ಇಲ್ಲ,
ನಿನ್ನ ಮನಸ್ಸಿನಲ್ಲಿದೆ ಅಷ್ಟೇ.
ಆದರೆ, ಇದಂತೂ ನಿಜ
ಕವನವೊಂದು ಏರುತ್ತದೆ ಮೇಲಕ್ಕೆ ಜಾದುವಿನಂತೆ
ಆಕಾಶದಿಂದ ನೇತಾಡುವ ಒಂದು ಮನೆಯ ಹಾಗೆ.
ಈ ಮನೆಯಲ್ಲಿ ಒಬ್ಬ ವಲಸಿಗ ವಾಸಿಸುತ್ತಿರುವನು
ಅವನ ಹೆಸರೇ ಅರ್ಥ.
೬
ಚಲನೆ
ಮೂಲ: Motion
ನನ್ನ ದೇಹದ ಹೊರಗೆ ನಾನು ಪಯಣಿಸುವೆ,
ನನ್ನ ದೇಹದ ಒಳಗೆ
ನನಗೆ ಗೊತ್ತಿರದ ಭೂಖಂಡಗಳಿವೆ.
ಅನಂತ ಚಲನೆಯಲ್ಲಿದೆ ನನ್ನ ದೇಹ ತನ್ನ ಹೊರಗೆ.
ನಾನು ಕೇಳಲ್ಲ: ಎಲ್ಲಿಂದ ಬಂದೆ? ಅಥವಾ, ಎಲ್ಲಿದ್ದೆ ನೀನು?
ನಾ ಕೇಳುವೆ, ಎಲ್ಲಿಗೆ ಹೋಗಬೇಕು ನಾನು?
ಮರಳು ನನ್ನನ್ನು ನೋಡುತ್ತದೆ,
ನನ್ನನ್ನು ಮರಳಾಗಿ ಮಾರ್ಪಡಿಸುತ್ತೆ,
ನೀರು ನನ್ನನ್ನು ನೋಡುತ್ತದೆ,
ನನ್ನನ್ನು ಸೋದರನ್ನನ್ನಾಗಿಸುತ್ತೆ.
ನಿಜವಾಗಿಯೂ, ಮುಸ್ಸಂಜೆಗೆ ನೆನಪುಗಳ ಹೊರತು
ಬೇರೇನೂ ಇಲ್ಲ.
೭
ಇಬ್ಬರು ಕವಿಗಳು
ಮೂಲ: Two Poets
ಮಾರುಲಿ ಮತ್ತು ಉಲಿಯ ಮಧ್ಯೆ
ನಿಂತಿರುವರು ಇಬ್ಬರು ಕವಿಗಳು.
ಒಬ್ಬ ಕವಿ ಮುರಿದ ಚಂದಿರನ
ಧ್ವನಿಯಲ್ಲಿ ಮಾತನಾಡುವನು
ಮತ್ತೊಬ್ಬ ಕವಿ ಜ್ವಾಲಾಮುಖಿಯ ಕೈಗಳ
ತೊಟ್ಟಿಲಿನಲ್ಲಿ ಪ್ರತಿರಾತ್ರಿ ನಿದ್ರಿಸುವ
ಮಗುವಿನ ಹಾಗೆ ಶಾಂತವಾಗಿರುವನು.
೮
ರಸತಂತ್ರದ ಹೂವು
ಮೂಲ: Flower of Alchemy
ಬೂದಿಗಳ ಸ್ವರ್ಗವೊಂದಕ್ಕೆ ನಾನು ಪಯಣಿಸಬೇಕು,
ಅದರ ಗುಪ್ತ ಮರಗಳ ನಡುವೆ ನಡೆದಾಡಬೇಕು.
ಬೂದಿಯಲ್ಲಿ, ದಂತಕತೆಗಳಲ್ಲಿ, ವಜ್ರಗಳಲ್ಲಿ,
ಹಾಗೂ ಸ್ವರ್ಣಾಜಿನದಲ್ಲಿ.
