ಪರದೆಯ ಹಿಂದೆ ಆಲದಮರದಿಂದ ಯಾವುದೋ ಭೂತವೋ! ಪಿಶಾಚಿಯೋ! ಪರ್… ಎನ್ನುತ್ತಾ ಜೋರಾಗಿ ಪಂಚೆಗೆ ಬಡಿಯಿತು. ಆ ಪಂಚೆ ನಮ್ಮಿಬ್ಬರ ಮುಖಕ್ಕೆ ಬಡಿದು, ಪಂಚೆಯ ಮೇಲೆ ಕುಳಿತಿದ್ದ ಪತಂಗ, ಹುಳ-ಹುಪ್ಪಟಗಳೆಲ್ಲ ಮೈಮೇಲೆ ಬಿದ್ದವು. ಅಮಾವಾಸ್ಯೆ ಮಧ್ಯರಾತ್ರಿಯ ಆ ಕಗ್ಗತ್ತಲಲ್ಲಿ ನಮ್ಮನ್ನೇ ಬೀಳಿಸುವಂತೆ ಬಂದ ಆ ಅನಿರೀಕ್ಷಿತ ಜೀವಿಯಿಂದ ಹೆದರಿ ಇನ್ನೇನು ಕಾಲಿಗೆ ಬುದ್ದಿ ಹೇಳಬೇಕು; ಅಷ್ಟರಲ್ಲಿ, ಪಂಚೆಯ ಪಕ್ಕದಲ್ಲೇ ನಮ್ಮಿಬ್ಬರ ನಡುವೆಯೇ ಹಸಿರು ಬಣ್ಣದ ಹಕ್ಕಿಯೊಂದು ಹಾರಿ ಹೋಯಿತು.
ಡಾ. ಅಶ್ವಥ ಕೆ.ಎನ್.‌ ಬರೆದ ಹಕ್ಕಿಲೋಕದ ಕತೆಗಳ ಕೃತಿ “ಜಂಗಾಲ”ದ ಒಂದು ಬರಹ ನಿಮ್ಮ ಓದಿಗೆ

ನಾನು ಚಿಟ್ಟೆಗಳ ಬಗ್ಗೆ ಬಹಳಷ್ಟು ಸಂಶೋಧನೆಗಳನ್ನು ಮಾಡಿರುವುದನ್ನು ನೋಡಿದ್ದೇನೆ. ತುಂಬ ಜನ ಇದರ ಬಗ್ಗೆ ಆಳವಾದ ಅಧ್ಯಯನ ಮಾಡಿದ್ದಾರೆ, ಮಾಡುತ್ತಿದ್ದಾರೆ. ಆದರೆ ಈ ಪತಂಗಗಳ ಬಗ್ಗೆ ಅಧ್ಯಯನ ಮಾಡುವವರನ್ನು ಎಲ್ಲೂ ನೋಡಿಲ್ಲ ಬಿಡಿ. ಇವುಗಳ ಬಗ್ಗೆ ಸಂಶೋಧನೆ ನಡೆಯುತ್ತಿರುವುದೂ ಬಲು ವಿರಳ. ಒಮ್ಮೆ ತಮಿಳುನಾಡಿನ ಕೊಯಂಬತ್ತೂರಿನಲ್ಲಿ ಪತಂಗಗಳ ಬಗ್ಗೆ ನಡೆದ ಒಂದು ಸೆಮಿನಾರಿನಲ್ಲಿ ಭಾಗವಹಿಸಿದ್ದ ನಮಗೆ, ಪತಂಗಗಳ ಜೀವನದ ಬಗ್ಗೆ ಆಸಕ್ತಿ ಮೂಡಿತು. ಆದ ಕಾರಣ, ಅಂದಿನಿಂದ ನಮ್ಮ ಸುತ್ತಮುತ್ತಲೂ ಪತಂಗಗಳ ಅಧ್ಯಯನವನ್ನು ನಮಗೆ ತಿಳಿದಷ್ಟರ ಮಟ್ಟಿಗೆ ಶುರು ಮಾಡಿದೆವು. ಆದರೆ ಇದರಿಂದ ನಮಗೆ ಹೇಳಿಕೊಳ್ಳುವಂತಹ ತೃಪ್ತಿ ಸಿಕ್ಕಿರಲಿಲ್ಲ.

