ನಮಗೆಲ್ಲ ಮನುಷ್ಯರಿಗಿಂತ ಕೊಟ್ಟಿಗೆಯಲ್ಲಿರುತ್ತಿದ್ದ ದನ ಕರುಗಳ ಜೊತೆಗೇ ಹೆಚ್ಚು ಸ್ನೇಹ. ನಮ್ಮ ಕೊಟ್ಟಿಗೆಯಲ್ಲಿ ಸುಮಾರು ಹತ್ತು ಹದಿನೈದು ದನಗಳಿದ್ದವು. ಅವೆಲ್ಲವಕ್ಕೂ ಒಂದೊಂದು ಹೆಸರು. ಆಯಿ ಕೊಟ್ಟಿಗೆಯ ಹೊರಗೆ ನಿಂತು, ಅವುಗಳಲ್ಲಿ ಯಾವುದಾದರೂ ಒಂದರ ಹೆಸರು ಹಿಡಿದು ಕರೆದರೆ ಸಾಕು. ಅವು ತಕ್ಷಣ “ಅಂಬಾ” ಎಂದು ದನಿಯೆತ್ತಿ ಓಗುಡುತ್ತಿದ್ದವು. ನಮ್ಮಲ್ಲಿ ಆಕಳು ಕರು ಹಾಕಿತೆಂದರೆ, ನಮಗೆ ಎಲ್ಲಿಲ್ಲದ ಸಂಭ್ರಮ. ಮೊದಲು ಅದಕ್ಕೊಂದು ಚಂದವಾದ ಹೆಸರಿಡುವುದು. ಅದು ಬೆಳಗ್ಗೆ ಹೊಟ್ಟೆ ತುಂಬ ಹಾಲು ಕುಡಿದು ಇಡೀ ಕೊಟ್ಟಿಗೆ ತುಂಬ ಮರಿ ಜಿಂಕೆಯಂತೇ ಜಿಗಿಯುತ್ತ ಓಡುವುದನ್ನು ನೋಡುವುದೇ ಒಂದು ಸಂಭ್ರಮ.
ರೂಪಾ ರವೀಂದ್ರ ಜೋಶಿ ಬರೆಯುವ “ಹಸಿರ ಮಲೆನಾಡಲ್ಲಿ ಹಸನಾದ ಬಾಲ್ಯ” ಸರಣಿಯ ನಾಲ್ಕನೆಯ ಕಂತು

ಅಬ್ಬಾ!!! ಕಾಲದಿಂದ ಕಾಲಕ್ಕೆ ಬದುಕು ಎಷ್ಟು ಬದಲಾಗುತ್ತ ಹೋಗುತ್ತದೆ… ಬದುಕಿನ ಸಿದ್ಧಾಂತಗಳು, ಆದರ್ಶಗಳು ಒಂದು ಕಾಲದಿಂದ ಇನ್ನೊಂದು ಕಾಲಕ್ಕೆ ಅಜಗಜಾಂತರ ವ್ಯತ್ಯಾಸ ಹೊಂದುತ್ತ ಹೋಗುತ್ತವೆ ಅಲ್ಲವೇ. ವ್ಯಕ್ತಿಗಳ ಆಸ್ತಿ ಅಂತಸ್ತುಗಳ ಮೌಲ್ಯಮಾಪನ ಕೂಡಾ ಅಂದಿನಿಂದ ಇಂದಿಗೆ ಅದೆಷ್ಟು ಬದಲಾಗಿಬಿಟ್ಟಿದೆ! ಇಂದು ವ್ಯಕ್ತಿಯೊಬ್ಬನ ಸಿರಿವಂತಿಕೆಯ ಮಾಪನ, ಅವನ bank balance. ಆದರೆ, ನಾವೆಲ್ಲ ಚಿಕ್ಕವರಿರುವಾಗ ಈ ಕಾಗದದ ನೋಟಿನ ಬಗ್ಗೆ ಜನರಿಗೆ ಇಷ್ಟೆಲ್ಲ ವ್ಯಾಮೋಹ ಇರಲಿಲ್ಲ. ಮತ್ತೆ ಎಲ್ಲರ ಕೈಲೂ ಹಣ ಇರುತ್ತಲೇ ಇರಲಿಲ್ಲ. ಆಗೆಲ್ಲ ಅದೆಷ್ಟೋ ಜನ ಈ ದುಡ್ಡನ್ನು ನೋಡದೇ, ಬದುಕು ಮುಗಿಸಿ ಹೋಗಿದ್ದಾರಂತೆ. ಆಗಿನ ಬದುಕಿನ ಮೌಲ್ಯವೇ ಬೇರೆ ಇತ್ತು ಬಿಡಿ. ಮುಖ್ಯವಾಗಿ ನಮ್ಮ ಮಲೆನಾಡಿನ ಕುರಿತಾಗಿ ಹೇಳಬೇಕೆಂದರೆ, ಜನರ ಅಂತಸ್ತಿನ ಲೆಕ್ಕಾಚಾರವನ್ನು ಅವರ ಕೊಟ್ಟಿಗೆಯಲ್ಲಿರುವ ಗೋವುಗಳ ಮುಖಾಂತರವೇ ಅಳೆಯುತ್ತಿದ್ದರು.

