ಹಬ್ಬದ ಹಿಂದಿನ ಸಂಜೆ “ನಾಳೆ ರಜಾ, ಕೋಳಿ ಮಜಾ..” ಎನ್ನುತ್ತಾ ರಜೆಯ ಸಡಗರವನ್ನು ಅನುಭವಿಸಿ, ಹಗಲಿಡೀ‌‌ ಆಟವಾಡಿ, ಮಧ್ಯಾಹ್ನ ಸಿಹಿ‌ ತಿಂದು ಖುಷಿಪಟ್ಟವರು ಸಂಜೆಯಾಗುತ್ತಲೇ ನಮಗೆ ತಿಳಿಯದಲೇ ಬೇಸರಿಸಿಕೊಂಡು ಬಿಡುತ್ತಿದ್ದೆವು. “ಹೋಂ ಸಿಕ್ ನೆಸ್” ಎಂಬುದು ನಮಗರಿವಿಲ್ಲದಲೇ ಹಬ್ಬದ ದಿನಗಳಲ್ಲೇ ಹೆಚ್ಚಾಗಿ ನಮ್ಮನ್ನು ಆವರಿಸಿಕೊಂಡು ಬಿಡುತ್ತಿತ್ತು. ಕೊಟ್ಟ ಹೋಂ ವರ್ಕ್ “ನಾಳೆ ಮಾಡಿದರಾಯ್ತು” ಎಂದು ಮುಂದೂಡಿ ಈಗ ಮಾಡಬೇಕಿರುವುದೂ ನಮ್ಮ ದುಃಖವನ್ನು ಮತ್ತಷ್ಟು ಹೆಚ್ಚಿಸಿ ಬಿಡುತ್ತಿತ್ತು. ಒಮ್ಮೊಮ್ಮೆ ಕಣ್ಣಂಚಲ್ಲಿ ನೀರೂ ಮೂಡುತ್ತಿತ್ತು.
ಪೂರ್ಣೇಶ್‌ ಮತ್ತಾವರ ಬರೆಯುವ “ನವೋದಯವೆಂಬ ನೌಕೆಯಲ್ಲಿ…” ಸರಣಿಯ ಹನ್ನೆರಡನೆಯ ಬರಹ

ಹಬ್ಬಗಳೆಂದರೆ ಸಡಗರ, ಸಂಭ್ರಮ, ಸಂತಸ, ಸವಿನೆನಪು ಎಲ್ಲವೂ ಇರುವಂಥದ್ದೆ! ಅಂತಹದ್ದರಲ್ಲಿ ನವೋದಯದ ಹಬ್ಬಗಳದ್ದೇ ಬೇರೊಂದು ಬಗೆ.

ಇಲ್ಲಿ ಸಡಗರ, ಸಂಭ್ರಮ, ಸಂತಸ, ಸವಿನೆನಪುಗಳ ಜೊತೆಗೆ ಒಮ್ಮೊಮ್ಮೆ ಬೇಸರವೂ ಬೆರೆತ ಮಿಶ್ರ ಭಾವ.

ಸಾಮಾನ್ಯವಾಗಿ ನಾವು ನಮ್ಮ ಮನೆಗಳಲ್ಲಿ ನಮ್ಮ ನಮ್ಮ ಧರ್ಮಗಳ ಹಬ್ಬಗಳನ್ನು ಆಚರಿಸಿ ರುಚಿಕರ ತಿಂಡಿ ತಿನಿಸುಗಳನ್ನು ತಿಂದರೆ, ನವೋದಯದಲ್ಲಿ ಆಗಲ್ಲ. ಆಚರಣೆ ಇರಲಿ, ಬಿಡಲಿ ಹಿಂದೂ, ಮುಸ್ಲಿಂ, ಕ್ರೈಸ್ತ ಧರ್ಮದ ಹಬ್ಬಗಳಲ್ಲದೇ ಸಿಖ್ಖರ ಗುರುನಾನಕ್ ಜಯಂತಿಯ ದಿನವೂ ವಿಶೇಷ ಅಡುಗೆ ಮೆಲ್ಲುವ ಅವಕಾಶ.

