ಕಥೆಗಾರರು
ಮೊನ್ನೆ ಹೋಗಿದ್ದಾಗ
ಊರಿನ ಅಂಗಡಿಗೆ
ಅಲ್ಲಿ ಕುಳಿತಿದ್ದ
ಪರಿಚಯದವರೊಬ್ಬರು
ಕಂಡ ಕೂಡಲೇ ನನ್ನನ್ನು
ಹೇಳಿದರು ಸಂತೋಷದಿಂದ
ಓ! ಕಥೆಗಾರರು
ಅವರ ಆ ಮಾತು
ಯೋಚನೆಯಾಗಿ
ನನ್ನೊಳಗೆಲ್ಲಾ ಸುತ್ತಿ
ಸುಳಿದಾಡಿದಾಗ
ನವನವೀನ ಭಾವನೆ
ಚಿಂತನೆಗಳ ಮಹಾಪ್ರವಾಹ
ಎಲ್ಲರೊಳಗೂ ಒಂದು ಕಥೆಯಿದೆ;
ಕಥೆಗಾರನಿದ್ದಾನೆ
ನನ್ನದೊಂದು ಕಥೆಯಾದರೆ
ನಿಮ್ಮದೊಂದು ಕಥೆ
ಅವರದ್ದು ಇನ್ನೊಂದು ಕಥೆ
ಇವರದ್ದು ಮತ್ತೊಂದು ಕಥೆ
ದಸರಾ ಅಂಬಾರಿ
ಹೊರುತ್ತಿದ್ದ ಅರ್ಜುನ
ಸಕ್ಕರೆಯೆಂದರೆ
ಅಕ್ಕರೆಯಿರುವ ಇರುವೆ
ಊರೆದುರಿನ ವಿದ್ಯುತ್ ಕಂಬ
ಗೋಪಾಲಣ್ಣನ ಗೂಡಂಗಡಿ
ಮೋನಪ್ಪ ಮಾಸ್ಟ್ರ ಲೆಕ್ಕದ ಪಾಠ
ಎಲ್ಲದರ ಹಿಂದೆಯೂ
ಒಂದು ಕಥೆಯಿದೆ
ಅರ್ಧ ಗದ್ದೆಯಲ್ಲಿ
ಮಾತ್ರವೇ ಎದ್ದುನಿಂತ
ಭತ್ತದ ಪೈರು
ಭಾಷಣದ ಮಧ್ಯೆ
ರಾಜಕಾರಣಿ
ಹರಿಸಿದ ಕಣ್ಣೀರು
ಮಕ್ಕಳು ಮೊಮ್ಮಕ್ಕಳು ನಗುನಗುತ್ತಾ
ಮನೆಗೆ ಮರಳಿದಂತೆ
ಏಕಾಂಗಿ ವೃದ್ಧನಿಗೆ
ಬಿದ್ದ ಕನಸು
ಕಾಲೇಜು ರಸ್ತೆಯಲ್ಲೇ ಸವೆಯುವ
ಸಾಲ ಮಾಡಿ ಕೊಂಡ
ಜವ್ವನಿಗ ಬೈಕಿನ ಚಕ್ರಗಳು
ಪುಟ್ಟಮ್ಮಜ್ಜಿಯ ಮನೆಯ
ಹಂಚಿನ ಛಾವಣಿಯಲ್ಲಿ
ಕಾಣಿಸಿಕೊಂಡ ದೊಡ್ಡ ಬಿರುಕು
ಎಲ್ಲದರ ಹಿಂದೆಯೂ ಕಥೆ ಇದ್ದೇ ಇದೆ
ಸುಲಭವಾಗಿ ನಮ್ಮ ಅರಿವಿಗದು
ನಿಲುಕುವುದೇ ಇಲ್ಲ
ವಿದುರನ ಮೌನದ ಹಿಂದೆ
ಭೀಮನ ಕೋಪದ ಮುಂದೆ
ಶಕುನಿಯ ಕುತಂತ್ರದ ಈಚೆ
ಸೀತೆಯ ಅಪಹರಣಕ್ಕೂ ಆಚೆ
ದ್ರುಪದನನ್ನು ತುಳಿದ ದ್ರೋಣರ ಕಾಲಿನ ಕೆಳಗೆ
ದ್ರೌಪದಿಯ ಬಿಚ್ಚಿದ ಮುಡಿಗೂ ಮೇಲೆ
ಇದ್ದದ್ದು ಕಥೆಯೇ ಹೊರತು ಮತ್ತೇನಲ್ಲ
ಕಥೆ ಬರೆಯುವುದಕ್ಕೆ
ಪೆನ್ನು ಬೇಕಿಲ್ಲ
ಕಾಗದದ ಹಂಗಿಲ್ಲ
ಮನಭಿತ್ತಿಯಲ್ಲಿ ಅದು ಮೂಡಿನಿಲ್ಲುವ
ಬಗೆ ಹೇಗೆನ್ನುವುದು
ಯಾರಿಗೂ ತಿಳಿದಿಲ್ಲ
ಬರೆಯಲ್ಪಟ್ಟದ್ದು ಮಾತ್ರ ಕಥೆಯಲ್ಲ
ಬರೆಯದಿರುವ ಕಥೆಗಳೇ ಹಲವಿರುವಾಗ
ಅಕ್ಷರಗಳ ಮೊತ್ತವನ್ನೇ
ಕಥೆ ಎನ್ನುವುದಂತೂ
ಬಲು ಕಷ್ಟದ ವಿಷಯ
ಕಥೆಯ ಕಥೆಯಂತೂ
ಮುಗಿಯುವಂಥದ್ದೇ ಅಲ್ಲ!

ವಿಶ್ವನಾಥ ನೇರಳಕಟ್ಟೆ ಮೂಲತಃ ದಕ್ಷಿಣ ಕನ್ನಡದ ಬಂಟ್ವಾಳದವರು. ಬಂಟ್ವಾಳದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಮೊದಲ ತೊದಲು (ಕವನ ಸಂಕಲನ), ಕಪ್ಪು-ಬಿಳುಪು (ಕಥಾ ಸಂಕಲನ), ಹರೆಯದ ಕೆರೆತಗಳು (ಚುಟುಕು ಸಂಕಲನ), ಸಾವಿರದ ಮೇಲೆ (ನಾಟಕ) ಇವರ ಪ್ರಕಟಿತ ಕೃತಿಗಳು. “ಡಾ. ನಾ ಮೊಗಸಾಲೆಯವರ ಸಾಹಿತ್ಯದಲ್ಲಿ ಪ್ರಾದೇಶಿಕತೆ” ವಿಷಯದಲ್ಲಿ ಪಿಎಚ್.ಡಿ. ಸಂಶೋಧನೆ ಮಾಡಿದ್ದಾರೆ.
