ವಸ್ತುಗಳನ್ನು ವ್ಯವಸ್ಥಿತವಾಗಿ ಇರಿಸಿಕೊಳ್ಳುವ ವಿಷಯದ ಬಂದಾಗ, ಕೊನೆಗೂ ನಾವು ಮನುಷ್ಯರು ಅಭ್ಯಾಸಗಳ ದಾಸರು ಅನ್ನಿಸುತ್ತದೆ. ಚಿಕ್ಕದೋ ದೊಡ್ಡದೋ, ಮುಖ್ಯವೋ, ಅಮುಖ್ಯವೋ ಯಾವುದೇ ವಸ್ತುವನ್ನಾದರೂ ಯಾವಾಗಲೂ ಒಂದೇ ಜಾಗದಲ್ಲಿ ಇಡಲು ಕಲಿತೆವು ಅಂದರೆ ಅಲ್ಲೇ ಇಡುತ್ತೇವೆ, ಅಭ್ಯಾಸ ಆಗಿಬಿಟ್ಟಿತೆಂದರೆ, ಎಷ್ಟೋ ಸಲ ಅನ್ಯಮನಸ್ಕರಾಗಿಯೂ ವಸ್ತುಗಳನ್ನು ಸರಿಯಾದ ಜಾಗದಲ್ಲೇ ಇಟ್ಟುಬಿಡುತ್ತೇವೆ! ಹೀಗಾಗಿ ತುಂಬ ಮುಖ್ಯವಾದ ಸಲಕರಣೆಗಳನ್ನಾದರೂ ಒಂದೇ ಜಾಗದಲ್ಲಿ ಯಾವಾಗಲೂ ಇಡುವ ಅಭ್ಯಾಸವನ್ನು ಮಾಡಿಕೊಂಡೆವೆಂದರೆ ನಮಗೆ ನಾವೇ ದೊಡ್ಡ ಸಹಾಯ ಮಡಿಕೊಂಡೆವು ಎಂದರ್ಥ.
ಡಾ. ಎಲ್.ಜಿ. ಮೀರಾ ಬರೆಯುವ “ಮೀರಕ್ಕರ” ಅಂಕಣದ ಇಪ್ಪತ್ಮೂರಡನೆಯ ಬರಹ
ಒಂದು ಹಾಸ್ಯ ಚಟಾಕಿ ಓದಿದ್ದೆ. ಮರೆಗುಳಿ ಪ್ರಾಧ್ಯಾಪಕರೊಬ್ಬರ ಬಗ್ಗೆ. ಅದು ಹೀಗಿದೆ.
ಒಂದು ದಿನ ಪ್ರಾಧ್ಯಾಪಕರೊಬ್ಬರು ಬೆಳಗಿನ ವಾಯುಸಂಚಾರಕ್ಕೆ ಹೋಗಿರುತ್ತಾರೆ. ತುಸು ಮೋಡ ಕವಿದ ವಾತಾವರಣವಿದ್ದುದರಿಂದ ಮಳೆ ಬಂದೀತೆಂದು ಹೆದರಿದ ಅವರ ಮನೆಯಾಕೆಯು, ಅವರ ಕೈಗೆ ಒಂದು ಕೊಡೆ ಕೊಟ್ಟು ಕಳುಹಿಸಿರುತ್ತಾರೆ. ಆದರೆ ಎಷ್ಟು ಹೊತ್ತಾದರೂ ಆ ಪ್ರಾಧ್ಯಾಪಕರು ಮರಳಿ ಮನೆಗೆ ಬರುವುದೇ ಇಲ್ಲ. ಮನೆಯಾಕೆಗೆ ತುಂಬ ಆತಂಕ ಆಗುತ್ತದೆ. ಮನೆಯ ಹೊರಬಾಗಿಲು, ಅಡಿಗೆಮನೆ, ಪ್ರಾಧ್ಯಾಪಕರು ಮಲಗುವ ಕೋಣೆಗೆ ಆಕೆ ಶತಪಥಗುಟ್ಟಲು ಪ್ರಾರಂಭಿಸುತ್ತಾರೆ. ಆತಂಕದಿಂದ ಹಾಗೆ ಆಚೀಚೆ ಓಡಾಡುತ್ತಿರುವಾಗ ಅವರಿಗೆ ಒಂದು ವಿಚಿತ್ರ ಸಂಗತಿ ಕಂಡುಬರುತ್ತದೆ. ಏನೆಂದರೆ ಪ್ರಾಧ್ಯಾಪಕರು ಮಲಗುವ ಮಂಚದ ಮೇಲೆ ತಾವು ಕೊಟ್ಟು ಕಳಿಸಿದ ಕೊಡೆ ಇರುತ್ತದೆ! ಅಂದರೆ ಪ್ರಾಧ್ಯಾಪಕರು ಮನೆಗೆ ಬಂದಿದ್ದಾರೆ! ಮತ್ತೆ ಅವರೆಲ್ಲಿ? ಎಲ್ಲಿ? ಶೌಚಾಲಯಕ್ಕೇನಾದರೂ ಹೋದರೇನು? ಹುಡುಕುತ್ತಾರೆ ಮನೆಯಾಕೆ. ಅಲ್ಲಿಯೂ ಇಲ್ಲ. ಮತ್ತೆ ಎಲ್ಲಿ ಹೋದರು!? ನಿಜಕ್ಕೂ ಆತಂಕ ಆಗುತ್ತದೆ ಅವರಿಗೆ. ಆ ಚಿಂತೆಯಲ್ಲೇ ಏನೋ ಹೊಳೆದು ಒಮ್ಮೆ ತಾವು ಯಾವಾಗಲೂ ಕೊಡೆಯನ್ನು ಒರಗಿಸಿಡುವ ಬಾಗಿಲ ಮೂಲೆಯನ್ನು ಗಮನಿಸುತ್ತಾರೆ. ಅಲ್ಲಿ ನಮ್ಮ ಮರೆಗುಳಿ ಪ್ರಾಧ್ಯಾಪಕರು ಗೋಡೆಮೂಲೆಗೊರಗಿ ನಿಂತುಕೊಂಡು ತೂಕಡಿಸುತ್ತಿರುತ್ತಾರೆ. ಅಯ್ಯೋ ರಾಮಾ! ಆ ಪ್ರಾಧ್ಯಾಪಕರು ಕೊಡೆಯನ್ನು ಅದರ ಜಾಗವಾದ ಬಾಗಿಲ ಹಿಂದಿರುವ, ಕೋಣೆಮೂಲೆಯಲ್ಲಿಡುವ ಬದಲು ತಮ್ಮ ಮಲಗುಸ್ಥಳವಾದ ಮಂಚದ ಮೇಲಿಟ್ಟು ತಮ್ಮನ್ನು ಕೊಡೆ ಎಂದು ಭಾವಿಸಿ ಮೂಲೆಯಲ್ಲಿ ನಿಂತು ತೂಕಡಿಸುತ್ತಿದ್ದಾರೆ!! ಮನೆಯಾಕೆಗೆ ಅಚ್ಚರಿ, ನಿರಾಳ ಒಟ್ಟಿಗೆ ಆಗುತ್ತದೆ, ನಗೆಯೂ ಬರುತ್ತದೆ.
