ಅಂಗಡೀಗೇ ಮಾರಾಕೆ ಮಾತ್ರ ನಮ್ಮಜ್ಜೀ ತಿಂಡೀಗ್ಳು ಮೀಸ್ಲಲ್ಲ. ಮಾರಾಕಿಂತ ರವಷ್ಟು ಜಾಸ್ತೀನೆ ದಾನ ಮಾಡ್ತಿತ್ತು. ಒಂದು ಬೇಸನ್ ತಿಂಡಿ ಮಾರಾಕಿಟ್ರೆ, ಎಲ್ಡು ಬೇಸನ್ ಅವ್ರಿವ್ರಿಗೆ ಕೊಡೋಕೇ ಸಾಲ್ತಿರ್ಲಿಲ್ಲ. ಆದ್ರೂ ಒಲೆ ಮುಂದೆ ಕುಂತ್ಕಣಾಕೆ ಎಂದ್ರೂ ಬ್ಯಾಸ್ರ ಪಟ್ಟಿದ್ದಿಲ್ಲ. ಪಕ್ಕದ್ ಮನ್ಯಾಗಿದ್ದ ವಾರ್ಗಿತ್ತೀಗೆ ಮನೆ ತುಂಬಾ ಮಕ್ಳು. ಅದ್ರಾಗೂ ಸಾಲಾಗಿ ಒಂಬತ್ತು ಹೆಣ್ಣುಮಕ್ಕಳು. ಅದ್ಕೇಯಾ ತಿಂಡೀ ತೀರ್ಥದಾಗೆ ಕೈ ಬಿಗಿ ಮಾಡ್ತಿದ್ರು. ನಮ್ಮಜ್ಜೀ ಜೀವ ನಿಲ್ತಿರ್ಲಿಲ್ಲ. ಏನೇ ತಿಂಡೀ ಮಾಡೀರೂ ಅವುರ್ ಮನಿಗೂ ಕೊಟ್ಟೇಯಾ ತನ್ ಮಕ್ಳಿಗೆ ಹಂಚ್ತಿತ್ತು.
ಸುಮಾ ಸತೀಶ್ “ರಂಗಿನ ರಾಟೆ” ಸರಣಿಯಲ್ಲಿ ತಮ್ಮ ಅಜ್ಜಿ ರುಕ್ಮಣ್ಣಮ್ಮನವರ ಕುರಿತು ಬರೆದಿದ್ದಾರೆ
ಕೂಸಾಗಿದ್ದಾಗ್ನಿಂದ ನನ್ ಮನಸಿನ್ಯಾಗೆ ನಮ್ ಮನೆಯೋರ್ ಯಾರಾದ್ರೂ ಸ್ಯಾನೆ ಬೇರು ಬಿಟ್ಟವ್ರೆ ಅಂದ್ರೆ ನಮ್ಮುಪ್ಪನ್ನ ಬುಟ್ರೆ ಅದು ನಮ್ಮ ಅಮ್ಮಮ್ಮನೇಯಾ. ಇರೋ ಮೂರು ಜಿನುದ್ ಬದುಕ್ನ ಎಂಗೆ ಬದುಕ್ ಬೇಕು ಅಂಬೋದ್ನ ತೋರುಸ್ಕೊಟ್ಟಿದ್ದು ನಮ್ಮ ಈ ಅಜ್ಜೀನೇಯಾ.
ಎಲ್ಲಾರ್ಗೂ ಬೇಕಾದವ್ರು ರುಕ್ಮಣಮ್ಮ
ರುಕ್ಮಿಣಿ ಅಂಬ್ತ ಅಜ್ಜಿ ಹೆಸ್ರು. ಎಲ್ರೂ ರುಕ್ಮಣಮ್ಮ ಅಂತ್ಲೇ ಕರ್ಯೋರು. ಪಿನ್ನಮ್ಮ, ಪೆದ್ದಮ್ಮ, ಅತ್ತಮ್ಮ, ಅವಯ್ಯ (ಚಿಕ್ಕಮ್ಮ, ದೊಡ್ಡಮ್ಮ, ಅತ್ತೆಮ್ಮ, ಅಜ್ಜಮ್ಮ) ಒಬ್ಬೊಬ್ರ ತಾವ ಒನ್ನೊಂದು ರಕವಾಗಿ(ರೀತಿಯಾಗಿ) ನಾನಾ ರಕವಾಗಿ ಕರುಸ್ಕಂತಾ, ಎಲ್ಲಾರ್ಗೂ ಬೇಕಾದ ಬಾಳ್ವೆ ಮಾಡಿತ್ತು.
ಇಬ್ರು ತಂಗೀರು, ಇಬ್ರು ಅಣ್ಣಂದ್ರು, ಒಬ್ಬ ತಮ್ಮನ ಮಧ್ಯುದಾಗೆ ನಮ್ ಅಜ್ಜಿ ಹುಟ್ಟಿದ್ದು. ಎಲ್ಲಾರ್ಗೂ ಒಂತರುಕ್ಕೆ ಹಿರೇ ಅಕ್ಕನೇ ಆಗಿತ್ತು. ಬುದ್ಧೀನಾಗೂ, ಎಲ್ಲಾರ್ನೂ ಜೋಪಾನ್ವಾಗಿ ಸಾಕೋದ್ರಾಗೂ ಸತ.
ಕೆಲ್ಸ ಬೊಗ್ಸೇನಾಗೆ ಯಾವತ್ತೂ ಸೋಂಬೇರ್ತನ ಇಲ್ಲಕ್ಕೇ ಇಲ್ಲ. ಜೇನುಳುದಂಗೆ ಮೂರೊತ್ತೂ ಗೇಯ್ಮೆ. ಅದ್ರಾಗೂ ಜೇನಂತಾ ಕೆಲ್ಸಾನೇ ಮಾಡ್ತಿತ್ತು. ಯಾರ್ನಾನಾ ಕೆಟ್ಟದಾಗಿ ಬೈದಿದ್ದು, ಸುಮ್ಕೆ ತಲರ್ಟೆ ಮಾತು, ಅವ್ರಿವ್ರ ಮನೆಗ್ಳ ಸುದ್ದೀ ಬಾಯಾಗ್ ಬಂದಿದ್ದು ನಾ ಕಾಣ್ಲೇ ಇಲ್ಲ.
ಸೇರಿದ್ ಮನ್ಯಾಗೆ ಕಿರೇ ಸೊಸೆ
ಆದ್ರೂವೇ ಹಿರೇ ಸೊಸೇಂಗೇಯಾ ಜವಾಬ್ದಾರಿ. ಉಳಿದ್ ಇಬ್ರೂ ಅಜ್ಜಿದೀರು(ವಾರ್ಗಿತ್ತೀರು) ಅಂಗಡೀನಾಗೆ ಕುಂತು ಯಾಪಾರಾ ಮಾಡೋರು. ತಾತಂದ್ರುದು ಒಂದು ಯವಾರಾ ಆದ್ರೆ ಇವುರ್ದೊಂದು ಇರ್ತಿತ್ತು. ನಮ್ಮಜ್ಜೀದು ಅಂಗಿಲ್ಲ, ನಮ್ ತಾತುನ್ ಅಂಗಡೀ ಯಾಪಾರುಕ್ಕೇ ಸಾಯಾ ಮಾಡ್ತಿತ್ತು. ದಿನಸಿ ಅಂಗಡೀ ಇತ್ತು. ನಮ್ಮಜ್ಜಿ ಬಂದ್ ಮ್ಯಾಗೆ ಅಲ್ಲಿ ಸೀ ತಿಂಡಿ, ಕಾರುದ್ ತಿಂಡಿ ಮಾರಾಕೇಂತ ಹಗ್ಲೂ ರಾತ್ರಿ ಕುಂತು ಮನ್ಯಾಗೇ ಎಲ್ಲಾ ಮಾಡ್ಕೊಡ್ತಿತ್ತು.