ಇನ್ನೂ ನಾವು ಬಹುತೇಕರು ಮನೆಯಲ್ಲಿ ಆಚರಿಸದೇ ಇರುತ್ತಿದ್ದ ಹೋಳಿಯಂತಹ ಹಬ್ಬಗಳನ್ನೂ ಆಚರಿಸುವ ಸಂಭ್ರಮ. ಹೋಳಿಗೆಂದು ಬಗೆಬಗೆಯ ಸಾಂಪ್ರದಾಯಿಕ ಬಣ್ಣಗಳು ನಮ್ಮ ಬಳಿ ಇರುತ್ತಿರಲಿಲ್ಲವಾದರೂ ಬಿಳಿ ಬಟ್ಟೆಗೆ ಹಾಕಲೆಂದು ಶಾಲೆಯಲ್ಲಿ ಕೊಡುತ್ತಿದ್ದ ನೀಲಿ ಉಜಾಲವೇ ನಮ್ಮ ಪಾಲಿನ ಒಲವಿನ ಬಣ್ಣವಾಗಿ “ಈ ನೀಲಿ ಮೋಹಕ ಕಣ್ಣ, ಚೆಲುವಲ್ಲಿ ಬಾನಿನ ಬಣ್ಣ..” ಸಾಲುಗಳನ್ನು ಗುನುಗಿಸುತ್ತಿತ್ತು. ಸಾಲದ್ದಕ್ಕೆ ಶಾಲಾ ಕಟ್ಟಡಗಳನ್ನು ಕಟ್ಟುವಾಗ ನೀರು ಸಂಗ್ರಹಣೆಗೆಂದು ಮಾಡಿಸಿದ್ದ ದೊಡ್ಡ ತೊಟ್ಟಿಯೇ ನಮ್ಮ ಪಾಲಿನ ಸ್ವಿಮ್ಮಿಂಗ್ ಪೂಲ್ ಆಗಿ ಅದರಲ್ಲಿನ ಕೆಸರು ನೀರೂ ಒಲವಿನ ಬಣ್ಣವಾಗಿ “ರಂಗಾದ ಕೆನ್ನೆ ತುಂಬಾ ಈ ಸಂಜೆ ಓಕುಳಿ ಬಣ್ಣ..” ಸಾಲುಗಳನ್ನು ಗುನುಗಿಸುತ್ತಿತ್ತು.

ಅದೂ ಸಾಲದೆಂದು ಪೌಡರ್, ಚಾಕ್ ಪೀಸ್ ಪೌಡರ್ ಕದಡಿದ ನೀರು “ನೊರೆ ಹಾಲಿಗಿಂತ ಬಿಳುಪಿನ ಬಣ್ಣ..”ವಾದರೆ, ಸ್ಕೆಚ್ ಪೆನ್ ಒಳಗಿನ ಬಣ್ಣದ ಹತ್ತಿಯನ್ನು ಅದ್ದಿದ ನೀರು ನಾಲ್ಕು ದಿನವಾದರೂ ಮುಖದ ಮೇಲಿನ “ಮಾಸದ ಬಣ್ಣ..”ವಾಗಿ ಶಿಕ್ಷಕರ ಬೈಗುಳ‌ಕ್ಕೂ ಕಾರಣವಾಗುತ್ತಿತ್ತು.

ಇನ್ನೂ ರಕ್ಷಾ ಬಂಧನದ “ರಾಖಿ ಹಬ್ಬ”ದ ಅವಾಂತರಗಳನ್ನು ವರ್ಣಿಸಲು ವಿಶೇಷ ಚಾಪ್ಟರ್ ಒಂದನ್ನು ಮೀಸಲಿಡಬೇಕೆನೋ! ಜೂನಿಯರ್‌ಗಳಿದ್ದಾಗ ಸೀನಿಯರ್ ಅಕ್ಕಂದಿರು ಹೆಚ್ಚು ಹೆಚ್ಚು ರಾಖಿ ಕಟ್ಟಿದಷ್ಟೂ ಹೀರೋಗಳಂತೆ ಸಂಭ್ರಮಿಸುತ್ತಿದ್ದವರು ಸೀನಿಯರ್‌ಗಳಾಗುತ್ತಲೇ ಜೂನಿಯರ್ ಹುಡುಗಿಯರಿಂದ ಹೆಚ್ಚು ರಾಖಿ ಕಟ್ಟಿಸಿಕೊಳ್ಳದವನನ್ನೇ ಹೀರೋ ಎಂಬಂತೆ ಆರಾಧನಾ ಭಾವದಿಂದ ಕಾಣುತ್ತಿದ್ದದ್ದು, ಮಧ್ಯಪ್ರದೇಶದಿಂದ ಮೈಗ್ರೇಷನ್ ಬಂದವರಿಗೆ ರಕ್ಷಾ ಬಂಧನದ ದಿನ ಎಂ.ಪಿ ಹಾಲ್‌ನ ವೇದಿಕೆಯ ಮೇಲೆ ರಾಖಿ ಕಟ್ಟಿಸುವ ಕಾರ್ಯಕ್ರಮವಿರುತ್ತಿದ್ದದ್ದು, ಅಲ್ಲಿ ಪ್ರತಿ ಹುಡುಗಿಯೂ ಪ್ರತಿ ಹುಡುಗನಿಗೂ ರಾಖಿ ಕಟ್ಟುತ್ತಿದ್ದುದರಿಂದ ಪ್ರೀತಿ ಪ್ರೇಮ ಎಂಬ ಗುಂಗಿನಲ್ಲಿದ್ದ ಹುಡುಗರ ಯಾತನೆಗಳು ವರ್ಣನಾತೀತವಾಗಿರುತ್ತಿದ್ದದ್ದು.. ಇತ್ಯಾದಿ, ಇತ್ಯಾದಿ!

