ಇಂತಾ ಜೋರಿನ ಅತ್ತೇ ಒಂದು ಪುಂಡ ಹಸಾನ ಪಳಗಿಸಿದ್ಲು. ಆ ಹಸು ಎಷ್ಟು ಜೋರು ಅಂದ್ರೇ ಯಾರಿಗೂ ಹಾಲು ಕರೆಯೋಕೇ ಬಿಡ್ತಿರಲಿಲ್ಲ. ನಮ್ಮತ್ತೇನೂ ಜೋರಲ್ವಾ. ಅದೂ ಜೋರು. ಇಬ್ರಲ್ಲೂ ಬಲು ಸ್ನೇಹ. ನಮ್ಮತ್ತೆ ಹಾಲು ಕರೆದರೆ ಕಮಕ್ ಕಿಮಕ್ ಅಂತಿರಲಿಲ್ಲ ತುಡುಗು ಮುಂಡೇದು. ಕೊನೇಗೆ ಮದುವೇ ದಿನ ಹಸೆಮಣೇ ಮೇಲಿದ್ದಾರೆ. ಈ ಹಸಾ ಹಾಲು ಕೊಡಲಿಲ್ಲ ಅಂತಾ ಹೇಳಿದ್ದಾರೆ. ನಮ್ಮತ್ತೆ ಹಸೇಮಣೇ ಮೇಲಿಂದ ಎದ್ದು ಹೋಗಿ ಹಾಲು ಕರೆದುಕೊಟ್ಟು ಬಂದಿದ್ದಾರೆ. ಅವ್ರ ಮದುವೆ ಆದ ಮೇಲೆ ಆ ಹಸಾನಾ ಬಗ್ಗಿಸೋಕಾಗ್ದೆ ಮಾರಿಬಿಟ್ರು.
ಸುಮಾ ಸತೀಶ್ “ರಂಗಿನ ರಾಟೆ” ಸರಣಿಯಲ್ಲಿ ಮದುವೆ ಮನೆಯ ಮತ್ತಷ್ಟು ವಿಷಯಗಳ ಕುರಿತ ಬರಹ ನಿಮ್ಮ ಓದಿಗೆ
ಯಪ್ಪಾ ಮದುವೆಮನೆ ಅಂದ್ರೆ ಸಾಕು ಗಲಾಟೇನೋ ಗಲಾಟೆ. ತಿಂಗಳೊಪ್ಪತ್ತು ಮುಂಚೇನೇ ಎಲ್ರೂ ಬಂದು ಸೇರೋರು. ಎಂಟು ಜನ ಹೆಣ್ಣುಮಕ್ಕಳು, ಮೊಮ್ಮಕ್ಕಳು, ಅಳಿಯಂದ್ರು ಎಲ್ರೂ ಕೂಡಿದ್ರೆ ದೊಡ್ಡ ಜಾತ್ರೇಗೆ ಸಮ ಆಗ್ತಿತ್ತು.
ರಾಶಿ ಕೆಲಸ ಇರ್ತಿತ್ತು. ಒಬ್ರಿಗೊಬ್ರು ಕಾಲೆಳಕೊಂಡು, ಮೂದಲಿಸಿಕೊಂಡು ಕತೆ ಕಳೀತಿದ್ರು. ಕೆಲಸ ಅಂಗೇ ಮುಗೀತಿತ್ತು. ಮದುವೇಲಿ ಯಾವ ಸೀರೆ ಒಡವೆ ಹಾಕ್ಕೋಬೇಕೂಂತ ಮಾತು ನಡೀತಿರಲಿಲ್ಲ. ಯಾವ ಹಾಡು ಹೊಸದಾಗಿ ಕಟ್ಟಬೇಕು? ಬೀಗರಿಗೆ ಯಾವ ಒಗಟು ಹಾಕಬೇಕು? ಅವರನ್ನು ಹೇಗೆ ಬಗ್ಗುಬಡೀಬೇಕು(ಹಾಡಿನ ಮೂಲಕ ಆಡಿಕೊಂಡು)? ಇಂಥವೇ ಮಾತುಕತೆ. ಜೊತೇಲಿ ಅವರವರ (ಗಂಡನ ಮನೆಯಲ್ಲಿ) ಊರಿನ ಅಕ್ಕಪಕ್ಕದವರ ವಿಷಯವನ್ನೂ ಎತ್ತಿ ತಮಾಷಿ ಮಾಡುವುದು. ಯಾರ್ಯಾರ ಮದುವೇಲಿ ಏನೇನು ತಮಾಷಿ ಆಯ್ತು ಅನ್ನೋ ನೆನಪಿನ ಬುತ್ತೀನೂ ಹರಡುತ್ತಿದ್ದರು. ಆ ಬುತ್ತಿಯ ನಾಕಾರು ಕತೆಗಳು ಬಲು ಮಜವಾಗಿವೆ.