ಹಸಿವಿನಲ್ಲಿಯೆ ನಾನು ಪಯಣಿಸಬೇಕು,
ಗುಲಾಬಿಹೂಗಳ ಮುಖಾಂತರ, ಕೊಯ್ಲಿನ ಕಡೆಗೆ.
ಪಯಣಿಸಬೇಕು ನಾನು, ತಬ್ಬಲಿ ತುಟಿಗಳ
ಕಮಾನಿನಡಿಯಲ್ಲಿ ವಿರಮಿಸಬೇಕು.
ತಬ್ಬಲಿ ತುಟಿಗಳ ಮೇಲೆ,
ಅವುಗಳ ಗಾಯಗೊಂಡ ನೆರಳಿನಲ್ಲಿ
ಆ ಪುರಾತನ ರಸತಂತ್ರದ ಹೂವು.
೯
ಪೂರ್ವದೇಶದ ವೃಕ್ಷ
ಮೂಲ: Tree of the East
ನಾನೊಂದು ಕನ್ನಡಿಯಾಗಿರುವೆ.
ನಾನು ಎಲ್ಲವನ್ನೂ ಪ್ರತಿಬಿಂಬಿಸಿರುವೆ.
ನಿನ್ನ ಅಗ್ನಿಯಲ್ಲಿ
ಜಲ ಮತ್ತು ಸಸ್ಯದ ಕರ್ಮವಿಧಿಯನ್ನು ಬದಲಾಯಿಸಿರುವೆ ನಾನು,
ಧ್ವನಿ ಮತ್ತು ಕೂಗಿನ ಆಕಾರವನ್ನು ಬದಲಾಯಿಸಿರುವೆ ನಾನು.
ನಾನು ನಿನ್ನನ್ನು ಇಬ್ಬರಾಗಿ ಕಾಣತೊಡಗಿದ್ದೇನೆ,
ನೀನು ಮತ್ತು ನನ್ನ ಕಣ್ಣಿನಲ್ಲಿ ಈಜುತ್ತಿರುವ ಈ ಮುತ್ತು.
ನೀರು ಮತ್ತು ನಾನು ಪ್ರೇಮಿಗಳಾಗಿದ್ದೇವೆ.
ನಾನು ನೀರಿನ ನಾಮದಿಂದ ಜನಿಸಿರುವೆ
ಹಾಗೂ ನನ್ನೊಳು ನೀರು ಜನಿಸಿರುವುದು.
ನಾವು ಅವಳಿಗಳಾಗಿದ್ದೇವೆ.
೧೦
ವಿಷಣ್ಣತೆಯ ವೃಕ್ಷ
ಮೂಲ: Tree of Melancholy
ಎಲೆಗಳು ಉರುಳುತ್ತುರುಳುತ್ತಾ ಹೋಗಿ
ಬರವಣಿಗೆಯ ಚರಂಡಿಯಲ್ಲಿ ವಿರಮಿಸುತ್ತವೆ,
ಮಾತು ಮಾರುಲಿಯಾಗುವ ಮುನ್ನ,
ಕತ್ತಲೆಯ ತೊಗಟೆಗಳ ಮಧ್ಯೆ ಸಂಭೋಗಿಸುತ್ತವೆ,
ವಿಷಣ್ಣತೆಯ ಹೂವನ್ನು ಹೊತ್ತುಕೊಂಡು.
ಎಲೆಗಳು ಅಲೆಯುತ್ತವೆ, ಉರುಳಾಡುತ್ತವೆ,
ಸಮ್ಮೋಹನದ ನಾಡೊಂದನ್ನು ಹುಡುಕುತ್ತಾ,
ಒಂದು ಅಡವಿಯಿಂದ ಇನ್ನೊಂದು ಅಡವಿಯೆಡೆಗೆ,
ವಿಷಣ್ಣತೆಯ ಹೂವನ್ನು ಹೊತ್ತುಕೊಂಡು.
೧೧
ಕಾವ್ಯದ ಕಲೆ
ಮೂಲ: The Art of Poetry
೧
ಒಂದು ಕಾಗದದ ಹಾಳೆಯು ‘ﻭ’* ಎಂಬ ಅಕ್ಷರದ ಹಾಗೆ,
ಚಕ್ರಾಕಾರಗಳಲ್ಲಿ ಸುತ್ತುತ್ತಾ, ತನ್ನ ತಲೆದಿಂಬನ್ನು ಹುಡುಕುತ್ತಿದೆ.