ಅನ್ನಪೂರ್ಣೆ
ನಮ್ಮಜ್ಜಿ ಕೈಯಾಗಿನ್ ರುಚಿ, ಒಂದ್ ಕಿತ ತಿಂದೋರು ಯಾರೂ ಮರೆಯೋ ಅಂಗಿಲ್ಲ. ಅಂಗಡೀಗೇಂತ ಕಜ್ಜಾಯ, ಮಿಠಾಯಿ, ಪಾಕಂಪೊಪ್ಪು, ಮೈಸೂರು ಪಾಕು, ಪಟ್ಟಣಾಲು(ಹುರಿಗಾಳು), ಒಗ್ಗರಣೆ ಪುರಿ, ಚಕ್ಲಿ, ನಿಪ್ಪಟ್ಟು, ಕೋಡ್ಬಳೆ ಇಂಗೇ ತರಾವರಿ ಪದಾರ್ಥ ಮಾಡ್ತಿತ್ತು. ಊರ್ನಾಗೆ ಜಾತ್ರೆ, ಪರಿಸೆ ಅಂದ್ರೆ ಅಜ್ಜೀ ಪಕೋಡ, ಜಿಲೇಬಿ, ಕಾರಾಸೇವು ಮಾಡಿಕೊಡ್ತಿತ್ತು. ನಮ್ ಮಾಮ ಮಾರ್ಕೊಂಡು ಬರ್ತಿತ್ತು.
ಅಂಗಡೀಗೇ ಮಾರಾಕೆ ಮಾತ್ರ ನಮ್ಮಜ್ಜೀ ತಿಂಡೀಗ್ಳು ಮೀಸ್ಲಲ್ಲ. ಮಾರಾಕಿಂತ ರವಷ್ಟು ಜಾಸ್ತೀನೆ ದಾನ ಮಾಡ್ತಿತ್ತು. ಒಂದು ಬೇಸನ್ ತಿಂಡಿ ಮಾರಾಕಿಟ್ರೆ, ಎಲ್ಡು ಬೇಸನ್ ಅವ್ರಿವ್ರಿಗೆ ಕೊಡೋಕೇ ಸಾಲ್ತಿರ್ಲಿಲ್ಲ. ಆದ್ರೂ ಒಲೆ ಮುಂದೆ ಕುಂತ್ಕಣಾಕೆ ಎಂದ್ರೂ ಬ್ಯಾಸ್ರ ಪಟ್ಟಿದ್ದಿಲ್ಲ. ಪಕ್ಕದ್ ಮನ್ಯಾಗಿದ್ದ ವಾರ್ಗಿತ್ತೀಗೆ ಮನೆ ತುಂಬಾ ಮಕ್ಳು. ಅದ್ರಾಗೂ ಸಾಲಾಗಿ ಒಂಬತ್ತು ಹೆಣ್ಣುಮಕ್ಕಳು. ಅದ್ಕೇಯಾ ತಿಂಡೀ ತೀರ್ಥದಾಗೆ ಕೈ ಬಿಗಿ ಮಾಡ್ತಿದ್ರು. ನಮ್ಮಜ್ಜೀ ಜೀವ ನಿಲ್ತಿರ್ಲಿಲ್ಲ. ಏನೇ ತಿಂಡೀ ಮಾಡೀರೂ ಅವುರ್ ಮನಿಗೂ ಕೊಟ್ಟೇಯಾ ತನ್ ಮಕ್ಳಿಗೆ ಹಂಚ್ತಿತ್ತು. ನಮ್ಮಜ್ಜೀ ತಂಗೀ ಒಬ್ರಿಗೆ ಸ್ವಲ್ಪ ನಡೀತಿರ್ಲಿಲ್ಲ (ಆರ್ಥಿಕವಾಗಿ ಸುಮಾರಾಗಿದ್ರು). ತಿಂಗ್ಳಾ ತಿಂಗ್ಳಾ ಅವುರ್ಗೆ ಬೆಣ್ಣೆ, ತುಪ್ಪ, ವಸಿ ಸಾಮಾನು ನಮ್ ತಾತ್ನೇ ತಕೋವೋಗಿ ಕೊಟ್ ಬರ್ತಿತ್ತು. ಮನೆಗ್ ಬಂದೋರ್ಗೆ ಬಲು ದಿವಿನಾಗಿ ಅಡುಗೆ ಮಾಡಿ ಹಾಕ್ತಿತ್ತು. ಅತಿಥಿ ಸತ್ಕಾರ ಚೆಂದಾಗಿ ಆದ್ ಮ್ಯಾಗೆ, ಅವುರ್ಗೂ ಬುತ್ತಿ ಕೊಟ್ಟು, ಉಳಿದಿದ್ನ ಮಕ್ಳಿಗೆ ಕೊಡೋ ಮನ್ಸು. ಉಪ್ಪುಂಕಾಯಿ ಹಾಕೀರೆ ಒಂದಿಪ್ಪತ್ತು ಮನೇಗೆ ಸೇರ್ಸೀನೆ ಹಾಕೋದು. ನಮ್ಮಜ್ಜೀ ಕೈಯಿ ಕೊಡೋದ್ರಾಗೆ ಸ್ಯಾನೆ ಉದ್ದ ಇತ್ತು. ಬ್ಯಾರೆ ಯಾರ್ಗೂ ಆಸು ದೂರ ಎಟುಕ್ಸಿ ಕಣಾಕೇ ಆಗ್ತಿರ್ಲಿಲ್ಲ.