ಕುರುಡಿ ಹೆಣ್ಣು
ಅಪ್ಪ ಮದುವೇಗೆ ಹುಡುಗಿ ನೋಡೋಕೆ ಹೋಗಿದ್ರು. ತಾತಾನೂ ಮೆತ್ತಗಾಗಿದ್ರಲ್ಲ. ನಮ್ಮಮ್ಮನ್ನ ನೋಡೋಕೆ ಹೋಗಿ ಬಂದ ಮೇಲೆ ಹುಡುಗಿ ಒಪ್ಪಿಗೆಯಾಗಿದೆ ಅಂತ ಹೇಳಿ ನಮ್ಮ ದೊಡ್ಡತ್ತೇಗೆ(ಅವ್ರ ದೊಡ್ಡಕ್ಕ. ಅಮ್ಮನ ಸಮ. ಅವ್ರ ಮನೇಲೇ ಒಂದಷ್ಟು ವರ್ಷ ಇದ್ದು ಓದಿದ್ರು) ಪತ್ರ ಬರ್ದಿದ್ದಾರೆ. ಮದುವೆ ಮಾತುಕತೇಗೆ ಬನ್ನಿ ಅಂತ. ಪತ್ರದಲ್ಲಿ ಹೆಣ್ಣು ಕುರುಡಿ ಅಂತ ಬರ್ದಿದ್ದಾರೆ. (ನಮ್ಮಮ್ಮನ ಊರು ಕುರೂಡಿ. ಗೌರಿಬಿದನೂರು ತಾಲ್ಲೂಕಿನಲ್ಲಿದೆ.) ನಮ್ಮತ್ತೆ ಪತ್ರ ಓದಿದ್ದೇ ತಡ ಗೊಳೋ ಅಂತ ಅಳೋಕೆ ಶುರು ಮಾಡಿದ್ದಾರೆ. ಅಯ್ಯೋ ಬಂಗಾರದಂತ ಹುಡುಗ. ಏನು ಬಂದೈತೆ ಅವುಂಗೆ. ಹೋಗಿ ಹೋಗಿ ಕುರುಡೀನ ಮದ್ವೇ ಆಗ್ತಾ ಅವ್ನಲ್ಲ. ನಮ್ಮಮ್ಮನ ಗತಿ ಏನು? ಒಂದೇ ಸಮನೆ ವದರಾಡ್ತಾ, ತಕ್ಷಣ ಚಿಕ್ಕ್ಮಾಲೂರಿನ್ ಬಸ್ಸು ಹತ್ತಿ ಬಂದೇ ಬಿಟ್ರು. ಅಯ್ಯೋ ನಿನ್ ಮನೆ ಕಾಯ್ವಾಗ ಯಾಕಪ್ಪಾ ಕುರುಡೀನ ಮದ್ವೇ ಆಗೋಕೆ ಒಪ್ಕಂಡು ಬಂದಿದೀಯಾ. ನಾನು ಇರಾಗಂಟ ಬಿಲ್ಕುಲ್ ಈ ಮದ್ವೆ ಆಗಾಕೆ ಬಿಡಾಕಿಲ್ಲ ಅಂತ ಪಟ್ಟು ಹಿಡ್ದು ಕುಂತ್ರು. ನಮ್ಮಪ್ಪಂಗೆ ಏನೂ ಅರ್ಥ ಆಗ್ದೇ ಗಾಬ್ರಿ ಆದ್ರು. ಪತ್ರ ತೋರ್ಸಿದ್ ಮೇಲೆ ಅಯ್ಯೋ ಬರ್ಯೋವಾಗ ಕೊಂಬು ಕಳ್ದೋಗಿದೆ ಅಂತಾ ನಗಾಡಿದ್ರು. ಕುರೂಡಿ ಅಂತ ಊರು ಅಂದ್ ಮೇಲೇನೆ ಅತ್ತೆಗೆ ಸಮಾಧಾನ. ಅದ್ರಲ್ಲೂ ಅಪ್ಪ ಊರು ಉದ್ಧಾರಾ ಮಾಡೋಕೆ ಸ್ವಂತ ದುಡ್ಡು ಕಾಸೂ ಖರ್ಚು ಮಾಡ್ಕಂಡು ಸೇವೆ ಮಾಡ್ತಿದ್ರಲ್ಲ. ಅದ್ಕೇ ಇದೂ ಒಂದು ಸೇವೇಂತ ಮಾಡ್ಕಂತಿರ್ಬೇಕೂ ಅಂತ ಗುಮಾನಿ ಪಟ್ಟಿದ್ರು. ಇದ್ನ ನಮ್ಮತ್ತೆ ನಾನು ದೊಡ್ಡೋಳಾದ ಮೇಲೂ ಹೇಳ್ಕಂಡು, ನಿಮ್ಮಪ್ಪಂಗೆ ನಾನೇ ಅಕ್ಷರ ಕಲುಸ್ದೆ. ಆದ್ರೆ ಕೊಂಬು ಕತ್ತರಿಸಿ ಪತ್ರ ಬರ್ದು ಎಷ್ಟು ಅವಾಂತ್ರ ಮಾಡ್ದ ಅಂತ ನಗಾಡ್ತಿದ್ರು.