ಗಣಪತಿ ಹಬ್ಬವೆಂದರೆ ವಾರ ಪೂರ್ತಿಯ ಸಂಭ್ರಮ. ಪ್ರತಿದಿನ ಒಂದೊಂದು ತರಗತಿಯವರ ಪೂಜೆ, ಪ್ರಸಾದ, “ಗಣಪತಿಯೇ ಗಜಮುಖನೇ ನಿಮಗೆ ವಂದನೆ..” ಗೀತೆ, ಅರ್ಧ ದಾರಿವರೆಗಿನ ವಿಸರ್ಜನಾ ಮೆರವಣಿಗೆ!

ಸರಸ್ವತಿ ಪೂಜೆ ಎಂದರೆ ತರಗತಿ ಕೋಣೆಗಳನ್ನು ಸಿಂಗರಿಸುವ ತರಗತಿವಾರು ಸ್ಪರ್ಧೆ. ಕೋಣೆಯ ತುಂಬಾ ತಳಿರು, ತೋರಣ, ರಂಗೋಲಿಯ ಚಿತ್ತಾರ. ಸಿಂಗಾರಕ್ಕೆ ತರಗತಿಯ ಹೆಣ್ಣು ಮಕ್ಕಳ ದುಪ್ಪಟ್ಟಗಳು ಸಾಲದೆಂದು ಶಿಕ್ಷಕಿಯರ ಬಣ್ಣ ಬಣ್ಣದ ಸೀರೆಗಳನ್ನೂ ಕೇಳಿ ತರುತ್ತಿದ್ದ ಸಂದರ್ಭಗಳು!

ಶಿವರಾತ್ರಿಗಳಂತೂ ಜಾಗರಣೆಯ ನೆಪ ಮಾಡಿ ರಾತ್ರಿಯಿಡೀ ಕೇರಂ, ಚೆಸ್ ಆಡುವ, ನಿದ್ರೆ ಮಾಡದ ರಾತ್ರಿಗಳನ್ನು ಅನುಭವಿಸುವ ಸ್ವಾತಂತ್ರ್ಯದ ಸಂಭ್ರಮದ ದಿನಗಳು!

ಈ ಎಲ್ಲಾ ಸಡಗರ ಸಂಭ್ರಮಗಳ ನಡುವೆಯೇ ಇಲ್ಲಿ‌ ಬೇಸರಕ್ಕೂ ಅವಕಾಶವಿರುತ್ತಿತ್ತು! ಮನೆಗಳಲ್ಲಿ “ಹಬ್ಬ” ಗಳೆಂದರೆ “ಹಬ್ಬ” ವಾಗಿಸುವ ಹಲವು ಸಂಗತಿಗಳಿರುತ್ತವೆ.

