ಎಲ್ಲವ ಬಲ್ಲೆ
ನಾನೆನ್ನಲ್ಲಾರೆ
ತಿಳಿಯದ ತಿರುಗಣಿ
ಈ ಲೋಕ

ತಿರುವಿನ ಆಚೆ
ಸಾವಿದೆ ಎಂದು
ತಿರುಗುವ ಮುನ್ನ
ತಿಳಿಯುವುದಿಲ್ಲ

ಮರೆವಿನ ಆಚೆ
ನೋವಿದೆ ಎಂದು
ಮರೆಯುವ ಮುನ್ನ
ತಿಳಿಯುವುದಿಲ್ಲ

ನದಿಯ ನಡುವಲಿ
ಸುಳಿಯಿದೆ ಎಂದು
ಇಳಿಯುವ ಮುನ್ನ
ತಿಳಿಯುವುದಿಲ್ಲ

ಮುಂದಾಗುವುದನು
ಇಂದೇ ಅರಿಯುವ
ತ್ರಿಕಾಲ ಜ್ಞಾನವು
ನನಗೊಲಿದಿಲ್ಲ

ಒಂದೇ ಬಣ್ಣದ
ಬಟ್ಟೆಯ ತೊಟ್ಟ
ಅವಳಿ ಮಕ್ಕಳು
ಸರಿ ತಪ್ಪುಗಳು

ಈ ದಿನ ಈ ಕ್ಷಣ
ನನ್ನಯ ಎದುರಿದೆ
ಆಯ್ಕೆಯನೊಂದು
ಮಾಡಲೇಬೇಕಿದೆ

ಸರಿಯೋ ತಪ್ಪೋ
ತಿಳಿಯದು ಮನಕೆ
ದೂರದ ದಾರಿ
ನಡೆವುದೆ ಬದುಕೇ

ಎಚ್. ವಿ. ಶ್ರೀನಿಧಿ ದಾವಣಗೆರೆಯವರು
ಕಾರ್ಯನಿಮಿತ್ತ ಸದ್ಯದ ವಾಸ್ತವ್ಯ ಬೆಂಗಳೂರು.
ತತ್ವಶಾಸ್ತ್ರ, ವಿಜ್ಞಾನ, ಸಾಹಿತ್ಯ ಆಸಕ್ತಿಯ ವಿಷಯಗಳು.