ರಾರಾ ನಂದಗೋಪಾಲ
ಆಗಿನ ಕಾಲದಲ್ಲಿ ಹುಡುಗೀನ ನೋಡೋಕೆ ಬರ್ತಾರೆ ಅಂತಾ ಮಾತ್ರ ಹೇಳೋರೇ ಹೊರ್ತು ಹುಡುಗನ ಕುಲಗೋತ್ರ ಹೇಳ್ತಿರಲಿಲ್ಲ. ಇಂತಾ ಊರಿನೋರು ಅಂತ ಹೇಳ್ತಿದ್ರು. ಹುಡುಗನ ಹೆಸರೇ ಗೊತ್ತಿರುತ್ತಿರಲಿಲ್ಲ. ಊರಿನ ಹೆಸರೇ ಮುಂದೆ ಇರ್ತಿತ್ತು. ಹುಡುಗೀ ವಿಷ್ಯಾ ಬಿಡಿ. ಹುಡುಗೀ ಅಪ್ಪಂಗೇ ಅಳಿಯನಾಗೋನ ಹೆಸ್ರು ಗೊತ್ತಿದ್ರೆ ಹೆಚ್ಚು. ಬೀಗರ ಹೆಸ್ರು ಮಾತ್ರ ತಿಳ್ಕಂತಿದ್ರು.
ಬಂದ ನಂಟರಿಗೆ ತಿಂಡಿ ತೀರ್ಥದ ಸಮಾರಾಧನೆ ಆದ್ ಮೇಲೆ ಹುಡುಗೀ ಕರ್ಕಂಡು ಬರ್ತಿದ್ರು. ಹುಡುಗೀ ಬಂದು ತಲೆ ಬಗ್ಗಿಸ್ಕಂಡು ನೆಲಾ ನೋಡ್ತಾ ಕುಂತ್ರೆ, ಒಂದು ಪದ ಹೇಳಮ್ಮಿ ಅಂತಿದ್ರು. ಯಾವ್ದೋ ಒಂದು ದೇವ್ರ ಹಾಡು ಹೇಳ್ಕಂತಿದ್ರು. ಅಕ್ಕಂದ್ರು ಯಾವ ಹಾಡು ಹೇಳಿಕೊಟ್ಟಿರ್ತಾರೆ, ಇಲ್ಲಾ ಯಾವ್ದಾನಾ ಹೊಸದಾಗಿ ಕಲಿತ ಹಾಡು ಹೇಳೋರು.
ನಮ್ಮ ಚಿಕ್ಕತ್ತೆ(ವಿಜೀ – ವಿಜಯಲಕ್ಷ್ಮಿ) ನೋಡೋಕೆ ಹುಡುಗನ ಕಡೆಯವ್ರು ಬಂದಿದ್ದಾರೆ. ಯಥಾಪ್ರಕಾರ ಹಾಡೋಕೆ ಹೇಳಿದ್ದಾರೆ. ನಮ್ಮತ್ತೆ ತಕ್ಷಣ ಶುರು ಹಚ್ಕಂಡಿದಾರೆ. ರಾರಾ ನಂದಗೋಪಾಲ ಅಂತ. (ತೆಲುಗು ಹಾಡು. ಬಾರೋ ನಂದಗೋಪಾಲ ಅಂತ ಕೃಷ್ಣನ್ನ ಭಕ್ತಿಯಿಂದ ಕರ್ದಿದ್ದಾರೆ) ನಮ್ಮ ಮಾವನ ಹೆಸ್ರೂ ನಂದಗೋಪಾಲ. ನಮ್ಮತ್ತೆ ಹಾಡು ಹೇಳ್ತಿದ್ರೆ ನಮ್ಮ ಮಾವ ನಾಚಿಕೊಂಡು ತಲೆ ಬಗ್ಗಿಸಿದ್ದಾರೆ. ಜೊತೇಗೆ ಬಂದೋರು ಮುಸಿ ಮುಸಿ ನಕ್ತಿದ್ದಾರೆ. ಪಾಪ ತಲೆಬಗ್ಗಿಸಿರೋ ಅತ್ತೆಗೆ ಅದೆಲ್ಲಾ ಎಂಗೆ ತಿಳೀಬೇಕೂ?? ಪೂರ್ತಿ ಹಾಡು ಹೇಳೇ ನಿಲ್ಸಿದ್ದಾರೆ. ಆಮೇಲೆ ಅವ್ರೆಲ್ಲಾ ಏನಮ್ಮಾ ನಮ್ಮ ಹುಡುಗನ ಹೆಸ್ರು ಹಿಡ್ದೇ ಕರೆದು ಬಿಟ್ಟೆ ಅಂದ್ರೆ ನಮ್ಮತ್ತೆ ಬಲೇ ಸಿಗ್ಗು ಬಿದ್ದು(ನಾಚಿ) ನೆಲುಕ್ಕೇ ತಲೆಬಗ್ಗಿಸ್ ಬಿಟ್ರಂತೆ. ಆಗಾಗ ನಮ್ಮ ಮಾವ ಈ ಕತೇನ ಮೆಲುಕು ಹಾಕೋರು.
