ಸಾಸಿವೆ ಕಳುವಾಗಿದೆ

ಈ ಧರೆ
ತನ್ನೊಡಲ ಮೊಳೆಯಿಸುವ ಶಕುತಿಯ ಅದೆಲ್ಲಿಂದ
ಹೊತ್ತು ತಂದಳೋ?
ನಮ್ಮವ್ವಂದಿರ
ಸೆರಗ ಕಥೆಗಳ ಗುಡುಸೊಂದು
ಕಳುವಾಗಿದೆ

ಆ ಆಗಸ
ತನ್ನಾಸು ದೇಹವ
ಅದೆಲ್ಲಿಂದ
ಹೊಂದು ತಂದನೋ?
ನಮ್ಮವರ ಅನಂತ ಬಾಹುಗಳಲಿ
ಕಾರಳ್ಳೊಂದು
ಕಳುವಾಗಿದೆ

ಈ ಸೂರಿಯ
ತನ್ನಾಳದ ಝಳವ
ಅದೆಲ್ಲಿಂದ
ಕದ್ದು ತಂದನೋ?
ನಮ್ಮವರ
ಎದೆಯುರಿಯ ಮೆದೆಯಲಿ
ಸಾಸಿವೆಯೊಂದು ಕಳುವಾಗಿದೆ

ಆ ಮೇಘಗಳು
ತನ್ನಿಂಪು ಗರ್ಭವ
ಬತ್ತದಂತೆ
ಅದೆಲ್ಲಿಂದ
ಕಾದು ತುಂಬಿತೋ?
ನಮ್ಮವರ ಕಣ್ಣ ಕಡಲಲಿ
ಬೊಗಸೆ ಕಳುವಾಗಿದೆ

ಈ ವೃಕ್ಷಸಂಕುಲ
ತನ್ನಿರುವಿಕೆಯ ಉಸಿರ
ಅದೆಲ್ಲಿಂದ
ಕಾಡಿ ತಂದಿತೋ?
ನಮ್ಮವರ
ನಿಟ್ಟುಸಿರ ಬಿಂಬ
ಕಳುವಾಗಿದೆ

ಆ ನೀರ ಸೆಳೆಗಳು
ತನ್ನುದ್ದದ ಅಲೆಯ
ಅದೆಲ್ಲಿಂದ
ಅದ್ದಿ ತಂದಿತೋ?
ನಮ್ಮವರ
ಬೆವರ ಲೋಕದಲೊಂದು
ಹಟ್ಟಿ ಕಳುವಾಗಿದೆ

ಆ ಬೆಟ್ಟಸಾಲುಗಳು
ತನ್ನೊರಟು ಗುಣವ
ಅದೆಲ್ಲಿಂದ
ನುಂಗಿ ತಂದಿತೋ?
ನಮ್ಮವರ
ದವಡೆ ತಿಕ್ಕಾಟದಲ್ಲಿ
ಮೊನೆ ಚೂರು ಕಳುವಾಗಿದೆ