ಇದು ಒಂದು ಹಾಸ್ಯಚಟಾಕಿಯಾದರೂ, ವಸ್ತುಗಳನ್ನು ನಮ್ಮ ಮರೆವು ಅಥವಾ ನಿರ್ಲಕ್ಷ್ಯದಿಂದ ಎಲ್ಲೆಲ್ಲೊ ಇಟ್ಟು ನಾವು ಮನುಷ್ಯರು ಒದ್ದಾಡುವ ಪರಿಯ ಕಡೆಗೆ ಇದು ಬೆಳಕು ಚೆಲ್ಲುತ್ತದೆಯಲ್ಲವೆ? ಈ ಪ್ರಾಧ್ಯಾಪಕರೇನೋ ಮರೆಗುಳಿ ಎಂಬ ಬಿರುದು ಪಡೆದವರು. ಆದರೆ ನಮ್ಮಲ್ಲಿ ಈ ಬಿರುದಿಲ್ಲದವರೇನು ಕಡಿಮೆ ಮರೆಯುತ್ತೇವೆಯೆ? ವಸ್ತುಗಳ ಸರ್ವಾಧಿಕಾರದಿಂದ ಕಡಿಮೆ ಬಳಲುತ್ತೇವೆಯೆ?
*****
ಬೀಗದ ಕೈಗಳು, ದೂರವಾಣಿ, ಕನ್ನಡಕ, ಡಬ್ಬಿಯ ಮುಚ್ಚಳಗಳು, ಪುಸ್ತಕ-ಪತ್ರ-ದಾಖಲೆಗಳು ಇವುಗಳನ್ನು ಕಳೆದುಕೊಂಡು ಹುಡುಕುವ ಪಾಡು ಯಾರಿಗೆ ತಾನೆ ಗೊತ್ತಿಲ್ಲ! ಚಿಕ್ಕ ಚಿಕ್ಕ ವಸ್ತುಗಳು ಕಳೆದುಹೋದಾಗ ದೊಡ್ಡ ದೊಡ್ಡ ಕಷ್ಟಗಳು ಉಂಟಾಗುತ್ತವೆ! ಸಮಯಕ್ಕೆ ಕೈಗೆ ಸಿಗದ ಒಂದು ಗುಂಡುಸೂಜಿಯು ನಮ್ಮ ಇಡೀ ದಿನದ ಯೋಜನೆಯನ್ನೇ ಅಲ್ಲೋಲ ಕಲ್ಲೋಲ ಮಾಡಿಬಿಡಬಹುದು. ಅದಕ್ಕೇ ಆಂಗ್ಲ ಭಾಷೆಯಲ್ಲಿ `ಟಿರೆನಿ ಆಫ್ ಥಿಂಗ್ಸ್’ (ವಸ್ತುಗಳ ಸರ್ವಾಧಿಕಾರ) ಎಂಬ ಪದಗುಚ್ಛ ಇರುವುದು! `ವಾರ್ ವಾಸ್ ಲಾಸ್ಟ್ ಬಿಕಾಸ್ ಆಫ್ ಎ ಹಾರ್ಸ್ ಶೂ’! (ಒಂದು ಕುದುರೆ ಲಾಳಕ್ಕಾಗಿ ಯುದ್ಧದಲ್ಲಿ ಸೋತರು!) ಎಂಬ ನಾಣ್ಣುಡಿಯನ್ನು ನಾವು ಕೇಳಿದ್ದೇವಲ್ಲ.
*****
ಜನರು ವಸ್ತುಗಳನ್ನು ಕಳೆದುಕೊಂಡು ಪರದಾಡಿದ ಕೆಲವು ಉದಾಹರಣೆಗಳು ಈ ಕೆಳಗಿನಂತಿವೆ ನೋಡಿ.