ಹಸೇಮಣೇ ಮೇಲಿಂದ ಎದ್ದು ಬಂದು
ನಮ್ಮ ನಾಗೂ ಅತ್ತೆ ಬಲೆ ಜೋರು ಅಂತ್ಲೇ ಫೇಮಸ್ಸು. ತಾತ ಚಿಲ್ರೆ ಅಂಗಡಿ ಇಟ್ಟಿದ್ರಲ್ಲ. ಅಂಗಡೀಲಿ ತಾತ ಇಲ್ದಿರೋವಾಗ ಹೆಣ್ಣುಮಕ್ಕಳೂ ಕುಂತು ಯಾಪಾರ ಮಾಡ್ತಿದ್ರು. ಜನ್ರೂ ಬರೋರು ಚೌಕಾಸಿ ಮಾಡ್ತಿದ್ರು. ಅಯ್ಯೋ ಹೋದ್ರೋಗ್ಲಿ ಅಂತ ಇವ್ರೂ ಸೈತ ಬಿಟ್ ಕೊಡೋರು. ನಮ್ ನಾಗೂ ಅತ್ತೇ ಮಾತ್ರ ಬಂದೋರ್ಗೇ ಹೆದುರ್ಸಿ ಬೆದುರ್ಸಿ ದಬಾಯ್ಸಿ ಚಿಕ್ಕಾಸೂ ಕಡ್ಮೇ ಮಾಡ್ದೇ ಕಳುಸ್ತಿದ್ರು. ಅವ್ರೂ ಬಲ್ ಬಜಾರಿ. ಗಂಡನ್ನ ಸಂತೇಲಿಟ್ಟು ಮಾರಿ ಬಿಡ್ತಾಳೆ ಅಂತ ಗೊಣಗಾಡ್ಕಂಡು ಹೋಗ್ತಿದ್ರು.
ಇಂತಾ ಜೋರಿನ ಅತ್ತೇ ಒಂದು ಪುಂಡ ಹಸಾನ ಪಳಗಿಸಿದ್ಲು. ಆ ಹಸು ಎಷ್ಟು ಜೋರು ಅಂದ್ರೇ ಯಾರಿಗೂ ಹಾಲು ಕರೆಯೋಕೇ ಬಿಡ್ತಿರಲಿಲ್ಲ. ನಮ್ಮತ್ತೇನೂ ಜೋರಲ್ವಾ. ಅದೂ ಜೋರು. ಇಬ್ರಲ್ಲೂ ಬಲು ಸ್ನೇಹ. ನಮ್ಮತ್ತೆ ಹಾಲು ಕರೆದರೆ ಕಮಕ್ ಕಿಮಕ್ ಅಂತಿರಲಿಲ್ಲ ತುಡುಗು ಮುಂಡೇದು. ಕೊನೇಗೆ ಮದುವೇ ದಿನ ಹಸೆಮಣೇ ಮೇಲಿದ್ದಾರೆ. ಈ ಹಸಾ ಹಾಲು ಕೊಡಲಿಲ್ಲ ಅಂತಾ ಹೇಳಿದ್ದಾರೆ. ನಮ್ಮತ್ತೆ ಹಸೇಮಣೇ ಮೇಲಿಂದ ಎದ್ದು ಹೋಗಿ ಹಾಲು ಕರೆದುಕೊಟ್ಟು ಬಂದಿದ್ದಾರೆ. ಅವ್ರ ಮದುವೆ ಆದ ಮೇಲೆ ಆ ಹಸಾನಾ ಬಗ್ಗಿಸೋಕಾಗ್ದೆ ಮಾರಿಬಿಟ್ರು.
ಕಂಬಳಿ ಹೊದ್ದು
ನಮ್ ನಾಗೂ ಅತ್ತೇ ಮದುವೆ ಕತೆಗ್ಳು ಸ್ವಲ್ಪ ಜಾಸ್ತೀನೇ. ಅವ್ರನ್ನ ಕೇಳೋಕೇ ಅಂತ ಬಂದ ಅವ್ರ ಮಾವನ ಕತೆ ಕೇಳಿ. ಬೆಳಬೆಳಗಿನ ಜಾವ, ಚಳೀಲಿ ದಪ್ಪಗಿರೋ ಕರಿ ಕಂಬಳಿ ಗುಬುರಾಕ್ಕಂಡು (ಮೈ ತುಂಬಾ ಹೊದ್ಕಂಡು)ಪಂಚೇನೂ ಹಾಕ್ಕೊಳ್ದೇ ಒಂದು ಲುಂಗಿ ಎತ್ತಿ ಕಟ್ಕಂಡು, ಶ್ರೀಕಂಠಪ್ಪೋಳ್ ಇಲ್ಲು ಎಕ್ಕಡ? (ಶ್ರೀಕಂಠಪ್ಪನವರ ಮನೆ ಎಲ್ಲಿ) ಅಂತ ಕೇಳ್ಕಂಡು ಮನೆ ಮುಂದೆ ಬಂದೌರೆ. ಅವ್ರ ಅವತಾರ, ವೇಷ ನೋಡಿ ನಮ್ಮಜ್ಜೀ ಅಯ್ಯಪ್ಪ, ನನ್ ಮಗುಳ್ನ ಇವ್ರ ಮನೇಗೇ ಕೊಡೋಲ್ಲ ಅಂತ ತೀರ್ಮಾನ್ಸಿದ್ರು. ಆದ್ರೆ ಹೆಂಗಸರ ತೀರ್ಮಾನ ಎಷ್ಟೊತ್ತು ನಿಂತೀತು? ಬೇರೆಯೋರ್ ಒಂದು ಮಾತು ಅವಳ ತೀರ್ಮಾನಾನ ಅಳಿಸಿ ಹಾಕೋದೇ.
