ಬೆಳಗಿಂದ ಸಂಜೆವರೆಗೂ ನನ್ನ ಸಂಗಡವೆ ಇತ್ತು ಅದು. ಮಧ್ಯಾಹ್ನ ನಿದ್ದೆ ಕೂಡ ಮಾಡದೇ ನನ್ನ ಜತೆಗೆ ಇದ್ದುಬಿಡ್ತು. ಮನೆಗೆ ಹೊರಡ್ತಾ ಮಗೂನ ಮುದ್ದಿಸಿದೆ. “ಮಗು ತುಂಬಾ ಮುದ್ದು, ನನ್ನನ್ನ ತುಂಬಾ ಹಚ್ಚಿಕೊಂಡಿದೆ “ಅಂದೆ. ಬೆಳಿಗ್ಗೆಯಿಂದ ನನ್ನ ಸಂಗಡವೇ ಇತ್ತು. ಪುಟ್ಟ ಕೂಸು, “ಅಂಕಲ್‌ನ ಒಬ್ಬರನ್ನೇ ಬಿಡಬೇಡ, ಸಿಕ್ಕಿದ್ದೆಲ್ಲಾ ಜೇಬಲ್ಲಿ ಹಾಕ್ಕೊಳತ್ತೆ ಅದು, ಅದರ ಹಿಂದೇನೆ ಇರು ಅಂತ ಅಜ್ಜಿ ಹೇಳಿತ್ತು…” ಅಂತ ಸತ್ಯ ಬಯಲು ಮಾಡಿತು.
ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿಯ ಐವತ್ತೊಂದನೆಯ ಕಂತು

ಹಿಂದಿನ ಸಂಚಿಕೆಯನ್ನು ಹೀಗೆ ಮುಗಿಸಿದ್ದೆ..
ನೀನು ನಿಂತಿದ್ದೀಯಲ್ಲ.. ಅದೇ ನಮ್ಮ ಸೈಟು…. ಅಂದೆ. ಮಗ ಆಗಲೇ ಅಲ್ಲಿ ಕುಣಿದು ಕುಪ್ಪಳಿಸುತ್ತಾ ಇದ್ದ. ಕೆರೆಯಲ್ಲಿನ ಕೊಕ್ಕರೆ ಕಂಡು ಎಕ್ಸೈಟ್‌ ಆಗಿದ್ದ.

ಎಷ್ಟು ಚೆನ್ನಾಗಿದೆ ಅಲ್ವಾ ಸೀನರಿ.. ಅಂದೆ.

ನನ್ನಾಕೆ ತಲೆ ಆಡಿಸಿದಳು. ಕೆರೆ ಸುತ್ತ ಇದ್ದ ಕೊಕ್ಕರೆ ಅಲ್ಲಿನ ನೀರು ಅದರ ಪಕ್ಕದ ತಂಪಾದ ಜಾಗ, ನಾವು ನಿಂತಿದ್ದ ಸಮತಟ್ಟಿನ ನೆಲ…… ಸೀನರಿ ಹೃದಯ ತುಂಬಿತ್ತು… ಪಕ್ಕದಲ್ಲಿ ವಿಧಿ ನಿಂತು ಮಗನೇ ಕೋಟಿ ಕೊಟ್ಟರೂ ಬರೋಲ್ಲ ಇಲ್ಲಿಗೆ ಅಂದಿದ್ದೆ ಅಲ್ವಾ, ನಿನಗೆ ಹೇಗೆ ಬುಗುರಿ ತರಹ ಆಡಿಸ್ತಿನಿ ನೋಡ್ಕೋ.. ಅಂತ ಗಹ ಗಹ ಗಹ ಗಹಿಸಿತಾ….! ನಾಲ್ಕು ದಶಕದಲ್ಲಿ ನೆನಪು ಕೊಂಚ ಮಾಡಿರಬಹುದು. ಆದರೂ ವಿಧಿ ಹೆಚ್ಚು ಕಡಿಮೆ ಇದೇ ವಾಕ್ಯ ಹೇಳಿ ಹತ್ತಾರು ಸ್ಟೆಪ್ಸ್ ಹಾಕಿ ಗರ ಗರ ತಿರುಗಿ ಬಿಕ್ಕಿ ಬಿಕ್ಕಿ ನಕ್ಕಿರಬೇಕು.
ಈಗ ಮುಂದಕ್ಕೆ..

(ಹಾಸ್ಯೋತ್ಸವ ಸಮಾರಂಭದಲ್ಲಿ ಡಾ.ಎಚ್ಚೆನ್ ಅವರಿಂದ ಸ್ಮರಣ ಫಲಿಕೆ ಸ್ವೀಕರಿಸುತ್ತಿರುವುದು.)

ಸೈಟ್ ನೋಡಿ ಆಯ್ತಾ? ಎಷ್ಟು ಸುಂದರವಾಗಿದೆ ಈ ಜಾಗ ಅನಿಸಿಬಿಡ್ತಾ? ಇಲ್ಲಿ ಮನೆ ಕಟ್ಟಿಕೊಂಡು ಬಂದುಬಿಡಬೇಕು ಅನಿಸ್ತಾ…? ನನ್ನ ಮನಸಿನಲ್ಲಿ ಓಡುತ್ತಿರುವ ಯೋಚನೆ ಹೆಂಡತಿಗೆ ಗೊತ್ತಾಯ್ತಾ? ಬೇಗ ಇಲ್ಲೊಂದು ಮನೆ ಕಟ್ಟಿಕೊಂಡು ಬಂದು ಬಿಡೋಣವಾ.. ಅಂತ ಕೇಳಿದಳು! ನನ್ನ ಟೆಲಿಪತಿ ವರ್ಕ್ ಆಯ್ತಾ? ನನಗೆ ಆಶ್ಚರ್ಯ ಆಗಿ ಹೋಯ್ತು. ಟೆಲಿಪತಿ ಅಂದರೆ ಗೊತ್ತಾ ನಿಮಗೆ? ಒಬ್ಬರ ಮನಸಿನ ಆಲೋಚನೆಗಳನ್ನು ಮತ್ತೊಬ್ಬರಿಗೆ ವರ್ಗಾಯಿಸೋದು ಟೆಲಿಪತಿಯ ಒಂದು ವಿಧಾನ ಅಂತೆ. ನಮ್ಮ ಐದೂ ಸೆನ್ಸಸ್‌ನ (ಅಂದರೆ ಪಂಚೇಂದ್ರಿಯಗಳು)ಉಪಯೋಗಿಸದೆ ಅದರ ನೆರವೂ ಸಹ ಪಡೆಯದೆ ನಮ್ಮ ಥಾಟ್ಸ್ ಅನ್ನು ಬೇರೆಯವರಿಗೆ ರವಾನಿಸುವ ಅತೀಂದ್ರಿಯ ಶಕ್ತಿಗೆ ಟೆಲಿಪತಿ ಎಂದು ಹೆಸರು. ಅತೀಂದ್ರಿಯ ಶಕ್ತಿಗಳನ್ನು ನಂಬದಿರುವವನು ನಾನು. ಎಚ್.ನರಸಿಂಹಯ್ಯ ಅವರ ಪಟ್ಟ ಶಿಷ್ಯ! ಅವರ ಪಕ್ಕ ಕೂತು ತೆಗೆಸಿಕೊಂಡಿರೋ ಫೋಟೋ ನನ್ನ ಹತ್ತಿರ ಇದೆ. ಸ್ಟೇಜ್ ಮೇಲೆ ಅವರ ಕೈಲಿಂದ ಮೆಮೆಂಟೋ ತಗೊಳ್ತಾ ಇರೋ ಫೋಟೋ, ನಾನು ಹಾಕಿರೋದು, ನೀವು ಫೇಸ್ ಬುಕ್‌ನಲ್ಲಿ ಅದೆಷ್ಟೋ ಸಾವಿರ ಸಲ ನೋಡೇ ಇರ್ತೀರಿ. ಅದರಿಂದ ನಾನು ಟೆಲಿಪತಿ ನಂಬೋಲ್ಲ ಅಂತ ನಿಮಗೆ ಗೊತ್ತಿರಬೇಕು. ಆದರೆ ನನ್ನ ನಂಬಿಕೆ ಫುಲ್ ಉಲ್ಟಾ ಹೊಡೆದು ಈಗ ನನ್ನ ಥಾಟ್ಸ್ ನನ್ನವಳಿಗೆ ಪಂಚೇಂದ್ರಿಯಗಳ ನೆರವೇ ಇಲ್ಲದೇ ಟ್ರಾನ್ಸ್ಫರ್ ಆಗಿಬಿಟ್ಟಿದೆ! ಅತೀಂದ್ರಿಯ ಶಕ್ತಿಗಳನ್ನೂ ನಂಬಲೋ ಬೇಡವೋ.. ಗೊಂದಲ ಅದೇ ಸಮಯದಲ್ಲಿ ಮನಸಿನಲಿ ಹುಟ್ಟಿತು. ಸುಮಾರು ಸಲ ಅತೀಂದ್ರಿಯ ಶಕ್ತಿ ಬಗ್ಗೆ ನನ್ನ ನಂಬಿಕೆ ಅಂದರೆ ಅದು ಬೋಗಸ್ ಎನ್ನುವುದನ್ನು ನೂರಕ್ಕೆ ಇನ್ನೂರರಷ್ಟು ಸುಳ್ಳು ಮಾಡಿದೆ.