ಅದೊಂದು ಮಳೆಗಾಲದ ದಿನ, ಗೆಳೆಯ ಶಂಕರನು “ಕೊಯಂಬತ್ತೂರಿನ ಕಾರ್ಯಾಗಾರದಲ್ಲಿ ಮಾಡಿದ ಹಾಗೆ ಇವತ್ತು ರಾತ್ರಿ ಪತಂಗಗಳಿಗೆ ಟ್ರ್ಯಾಪ್ ಹಾಕೋಣವೇ?” ಎಂದ. ನನ್ನಲ್ಲೂ ಅದರ ಬಗ್ಗೆ ಆಸಕ್ತಿ ಇದ್ದುದ್ದರಿಂದ ಸರಿ ಎಂದು ಸಮ್ಮತಿಸಿದೆ. ಪತಂಗಗಳ ಟ್ರಾಪ್ ನಿಮಗೆ ಗೊತ್ತಿದೆಯೋ ಇಲ್ಲವೋ ನನಗೆ ತಿಳಿಯದು. ಸ್ವಲ್ಪ ವಿವರಿಸಲು ಇಲ್ಲಿ ಪ್ರಯತ್ನಿಸುತ್ತೇನೆ. ಟ್ರ್ಯಾಪ್ ಅಂದ್ರೆ ಈ ಪತಂಗಗಳನ್ನು ಹಿಡಿಯಲು ಬಲೆಯೊಡ್ಡುವ ಒಂದು ತಂತ್ರ. ಹೇಗೆ ಎಂದರೆ ರಾತ್ರಿಯ ವೇಳೆಯಲ್ಲಿ ಹುಲ್ಲುಗಾವಲು ಅಥವಾ ಕಾಡಿನ ಪಕ್ಕದಲ್ಲಿ ಒಂದು ಬಿಳಿಯ ಪರದೆಯನ್ನು ಅಗಲವಾಗಿ ಎರಡು ಮರಗಳಿಗೆ ಬಿಗಿಯಾಗಿ ಕಟ್ಟಬೇಕು. ಬಿಳಿಯ ಪರದೆಯ ಮೇಲೆ ಟ್ಯೂಬ್ ಲೈಟ್ ಬೆಳಕು/ಅಲ್ಟ್ರಾವೈಲಟ್ ಬೆಳಕು ಬೀಳುವಂತೆ ಮಾಡಿದರೆ ಮುಗಿಯಿತು! ಕಾಡು, ಹುಲ್ಲುಗಾವಲು ಎಲ್ಲಾ ಕಡೆಗಳಿಂದಲೂ ಪತಂಗಗಳು ಆಕರ್ಷಿತವಾಗಿ ಬಂದು ಪರದೆಯ ಮೇಲೆ ಕೂರುತ್ತವೆ.

(ಡಾ. ಅಶ್ವಥ ಕೆ.ಎನ್.‌)

ವಿಜ್ಞಾನಿಗಳು ಈ ರೀತಿಯ ಪರದೆಗಳ ಮೇಲೆ ಬಂದು ಕುಳಿತ ಬಣ್ಣ ಬಣ್ಣದ ಪತಂಗಗಳನ್ನು ಅಭ್ಯಸಿಸಿ ಅವುಗಳ ಜೀವನ ಚಕ್ರವನ್ನು, ವೈವಿಧ್ಯತೆಯನ್ನು ತಿಳಿದುಕೊಳ್ಳುತ್ತಾರೆ. ಇನ್ನೂ ಕೆಲವು ಛಾಯಾಗ್ರಾಹಕರು ಇವುಗಳ ಅದ್ಭುತ ಛಾಯಾಚಿತ್ರಗಳನ್ನು ತೆಗೆಯುತ್ತಾರೆ. ನಾವು ಬರೀ ಅವುಗಳ ಸೊಬಗನ್ನು ನೋಡಲೆಂದೇ ರಾತ್ರಿ ಪತಂಗಗಳ ಟ್ರ್ಯಾಪ್ ಹಾಕುವುದೆಂದು ಉಪಾಯ ಹೂಡಿದೆವು. ಆದರೆ ನಮ್ಮ ಬಳಿ ಬಿಳಿ ಪರದೆಯೂ ಇರಲಿಲ್ಲ, ಪರದೆಯ ಮೇಲೆ ಬೆಳಕು ಬೀಳಿಸಲು ಯಾವುದೇ ಬೆಳಕು ಸಹ ಇರಲಿಲ್ಲ. ಈಗ ಏನು ಮಾಡುವುದು ಎಂದು ಇಬ್ಬರೂ ಯೋಚಿಸುತ್ತಾ ಕುಳಿತಿರಬೇಕಾದರೆ, ಗೆಳೆಯ ಶಂಕರನಿಗೆ ನಮ್ಮ ಸ್ಕೂಲ್ ಹೆಡ್ ಮಾಸ್ಟರ್ ದಿನಾ ಪಂಚೆ ಉಡುತ್ತಿದ್ದುದು ನೆನಪಾಗಿ, ಹೇಗಾದರೂ ಮಾಡಿ ಪಂಚೆ ತರುತ್ತೇನೆಂದು ಹೆಡ್ ಮಾಸ್ಟರ ಬಳಿಗೆ ಹೊರಟ.