ಕೊನೇಗೆ ಅವ್ರ ಮನೇಗೇ ಹೋಗೋ ಅಂಗಾಯ್ತು ನಮ್ಮತ್ತೆ. ಆ ತಾತ ಸ್ವಲ್ಪ ಕೊಚ್ಚಿಕೊಳ್ಳೋದು ಜಾಸ್ತಿ. ಮದುವೇಗೆ ಒಂದು ಬಸ್ಸಿನ ಜನ ಬರ್ತೀವಿ ಅಂತ ಜಬರ್ಸಿ ಹೇಳಿದ್ದಾರೆ. ನಮ್ಮತ್ತೇದೀರೂ, ಅಜ್ಜಿ ಬೀಗರು ಐವತ್ತು ಅರವತ್ತು ಜನ ಬರ್ತಾರೆ ಅಂತ ಜಾಸ್ತೀನೇ ತಯಾರಿ ಮಾಡ್ಕಂಡು ಕಾಯ್ತಿದ್ದಾರೆ. ಬಸ್ಸು ಬರೋ ಟೇಮಿಗೆ ಬೀಗ್ರನ್ನ ಮರ್ಯಾದೆಯಿಂದ ಕರ್ಕಂಡು ಬರೋಕೆ ದಡದಡಾಂತ ಅರಿಸಿಣ ಕುಂಕುಮ ತಟ್ಟೆ ತಕಂಡು, ಸಡಗರದಿಂದ ಅಕ್ಕಂದ್ರು ಬಸ್ ಸ್ಟ್ಯಾಂಡಿಗೇ ಹೋಗವ್ರೆ. ಮದುವಣಗಿತ್ತಿ ನಮ್ ನಾಗೂ ಅತ್ತೆ ಮನೇಲೇ ಇದ್ದಾರೆ. ಎಲ್ರೂ ವಾಪಸ್ ಬಂದ ಮೇಲೆ ನಮ್ಮತ್ತೆ ಕುತೂಹಲದಿಂದ ಅವ್ರ ಅಕ್ಕಂಗೆ, ಸಾವಿತ್ರಕ್ಕಯ್ಯ ಎನ್ನಿ ಜನಾಲು ವಚ್ಚಿಂಡ್ರಿ? ಬಸ್ಸು ನಿಂಡಾ ಜನಾಲಾ( ಸಾವಿತ್ರಕ್ಕ ಎಷ್ಟು ಜನ ಬಂದಿದ್ರು? ಬಸ್ಸು ತುಂಬಾ ಜನಾನಾ) ಅಂತ ಕೇಳಿದ್ಕೇ ಸಾವಿತ್ರತ್ತೆ ಉತ್ತರ ನೆನಪು ಮಾಡ್ಕಂಡ್ರೆ ಇವತ್ತಿಗೂ ನಗೂ ತಡ್ಕಣಾಕಾಗಲ್ಲ. ‘ಹೂನೇ, ಎನಿಮಿದಿ ಜನಾಲು ವಚ್ಚಿಂಡ್ರಿ. ನಲುಗ್ರು ಆಡೋಳ್ಳು ನಲುಗ್ರು ಮಗೋಳ್ಳು. ದಾಂಟ್ಲಾ ಪಸುಪು ಕುಂಕ್ಮು ತಟ್ಟ ಪೆಟ್ಟಿಕೊನೇಕಿ ಇದ್ರು ಮುತ್ತೈದ್ಲು, ಎನಕ ಕಾವಲಿಕಿ ಇದ್ರು ಮುಂಡುಮೋಪುಲು( ಹೂನೇ ಯಾಕೇಳ್ತೀಯಾ, ಎಂಟು ಜನ ಬಂದವ್ರೆ. ನಾಕು ಗಂಡಸ್ರು, ನಾಕು ಹೆಂಗಸ್ರು. ಅದ್ರಲ್ಲೂ ಇಬ್ರು ಅರಿಸಿಣ ಕುಂಕುಮ ತಟ್ಟೆ ಇಟ್ಟುಕೊಳ್ಳೋ ಮುತ್ತೈದೇರು, ಅವ್ರ ಹಿಂದೆ ಕಾವಲಿಗೆ ಇಬ್ರು ವಿಧವೇರು) ಅಂತ ವ್ಯಂಗ್ಯವಾಗಿ ಹೇಳಿದ್ರು. ನಮ್ಮತ್ತೇದೀರೆಲ್ರೂ ಇಂಗೇ ವ್ಯಂಗ್ಯವಾಗಿ ಮಾತಾಡಿ ಕಾಲೆಳೆಯೋದ್ರಲ್ಲಿ, ಆಡಿಕೊಂಡು ತಮಾಷಿ ಮಾಡೋದ್ರಲ್ಲಿ ನಾಕೆಜ್ಜೆ ಮುಂದೇನೆ. ಆದ್ರೆ ಎಲ್ರೂ ಕಷ್ಟಜೀವಿಗಳು. ಏನೇ ಕೆಲಸ ಬೊಗಸೆ ಇದ್ರೂ ಮಾಡೋರು. ಸಮಯಾ ಸಂದರ್ಭಾ ಅಂದ್ರೆ ಹೆಗಲು ಕೊಡೋರು.