೨
ಋತುಗಳು ನಾಲ್ಕಲ್ಲ.
ಒಂದು ವಾರ ಏಳು ದಿನಗಳಲ್ಲ.
ಒಂದು ವರ್ಷ ಅದಿರುವುದಕ್ಕಿಂತ ಹೆಚ್ಚಾಗಿರುತ್ತೆ,
ಹಾಗೂ ಕಡಿಮೆಯಾಗಿರುತ್ತೆ.
೩
ಕಾಗದದ ಹಾಳೆಯ ಕಂಪನವನ್ನು
ಪೆನ್ನು ಬರೆಯುತ್ತದೆ,
ಹಾಗೂ ಬೆಳಕಿನಲ್ಲಿ ಕರಗಿಹೋಗುವ ಕತ್ತಲನ್ನು
ಕಾಗದದ ಹಾಳೆ ಬರೆಯುತ್ತದೆ.
ಪೆನ್ನು ಕೊನೆಯನ್ನು ಬರೆಯಬೇಕೆಂದಾಗಲೆಲ್ಲಾ,
ಪದಗಳು ಅದನ್ನು ಆರಂಭಕ್ಕೆ ಕರೆದೊಯ್ಯುತ್ತಿತ್ತು.
೪
ವಿಷಯದ ದೇಹವನ್ನು ಸೂರ್ಯ ತೊಳೆಯುತ್ತಾನೆ,
ಹಾಗೂ ಬಚ್ಚಿಕೊಂಡಿದ್ದ ಜಂತುವೊಂದು
ಈಗ ಎರಗಲು ಸಿದ್ಧವಾಗಿದೆ.
೫
ಮರಗಳು ಮತ್ತು ಗಾಳಿಯ ನಡುವಿನ ಸಂವಾದದಲ್ಲಿ,
ರೆಂಬೆಗಳ ತುಟಿಗಳು
ಧೂಳಿನ ಚುಂಬನಕ್ಕೆ ಶರಣಾಗುತ್ತವೆ.
೬
ಗಾಳಿ ತಯಾರಿಸಿದ ಶೀಶೆಗಳಲ್ಲಿ
ಹೂವುಗಳು ತಮ್ಮ ಮಕರಂದವನ್ನು ವಿತರಿಸುತ್ತವೆ.
೭
ಚಿಟ್ಟೆಯೆಂಬುದು ಬಣ್ಣಗಳನ್ನು ಧರಿಸಿದ
ಒಂದು ಸೂಟ್‌ಕೇಸು.
೮
ಚಿತ್ರವೆಂಬುದು ಒಂದು ಲಾಟೀನು,
ನುಡಿಯ ದೇಹದಲ್ಲಿ
ಒಂದು ಗುಲಾಬಿ ಬಣ್ಣದ ಧಮನಿ.
೯
ಪ್ರತಿಮೆಗಳಿಂದ ಬೆಳಗಿದ ಪದಗಳಲ್ಲಿ,
ಪ್ರತಿ ಪದವು ನಿಂತುಕೊಂಡೇ
ಕನಸು ಕಾಣುತ್ತಿರುವ ವ್ಯಕ್ತಿಯಂತೆ ಅನಿಸುತ್ತದೆ.
೧೦
ತುಡಿಯುತ್ತಿರುವ ಕತ್ತಲೆಯೊಳಗೆ ನಾನು ಪ್ರವೇಶಿಸುವೆ
ಬೆಳಕನ್ನು ಸ್ವಾಗತಿಸುವುದು ಹೇಗೆಂದು ಕಲಿಯಲು.
೧೧
ಪಾರದರ್ಶಕತೆ ಕೂಡ ಒಂದು ಅವಕುಂಠನದಂತೆಯೇ,
ಸೂರ್ಯನು ಸ್ವತಃ ಒಂದು ನೆರಳೇ.