ಮಲೆನಾಡಿಗರು ತಮ್ಮ ಕೊಟ್ಟಿಗೆಯ ದನಕರುಗಳನ್ನು ತಮ್ಮ ಬದುಕಿನ ಅವಿಭಾಜ್ಯ ಅಂಗವೆಂದೇ ಪರಿಗಣಿಸುತ್ತಿದ್ದರು. ನಿಜ ಆ ಕಾಲವೇ ಹಾಗಿತ್ತು. ಆಗೆಲ್ಲ ದನ ಕರುಗಳಿಗೆ ತುಂಬ ಗೌರವವಿತ್ತು. ಅವಕ್ಕೆ ಆಯುಷ್ಯ ಪೂರ್ತಿ ಬದುಕುವ ಹಕ್ಕಿತ್ತು. ಕಟುಕರಿಗೆ ಮಾರುವಷ್ಟು ಕ್ರೂರತನ ಅಂದಿನ ಕೃಷಿಕರಿಗೆ ಇರಲಿಲ್ಲ. ಅಂದಿನ ಜನ ಇಂದಿನವರಂತೇ ಅವು ತಿನ್ನುವ ಹುಲ್ಲಿನ ಕಡ್ಡಿ ಕಡ್ಡಿಗೂ ಲೆಕ್ಕ ಹಾಕುತ್ತಿರಲಿಲ್ಲ. ಕಾರಣ, ಅವುಗಳ ಸಗಣಿ ಗೊಬ್ಬರವೇ ಅವರ ಕೃಷಿಗೆ ಬಲವಾಗಿತ್ತು. ಅದೇ ಕಾರಣಕ್ಕೆ ಮಲೆನಾಡಿಗರ ಸಂಪತ್ತೆಂದರೆ, ಅವರ ಗೋ ಸಂಪತ್ತೇ ಆಗಿತ್ತು. ಪ್ರತಿ ಮನೆಗೂ ಹೊಂದಿಕೊಂಡಂತೆ, ದನಗಳ ಕೊಟ್ಟಿಗೆಯಿರುತ್ತಿತ್ತು. ಸಿರಿವಂತರ ಮನೆಗಳ ಹಿಂಭಾಗದಲ್ಲಿ ಒಂದಲ್ಲ ಎರಡು ಮೂರು ಕೊಟ್ಟಿಗೆಗಳು ಇರುತ್ತಿದ್ದವು. ಎತ್ತುಗಳಿಗಾಗಿ ಒಂದು, ಕರೆಯುವ ಆಕಳುಗಳಿಗಾಗಿಯೇ ಒಂದು, ಮತ್ತೆ ಕರುಗಳಿಗಾಗಿ ಬೇರೆ. ಹಾಗೇ ವಯಸ್ಸಾದ ದನಗಳನ್ನು ಪ್ರತ್ಯೇಕಿಸಿ ಕಟ್ಟುತ್ತಿದ್ದರು. ಪ್ರಾಯದ ದನಗಳು ಅವುಗಳನ್ನು ಕೋಡಲ್ಲಿ ಹೊಡೆದು ಘಾಸಿಮಾಡಬಾರದೆಂಬ ಕಾಳಜಿಯಿಂದ.