ಒಂದು ದಿನ ಆಕಾಶವಾಣಿಯಲ್ಲಿ ನಾನು ಭೇಟಿ ಮಾಡಿದ ಮಹಿಳೆಯೊಬ್ಬರು ನೆನಪಾಗುತ್ತಾರೆ. ಸಾಮಾನ್ಯವಾಗಿ ಆರಾಮವಾಗಿ ನಗುನಗುತ್ತಾ ಖುಷಿಯಿಂದ ಕೆಲಸ ಮಾಡುವ ಅವರು ಅಂದು ತುಂಬ ಆತಂಕಿತರಾದಂತೆ ಕಂಡುಬಂತು. ಏನೋ ಒಂದು ರೀತಿಯ ಖಿನ್ನತೆ, ಅನ್ಯಮನಸ್ಕತೆ ಹಾಗೂ ದುಗುಡಗಳು ಅವರನ್ನು ಆವರಿಸಿದ್ದವು. “ಯಾಕೆ ಮೇಡಂ? ಹುಷಾರಿಲ್ವಾ ನಿಮ್ಗೆ?” ಎಂದು ನಾನು ಕೇಳಿದೆ. “ಇಲ್ಲ, ಹುಷಾರಾಗಿದ್ದೀನಿ. ನಾನು ಸಾಮಾನ್ಯವಾಗಿ ನನ್ನ ಒಡವೆಗಳನ್ನು ಒಂದು ಪರ್ಸ್‌ನಲ್ಲಿ ಹಾಕಿಡ್ತಾ ಇದ್ದೆ. ಬೆಳಿಗ್ಗೆ ಆ ಪರ್ಸು ಕಾಣಿಸಲಿಲ್ಲ ನಂಗೆ. ಆದಷ್ಟು ಹುಡುಕ್ದೆ, ಆದ್ರೆ ಕೆಲಸಕ್ಕೆ ಬರೋ ಗಡಿಬಿಡಿಯಲ್ಲಿ ನಂಗೆ ಸರಿಯಾಗಿ ಹುಡುಕಕ್ಕೆ ಆಗಿಲ್ಲ. ಯಾವಾಗ ಮನೆಗೆ ಹೋಗ್ತೀನೋ, ಸರಿಯಾಗಿ ಹುಡುಕ್ತೀನೋ ಅನ್ನಿಸಿಬಿಟ್ಟಿದೆ. ಮನೆಯೆಲ್ಲ ಜಾಲಾಡಿದ್ರೂ ಪರವಾಗಿಲ್ಲ, ಅದು ಸಿಕ್ಕಿದ್ರೆ ಸಾಕಪ್ಪಾ ಸದ್ಯ!’’ ಅಂದರು.
ಮನೆಯಲ್ಲಿ ಪುಸ್ತಕಗಳನ್ನು ರಾಶಿ ಒಟ್ಟಿಕೊಂಡು ಅವುಗಳನ್ನು ಸರಿಯಾಗಿ ಜೋಡಿಸದೆ ಪರದಾಡುವ ಅಧ್ಯಾಪಕ ಹಾಗೂ ಲೇಖಕರದೇ ಇನ್ನೊಂದು ಪಾಡು. ಪುಸ್ತಕ ಹುಡುಕಲಾರದೆ ಅದದೇ ಪುಸ್ತಕವನ್ನು ಮತ್ತೆ ಮತ್ತೆ ಕೊಂಡುಕೊಳ್ಳುವ ಜನರ ಬಗ್ಗೆ ನನಗೆ ಗೊತ್ತು. ತಮ್ಮ ಒಬ್ಬ ನೆಚ್ಚಿನ ಅಧ್ಯಾಪಕರ ಮನೆಯಲ್ಲಿ ಪುಸ್ತಕ ಹುಡುಕುವ-ಜೋಡಿಸುವ ಸಂದರ್ಭ ಬಂದಾಗ ನನ್ನ ಸ್ನೇಹಿತರೊಬ್ಬರಿಗೆ ಒಂದೇ ಪುಸ್ತಕದ ಏಳು ಪ್ರತಿಗಳು ಸಿಕ್ಕಿದವಂತೆ!!

ವಸ್ತುಗಳನ್ನು ಕಳೆದುಕೊಳ್ಳುವ ಜನ ಅವನ್ನು ಹುಡುಕಿಕೊಳ್ಳಲು, ಜೋಡಿಸಿಟ್ಟುಕೊಳ್ಳಲು ಸಹ ಅನೇಕ ವಿಧಾನಗಳನ್ನು ಅನುಸರಿಸುತ್ತಾರೆ, ಉಪಾಯ ಮಾಡುತ್ತಾರೆ. ಕೆಲವನ್ನು ಇಲ್ಲಿ ನೆನೆಯುತ್ತಿದ್ದೇನೆ.
