ಹೀಗೇಕೆ…

ನಾವು
ಕಲ್ಲು ಸಕ್ಕರೆಯೋ,
ಭಂಡಾರವೋ
ಖರ್ಜೂರವೋ
ಕಲ್ಲೋ, ನೀರೋ
ಮಣ್ಣೋ
ಮತ್ತೆ ಇನ್ನೇನೋ
ವಸ್ತುಗಳಿಗೆ
Sacred ನ ಲೇಪ
ಬಳಿದು ಬಿಡುತ್ತೇವೆ

ಮುಟ್ಟಿಗೋ
ಸಾವಿಗೋ
ಕೊನೆಗೆ
ಹುಟ್ಟಿಗೂ ಕೂಡ
Profane ನ ಲೇಬಲ್
ಹಚ್ಚುತ್ತೇವೆ

ನದಿ, ನೀರು, ಗಾಳಿ
ಸೂರ್ಯ, ಚಂದ್ರ
ಮಣ್ಣು ಮರಗಳಲ್ಲಿ
ದೇವರನ್ನು ಕಾಣುವ
ನಾವು
ನಮ್ಮಂತೆ‌ ಇರುವ
ಮನುಷ್ಯರನ್ನು
ಮನುಷ್ಯರಂತೆ ಕಾಣಲು
ಸೋತಿದ್ದೇವೆ

ಸುಟ್ಟು ಹೋದವರೆಷ್ಟೋ
ಬದುಕು ಕಳೆದುಕೊಂಡವರೆಷ್ಟೋ
ಅಸ್ಪೃಶ್ಯತೆಯ ವಿಷವರ್ತುಲದೊಳಗೆ
ಮನುಷ್ಯನನ್ನು ಮನುಷ್ಯನಾಗಿ
ಕಾಣಲಾಗದಿದ್ದರೆ
ಏಸೋ ಕೈ ಮುಗಿದರೂ
ಎಷ್ಟೇ‌ ಮೈತೊಳೆದುಕೊಂಡರೂ
ಅಪವಿತ್ರರೇ!

ದಾಕ್ಷಾಯಣಿ ಮಸೂತಿ ಪ್ರಾಥಮಿಕ ಶಾಲೆ ಶಿಕ್ಷಕಿಯಾಗಿ ಕುರುಗೋಡು ತಾಲ್ಲೂಕಿನ ಬಾದನಹಟ್ಟಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ‌.
“ಊದ್ಗಳಿ” ಇವರ ಪ್ರಕಟಿತ ಕವನ ಸಂಕಲನ.