ಬುಡುಕಲು ರಂಗಶೆಟ್ಟಿ ಕತೆ
ಮದುವೇ ಮಾರನೇ ದಿನ ಬೀಗರಿಗೆ ಸರಿಯಾಗಿ ಮರ್ಯಾದೆ ಮಾಡಿಲ್ಲ ಅಂತ ಕೋಪ ಮಾಡ್ಕಂಡು ನಾಗೂ ಅತ್ತೆ ಮಾವ, ಬಿಡದಿ ಮನೆಯಿಂದ( ಅವ್ರು ಉಳಕೊಂಡ ಮನೆಯಿಂದ) ಕಾಶೀಯಾತ್ರೇಲಿ ಕೊಟ್ಟ ಸಾಮಾನುಗಳ್ನ ಒಂದೊಂದೇ ತಂದೂ ತಂದೂ ನಮ್ಮನೇ ಪಡಸಾಲೇನಲ್ಲಿ ಬಿಸಾಕ್ತಿದ್ರು. (ಪಡಸಾಲೇ ತುಂಬಾ ನಂಟರು. ಅತ್ತೇದೀರೆಲ್ಲಾ ಅವ್ರನ್ನು ವಿಚಾರ್ಸಿಕೊಳ್ಳೋದ್ರಲ್ಲಿ ಪುರುಸೊತ್ತಿಲ್ಲದೇ ಓಡಾಡ್ತಿದ್ರು.) ಬಂದ ನಂಟರಿಗೆ ಆತಂಕ. ಅಯ್ಯೋ ಬೀಗ್ರು ಕೋಪ ಮಾಡ್ಕಂಡವ್ರೆ. ಏನಾಗುತ್ತೋ ಏನೋ. ನಿನ್ನೆ ತಾನೆ ಮದ್ವೆ ಆಗಿದೆ. ಆ ಹೆಣ್ಣುಮಗೂ ಗತಿ ಏನೂ? ಇವ್ರು ನೋಡಿದ್ರೆ, ಯಾರೂ ತಲೇನೇ ಕೆಡುಸ್ಕಂತಿಲ್ಲ. ಅವುರ್ ಪಾಡಿಗವ್ರು ಕೆಲ್ಸ ಮಾಡ್ಕಂತಾವ್ರೆ ಅಂತ ತಡೀಲಾರ್ದೆ ನಮ್ಮ ದೊಡ್ಡ ಅತ್ತೇನ ಕೇಳೇ ಬಿಟ್ರು. ಸುಂದ್ರಮ್ಮ ಏನಮ್ಮ ನಿನಗೆ ಭಯವೇ ಇಲ್ವೇ ಅಂದ್ರು. ಸುಂದ್ರಮ್ಮತ್ತೆ, ಅಯ್ಯೋ ಇದೇನ್ ಮೊದುಲ್ನೇ ಮದುವೇನೇ ನಾನು ಕಂಡಿರೋದು. ಎಷ್ಟು ಮದ್ವೇ ಕಂಡಿಲ್ಲ. ಇವುಕ್ಕೆಲ್ಲಾ ಸೊಪ್ಪು ಹಾಕಾಕಾಗುತ್ತೇ. ಬುಡುಕಲು ರಂಗಶೆಟ್ಟಿ ಕತೆ ಗೊತ್ತಿಲ್ವೇ ಅಂದ್ರಂತೆ. ಏನು ಕತೆ ಅಂತ ಕೇಳಿದಾಗ, ಬುಡಕಲು ರಂಗಶೆಟ್ಟಿ ಇಂಗೇ ಮದುವೇ ಮನೇಲಿ ಬೀಗರ ಮುಂದೆ ಒಂದೊಂದೇ ಸಾಮಾನು ತಂದು ಬಿಸಾಕಿದ್ನಂತೆ. ಪೆಟ್ಟಿಗೆ ಕಂಕುಳಲ್ಲಿ ಇಟ್ಕಂಡು ಹೆದುರ್ಸಿದ್ನಂತೆ. ಯಾರೂ ಉಪ್ಪು ಹಾಕಲಿಲ್ಲ. (ಕೇರ್ ಮಾಡಲಿಲ್ಲ) ತಿರ್ಗಾ ಬಂದು ಒನ್ನೊಂದೇ ಸಾಮಾನು ಆರಿಸ್ಕಂಡು ವಾಪಸ್ ಹೋದ ಅಷ್ಟೆ. ನಮ್ಮದೇನೂ ತಪ್ಪಿಲ್ಲ. ತಪ್ಪು ಹುಡುಕೋರ್ಗೇ ಎಲ್ಲಾದ್ರಲ್ಲೂ ಸಿಗುತ್ತೆ. ನಾವೇನೂ ಮಾಡೋಕಾಗಲ್ಲ. ಸರಿ ಸರಿ ನಂಗೆ ಅಡುಗೆ ಮನೇಲಿ ಕೆಲಸ ಇದೆ ಅಂತ ಒಳಗೋದ್ರಂತೆ. ಅಂತಾ ಗಟ್ಟಿಗಿತ್ತಿದೀರು ಇವ್ರು. ಆದ್ರೂ ನಮ್ ನಾಗೂ ಅತ್ತೆ ಬಲು ಕಷ್ಟ ಪಟ್ಟಿದ್ದಾರೆ. ಇಲ್ಲಿ ಜೋರಿದ್ರೂ ಹೋದ ಮನೇಲಿ ಅವ್ರು ಬೆಂದು ಹೋಗಿದ್ರು. ಆದ್ರೂ ಬದುಕ್ನ ನೀಸಿ ಗೆದ್ರು. ಬೆಂಕಿಯಲ್ಲಿ ಅರಳಿದ ಹೂವು ಅಂತ ಹೇಳ್ಬೋದು.