ಸುತ್ತೂರ್ನಾಗೆ ಮಂತ್ರುಕ್ಕೆ ಫ್ರೇಮಸ್ಸು
ಕೈಯ್ಯೋ ಕಾಲೋ ಉಳುಕಿದ್ರೆ, ದಿಷ್ಟಿ ಆದ್ರೆ, ಕಾಮಾಲೆ ಬಂದ್ರೆ, ಬಾಲಗ್ರಹ ಅಮರಿಕೊಂಡ್ರೆ ಇನ್ನಾ ಯಾತ್ಯಾತುರ್ದೋ ಆದ್ರೆ ಎಲ್ರೂ ಹುಡೀಕ್ಕಂಡು ಬರೋರು. ನಮ್ ತಾತ ಅಂತ್ರ(ಯಂತ್ರ) ಬರ್ಯೋದು, ಅಜ್ಜಿ ಮಂತ್ರ ಹಾಕೋದು. ಜತ್ಗೇ ಬರಾ ಮಕ್ಳು ಮರೀಗೆ ತಿಂಬಾಕೇನಾರೂ ಕೊಡ್ದೇ ಕಳುಸ್ತಿರ್ಲಿಲ್ಲ. ಇಭೂತಿ, ಉಪ್ಪು, ಸೆಕ್ರೆ(ಸಕ್ಕರೆ) ಮಂತ್ರುಸಿ ಕೊಡ್ತಿತ್ತು. ನಮ್ಮನ್ಯಾಗೂ ಅಜ್ಜಿ ಮಂತ್ರುಸಿ ಕೊಟ್ಟಿದ್ನ ಯಾವಾಲೂ ಇಸ್ಟಾಕ್(ಸ್ಟಾಕ್) ಮಡಗೇ ಇರ್ತಿದ್ವಿ. ಜರಾ ಬಂದೇಟ್ಗೇ, ಒಂಜಿನ ಊಟ ಸೇರಲ್ಲಾಂದೇಟ್ಗೆ ಅಮ್ಮ ಕಸಕ್ಕನೆ ಮಂತ್ರುಸಿದ್ ಉಪ್ಪು ತಂದು ಬಾಯಾಗಾಕ್ತಿತ್ತು. ಸೀತ ವಾತ ಆದ್ರೆ ನಮ್ಮಜ್ಜೀ ಮಾಡಿಕೊಡ್ತಿದ್ದ ನಂಜಿನ ಮಾತ್ರೆನೆ ಮದ್ದು. ಬಾಣಂತೀರೂ ಬಂದು ಅದ್ನ ಈಸ್ಕೊಂಡು ಹೋಗ್ತಿದ್ರು. ಬಾಣಂತೀ ಸನ್ನೀ ಆದ್ರೆ ರುಕ್ಮಣಮ್ಮನ್ ನಂಜು ಮಾತ್ರೆನಾಗೆ ಚೆಂದಾಗಿ ಮೇಲಾಗ್ತೈತೆ(ವಾಸಿ) ಅಂಬ್ತ ಊರಾಗೆಲ್ಲಾ ಹೆಸ್ರುವಾಸಿ. ಉದ್ದಿನ್ಕಾಳ್ನಷ್ಟು ಇರ್ತಿದ್ದ ಆ ನಂಜುಮಾತ್ರೆ ಮಾಡಾಕೆ ಏಸು ತಾಳ್ಮೆ ಇತ್ತೋ ನಮ್ಮಜ್ಜೀಗೆ. ಬ್ಯಾರೆಯೋರ್ಗೋಸ್ಕರಾನೆ ಸವೆದಿದ್ ಜೀವ. ಅಪಕಾರ ಮಾಡೋರ್ಗೂ ದೆಕ್ಲು ಉಪ್ಕಾರವೇ ಮಾಡ್ತಿತ್ತು.
ಇದೆಲ್ಲಾ ಆಗಿನ್ ಕಾಲುದ್ ಏಟೋ ಹೆಣ್ಣುಮಕ್ಕಳ ಬದುಕಾಗಿತ್ತು. ಅವ್ರೆಲ್ಲಾ ಅಂಗೇಯಾ ಭೂಮ್ತಾಯಂಗೆ ಜೀವ್ನ ಸಾಗುಸ್ತಿದ್ರು. ನಮ್ಮಜ್ಜೀ ಇಸೇಸ ಬ್ಯಾರೇನೇ ಐತೆ. ಇದಿಷ್ಟೂ ಹಳ್ಳೀನಾಗಿದ್ದುದ್ ಬದುಕಾದ್ರೆ, ತುಮ್ಕೂರು ಪ್ಯಾಟೇನಾಗೆ ನಮ್ಮಜ್ಜೀ ಬದುಕೈತಲ್ಲ ಅದ್ನ ಯೋಳ್ಳಿಕ್ಕೇ ಬೇಕು.
ನಮ್ಮಜ್ಜೀ ನಮ್ಮ ಬೀಗರಾಗಿದ್ದು
ನಮ್ಮಜ್ಜೀಗೆ ನಾಲ್ಕು ಜನ ಗಂಡು ಮಕ್ಳು. ನಮ್ಮಮ್ಮೊಂದೇ ಹೆಣ್ಣುಮಗಾ. ಮೂರು ಜನ ಗಂಡುಮಕ್ಳು ಬದುಕು ಕಟ್ಟಿಕೊಂಡು ಬ್ಯಾರೇ ಊರು ಸೇರುದ್ರು. ಕೊನೇ ಮಗುನ್ ಜತೇಗೇ ಅಜ್ಜಿ ತಾತ್ನೂ ತುಮ್ಕೂರು ಸೇರ್ಕಂಡ್ರು. ನಮ್ ಕೊನೇ ಮಾಮಂಗೆ ನಮ್ಮಪ್ಪ ಅಮ್ಮನೇ ಹೆಣ್ಣು ನೋಡಾಕೆ ಓಯ್ತಿದ್ರು. ಯಾವ್ದೂ ಆಗ್ಲಿಲ್ಲ. ಇಂಗೇ ಇರ್ಬೇಕಾರೆ ನಮ್ ತಾತುಂಗೆ ಒಂದು ಯೋಸ್ನೆ ಬಂತು. ಅಲ್ಲಾ ಬ್ಯಾರೆ ಮನೇಗ್ಳಿಂದ ಸೊಸೆ ತಂದ್ರೆ ಎಂಗೋ ಏನೋ. ಬ್ಯಾಡಕ್ಕೆ ಬ್ಯಾಡಾ ಅಂಬ್ತ ಯೋಳಿದ್ದೇ ನಮ್ ಅಮ್ಮನ್ನ ಕುಂಡ್ರುಸ್ಕಂಡಿದ್ದೆ, ನಾಗಮ್ಮ ನೀನು ನಂಗೆ ಮಾತು ಕೊಡ್ಬೇಕು, ನಿನ್ ಮಗುಳ್ನ ಅಂದ್ರೆ ನನ್ ಮೊಮ್ಮಗುಳ್ನ ನನ್ ಸೊಸೀ ಮಾಡ್ಬೇಕು. ಕೊನೆಗಾಲ್ದಾಗೆ ನಾವ್ ನೆಮ್ದೀಯಿಂದ ಇರ್ಬೇಕಮ್ಮ ಅಂತ ಕುಂತ್ಕಂತು. ನಮ್ಮಕ್ಕ ಅನ್ನಪೂರ್ಣ, ಹೆಸ್ರೊಂದಲ್ಲ, ಅವ್ಳು ಇರೋದು ಒಂದಲ್ಲ. ಅಂತಾ ಸಾಧು ಮನಷಿ. ನಮ್ಮಜ್ಜೀನೇ ಸಾಕಿದ್ದು. ಅದ್ಕೇ ಅದೇ ಬುದ್ದೀ ಎರುವಲು ಬಂದಿತ್ತು. ಕೊನೇಗೆ ನಮ್ಮಮ್ಮನೂ ಒಪ್ಪಿ, ಅಕ್ಕುನ್ನ ಮಾಮುಂಗೇ ಕೊಟ್ಟು ಮದ್ವಿ ಮಾಡಿದ್ ಮ್ಯಾಗೆ ಅಜ್ಜಿ ನಮ್ ಬೀಗರಾದ್ರು. ಆದ್ರೂ ಅದ್ಕೂ ಮುಂಚೆ ನಮ್ಮಪ್ಪ ಅವ್ರ ಅಳಿಯ ಅಲ್ವೇ. ಅಳಿಯನ ಮುಂದೆ ಬಂದು ನಿಂತು ಒಂದು ದಿನ್ವೂ ಮಾತಾಡ್ಲಿಲ್ಲ. ಬಾಗಿಲ್ ಸಂದೀಲಿ ನಿಂತೇ ಮಾತು. ನಮ್ಗೋ ನಗಾಂದ್ರೆ ನಗ. ನಮ್ಮಜ್ಜೀನ ಗೋಳು ಹುಯ್ಕಂತಿದ್ವು.