ಆಗೆಲ್ಲ ಮಲೆನಾಡು ವರ್ಷ ಪೂರ್ತಿ ಹಸಿರಾಗಿಯೇ ಇರುತ್ತಿದ್ದರಿಂದ, ದನಕರುಗಳಿಗೆ ಕಾಡಲ್ಲಿ ಸಾಕಷ್ಟು ಹುಲ್ಲು ಮೇವು, ನೀರು ದೊರೆಯುತ್ತಿತ್ತು. ಬೆಳಗ್ಗೆ ಎಲ್ಲೆಲ್ಲೂ ಮಂದೆ ಮಂದೆಯಾಗಿ ಕಾಡಿಗೆ ಹೋಗುವ ದನಗಳು, ಅವುಗಳ ಹಿಂದೆ ದನಗಾಹಿಗಳು. ಆಗೆಲ್ಲ ಕೂಲಿ ಮಾಡುವವರ ಮಕ್ಕಳು ಹರೆಯಕ್ಕೆ ಬರುವ ತನಕ, ಈ ದನಕಾಯುವ ಕೆಲಸ ಮಾಡುತ್ತಿದ್ದರು. ಅವರಿಗೆ ತಿಂಗಳಿಗೆ ಇಷ್ಟು ಅಂತ ಸಂಬಳ. ಜೊತೆಗೆ ಕಂಬಳಿ. ಆ ದನಗಾಹಿಗಳು ಮಧ್ಯಾಹ್ನದ ಊಟಕ್ಕಾಗಿ, ಬಾಳೆಲೆಯಲ್ಲಿ ಸುತ್ತಿದ ದೋಸೆಗಳನ್ನು ಹಳೆ ಪಂಚೆ ಅಥವಾ ಟವಲ್‌ನಲ್ಲಿ ಕಟ್ಟಿ, ಹೆಗಲಿಗೇರಿಸಿ, ಕೈಯ್ಯಲ್ಲೊಂದು ಕೋಲು ಹಿಡಿದು, ದನ ಮೇಯಿಸಲು ಕಾಡಿಗೆ ಹೋಗುತ್ತಿದ್ದರು. ಎಷ್ಟೋ ಸಾರಿ ಅವರೆಲ್ಲ ಒಂದೆಡೆ ಸೇರಿ, ಜೋರಾಗಿ ಹಾಡುತ್ತ, ಕೊಳಲು ಊದುತ್ತ, ಕಾಡುಹಣ್ಣುಗಳನ್ನು ಕಿತ್ತು ತಿನ್ನುತ್ತ ಆಟದಲ್ಲಿ ಮೈ ಮರೆತುಬಿಡುತ್ತಿದ್ದರು. ಆ ತುಂಟ ದನಗಳೋ ಅಲ್ಲಿಂದ ಕಾಲುಕಿತ್ತು, ಕಂಡವರ ಗದ್ದೆ ತೋಟ ನುಗ್ಗಿ ದಾಂಧಲೆ ಎಬ್ಬಿಸುತ್ತಿದ್ದವು. ಕೆಲವು ಪ್ರಾಯದ ಹೋರಿಗಳು ಬೇರೆ ಮಂದೆ ಸೇರಿ ಆಕಳುಗಳ ಹಿಂದೆ ಹೋಗಿಬಿಡುತ್ತಿದ್ದವು. ಆಗೆಲ್ಲ ಆ ಹುಡುಗರ ಪಜೀತಿ ಯಾರಿಗೂ ಬೇಡ. ಮಾಲಕರಿಂದ ಬೈಗಳು, ಹೊಡೆತ, ಮತ್ತೆ ಕಳೆದ ದನಗಳನ್ನು ಹುಡುಕಿ ತರುವ ಶಿಕ್ಷೆ. ಎಷ್ಟೋ ಸಾರಿ ಅದು ಅತಿರೇಕಕ್ಕೆ ತಲುಪಿ, ಅವರನ್ನು ಕೆಲಸದಿಂದ ಕಿತ್ತೊಗೆಯುವ ಹಂತಕ್ಕೂ ಹೋಗುತ್ತಿತ್ತು. ಆದರೂ ಏನೇ ಹೇಳಿ ವರ್ಷಪೂರ್ತಿ ಮಳೆ ಗಾಳಿ ಚಳಿ ಸಹಿಸಿಕೊಂಡು ಆ ಕಾಡಲ್ಲಿ ದನಗಳನ್ನು ಮೇಯಿಸುವ, ಆ ತುಂಟ ದನಗಳು ಕಣ್ಣಡ್ಡವಾಗದಂತೇ ಕಾಯ್ದುಕೊಳ್ಳುವುದು ನಿಜಕ್ಕೂ ಒಂದು ಸಾಹಸದ ಕೆಲಸವೇ ಸರಿ.