ನನ್ನದೇ ಒಂದು ಉದಾಹರಣೆ ನೆನಪಾಗ್ತಿದೆ. ಚಿಕ್ಕವಳಿದ್ದಾಗ ನಾನು ಪೆನ್ನಿನ ಮುಚ್ಚಳವನ್ನು (ಕ್ಯಾಪ್) ಎಲ್ಲೆಂದರಲ್ಲಿ ಇಟ್ಟು ನಂತರ ಅದನ್ನು ಹುಡುಕಾಡಿ ತುಂಬ ಕಷ್ಟ ಪಡುತ್ತಿದ್ದೆ. ಒಂದು ದಿನ ಅದು ಹೇಗೋ ಏನೋ, `ಬರೆಯುತ್ತಿರುವಾಗ ಪೆನ್ನಿನ ತುದಿಗೆ ಅದರ ಮುಚ್ಚಳ ಹಾಕಿಟ್ಟರೆ ಹೇಗೆ’ ಎಂಬ ವಿಚಾರ ನನ್ನ ಮನಸ್ಸಿಗೆ ಬಂತು. ಸರಿ, ಅಂದು ಹಾಗೆ ಮುಚ್ಚಳ ಹಾಕಿ ಬರೆಯಲು ಪ್ರಾರಂಭಿಸಿದವಳು ಇಂದಿನವರೆಗೂ ಆ ಅಭ್ಯಾಸವನ್ನು ಮುಂದುವರಿಸಿಕೊಂಡು ಬಂದಿದ್ದೇನೆ. ಆಮೇಲೆ ಎಂದೂ ನಾನು ಪೆನ್ನಿನ ಮುಚ್ಚಳ ಕಳಕೊಂಡಿಲ್ಲ! ಇದು ಬಹಳ ಕಾಲದಿಂದ ಅಭ್ಯಾಸವಾಗಿ, ಈಗ ಪೆನ್ನಿನ ಮುಚ್ಚಳ ಹಾಕದೆ ಹೋದರೆ ಏನೋ ಸರಿ ಹೋಗುತ್ತಿಲ್ಲ ಅನ್ನಿಸಿಬಿಡುತ್ತೆ!
ಪೆನ್ನು ಕಳೆದುಹೋಗುತ್ತೆ ಎಂದು ಅದನ್ನು ದಾರದಿಂದ ಕಟ್ಟಿ ಹಾಕುವ ಅಂಗಡಿಯವರನ್ನು ನೋಡಿದ್ದೇವಲ್ಲ. ಜನ ಪೆನ್ನು ಕೇಳಿದಾಗ ಅದರ ಮುಚ್ಚಳವನ್ನು ಸಹ ಕೊಟ್ಟರೆ ಇಡೀ ಪೆನ್ನನ್ನೇ ತೆಗೆದುಕೊಂಡು ಹೋಗಿಬಿಡುತ್ತಾರೆ ಎಂದು ಭಾವಿಸಿ ಪೆನ್ನಿನ ಬರೆಯುವ ಭಾಗವನ್ನು ಮಾತ್ರ ಪೆನ್ನು ಕೇಳಿದವರಿಗೆ ಕೊಡುವವರಿದ್ದಾರೆ!
ನನ್ನ ದೊಡ್ಡ ಮಗಳು ರಶ್ಮಿ ಎರಡು-ಮೂರು ವರ್ಷದ ಪುಟಾಣಿಯಾಗಿದ್ದಾಗ ನಮ್ಮ ಎದುರು ಮನೆಯಲ್ಲೊಮ್ಮೆ, ಅದು ಇದೂ ವಸ್ತುಗಳೊಂದಿಗೆ ಆಟವಾಡುತ್ತಿದ್ದಳು. ಆಗ ಇದ್ದಕ್ಕಿದ್ದಂತೆ ನನ್ನ ಬಳಿ ಇದ್ದ ಬೀಗದ ಕೈ ಕಾಣೆಯಾಗಿಬಿಟ್ಟಿತು. `ಮಗು ಎಲ್ಲಾದರೂ ಬಿಸಾಡಿಬಿಟ್ಟಿತಾ?’ ಎಂದು ನಾನು ಚಿಂತಿಸಲಾರಂಭಿಸಿದೆ. ಆಗ ಆ ಮನೆಯವರು ಒಂದು ಉಪಾಯ ಮಾಡಿದರು. ಅವಳ ಕೈಗೆ ಇನ್ನೊಂದು ವಸ್ತುವನ್ನು ಕೊಟ್ಟರು. ಮಗು ಅದನ್ನು ತೆಗೆದುಕೊಂಡು ಹೋಗಿ ಹಿತ್ತಲಿನಲ್ಲಿ ಬಿಸಾಡಿತು. ತುಸು ಹುಡುಕಿದರೆ ಬೀಗದ ಕೈ ಅಲ್ಲೇ ಇತ್ತು ಹಿತ್ತಲಿನಲ್ಲಿ! ಎದುರು ಮನೆಯಾಕೆ ಮಾಡಿದ ಉಪಾಯ ನನಗೆ ತುಂಬ ಇಷ್ಟವಾಯಿತು.
ವಸ್ತುಗಳು ಕಳೆದು ಹೋಗಿ ಆಗುವ ಹಿಂಸೆಯಿಂದ ತಪ್ಪಿಸಿಕೊಳ್ಳಲು ಕೆಲವರು `ಕಿಟ್ ಸಿಸ್ಟಂ’ ಅಥವಾ `ಬ್ಯಾಗಿಂಗ್’ ಎಂಬ ವಿಧಾನವನ್ನು ಬಳಸುತ್ತಾರೆ. ಅಂದರೆ ಒಂದು ನಿರ್ದಿಷ್ಟ ಕೆಲಸಕ್ಕೆ ಬೇಕಾಗುವ ಎಲ್ಲ ವಸ್ತುಗಳನ್ನೂ (ದಾಖಲೆ/ಕಾಗದ ಪತ್ರ/ಪುಸ್ತಕ, ಬಟ್ಟೆ … ಹೀಗೆ) ಒಂದೇ ಚೀಲ ಅಥವಾ ಡಬ್ಬದಲ್ಲಿ ಇಟ್ಟುಕೊಳ್ಳುವುದು… ಇದು ವಸ್ತುಗಳನ್ನು ನಿರ್ವಹಿಸುವ ಒಂದು ಉತ್ತಮ ವಿಧಾನ ಅನ್ನುತ್ತಾರೆ. ಆಗ ಆ ಚೀಲ/ಡಬ್ಬ ತೆಗೆದುಕೊಂಡರೆ ಬೇಕಾದ ಎಲ್ಲ ವಸ್ತುಗಳೂ ಒಟ್ಟಿಗೆ ಸಿಕ್ಕಿಬಿಡುತ್ತವೆ. ನೀನಾಸಂನ ಚಲಿಸುವ ರಂಗಭೂಮಿಯಾದ `ತಿರುಗಾಟ’ ತಂಡದವರು ತಾವು ನಾಟಕದ ಓಡಾಟಕ್ಕೆ ಬಳಸುವ ಬಸ್ಸಿನಲ್ಲಿ ಕುಳಿತುಕೊಳ್ಳುವಾಗ ತಮ್ಮ ಚೀಲ, ಟ್ರಂಕುಗಳನ್ನು ಎಲ್ಲರೂ ಯಾವಾಗಲೂ ಒಂದೇ ಸ್ಥಳದಲ್ಲಿ ಇಟ್ಟುಕೊಳ್ಳುತ್ತಾರಂತೆ. ಒಳ್ಳೆಯ ಅಭ್ಯಾಸವಲ್ಲವೆ ಇದು?