ನಾನು ನಮ್ಮ ತೋಟದ ಮನೆಗೆ ಹೋಗಿ ಅಪ್ಪ ಇಟ್ಟಿದ್ದ ಕರೆಂಟ್ ವೈರ್, ಹೋಲ್ಡರ್, ಬಲ್ಬ್ ಎಲ್ಲವನ್ನು ತಂದೆ. ಶಂಕರನು ಹೇಗೋ ಮಾಡಿ ಪಂಚೆಯನ್ನು ತಂದಿದ್ದ. ನಮ್ಮ ಮನೆಯಿಂದ ಅರ್ಧ ಕಿಲೋಮೀಟರ್ ದೂರದಲ್ಲಿದ್ದ ಕಾಡಿನ ಪಕ್ಕದ ಒಂದು ಆಲದ ಮರದ ಬುಡದಲ್ಲಿ ಪಂಚೆಯನ್ನು ಎರಡು ಕೊಂಬೆಗಳಿಗೆ ಕಟ್ಟಿ, ಆ ಮರದ ಬದಿಯಲ್ಲೇ ಹಾದುಹೋಗುವ ಕರೆಂಟ್ ತಂತಿಗಳಿಂದ ಕರೆಂಟ್ ತೆಗೆದುಕೊಂಡು ಪಂಚೆಯ ಮೇಲೆ ಬೆಳಕು ಬೀಳುವಂತೆ ಮಾಡಿದೆವು.