ನಿಮಗೆಲ್ಲ ಗೋಧೂಳಿ ಮುಹೂರ್ತವೆಂದರೆ ಗೊತ್ತಿರಲೂ ಸಾಕು. ಆದರೆ, ಆ ಗೋಧೂಳಿಯನ್ನು ಪ್ರತ್ಯಕ್ಷ ಕಂಡು ಅನುಭವಿಸಿದವರು ಕಡಿಮೆ ಅನ್ನಿಸುತ್ತದೆ. ನಾವೆಲ್ಲ ಅದನ್ನು ದಿನನಿತ್ಯವೂ ನೋಡಿ ಖುಶಿ ಪಟ್ಟಿದ್ದೇವೆ. ದನಗಳು ಸಂಜೆ ಕೊಟ್ಟಿಗೆಗೆ ಬರುವ ಸಮಯವೇ “ಗೋಧೂಳಿ ಸಮಯ” ಅದನ್ನು ಗೋಧೂಳಿ ಮುಹೂರ್ತ ಎಂದು ಪರಿಗಣಿಸುತ್ತಿದ್ದರು. ಮಲೆನಾಡಲ್ಲಿ ಆ ಮುಹೂರ್ತಕ್ಕೆ ಮದುವೆ ಕೂಡಾ ನಡೆಯುತ್ತಿತ್ತು. ಈಗ ಆ ಒಂದು ಸುಂದರ ಕ್ಷಣ ಹೇಗಿರುತ್ತಿತ್ತು ಹೇಳುತ್ತೇನೆ, ಕೇಳಿ. ದಿನವಿಡೀ ಕಾಡಲ್ಲಿ ಓಡಾಡಿ, ಹಸಿರು ಹುಲ್ಲಿನ ಜೊತೆ ಕಾಲ ಕಾಲಕ್ಕೆ ಸಿಗುವ ಕಾಡು ಹಣ್ಣು ಕಾಯಿ, ಬೀಜ ಎಲ್ಲವನ್ನೂ ಭುಂಜಿಸಿ, ಸಂಜೆ ಅವು ಮನೆಗೆ ಬರುವ ಚಂದವೇ ಚಂದ. ಹೊಟ್ಟೆ ತುಂಬ ಮೆಂದ ಪ್ರಾಯದ ದನಗಳು, ಪುಟ್ಟ ಕರುಗಳು ಬಾಲವೆತ್ತಿ ಜಿಗಿಯುತ್ತ ಬಂದರೆ, ಹೋರಿಗಳು, ಖುಶಿಯಿಂದ ಗಿಂಟಲೆ (ಮದವೇರಿದಾಗ, ಗಂಟಲಿನಿಂದ ಹೊರಡಿಸುವ ವಿಚಿತ್ರ ದನಿ) ಹೊಡೆಯುತ್ತ ಗೊರಸಿನಿಂದ ನೆಲವನ್ನು ಕೆರೆಯುತ್ತ, ದುಡು ದುಡು ಓಡುತ್ತ ಬರುತ್ತಿದ್ದವು. ಆಗ ಅವುಗಳ ಗೊರಸಿನ ಘರ್ಷಣೆಗೆ ಸಿಲುಕಿದ ಮಣ್ಣು ಪುಡಿ ಪುಡಿಯಾಗಿ, ಎತ್ತರೆತ್ತರಕ್ಕೆ ಹಾರುತ್ತಿತ್ತು. ಹೀಗೆ ಏರುವ ಕೆಂಧೂಳು ಮುಳುಗುತ್ತಿರುವ ಸೂರ್ಯನ ಕಿರಣದೆದುರು ಬಂಗಾರದ ರೇಣುಗಳಂತೆ ಹೊಳೆಯುತ್ತಿತ್ತು. ಆ ಸೊಬಗು ನೋಡಲು ಎರಡು ಕಣ್ಣು ಸಾಲದಿತ್ತು. ಅದನ್ನೇ ಗೋಧೂಳಿ ಕಾಲ ಎಂದು ಕರೆಯುತ್ತಿದ್ದರು. ಇದು ಚಳಿಗಾಲ, ಬೇಸಿಗೆ ಕಾಲದಲ್ಲಿ ಮಾತ್ರ ಕಾಣಸಿಗುತ್ತಿತ್ತು. ನಾವೆಲ್ಲ ಆ ಸುಂದರ ಕ್ಷಣವನ್ನು ಕಣ್ತುಂಬಿಕೊಂಡ ಸೌಭಾಗ್ಯವಂತರೆಂದು ಬೀಗಬೇಕೋ ಅಥವಾ ಇಂದು ಆ ಮೂಕ ಪ್ರಾಣಿಗೊದಗಿದ ಸಂಕಟವನ್ನು ಇದೇ ಕಣ್ಣಲ್ಲಿ ನೋಡಬೇಕಾದ ದೌರ್ಭಾಗ್ಯಕ್ಕೆ ಮರುಗಬೇಕೋ ಗೊತ್ತಿಲ್ಲ.