ಇನ್ನು ಕೆಲವರು, ಡಬ್ಬಗಳಿಗೆ ಹೆಸರು ಬರೆದಿಡುವುದು, ಬೇರೆ ಬೇರೆ ಬಣ್ಣಗಳ ಪಟ್ಟಿಗಳನ್ನು ಬಳಸಿ ಕಡತ/ಚೀಲಗಳನ್ನು/ ಪ್ರವಾಸ ಸಾಮಾನುಗಳನ್ನು ಜೋಡಿಸಿಕೊಳ್ಳುವುದು – ಇಂತಹ ವಿಧಾನಗಳನ್ನು ಬಳಸುತ್ತಾರೆ. ಪುಸ್ತಕಗಳನ್ನು ಜೋಡಿಸಲು ಗ್ರಂಥಾಲಯದವರು ತಮ್ಮದೇ ಪಟ್ಟಿಕೆಯ(ಕ್ಯಾಟಲಾಗ್) ವಿಧಾನವನ್ನು ಅನುಸರಿಸುತ್ತಾರೆ. `ಮಿಸ್‌ಪ್ಲೇಸಿಂಗ್ ಈಸ್ ಲೂಸಿಂಗ್’ (ತಪ್ಪು ಸ್ಥಳದಲ್ಲಿಡುವುದು ಅಂದರೆ ಕಳೆದುಕೊಳ್ಳುವುದು) – ಈ ವಾಕ್ಯವನ್ನು (ಅಥವಾ ಎಚ್ಚರಿಕೆಯನ್ನು ಅನ್ನೋಣ!) ಗ್ರಂಥಾಲಯವೊಂದರ ಫಲಕದಲ್ಲಿ ನಾನು ನೋಡಿದ್ದೇನೆ.

(ಮೇರಿ ಕೋಂಡೊ)
`ಕನಿಷ್ಠತೆಯ ಸಿದ್ಧಾಂತ’(ಮಿನಿಮಲಿಸಂ). ಕೆಲವರು ವಸ್ತುಗಳ ಸರ್ವಾಧಿಕಾರದಿಂದ ತಪ್ಪಿಸಿಕೊಳ್ಳಲು ಈ ಸಿದ್ಧಾಂತದ ಮೊರೆ ಹೋಗುತ್ತಾರೆ. ಉದಾಹರಣೆಗೆ ಆಪಲ್ ಎಂಬ ಗಣಕತಂತ್ರಾಂಶದ ದೈತ್ಯ ಉದ್ಯಮವನ್ನು ಹುಟ್ಟುಹಾಕಿದ ಸ್ಟೀವ್ ಜಾಬ್ಸ್ ಅವರು ಪ್ರತಿದಿನವೂ ಕೊರಳು ಮುಚ್ಚುವ ಕಪ್ಪು ಅಂಗಿಯನ್ನೇ ಕೆಲಸಕ್ಕೆ ಧರಿಸುತ್ತಿದ್ದರಂತೆ. ಬೇರೆ ಯಾವ ರೀತಿಯ ಬಟ್ಟೆಯನ್ನೂ ಅವರು ತೊಡುವುದಿಲ್ಲ! ಬಟ್ಟೆಗಳನ್ನು ಹುಡುಕುವುದು, ಜೋಡಿಸುವುದು, `ಅದು ಸಿಗಲಿಲ್ಲ, ಇದು ಸಿಗಲಿಲ್ಲ’ವೆಂದು ಹುಡುಕಿ ಪರದಾಡುವುದು – ಈ ಹಿಂಸೆಗಳಿಂದ ತಪ್ಪಿಸಿಕೊಳ್ಳಲು ಅವರು ಕಂಡುಕೊಂಡ ಉಪಾಯ ಇದು.