ಒಂದೆರೆಡು ಉದಾಹರಣೆ ಎಂದರೆ ಚಿಕ್ಕವನಿದ್ದಾಗ ಅಡುಗೆಮನೆ ಅಟ್ಟದ ಮೇಲಿನ ಡಬ್ಬದಲ್ಲಿ ಇರುತ್ತಿದ್ದ ರವೆ ಉಂಡೆ ಕದ್ದು ತಿನ್ನುತ್ತಿದುದು. ಒಂದೋ ಎರಡೋ ರವೆ ಉಂಡೆ ಕಡಿಮೆ ಆದರೆ ಅದು ಸಹಜವಾಗೆ ಮರೆಯುವ ಸಂಗತಿ..! ಇಡೀ ಡಬ್ಬವೇ ಖಾಲಿ ಆದರೆ ಅದು ಪೂರ್ತಿ ಸಂಶಯಕ್ಕೆ ಕಾರಣ ತಾನೇ? ಕದ್ದು ತಿಂದವನು ನಾನು ಎಂದು ಗೊತ್ತಾಗದಿರಲಿ ಎಂದು ಮನಸಿನಲ್ಲಿ ತೀರ್ಮಾನಿಸುತ್ತಿದ್ದೆ.(ಆಗ ನನಗೆ ಟೆಲಿಪತಿ ಎನ್ನುವ ಪದ ಇದೆ ಎಂದೇ ಗೊತ್ತಿರಲಿಲ್ಲ) ಇದು ಒಂದು ರೀತಿ ಟೆಲಿಪತಿ ಸಂದೇಶ ಎನ್ನುವುದು ಈಚೆಗೆ ಗೊತ್ತಾಯಿತು, ಟೆಲಿಪತಿ ಅನ್ನುವ ಪದ ಕೇಳಿದ ನಂತರ. ರವೆ ಉಂಡೆ ಡಬ್ಬ ಪೂರ್ತಿ ಖಾಲಿ ಆಗಿರೋದು, ಅದನ್ನು ನಾನೇ ಮುಕ್ಕಿರೋದು ಅಮ್ಮನಿಗೆ ಸುಲಭವಾಗಿ ಗೊತ್ತಾಗಿ ಬಿಡ್ತಾ ಇತ್ತು. ನಾನು ಮನೆಯಲ್ಲಿ ಯಾರಿಗೂ ಇದು ಗೊತ್ತಾಗದಿರಲಿ ಅಂತ ದೇವರನ್ನು ಬೇಡಿಕೊಳ್ಳುತ್ತಿದ್ದೆ. ಅದೇ ರೀತಿ ಹೆಸರು ಉಂಡೆ, ತೆಂಗೋಲು, ಕೋಡುಬಳೆ, ನಿಪ್ಪಟ್ಟು, ಕೊಬ್ರಿ ಮಿಠಾಯಿ….. ಇನ್ನೂ ಏನೇನೋ ಖಾಲಿ ಆಗಿ, ಅದು ನಾನೇ ಖಾಲಿ ಮಾಡಿರೋದು ಅಂತ ಅಮ್ಮನಿಗೆ ಅವಳ ಮೂಲಕ ಮನೆಯವರಿಗೆ, ನಂತರ ನಮ್ಮ ವಠಾರಕ್ಕೆ, ಅದರ ನಂತರ ನಮ್ಮ ವಂಶಾವಳಿಗೆ ಗೊತ್ತಾಗ್ತಾ ಇತ್ತು. ಮದುವೆ ನಂತರ ಈ ಸುದ್ದಿ ಅವಳ ಅಂದರೆ ನನ್ನ ಹೆಂಡತಿ ಮನೆ ಅವರಿಗೆ, ಅವರ ನೆಂಟರು ಇಷ್ಟರಿಗೆ ಗೊತ್ತಾಯಿತು. ಇದರ ಎಫೆಕ್ಟ್ ಅಂದರೆ ಹೆಂಡತಿ ನೆಂಟರ ಮನೆಗೆ ಹೋದರೆ ಅವರ ಮನೆಯವರು ನನಗೆ ಅಂಟಿಕೊಂಡೇ ಇರುತ್ತಾ ಇದ್ದದ್ದು!

ಒಂದು ಸಲ ನನ್ನಾಕೆ ದೊಡ್ಡಜ್ಜಿ ಮನೆಗೆ ಹೋಗಿದ್ದೆ. ಅವರ ಮನೆಯ ಐದು ವರ್ಷದ ಪುಟ್ಟ ಹೆಣ್ಣು ಕೂಸು ನನಗೆ ಬಲವಾಗಿ ಆಂಟಿಕೊಂಡಿತು. ಲಂಗ ಜಂಪರು ತೊಟ್ಟು ಪುಟ ಪುಟ ಮಗು ಓಡಾಡ್ತಾ ಇದ್ದರೆ ಮುದ್ದು ಉಕ್ಕಿ ಬರೋದು. ಎಲ್ಲಿ ಹೋದರೆ ಅಲ್ಲಿ ಅದೂ ನನ್ನ ಜತೆ. ಅಂಕಲ್ ಅಲ್ಲಿ ಬೇಡ ಇಲ್ಲಿ ಬನ್ನಿ ಅಂತ ಬೇರೆ ಕಡೆ ಕರೆದು ಒಯ್ಯುತ್ತಿತ್ತು. ಬಾತ್ ರೂಮ್‌ಗು ಸಹ ನನ್ನ ಜತೆ ಬಂದು ನಾನು ಹೊರಗೆ ಬಂದ ಮೇಲೆ ನನ್ನ ಹಿಂದೆ ಬರ್ತಾ ಇತ್ತು. ಬೆಳಗಿಂದ ಸಂಜೆವರೆಗೂ ನನ್ನ ಸಂಗಡವೆ ಇತ್ತು ಅದು. ಮಧ್ಯಾಹ್ನ ನಿದ್ದೆ ಕೂಡ ಮಾಡದೇ ನನ್ನ ಜತೆಗೆ ಇದ್ದುಬಿಡ್ತು. ಮನೆಗೆ ಹೊರಡ್ತಾ ಮಗೂನ ಮುದ್ದಿಸಿದೆ.

“ಮಗು ತುಂಬಾ ಮುದ್ದು, ನನ್ನನ್ನ ತುಂಬಾ ಹಚ್ಚಿಕೊಂಡಿದೆ “ಅಂದೆ.

ಬೆಳಿಗ್ಗೆಯಿಂದ ನನ್ನ ಸಂಗಡವೇ ಇತ್ತು.

ಪುಟ್ಟ ಕೂಸು, “ಅಂಕಲ್‌ನ ಒಬ್ಬರನ್ನೇ ಬಿಡಬೇಡ, ಸಿಕ್ಕಿದ್ದೆಲ್ಲಾ ಜೇಬಲ್ಲಿ ಹಾಕ್ಕೊಳತ್ತೆ ಅದು, ಅದರ ಹಿಂದೇನೆ ಇರು ಅಂತ ಅಜ್ಜಿ ಹೇಳಿತ್ತು…” ಅಂತ ಸತ್ಯ ಬಯಲು ಮಾಡಿತು. ಇದು ಯಾಕೆ ಹೇಳಿದೆ ಅಂದರೆ ಅಂದರೆ ಅಂದರೆ ಥಿಸ್ ಇಸ್ ಸಖತ್ ಫೇಲ್ಯೂರ್ ಆಫ್ ಟೆಲಿಪತಿ! ಅಂತ ನಿಮಗೆ ಮನದಟ್ಟು ಮಾಡಲು!