* ‘ﻭ’ ಎಂಬ ಅರೇಬಿಕ್ ಅಕ್ಷರ, ‘ವಾವು’ ಎಂಬುದು ಇದರ ಉಚ್ಛಾರ.
೧೨
ದಿನವೊಂದರ ಕತೆ
ಮೂಲ: The Story of a Day
೧
ಮೋಡಗಳು ಭವಿಷ್ಯಕ್ಕಾಗಿ ಶ್ರಮಪಡುತ್ತವೆ,
ಮಳೆ ಆ ಶ್ರಮದ ಮೇಲ್ಮೆಯನ್ನು ಸಮರ್ಥಿಸಬೇಕು.
೨
ಹಡಗುಗಳು ಸಮುದ್ರವನ್ನು ಒಯ್ಯುತ್ತವೆ.
ಸಮುದ್ರಗಳು
ಹಡಗು-ಕನಸುಗಳ ಭಾರದಡಿಯಲ್ಲಿ ನರಳುತ್ತವೆ.
೩
ನೀರಿನಿಂದ ಮಾಡಿದ ಜೋಡುಗಳನ್ನು
ತೊಡುತ್ತವೆ ಕಪ್ಪೆಗಳು.
ತಮ್ಮ ಅತಿ ಸುಂದರ ಅಂಗಿಗಳನ್ನು
ತೊಟ್ಟು ವಲಸೆಹೋಗುತ್ತವೆ ಹಕ್ಕಿಗಳು.
೪
ಇತರರಿಗೆ ಹರಡಿದ ಜಾಲದಲ್ಲಿ ಗಾಳಿ
ತಾನೇ ಸಿಕ್ಕಿಬೀಳುತ್ತದೆ.
೫
ಕ್ಷಿತಿಜದ ಮೊಗಸಾಲೆಯಲ್ಲಿ ಕೂತಿರುವಳು
ಸೂರ್ಯ, ರಾಜಕುಮಾರಿ ಅವಳು.
ಗೆಳೆಯರೆಲ್ಲರೂ ಸೇರುವರು,
ಜೇಡರಹುಳಗಳು ಹಾಗೂ ಹಕ್ಕಿಗಳು,
ರಾಜವೈಭವದ ಚಿಟ್ಟೆಗಳು ಹಾಗೂ
ಶ್ರಮಜೀವಿ ಜೇನ್ನೊಣಗಳು,
ಜೀರುಂಡೆಗಳು ಹಾಗೂ ಹಲ್ಲಿಗಳು,
ಮನಸ್ಸಿಗೆ ಒಪ್ಪುವಂತಹ ಅತಿಥಿಗಳು,
ಸಿಕಾಡಾಗಳು ಮತ್ತು ಹಲ್ಲಿಗಳ ಮಧ್ಯೆ ಭೇದವೇನೂ ಇಲ್ಲ.
ಸೂರ್ಯ ತನ್ನ ರಥದಲ್ಲಿ ಸವಾರಿಮಾಡುವಳು
ಅವಳ ಅತಿಥಿಗಳು ಸಾಮ್ರಾಜ್ಯವನ್ನು ಆಳುವರು.
೬
ಈ ಮರದ ರೆಂಬೆಗಳಿಂದ ಧ್ವನಿಯೊಂದು ಮೇಲಕ್ಕೇರುತ್ತದೆ,
ಗಾಳಿ ಅದನ್ನು ಕೊಂಡೊಯ್ಯಲಿಕ್ಕಾಗಿ,
ಗಾಳಿಗೆ ಗೊತ್ತಿರದೇ.
೭
ಕವಿ ಬರೆಯುವಾಗ
ಅವನೊಂದು ತಂಬೂರಿಯಾಗುತ್ತಾನೆ
ಭಾಷೆಯ ಕೈಯಲ್ಲಿ.
೮
ನಾನು ಅನೇಕವೇಳೆ ಮೌನವಾಗಿರುವುದರಿಂದ
ಪದಗಳು ನನ್ನ ಚರ್ಮದಿಂದ ಒಸರುತ್ತವೆ.