ಇನ್ನು, ಬೇಡದಿರುವ ವಸ್ತುಗಳನ್ನು ನಿರ್ದಾಕ್ಷಿಣ್ಯವಾಗಿ ಬಿಸಾಡುವುದು – ಇದು ಸಹ ವಸ್ತುಗಳು ನಮ್ಮನ್ನು ಆಳದಿರುವಂತೆ ನೋಡಿಕೊಳ್ಳುವ ಒಂದು ವಿಧಾನವಂತೆ. ಇದನ್ನು ಬರೆಯುತ್ತಿರುವಾಗ ಜಪಾನಿನ ಮೇರಿ ಕೋಂಡೊ ನೆನಪಾಗುತ್ತಾರೆ. ಅಂತರ್ಜಾಲದಲ್ಲಿ ನೀವು `ಮೇರಿ ಕೋಂಡೊ’ ಎಂದು ಬೆರಳಚ್ಚು ಮಾಡಿದರೆ ನಿಮ್ಮ ಮನೆಯ/ಕಛೇರಿಯ ವಸ್ತುಗಳನ್ನು ಜೋಡಿಸಿಡುವ ವಿಧಾನಗಳನ್ನು ಕುರಿತು ಸಾಕಷ್ಟು ಮಾಹಿತಿ ಸಿಗುತ್ತದೆ. ಸುಮಾರು ನಲವತ್ತು ವಯಸ್ಸಿನ ಮೇರಿ ಕೋಂಡೊ, `ಓರಣಗೊಳಿಸುವಿಕೆ’ಯ ಸಲಹೆಗಾರ್ತಿ, ಲೇಖಕಿ ಮತ್ತು ದೂರದರ್ಶನ ಪ್ರಸ್ತುತಕಾರ್ತಿ. ಇವರ `ಲೈಫ್ ಚೇಂಜಿಂಗ್ ಮ್ಯಾಜಿಕ್ ಆಫ್ ಟೈಡಿಯಿಂಗ್ ಅಪ್’ ಎಂಬ ಪುಸ್ತಕವು ಪ್ರಪಂಚದ ಅನೇಕ ಭಾಷೆಗಳಿಗೆ ಅನುವಾದಗೊಂಡಿದೆ. ತನ್ನ ಐದನೇ ವಯಸ್ಸಿನಿಂದ ಈಕೆ ಈ ಓರಣಗೊಳಿಸುವಿಕೆಯ ಬಗ್ಗೆ ಆಸಕ್ತಿ ತಾಳಿ, ಶಾಲೆಯಲ್ಲಿ ಪುಸ್ತಕದ ಕಪಾಟುಗಳನ್ನು ಓರಣವಾಗಿಡುವ ಕೆಲಸವನ್ನು ತಾನೇ ವಹಿಸಿಕೊಂಡರಂತೆ. ಮೊದಲು `ಯಾವ ವಸ್ತುಗಳನ್ನು ಎಸೆಯಬಹುದು?’ ಎಂಬುದರ ಬಗ್ಗೆಯೇ ಆಕೆ ಬಹುವಾಗಿ ಯೋಚಿಸುತ್ತಿದ್ದರು. ಈ ಬಗ್ಗೆ ಬಹಳ ಯೋಚಿಸಿ ಯೋಚಿಸಿ ಮಾನಸಿಕವಾಗಿ ವಿಪರೀತ ಆಯಾಸವಾಗಿ ಒಮ್ಮೆ ಬವಳಿ ಬಂದು ಬಿದ್ದರಂತೆ. ಎಚ್ಚರ ಆದಾಗ ಏನೋ ಒಂದು ಸ್ಫುರಣೆ ಆದಂತಾಗಿ ಯಾವುದೋ ಒಂದು ನಿಗೂಢ ದನಿ “ಯಾವುದನ್ನು ಎಸೆಯಬಹುದು ಅಂತ ಯಾಕೆ ಇಷ್ಟು ಯೋಚಿಸುತ್ತೀಯ? ಯಾವುದನ್ನು ಇಟ್ಟುಕೊಳ್ಳಬಹುದು ಎಂದು ಯೋಚಿಸು” ಎಂದಿತಂತೆ! ಈ ಸ್ಫುರಣೆಯು ಆಕೆಯ ಯೋಚನಾ ಪಥ ಮತ್ತು ಜೀವನ ಪಥಗಳನ್ನೇ ಬದಲಿಸಿತು!
`ಕೋನ್ಮೇರಿ’ ಎಂಬ ಹೊಸ `ಓರಣ ಸಿದ್ಧಾಂತ’ವನ್ನು ಆಕೆ ರೂಪಿಸಿದರು. ಆ ಸಿದ್ಧಾಂತವನ್ನು ಅವರು ಹೀಗೆ ವಿವರಿಸುತ್ತಾರೆ – `ನಿಮ್ಮ ಮನೆಯ ವಸ್ತುಗಳನ್ನು ಅವುಗಳ ವಿಭಾಗದ ಪ್ರಕಾರ ಅಂದರೆ ಬಟ್ಟೆಗಳು, ಪುಸ್ತಕಗಳು, ಪಾತ್ರೆಗಳು, ವೃತ್ತಪತ್ರಿಕೆಗಳು — ಹೀಗೆ, ಒಂದು ಕಡೆ ಒಟ್ಟಿ, ರಾಶಿ ಮಾಡಿರಿ. ನಂತರ ಅವುಗಳಲ್ಲಿ ಒಂದೊಂದು ವಸ್ತುವನ್ನೂ ನಿಮ್ಮ ಕೈಯಲ್ಲಿ ಹಿಡಿದು `ಈ ವಸ್ತುವಿನಿಂದ ನನಗೆ ಹಿಗ್ಗು (ಸಂತೋಷ – ಜಾಯ್) ಸಿಗುತ್ತಿದೆಯೇ ಎಂದು ಕೇಳಿಕೊಳ್ಳಿರಿ. ಹೌದು ಅಂದರೆ ಅದನ್ನು ಇರಿಸಿಕೊಳ್ಳಿ, ಇಲ್ಲವೆಂದರೆ ಅದನ್ನು ಯಾರಿಗಾದರೂ ಕೊಡಿರಿ ಅಥವಾ ತ್ಯಜಿಸಿರಿ’. ಈ ಸಿದ್ಧಾಂತದಿಂದಾಗಿ ಕೇವಲ ನಿಮ್ಮ ಮನೆಯು ಓರಣವಾಗುವುದಿಲ್ಲ, ನೀವು ಸಹ ನಿಮ್ಮೆ ಬಗ್ಗೆ ಹೆಚ್ಚು ತಿಳಿದುಕೊಳ್ಳುತ್ತೀರಿ’’. ಮೇರಿ ಕೋಂಡೊ ಅವರ ಈ ಸಿದ್ಧಾಂತವು ಬಹು ಜನಪ್ರಿಯವಾಗಿದೆ.