ನಮ್ಮದು ಒಂಟಿ ಮನೆ. ಪಕ್ಕದ ಮನೆಯೆಂದರೆ, ಅರ್ಧ ಮೈಲಿ ದೂರ. ಹಾಗಾಗಿ, ನಮಗೆಲ್ಲ ಮನುಷ್ಯರಿಗಿಂತ ಕೊಟ್ಟಿಗೆಯಲ್ಲಿರುತ್ತಿದ್ದ ದನ ಕರುಗಳ ಜೊತೆಗೇ ಹೆಚ್ಚು ಸ್ನೇಹ. ನಮ್ಮ ಕೊಟ್ಟಿಗೆಯಲ್ಲಿ ಸುಮಾರು ಹತ್ತು ಹದಿನೈದು ದನಗಳಿದ್ದವು. ಅವೆಲ್ಲವಕ್ಕೂ ಒಂದೊಂದು ಹೆಸರು. ಆಯಿ ಕೊಟ್ಟಿಗೆಯ ಹೊರಗೆ ನಿಂತು, ಅವುಗಳಲ್ಲಿ ಯಾವುದಾದರೂ ಒಂದರ ಹೆಸರು ಹಿಡಿದು ಕರೆದರೆ ಸಾಕು. ಅವು ತಕ್ಷಣ “ಅಂಬಾ” ಎಂದು ದನಿಯೆತ್ತಿ ಓಗುಡುತ್ತಿದ್ದವು. ನಮ್ಮಲ್ಲಿ ಆಕಳು ಕರು ಹಾಕಿತೆಂದರೆ, ನಮಗೆ ಎಲ್ಲಿಲ್ಲದ ಸಂಭ್ರಮ. ಮೊದಲು ಅದಕ್ಕೊಂದು ಚಂದವಾದ ಹೆಸರಿಡುವುದು. ಅದು ಬೆಳಗ್ಗೆ ಹೊಟ್ಟೆ ತುಂಬ ಹಾಲು ಕುಡಿದು ಇಡೀ ಕೊಟ್ಟಿಗೆ ತುಂಬ ಮರಿ ಜಿಂಕೆಯಂತೇ ಜಿಗಿಯುತ್ತ ಓಡುವುದನ್ನು ನೋಡುವುದೇ ಒಂದು ಸಂಭ್ರಮ. ಅಷ್ಟೇ ಅಲ್ಲ. ಹತ್ತು ದಿನಗಳ ತನಕ ಅದರ ಹಾಲಿನಿಂದ ಮಾಡುವ ಗಿಣ್ಣ ತಿನ್ನುವುದೂ ಬಹುದೊಡ್ಡ ಖುಶಿಯ ವಿಷಯವಾಗಿತ್ತು ನಮಗೆ.

ರಜೆಯ ದಿನಗಳಲ್ಲಿ ನನ್ನ ಆಟವೆಲ್ಲ ಕೊಟ್ಟಿಗೆಯಲ್ಲೇ… ದನಗಳ ಗೋದನಿಯ ಕೆಳಗಡೆ ನುಸಿಯುವ ಆಟ, ಹಾಗೇ, ಮೇಲೆ ಆ ಕಡೆ ಈ ಕಡೆ ಕಾಲು ಹಾಕಿ ಕೂತು ಮೋಟಾರು ಬಿಡುವ ಆಟ, ದನ ಕಟ್ಟುವ ದಾಬುಗಳನ್ನು ಜೋಕಾಲಿಯಂತೆ ಮಾಡಿಕೊಂಡು ಕುಳಿತುಕೊಳ್ಳುವ ಆಟ, ಹೀಗೇ ಏನಾದರೂ ಒಂದು ಹೊಸದನ್ನು ಹುಡುಕಿಕೊಂಡು, ಒಬ್ಬಳೇ ಆಡುತ್ತ ಇರುತ್ತಿದ್ದೆ. ಮತ್ತೆ ನಡು ನಡುವೆ, ಪುಟ್ಟ ಕರುಗಳ ಮೈದಡವಿ ಮಾತಾಡಿಸುತ್ತ ಮುದ್ದಿಸುತ್ತಿದ್ದೆ. ಅಂಗಳದಲ್ಲಿ ಹುಟ್ಟಿದ್ದ ಎಳೆಯ ಹಸಿರು ಹುಲ್ಲು ಕಿತ್ತು, ಒಂದೊಂದೇ ಕಡ್ಡಿ ಅದರ ಬಾಯಿ ಮುಂದೆ ಹಿಡಿದರೆ ಸಾಕು. ಅದು ಇಷ್ಟುದ್ದ ನಾಲಿಗೆ ಚಾಚಿ ಒಳಗೆಳೆದುಕೊಂಡು ತಿನ್ನುತ್ತಿದ್ದರೆ, ಅದನ್ನೇ ಬೆರಗಾಗಿ ನೋಡುತ್ತ ಜೋರಾಗಿ ನಗುತ್ತ ನಿಲ್ಲುತ್ತಿದ್ದೆ. ಹೀಗೇ, ಯಾವ ಜೊತೆಗಾರರನ್ನು ಬೇಡದೇ, ಆಟದ ಸಾಮಗ್ರಿಗಳನ್ನು ಬಯಸದೇ ನಮ್ಮ ಬಾಲ್ಯ ಕೊಟ್ಟಿಗೆಯ ಒಡನಾಟದಲ್ಲೇ ಸಂತೃಪ್ತವಾಗಿ ಸಾಗುತ್ತಿತ್ತು.