ರಾತ್ರಿ ಊಟ ಮುಗಿಸಿ ಬಂದು, ಪರದೆಗೆ ಬಿಟ್ಟಿದ್ದ ಲೈಟಿನ ಬಳಿ ಪತಂಗಗಳ ಬೇಟೆಗೆ ಕುಳಿತೆವು. ಬೇಸರ ಕಳೆಯಲು ಆ ಬೆಳಕಿನಲ್ಲಿಯೇ ಯಾವುದೋ ಪುಸ್ತಕದ ಹಾಳೆಗಳನ್ನು ತಿರುವುತ್ತಾ, ಕಥೆಯನ್ನು ಓದುತ್ತಾ, ಅಮಾವಾಸ್ಯೆ ಕಗ್ಗತ್ತಲಿನ ಭಯಕ್ಕೆ ಹೆದರದೆ, ನಾನು ಶಂಕರನನ್ನು ನಂಬಿ, ಶಂಕರನು ನನ್ನನ್ನು ನಂಬಿ ಮೊಂಡು ಧೈರ್ಯದಿಂದ ಕಾಯತೊಡಗಿದೆವು. ರಾತ್ರಿ ಹನ್ನೊಂದಾದರೂ ಒಂದೆರಡು ಸಣ್ಣ ಪತಂಗಗಳನ್ನು ಬಿಟ್ಟರೆ ಯಾವ ಬಣ್ಣ ಬಣ್ಣದ ಪತಂಗಗಳೂ ಬರಲೇ ಇಲ್ಲ. ಕಾದು ಕಾದು ಸಾಕಾಯಿತು, ಸುಸ್ತಾಯಿತು, ಬೇಜಾರಾಯಿತು. “ನಡಿ ಸಾಕು, ಮನೆಗೆ ಹೋಗಿ ಮಲಗೋಣ” ಎಂದು ಒಳಮನಸ್ಸು ಎಚ್ಚರಿಸುತ್ತಿದ್ದರೂ, ಇನ್ನೂ ಸ್ವಲ್ಪ ಸಮಯ ನೋಡೋಣ ಎನಿಸುತ್ತಿತ್ತು. ಪತಂಗಗಳು ಸಿಗದೇ ಬೇಸತ್ತು ಇಬ್ಬರೂ ಒಂದೇ ಬಾರಿ “ನಡಿ ಸಾಕು ಹೋಗೋಣ” ಎಂದು ಹೇಳಿದೆವು. ಮಧ್ಯರಾತ್ರಿ ಒಮ್ಮೆ ಬಂದು ನೋಡಿದರಾಯಿತು. ಈಗ ಹೋಗೋಣ ಎಂದು ನಿರ್ಧರಿಸಿ ಎದ್ದು ಸೀದ ಮನೆಯ ಕಡೆ ಬಂದು, ಗಡಿಯಾರದಲ್ಲಿ ಅಲರಾಂ ಇಟ್ಟು ಮಲಗಿದೆವು. ಎಚ್ಚರಿಕೆ ಇಲ್ಲದ ನಿದ್ದೆ! ಮಧ್ಯರಾತ್ರಿ ಗಡಿಯಾರ ಬಾಯಿ ಬಡಿದುಕೊಂಡು ಎಬ್ಬಿಸಿತು. ಇಬ್ಬರು ಬೆಚ್ಚಿಬಿದ್ದು ಹಾಸಿಗೆಯ ಮೇಲಿಂದ ಎದ್ದು ಕುಳಿತೆವು. ಶಂಕರ “ಹೋಗೋಣವೇ?” ಎಂದಿದ್ದಕ್ಕೆ ನಾನು ತಲೆಯಾಡಿಸುತ್ತಾ ರಗ್ಗನ್ನು ಮೈಗೆ ಸುತ್ತಿಕೊಂಡು ಅವನನ್ನು ಹಿಂಬಾಲಿಸಿದೆ. ಶಂಕರನು ತಂದಿದ್ದ ‘ಮಿಣ್ಕಾ… ಮಿಣ್ಕಾ…ʼ ಎನ್ನುವ ಸೀಮೆಎಣ್ಣೆ ಬುಡ್ಡಿಯಂತಹ ಸಣ್ಣದೊಂದು ಟಾರ್ಚಿನ ಬೆಳಕಿನಲ್ಲಿ ಬೆಟ್ಟ ಏರಿ ಕಗ್ಗತ್ತಲಿನಲ್ಲಿ ಆಲದಮರ ತಲುಪಿದ್ದು ನನಗೆ ತಿಳಿಯಲೇ ಇಲ್ಲ.

ಪಂಚೆಯ ಮೇಲೆ ಸಣ್ಣಪುಟ್ಟ ಒಂದಷ್ಟು ಪತಂಗಗಳು, ಒಂದೆರಡು ಸ್ವಲ್ಪ ದೊಡ್ಡ ಗಾತ್ರದವು ಬಂದು ಕುಳಿತಿದ್ದವು. “ಇದು ಯಾವುದು? ಇದು ನೋಡೋ ಶಂಕರ ಚಿನ್ನದ್ ತರಾ ಕಾಣ್ತಾದೆ? ಏ… ಅಷ್ಟ್ ದೊಡ್ಡವು ಯಾವು ಬರ್ಲಿಲ್ಲ ಮಾರಾಯ”. ಎಂದು ಮಾತನಾಡುತ್ತಾ ಇಬ್ಬರೂ ಪರದೆಯ ಮುಂದೆ ನಿಂತು ಪತಂಗಗಳ ವಿಸ್ಮಯ ಲೋಕದಲ್ಲಿ ಮುಳುಗಿ ಹೋಗಿದ್ದೆವು.