ಮದುವೆ ಆದ ನಂತರವೂ ಹಲವು ಸಾವಿರ ಬಾರಿ ಈ ಟೆಲಿಪತಿ ನನಗೆ ಕೈ ಕೊಟ್ಟಿದೆ. ಮದುವೆ ಆದ ಹೊಸತರಲ್ಲಿ ಹಳೇ ಗೆಳೆಯರ ಸಂಗಡ ಪಾರ್ಟಿ ಮಾಡಿಕೊಂಡು ಬರ್ತಾ ಇದ್ದೆನಾ, ಹೆಂಡತಿಗೆ ಇದು ಪಾರ್ಟಿ ಮಾಡಿದ್ದು ಗೊತ್ತಾಗದೇ ಇರಲಿ ಅಂತ ದೇವರಿಗೆ ಅದರಲ್ಲೂ ಅಣ್ಣಮ್ಮ ನಿಗೆ ಒಂದು ಗಡಿಗೆ ಮೊಸರು ಹಾಕ್ತೀನಿ ಅಂತ ಹರಕೆ ಹೊರುತ್ತಿದ್ದೆ. ಅರ್ಧ ಕೇಜಿ ಬೆಳ್ಳುಳ್ಳಿ ತಿಂದು ಸಾವಿರ ಸಾವಿರ ಸಲ ಮನಸಿನಲ್ಲಿ ಗೊತ್ತಾಗದಿರಲಿ ಅಂದುಕೊಂಡು ಬಂದು ಮನೆ ಸೇರುತ್ತಿದ್ದೆನಾ? ಅರ್ಧ ಕೇಜಿ ಬೆಳ್ಳುಳ್ಳಿ ತಿಂದರೆ ಬಾಯಿ ಸುಡೋದಿಲ್ಲವೇ ಅಂತ ನೀವು ಕೇಳ್ತೀರಿ ಅಂತ ಗೊತ್ತು. ಬೆಳ್ಳುಳ್ಳಿ ಜತೆ ಎರಡು ಕೆಜಿ ಬೆಲ್ಲ ಸಹ ತಿನ್ನುತ್ತಿದ್ದೆ. ಮನೆ ಸೇರಿದೇನಾ..

ಇಲ್ಲೂ ಟೆಲಿಪತಿ ಸಖತ್ ಫೈಲ್ಯೂರ್ ಆಗೋದು. ಮನೆ ಸೇರಿದ ಕೂಡಲೇ ಕೋರ್ಟ್ ಮಾರ್ಷಲ್ ಶುರು ಆಗ್ತಾ ಇತ್ತು… ಎಲ್ಲಿಗೆ ಹೋಗಿದ್ದೆ, ಯಾಕೆ ಇಷ್ಟು ಹೊತ್ತು, ಅದೇನು ಅಷ್ಟೊಂದು ಗಟಾರದ ಗಬ್ಬು ವಾಸನೆ? ಹೊಗೆ ವಾಸನೆ ಬೇರೆ ಹಾಗೆ ಬರ್ತಿದೆ…? ಎಷ್ಟು ಪಿಪಾಯಿ ಖಾಲಿ ಮಾಡಿದೆ? ಎಷ್ಟು ಟನ್ ಕ್ವಿಂಟಾಲ್ ನಿಕೋಟಿನ್ ಸುಟ್ಟೆ… ಹೀಗೆ ಕೇಳಿ ಕೇಳಿ ಕೇಳಿ ಸತ್ಯ ಹೊರಡಿಸೋಳು…. ಟೆಲಿಪತಿ ಹೀಗೆ ಸಖತ್ ಉಲ್ಟಾ ಹೊಡೀತಿತ್ತು ತಾನೇ. ಅದರಿಂದ ನನಗೆ ಟೆಲಿಪತಿಮೇಲೆ ವಿಶ್ವಾಸ ಒಂದು ಚೂರೂ ಲವಶೇಷವೂ ಇರಲಿಲ್ಲ. ಯಾರಾದರೂ ಟೆಲಿಪತಿ ಅಥವಾ ಅಂತಹ ಜ್ಞಾನದ ಬಗ್ಗೆ ವಿಶ್ವಾಸದಿಂದ ಮಾತು ಆಡಿದರೆ ನನಗೆ ಎರಡು ಊಹೂಂ ಐದು ಕೇಜಿ ಮೆಣಸಿನಕಾಯಿ ತಿಂದಷ್ಟು ಕೋಪ ಉಕ್ತದೆ.. ಹೆಂಡತಿ ಮಾಡುತ್ತಿದ್ದ ಕೋರ್ಟ್ ಮಾರ್ಷಲ್ ನೆನಪಿಗೆ ಬರುತ್ತೆ ಮತ್ತು ಸೂಸೈಡ್ ಮೇನಿಯ ಶುರು ಆಗುತ್ತೆ. ಅಂತಹ ಟೆಲಿಪತಿ ತರಹದ ಬೇರೆ ಜ್ಞಾನ ಯಾವುದು ಅಂತಿರಾ? ಅದೂ ಸಾಕಷ್ಟು ಇವೆ. ಅದರ ಬಗ್ಗೆ ಯಾವಾಗಲಾದರೂ ಹೇಳುತ್ತೇನೆ, ಜ್ಞಾಪಿಸಿ.

ತಲೆ ಕೊಡವಿ ಗೊಂದಲ ಓಡಿಸಿದೆ. ಅತೀಂದ್ರಿಯ ಶಕ್ತಿ ನಂಬುವುದು ಬಿಡುವುದು ಎನ್ನುವ ಗಹನವಾದ ಜಿಜ್ಞಾಸೆಯನ್ನು ಮುಂದೆ ಯಾವತ್ತಾದರೂ ತಲೆ ಕೆಟ್ಟಿರುವಾಗ ಯೋಚಿಸೋದು ಅಂತ ತಲೆಯಿಂದ ನೂರು ಕಿಮೀ ದೂರ ಓಡಿಸಿದೆ.

ನನ್ನಿಂದ ಪ್ರತ್ಯುತ್ತರ ನಿರೀಕ್ಷಿಸಿದ್ದ ನನ್ನಾಕೆ ಉತ್ತರ ಬರಲಿಲ್ಲ ಅಂತ ಮತ್ತೆ ಕೇಳಿದಳು.

“ಕೇಳಿಸ್ತಾ… ಬೇಗ ಇಲ್ಲೊಂದು ಮನೆ ಕಟ್ಟಿಕೊಂಡು ಬಂದು ಬಿಡೋಣವಾ.. ಅಂತ ಕೇಳಿದೆ ನಾನು…” ಅಂದಳು.

“ನಾನೂ ನಿನ್ನನ್ನ ಅದೇ ಕೇಳಬೇಕೂಂತ ಇದ್ದೆ…” ಅಂದೆ. ಈ ತರಹ ಹೇಳಿದರೆ ಖುಷಿ ಆಗುತ್ತೆ ಕೇಳಿಸಿಕೊಂಡವರಿಗೆ ಅಂತ ಎಲ್ಲೋ ಓದಿದ್ದೆ.

ಕೆಲವಂ ಬಲ್ಲವರಿಂದ ಕಲ್ತು… ಈ ಪ್ರಿನ್ಸಿಪಲ್‌ನಲ್ಲಿ ನನಗೆ ಅಚಲವಾದ ನಂಬಿಕೆ. ಈ ನಂಬಿಕೆ ಹೇಗೆ ನನ್ನ ನೆರವಿಗೆ ಬಂತು ಅಂತ ಹೇಳಬೇಕು ಅಂದರೆ ನಾನು ಮನೆ ಕಟ್ಟಿದ ಕತೆ ಹೇಳಲೇಬೇಕು!