ನಮ್ಮ ಮಲೆನಾಡಿನ ತಳಿಗಳು ಅಪ್ಪಟ ದೇಸೀ ತಳಿಗಳು. ಅವುಗಳನ್ನು “ಮಲೆನಾಡ ಗಿಡ್ಡ” ಎಂದು ಕರೆಯುತ್ತಾರೆ. ತೀರ ಎತ್ತರವೂ ಅಲ್ಲದ, ಕುಳ್ಳೂ ಅಲ್ಲದ ಮಟ್ಟಸ ಆಕಾರದ ಅವುಗಳಿಗೆ ಗಟ್ಟಿ ಮುಟ್ಟಾದ ಕಾಲುಗಳು. ಅದಕ್ಕೇ ಅವು ಗುಡ್ಡ ಬೆಟ್ಟ ಸಲೀಸಾಗಿ ಏರಿ ಮೇಯಲು ಸಮರ್ಥವಾಗಿರುತ್ತವೆ. ಹೈಬ್ರಿಡ್ ತಳಿಗಳಂತೆ ಅವುಗಳಿಗೆ ಮೇಲಿನ ಪೌಷ್ಟಿಕ ಆಹಾರಗಳ (ಹಿಂಡಿ, ಹತ್ತೀಕಾಳು) ಅವಶ್ಯಕತೆ ಇರುತ್ತಿರಲಿಲ್ಲ. ಅಪ್ಪಟ ಸಸ್ಯ ಮೆಂದು ಬರುವ ಅವು, ಅಮೃತ ಸಮಾನ ಹಾಲು ಕೊಡುತ್ತವೆ. ಪ್ರಮಾಣ ಕಡಿಮೆ ಇರಬಹುದು. ಆದರೆ, ಅದು ತುಂಬ ಆರೋಗ್ಯಕರವಾದ ಹಾಲು. ಆ ಆಕಳುಗಳ ತುಪ್ಪವೂ ತುಂಬ ಔಷಧೀಯ ಗುಣ ಹೊಂದಿದೆ. ಆಗೆಲ್ಲ ಮನೆ ಮದ್ದಿನ ಕಾಲವಲ್ಲವೇ. ಮನೆಯಲ್ಲಿ ಒಂದಿಷ್ಟು ತುಪ್ಪವನ್ನು ಡಬ್ಬಿಯಲ್ಲಿ ತುಂಬಿ ಹಳತಾಗಲು ಇಡುತ್ತಿದ್ದರು. ಹಳತಾದಷ್ಟೂ ಅದರ ಮೌಲ್ಯ ಜಾಸ್ತಿ. ಅದನ್ನು ‘ಮುಗ್ಗು ತುಪ್ಪ’ ಎಂದು ಕರೆಯುತ್ತಿದ್ದರು. ಅದು ಬಹಳ ಥರದ ಔಷಧಿಗೆ ಬಳಕೆ ಆಗುತ್ತಿತ್ತು. ಉದಾ:- ಬೇಸಿಗೆಯಲ್ಲಿ ಉಷ್ಣ ಜಾಸ್ತಿಯಾಗಿ, ನೆತ್ತಿ ಬಿಚ್ಚಿ ಮೂಗಿನಲ್ಲಿ ರಕ್ತ ಬಂದರೆ, ಮೂಗಿನಿಂದ ಆ ತುಪ್ಪವನ್ನು ಸೇದಿಸುತ್ತಿದ್ದರು. ಹಾಗೇ ಉಷ್ಣ ಶರೀರದವರು ಪಿತ್ತ ಪ್ರಕೃತಿಯವರು, ಆ ತುಪ್ಪವನ್ನು ನೆತ್ತಿಗೆ ಮತ್ತೂ ಅಂಗಾಲಿಗೆ ಸವರಿಕೊಳ್ಳುತ್ತಿದ್ದರು. ಇಂಥ ಹತ್ತು ಹಲವು ವ್ಯಾಧಿಗಳಿಗೆ ರಾಮ ಬಾಣವಾಗಿತ್ತು ಆ ತುಪ್ಪ. ಅಷ್ಟೇ ಅಲ್ಲ. ಆಗ ತಾನೇ ಕರೆದು ತಂದ ಬಿಸಿ ಬಿಸಿ ನೊರೆಹಾಲನ್ನು ಚಿಕ್ಕ ಮಕ್ಕಳಿಗೆ ದೇಹ ಪೋಷ್ಠಿಗಾಗಿ, ಕುಡಿಯಲು ಕೊಡುತ್ತಿದ್ದರು. ಅದನ್ನು ಆಡುಭಾಷೆಯಲ್ಲಿ “ತಂಬಾಲು” ಎಂದು