******
ವಸ್ತುಗಳನ್ನು ವ್ಯವಸ್ಥಿತವಾಗಿ ಇರಿಸಿಕೊಳ್ಳುವ ವಿಷಯದ ಬಂದಾಗ, ಕೊನೆಗೂ ನಾವು ಮನುಷ್ಯರು ಅಭ್ಯಾಸಗಳ ದಾಸರು ಅನ್ನಿಸುತ್ತದೆ. ಚಿಕ್ಕದೋ ದೊಡ್ಡದೋ, ಮುಖ್ಯವೋ, ಅಮುಖ್ಯವೋ ಯಾವುದೇ ವಸ್ತುವನ್ನಾದರೂ ಯಾವಾಗಲೂ ಒಂದೇ ಜಾಗದಲ್ಲಿ ಇಡಲು ಕಲಿತೆವು ಅಂದರೆ ಅಲ್ಲೇ ಇಡುತ್ತೇವೆ, ಅಭ್ಯಾಸ ಆಗಿಬಿಟ್ಟಿತೆಂದರೆ, ಎಷ್ಟೋ ಸಲ ಅನ್ಯಮನಸ್ಕರಾಗಿಯೂ ವಸ್ತುಗಳನ್ನು ಸರಿಯಾದ ಜಾಗದಲ್ಲೇ ಇಟ್ಟುಬಿಡುತ್ತೇವೆ! ಹೀಗಾಗಿ ತುಂಬ ಮುಖ್ಯವಾದ ಸಲಕರಣೆಗಳನ್ನಾದರೂ ಒಂದೇ ಜಾಗದಲ್ಲಿ ಯಾವಾಗಲೂ ಇಡುವ ಅಭ್ಯಾಸವನ್ನು ಮಾಡಿಕೊಂಡೆವೆಂದರೆ ನಮಗೆ ನಾವೇ ದೊಡ್ಡ ಸಹಾಯ ಮಡಿಕೊಂಡೆವು ಎಂದರ್ಥ.
ಇಲ್ಲಿ ಮುಖ್ಯ ವಿಷಯ ಅಂದ್ರೆ ವಸ್ತುಗಳನ್ನು ನಿರ್ವಹಿಸಲು ನಾವು ಯಾವ ವಿಧಾನವನ್ನು ಅನುಸರಿಸುತ್ತೇವೆ ಅನ್ನುವುದು ಮುಖ್ಯ ಅಲ್ಲ, ಅವುಗಳ ನಿರಂಕುಶ ಆಳ್ವಿಕೆಯಿಂದ ತಪ್ಪಿಸಿಕೊಂಡಿದ್ದೇವಾ ಅನ್ನುವುದು ಮುಖ್ಯ.
ಇನ್ನೊಂದು ರೀತಿಯಲ್ಲಿ ನೋಡಿದರೆ ಇದು ಬಂಡವಾಳಶಾಹಿ ವ್ಯವಸ್ಥೆಯ ಕೊಳ್ಳುಬಾಕತನದ ಆಧಿಕ್ಯದ ಸಮಸ್ಯೆಯೂ ಹೌದು. ಎಪ್ಪತ್ತು ಎಂಬತ್ತು ವರ್ಷಗಳ ಹಿಂದಿನ ಭಾರತದ ಹಳ್ಳಿಗಳ ಜೀವನಕ್ರಮದಲ್ಲಿ ಬಡತನ, ಕೊರತೆ, ಕ್ಷಾಮಗಳ ನಡುವಿನ ಹಳ್ಳಿಗಳ ಸರಳ ಬದುಕಿನಲ್ಲಿ ವಸ್ತುಗಳ ಈ ಪ್ರಮಾಣದ ಹೆಚ್ಚಳ ಇರಲಿಲ್ಲ. ಈಗ “ಕೊಳ್ಳಿರಿ, ಕೊಳ್ಳಿರಿ, ಕೊಳ್ಳಿರಿ .. ಒಂದು ತಗೊಂಡರೆ ಎರಡು ಉಚಿತ, ನಿಮಗೆ ಲಾಭ ಖಚಿತ” ಎಂಬ ಜಾಹೀರಾತುಗಳ ಅಬ್ಬರದ ನಡುವೆ `ನಮ್ಮ ನೆಮ್ಮದಿಗೆ ಎಷ್ಟು ವಸ್ತು ಬೇಕು, ಎಷ್ಟು ಸಾಕು?’ ಎಂಬ ಔಚಿತ್ಯ ಪ್ರಜ್ಞೆಯೇ ಮರೆತು ಹೋದಂತಹ ದಿನಮಾನಗಳು ನಮ್ಮವು. ಇಷ್ಟು ಸಾಲದು ಎಂಬಂತೆ ಝೆಪ್ಟೋ, ಬ್ಲಿಂಕಿಟ್, ಡಂಝೋ ಮುಂತಾದ, `ಹತ್ತು ನಿಮಿಷಕ್ಕೆ ನೀವು ಕೇಳಿದ ವಸ್ತುವನ್ನು ಮನೆಗೇ ತಂದುಕೊಡುವ’ ಝಟ್‌ಪಟ್ ವ್ಯವಸ್ಥೆಗಳು ಕೂಡ ಲಭ್ಯ ಇರುವಾಗ ಮನೆಯಲ್ಲಿ ಸಾಮಾನು ತುಂಬಿಕೊಳ್ಳುವುದರಲ್ಲಿ ಆಶ್ಚರ್ಯವೇನಿಲ್ಲ, ಅಲ್ಲವೆ?