೯
ಕಾಲವೇ, ಹೊಲಿಯಲಾಗಿದೆ ನಿನ್ನನ್ನು ನನ್ನ ಜತೆ,
ನನ್ನ ಕಾವ್ಯ ನಿನಗೆ ಬಣ್ಣದ ಕಸೂತಿ ಹಾಕುವುದು,
ನನ್ನ ದನಿಯೇ ಅಲಂಕರಣಗಳು, ಸಿಂಗಾರಗಳು.
೧೦
ದೇಹವೊಂದು ಲಿಲಿ-ಹೂವಾಗಿ ನೀರಿನಲ್ಲಿ ಮಲಗುತ್ತದೆ;
ದೇಹವೊಂದು ಅಗ್ನಿಸರೋವರವನ್ನು ಆಳುತ್ತದೆ.

ಜಯಶ್ರೀನಿವಾಸ ರಾವ್ ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಗದ್ಯ-ಪದ್ಯಗಳ ಅನುವಾದಕರು. ‘ಚಂದ್ರಮುಖಿಯ ಘಾತವು’ (1900) ಕಾದಂಬರಿಯನ್ನು, ‘ಸ್ಟೀಲ್ ನಿಬ್ಸ್ ಆರ್ ಸ್ಪ್ರೌಟಿಂಗ್: ನ್ಯೂ ದಲಿತ್ ರೈಟಿಂಗ್ ಫ಼್ರಮ್ ಸೌತ್ ಇಂಡಿಯ’ ಸಂಕಲನದಲ್ಲಿ ಕವನಗಳು, ಕತೆಗಳು, ಹಾಗೂ ಪ್ರಬಂಧಗಳನ್ನು, ಹಾಗೂ ಕೇರೂರ ವಾಸುದೇವಾಚಾರ್ಯರ ಸ್ವರಚಿತ ‘ವಿಸ್ಮಯಜನಕವಾದ ಹಿಂಸೆಯ ಕ್ರಮವು’ ಎಂಬ ಶರ್ಲಾಕ್ ಹೋಮ್ಸ್ ಕತೆಯನ್ನು ಇಂಗ್ಲಿಷಿಗೆ ಅನುವಾದ ಮಾಡಿದ್ದಾರೆ. “ಸುರಿದಾವೋ ತಾರೆಗಳು: ಅನುವಾದಿತ ಪೋಲಿಷ್ ಕವನಗಳು” (ಪೋಲೀಷ್ ಕವಿತೆಗಳ ಕನ್ನಡಾನುವಾದಿತ ಸಂಕಲನ). ಇವರು ಇಂಗ್ಲಿಷಿಗೆ ಅನುವಾದ ಮಾಡಿದ ಶ್ರೀ ಕೆ. ವಿ. ತಿರುಮಲೇಶರ ಕವನಗಳು ಇಂಗ್ಲಿಷ್ ಸಾಹಿತ್ಯ ಪತ್ರಿಕೆಗಳಾದ ‘ಸೆಷುರೆ’ ಹಾಗೂ ‘ಮ್ಯೂಜ಼್ ಇಂಡಿಯ’ ದಲ್ಲಿ ಪ್ರಕಟವಾಗಿವೆ. ಹೈದರಾಬಾದಿನ CIEFLನಿಂದ (ಈಗ The EFL University) ‘Translation and Transformation: The Early Days of the Novel in Kannada’ ಶೀರ್ಷಿಕೆಯಡಿಯಲ್ಲಿ ನಡೆಸಿದ ಸಂಶೋಧನೆಗಾಗಿ 2003ರಲ್ಲಿ PhD ಪದವಿ ಪಡೆದಿದ್ದಾರೆ. ಎಸ್ಟೋನಿಯಾ, ಲ್ಯಾಟ್ವಿಯಾ ಹಾಗೂಲಿಥುವೇನಿಯಾ ದೇಶದ ಕವಿತೆಗಳ ಸಂಕಲನ ‘ಬಾಲ್ಟಿಕ್ ಕಡಲ ಗಾಳಿ’ ಇತ್ತೀಚೆಗೆ ಪ್ರಕಟವಾಗಿದೆ.