ಪರದೆಯ ಹಿಂದೆ ಆಲದಮರದಿಂದ ಯಾವುದೋ ಭೂತವೋ! ಪಿಶಾಚಿಯೋ! ಪರ್… ಎನ್ನುತ್ತಾ ಜೋರಾಗಿ ಪಂಚೆಗೆ ಬಡಿಯಿತು. ಆ ಪಂಚೆ ನಮ್ಮಿಬ್ಬರ ಮುಖಕ್ಕೆ ಬಡಿದು, ಪಂಚೆಯ ಮೇಲೆ ಕುಳಿತಿದ್ದ ಪತಂಗ, ಹುಳ-ಹುಪ್ಪಟಗಳೆಲ್ಲ ಮೈಮೇಲೆ ಬಿದ್ದವು. ಅಮಾವಾಸ್ಯೆ ಮಧ್ಯರಾತ್ರಿಯ ಆ ಕಗ್ಗತ್ತಲಲ್ಲಿ ನಮ್ಮನ್ನೇ ಬೀಳಿಸುವಂತೆ ಬಂದ ಆ ಅನಿರೀಕ್ಷಿತ ಜೀವಿಯಿಂದ ಹೆದರಿ ಇನ್ನೇನು ಕಾಲಿಗೆ ಬುದ್ದಿ ಹೇಳಬೇಕು; ಅಷ್ಟರಲ್ಲಿ, ಪಂಚೆಯ ಪಕ್ಕದಲ್ಲೇ ನಮ್ಮಿಬ್ಬರ ನಡುವೆಯೇ ಹಸಿರು ಬಣ್ಣದ ಹಕ್ಕಿಯೊಂದು ಹಾರಿ ಹೋಯಿತು.

ಈ ಹಕ್ಕಿ ಸಾಮಾನ್ಯವಾಗಿ ಮರದ ಪೊಟರೆಗಳಲ್ಲಿ ಬಿಲ ಕೊರೆದು ಗೂಡು ಮಾಡಿಕೊಂಡಿರುತ್ತದೆ ಎಂಬ ನೆನಪು ಬಂದು ಪಂಚೆಯ ಹಿಂದೆ ಹೋಗಿ ಆಲದಮರದ ಪೊಟರೆಯನ್ನು ನೋಡಿದಾಗ, ಕಂಡಿತು ಕುಟ್ರು ಹಕ್ಕಿಯ ಗೂಡು. ಈ ಹಕ್ಕಿಯನ್ನು ಇಂಗ್ಲಿಷ್‌ನಲ್ಲಿ ‘ವೈಟ್-ಚೀಕ್ಡ್ ಬಾರ್ಬೆಟ್ (White-cheeked barbet)’ ಎಂದು ಕರೆಯುವುದುಂಟು. ನೋಡಲು ಗೊರವಂಕ ಗಾತ್ರದ ಹಸಿರುಹಕ್ಕಿ. ತಲೆ, ಕತ್ತು ತಿಳಿ ಕಂದು ಬಣ್ಣವಿದ್ದು, ಕತ್ತು, ಎದೆಯ ಮೇಲೆ ಬಿಳಿಯ ಗೆರೆಗಳಿರುತ್ತವೆ. ಕೆನ್ನೆ ಮತ್ತು ಗದ್ದವು ಬಿಳಿಯ ಬಣ್ಣದ್ದು. ಕೊಕ್ಕು ಕೇಸರಿ ಬಣ್ಣದ್ದು. ಕೊಕ್ಕಿನ ಸುತ್ತಾ ಮೀಸೆಗಳಿರುತ್ತವೆ. ಪಚ್ಚೆ ಹಸಿರಿನ ರೆಕ್ಕೆ ಹಾಗು ಮೋಟು ಬಾಲವಿರುವ ಹಕ್ಕಿ.

ಹಕ್ಕಿಯ ಇಷ್ಟೆಲ್ಲಾ ಲಕ್ಷಣಗಳನ್ನು ಕತ್ತಲಲ್ಲಿ ಕಂಡು ಹಿಡಿಯಲು ಆಗದಿದ್ದರೂ ಅದರ ಬಣ್ಣ, ಪೊಟರೆಯಲ್ಲಿದ್ದ ಗೂಡನ್ನು ನೋಡಿದರೆ ತಿಳಿಯುತ್ತಿತ್ತು, ಈ ಹಕ್ಕಿ ಕುಟ್ರು ಹಕ್ಕಿಯೇ ಎಂದು. ಆದರೂ ನಮಗೆ ಇನ್ನೊಂದು ನಂಬುವಂತಹ ಸಾಕ್ಷಿ ಸಿಕ್ಕಿದ್ದು ಪಂಚೆಗೆ ಬಡಿದುಕೊಂಡಾಗ ಉದುರಿ ಬಿದ್ದಿದ್ದ ಮಿರುಗುವ ಹಸಿರು ಪುಕ್ಕ.

(ಕೃತಿ: ಜಂಗಾಲ, ಲೇಖಕರು: ಡಾ. ಅಶ್ವಥ ಕೆ.ಎನ್.‌, ಪ್ರಕಾಶಕರು: ವೃಕ್ಷ ಪ್ರಕಾಶನ, ಬೆಲೆ: 180/-)