ನಮ್ಮಕ್ಕನ ಕಾರುಬಾರು
ನಮ್ಮಕ್ಕ ನಮ್ಮಜ್ಜೀಗೆ ಕೊನೇವರ್ಗೂ ಪೂರ್ತಿ ಸೊಸಂತ್ರ ಬಿಟ್ಟಿದ್ಲು. ಏನಾರಾ ಮಾಡ್ಕಳ್ಳಿ, ಯಾರ್ಗೇನಾರಾ ಕೊಟ್ಕಳ್ಳಿ, ಕೇಳಿದ್ದೇ ಇಲ್ಲ. ಅಜ್ಜೀ ದರಬಾರ್ನಾಗೆ ಅಕ್ಕುನ್ ಕಾರುಬಾರು ನಡೀತಿತ್ತು. ಅವ್ಳೂ ಅಜ್ಜೀ ಜತ್ಗೆ ಕೆಲ್ಸ ಮಾಡೋಳು. ನಮ್ಮಜ್ಜೀನ ಚೆಂದಾಗಿ ತಮಾಸಿ ಮಾಡೋಳು. ಅಜ್ಜೀಗೆ ಸೊಸೇ ಆಗ್ದೆ ಮುದ್ದಿನ್ ಮೊಮ್ಮಗಳಾಗೆ ಉಳ್ಕಂಡ್ಳು. ಇಬ್ರೂ ಕುಂತು ಮಾತಾಡೋರು, ಅಡ್ಗೇ ಮನ್ಯಾಗೆ ಜತ್ಯಾಗೇ ಕೆಲ್ಸ ಮಾಡೋರು. ನಮ್ಮಜ್ಜೀ ದ್ಯಾವ್ರ ತರ ಆದ್ರೆ, ಇವ್ಳೂ ಚಿಕ್ಕ ದ್ಯಾವ್ರೇಯ. ಇವತ್ಗೂ ನಂಗೆ ಅಮ್ಮುನ್ ತರಾನೇ ಅವ್ಳೆ.
ಚಿಗಳಿ ತಂಬಿಟ್ಟಿನ ಜೋಡಿ
ನಮ್ಮಜ್ಜೀ ಬೆಳ್ಳುಕೆ, ಕೆಂಪುಕೆ, ತೆಳ್ಳುಕೆ, ಉದ್ದುಕೆ ಎಂತಾ ಚೆಲುವಾಂತ ಚೆಲುವೆ ಆಗಿದ್ರು ಅಂದ್ರೆ ಆಗಿನ್ ಕಾಲ್ದಾಗಿನ್ ಒಳ್ಳೆ ಸಿನ್ಮಾದ ನಾಯಕಿ ತರ ಇತ್ತು. ನಮ್ಮ ತಾತ ಕಪ್ಪಗೆ ಮಿಂಚುತ್ತಿತ್ತು. ಒಳ್ಳೆ ಚಿಗಳಿ( ಕರಿ ಎಳ್ಳಿನ ಉಂಡೆ) ತಂಬಿಟ್ಟು(ಅಕ್ಕಿ ಹಿಟ್ಟಿನ್ ಉಂಡೆ ಬೆಳ್ಳುಕಿರ್ತಿತ್ತು) ಜೋಡೀ ಅಂಗಿತ್ತು. ನಾನು ಎಷ್ಟೋ ಕಿತ ಅನ್ ಕೋತಿದ್ದೆ, ಥೋ ಹೋಗೀ ಹೋಗೀ ಯಾಕಪ್ಪಾ ನಮ್ ತಾತುನ್ನ ಅಜ್ಜೀನ ಗಂಟು ಹಾಕ್ದೇ ದೇವ್ರೇ ಅಂತಾವ. ನಮ್ ತಾತ್ನೋ ಯಾವಾಲೂ ಸಿಡುಕ್ ಮೂತಿ ಸಿದ್ದಪ್ಪನೇಯಾ. ನಮ್ಮಜ್ಜೀನೋ ನಗ್ ನಗ್ತಾ ಇರೋ ದ್ಯಾವ್ರು ತರದೋಳು. ಅದೆಂಗೇ ಹೊಂದಿಕಂಡು ಹೋಗ್ತಿತ್ತೋ ಕಾಣೆ. ನಮ್ ತಾತ ಆಗಿನ್ ಕಾಲುದ್ ಗಂಡುಸ್ರ ತರುಕ್ಕೇಯಾ ಪಾಳೇಗಾರ್ಕೆ ಬುದ್ದಿ. ಹೆಂಗುಸ್ರು ಹೊಸ್ಲು ದಾಟಿ ಆಚಿಕ್ ಹೋಗ್ಬಾರ್ದು. ಸ್ಯಾನೆ ಓದ್ಬಾರ್ದು ಇಂತಾವೇಯಾ ಬಂದೋಬಸ್ತು ಮಾಡೋ ಬುದ್ಧಿ. ನಮ್ಮಜ್ಜೀ ಭೂಮೀ ಮ್ಯಾಗಿನ್ ಪ್ರೀತಿ ಎಲ್ಲಾನೂವೆ ಎದ್ಯಾಗೆ ತುಮ್ಕಂಡಿರಾ ಮನಿಷಿ. ಅವುಳ್ ಮಕದಾಗೆ ಕೋಪ ಅಂಬೋದ್ನ ಕಂಡಿದ್ದೆ ಇಲ್ಲ.
ಡ್ಯಾನ್ಸಿಗೆ ಸೇರ್ದಾಗ
ಈ ಕತೇಗೂ ಮುಂಚಿತ್ವಾಗಿ ನಮ್ ತಾತುನ್ ಇಸ್ಯಾ ಇನ್ನೊಸಿ ಹೇಳ್ಬೇಕು. ಹೆಣ್ಣುಮಕ್ಕಳು ಓದೋಕೋಗೋದೇ ಇಷ್ಟವಿಲ್ಲ. ಅದ್ರಾಗೂ, ಇಸ್ನೋ ಪೌಡ್ರು ಬಳ್ಕಂಡು ಅದೇನು ಡ್ರಾಮಾ ಕಂಪನೀಗಾ ಹೋಗೋದು ಅಂಬ್ತ ಬ್ಯಾರೆ ಕಣ್ಣು ಕೆಂಪುಕೆ ಮಾಡ್ಕಣಾದು. ನಾನೂ ಹೈಸ್ಕೂಲು ಮೆಟ್ಲು ಹತ್ತಾಕೆ ತುಮ್ಕೂರ್ಗೆ ಬಂದು ಅಜ್ಜೀ ಮನ್ಯಾಗೇ ಇದ್ನಾ. ಮದ್ಲೇ ಹಳ್ಳೀ ಮೂದೇವಿ ಅಮ್ತ ನನ್ ಕಂಡ್ರೆ ನನ್ ಸಿನೇಹಿತೇರು ನಗಾಡ್ತಿದ್ರು. ನಮ್ ತಾತುನ್ ಕಾಟ್ದಾಗೆ ಪೌಡ್ರ ಡಬ್ಬೀನಾಗಿಂದ ಕರ್ಚೀಪ್ನಾಗೆ ಪೌಡರ್ ಅದ್ಕಂಡು ರೂಮ್ನಾಗೆ ಸಣ್ಣ ಕನ್ನಡೀ ಒಳ್ಗೆ ಇಣುಕಿ ನೋಡ್ಕಂತಾ ಪೌಡರ್ ಬಳ್ಕಂಡು ಹೋಗ್ತಿದ್ದೆ. ನಮ್ಮಜ್ಜೀ ನನ್ ಪರ ವಕಾಲತ್ತು ವಹಿಸ್ಕಂಡು ಬರ್ತಿತ್ತು. ನಂಗೋಸ್ಕರ ಇಬ್ರೂ ಜಗ್ಳ. ಅದ್ನ ನೋಡಿ ನಾನೇ ಥತ್ ಅನ್ ಕಂಡು ಆದಷ್ಟೂ ತಾತುನ್ ಕಣ್ಣಿಗೆ ಬೀಳ್ದಂಗೇ ಅಡ್ಡಾಡ್ತಿದ್ದೆ.