ಹಬ್ಬಕ್ಕೆಂದು ಹೋಳಿಗೆಯನ್ನೋ, ಜಾಮೂನು, ರವೆ ಉಂಡೆಗಳನ್ನೋ ಮಾಡಿದರೆಂದರೆ ಒಂದೆರಡು ದಿನವಾದರೂ ಕೇಳಿದಷ್ಟು ತಿನ್ನಲಿರುತ್ತದೆ. ಆದರೆ ಇಲ್ಲಿ ಈ‌ ಅನ್ ಲಿಮಿಟೆಡ್ ತಿಂಡಿ ತಿನಿಸಿನ ಬದಲು‌ ಒಂದು ಮೈಸೂರು ಪಾಕ್, ಒಂದು ಬಾದಷಹ, ಒಂದು ಜಿಲೇಬಿ ಎಂಬ ಲಿಮಿಟ್ ಇರುತ್ತಿತ್ತು. ಸಾಲದ್ದಕ್ಕೆ ಸಂಕ್ರಾಂತಿಯೆಂದರೆ ಎಳ್ಳು ಬೆಲ್ಲ, ಯುಗಾದಿಯೆಂದರೆ ಬೇವು ಬೆಲ್ಲದ ಕಡ್ಲೇ ಹಿಟ್ಟು, ಅಮ್ಮನ‌ ಕೈಯ ಹೋಳಿಗೆ, ಕಿಚಡಿ, ಕಾಯಿ ಹಾಲು, ಬೆಲ್ಲ, ತುಪ್ಪ ಎಂಬುವವೆಲ್ಲಾ ಇರುತ್ತಿರಲಿಲ್ಲ.

ಮಿಗಿಲಾಗಿ “ಹಬ್ಬ”ವನ್ನು “ಹಬ್ಬ”ವಾಗಿಸುವ ನೆಂಟರ ಆಗಮನ, ಜಾತ್ರೆ ಎಂಬುವವೆಲ್ಲಾ ನವೋದಯದಲ್ಲಿರಲಿಲ್ಲ. ದೀಪಾವಳಿಯಾದರೆ ಮನೆಯಿಂದ ಕೊಟ್ಟು ಹೋದ ಪಟಾಕಿ ಗಂಟು ಖಾಲಿಯಾದರೆ ಮತ್ತೆ ಕೊಡಿಸಿರೆಂದು ಅಪ್ಪ ಅಮ್ಮನನ್ನು ಪೀಡಿಸುವ ಅವಕಾಶವಿರಲಿಲ್ಲ.

ಹಾಗಾಗಿಯೇ ಹಬ್ಬದ ಹಿಂದಿನ ಸಂಜೆ “ನಾಳೆ ರಜಾ, ಕೋಳಿ ಮಜಾ..” ಎನ್ನುತ್ತಾ ರಜೆಯ ಸಡಗರವನ್ನು ಅನುಭವಿಸಿ, ಹಗಲಿಡೀ‌‌ ಆಟವಾಡಿ, ಮಧ್ಯಾಹ್ನ ಸಿಹಿ‌ ತಿಂದು ಖುಷಿಪಟ್ಟವರು ಸಂಜೆಯಾಗುತ್ತಲೇ ನಮಗೆ ತಿಳಿಯದಲೇ ಬೇಸರಿಸಿಕೊಂಡು ಬಿಡುತ್ತಿದ್ದೆವು.

“ಹೋಂ ಸಿಕ್ ನೆಸ್” ಎಂಬುದು ನಮಗರಿವಿಲ್ಲದಲೇ ಹಬ್ಬದ ದಿನಗಳಲ್ಲೇ ಹೆಚ್ಚಾಗಿ ನಮ್ಮನ್ನು ಆವರಿಸಿಕೊಂಡು ಬಿಡುತ್ತಿತ್ತು. ಕೊಟ್ಟ ಹೋಂ ವರ್ಕ್ “ನಾಳೆ ಮಾಡಿದರಾಯ್ತು” ಎಂದು ಮುಂದೂಡಿ ಈಗ ಮಾಡಬೇಕಿರುವುದೂ ನಮ್ಮ ದುಃಖವನ್ನು ಮತ್ತಷ್ಟು ಹೆಚ್ಚಿಸಿ ಬಿಡುತ್ತಿತ್ತು. ಒಮ್ಮೊಮ್ಮೆ ಕಣ್ಣಂಚಲ್ಲಿ ನೀರೂ ಮೂಡುತ್ತಿತ್ತು.