ನಮಗೆ ವಯಸ್ಸಾದ ಕಾಲದಲ್ಲಿ ಹುಡುಕುವ ಶಕ್ತಿ ಕಡಿಮೆ ಆಗುತ್ತದೆ. 20-30 ವಯಸ್ಸಿನಲ್ಲಿ ವಸ್ತುಗಳನ್ನು ಕಳೆದುಕೊಂಡಾಗ ಹುಡುಕಾಡುವುದು ಅಷ್ಟೇನೂ ತ್ರಾಸು ಕೊಡಲಿಕ್ಕಿಲ್ಲ. ಆದರೆ 50-60ರ ವಯಸ್ಸಿನಲ್ಲಿ ಹೀಗೆ ಹುಡುಕುವುದು ಖಂಡಿತ ಸುಲಭವಲ್ಲ. ಒಂದಂತೂ ನಿಜ. ವಯಸ್ಸಾಗುತ್ತಾ ಹೋದಂತೆ ಬಹುಶಃ ನಮ್ಮಲ್ಲಿ ಉಂಟಾಗುವ ಬಹಳ ಮಹತ್ವದ ಅರಿವು ಅಂದರೆ ಜೀವನ ಅಷ್ಟೊಂದು ದೀರ್ಘಕಾಲದ್ದೇನಲ್ಲ, ನಾವು ನೋಡುನೋಡುತ್ತಿದ್ದಂತೆ ದಿನ, ವಾರ, ತಿಂಗಳು, ವರ್ಷಗಳೇನು ದಶಕಗಳೇ ಕಳೆದುಹೋಗುತ್ತವೆ! ಸಮಯ ಅಮೂಲ್ಯ ಅನ್ನುವುದು ನಮಗೆ ಅರ್ಥವಾಗುವುದು ಅದನ್ನು ಕಳೆದುಕೊಂಡು ಪರದಾಡುವಾಗಲೇ! ಹೀಗಾಗಿ ನಿರ್ಲಕ್ಷ್ಯದಿಂದ ಎಲ್ಲೋ ಇಟ್ಟ ವಸ್ತುಗಳನ್ನು ಹುಡುಕುವುದರಲ್ಲಿ ನಮ್ಮ ಸಮಯವನ್ನು ಕಳೆಯುವುದು ಖಂಡಿತವಾಗಿಯೂ ಜಾಣತನವಲ್ಲ.

`ಸುವ್ಯವಸ್ಥೆಯೇ ಸ್ವರ್ಗದ ಮೊದಲ ನಿಯಮ’ (ಆರ್ಡರ್ ಈಸ್ ದ ಫಸ್ಟ್ ರೂಲ್ ಆಫ್ ಹೆವನ್) ಎಂಬ ಮಾತಿದೆ. ಆದರೆ ವಸ್ತುಗಳನ್ನು ನಾವು ಸರಿಯಾಗಿ ನಿರ್ವಹಿಸದಿದ್ದರೆ ಅವು ನಮ್ಮ ಜೀವನವನ್ನು ಅವ್ಯವಸ್ಥೆಯ ಆಗರವಾಗಿಸಿಬಿಡುತ್ತವೆ ಮತ್ತು ನಮ್ಮನ್ನು ಆಳಲಾರಂಭಿಸುತ್ತವೆ. ವಸ್ತುಗಳ ಸರ್ವಾಧಿಕಾರದಿಂದ ಮುಕ್ತಿ ಪಡೆಯಲು ಪ್ರಯತ್ನಿಸೋಣ ನಾವೆಲ್ಲ.

ಡಾ.ಎಲ್.ಜಿ.ಮೀರಾ ಮೂಲತಃ ಕೊಡಗಿನವರು. ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ತಮಿಳ್ ಕಾವ್ಯ ಮೀಮಾಂಸೆ, ಮಾನುಷಿಯ ಮಾತು (1996), ಬಹುಮುಖ (1998), ಸ್ತ್ರೀ ಸಂವೇದನೆಯಲ್ಲಿ ಕನ್ನಡ ಕಥನ ಸಂಶೋಧನೆ (ಮಹಾಪ್ರಬಂಧ) (2004), ಕನ್ನಡ ಮಹಿಳಾ ಸಾಹಿತ್ಯ ಚರಿತ್ರೆ (ಸಂಪಾದನೆ) (2006), ಆಕಾಶಮಲ್ಲಿಗೆಯ ಘಮ ಎಂಬ ಸಣ್ಣಕತೆಯನ್ನು, ರಂಗಶಾಲೆ ಎಂಬ ಮಕ್ಕಳ ನಾಟಕವನ್ನು, ಕೆಂಪು ಬಲೂನು ಇತರೆ ಶಿಶುಗೀತೆಗಳು, ಕಲೇಸಂ ಪ್ರಕಟಣೆಯ ನಮ್ಮ ಬದುಕು ನಮ್ಮ ಬರಹದಲ್ಲಿ ಆತ್ಮಕತೆ ರಚಿಸಿದ್ದಾರೆ.

ಉಪಯುಕ್ತ ಬರಹ
ತುಂಬಾ ಅಂದವಾದ ಮತ್ತು ಮಾಹಿತಿಯುಕ್ತವಾದ ಬರಹ.