ಮದುವೇಲಿ ಕಟ್ದಿದ್ದ ಹಾಡುಗ್ಳು
ಆಗೆಲ್ಲಾ ಫಾರಿನ್ಗೆ ಹೋಗೋರು ಕಡಿಮೆ. ಬೇರೆ ದೇಶಗಳ ಹೆಸರೂ ಸೈತ ಗೊತ್ತಿರ್ಲಿಲ್ಲ. ನಮ್ಮತ್ತೇದೀರಲ್ಲಿ ಮೈಸೂರತ್ತೆ (ಶಾಂತಮ್ಮತ್ತೆ. ಮೈಸೂರಿನಲ್ಲಿ ಇದ್ರು. ಪ್ರಪಂಚ ಜ್ಞಾನ ಜಾಸ್ತಿ ಇತ್ತು. ಫಾರಿನ್ ಹೆಸ್ರೂ ಗೊತ್ತಿತ್ತು. ಇಂಗ್ಲಿಷ್ ಪದಗ್ಳೂ ಗೊತ್ತಿದ್ವು. ಮದುವೇಮನೇಲಿ ಹಾಡು ಕಟ್ಟಿ ಹಾಡೋದ್ರಲ್ಲಿ ಸೈ ಅನ್ನುಸ್ಕಂಡಿದ್ರು.)
ಗೊ ಟು ದಿ ಐರ್ಲೆಂಡ್, ಇಂಗ್ಲೆಂಡ್
ಎಕ್ಸಾಮ್ ಪಾಸ್ ಮಾಡಿದ್ರೇನೇ ಹುಡುಗಿ ಕೊಡೋದು ಅಂತಾ ಹಾಡು ಕಟ್ಟಿ ಹೇಳಿ ಗೋಳಾಡಿಸ್ತಿದ್ರು. ಅವ್ರು ಸುಮ್ನೇ ಬಿಟ್ಟಾರೇ? ಕಾಸು ಕೊಡಿ. ಓದಿಸ್ತೀವಿ. ನಿಮ್ಮುಡುಗೀನ ಇಂಗ್ಲೆಂಡ್ಗೆ ಕರ್ಕೊಂಡು ಹೋಗಿ ರಾಣೀನ ತೋರಿಸ್ತೀವಿ ಅಂತ ಇನ್ನೊಂದು ಹಾಡು ಬಿಡೋರು.
ಅತ್ತಿಗೆ ನಾದಿನಿಯರ ಕಾಲೆಳೆದಾಟ, ಬೀಗರು ಬೀಗರ ಕೆಸರೆರೆಚಾಟ
ಪರಸ್ಪರ ಹಾಡಿನಲ್ಲಿ ಮೂದಲಿಸೋದು.
‘ಅತ್ತಿಗೆ ತೊತ್ತಿಗೆ ಮಂಗಳಂ
ಬಚ್ಚಲು ಗೋಡೆಗೆ ಮಂಗಳಂ
ಬಜಾರು ತೊತ್ತಿಗೆ ಮಂಗಳಂ’
ಅಂತ ಒಬ್ರು ತಿವಿದ್ರೆ, ಇನ್ನೊಬ್ರು ಬಿಟ್ಟಾರೇ ?? ಬೀಗರ ಮೇಕಪ್ಪಿನ ಬಗ್ಗೆ ಇವ್ರ ಹಾಡು.
ನಮ್ಮತ್ತಿಗೆ ಮುಖಕ್ಕೆ ಬೂದಿ( ಪೌಡರ್) ಬಳಿತಾಳೆ
ವಾಕಿಂಗ್ ಅಂತಾಳೆ ಮೀಟಿಂಗ್ ಮಾಡ್ತಾಳೆ
ಇನ್ನೂ ಏನೇನೋ ಸೇರ್ಸಿ ಹಾಡೋರು. ಅವತ್ತೊಂದಿನ ಏನು ಆಡ್ಕೊಂಡ್ರೂ ನಡೀತೈತೆ ಅಂತ ದರಬಾರು ಮಾಡ್ತಿದ್ರು.
ವದನಿಕಿ ಒಗ ತರ
ಬಿಂದಿಕಿ ಬಿಗಿ ತರ
ಬಂಗಾರು ಕುಚ್ಚುಲಂಟು ಮಾ ವದಿನ
ಚಿಪ್ಪುಲು ಕಟ್ಟುಕೊನಿ ಮೆರಿಸ್ತುಂದಿ
ಅಂತ ಕಾಲೆಳೆಯೋರು. (ಬಂಗಾರದ ಕುಚ್ಚು ಅಂತ ತೆಂಗಿನ ಚಿಪ್ಪು ಕಟ್ಟಿಕೊಂಡು ಮೆರೀತಾಳೆ)
ಮದುಮಗನ ಕಡೆಯೋರು ಡಿಮ್ಯಾಂಡ್ ಮಾಡೋರು.