ನಾನೊಂದ್ ಕಿತ ಇಸ್ಕೂಲ್ನಾಗೆ ಡ್ಯಾನ್ಸಿಗೆ ಸೇರ್ಕಂಡಿದ್ದೆ. ಅವತ್ತು ಬೆಳುಗ್ಗೇನೆ ಎದ್ದು ಕೈತುಂಬಾ ಬಳೆ ಹಾಕ್ಕಂಡು, ಪೌಡರ್ ಬಳ್ಕಂಡು ಹೋಗ್ಬೇಕಿತ್ತು. ಸೀರೆ ಎಲ್ಲಾ ಬ್ಯಾಗ್ನಾಗಿಟ್ಕಂಡು ಹೊಂಟೆ. ತಾತುನ್ ಕಣ್ಣು ಬಿತ್ತು. ಕಂಡೇಟ್ಗೆ ಬೋದು ಬುಟ್ರು. ನಾ ಅತ್ಕಂಡೆ. ಅಜ್ಜೀ ಸಮಾಧಾನ್ ಮಾಡಿ ಕಳುಸ್ತು. ಆ ಮಗೀ ಕಂಡ್ರೆ ಅದ್ಯಾಕಂಗ್ ಆಡೀರಿ ಅಂಬ್ತ ವಸಿ ಜೋರು ಮಾಡ್ತು. ನಾನೂ ಅದೇ ಗ್ಯಾನದಾಗೆ ಹೊಂಟೋಳು, ದಾರೀನಾಗೆ ಬಿದ್ದು, ಮೈಕೈ ತರಚಿ, ಗಾಯ ಮಾಡ್ಕಂಡೆ. ಆದ್ರೂ ನಮ್ಮಜ್ಜೀಗೆ ನನ್ ಕಂಡ್ರೆ ಏಟು ಪಿರೂತಿ. ತಾತುನ್ ಮ್ಯಾಗೂ ಕ್ವಾಪ ಮಾಡ್ಕಂಡು ನನ್ನ ಸಮಾಧಾನ ಮಾಡ್ತಿದ್ರು. ನಮ್ಮಜ್ಜೀ ನಂಗೆ ಜಿನಾ ಊಟುದ್ ಡಬ್ಬೀ ಕಟ್ಕೊಡ್ತಿತ್ತು. ನಂಕಿಂತ ನನ್ ಸಿನೇಹಿತೇರೇ ಎಲ್ಲಾ ಮುಗುಸ್ತಿದ್ರು.
ಓದು ಅಂದ್ರೆ ಬೋ ಇಷ್ಟ
ಚೆಂದಾಗಿ ಓದ್ಕಬೇಕು ಅಂಬೋದು ನಮ್ಮಜ್ಜೀ ನಂಬ್ಕೆ. ಅಜ್ಜೀ ಹಾಡು ಬರ್ಕಂತಿತ್ತು. ಚೆಂದಾಗಿ ಹಾಡ್ತಿತ್ತು. ನಮ್ಮಕ್ಕುಂಗೂ ಯೋಳ್ತಿತ್ತು. ಅವ್ಳೂ ಸ್ಯಾನೆ ಓದ್ಲಿಲ್ಲ. ನಾನು ಕಾಲೇಜು ಮೆಟ್ಲು ಹತ್ತಿದ್ದು ನಮ್ ತಾತುಂಗೆ ಕಷ್ಟ ಆದ್ರೂ, ನಮ್ಮಜ್ಜೀಗೆ ಬೋ ಇಷ್ಟ ಆಗಿತ್ತು. ಕಷ್ಟಾ ಪಟ್ಟು ಓದು ಅಂಬ್ತ, ನಂಗೆ ಬೇಕ್ ಬೇಕಾದ್ದು ಮಾಡಿ ಕೊಡ್ತಿತ್ತು. ನಮ್ಮಕ್ಕನ ಮಕ್ಳುನ್ನ ಎಂಗೆ ಸಾಕ್ತಿತ್ತು ಅಂದ್ರೆ, ಯಾವ್ ಹೊತ್ನಾಗಾರಾ ಆಗ್ಲಿ ಅವು ಯಾತುರುದನ್ನಾ ಆಸೆ ಪಟ್ವೂ ಅಂದ್ರೆ ನಿಂತ್ ನಿಂತಂಗೇ ಆ ಚಣದಾಗೇ ಎಷ್ಟು ಸುಲುಕಾಗಿ(ಸಕ್ಕ ಸಲೀಸಾಗಿ) ಮೈಸೂರು ಪಾಕೋ, ಮಿಠಾಯೋ, ಕೋಡ್ಬ್ಯಳೇನೋ ಮಾಡಾಕ್ತಿತ್ತು. ನಾವೂ ಅಂಗೇ ಕುಂತು ಮೀನಾಮೇಷ ಎಣಿಸ್ಕಂಡು ಯಾವಾಗ ಮಾಡಾದು ಅನ್ನೋ ಯೋಸ್ನೇಲೆ ಇರೋ ಹೊತ್ಗೆ, ತಟ್ಯಾಗಾಕ್ಕಂಡು, ಮಕ್ಕುಳ್ ಬಾಯಾಗೆ ಇಡ್ತಿತ್ತು.
ಕಾಲುಕ್ಕೆ ತಕ್ಕಂಗೆ
ಹಳ್ಯಾಗಿದ್ದಾಗ ಮಡಿ ಹುಡಿ ಜಾಸ್ತೀನೇ ಇತ್ತು. ಪ್ಯಾಟೇಗೆ ಬಂದ್ ಮ್ಯಾಗೆ ನಿಧಾನುಕ್ಕೆ ಬದುಕು ಬದಲಾಗ್ತಾ ಹೋಯ್ತು. ನಿಂತ ನೀರಾಗ್ದೇ ಹರಿಯೋ ನದೀ ತರಾ ಬದುಕ್ನ ಬದಲಾಯಿಸ್ಕಂತ ಹೋಯ್ತು. ಮಕ್ಕಳು ಮೊಮ್ಮಕ್ಳು ಕಾಲುಕ್ಕೆ ತಕ್ಕಂಗೆ ತಾನೂ ಒಪ್ಪಿಕಂಡು ಹೊಂದಿಕಂಡು ಹೋದ್ಲೋ. ಹಳೆದುಕ್ಕೆ ನ್ಯಾತಾಕ್ಕಂಡು ಕುಂತಕಳ್ದೆ ಇದ್ದುದ್ಕೆ ಎಲ್ಲಾರ್ ಪ್ರೀತಿಯ ರುಕ್ಮಣಮ್ಮಜ್ಜೀ ಆಗಿ ಇವತ್ಗೂ ಮನಸಾಗೆ ನಿಂತೌರೆ.