ಕರೆಯುತ್ತಿದ್ದರು. ಎತ್ತುಗಳು ಗದ್ದೆ ಊಳಲು, ಆಕಳುಗಳು ಹಾಲು ಹೈನಕ್ಕೆ. ಹೀಗೆ ದನಕರುಗಳು ಕೃಷಿಕರ ಬದುಕಿನ ಬಹುಮೂಲ್ಯ ಅಂಗದಂತೇ ಆಗಿದ್ದವು. ಅಂತೆಯೇ ವಯಸ್ಸಾದ ದನಗಳೂ ಉಪಯೋಗಿಗಳೇ. ಅವು ಸಗಣಿ ಹಾಕ್ತಾವಲ್ಲಾ. ಅದು ಗೊಬ್ಬರ ಆಗ್ತದೆ. ಪಾಪ ಇದ್ದಷ್ಟು ದಿನ ಆರಾಮಾಗಿ ಇರಲಿ. ಎಂದು ಕಾಳಜಿಯಿಂದ ನೋಡಿಕೊಳ್ಳುತ್ತಿದ್ದ ಕಾಲ ಅದು.

ಆಗಿನ್ನೂ ಈ ಸಿಮೆಂಟ್ ಹಳ್ಳಿ ಮನೆಗಳ ಪ್ರವೇಶ ಕಂಡಿರಲಿಲ್ಲ. ಬರೀ ಮಣ್ಣಿನದೇ ನೆಲ. ದಿನ ಬೆಳಗ್ಗೆ, ಇಡೀ ಮನೆಯನ್ನು ಆಕಳ ಸಗಣಿ (ಗೋಮಯ) ಹಾಕಿ, ಅಡಿಕೆ ಹಾಳೆಯ ಚಿಕ್ಕ ಆಯತಾಕಾರದ ತುಂಡಿನ( ಹಾಳೆ ಕಡಿ) ಸಹಾಯದಿಂದ ಸಾರಿಸುವ ಪರಿಪಾಠವಿತ್ತು. ಹೀಗೆ ಸಾರಿಸಿದ ಮನೆಯ ನೆಲ ಕರ್ರಗೆ ಚಂದವಾಗಿ ಹೊಳೆಯುತ್ತಿತ್ತು. ಇದು ಹೆಂಗಳೆಯರ ದಿನ ನಿತ್ಯದ ಕೆಲಸವಾಗಿತ್ತು.

ಅಂದು ಮಲೆನಾಡಿನ ಪ್ರತಿಯೊಬ್ಬರೂ ತುಂಬ ಶ್ರಮ ಜೀವಿಗಳಾಗಿದ್ದರು. ಪ್ರತಿಯೊಬ್ಬರೂ ದಿನಾ ನಸುಕಿನಲ್ಲೇ ಏಳುವ ಪರಿಪಾಠವಿತ್ತು. ಹೆಂಗಳೆಯರು ಮನೆ ಕೆಲಸದಲ್ಲಿ ನಿರತರಾದರೆ, ಪ್ರತಿ ಮನೆಯ ಗಂಡಸರೂ ಅಡವಿಗೆ ಹೋಗಿ, ದನದ ಕಾಲಡಿಗೆ ಹಾಸಲು ತರುವ ಪದ್ಧತಿ ಇತ್ತು. ಮಳೆಗಾಲದಲ್ಲಿ ಸೊಪ್ಪುಗಳನ್ನು ಕಡಿದು ತಂದು ಕೊಟ್ಟಿಗೆಯಲ್ಲಿ ಹಾಸುತ್ತಿದ್ದರೆ, ಚಳಿಗಾಲ, ಬೇಸಿಗೆ ಕಾಲದಲ್ಲಿ ಒಣ ಎಲೆಗಳನ್ನು (ದರಕು) ಬಾಚಿ, ತುಂಬಿಕೊಂಡು ಬಂದು ಹಾಸುತ್ತಿದ್ದರು. ಅವುಗಳಿಗೆ ಮೆತ್ತಗೆ ಮಲಗಲೂ ಅನುಕೂಲ. ಹಾಗೇ ಅದು ಸಗಣೀ ಗೋಮೂತ್ರದ ಜೊತೆ ಬೆರೆತು, ಫಲವತ್ತಾದ ಗೊಬ್ಬರವಾಗುತ್ತಿತ್ತು. ಈ ಗೊಬ್ಬರ ಉಂಡು ಬೆಳೆದ ಕೃಷಿ ಬೆಳೆಗಳು ತುಂಬ ಸಮೃದ್ಧಿಯಿಂದ ಕಂಗೊಳಿಸುತ್ತಿದ್ದವು.