ನಿಮಗೂ ನಿಮ್ಮ ಬೆಟರ್ ಹಾಫ್‌ಗೂ ಹೊಂದಾಣಿಕೆ ಹೇಗಿದೆಯೋ ನನಗೆ ತಿಳಿಯದು. ನನಗೂ ನನ್ನಾಕೆಗೂ ಇರುವ ಹೊಂದಾಣಿಕೆ ಬಗ್ಗೆ ಹೇಳಲೇಬೇಕು.. (ನನ್ನಾಖೆಗೂ ಅಂತ ಯಾಕೆ ತಪ್ಪು ತಪ್ಪು ಬರೀತೀರಿ ಅಂತ ಕೇಳ್ತೀರಿ ತಾನೇ. ಇದು ಇಂಪ್ರೆಸ್ ಮಾಡೋಕೆ ಅಷ್ಟೇ) ಮದುವೆ ಆದಮೇಲೆ ಇಷ್ಟು ಸಂವತ್ಸರಗಳಲ್ಲಿ ಎಣಿಸಿದ ಹಾಗೆ ಒಂದೋ ಎರಡೋ ವಿಷಯದಲ್ಲಿ ನಾನೂ ನನ್ನಾಕೆಯೂ ಒಂದೇ ಅಭಿಪ್ರಾಯ ಹೊಂದಿರೋದು. ಮಿಕ್ಕ ಹಾಗೆ ಎಲ್ಲಾ ವಿಷಯಗಳಲ್ಲೂ ಅವರು ಹೇಳ್ತಾರೆ, ಕೋಲೆ ಬಸವನ ಹಾಗೆ ನಾನು ತಲೆ ಆಡಿಸೋದು. ಅಡುಗೆ ತಿಂಡಿ ಬಟ್ಟೆ ಬರೆ (ನನ್ನದು) ಇದು ಎಲ್ಲದರಲ್ಲೂ ಅವರದ್ದೇ ಫೈನಲ್ ಡಿಸ್ಇಶನ್ನು. ನಾನು ಕ್ರಾಪ್ ಹೇಗೆ ಮಾಡಿಸಬೇಕು ಅಂತ ಸಹ ಅವರು ನಿರ್ಧಾರ ತಗೋತಾರೆ. ತಲೆ ತುಂಬಾ ಕೂದಲು ಇದ್ದ ಅದೆಷ್ಟೋ ಶತಮಾನಗಳ ಹಿಂದೆ ಬೈತಲೆ ಎಡವೋ ಬಲವೋ ಎನ್ನುವ ನಿರ್ಧಾರ ಅವರದ್ದಾಗಿತ್ತು. ಶರ್ಟಿಗೆ ಎಷ್ಟು ಜೇಬು ಇರಬೇಕು ಅಂತ ಅವರು ತೀರ್ಮಾನ ತಗೋತಿದ್ದರು. ಇದು ಕೇವಲ ಕೆಲವೇ ಕೆಲವು ಸ್ಯಾಂಪಲ್ ಅಷ್ಟೇ..! ಬಹುಶಃ ಎಲ್ಲರ ಮನೆಯಲ್ಲೂ ಹೀಗೇ ನಡೆಯುತ್ತೆ ಅಂತ ಕಾಣ್ಸುತ್ತೆ, ಕಾಣ್ಸುತ್ತೆ ಏನು ಹೀಗೇ ನಡೆಯೋದು. ಯಾರೂ ಹೇಳಿಕೊಳ್ಳೋದಿಲ್ಲ ಅಷ್ಟೇ. ನಾನು ಬಾಯಿಬಡುಕ, ಹೊಟ್ಟೆಯಲ್ಲಿ ಒಂದು ಗುಟ್ಟು ಇಟ್ಟುಕೊಳ್ಳಲು ಅಸಮರ್ಥ, ಅದಕ್ಕೇ ಎಲ್ಲಾ ಸಂಸಾರದ ಗುಟ್ಟುಗಳನ್ನೂ ಬಡ ಬಡ ಅಂತ ಊರೆಲ್ಲಾ ಡಂಗೂರ ಹೊಡೀತೀನಿ (ಇದು ನನ್ನಾಕೆ ನನ್ನ ಮೇಲೆ ಹೊರಿಸುವ ಅಪವಾದ ಮತ್ತು ನಾನು ಇದನ್ನು ನಂಬೋದಿಲ್ಲ) ಮತ್ತು ನಾಲ್ಕು ಅಕ್ಷರ ಬರೆಯೋಕ್ಕೆ ಬರುತ್ತೆ ಅನ್ನುವ ತಿಮಿರಿನಲ್ಲಿ, ಕೊಬ್ಬಿನಲ್ಲಿ ಅದನ್ನು ಪೇಪರಿನಲ್ಲಿ ಬೇರೆ ಹಾಕ್ತೀನಿ… ಅಂತ ನನ್ನಾಕೆ ಪ್ರತಿಗಂಟೆ ಹೇಳುವುದುಂಟು. ಹೆಂಗಸರಿಗೆ ಇರುವಂತಹ ಅಕ್ಷರದ ಮೇಲಿನ ಸಹಜವಾದ ಮತ್ಸರ ಇದು ಅಂತ ನನ್ನ ನಂಬಿಕೆ. ಅದನ್ನೇ ಕಾವ್ಯಮಯವಾಗಿ ಸರಸ್ವತೀ ಮತ್ಸರ ಎಂದು ಹೆಸರು ಕೂಡ ಕೊಟ್ಟಿದ್ದೇನೆ. ಸುಮಾರು ಫ್ರೆಂಡ್ಸು ಈಗ ಈ ಪದವನ್ನು ಅದೇ ಸರಸ್ವತಿ ಮತ್ಸರ ಅನ್ನುವ ಪದವನ್ನು ಹೇರಳವಾಗಿ ಉಪಯೋಗಿಸುತ್ತಾರೆ. ನಾನು ಇದನ್ನು ಪೇಟೆಂಟ್ ಮಾಡಿಲ್ಲ! ಇದನ್ನು ನನ್ನ ಬರೆಯುವ ಮಿತ್ರರು ಮೆಚ್ಚಿದ್ದಾರೆ…. ಇದು ಹಾಗಿರಲಿ ಬಿಡಿ.
ಮತ್ತೆ ಮನೆ ಕಟ್ಟಿದ ಕತೆ ಕಡೆಗೆ..

ಅವತ್ತು ವಾಪಸ್ ನಮ್ಮ ಬಾಡಿಗೆ ಮನೆಗೆ ಬರುವಷ್ಟರಲ್ಲಿ ನಮ್ಮ ಸೈಟ್‌ನಲ್ಲಿ ಒಂದು ಮನೆ ಕಟ್ಟೇ ಬಿಡೋದು ಅನ್ನುವ ತೀರ್ಮಾನಕ್ಕೆ ಇಬ್ಬರೂ ಬಂದುಬಿಟ್ಟಿದ್ದೆವು! ಮನೆ ಕಟ್ಟಲು ಎಷ್ಟು ದುಡ್ಡು ಬೇಕು, ನಮ್ಮ ಹತ್ತಿರ ಅಷ್ಟು ಇದೆಯಾ, ಸಾಲ ಸೋಲ ಆದರೆ ನನಗೆಷ್ಟು ಸಾಲ ಸಿಗಬಹುದು….. ಇದು ಯಾವುದೂ ಗೊತ್ತಿರಲಿಲ್ಲ. ಹಾಗೆ ನೋಡಿದರೆ ನನಗೆ ಸಂಬಳ ಎಷ್ಟು ಬರ್ತಿದೆ ಅಂತ ಸಹ ನನಗೆ ಗೊತ್ತಿರಲಿಲ್ಲ. ಕವರ್‌ನಲ್ಲಿ ಗರಿ ಗರಿ ನೋಟು ಹಾಕಿ ಸಂಬಳದ ದಿವಸ, ಅದೇ ಒಂದನೇ ತಾರೀಖು ಕೊಡೋರು. ಅದರ ಜತೆಗೆ ಒಂದು ಚೀಟಿ ಇರೋದು. ಚೀಟಿಯಲ್ಲಿ ಯಾವ ಯಾವ ಬಾಬ್ತು ಅದೆಷ್ಟು ಬಂದಿದೆ, ಅದೆಷ್ಟು ಕಟ್ ಮಾಡಿದ್ದೀವಿ ಅನ್ನುವ ವಿವರ ಇರೋದು. ಸಂಬಳದ ಹಣ ಕವರ್‌ನಲ್ಲಿ ಇರ್ತಾ ಇತ್ತಲ್ಲ, ಅದು ಎಣಿಸಕ್ಕೆ ನನಗೆ ಖಂಡಿತಾ ಬರ್ತಾ ಇರಲಿಲ್ಲ. ಈಗಲೂ ಅಷ್ಟೇ ಎಣಿಸುವ ವಿದ್ಯೆ ಅಂದರೆ ನನಗೆ ಮೈ ನಡುಕ… ನನಗೇಕೆ ಯಾರಾದರೂ ಮೋಸ ಮಾಡ್ತಾರೆ ಅಂದುಕೊಂಡು ಸಂಬಳದ ಕವರ್ ಜೇಬಲ್ಲಿ ಇಟ್ಟುಕೊಳ್ಳುತ್ತಿದ್ದೆ. ಅಂತಹ ಪಾಪದೋನು ನಾನು. ಮನೆ ಕಟ್ಟಲು ಮುಂದುವರೆದದ್ದು ಒಂದು ದೊಡ್ಡ ರಿಸ್ಕ್. ಇದು ಆಗ ಅನಿಸಿರಲಿಲ್ಲ, ಈಗ ಅಂತಹ ರಿಸ್ಕ್ ನೆನೆಸಿಕೊಂಡರೆ ನೂರು ಯೋಜನ ದೂರ ಇರುತ್ತೇನೆ. ಎಣಿಸುವವರನ್ನು ಕಂಡರೆ ನನಗೆ ಎಂತಹ ಆಶ್ಚರ್ಯ ಎನ್ನುವುದನ್ನು ನಿಮಗೆ ಹೇಳಲೇಬೇಕು. ಬ್ಯಾಂಕ್‌ನಲ್ಲಿ ಕ್ಯಾಶ್ ಕೌಂಟರ್‌ನಲ್ಲಿ ಕೂತು ಚಕ ಚಕ ನೋಟು ಎಣಿಸುವವರನ್ನು ನೋಡಲು ಬ್ಯಾಂಕ್ ಒಳ ಹೊಕ್ಕು ಅದನ್ನೇ ನೋಡುತ್ತಾ ನಿಂತಿರುತ್ತೇನೆ. ಬ್ಯಾಂಕ್ ಮ್ಯಾನೇಜರು ಬಂದು ಪಕ್ಕ ನಿಂತು ಅದೆಷ್ಟೋ ಸಲ ಯಾಕೆ ಸಾರ್ ಹೀಗೆ ಇಲ್ಲಿ ನಿಂತಿದ್ದೀರಾ ಅಂತ ಕೇಳಿದ್ದಾರೆ. ನನ್ನ “ನೋಟು ಎಣಿಸುವವರನ್ನು ನೋಡಲು ತುಂಬಾ ಖುಷಿ “ಎನ್ನುವ ಮಾತು ಕೇಳಿ ಕುರ್ಚಿ ಹಾಕಿ ಕೂಡಿಸಿ ನಿಧಾನವಾಗಿ ನೋಡಿ ಅಂತ ಕೈ ಕುಲುಕಿ ಹೋಗಿರುವುದುಂಟು. ಒಮ್ಮೆ ಹೀಗೆ ಅದೇ ಬ್ಯಾಂಕ್‌ಗೆ ಹೋಗಿದ್ದಾಗ ಒಂತರಾ ಸೀ ಬೈ ಟೂ ರಿ ಅದು ಯಾರಿಗೂ ಉಪದ್ರ ಕೊಡುಲ್ಲ ಅಂತ ಯಾರಿಗೋ ಹೇಳುತ್ತಾ ಇದ್ದದ್ದು ಕೇಳಿಸಿಕೊಂಡಿದ್ದೆ. ಇದು ಬೇಡ ಬಿಡಿ….