ತಲೆಗೆ ಬೇಕು ದುಂಡನೆ ಹ್ಯಾಟು
ಬೆರಳಿಗೆ ಬೇಕು ವಜ್ರದ ಉಂಗುರ
ಕೈಗೆ ಬೇಕು ಮುನ್ನೂರು ರೂಪಾಯಿ ರಿಸ್ಟ್ ವಾಚು
ಕಾಲಿಗೆ ಬೇಕು ಮಿರಮಿರ ಶೂಸು
ಅಂತ ಛೇಡಿಸಿದ್ರೆ
ಹುಡುಗೀ ಕಡೆಯೋರು ಸುಮ್ನೇ ಕೈಕಟ್ಟಿ ಕೂರ್ತಿರಲಿಲ್ಲ.
ಕತ್ತಿಗೆ ಬೇಕು ವಜ್ರ ಕಂಠೀಹಾರ
ಸೊಂಟಕೆ ಬೇಕು ಬಂಗಾರದ ಡಾಬು
ತೋಳಿಗೆ ಬೇಕು ಬಾಜೂಬಂದಿ
ಅಂತ ಕೋರಸ್ ಶುರು ಮಾಡ್ತಿದ್ರು. ಜೊತೆಗೆ ಒಗಟುಗಳ ಕಂತೆ ಎಸೀತಿದ್ರು. ಇಬ್ಬರಿಗೂ ಪೈಪೋಟಿ. ಯಾರು ಜಾಸ್ತಿ ಒಗಟು ಹಾಕ್ತಾರೆ. ಬಿಡಿಸೋದ್ರಲ್ಲಿ ಯಾರು ಗೆಲ್ತಾರೆ ಅಂತ.

ನಮ್ ಇಡೀ ಕುಟುಂಬದಲ್ಲಿ ಇಂತಾ ಜಾಣರು ಸಿಕ್ಕಾಪಟ್ಟೆ ಜನ. ಹೆಂಗುಸ್ರೂ, ಗಂಡಸ್ರೂ ಇದ್ರು. ನಮ್ಮಜ್ಜೀ ಅಣ್ತಮ್ದೀರೂ ಮದುವೇಮನೇಲಿ ಹಾಡು ಕಟ್ಟಿ ಬಿಡೋರು. ಒಗಟು ಎಸಿಯೋರು. ಎಲ್ರೂ ಮದುವೇನ ತುಂಬಾ ಖುಷಿಯಿಂದ ಸವಿಯುತ್ತಿದ್ರು. ಎಷ್ಟು ದಿನವಾದ್ರೂ ಆ ನೆನಪುಗ್ಳು ಉಳೀತಿದ್ವು. ಯಾರೂ ಬೇಸರ ಮಾಡ್ಕಂತಿರಲಿಲ್ಲ. ಮದುವೇ ಮನೇಲಿ ಇದೂ ಒಂದು ಭಾಗ ಆಗಿತ್ತು. ಅದುಕ್ಕೇಂತಾನೇ ತಿಂಗಳು ಮುಂಚಿಂದ ತಯ್ಯಾರಿ ನಡೀತಿತ್ತು. ಕೆಲಸ ಬೊಗಸೇ ನೋಡ್ಕಂತಾನೇ ಇವುನ್ನೂ ಹೆಣೀತಿದ್ರು. ಮದುವೆ ಮಧುರ ಮಾತಾಗಿ ಮನಸಲ್ಲಿ ನಗುತ್ತಿತ್ತು.

ಸುಮಾ ಸತೀಶ್ ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಚಿಕ್ಕಮಾಲೂರು ಗ್ರಾಮದವರು. ಬರವಣಿಗೆಯ ಜೊತೆಗೆ ಸಾಹಿತ್ಯ ಸಂಘಟನೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಕಿರುನಾಟಕಗಳ ರಚನೆ, ನಿರ್ದೇಶನ ಮತ್ತು ಅಭಿನಯ ಜೊತೆಗೆ ಏಕಪಾತ್ರಾಭಿನಯ ಇವರ ಹವ್ಯಾಸ. ಮಿರ್ಚಿ ಮಸಾಲೆ ಮತ್ತು ಇತರೆ ನಗೆ ನಾಟಕಗಳು , ಅವನಿ ( ಕವನ ಸಂಕಲನ), ವಚನ ಸಿರಿ (ಆಧುನಿಕ ವಚನಗಳು), ಹಾದಿಯಲ್ಲಿನ ಮುಳ್ಳುಗಳು ( ವೈಚಾರಿಕ ಲೇಖನ ಸಂಕಲನ), ಬಳಗ ಬಳ್ಳಿಯ ಸುತ್ತ (ಸಂ. ಕೃತಿ), ಶೂನ್ಯದಿಂದ ಸಿಂಹಾಸನದವರೆಗೆ ( ವ್ಯಕ್ತಿ ಚಿತ್ರಣ), ಭಾವಯಾನ ( ಸಂ. ಕೃತಿ), ಮನನ – ಮಂಥನ ( ವಿಮರ್ಶಾ ಬರೆಹಗಳು), ವಿಹಾರ (ಆಧುನಿಕ ವಚನಗಳು), ಕರ್ನಾಟಕದ ಅನನ್ಯ ಸಾಧಕಿಯರು ಭಾಗ 6 (ಡಾ. ಎಚ್. ಗಿರಿಜಮ್ಮನವರ ಬದುಕು – ಬರೆಹ) ಇವರ ಪ್ರಕಟಿತ ಕೃತಿಗಳು.