ಹಿಂದಿ ಭಾಷೇ ಕಲಿಯೋ ಹುಮ್ಮಸ್ಸು
ನಮ್ಮಜ್ಜಿ ತಾತ ತೀರ್ಕೊಂಡ ಮ್ಯಾಗೆ ಬ್ರಹ್ಮಕುಮಾರಿ ಸಮಾಜುಕ್ಕೆ ಸೇರ್ಕಂಡ್ರು. ಅಲ್ಲಿ ಈರುಳ್ಳಿ ಬೆಳ್ಳುಳ್ಳಿ ತಿನ್ನಂಗಿಲ್ಲ. ಹೋಟೆಲ್ ನಾಗೆ ತಿನ್ನಂಗಿಲ್ಲ. ಹೋಟೆಲ್ನಾಗಂತೂ ಯಾವತ್ಗೂ ತಿಂದಿದ್ದಿಲ್ಲ. ಆದ್ರೆ ಅದುಕ್ಕೋಸ್ಕರ ಈರುಳ್ಳಿ, ಬೆಳ್ಳುಳ್ಳಿ ಅಲ್ಲದೆ, ಮದುವೆ ಮುಂಜೀ ಊಟ ಸತ ಬಿಟ್ರು. ಮನ್ಯಾಗೆ ಬ್ಯಾರೆಯೋರ್ಗೆಲ್ಲ ಈರುಳ್ಳಿ ಬೆಳ್ಳುಳ್ಳಿ ಹಾಕಿರಾ ಅಡ್ಗೆ ಮಾಡಾಕಿ ಅಜ್ಜೀ ತಾನ್ ಮಾತ್ರ ಬ್ಯಾರೆ ಮಾಡ್ಕಂತಿತ್ತು. ವಯಸ್ಸಾದ್ರೂ ಅಡುಗೆ ಮನೆ ಕೆಲಸ ಮಾತ್ರ ನಿಂತಿರ್ಲಿಲ್ಲ. ಅಡುಗೆ ಮಾಡಿ ತಿನ್ಸೋದು ಅಂದ್ರೆ ಬಲ್ ಖುಷಿ ಬೀಳ್ತಿದ್ರು.
ಬ್ರಹ್ಮ ಕುಮಾರಿ ಸೇರಿದ್ ಮ್ಯಾಗೆ ಅವುರ್ ಕಳಿಸೋ ಪುಸ್ತಕ ಓದ್ಕಂತಿದ್ರು. ರಾಜಾಸ್ತಾನದ ಮೌಂಟ್ ಅಬುಗೆ ಎರಡು ಸತಿ ಹೋಗ್ಬುಟ್ಟು ಬಂದ್ರು. ಅವುರ್ದು ಹಿಂದೀನಾಗೆ ಪತ್ರಿಕೆ ಬರ್ತಿತ್ತು. ನಮ್ಮಜ್ಜೀ ಕಾಯ್ಕಂಡಿದ್ದು, ನಾನ್ ಬಂದ್ ತಕ್ಸುನ ಇದುನ್ನ ಓದಿ ಹೇಳಮ್ಮಿ ಅಂತ ಕೇಳೋರು. ಯಾವ್ ಯಾವ್ದು ಮುಖ್ಯಾನೋ ಅದುನ್ನೆಲ್ಲ ಜೋಡುಸ್ಕಂಡು ಕೊಡೋರು. ನಾನೂ ಮದ್ವೆ ಆಗಿ ಹೋಗಿದ್ನ. ಊರಿಗೋದಾಗ ಮಾತ್ರ ಅಜ್ಜೀಗೆ ನಾನು ಸಿಕ್ತಿದ್ದಿದ್ದು. ಆ ವಯಸ್ನಾಗೆ ಅಯ್ಯೋ ನಂಗೆ ಹಿಂದಿ ಬರಾಕಿಲ್ಲಾ ಅಂತ ಬ್ಯಾಸ್ರ. ಕೊನೇಗೆ ನನ್ ತಾವ ಹಿಂದಿ ಅಕ್ಸರ ಕಲ್ಸು ಅಂತ ಕೂತ್ಕಂಡ್ರು. ಒಂದೊಂದು ಅಕ್ಸರನೂ ಕಲುತ್ರು. ಕೂಡುಸ್ಕಂಡು ಓದೋಕೆ ನೋಡ್ತಿದ್ರು. ಹತ್ತಿಪ್ಪತ್ತು ಪದ ಕಲಿತ್ರು. ಮುಂದಿನ್ ಕಿತ ನಾನ್ ಹೋದಾಗ, ಗ್ಯಪ್ತಿ ಮಡಿಕ್ಕಂಡು ಚಿಕ್ಕ ಮಕ್ಳು ತರ ನೋಡು ಇದೇ ಪದ ಅಲ್ವಾ ನೀನು ಯೋಳಿದ್ದು ಅಂತ ಕೇಳೋರು. ಇದು ಈ ಅಕ್ಸರ ಅಲ್ವಾ ಅಂಬೋರು. ನಾನು ಅಜ್ಜೀ ನೀನೇನಾರಾ ಇಸ್ಕೂಲ್ಗೆ ಹೋಗಿದ್ರೆ ಪಸ್ಟು ಬತ್ತಿದ್ದೆ ಬುಡು ಅಂತಿದ್ದೆ. ಆದ್ರೂ ಅಜ್ಜೀ ಆಸೆ ಬಿದ್ದಂಗೆ ಪೂರ್ತಿ ಹಿಂದಿ ಕಲಿಸಾಕೆ ನನ್ ಕೈಲಿ ಆಗ್ಲೇ ಇಲ್ಲ ಅಂಬೋ ಬ್ಯಾಸ್ರ ಅಂಗೇ ಉಳ್ಕಂತು.
ಸೊಂಟದ ಮೂಳೆ ಮುರಿದಾಗ
ನಮ್ಮಜ್ಜೀ ಸಣ್ಣುಕೆ ಕೋಲಿನ್ ತರುಕ್ಕಿದ್ರೂ ಬಲು ಗಟ್ಟಿ. ಯಾಪಾಟಿ ಕೆಲ್ಸ ಮಾಡ್ತದೆ, ಮೂಳೆ ಕಬ್ಬಿಣ ಇರ್ಬೋದು ಅಂಬೋದು ನಮ್ ನಂಬ್ಕೆ ಆಗಿತ್ತೋ. ಆದ್ರೆ ಎಪ್ಪತ್ಮೂರು ವರ್ಷದಾಗೆ ನಮ್ಮಜ್ಜೀ ಹಾಸಿಗೆ ಮ್ಯಾಗಿಂದ ಕೆಳಗೆ ಬಿದ್ದುದ್ದೇ ನೆವ ಆಗಿ ನಡಾ ಮುರೀತು.(ಸೊಂಟದ ಮೂಳೆ) ಬೆಂಗ್ಳೂರಿಗೆ ಕರ್ಕೋ ಬಂದ್ರು. ಆಸ್ಪತ್ರೇಗೆ ಸೇರ್ಸಿದ್ರು. ಅಜ್ಜೀಗೆ ಆಪರೇಷನ್ ಮಾಡಿ ರಾಡ್ ಹಾಕಿದ್ರು. ಅದೇ ಡಾಕುಟ್ರು ಅದೇ ಟೇಮ್ನಾಗೆ ಇನ್ನೂ ಇಬ್ರುಗೆ ಆಪರೇಷನ್ ಮಾಡಿದ್ರು. ಒಬ್ರಿಗೆ ಐವತ್ತೈದು ವರ್ಸ. ಇನ್ನೊಬ್ರಿಗೆ ಅರವತ್ತೆಂಟು. ಡಾಕುಟ್ರು ಒನ್ನೊಂದೇ ಹೆಜ್ಜೆ ನಡೀರಿ ಅಂಬ್ತ ಯೋಳಿದ್ರೆ ನಮ್ಮಜ್ಜಿ ನಾಕೆಜ್ಜೆ ನಡ್ಯೋರು. ಡಾಕುಟ್ರು ಆಶ್ಚರ್ಯ ಬಿದ್ದು ನನ್ನ ಕರ್ದು