ಮನೆ ಕಟ್ಟೋದು ಅಂತ ಯೋಚಿಸಿದೆವಾ? ಮಾರನೇ ದಿವಸವೇ ನನ್ನ ಗೆಳೆಯ ಸತ್ಯ ನಾರಾಯಣನನ್ನು ಕಂಡೆ. ಇಷ್ಟುದ್ದ ಹೆಸರು ಬರೆಯೋದು ಕಷ್ಟ ಮುಂದೆ ಇವರು ಸತ್ಯಣ್ಣ ಆಗಿಬಿಡುತ್ತಾರೆ. ಇವ ನಾನು ಸೈಟ್ ರಿಜಿಸ್ಟ್ರೇಷನ್ ಮಾಡಿಸಬೇಕಾದರೆ ನೆರವಾಗಿದ್ದ ಮತ್ತು ನಮ್ಮ ಏರಿಯಾದಲ್ಲೇ ನೆಲೆಸಿದ್ದ. ಸಮಯಕ್ಕೆ ಸಹಾಯ ಮಾಡುತ್ತಿದ್ದ.

“ಸಾರ್ ಮನೆ ಕಟ್ಟಬೇಕು ಅಂತ ಯೋಜನೆ ಇದೆ..” ಅಂದೆ.
‘ಮೊದಲು ಪ್ಲಾನ್ ರೆಡಿ ಆಗ್ಬೇಕು, ನಿನಗೆ ಎಂತ ಮನೆ ಬೇಕು ಅಂತ ತೀರ್ಮಾನ ಆಗಬೇಕು, ಕೈಯಲ್ಲಿ ಕಾಸು ಎಷ್ಟಿದೆ ನೋಡಬೇಕು…..” ಅಂತ ವಿವರವಾಗಿ ತಿಳಿಸಿದ.

ಪ್ಲಾನ್ ರೆಡಿ ಅಂದರೇನು ಅಂತ ಗೊತ್ತಾಗಲಿಲ್ಲ.
“ಏನು ಪ್ಲಾನ್ ರೆಡಿ ಅಂದರೆ” ಅಂತ ಕೇಳಿದೆ.

“ಹಾಲು ರೂಮು ಅಡಿಗೆಮನೆ ಇವೆಲ್ಲಾ ಎಷ್ಟುದ್ದ ಎಷ್ಟು ಅಗಲ ಇರಬೇಕು ಅಂತ ಬರೆದು ಬಿಡಿಎ ಅವರ ಹತ್ರ ಸಾಂಕ್ಷನ್ ಮಾಡಿಸಬೇಕು…” ಅಂದ!

ಅವತ್ತಿಗೆ ಇವತ್ತಿಗೂ ನನಗೆ ಅರ್ಥ ಆಗದೇ ಇರೋದು ಅಂದರೆ ನನ್ನ ಜಾಗದಲ್ಲಿ ನಾನು ಮನೆ ಕಟ್ಟೋದಕ್ಕೆ ಇವರು ಯಾರು ಸಾಂಕ್ಷನ್ ಮಾಡೋರು ಅಂತ! ಅವನು ನಿಧಾನವಾಗಿ ಕೂತು ಈ ಕಾನೂನಿನ ಹಿಂದಿರುವ ಸರ್ಕಾರದ ಕಾಳಜಿ ವಿವರಿಸಿದ. ರಸ್ತೆ, ದೀಪ, ನೀರು, ಚರಂಡಿ, ಒಳಚರಂಡಿ ಇವುಗಳಿಗೆ ಒಂದು ವ್ಯವಸ್ಥೆ ಇದೆ. ವ್ಯವಸ್ಥೆ ಮೀರಿ ನಮ್ಮ ಮನಸು ತೋಚಿದ ಹಾಗೆ ಮನೆ ಕಟ್ಟಿಕೊಂಡು ಹೋದರೆ ಮಿಕ್ಕವರಿಗೆ ತೊಂದರೆ ಆಗುತ್ತೆ, ಜಗಳ ಕದನ ಹೊಡೆದಾಟ ಇವೆಲ್ಲಕ್ಕೂ ಆಸ್ಪದ ಆಗುತ್ತೆ. ನಾಗರಿಕ ಸಮಾಜದಲ್ಲಿ ಬದುಕುತ್ತಿರುವ ನಾವು ಒಂದು ಕಟ್ಟುಪಾಡಿಗೆ ನಮ್ಮನ್ನೇ ಒಳಪಡಿಸಿದ್ದೇವೆ. ಅದರಂತೆ ನಡೆದರೆ ಸಮಾಜಕ್ಕೆ ಒಳ್ಳೆಯದು… ಇದು ಅವನು ನನಗೆ ಸುಮಾರು ಮೂರು ಗಂಟೆ ನೀಡಿದ ವಿವರದ ಜಿಸ್ಟು! ಮಾನಸಿಕವಾಗಿ ನನಗೆ ಇದಕ್ಕೆ ಸಹಮತ ಇಲ್ಲ ಅಂದರೂ ಬೇರೆ ದಾರಿ ಇಲ್ಲವಲ್ಲ?

ಪ್ಲಾನ್ ತಯಾರಿಗೆ ಅವನೇ ಜವಾಬ್ದಾರಿ ತಗೊಂಡ. ಅಷ್ಟು ಹೊತ್ತಿಗಾಗಲೇ ಬಿಡಿಎ ಪ್ಲಾನ್ ಮಾಡಿಸೋದು, ಅಲ್ಲಿ ಸಾಂಕ್ಷನ್ ಮಾಡಿಸೋದು ಮುಂತಾದ ಮನೆ ಕಟ್ಟಲು ಬೇಕಾದ ಪೂರ್ವಭಾವಿ ಕೆಲಸಗಳಲ್ಲಿ ಪರಿಣತಿ ಗಳಿಸಿರುವ ಕೆಲವರು ನನಗೆ ಗೊತ್ತಿದ್ದರೂ ಇವನಿಗೇ ಪ್ಲಾನ್ ಬರೆಸಿ, ಸಾಂಕ್ಷನ್ ಕೆಲಸ ಒಪ್ಪಿಸೋದು ಅಂತ ಡಿಸೈಡ್ ಮಾಡಿದೆನಾ. ಫೀಸ್ ಅಂತ ಒಂದು ಮೊತ್ತ ಹೇಳಿದ. ಚೌಕಾಸಿ ಮಾಡಿ ಅರ್ಧದಷ್ಟು ಕಡಿಮೆ ಮಾಡಿ ಮುಂದುವರೆ ಎಂದು ಆದೇಶ ಕೊಟ್ಟೆ..!

ಮನೆ ಕಟ್ಟೋದರ ಬಗ್ಗೆ ಯಾವುದೇ ಬೇಸಿಕ್ ಜ್ಞಾನ ಇಲ್ಲದೇ ಒಂದು ಭಂಡ ಧೈರ್ಯದಿಂದ ಮುಂದೆ ನುಗ್ಗಿದ್ದೆ. ಕಾಂಟ್ರಾಕ್ಟ್ ಮಾಡುತ್ತಿದ್ದ ನನ್ನ ತಂದೆ ಹಿಂದಿನ ವರ್ಷ ತೀರಿದ್ದರು. ನನ್ನ ಅಣ್ಣಂದಿರು ಯಾರಿಗೂ ಇದರ ಬಗ್ಗೆ ಏನೂ ತಿಳಿಯದು ಮತ್ತು ನನ್ನಷ್ಟೇ ಜ್ಞಾನಿಗಳು! ಅದರಿಂದ ನನಗೆ ನನ್ನ ಕೋಲಿಗುಗಳೇ ಗುರು, ಮಾರ್ಗದರ್ಶಕ ಆಗಬೇಕಿತ್ತು, ಈ ವಿಷಯದಲ್ಲಿ. ಇನ್ನೊಂದು ವಿಷಯ ಅಂದರೆ ನಮ್ಮ ವಂಶದಲ್ಲಿ ಅದುವರೆಗೂ ಯಾರೂ ಮನೆ ಕಟ್ಟಿರಲಿಲ್ಲ, ಹಾಗೆ ನೋಡಿದರೆ ಯಾರಿಗೂ ಸೈಟ್ ಎನ್ನುವ ಕಲ್ಪನೆಯೇ ಇರಲಿಲ್ಲ. ತಂದೆ ಕಡೆಯವರು ಊರಿನ ಅವರ ಜಮೀನಿನಲ್ಲಿ ಅವರೇ ಮಣ್ಣಿನ ಇಟ್ಟಿಗೆ ಗೋಡೆ ಏರಿಸಿ ಅದರ ಮೇಲೆ ಚಪ್ಪಡಿ ಕೂಡಿಸಿದ್ದರು. ಈ ಮನೆಯನ್ನೂ ನಾನು ನೋಡಿದ್ದು ನನ್ನ ಮನೆ ಕಟ್ಟಿ ಹತ್ತೋ ಹದಿನೈದೋ ವರ್ಷ ಆದಮೇಲೆ! ತಾತನ ಮನೆ ಕಡೆ ಸಂಪರ್ಕ ಅಂದರೆ ತಾತ ಒಬ್ಬರೇ, ಅಪ್ಪ ಒಬ್ಬರೇ ಮಗ ಅವರಿಗೆ! ಅಪ್ಪನ ಅಮ್ಮ ಇರಲಿಲ್ಲ, ತೀರಿ ಹೋಗಿದ್ದರು, ನಾನು ಹುಟ್ಟುವ ಮೊದಲೇ. ಇನ್ನು ಅಪ್ಪನ ಅಮ್ಮ, ಅಜ್ಜಿ ಕಡೆ ಅಂದರೆ ಅಜ್ಜಿ ನಾನು ಕಣ್ಣುಬಿಡುವ ಅದೆಷ್ಟೋ ವರ್ಷ ಮೊದಲೇ ತೀರಿದ್ದರು. ಅವರ ಕಡೆಯವರು ಯಾರೂ ನನಗೆ ಗೊತ್ತಿರಲಿಲ್ಲ, ಈಗಲೂ! ಪ್ರತಿಯೊಬ್ಬರಿಗೂ ತಂದೆ ಕಡೆಯಿಂದ ಮಿನಿಮಮ್ ಒಂದು ಅಜ್ಜಿ ಇರ್ತಾರೆ ಮತ್ತು ತಾಯಿ ಕಡೆಯಿಂದಲೂ ಮಿನಿಮಮ್ ಒಂದು ಅಜ್ಜಿ ಇರುತ್ತೆ ಅಂತ ನನಗೆ ತಿಳಿದಿದ್ದು ನನಗೆ ಮೂವತ್ತು ಆದಮೇಲೆ! ಕೆಲವು ಸಂಸಾರಗಳಲ್ಲಿ ಇವು ಎರಡೂ ಇರುತ್ತವೆ ಎಂದು ಕೇಳಿದ್ದೀನಿ, ತಾತ ಎರಡು ಮದುವೆ ಆಗಿದ್ದರೆ!
ಈ ಮಧ್ಯೆ ಒಂದು ವಿಷಯ ಹೇಳೋದು ಮರೆತಿದ್ದೆ.

(ಮನೆಯ ಕನಸು….. ಮೊದಲ ಯೋಜನೆ)

ನನ್ನ ಫ್ರೆಂಡ್ ಪ್ರಸನ್ನ ವಿಷಯ ಹಿಂದೆ ಹೇಳಿದ್ದೆ ನೆನಪಿದೆ ತಾನೇ? ಇಬ್ಬರೂ ಶಿವಗಂಗೆ ಬೆಟ್ಟ ಹತ್ತಿದ್ದು, ಅಲ್ಲಿ ಸಿಡಿಲು ಹೊಡೆದದ್ದು, ಅಲ್ಲಿ ಕಾವಿ ತೊಟ್ಟ ಸನ್ಯಾಸಿ ಒಬ್ಬರು ವಿಷ್ಣು ಚಕ್ರ ಹಿಂಗ್ ಹೋಯ್ತು…. ಅಂದಿದ್ದು ಇದೆಲ್ಲಾ ನಿಮಗೆ ತುಂಬಾ ಹಿಂದೆ ಹೇಳಿದ್ದ ನೆನಪು. ಪ್ರಸನ್ನ ಮತ್ತು ನನಗೆ ಒಬ್ಬ ಸ್ನೇಹಿತ ದಾಮೋದರ್ ಅಂತ. ದಾಮೋದರ್ ವಿಷಯ ಸಹ ನಿಮಗೆ ಹೇಳಿದ ನೆನಪು. ಗ್ರಹಣ ನೋಡಕ್ಕೆ ಮಾಗೋಡು ಫಾಲ್ಸ್‌ಗೆ ಹೋಗಿದ್ದು ಈ ದಾಮೋದರ, ಪ್ರಸನ್ನ, ನಾಗರಾಜ ಮತ್ತು ಇಬ್ಬರು ಮೂವರ ಜತೆ. ಅದರ ಒಂದು ಬಾಲಂಗೋಚಿ ಕತೆ ನಿಮಗೆ ಹೇಳಿದ ನೆನಪು ಇಲ್ಲ. ಫೆಬ್ರವರಿ ೧೬,೮೦ ರಲ್ಲಿ ಈ ಗ್ರಹಣ ಆಗಿದ್ದು, ಅದು ಖಗ್ರಾಸ ಗ್ರಹಣ ಹಗಲಲ್ಲಿ ಸೂರ್ಯ ಸಂಪೂರ್ಣ ಮುಚ್ಚಿ ಹೋಗಿ ಕತ್ತಲು ಆವರಿಸಿಬಿಟ್ಟ ಗ್ರಹಣ ಅದು. ಗ್ರಹಣ ಆದಾಗ ಬಾಕ್ಸ್ ಕ್ಯಾಮೆರಾದಲ್ಲಿ ಕೆಲವು ಫೋಟೋ ತೆಗೆದಿದ್ದೆ. ಈ ಫೋಟೋಗಳನ್ನು ಅಪ್ಪ ಅಮ್ಮ ಮನೆಗೆ ಬಂದ ನೆಂಟರು ಇಷ್ಟರಿಗೆ ತೋರಿಸಿ ನಾನು ಗ್ರಹಣ ನೋಡಲು ಮಾಗೋಡು ಹೋಗಿದ್ದು ಖುಷಿಯಿಂದ ವಿವರಿಸೋರು. ಗ್ರಹಣ ನೋಡಲು ಅಲ್ಲಿವರೆಗೆ ಹೋಗಿದ್ದ ಎನ್ನುವ ಖುಷಿ ಅವರಿಗೆ. ಹೀಗೇ ಒಬ್ಬರು ಮನೆಗೆ ಬಂದವರಿಗೆ ಫೋಟೋ ತೋರಿಸಿ ಗ್ರಹಣದ ವಿವರ ನೀಡಿದ್ದಾರೆ. ಫೋಟೋ ನೋಡಿದವರು ತುಂಬಾ ಆಚಾರವಂತರು ಮತ್ತು ಪೌರೋಹಿತ್ಯ ಕಸುಬಿನವರು. ಗ್ರಹಣದ ದಿವಸ ಸೂರ್ಯಕಿರಣ ಮೈಮೇಲೆ ಬೀಳದೆ ಇರಲಿ ಅಂತ ಮನೆ ಬಾಗಿಲು ಪೂರ್ತಿ ಮುಚ್ಚಿ ಬೆಳಕಿನ ಕಿರಣ ಒಳ ಬರುವ ಸಂದಿಗೊಂದಿಗಳನ್ನು ಗೋಣಿಚೀಲ ತುರುಕಿ ನಿರ್ಬಂಧಿಸುವ ಮನೋಭಾವದವರು.