ಅದೊಂದು ಯುಗಾದಿಯ ಸಂಜೆಯಲ್ಲಿ ಇದೇ ಬಗೆಯ ಬೇಸರದ ಮನಸ್ಥಿತಿಯಲ್ಲಿಯೇ ನಾನು ಡಾರ್ಮಿಟರಿಯಲ್ಲಿ‌ ಕುಳಿತಿದ್ದೆ. ಅಷ್ಟರಲ್ಲೇ ಗೆಳೆಯ ಸುಧೀರ “ಬಾರೋ..” ಎಂದು ಕರೆದ. “ಎಲ್ಲಿಗೆ? ಎಂದರೆ ಎಲ್ಲಿಗೆಂದು ತಿಳಿಸದೇ “ಸುಮ್ನೆ ಬಾ” ಎನ್ನುತ್ತಾ ಡಾರ್ಮಿಟರಿಯ ಹತ್ತಿರವೇ ಇದ್ದ ಟೀಚರ್ಸ್ ಕ್ವಾರ್ಟರ್ಸ್ ಕಡೆಗೆ ನಡೆದ. “ಏನುಕ್ಕೋ?” ಎಂದರೆ ಅದಕ್ಕೂ ಕಾರಣ ತಿಳಿಸದೇ “ಸುಮ್ನೆ ಬಾ” ಎನ್ನುತ್ತಾ ಮುನ್ನಡೆದ. ನಾನು ಹಿಂದೆ ಹಿಂದೆ ನಡೆದೆ.

ಕ್ಷಣಾರ್ಧದಲ್ಲಿ ನಾವು ಕ್ವಾರ್ಟರ್ಸ್‌ನ ಮೇಲ್ಮಹಡಿಯಲ್ಲಿದ್ದ ರೇವಂಕರ್ ಮೇಡಂ ಮನೆಯ ಮುಂದಿದ್ದೆವು. ಬಾಗಿಲು ಬಡಿದೆವು.

ರೇವಂಕರ್ ಮೇಡಂ ಬಾಗಿಲು ತೆರೆದರು. ಬಾಗಿಲು ತೆರೆದವರು ನಮ್ಮನ್ನು ಒಳ ಕರೆದು ಏನು ಎತ್ತ ಎಂದು ವಿಚಾರಿಸುವ ಮೊದಲೇ ಸುಧೀರ “ಮೇಡಂ ಚಂದ್ರನ್ನ ನೋಡಿದ್ವಿ.. ಆಶೀರ್ವಾದ ಮಾಡಿ..” ಎನ್ನುತ್ತಾ ಅವರ ಕಾಲಿಗೆ ಡೈವ್ ಹೊಡೆದ. ನಾನೂ ಒಂದಿನಿತು ಯೋಚಿಸದೇ ಪೂರ್ವ ಯೋಜನೆ ಮಾಡಿದವನಂತೆ, ಸುಧೀರನ ಡೈವ್ ಧಾಟಿಯನ್ನೂ ಮೀರಿಸುವವನಂತೆ ರೇವಂಕರ್ ಮೇಡಂ ಕಾಲಿಗೆ ಡೈವ್ ಹೊಡೆದೆ..

ಮಾತೃ ಹೃದಯಿ ರೇವಂಕರ್ ಮೇಡಂ ರ ಮನ ತುಂಬಿ‌ ಬಂದಿರಬೇಕು. ಮುಖ ಭಾವದಲ್ಲೇ “ಎಂತಹ ಸಂಸ್ಕಾರವಂತ ಶಿಷ್ಯಂದಿರನ್ನು ಪಡೆದಿರುವೆನು!” ಎಂಬ ಸಾರ್ಥಕ ಭಾವ ಹೊರ ಸೂಸುತ್ತಾ “ಒಳ್ಳೆಯದಾಗ್ಲಿ ಮಕ್ಳೇ!” ಎಂದು‌ ಹರಸಿದರು.

ಮುಂದುವರೆಸುತ್ತಾ ನಮ್ಮನ್ನು ಕೂರಲು ಹೇಳಿ “ಯುಗಾದಿ ದಿನ ಚಂದ್ರನ್ನ ನೋಡಿದ್ರೆ ತುಂಬಾ ಒಳ್ಳೇದು. ಮತ್ತೆ ಎಲ್ರಿಗೂ ಈ ದಿನ ಚಂದ್ರ ಕಾಣಲ್ಲ. ನೀವು ಅದೃಷ್ಟ ಮಾಡಿದಿರಾ..” ಎಂದರು.

ಅವರ ಮಾತಿನ ಧಾಟಿ ನೋಡಿದರೆ ಅವರೂ ಚಂದ್ರನನ್ನು ನೋಡುವ ಪ್ರಯತ್ನ ಮಾಡಿ ಚಂದ್ರ ಅವರಿಗೆ ಕಾಣಿಸಿರಲಿಲ್ಲವೆನಿಸುತ್ತೆ.

ಸರಿ, ನಾವು ಹೊರಡಲನುವಾದೆವು.

ಮಾತೃ ಹೃದಯಿ ರೇವಂಕರ್ ಮೇಡಂ ಸುಮ್ಮಿನಿರುತ್ತಾರೆಯೇ?