ದೇಶವನ್ನೇ ನುಂಗಿದ ಆಧುನಿಕತೆ ಹಳ್ಳಿಗಳನ್ನೂ ಹೊಕ್ಕಿತು. ಹೈನವೊಂದು ವಾಣಿಜ್ಯ ಉದ್ಯಮವಾಯ್ತು. ಕೊಡಗಟ್ಟಲೇ ಹಾಲುಕೊಡುವ ಹೈಬ್ರಿಡ್ ತಳಿಯೆದುರು, ತುಸು ಹಾಲು ಕೊಡುವ ದೇಸೀ ಹಸುಗಳು ಮೂಲೆಗುಂಪಾದವು. ಮನೆಯ ನೆಲಕ್ಕೆ ಸಿಮೆಂಟ್ ಬಂದು, ಸಗಣಿಗೆ ನಿವೃತ್ತಿಯಾಯಿತು. ಗದ್ದೆಗೆ ಯಂತ್ರಗಳು ಇಳಿದು, ಎತ್ತುಗಳ ಕೆಲಸ ಕಸಿದವು. ರಸಗೊಬ್ಬರ ಹಾಕಿದರೆ, ಒಂದಕ್ಕೆರಡು ಬೆಳೆ ಎಂಬ ಭ್ರಮೆ ಜನರ ತಲೆಯೊಳಗೆ ಓಡಾಡಿ, ಸಗಣಿ ಗೊಬ್ಬರಕ್ಕೆ ಹಿನ್ನೆಡೆಯಾಯಿತು. ಒಟ್ಟಾರೆಯಾಗಿ ಇಡೀ ಗೋ ವಂಶವೇ ಜನರ ತಿರಸ್ಕಾರಕ್ಕೆ ಗುರಿಯಾಯಿತು. ಮನುಷ್ಯನ ಸ್ವಾರ್ಥ, ಲಾಲಸೆ, ಹಪಾಹಪಿಗೆ ಸಿಲುಕಿ, ಒಂದು ಕಾಲದಲ್ಲಿ ಸಾಕ್ಷಾತ್ ದೇವತಾ ಸ್ವರೂಪಿ ಎಂದು ಕರೆಸಿಕೊಂಡಿದ್ದ ದನಗಳೆಲ್ಲ ಕಸಗಳಾಗಿ, ಕಸಾಯಿ ಖಾನೆಗೆ ಅಟ್ಟಲ್ಪಟ್ಟವು. ಇಂದು ನಮ್ಮ ಮಲೆನಾಡಿನ ಬಹುತೇಕ ಮನೆಗಳು ಕೊಟ್ಟಿಗೆ ರಹಿತ ಮನೆಗಳಾಗುತ್ತಿವೆ. ಆಧುನಿಕತೆಯ ನಿಶೆಯೊಳಗೆ ಕಳೆದು ಹೋದ ಮಲೆನಾಡಿಗರು, ತಮ್ಮ ದೇಸೀತನವನ್ನು ಬಿಟ್ಟ ತಪ್ಪಿಗಾಗಿ, ಇಂದು ಮೈ ತುಂಬ ಆಧುನಿಕ ರೋಗ ರುಜಿನಗಳನ್ನು ಅಂಟಿಸಿಕೊಂಡು ಪಶ್ಚಾತ್ತಾಪ ಪಡತೊಡಗಿದ್ದಾರೆ.

ಮುಂದುವರಿಯುತ್ತದೆ…
(ಹಿಂದಿನ ಕಂತು: ನಮ್ಮ ಕಾಲದ ಕೃಷಿ….)