ಅಯ್ಯೋ ಹೋಗಿ ಹೋಗಿ ಅಲ್ಲಿಗೆ ಹೋಗಿ ಗ್ರಹಣ ನೋಡಿದನೇ, ಅದೇನು ಗ್ರಹಚಾರ ಕಾದಿದೆಯೋ ಇವನಿಗೆ ಅಂತ ಪೇಚಾಡಿಕೊಂಡರು ಅಂತ ರಾತ್ರಿ ಸೆಕೆಂಡ್ ಶಿಫ್ಟ್ ಮುಗಿಸಿಕೊಂಡು ಮನೆ ಸೇರಿದಾಗ ಅಮ್ಮ ಹೀಗೆ ಅವರು ಹೇಳಿದ್ದ ಮಾತು ವರದಿಸಿದರು. ಅಯ್ಯೋ ಹಾಗಂತಾ… ಅಂತ ಲೇವಡಿ ಮಾಡಿ ನಕ್ಕಿದ್ದೆ. ಆಮೇಲಿನ ತಮಾಷೆ ಗೊತ್ತಾ? ಗ್ರಹಣ ನೋಡಿಕೊಂಡು ಬಂದ ಒಂದೂವರೆ ತಿಂಗಳಿಗೆ ನನ್ನ ಮದುವೆ ಆಗಿಬಿಡ್ತು ಮತ್ತು ಪುರೋಹಿತರು ಅಂದುಕೊಂಡ ಹಾಗೇ ಗ್ರಹಚಾರವೂ ಶುರು ಆಯಿತು! ಈ ಸಂಗತಿ ನಿಮಗೆ ಹೇಳಿರಲಿಲ್ಲ, ಈಗ ಹೇಳಿದ್ದೀನಿ ಮುಂದೆ ಕೇಳಬೇಡಿ!

(ಮನೆಯ ಕನಸು….. ಎರಡನೆಯ ಯೋಜನೆ)

ದಾಮೋದರ ಅಂತ ಹೇಳಿದೆ ಅಲ್ವಾ? ದಾಮೋದರ್ ಸಹ ಅಡ್ವೋಕೇಟು ಮತ್ತು ನಮ್ಮೆಲ್ಲರ ಗೆಳೆಯ. ದಾಮೋದರ್ ತಮ್ಮ ಆರ್ಕಿಟೆಕ್ಟ್. ಅವರು ಬೆಂಗಳೂರಿನಲ್ಲಿ ಲೋ ಕಾಸ್ಟ್ ಹೌಸಿಂಗ್‌ನಲ್ಲಿ ಹೆಸರು ಮಾಡುತ್ತಾ ಇದ್ದರು. ಹತ್ತಿರ ಹೋದರೆ ನನ್ನ ಬಜೆಟ್‌ನಲ್ಲಿ ದೊಡ್ಡ ಮನೆ ಮಾಡಬಹುದು ಅನಿಸಿತು. ಅವರು ಕಟ್ಟಿಸಿದ್ದ ಕೆಲವು ಮನೆಗಳ ಚಿತ್ರದೊಂದಿಗೆ ಲೋ ಕಾಸ್ಟ್ ಹೌಸಿಂಗ್ ಬಗ್ಗೆ ಲೇಖನಗಳು ಪತ್ರಿಕೆಯಲ್ಲಿ ಬಂದಿದ್ದವು. ಮಲ್ಲೇಶ್ವರ ಸರ್ಕಲ್ ಹತ್ತಿರ ಮಹಡಿ ಮೇಲೆ ಇವರ ಆಫೀಸು. ಅವರ ಆಫೀಸಿಗೆ ಹೋಗಿ ಪರಿಚಯ ಮಾಡಿಕೊಂಡೆ. ಲೋಕಾಸ್ಟ್ ಹೌಸಿಂಗ್ ಕುರಿತ ನನ್ನ ಆಸೆ ತಿಳಿಸಿದೆ. ಅದರಲ್ಲಿ ಮುಖ್ಯವಾಗಿ ನಾನು ಹೇಳಿದ್ದು ಕಡಿಮೆ ಕಾಸಿನಲ್ಲಿ ದೋ…… ಡ್ಡ ಮನೆ ಎನ್ನುವ ನನ್ನ ಅಗಾಧ ಜ್ಞಾನ. ದಾಮೋದರ್ ತಮ್ಮ ನಾನು ಹೇಳಿದ್ದು ಎಲ್ಲಾ ಕೇಳಿಸಿಕೊಂಡರು. ಮಾತಿನ ಮಧ್ಯೆ ನನಗೆ ಗೊತ್ತಿಲ್ಲದ ಹಾಗೆ ನನ್ನ ಆರ್ಥಿಕ ಪರಿಸ್ಥಿತಿ ಸಹ ತಿಳಿದುಕೊಂಡರು.

“ಈ ಲೋ ಕಾಸ್ಟ್ ಹೌಸಿಂಗ್ ಯೋಜನೆ ಈಗಿನ್ನೂ ಶುರು ಆಗ್ತಾ ಇದೆ. ಏನಾಗುತ್ತೆ ಅಂದರೆ ಈ ತರಹ ಮನೆ ಕಟ್ಟಿಕೊಂಡವರು ನೆಂಟರು ಇಷ್ಟರ ಮಾತು ಕೇಳಿಯೋ ಅಥವಾ ಅವರಿಗೇ ಸರಿ ಬರದೇ ಇದರ ಜತೆಗೆ ಮತ್ತೊಂದು ಸಾಂಪ್ರದಾಯಿಕ ರೀತಿಯಲ್ಲಿ ಮನೆ ಕಟ್ಟಿಕೊಳ್ಳುವ ಆರ್ಥಿಕ ಚೈತನ್ಯ ಹೊಂದಿರುತ್ತಾರೆ. ನಿಮಗೆ ಆ ರೀತಿ ಇಲ್ಲ. ಸಾಲ ಮಾಡಿ ಮನೆ ಕಟ್ಟಬೇಕು, ನೀವು. ಅಲ್ಲದೆ ಈ ರೀತಿಯ ಪ್ರಾಜೆಕ್ಟ್‌ಗಳು ಇನ್ನೂ ಇನ್ಫ್ಯಾಂಟ್ ಸ್ಟೇಜು (…ಶೈಶವಾವಸ್ತೆ) ಬ್ಯಾಂಕುಗಳು ಸಾಲ ಕೊಡುತ್ತವೋ ಇಲ್ಲವೋ ಗೊತ್ತಿಲ್ಲ. ನೀವು ಬೆಟರ್ ಕನ್‌ವೆನ್ಷನಲ್ ಟೈಪ್ ಮನೆ ಕಟ್ಟಿಕೊಳ್ಳೋದು ಬೆಟರ್…. ಅಂದರು. ಸರಿ ಲೋ ಕಾಸ್ಟ್ ಹೌಸಿಂಗ್‌ನಲ್ಲಿ ಮನೆ ಕಟ್ಟಿ ಅದರ ಮುಂದೆ ನಿಂತು ಫೋಟೋ ತೆಗೆಸಿಕೊಂಡು ಪೇಪರ್‌ನಲ್ಲಿ ಹಾಕಿಸಿಕೊಳ್ಳಬೇಕು ಎನ್ನುವ ನನ್ನ ಆಸೆಗೆ ಬ್ರೇಕ್ ಹಾಕಿದೆ. ಅವರ ಜತೆ ಅಷ್ಟು ಹೊತ್ತು ಮಾತಾಡಿ ಗೆಳೆತನ ಸಂಪಾದಿಸಿದ್ದೆನಲ್ಲಾ. ಒಂದು ಪ್ಲಾನ್ ಮಾಡಿಕೊಡ್ತೀನಿ ಅಂತ ಒಂದು ರಫ್ ಪ್ಲಾನ್ ತಯಾರಿಸಿಕೊಟ್ಟರು. ದುಡ್ಡು… ಇದಕ್ಕೆ ಫೀಸು ಅಂದೆ. ನಕ್ಕರು ಬೇಡ ಸಾರ್ ಅಂದರು. ಖುಷಿಯಿಂದ ಅವರ ಆಫೀಸಿನಿಂದ ಆಚೆ ಬಂದೆ.