ಮೊದಲೇ ಅವರು ನಮ್ಮ ಧಾರವಾಹಿಗಳನ್ನು ನೋಡಲಾಗದ ಸಂಕಟವನ್ನು ‌ಅರಿತು, ನಮ್ಮ ಬೇಡಿಕೆಯಿಂದಾಗಿಯೇ ನಮ್ಮ ಇಷ್ಟದ ಚಂದ್ರಕಾಂತದಂತಹ ಧಾರವಾಹಿಗಳನ್ನು ಭಾನುವಾರದ ದಿನ ನೋಡಿ, ಸೋಮವಾರದ ತಮ್ಮ ಹಿಂದಿ ಪೀರಿಯಡ್‌ನಲ್ಲಿ ಮಹಾಭಾರತದಲ್ಲಿ ಕುರುಕ್ಷೇತ್ರ ಯುದ್ಧವನ್ನು ಕಣ್ಣಾರೆ ಕಾಣಲಾಗದ ಧೃತರಾಷ್ಟ್ರನಿಗೆ ಸಂಜಯ ತನ್ನ ದಿವ್ಯ ದೃಷ್ಟಿಯಿಂದ ಯುದ್ಧದ ಘಟನಾವಳಿಗಳನ್ನು ಕಣ್ಮುಂದೆಯೇ ತಂದಂತೆ ಧಾರವಾಹಿಗಳ ಕಥೆಗಳನ್ನು ಹೇಳುತ್ತಿದ್ದವರಾಗಿದ್ದರು.

ಆ ಮೂಲಕ ನಮ್ಮಲ್ಲಿನ “ಕಥೆ ಕಟ್ಟುವಿಕೆಯ” ಚಾಕಚಕ್ಯತೆಯನ್ನು ನೀರೆರೆದು ಪೋಷಿಸಿದವರಾಗಿದ್ದರು.

ಸರಿ, “ಕೂತ್ಕೊಳ್ಳಿ, ಕೂತ್ಕೊಳ್ಳಿ., ಅಯ್ಯೋ ಅಪರೂಪಕ್ಕೆ ಮನೆಗೆ ಬಂದಿದಿರಾ.. ಇವತ್ತೇ ಮನೇಲಿ ಏನು ತಿಂಡಿ‌ ಇಲ್ವಲ್ಲ..” ಎನ್ನುತ್ತಾ ಫ್ರಿಡ್ಜ್ ನಿಂದ ಹೋಳಿಗೆಯೊಂದನ್ನು ತೆಗೆದು, ಬಿಸಿಮಾಡಿ, ನಮ್ಮಿಬ್ಬರಿಗೂ ಅರ್ಧರ್ಧ ಮಾಡಿ‌ಕೊಟ್ಟರು!

ಅದನ್ನು ತಿನ್ನುತ್ತಾ ನಮ್ಮ ಬೇಸರ ಮರೆಯಾಗಿ ಮುಖ‌ ಅರಳಿತ್ತು. ಮಿಗಿಲಾಗಿ, ಒಂದು ರೀತಿಯ “ಥ್ರಿಲ್!” ಆದಂತಹ ಅನುಭವವನ್ನು ನಮಗೆ ನೀಡಿತ್ತು. ಒಬ್ಬರ ಮುಖ ಒಬ್ಬರು ನೋಡುತ್ತಲೇ ಒಳ ಒಳಗೆ ಮುಸಿ‌ ಮುಸಿ ನಗು‌ ಉಕ್ಕಿ‌ ಬರುತ್ತಿತ್ತು.

ನಾವು ತಿಂದದ್ದು ಅರ್ಧರ್ಧ ಹೋಳಿಗೆಯಾದರೂ ತಿಂದ ಸಂದರ್ಭದಿಂದಾಗಿ, ಮಿಗಿಲಾಗಿ “ಕಟ್ಟಿದ ಕಥೆ”ಯ ಕಾರಣಕ್ಕಾಗಿ ಸಿಕ್ಕ ಹೋಳಿಗೆಯಾದ್ದರಿಂದ ಅದರ ರುಚಿ ಈಗಲೂ ನನ್ನ ಮತ್ತು ಸುಧೀರನ ಹೃದಯದಿಂದ ಮಾಸಿಲ್ಲ. ಯುಗಾದಿ ಎಂದೊಡನೆ ಮತ್ತೆ ಮತ್ತೆ ನೆನಪಾಗುತ್ತಲೇ ಇರುತ್ತದೆ.