ಅಲ್ಲಾ ನಿಮ್ಮಜ್ಜೀ ಏನು ಇಪ್ಪತ್ತು ವರ್ಷದ ಹುಡುಗೀ ಅಂದುಕೊಂಡಿದ್ದಾರಾ ಏನ್ ಕತೆ. ಒಂದೆಜ್ಜೆ ಹಾಕೀ ಅಂದ್ರೆ ಸಾಕು ನಾಕೆಜ್ಜೆ ಹಾಕೇ ಬಿಡ್ತಾರೆ. ಇನ್ನೂ ಇಬ್ರು ಬೆಡ್ ಬಿಟ್ಟೇ ಇಳಿದಿಲ್ಲ ಅಂದ್ರು. ನಾನು ನಮ್ಮಜ್ಜೀ ಹಾಗೇ ಅಂತ ಹೇಳಿದೆ. ಆಮೇಲೆ ಹೇಳಿದ್ರು, ಬರೀ ನಡಿಯೋದ್ರಲ್ಲಿ ಆಸ್ತೆ ಇದ್ರೆ ಸಾಲ್ದು. ಮನೇಲಿ ಬರೀ ಸೀರಿಯಲ್ ನೋಡ್ತಾ ಕೂರೋದಲ್ಲ. ಸ್ವಲ್ಪ ಸಣ್ಣ ಪುಟ್ಟ ಕೆಲಸ, ಸಹಾಯ ಮಾಡೋಕೆ ಹೇಳಿ ಅಂದ್ರು. ನಾನು ತಣ್ಣಗೆ, ನಮ್ಮಜ್ಜೀನೆ ಮನೇಲಿ ಅಡುಗೆ ಮಾಡೋದು ಅಂದೆ. ಡಾಕ್ಟರ್ ಕಣ್ಣೂ ಬಾಯಿ ಬಿಟ್ಟು ವಾಟ್ ಅಂದ್ರು. (ಮನಸಾಗೆ ವಾಟ್ ಏನ್ ಬಂತು, ವಾಟೂ ಇಲ್ಲ ವಂಕಾಯಿ ಪುಲ್ಸೂ ಇಲ್ಲ, ಮಾವಿನ್ ಓಟೇನೂ ಇಲ್ಲ. ಬಾಯಿ ಬಿಟ್ಟೆ ಇದ್ರೆ ನೊಣಾ ಒಳೀಕ್ಕೋದಾತು, ಮುಚ್ಕಳಿ ಡಾಕುಟ್ರೆ ಅಂತ ನಕ್ಕೊಂಡೆ) ಹೊರಗೆ ಅಂಗೆ ಯೋಳಾಕಾದೀತೇ? ಹೌದು ಡಾಕ್ಟ್ರೆ ಅಂದೆ. ಅದ್ಕೇ ಡಾಕುಟ್ರು ಅಜ್ಜಿ ತುಂಬಾ ಚುರುಕು ಇದ್ದಾರೆ. ಬಹಳ ವಿಲ್ ಪವರ್ ಅವರ್ದು ಅಂತ ಮೆಚ್ಚಿದ್ರು. ಅದಾದ್ ಮೇಲೆ ಹೇಗಿದ್ದಾರೆ ನಮ್ಮ ಯಂಗ್ ಲೇಡಿ ಅಂತ್ಲೇ ಕೇಳೋರು.
೮೩ ನೇ ವಯಸ್ಸಿನ್ ತಂಕ ಅಜ್ಜಿ ಆರಾಮಾಗೇ ಇದ್ರು. ಮನೇಗ್ ಬಂದ್ ಮ್ಯಾಗೆ ವಾಕರ್ ಇಟ್ಕಂಡು ನಡಿಯೋವಾಗ್ಲೇ ಅಡುಗೇ ಮನೇಗೆ ಬಂದು ಕೆಲಸ ಮಾಡ್ತಿದ್ರು.
ಕೊನೇ ದಿನಗಳಲ್ಲಿ
ನಮ್ಮಜ್ಜೀ ಕೊನೇವರ್ಗೂ ಕೆಲಸ ಮಾಡ್ತಾಲೇ ಇತ್ತು. ಒಂದು ದಿನವೂ ಕಾಯಿಲೆ ಕಸಾಲೇಂತ ಮನಗಿದ್ದಿಲ್ಲ. ಆಸ್ಪತ್ರೆ ಮಕವೇ ಕಂಡೋರಲ್ಲ. ಒಂದು ಸತಿ ನಮ್ಮ ಮನೇಲಿ ನಮ್ಮ ಮಾವಂಗೆ ಕಾಯಿಲೆ ಇತ್ತೂಂತ ಬೇಸಿಗೆ ರಜಕ್ಕೆ ಊರಿಗೆ ಬರಲಿಲ್ಲ. ನನ್ ಮಗಾ ಆಗಿನ್ನೂ ಐದು ವರ್ಷದೋನು. ಅವುನ್ನ ಮಾತ್ರ ಬಿಟ್ಟು ಬಂದೆ. ಒಂದು ವಾರ ಇದ್ದ. ಅಜ್ಜೀಗೆ ಬಲು ಖುಷಿ. ಏನು ಬೇಕೂಂತ ಕೇಳೀ ಕೇಳೀ ಮಾಡ್ಕಡಾರು. ಅಕ್ಕುನ್ ತಾವ ಸುಮುನ್ ಮಗ ಸ್ಯಾನೆ ಚೂಟಿ. ಗಲಾಟೀನೇ ಇಲ್ಲ. ಇನ್ ಮ್ಯಾಗೆ ಅವುಳ್ ಇರ್ದಿದ್ರೂ ತಿಂಗುಳ್ ಗಟ್ಲೆ ಇಟ್ಕೋಬೋದು. ಸುಮ್ಕೆ ಆಡ್ಕಂಡು ಇರ್ತಾನೆ ಅಂದಿದ್ರು. ಕೃಷ್ಣ ಕೊಂಡಿ ಹಾಕಿ, ಅಲಂಕಾರ ಮಾಡಿದ್ರು. ಸೋಮವಾರ್ದಿಂದ ಸ್ಕೂಲ್ ಇತ್ತೂಂತ ಭಾನುವಾರ ನಾನು ಹೋಗಿ ಅವುನ್ನ ಕರ್ಕಂಡು ವಾಪಸ್ ಬೆಂಗ್ಳೂರಿಗೆ ಬಂದೆ. ಸೋಮವಾರ ರಾತ್ರಿ ಅಕ್ಕ ಫೋನ್ ಮಾಡೀಳು. ಯಾಕೋ ಅಜ್ಜಿ ಇವತ್ತು ಮಲಗೌರೆ ಕಣೆ. ಅಸ್ಪತ್ರೇಗೆ ಹೋಗೋಣ ಅಂದ್ರೆ ಕೇಳ್ತಿಲ್ಲ ಅಂದ್ಲು. ನಂಗೂ ದಿಗಿಲಾಯಿತು. ಒಂಜಿನವೂ ಮಲಗಿದ್ದು ನೋಡಿರ್ಲಿಲ್ಲ. ನೀನು ಬಾರೆ ಅಜ್ಜೀನ ಒಪ್ಸಿ ಆಸ್ಪತ್ರೆ ಕರ್ಕೋ ಹೋಗಾಣಿ ಅಂತ ಅಕ್ಕ ಯೋಳಿದ್ಲು. ಮಂಗಳವಾರ ಬೆಳಗ್ಗೇನೆ ಹೋದೆ. ಅಜ್ಜೀನ ಆಸ್ಪತ್ರೆಗೆ ಕರ್ಕೊಂಡು ಹೋಗೋಕೆ ಒಪ್ಸೋ ಅಷ್ಟರಲ್ಲಿ ಸಾಕಾಯ್ತು. ನನ್ ಜವಾಬ್ದಾರಿ ಮುಗ್ದೈತೆ. ಈ ವಯಸಾಗೆ ಆಸ್ಪತ್ರೆ ಸಾವಾಸ ನಂಗೆ ಯಾಕೆ ಬೇಕು. ನೆಮ್ದಿಯಾಗಿ ಹೋಗೋಕೆ ನನ್ನ ಬುಟ್ಟುಬುಡಿ ಅಂತ ಒಂದೇ ವರಾತ. ಕೊನೇಗೂ ಒಪ್ತು. ಸಾಯಂಕಾಲ ಐದು ಗಂಟೆಗೆ ಹೋಗೋದು ಅಂತ ಮಾತಾಯ್ತು. ಆಲೇ ನಾಕು ಗಂಟೆ ಆಗಿತ್ತು. ಸ್ವಲ್ಪ ಹಾಲು ಕೇಳಿದ್ರು. ಅಕ್ಕ ಕೊಟ್ಲು. ಅಜ್ಜಿ ಅರ್ಧ ಗಂಟೆ ಮಲಗು ಅಂತ ಯೋಳಿ ನಾವೂ ಅಂಗೇ ಆಚೆ ಬಂದು ಕುಂತ್ವಿ. ನಮ್ಮಣ್ಣ ಐದು ಗಂಟೆಗೆ ಕಾರ್ ತಕಂಡು ಬತ್ತೀನಿ ಅಂದ. ನಮ್ಮಾಮ ನಾಕೂವರೆಗೆ ಅಜ್ಜೀನ ಎಬ್ಬಿಸ್ತೀನಿ ಅಂತ ರೂಮೊಳಿಕ್ಕೆ ಹೋದ್ರು. ನೋಡಿದ್ರೆ ಅಜ್ಜೀ ನಮ್ಮುನ್ನ ಬಿಟ್ಟು ಯಾವ್ ಮಾಯದಾಗೋ ಹೋಗ್ಬುಟ್ಟೌರೆ. ಅರ್ಧ ಗಂಟೆ ಮುಂಚೆ ಮಾತಾಡೌರೆ. ಸಿವಾ!! ಭೀಷ್ಮ ನೆಪ್ಪಾದ. ಕಲಿಗಾಲದ ಇಚ್ಛಾಮರಣಿ ನಮ್ಮಜ್ಜಿ. ಕೊನೆಗೂ ಆಸ್ಪತ್ರೆ ಮಕಾ ನೋಡ್ದೆ ಹೊಂಟೋದ್ರು. ನಾವೇನಾರೂ ಸ್ಯಾನೆ ಬಲಂತ(ಬಲವಂತ – ಒತ್ತಾಯ) ಮಾಡ್ದಿದ್ರೆ, ಇನ್ನೊಸಿ ದಿನಾ ಇರ್ತಿದ್ಲೇನೋ ಅಂಬ್ತ ಮನಸು ಚುಚ್ಚಿತು. ಸಾಯೋ ಹಿಂದಿನ್ ದಿನದ ಗಂಟ ಗೇಯ್ಮೆ ಮಾಡಿದ್ರು. ಅವತ್ತೊಂದಿನ ಸುಸ್ತಾಗಿ ಮಲಗಿದ್ರು.
“ಕರ್ಮಣ್ಯೇವಾಧಿಕಾರಸ್ತೇ ಮಾಫಲೇಷು ಕದಾಚನ”
ಅಜ್ಜೀ ಯಾವಾಗ್ಲೂ ಯೋಳ್ತಿದ್ದ ಮಾತು. ಬದುಕಿರಾಗಂಟ ಕಾಯಕ ಮಾಡ್ಕಂಡೇ ಬಂತು. ಯಾವ ಆಸೇನೂ ಇರದ ಜೀವ್ನ. ಬ್ಯಾರೆಯೋರ ಖುಷೀಲೆ ತನ್ನ ಖುಷಿ ಕಾಣ್ತಿದ್ದ ಮನ್ಸು. ಇಂತಾ ಬದುಕು ಬದ್ಕೋಕೆ ನಮ್ಗೆ ಸಾಧ್ಯಾ ಆಗೋದಾದ್ರೆ, ಮನ್ಸನ್ನ ಆಟು ಮಟ್ಟಿಗೆ ನಿಗ್ರಹ ಮಾಡ್ಕಂಬೋಕೆ ಆಗೋದಾದ್ರೆ, ಅಂತರಂಗದಾಗೆ ಸರ್ವಸಂಗ ಪರಿತ್ಯಾಗಿ ಆಗೋಕೆ ಆದ್ರೆ.. ಈ ಆದ್ರೆಗಳೆಲ್ಲ ಆಗ್ದೇ ಹೋಗ್ದೇ ಇರಾ ಮಾತು.

ನೀರ ಮೇಲಣ ಗುಳ್ಳೆ ನಿಜವಲ್ಲ ಹರಿಯೇ ಅನ್ನೋ ಪದ ಬೇರು ಬುಟ್ಟು ಒಳುಗ್ಲಿಂದ ಸೊಸಿ ಆದ್ರೆ ಆದೀತೇನೋಪ್ಪ. ಇವತ್ಗೂ ನನ್ ಮಗ ಐದು ವರ್ಸದಾಗಿನ್ ನೆಪ್ಪು ಮಸುಕಾಗಿ ಯೋಳ್ಕಂತಾನೆ. ಆ ಅಜ್ಜೀ ಇಸ್ಯಾ ಮಾತಾಡ್ತಾನೆ ಅಂದ್ರೆ ಎಂತಾ ಜೀವ ಅದು. ನನ್ ಬದುಕಿನ್ ಬೇರು ನಮ್ಮಜ್ಜೀ, ರುಕ್ಮಣಮ್ಮಜ್ಜಿ.

ಸುಮಾ ಸತೀಶ್ ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಚಿಕ್ಕಮಾಲೂರು ಗ್ರಾಮದವರು. ಬರವಣಿಗೆಯ ಜೊತೆಗೆ ಸಾಹಿತ್ಯ ಸಂಘಟನೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಕಿರುನಾಟಕಗಳ ರಚನೆ, ನಿರ್ದೇಶನ ಮತ್ತು ಅಭಿನಯ ಜೊತೆಗೆ ಏಕಪಾತ್ರಾಭಿನಯ ಇವರ ಹವ್ಯಾಸ. ಮಿರ್ಚಿ ಮಸಾಲೆ ಮತ್ತು ಇತರೆ ನಗೆ ನಾಟಕಗಳು , ಅವನಿ ( ಕವನ ಸಂಕಲನ), ವಚನ ಸಿರಿ (ಆಧುನಿಕ ವಚನಗಳು), ಹಾದಿಯಲ್ಲಿನ ಮುಳ್ಳುಗಳು ( ವೈಚಾರಿಕ ಲೇಖನ ಸಂಕಲನ), ಬಳಗ ಬಳ್ಳಿಯ ಸುತ್ತ (ಸಂ. ಕೃತಿ), ಶೂನ್ಯದಿಂದ ಸಿಂಹಾಸನದವರೆಗೆ ( ವ್ಯಕ್ತಿ ಚಿತ್ರಣ), ಭಾವಯಾನ ( ಸಂ. ಕೃತಿ), ಮನನ – ಮಂಥನ ( ವಿಮರ್ಶಾ ಬರೆಹಗಳು), ವಿಹಾರ (ಆಧುನಿಕ ವಚನಗಳು), ಕರ್ನಾಟಕದ ಅನನ್ಯ ಸಾಧಕಿಯರು ಭಾಗ 6 (ಡಾ. ಎಚ್. ಗಿರಿಜಮ್ಮನವರ ಬದುಕು – ಬರೆಹ) ಇವರ ಪ್ರಕಟಿತ ಕೃತಿಗಳು.