(ಮನೆಯ ಕನಸು….. ಫೈನಲ್ ಪ್ರಾಡಕ್ಟ್ ಇದಾಗ ಬೇಕಿತ್ತಾ)

ಇದಾದ ಮೇಲೆ ಸತ್ಯಣ್ಣ ಹತ್ತಿರ ಹೋಗಿದ್ದು. ಸತ್ಯಣ್ಣನ ಬಳಿ ನಡೆದ ಚರ್ಚೆಯ ಒಂದು ತುಣುಕು ಇನ್ನೂ ತಲೆಯಲ್ಲಿ ಅಂಟಿಕೊಂಡಿದೆ. ಅದರ ವಿವರ ನಾನು ಮರೆತು ಮುಂದೆ ಓಡುವ ಮೊದಲು ನಿಮಗೆ ಹೇಳಿಬಿಡ್ತೀನಿ! ಆಗ ಪ್ಲಾನ್ ಅಂದರೆ ನೀವು ನಕಾಶೆ ತಯಾರಿಸಿ ಸಲ್ಲಿಸಬೇಕು, ಅದನ್ನು ಇಂಜಿನಿಯರ್ ಅನುಮೋದಿಸಬೇಕು. ಆಗಿನ್ನೂ ಬೆಂಗಳೂರಿನಲ್ಲಿ ಬಹುಮಹಡಿ ಮನೆ ಕಾನ್ಸೆಪ್ಟ್ ಹುಟ್ಟಿರಲಿಲ್ಲ. ಅಬ್ಬಬ್ಬಾ ಅಂದರೆ ನಾವು ನೋಡಿದ ಹಾಗೆ ನಾಲ್ಕು ಮಹಡಿ ಅಂತ ಇದ್ದರೆ ಅದೇ ದೊಡ್ಡದು. ಪ್ಲಾನ್ ಮಾಡಲು ಸತ್ಯಣ್ಣ ಜತೆ ಕೂತೆ. ಮೇಯೋ ಹಾಲ್ ಬಳಿ ದೊಡ್ಡ ಇಪ್ಪತ್ತೆರಡು ಮಹಡಿ ಕಟ್ಟಡ ಬಂದದ್ದು ಸುಮಾರು ವರ್ಷಗಳ ನಂತರ. ಅದರ ಕತೆ ಮುಂದೆ ಯಾವಾಗಲಾದರೂ ಟಿಪ್ಪಣಿಸ್ತೇನೆ.

“ಹತ್ತು ಮಹಡಿ ಪ್ಲಾನ್ ಹಾಕು” ಅಂದೆ. ಸತ್ಯಣ್ಣ ಗಾಬರಿ ಆದ. “ಕೈಲಿ ಎಷ್ಟಿದೆ ಕಾಸು?”
“ಬ್ಯಾಂಕಲ್ಲಿ ಸಾವಿರ ಚಿಲ್ರೆ ಮತ್ತು ಸಿಗೋ ಸಾಲ..” ಅಂದೆ.
“ಸಾಲ ಏನು ನಲವತ್ತು ಲಕ್ಷ ಸಿಗುತ್ತಾ ನಿನ್ನ ಸಂಬಳಕ್ಕೆ..” ಅಂದ.
“ಎಷ್ಟು ಸಿಗುತ್ತೋ ಗೊತ್ತಿಲ್ಲ” ಅಂದೆ.
“ಮತ್ತೆ ಹತ್ತು ಮಹಡಿ ಪ್ಲಾನ್ ಯಾಕೆ…”
“ಪ್ಲಾನ್ ಮಾಡಿಸಬೇಕಾದರೇನೆ ಹೆಚ್ಚು ಮಹಡಿ ಮಾಡಿಸಿ ಬಿಡೋಣ…” ಅಂದೆ.
ಸತ್ಯಣ್ಣ ತಲೆ ಚಚ್ಚಿಕೊಂಡ. “ಅಷ್ಟು ಕಾಸು ಸಾಲ ಸಿಗೋಲ್ಲ, ನಿನ್ನ ಲಾಜಿಕ್ ಯಾರೂ ಒಪ್ಪುಲ್ಲ…”
ಸತ್ಯಣ್ಣನ್ನ ಕನ್ವಿನ್ಸ್ ಮಾಡೋದು ಕಷ್ಟ ಆಯಿತು.

“ಹೋಗಲಿ ಮೂರು ಮಹಡಿ ಪ್ಲಾನ್ ಮಾಡು…” ಅಂದೆ.
ಚೌಕಾಸಿ ಆಗಿ ಎರಡು ಮಹಡಿಗೆ ಪ್ಲಾನ್ ಮಾಡಲು ಒಪ್ಪಿಸಿದೆ. ಮುಂದೆ ಇದೇ ತಲೆನೋವು ಆಗುತ್ತೆ ಅಂತ ಗೊತ್ತಿರಲಿಲ್ಲ.
ಸತ್ಯಣ್ಣ ಪೂರ್ತಿ ಗೈಡ್ ಮಾಡ್ತಾ ಇದ್ದ. ಅದರಿಂದ ಅವನು ಸ್ಟೆಪ್ ಬೈ ಸ್ಟೆಪ್ ಐಡಿಯಾ ಕೊಡ್ತಾ ಇದ್ದದ್ದು. ಒಂದೇ ಸಲ ಎಲ್ಲಾ ಹೇಳುವವನಲ್ಲ ಅವನು. ಪ್ಲಾನ್ ರೆಡಿ ಆಗಿ ಕೈಗೆ ಬಂದಾಗ ಮನೆ ಒಳಗೆ ಆಗಲೇ ಹೊಕ್ಕ ಖುಷಿ ಅನುಭವಿಸಿದೆ.
ನಿಜವಾದ “ಮನೆ ಕಟ್ಟಿ ನೋಡು…..” ಪ್ರಾಬ್ಲಂ ಈಗ ಶುರು ಆದದ್ದು. ಅದು ಹೇಗೆ ಅಂದರೆ….

ಇದು ನಲವತ್ತು ವರ್ಷದ ಹಿಂದಿನ ಕತೆ. ಈಗಿನ ಹಾಗೆ ಮನೆಗೆ ಹುಡುಕಿಕೊಂಡು ಬಂದು ಸಾಲ ಕೊಡುವ ಬ್ಯಾಂಕ್ ವ್ಯವಸ್ಥೆ ಇನ್ನೂ ಬಂದಿರಲಿಲ್ಲ. ಬಂದಿರಲಿಲ್ಲ ಏನು ಈ ರೀತಿ ಒಂದು ಸಿಸ್ಟಂ ಮುಂದೆ ಬರುತ್ತೆ ಎನ್ನುವ ಕಲ್ಪನೆ ಸಹ ಯಾರಿಗೂ ಇರಲಿಲ್ಲ! ಅಂತಹ ಕಲ್ಪನೆ ಇದ್ದಿದ್ದರೆ ಇನ್ನೂ ಇಪ್ಪತ್ತು ವರ್ಷ ಕಾದು ಸಾಲ ತೆಗೆದು ಬ್ಯಾಂಕ್‌ಗೆ ಟೋಪಿ ಹಾಕಬಹುದಿತ್ತು! ಮತ್ತೊಂದು ಅಂದರೆ ಮನೆ ಕಟ್ಟಲು ಸಾಲ ಕೊಡುತ್ತಾ ಇದ್ದದ್ದು ಮೊದಲು ಎಲ್ ಐ ಸಿ ಅವರು, ನಂತರ hdfc ಬ್ಯಾಂಕು. ಈ ಕಾಲಘಟ್ಟದಲ್ಲಿ ನಾವು ಮನೆ ಕಟ್ಟಲು ಹೊರಟಿದ್ದು.

ನನಗಿನ್ನು ಮೊದಲು ಮನೆ ಕಟ್ಟಿದವರು ನನಗೆ ಅಡ್ವೈಸರ್ಸು. ಅವರ ಪ್ರಕಾರ “ಎಲ್ ಐ ಸಿ ಹತ್ತಿರ ಸಾಲ ಅಂತ ಹೋದರೆ ಪೂರ್ತಿ ಪ್ಲಾನ್ ಪ್ರಕಾರವೇ ಕಟ್ಟಬೇಕು, ಕಿಟಕಿ ಒಂದಡಿ ಅತ್ತ ಇತ್ತ ಇದ್ದರೂ ಒಪ್ಪೊಲ್ಲ, ಅದರಿಂದ hdfc ಗೆ ಹೋಗೋದು ವಾಸಿ. ಒಂಚೂರು ಹಂಗೇ ಹಿಂಗೇ ಮಾಡಬಹುದು…”

ಸರಿ ನನಗೆ hdfc ನೇ ಸರಿ ಅನ್ನಿಸಿತಾ. ಲೋನ್ ಅಪ್ಲಿಕೇಶನ್ ತಂದು ಅದನ್ನು ಭರ್ತಿ ಮಾಡಿದೆನಾ, ಸತ್ಯಣ್ಣನ ಹೆಲ್ಪ್ ತಗೊಂಡು… ಅದಕ್ಕೆ ಬೇಕಾಗಿರೂ ಡಾಕ್ಯುಮೆಂಟು ಎಲ್ಲಾ ಸೇರಿಸಿ ಒಂದು ದೊಡ್ಡ ಒಂದೂವರೆ ಕೇಜಿ ತೂಗುವ ಫೈಲ್ ರೆಡಿ ಮಾಡಿ hdfc ಬ್ಯಾಂಕ್‌ಗೆ ಅಡಿ ಇಟ್ಟೆ… ಆಗ ಅದು ಲಾವೆಲ್ಲೆ ರೋಡು ಅಲ್ಲಿತ್ತು ಮತ್ತು ನೋಡಿದರೆ ಒಳಗೆ ಹೋಗೋದಕ್ಕೆ ಭಯ ಆಗ್ತಾ ಇತ್ತು..!

(ಮುಂದುವರೆಯುವುದು…)